ಷಷ್ಠೋSಧ್ಯಾಯಃ
ನಾರದ ಚತುರ್ಮುಖ ಸಂವಾದ ಮುಂದುವರಿದುದು
ಹಿಂದಿನ ಅಧ್ಯಾಯದಲ್ಲಿ ಬಂದಿರುವ ಮಹತತ್ತ್ವದ ಸೃಷ್ಟಿ, ಅಹಂಕಾರ ತತ್ತ್ವದ ಸೃಷ್ಟಿ ,
ಪಂಚಭೂತಗಳ ಸೃಷ್ಟಿ, ಇತ್ಯಾದಿ ಸೃಷ್ಟಿ ಪ್ರಕ್ರಿಯೆಗಳು
ವೈಜ್ಞಾನಿಕ ಚಿಂತನೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದಾದ ಸೃಷ್ಟಿಯ ಒಂದು ಪ್ರಕಾರ.
ಆದರೆ ಈ ಅಧ್ಯಾಯದಲ್ಲಿ ಬರಲಿರುವ ವಿಚಾರಗಳು ವೈಜ್ಞಾನಿಕ ಚಿಂತನೆಗೆ ಸಿಗುವಂಥವುಗಳಲ್ಲ. ಭಗವಂತನ
ಸೃಷ್ಟಿ ಕ್ರಿಯೆ ವಿಜ್ಞಾನದ ಎಲ್ಲಾ ಸೀಮೆಯನ್ನು ಮೀರಿ ನಿಂತಿರುವ ಸತ್ಯ.
ಹಿಂದಿನ ಅಧ್ಯಾಯದಲ್ಲಿ ಬಂದಿರುವ ಭಗವಂತನ ಅವಯವಗಳ ಕಲ್ಪನೆಯೇ ವಿಜ್ಞಾನಕ್ಕೆ ನಿಲುಕದ ವಿಚಾರ.
ಭಗವಂತನ ಶರೀರ ಜ್ಞಾನಾನಂದಮಯ. ಹೀಗಿರುವಾಗ ಅಂಥಹ ಜ್ಞಾನಾನಂದಮಯನ ಅಂಗಾಂಗಗಳನ್ನು ಕಲ್ಪಿಸುವುದು ಹೇಗೆ? ಜ್ಞಾನಾನಂದಮಯವಾದ
ಮುಖ, ಜ್ಞಾನಾನಂದಮಾಯವಾದ ತೋಳು, ಜ್ಞಾನಾನಂದಮಾಯವಾದ ಕಾಲು, ಆ ಅವಯವಗಳಿಂದ ಸೃಷ್ಟಿ,
ಇತ್ಯಾದಿಯನ್ನು ನಮ್ಮಿಂದ ಕಲ್ಪಿಸುವುದು ಸಾಧ್ಯವಿಲ್ಲ. ಇದು ನಮಗೆ ತಿಳಿದಿರುವ ಯಾವುದೇ ಪ್ರಾಪಂಚಿಕ ಚಿಂತನೆಗೂ
ಒಳಪಡದಂತಹ ಸಂಗತಿಯಾಗಿರುವುದರಿಂದ, ಅಂತರಂಗ ಪ್ರಪಂಚದ ಅನುಭವ ಆಗುವ ತನಕ ಇದನ್ನು ನಮ್ಮಿಂದ ತಿಳಿಯುವುದು
ಕಷ್ಟ.
ಮಣ್ಣು-ನೀರು-ಬೆಂಕಿಯಿಂದಾದ ಪದಾರ್ಥಕ್ಕೆ ಬಣ್ಣವಿರುತ್ತದೆ. ಗಾಳಿ ಮತ್ತು ಆಕಾಶಕ್ಕೆ
ಬಣ್ಣವಿಲ್ಲ. ಇದಕ್ಕೂ ಭಿನ್ನವಾದ ಇನ್ನೊಂದು ವಿಷಯ ಏನೆಂದರೆ “ಶಕ್ತಿಗೂ ಬಣ್ಣವಿದೆ(Energy has
color)”. ಆದರೆ ಶಕ್ತಿ ಎನ್ನುವುದು ಮಣ್ಣು-ನೀರು-ಬೆಂಕಿಯಿಂದಾದ ಪದಾರ್ಥವಲ್ಲ. ಆದರೂ ಅದಕ್ಕೆ
ಆಕಾರವಿದೆ, ಬಣ್ಣವಿದೆ! ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳುವುದು ಕಷ್ಟ. ಇದಕ್ಕೆ ನಮಗೆ
ಅನುಭವಕ್ಕೆ ಬರುವ ಒಂದು ಉದಾಹರಣೆ ಎಂದರೆ ನಮ್ಮ ದೇಹದ ಸುತ್ತಲು ಇರುವ ಪ್ರಭೆ(Physical aura).
ಇದು ನಮ್ಮ ಬರಿಗಣ್ಣಿಗೆ ಕಾಣದಿದ್ದರೂ ಕೂಡಾ ಇದನ್ನು ವಿಜ್ಞಾನ ಪ್ರತಿಪಾದಿಸುತ್ತದೆ. ನಮ್ಮ
ಸುತ್ತಲಿನ ಪ್ರಭೆ ನಮ್ಮ ಯೋಚನಾ ಲಹರಿಗನುಗುಣವಾಗಿ ಬದಲಾಗುತ್ತಿರುತ್ತದೆ. ಅಂತರಂಗ ಪ್ರಪಂಚದ
ಸ್ಪರ್ಶವೇ ಇಲ್ಲದಿರುವ ವ್ಯಕ್ತಿಯ ಸುತ್ತಲಿನ ಪ್ರಭೆಯ ಬಣ್ಣ ಬೂದಿ ಬಣ್ಣದ್ದಾಗಿರುತ್ತದೆ. ಕೋಪ
ಬಂದಾಗ ಈ ಪ್ರಭೆ ಕೆಂಪಾಗುತ್ತದೆ. ಪ್ರಸನ್ನತೆ ಅಥವಾ ಸಂತೋಷವಾದಾಗ ಇದು ಹಳದಿ ಬಣ್ಣವಾಗಿರುತ್ತದೆ.
ಸಮೃದ್ಧಿ ಇದ್ದಾಗ ಹಸಿರಾಗಿರುವ ಈ ಪ್ರಭೆ
ಜ್ಞಾನದಲ್ಲಿ ಬಹಳ ಆಳಕ್ಕೆ ಹೋದಾಗ ನೀಲವಾಗಿರುತ್ತದೆ.[ಇದಕ್ಕಾಗಿ ಭಗವಂತ ನೀಲ ಮೇಘ ಶ್ಯಾಮ].
ಇದರಿಂದ ನಮಗೆ ತಿಳಿಯುವುದೇನೆಂದರೆ ಪ್ರತಿಯೊಂದು ಭಾವನೆಗಳಿಗೂ ಒಂದೊಂದು ಶಕ್ತಿ ಇದೆ ಮತ್ತು ಆ
ಶಕ್ತಿಗೆ ಒಂದೊಂದು ಬಣ್ಣವಿದೆ ಎನ್ನುವ ವಿಚಾರ.
ನಮ್ಮ ಬೇರೆಬೇರೆ ಯೋಚನಾ ಲಹರಿ, ಭಾವನೆಗಳು(Thoughts) ಬೇರೆಬೇರೆ ಬಣ್ಣವಾಗಿ ನಮ್ಮ ದೇಹದಿಂದ
ಹೊರಹೊಮ್ಮುತ್ತಿರುತ್ತವೆ.
ಜ್ಞಾನಾನಂದ ಸ್ವರೂಪನಾದ ಭಗವಂತ ಶಕ್ತಿ ಸ್ವರೂಪ ಆದ್ದರಿಂದ ಅವನಿಗೆ ಬಣ್ಣವಿದೆ ಎನ್ನುವ
ಮಾತನ್ನು ನಾವು ಮೇಲಿನ ವಿವರಣೆಯಂತೆ ಒಪ್ಪಿಕೊಳ್ಳಬಹುದು. ಆದರೆ ಸರ್ವವ್ಯಾಪ್ತ ಭಗವಂತನಿಗೆ
ಎಲ್ಲಿಯ ಆಕಾರ? ಸರ್ವಗತನಾದ ಭಗವಂತನಿಗೆ ಆಕಾರವೇ ಇಲ್ಲಾ ಎಂದು ಕೆಲವರು ತಮ್ಮ ತರ್ಕವನ್ನು
ಮಂಡಿಸುತ್ತಾರೆ. ಆದರೆ ಅದೇ ಯುಕ್ತಿಗೆ (logic) ಅನುಗುಣವಾಗಿ
ನೋಡಿದರೆ ಭಗವಂತ ಸರ್ವ ಸಮರ್ಥ ಕೂಡಾ ಹೌದು.
ಹಾಗಾಗಿ ಆತ ತಾನು ಬಯಸಿದ ಆಕಾರವನ್ನು ತಳೆಯಬಲ್ಲನಲ್ಲವೇ? ಹೀಗಾಗಿ ನಮ್ಮ ಬುದ್ಧಿಯ ಪರಿಮಿತಿಗೆ ಸಿಗದ ಭಗವಂತನನ್ನು
ನಾವು ನಮ್ಮ ತರ್ಕದ ಪರಿದಿಯಲ್ಲಿ ಕಟ್ಟಿಹಾಕಲು
ಪ್ರಯತ್ನಿಸಬಾರದು. ಭಗವಂತ ಸಾಕಾರನೂ ಹೌದು, ಆತ ನಿರಾಕಾರನೂ ಹೌದು. ಅವನು ಜ್ಞಾನಾನಂದಮಯ ಆದರೂ
ಆತನಿಗೆ ಬಣ್ಣವಿದೆ. ಇದು ಪ್ರಾಪಂಚಿಕವಾಗಿ ನಮ್ಮ ಅನುಭವಕ್ಕೆ ಸಿಗದ ಸತ್ಯ. ಈ ಹಿನ್ನೆಲೆಯಲ್ಲಿ ಈ
ಅಧ್ಯಾಯವನ್ನು ನೋಡಿದಾಗ ನಮಗೆ ಇಲ್ಲಿ ಹೇಳಿರುವ ವಿಷಯ ಅರ್ಥವಾದೀತು! ಚತುರ್ಮುಖ ನಾರದನಿಗೆ ವಿವರಿಸಿದ
ಸೃಷ್ಟಿಯ ವಿಸ್ತಾರದ ವಿವರಣೆಯನ್ನು ನಾವು ಈ ಅಧ್ಯಾಯದಲ್ಲಿ ಕಾಣಬಹುದು.
ರೂಪಾಣಾಂ
ತೇಜಸಾಂ ಚಕ್ಷುರ್ದಿವಃ ಸೂರ್ಯಸ್ಯ ಚಾಕ್ಷಿಣೀ ।
ಕರ್ಣೌ ದಿಶಾಂ
ಚ ತೀರ್ಥಾನಾಂ ಶ್ರೋತ್ರಮಾಕಾಶಶಬ್ದಯೋಃ ॥೦೩॥
ಭಗವಂತ ತನ್ನ ಕಣ್ಣಿನಿಂದ(ಚಕ್ಷುರಿಂದ್ರಿಯದಿಂದ) ರೂಪ ಮತ್ತು ತೇಜಸ್ಸನ್ನೂ(ಬೆಳಕನ್ನೂ), ಚಕ್ಷುರಿಂದ್ರಿಯ ಗೋಲಕದಿಂದ ದ್ಯುಲೋಕಾಭಿಮಾನಿ ದೇವತೆ ಸೂರ್ಯನನ್ನು ಸೃಷ್ಟಿ ಮಾಡಿದ. ಇದನ್ನೇ ಪುರುಷಸೂಕ್ತ “ಚಕ್ಷೋಃ
ಸೂರ್ಯೋ ಅಜಾಯತ” ಎಂದು ವಿವರಿಸುತ್ತದೆ. ಸೂರ್ಯನಿಗೆ
ಅಧಿಷ್ಠಾನವಾಗಿರುವ ದ್ವಿಲೋಕವೂ ಕೂಡಾ ಭಗವಂತನ ಕಣ್ಣಿನಿಂದ ಸೃಷ್ಟಿಯಾಯಿತು. ಇದೇ ರೀತಿ ಭಗವಂತನ ಕರ್ಣ ಗೋಲಕದಿಂದ ದಿಕ್ಕುಗಳ ಮತ್ತು ತೀರ್ಥಗಳ ಸೃಷ್ಟಿಯಾಯಿತು. ಇಲ್ಲಿ ತೀರ್ಥ ಎಂದರೆ ಗಂಗಾದಿ ತೀರ್ಥ
ಎಂದು ಕೆಲವರು ಹೇಳುವುದುಂಟು. ಆದರೆ ಇಲ್ಲಿ ಹೇಳಿರುವುದು ಒಂದಕ್ಕೊಂದು ಸಂಬಂಧವಿರುವ ವಿಷಯವಾಗಿರುವುದರಿಂದ
ಸಾಂದರ್ಭಿಕ ಅರ್ಥಾನುಸಂಧಾನದಂತೆ ತೀರ್ಥಗಳು ಎಂದರೆ ಶಾಸ್ತ್ರಗಳೇ ಹೊರತು ನದಿಗಳಲ್ಲ.
ದಿಕ್ಕುಗಳಲ್ಲಿ ತುಂಬಿರುವ ಶಾಸ್ತ್ರವಾಣಿ ಮೊಟ್ಟಮೊದಲು ಭಗವಂತನ ಕರ್ಣ ಗೋಲಕದಿಂದ ಸೃಷ್ಟಿಯಾಯಿತು. ಭಗವಂತನ ಕರ್ಣೇಂದ್ರಿಯದಿಂದ ಶಬ್ದ ಮತ್ತು ಆಕಾಶದ ಸೃಷ್ಟಿಯಾಯಿತು.
No comments:
Post a Comment