ರೋಮಾಣ್ಯುದ್ಭಿಜಜಾತೀನಾಂ
ಯೈರ್ವಾ ಯಜ್ಞಸ್ತು ಸಂಭೃತಃ ।
ಕೇಶಶ್ಮಶ್ರುನಖಾನ್ಯಸ್ಯ
ಶಿಲಾಲೋಹಾಭ್ರವಿದ್ಯುತಾಮ್ ॥೦೫॥
ಭಗವಂತನ ರೋಮಮೂಲದಿಂದ ಯಜ್ಞಕ್ಕೆ ಬಳಕೆಯಾಗುವ
ವನಸ್ಪತಿಗಳ ಸೃಷ್ಟಿಯಾಯಿತು. ಅಂದರೆ ಅಶ್ವತ್ಥ,
ಹಲಸು, ದರ್ಭೆ ಇತ್ಯಾದಿ ಯಜ್ಞೋಪಯೋಗಿ ಪವಿತ್ರ ವನಸ್ಪತಿಗಳನ್ನು ಭಗವಂತ ತನ್ನ ರೋಮ ಮೂಲದಿಂದ ಸೃಷ್ಟಿಸಿದ. ಇದಲ್ಲದೆ ಇತರ ವನಸ್ಪತಿಗಳು ಭಗವಂತನ ರೋಮದ ತುದಿಯಿಂದ ಸೃಷ್ಟಿಸಲ್ಪಟ್ಟವು.
ಇದೇ ಮಾತನ್ನು ಪಾದ್ಮಪುರಾಣ ಹೇಳುವುದನ್ನು ಕಾಣಬಹುದು. ಯಾಜ್ಞಿಕಾ
ರೋಮಮೂಲಸ್ಥಾ ರೋಮಾಂತಸ್ಥಾಸ್ತು ತತ್ಪರೇ । ಉದ್ಭೀಜೋ ವಾಸುದೇವಸ್ಯ ಲಿಂಗಗಾಸ್ತು ಜರಾಯುಜಾಃ ॥ ಇತಿ ಪಾದ್ಮೇ ।
ಭೂ-ವ್ಯೋಮಗಳಲ್ಲಿ ತುಂಬಿ ನಿಂತ ಭಗವಂತನ ಕೆದರಿದ ಕೂದಲುಗಳಿಂದ ಮೋಡದ ಸೃಷ್ಟಿಯಾದರೆ,
ಭಗವಂತನ ಮೀಸೆಯಿಂದ ಮಿಂಚು ಮತ್ತು ಭಗವಂತನ
ಉಗುರಿನಿಂದ ಬಂಡೆಗಳು, ಲೋಹಗಳು ಸೃಷ್ಟಿಯಾದವು. ಇದನ್ನು ಅಗ್ನಿಪುರಾಣ ಈ ರೀತಿ ಹೇಳುತ್ತದೆ: ಹರೇಃ
ಶ್ಮಶ್ರ್ವಾಶ್ರಯಾ ವಿದ್ಯುಚ್ಛಿಲಾಲೋಹಾ
ನಖಾಶ್ರಯಾಃ । ಇತ್ಯಾಗ್ನೇಯ ।
ಬಾಹವೋ
ಲೋಕಪಾಲಾನಾಂ ಪ್ರಾಯಶಃ ಕ್ಷೇಮಕರ್ಮಣಾಮ್ ।
ವಿಕ್ರಮೋ
ಭೂರ್ಭುವಃಸ್ವಶ್ಚ ಕ್ಷೇಮಸ್ಯ ಶರಣಸ್ಯ ಚ ।
ಸರ್ವಕಾಮವರಸ್ಯಾಪಿ
ವಿಷ್ಣೋ(ಹರೇ)ಶ್ಚರಣ ಆಸ್ಪದಮ್ ॥೦೬॥
ಭಗವಂತನ ತೋಳುಗಳಿಂದ ಲೋಕಪಾಲಕರ ಸೃಷ್ಟಿಯಾಯಿತು. ಇಲ್ಲಿ ಲೋಕಪಾಲಕರು ಎಂದರೆ ಲೋಕವನ್ನು
ರಕ್ಷಣೆ ಮಾಡುವ ಪಾಲಕ ಶಕ್ತಿಗಳು. ಜಗತ್ತಿನ ಕ್ಷೇಮಕ್ಕೊಸ್ಕರ ತಮ್ಮ ಬದುಕನ್ನು ಮುಡಿಪಾಗಿಡುವ ಲೋಕಪಾಲಕರು
ಎಂದರೆ ಕ್ಷತ್ರಿಯರೂ ಹೌದು, ದೇವತೆಗಳೂ ಹೌದು. ಇಲ್ಲಿ ಬಂದಿರುವ ‘ಪ್ರಾಯಶಃ’ ಎನ್ನುವ ಪದ ‘ಬದುಕಿನ ಪೂರ್ಣ ಪ್ರಮಾಣವನ್ನು ಲೋಕ ಕ್ಷೇಮಕ್ಕಾಗಿ
ಮುಡಿಪಾಗಿಟ್ಟವರು’ ಎನ್ನುವ ಅರ್ಥವನ್ನು ಬಿಂಬಿಸುತ್ತದೆ.
ಭಗವಂತನ ಮೂರು ಹೆಜ್ಜೆಗಳಿಂದ ಮೂರು ಲೋಕಗಳು(ಭೂರ್ಲೋಕ, ಭುವೋಲೋಕ ಮತ್ತು ಸ್ವರ್ಲೋಕ) ಸೃಷ್ಟಿಯಾದವು. ಭಗವಂತನ ಪಾದಗಳಿಂದ
ಕ್ಷೇಮ(ಪಡೆದುದನ್ನು ಉಳಿಸಿಕೊಳ್ಳುವ ಭಾಗ್ಯ ಮತ್ತು ಜ್ಞಾನಾನಂದಾದಿಗಳು), ಶರಣ(ಮೋಕ್ಷ) ಮತ್ತು
ಸಕಲ ಇಷ್ಟ ಪ್ರಾಪ್ತಿಗಳು ಸೃಷ್ಟಿಯಾದವು.
ಧರ್ಮಸ್ಯ ಮಮ ತುಭ್ಯಂ ಚ ಕುಮಾರಾಣಾಂ ಭವಸ್ಯ ಚ ।
ವಿಜ್ಞಾನಸ್ಯ ಚ ತತ್ತ್ವಸ್ಯ ಪರಸ್ಯಾತ್ಮಾ ಪರಾಯಣಮ್
॥೧೧॥
ಪರಮಾತ್ಮನ ಹೃದಯಭಾಗದಿಂದ(ಆತ್ಮಾ) ಧರ್ಮ ದೇವತೆಯಾದ ಯಮನ ಸೃಷ್ಟಿಯಾಯಿತು. “ಅಷ್ಟೇ ಅಲ್ಲಾ,
ನನ್ನ ಹಾಗೂ ನಿಮ್ಮೆಲ್ಲರ(ನಾರದ ಹಾಗೂ ಸನಕ, ಸನಂದನ, ಸನತ್ಕುಮಾರ ಇತ್ಯಾದಿ ಊರ್ಧ್ವರೇತಸ್ಕರ)
ಸೃಷ್ಟಿ ಕೂಡಾ ಭಗವಂತನ ಮಧ್ಯ ದೇಹದಿಂದಾಯಿತು” ಎನ್ನುತ್ತಾನೆ ಚತುರ್ಮುಖ. ಇಲ್ಲಿ ನಾವು
ದೇವತೆಗಳಿಗೆ ಸೃಷ್ಟಿಯಲ್ಲಿ ಅನೇಕ ಹುಟ್ಟುಗಳಿವೆ ಎನ್ನುವುದನ್ನು ತಿಳಿದಿರಬೇಕು. ಉದಾಹರಣೆಗೆ
ಚತುರ್ಮುಖ ಭಗವಂತನ ನಾಭಿಯಿಂದ, ಲಕ್ಷ್ಮಿಯ ಹಣೆಯಿಂದ, ಭಗವಂತನ ಹೃದಯ ಭಾಗದಿಂದ, ಹೀಗೆ ಬೇರೆಬೇರೆ
ರೂಪದಿಂದ ಹುಟ್ಟುವ ಭಾಗ್ಯ ಪಡೆದಿರುತ್ತಾನೆ. ಹೀಗಾಗಿ ಆತ ಹೇಳುತ್ತಾನೆ: “ನಾನೂ ಕೂಡಾ ಭಗವಂತನ
ಆತ್ಮದಿಂದ ಹುಟ್ಟಿದೆ” ಎಂದು. ಇದೇ ರೀತಿ ಶಿವನ ಸೃಷ್ಟಿ, ವಿಜ್ಞಾನ ತತ್ತ್ವ ದೇವತೆಯಾದ ಸರಸ್ವತಿಯ
ಸೃಷ್ಟಿ ಕೂಡಾ ಭಗವಂತನ ಹೃದಯ ಭಾಗದಿಂದಾಯಿತು.
ಸರ್ವಂ ಪುರುಷ
ಏವೇದಂ ಭೂತಂ ಭವ್ಯಂ ಭವಚ್ಚ ಯತ್ ।
ತೇನೇದಮಾವೃತಂ
ವಿಶ್ವಂ ವಿತಸ್ತಿಮಧಿತಿಷ್ಠತಾ ॥೧೫॥
ಈ ಶ್ಲೋಕ ಪುರುಷಸೂಕ್ತದಲ್ಲಿನ ಒಂದು ಅಪೂರ್ವವಾದ ಉಪಾಸನೆಯ ಮುಖವನ್ನು ತೋರಿಸುತ್ತದೆ.
ಪುರುಷಸೂಕ್ತದಲ್ಲಿ ಹೇಳುವಂತೆ: “ಸ ಭೂಮಿಂ ವಿಶ್ವತೋ ವೃತ್ವಾsಅತ್ಯತಿಷ್ಟದ್ದಷಾ೦ಗುಲಂ
।। ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚಭವ್ಯಂ ।।”. ಇದೇ ಮಾತನ್ನು ಇಲ್ಲಿ ಚತುರ್ಮುಖ ವಿವರಿಸಿರುವುದನ್ನು ಕಾಣುತ್ತೇವೆ. ಚತುರ್ಮುಖ
ಹೇಳುತ್ತಾನೆ: “ಹಿಂದಿನ ಕಲ್ಪಗಳಲ್ಲಿ ಆದ ಸೃಷ್ಟಿ, ಈಗಿನ ಕಲ್ಪದ ಸೃಷ್ಟಿ ಹಾಗೂ ಮುಂದಿನ
ಕಲ್ಪಗಳಲ್ಲಿ ಆಗುವ ಎಲ್ಲಾ ಸೃಷ್ಟಿ ಕೂಡಾ ಆ ಭಗವಂತನಲ್ಲಿ (ಪುರುಷನಲ್ಲಿ )ಆಶ್ರಿತವಾಗಿವೆ” ಎಂದು. ಇಲ್ಲಿ
ಬಳಕೆಯಾಗಿರುವ “ಪುರುಷ ಏವ” ಎನ್ನುವ ಪದವನ್ನು ಎರಡು ರೀತಿ ಪದಚ್ಛೇದ ಮಾಡಬಹುದು. ೧. ಪುರುಷೇ ಏವ ೨. ಪುರುಷಃ ಏವ. ‘ಪುರುಷೇ ಏವ’ ಎಂದರೆ ಎಲ್ಲವೂ
ಪುರುಷನಲ್ಲಿ ಆಶ್ರಿತವಾಗಿದೆ ಎಂದರ್ಥ. ಇನ್ನು
‘ಪುರುಷಃ ಏವ’ ಎಂದರೆ ಎಲ್ಲವೂ ಪುರುಷನೇ ಎಂದರ್ಥ. ಇದರರ್ಥ
ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ ಮತ್ತು ಎಲ್ಲವೂ ಆತನ ಅಧೀನ ಎಂದರ್ಥ. ಇದನ್ನೇ ಗೀತೆಯಲ್ಲಿ ಅರ್ಜುನ
ಹೀಗೆ ಹೇಳಿದ್ದಾನೆ: ಸರ್ವಂ ಸಮಾಪ್ನೋಷಿ
ತತೋSಸಿ ಸರ್ವಃ ॥೧೧-೪೦॥ “ನೀನು ಎಲ್ಲವನ್ನೂ ವ್ಯಾಪಿಸಿ
ನಿಯಂತ್ರಿಸುತ್ತಿರುವುದರಿಂದ ಎಲ್ಲವೂ ನೀನೇ” ಎಂದಿದ್ದಾನೆ ಅರ್ಜುನ. ಇದನ್ನೇ ಶ್ರೀಕೃಷ್ಣ ಹೀಗೆ ಹೇಳುತ್ತಾನೆ: ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್ ॥೧೦-೩೯॥ ಅಂದರೆ:
“ಚರಾಚಾರಾತ್ಮಕ ಪ್ರಪಂಚದಲ್ಲಿ ನನ್ನನ್ನು ಬಿಟ್ಟು ಸ್ವತಂತ್ರವಾದುದು ಯಾವುದೂ ಇಲ್ಲಾ”
ಎಂದರ್ಥ. ಇದೇ ಅರ್ಥದಲ್ಲಿ ಇಲ್ಲಿ ಚತುರ್ಮುಖ “ಎಲ್ಲವೂ ಆ ಪುರುಷನೇ” ಎಂದಿದ್ದಾನೆ.
No comments:
Post a Comment