Thursday, January 23, 2025

Shrimad BhAgavata in Kannada -Skandha-03-Ch-06_01

ಷಷ್ಠೋSಧ್ಯಾಯಃ

ವಿದುರ-ಮೈತ್ರೇಯ ಸಂವಾದ: ಭಗವಂತನ ಸೃಷ್ಟಿಲೀಲೆಯ ವಿವರಣೆ


ವೇದವ್ಯಾಸರ ಸಹಪಾಠಿ ಮತ್ತು ಗೆಳೆಯನಾದ ಮೈತ್ರೇಯ,  ಮಹರ್ಷಿ ವೇದವ್ಯಾಸರ ಪುತ್ರನಾದ ವಿದುರನಿಗೆ ತಾನು ಶ್ರೀಕೃಷ್ಣನಿಂದ ಪಡೆದ ಅಧ್ಯಾತ್ಮದ ಸಾರವನ್ನು ವಿವರಿಸಲು ಆರಂಭಿಸುತ್ತಾರೆ. ಪ್ರತಿಯೊಬ್ಬ ಶಾಸ್ತ್ರಕಾರನೂ ಕೂಡಾ ಮೊತ್ತಮೊದಲಿಗೆ ವಿಶ್ಲೇಷಿಸುವುದು ‘ಈ ಪ್ರಪಂಚ ಸೃಷ್ಟಿಯಾದ ಬಗೆ ಹೇಗೆ’ ಎನ್ನುವ ವಿಷಯವನ್ನು.  ಕೆಲವರು ಈ ಪ್ರಪಂಚ ತನ್ನಿಂದ ತಾನೇ ಸೃಷ್ಟಿಯಾಯಿತು ಎನ್ನುತ್ತಾರೆ. ಇನ್ನು ಕೆಲವರು ಎಲ್ಲವೂ ಆಕಸ್ಮಿಕ ಎನ್ನುತ್ತಾರೆ. ಆದರೆ ನಾವು ನಮ್ಮ ಜೀವನದುದ್ದಕ್ಕೂ ಪ್ರತಿಯೊಂದು ಸಂದರ್ಭದಲ್ಲೂ ನೋಡುವಂತೆ ಯಾವುದೂ ಕೂಡಾ ತನ್ನಿಂದ ತಾನೇ ಅಥವಾ ಆಕಸ್ಮಿಕವಾಗಿ  ಸೃಷ್ಟಿಯಾಗುವುದಿಲ್ಲ. ಕಾರಣವಿಲ್ಲದೇ ಕಾರ್ಯವಾಗುವುದಿಲ್ಲ. 

ಪ್ರಾಚೀನ ಸಂಪ್ರದಾಯದ ಸೃಷ್ಟಿಕ್ರಮವನ್ನು ನಂಬಿದವರಿಗೂ ಕೂಡಾ ಪ್ರಪಂಚ ಸೃಷ್ಟಿಯ ಕುರಿತು ಅನೇಕ ಗೊಂದಲಗಳಿವೆ. ಕೆಲವರು ಜಗತ್ತನ್ನು ನಾರಾಯಣ ಸೃಷ್ಟಿಸಿದ ಎಂದರೆ, ಇನ್ನು ಕೆಲವರು ಚತುರ್ಮುಖನಿಂದ ಈ ಜಗತ್ತು ನಿರ್ಮಾಣವಾಯಿತು ಎನ್ನುತ್ತಾರೆ. ಇಲ್ಲಿ ಮೈತ್ರೆಯರು ಮೊತ್ತಮೊದಲಿಗೆ ಈ ವಿಷಯವನ್ನೇ  ವಿವರಿಸುವುದನ್ನು ನಾವು ಕಾಣಬಹುದು.

ನಮ್ಮ ಕಣ್ಣಿಗೆ ಕಾಣುವ  ಈ ಪ್ರಪಂಚ ಸೃಷ್ಟಿಯಾದುದು ಯಾವುದರಿಂದ? ಪ್ರಪಂಚ ಸೃಷ್ಟಿಗೂ ಮುನ್ನ ಏನಿತ್ತು? ಯಾವುದೋ ಮೂಲವಸ್ತುವಿನಿಂದ ಈ ಪ್ರಪಂಚ ಸೃಷ್ಟಿಯಾಯಿತೋ ಅಥವಾ ಏನೂ ಇಲ್ಲದೇ ಎಲ್ಲವೂ ಸೃಷ್ಟಿಯಾಯಿತೋ? ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ:  ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ ಕಿಂಚನ ಮಿಷತ್ | [೧.೧.೧].   ಉಪನಿಷತ್ತಿನ ಈ ಮಾತಿನ ಅರ್ಥವೇನು?  ಈ ಎಲ್ಲಾ ವಿಷಯವನ್ನು ಇಲ್ಲಿನ ಮೊದಲ  ಎರಡು ಶ್ಲೋಕಗಳ ಮುಖೇನ ಮೈತ್ರೇಯ ಮಹರ್ಷಿಗಳು ವಿದುರನಿಗೆ ವಿವರಿಸಿರುವುದನ್ನು ನಾವು ಕಾಣುತ್ತೇವೆ.


ಭಗವಾನೇಕ ಆಸೇದಮಗ್ರ ಆತ್ಮಾSSತ್ಮನಾಂ ವಿಭುಃ ।

ಆತ್ಮೇಚ್ಛಾನುಗತೋ ಹ್ಯಾತ್ಮಾ ನಾನಾಶಕ್ತ್ಯುಪಲಕ್ಷಿತಃ ॥೦೧॥


 ‘ಭಗವಾನ್ ಏಕಃ ಆಸೇದ ಇದಮ್ ಅಗ್ರೇ’. “ಮೊದಲು ಆ ಭಗವಂತನೊಬ್ಬನೇ ಇದ್ದ” ಎನ್ನುತ್ತಾರೆ ಮೈತ್ರೆಯರು. ಆ ಭಗವಂತ ಯಾರು ಎನ್ನುವುದನ್ನು ನಾವು ಈಗಾಗಲೇ ಭಾಗವತದಲ್ಲಿ ನೋಡಿದ್ದೇವೆ. [ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ೧.೨.೧೧] ಯಾರನ್ನು ವೇದದಲ್ಲಿ ಬ್ರಹ್ಮಾ, ಪರಮಾತ್ಮಾ ಎಂದು ಕರೆಯುತ್ತಾರೋ, ಅಂತಹ, ಅನೇಕ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಈ ಪ್ರಪಂಚ ಸೃಷ್ಟಿಯಾಗುವ ಮುಂಚೆ ಇದ್ದ.

ಇಲ್ಲಿ ಆತ್ಮಾ ಎನ್ನುವ ಪದ ಬಳಕೆಯಾಗಿದೆ. ಜೀವನನ್ನೂ ಆತ್ಮಾ ಎಂದು ಕರೆದರೂ ಕೂಡಾ, ಆತ್ಮಾ ಪದದ ಮುಖ್ಯ ಅರ್ಥ ಭಗವಂತ. ಯಾರು ಇಚ್ಛಿಸಿದ್ದೆಲ್ಲವನ್ನೂ ಪಡೆಯಬಲ್ಲನೋ, ಯಾರು ಸಮಸ್ತ ಶಕ್ತಿ-ಸಾಮರ್ಥ್ಯವನ್ನು ಹೊಂದಿದ್ದಾನೋ, ಅಂತಹ ಸರ್ವಸಮರ್ಥನಾದ ಭಗವಂತನೇ ಆತ್ಮಾ. “ಇಂತಹ ಎಲ್ಲಾ ಜೀವರುಗಳ ಸ್ವಾಮಿಯಾದ [ಆತ್ಮನಾಂ ವಿಭುರ್ಜೀವಾಧಿಪಃ] ಭಗವಂತ ಪ್ರಳಯಕಾಲದಲ್ಲಿ ಒಬ್ಬನೇ ಇದ್ದ”.

ಈ ಮೇಲಿನ ಮಾತು ನಮಗೆ ಗೊಂದಲವನ್ನುಂಟುಮಾಡುತ್ತದೆ. “ಎಲ್ಲ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಇದ್ದ” ಎನ್ನುವ ಮಾತಿನ ಅರ್ಥವೇನು? ಜೀವರುಗಳ ಸ್ವಾಮಿಯಾಗಬೇಕಾದರೆ ಅಲ್ಲಿ ಜೀವರುಗಳೂ ಇರಬೇಕಲ್ಲವೇ? ಈ ಗೊಂದಲವನ್ನು ಮೈತ್ರೇಯ ಮಹರ್ಷಿಗಳು ಮುಂದಿನ ಶ್ಲೋಕದಲ್ಲಿ ಬಗೆಹರಿಸಿದ್ದಾರೆ:

ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ ವಿಶ್ವಮೇಕರಾಟ್  ।

ಮೇನೇSಸನ್ತಮಿವಾSತ್ಮಾನಂ ಸುಪ್ತಶಕ್ತಿರಸುಪ್ತದೃಕ್  ॥೦೨॥ 


“ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ, ಪ್ರಳಯಕಾಲದಲ್ಲಿದ್ದ ಜೀವಾತ್ಮರನ್ನು ‘ಇದ್ದಾರೆ’ ಎಂದು ಕಾಣಲಿಲ್ಲ” ಎಂದಿದ್ದಾರೆ ಮೈತ್ರೆಯರು. ಇದ್ದದ್ದನ್ನು ಇಲ್ಲಾ ಎಂದು ಕಂಡರೆ ಅದು ಭ್ರಮೆಯಾಗುತ್ತದಲ್ಲವೇ? ಹಾಗಿದ್ದರೆ ಈ ಮಾತಿನ ಅರ್ಥವೇನು?

ಈ ಮಾತಿನ ಒಳಾರ್ಥವನ್ನು ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಅಗ್ನಿ ಪುರಾಣದಲ್ಲಿ ಹೇಳಿರುವಂತೆ: ಪರಮಾತ್ಮಾ ಯತೋ ಜೀವಂ ಮೇನೇSಸನ್ತಮಶಕ್ತತಃ  । ಅಸನ್ನಸೌ ತತೋ ನಿತ್ಯಂ  ಸತ್ಯಜ್ಞಾನೋ ಯತೋ ಹರಿಃ’   ಪ್ರಳಯಕಾಲದಲ್ಲಿ ಸಮಸ್ತ ಜೀವಾತ್ಮರು ಯಾವ ಶಕ್ತಿಯೂ ಇಲ್ಲದೇ ನಿದ್ರಾವಸ್ಥೆಯಲ್ಲಿದ್ದರು. ಅವರಿಗೆ ಯಾವ ಪ್ರಜ್ಞೆಯೂ ಇರಲಿಲ್ಲ. ಈ ರೀತಿ ಎಚ್ಚರತಪ್ಪಿ ಮೂರ್ಛಾವಸ್ಥೆಯಲ್ಲಿದ್ದುದರಿಂದ ಅಂತಹ ಜೀವಾತ್ಮರನ್ನು ಭಗವಂತ ಇಲ್ಲವೆಂಬಂತೆ ಕಂಡ.  

ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಚತುರ್ಮುಖ-ಪ್ರಾಣದೇವರು ಎಚ್ಚರ ತಪ್ಪುವುದಿಲ್ಲ. [ಪ್ರಳಯೇಪಿ ಪ್ರತಿಭಾತ ಪರಾ-ವರಾಹ]. ಆದರೆ ಅವರೂ ಕೂಡಾ ನಿಷ್ಕ್ರೀಯರಾಗಿರುವುದರಿಂದ ಇದ್ದೂ ಇಲ್ಲದಂತಾಗುತ್ತಾರೆ. 

ಜೀವಾತ್ಮರೇನೋ ಎಚ್ಚರದಲ್ಲಿರಲಿಲ್ಲ ಅಥವಾ ನಿಷ್ಕ್ರೀಯರಾಗಿದ್ದರು ಸರಿ, ಆದರೆ ಶ್ರೀಲಕ್ಷ್ಮಿ?  ಎಂದರೆ ಮೈತ್ರೆಯರು ಹೇಳುತ್ತಾರೆ: “ಆಕೆ ಸುಪ್ತಳಾಗಿದ್ದಳು” ಎಂದು. ಶ್ರೀಲಕ್ಷ್ಮಿಯ ಸುಪ್ತಾವಸ್ಥೆ ಎಂದರೆ ಅದು ಜೀವಾತ್ಮರಂತೆ ಸಂಪೂರ್ಣ ಎಚ್ಚರ ತಪ್ಪಿರುವುದಲ್ಲ. ಬ್ರಹ್ಮತರ್ಕದಲ್ಲಿ ಹೇಳುವಂತೆ: ‘ಶಕ್ಯತ್ವಾಚ್ಛಕ್ತಯೋ ಭಾರ್ಯಾಃ ಶಕ್ತಿಃ ಸಾಮರ್ಥ್ಯಮುಚ್ಯತೇ’ ॥ ಸುಪ್ತಾವಸ್ಥೆಯಲ್ಲಿ ಆಕೆ ಕೇವಲ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಎಚ್ಚರ/ಆಸಕ್ತಿ ಹೊಂದಿರುವುದಿಲ್ಲ. [ಆಚಾರ್ಯ ಮಧ್ವರು ತಮ್ಮ ಭಾಷ್ಯದಲ್ಲಿ ಭಾರ್ಯಾಃ(ಪತ್ನಿಯರು) ಎಂದು ಬಹುವಚನ ಪ್ರಯೋಗ ಮಾಡಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಶ್ರೀಲಕ್ಷ್ಮಿ ಒಬ್ಬಳೇ ಇರುವಾಗ ಬಹುವಚನ ಪ್ರಯೋಗವೇಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಇದಕ್ಕೆ ಕಾರಣವೆಂದರೆ: ಪ್ರಳಯ ಕಾಲದಲ್ಲಿ ಶ್ರಿಲಕ್ಷ್ಮಿಯು ತನ್ನ ಶ್ರೀ-ಭೂ-ದುರ್ಗಾ ರೂಪದಲ್ಲಿ  ಭಗವಂತನ ಜೊತೆಗೆ ಯೋಗ ನಿದ್ರೆಯಲ್ಲಿರುತ್ತಾಳೆ. ಇಷ್ಟೇ ಅಲ್ಲ, ವೇದದ ಒಂದೊಂದು ಮಂತ್ರಕ್ಕೂ ಅಭಿಮಾನಿಯಾಗಿರುವ ಶ್ರೀಲಕ್ಷ್ಮಿಯ ಅನಂತ ರೂಪಗಳಿವೆ. ಆ ಅನಂತ ರೂಪಗಳೊಂದಿಗೆ ಆಕೆ ಭಗವಂತನನ್ನು ನಿರಂತರ ಸ್ತೋತ್ರಮಾಡುತ್ತಿರುತ್ತಾಳೆ].

ಈ ರೀತಿ ಒಂದಕ್ಕೊಂದನ್ನು ತಳಕುಹಾಕಿ ನೋಡುತ್ತಾ ಹೋದಾಗ ಒಂದು ಅದ್ಭುತವಾದ ಸೃಷ್ಟಿಪೂರ್ವದ, ಪ್ರಳಯಕಾಲದ ಪ್ರಪಂಚ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಯಾವುದೂ ಇಲ್ಲ, ಆದರೆ ಎಲ್ಲವೂ ಇದೆ. ಎಚ್ಚರವಾಗಿದ್ದಾರೆ ಆದರೂ ನಿಷ್ಕ್ರೀಯರಾಗಿದ್ದಾರೆ. ವ್ಯೋಮಸಂಹಿತದಲ್ಲಿ ಹೇಳುವಂತೆ: ‘ಸುಪ್ತಿಸ್ತು ಪ್ರಕೃತೇಃ ಪ್ರೋಕ್ತಾ ಅತೀವ ಭಗವದ್ರತಿಃ| ಅನಾಸ್ಥಾSನ್ಯತ್ರ ಚ ಪ್ರೋಕ್ತಾ ವಿಷ್ಣೋಶ್ಚಕ್ಷುರ್ನಿಮೀಲನಮ್ ॥ ಜಡ ಪ್ರಕೃತಿಯೂ ಕೂಡಾ ಪರಿಣಾಮವಿಲ್ಲದೇ ಸುಪ್ತವಾಗಿದೆ. ಕೇವಲ ಭಗವಂತ ಮಾತ್ರ ತನ್ನ ಶಕ್ತಿ ಸಾಮರ್ಥ್ಯದೊಂದಿಗೆ ಯೋಗನಿದ್ರೆಯಲ್ಲಿದ್ದಾನೆ. ಭಗವಂತನ ನಿದ್ರೆ ಎಂದರೆ ಅದು ‘ಚಿಂತಿಸುವ ಅಥವಾ ಯೋಚಿಸುತ್ತಿರುವ ಎಚ್ಚರದ ಸ್ಥಿತಿ. ಆತನಲ್ಲಿ ಮಾತ್ರ ಸಮಸ್ತ ಕಾಲದಲ್ಲಿ ಎಲ್ಲವೂ ಜಾಗೃತವಾಗಿರುತ್ತದೆ. ಇದು ಸೃಷ್ಟಿಪೂರ್ವದ ಒಂದು ಅತ್ಯದ್ಭುತ ಚಿತ್ರಣ.

ಸೃಷ್ಟಿಪೂರ್ವದ ಸ್ಥಿತಿಯನ್ನು ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಕಣ್ಮುಚ್ಚಿ ತನ್ನ ಆನಂದವನ್ನು ತಾನೇ ಅನುಭವಿಸುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನನ್ನು ಸ್ತೋತ್ರಮಾಡುತ್ತಿರುವ ಪತ್ನಿ ಲಕ್ಷ್ಮೀದೇವಿಯ ಶ್ರುತಿಗೀತೆಯನ್ನು ಕೇಳುತ್ತಾ ಅದನ್ನು ಆಸ್ವಾದಿಸುತ್ತಿದ್ದಾನೆ. ಶ್ರೀಲಕ್ಷ್ಮಿ ಪ್ರಳಯಕಾಲದ ಪ್ರಾರಂಭದಿಂದ ಕೊನೆಯತನಕ ಇತರ ಯಾವುದೇ ವಿಷಯದಲ್ಲಿ ಆಸಕ್ತಿ ತೋರದೇ, ಅಖಂಡ ವೇದಮಂತ್ರಗಳಿಂದ ಭಗವಂತನನ್ನು ಸ್ತೋತ್ರ ಮಾಡುತ್ತಿದ್ದಾಳೆ. ಬ್ರಹ್ಮ-ವಾಯುವಿಗೆ ಎಚ್ಚರವಿದೆ(ಇರವಿನ ಅರಿವಿದೆ) ಆದರೆ ಕ್ರಿಯಾತ್ಮಕವಾದ ಶರೀರವಿಲ್ಲದೆ, ಲಿಂಗಶರೀರದಲ್ಲಿ ಅವರು ನಿಷ್ಕ್ರೀಯರಾಗಿದ್ದಾರೆ. ಉಳಿದ ಸಮಸ್ತ ಜೀವಾತ್ಮರುಗಳಿಗೆ ಎಚ್ಚರವೇ ಇಲ್ಲ. ಈ ರೀತಿ ಭಗವಂತನೊಬ್ಬನೆ ಯಾವುದೇ ಜ್ಞಾನ ಲೋಪವಿಲ್ಲದೆ ಎಚ್ಚರದ ಯೋಗನಿದ್ರೆಯಲ್ಲಿದ್ದುದರಿಂದ, ಇತರ ಯಾವುದೇ ಜೀವಜಾತ ಸಕ್ರೀಯವಾಗಿಲ್ಲವಾದ್ದರಿಂದ, ಶ್ರಿಲಕ್ಷ್ಮಿಯೂ ಕೂಡಾ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಆಸಕ್ತಿ ಹೊಂದಿಲ್ಲವಾದ್ದರಿಂದ,   ಸರ್ವಸಮರ್ಥನಾದ, ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ,  ತನ್ನನ್ನು ಬಿಟ್ಟು ಇನ್ನೇನೂ ಇಲ್ಲವೆಂಬಂತೆ ಪ್ರಪಂಚವನ್ನು ಕಂಡ ಸ್ಥಿತಿಯೇ ಸೃಷ್ಟಿಪೂರ್ವ ಸ್ಥಿತಿ.  


ತತೋSಭವನ್ಮಹತ್ತತ್ತ್ವಮವ್ಯಕ್ತಾತ್ ಕಾಲಚೋದಿತಾತ್ ।

ವಿಜ್ಞಾನಾತ್ಮಾSSತ್ಮದೇಹಸ್ಥಂ ವಿಶ್ವಂ ವ್ಯಞ್ಜಂಸ್ತಮೋ ನುದನ್ ॥೦೫॥


ಪ್ರಳಯಕಾಲ ಉರುಳಿ ಸೃಷ್ಟಿ ಕಾಲ ಬರುತ್ತಿದ್ದಂತೆಯೇ ಪ್ರಪಂಚದ ಯೋಚನೆಯೇ ಇಲ್ಲದೆ ನಿರಂತರ ಭಗವಂತನನ್ನು ಸ್ತೋತ್ರಮಾಡುತ್ತಿದ್ದ ಶ್ರೀಲಕ್ಷ್ಮಿಗೆ ‘ಕಣ್ಣಿಗೆ ಕಾಣುವ ಪ್ರಪಂಚವೊಂದನ್ನು ಸೃಷ್ಟಿಮಾಡಬೇಕು’ ಎನ್ನುವ ಚಿಂತನೆ ಮೂಡಿತು. ಇದೇ ಪ್ರಪಂಚ ಸೃಷ್ಟಿಗೆ ನಾಂದಿಯಾಯಿತು. ಶ್ರೀಲಕ್ಷ್ಮಿ ಚಿಂತನೆ ಮಾಡುತ್ತಿದ್ದಂತೆಯೇ ಸರ್ವಗತನಾದ ಭಗವಂತ ಪುರುಷರೂಪಿಯಾಗಿ ನಿಂತ. ಶ್ರೀಲಕ್ಷ್ಮಿ ಸ್ತ್ರೀರೂಪ ತೊಟ್ಟು ನಿಂತಳು. ಹೀಗೆ ಸಹಜವಾದ ದಾಂಪತ್ಯಕ್ಕೆ ಬೇಕಾದ ಸ್ತ್ರೀ-ಪುರುಷ ರೂಪದಲ್ಲಿ ಲಕ್ಷ್ಮೀ-ನಾರಾಯಣರ ಸಮಾಗಮವಾಯಿತು. ಪುರುಷರೂಪಿ ಭಗವಂತ ತನ್ನ ರೇತಸ್ಸನ್ನು ಲಕ್ಷ್ಮಿಯ ಗರ್ಭದಲ್ಲಿ ಇರಿಸಿದ.

ಭಗವಂತ ಸೃಷ್ಟಿಪೂರ್ವದಲ್ಲಿ ಅನುಸರಿಸಿದ ವಿಧಾನವೇ ಇಂದು ಪ್ರಪಂಚದಲ್ಲಿರುವ ವಿಧಾನ. ಆದರೆ ಮುಂದೆ ಜನನದ ವಿಧಾನ ಮಾತ್ರ ಸೃಷ್ಟಿಯ ಆದಿಯಲ್ಲಿ ಭಿನ್ನವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಭಗವಂತ ಲಕ್ಷ್ಮಿಯಿಂದ ಮಹತತ್ತ್ವದ ಅಭಿಮಾನಿಯಾದ ಚತುರ್ಮುಖನನ್ನು ಸೃಷ್ಟಿ ಮಾಡಿದ. ಈ ಹಿಂದೆ ಭಾಗವತದ ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ: ಲಕ್ಷ್ಮಿ ಚತುರ್ಮುಖನನ್ನು ತನ್ನ ಶಿರಸ್ಸಿನಿಂದ  ಸೃಷ್ಟಿಸಿದಳು. [ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ ।  ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ   ॥ಋಗ್ವೇದ ೧೦-೧೨೫-೦೭ ॥].  ಈ ಸೃಷ್ಟಿಗೆ ಕಾರಣ ಎರಡು: ಅವ್ಯಕ್ತ ಮತ್ತು ಕಾಲ. ಇಲ್ಲಿ ಅವ್ಯಕ್ತ(ಶ್ರಿತತ್ತ್ವ) ಎಂದರೆ ಚಿತ್ಪ್ರಕೃತಿ ಮತ್ತು ಜಡಪ್ರಕೃತಿ. ತ್ರಿಗುಣಾತ್ಮಕವಾದ ಜಡಪ್ರಕೃತಿಯ ಸತ್ವಾಂಶದಿಂದ, ಉತ್ಪತ್ತಿಕಾಲದಲ್ಲಿ  ಚತುರ್ಮುಖನ ಸೃಷ್ಟಿಯಾಯಿತು. ಉತ್ಪತ್ತಿಕಾಲ ಜಡವಾದುದರಿಂದ  ಕಾಲನಾಮಕ ಭಗವಂತ ಯಾವ ಕಾಲದಲ್ಲಿ ಸೃಷ್ಟಿಯ ಮೊಟ್ಟಮೊದಲ ಜೀವ ಸೃಷ್ಟಿಯಾಗಬೇಕೋ ಆ ಕಾಲದಲ್ಲಿ, ಲಕ್ಷ್ಮಿಯ ಮೂಲಕ,  ಸತ್ವಗುಣದಿಂದ ಚತುರ್ಮುಖನನ್ನು ಸೃಷ್ಟಿಸಿದ. ಲಕ್ಷ್ಮಿ ಚತುರ್ಮುಖನನ್ನು ತನ್ನ ಬೈತಲೆಯಲ್ಲಿ(ಶಿರಸ್ಸಿನಲ್ಲಿ) ಹಡೆದಳು. ಈ ರೀತಿ ಮಹತತ್ತ್ವದ ಅಭಿಮಾನಿ ದೇವತೆಯಾದ ಚತುರ್ಮುಖನ ಮತ್ತು ಮಹತತ್ತ್ವದ ಸೃಷ್ಟಿಯಾಯಿತು.

ಇಲ್ಲಿ ಮೊದಲು ನಾವು ಮಹತತ್ತ್ವ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ. “ಅಸ್ಥಿತಾ ಸ್ಥಿತಿಃ ಮಹತತ್ತ್ವಮ್” ಅಂದರೆ ಇರವಿನ ಅರಿವು ಅಥವಾ ‘ಇದೆ’ ಎನ್ನುವ ಎಚ್ಚರವೇ ಮಹತತ್ತ್ವ. ಮಹತತ್ತ್ವದ ಸೃಷ್ಟಿಯಾಯಿತು ಎಂದರೆ: ದೀರ್ಘ ನಿದ್ರೆಯಲ್ಲಿದ್ದ ಜೀವರುಗಳಿಗೆ ಇರವಿನ ಅರಿವು(ಅಸ್ಮಿ) ಬಂತು ಅಥವಾ ಜೀವಾತ್ಮರಿಗೆ ಎಚ್ಚರವಾಯಿತು ಎಂದರ್ಥ. [ನಮ್ಮ ದೇಹದಲ್ಲಿ ಮಹತತ್ತ್ವವನ್ನು ನಾವು ಚಿತ್ತ ಎಂದು ಕರೆಯುತ್ತೇವೆ]. ಭಗವಂತನ ಸೃಷ್ಟಿ ಕ್ರಿಯೆಯಲ್ಲಿ ಇನ್ನೂ ಸ್ಥೂಲವಾಗಿ ಯಾವುದೂ ಸೃಷ್ಟಿಯಾಗಿಲ್ಲ.  ಚತುರ್ಮುಖನ ಸೃಷ್ಟಿ ಎನ್ನುವುದು ಸೃಷ್ಟಿ ಪ್ರಕ್ರಿಯೆಯ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ  ಸ್ಥಿತಿ. [ಚತುರ್ಮುಖನಿಗೆ  ಅನೇಕ ಹುಟ್ಟಿದೆ. ಮೊದಲು ಶ್ರೀಲಕ್ಷ್ಮಿಯ ಶಿರಸ್ಸಿನಲ್ಲಿ ಸೂಕ್ಷ್ಮರೂಪದಲ್ಲಿ ಹುಟ್ಟುದ ಆತ ನಂತರ ಭಗವಂತನ ನಾಭಿಯಲ್ಲಿ. ಸ್ಥೂಲರೂಪದಲ್ಲಿ  ಹುಟ್ಟಲಿಕ್ಕಿದ್ದಾನೆ. ಹೀಗೆ ಯಾವ ರೀತಿ ಸೃಷ್ಟಿ ಬೆಳೆಯುತ್ತದೆ ಎನ್ನುವುದನ್ನು ಮುಂದೆ ನೋಡೋಣ]. 


Sunday, December 22, 2024

Shrimad BhAgavata in Kannada -Skandha-03-Ch-05_02

 ಮುನಿರ್ವಿವಕ್ಷುರ್ಭಗವದ್ಗುಣಾನಾಂ ಸಖಾSಪಿ ತೇ ಭಾರತಮಾಹ ಕೃಷ್ಣಃ ।

ಯಸ್ಮಿನ್  ನೃಣಾಂ ಗ್ರಾಮ್ಯಸುಖಾನುವಾದೈರ್ಮತಿರ್ಗೃಹೀತಾ ನ  ಹರೇಃ ಕಥಾಯಾಮ್ ॥೧೨॥


“ನಿಮ್ಮ ಗೆಳೆಯ ವೇದವ್ಯಾಸರು ಮಹಾಭಾರತವನ್ನು ಭಗವಂತನ ಗುಣಾನುಸಂದಾನಕ್ಕಾಗಿಯೇ ರಚನೆ ಮಾಡಿದರು. ನಿಜವಾದ ಭಗವಂತನ ಭಕ್ತಿಯಿಂದ, ಶ್ರದ್ಧೆಯಿಂದ ಭಾರತವನ್ನು ಓದಿದರೆ ಗ್ರಾಮ್ಯ ಸುಖದ ಕಡೆಗೆ ಮನಸ್ಸು ಹರಿಯುವುದೇ ಇಲ್ಲ” ಎನ್ನುತ್ತಾನೆ ವಿದುರ. 

ವ್ಯಾಸರು ಭಾರತವನ್ನು ಎರಡು ವಿಧದ ಅರ್ಥ ಬರುವಂತೆ ರಚನೆ ಮಾಡಿದ್ದಾರೆ.  ಜೀವಯೋಗ್ಯತೆಗನುಗುಣವಾಗಿ ಅದು ಅರ್ಥವಾಗಬೇಕು ಎನ್ನುವುದು ಅವರ ಉದ್ದೇಶ. ಯಾರಿಗೆ ಹರಿಯ ಕಥೆಯಲ್ಲೇ ಮನಸ್ಸು ನಿಲ್ಲುತ್ತದೋ ಅವರಿಗೆ ಅಲ್ಲಿ ಭಗವಂತನ ಗುಣಗಾನ ಬಿಟ್ಟು ಇನ್ನೇನೂ ಕಾಣುವುದಿಲ್ಲ.

ಈ ಶ್ಲೋಕದಲ್ಲಿ ಬಳಕೆಯಾದ ‘ಮತಿರ್ಗೃಹೀತಾ ನ’ ಎನ್ನುವ ಪದವನ್ನು ಅನೇಕ ವ್ಯಾಖ್ಯಾನಕಾರರು ತಪ್ಪಾಗಿ ಗ್ರಹಿಸಿ ‘ಮಹಾಭಾರತ ರಚನೆ ಮಾಡಿರುವುದು ಅನಧಿಕಾರಿಗಳಿಗಾಗಿ, ಭಗವಂತನ ಗುಣವನ್ನು ಹೇಳುವುದಕ್ಕಾಗಿ ಅಲ್ಲಾ’ ಎನ್ನುವಂತೆ ಹೇಳಿರುವುದೂ ಇದೆ. ಈ ತಪ್ಪು ತಿಳುವಳಿಕೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸರಿಪಡಿಸಿ ವಿವರಿಸಿದ್ದಾರೆ. 

ಪದ್ಮ ಪುರಾಣದಲ್ಲಿ ಹೇಳುವಂತೆ: ಯಸ್ಮಿನ್ ಭಾರತೇ । ಹರೇಃ ಕಥಾಯಾಂ ಗ್ರಾಮ್ಯಸುಖಾನುವಾದೈರ್ಮತಿರ್ನ ಗೃಹೀತಾ । “ಭಾರತಾನ್ನಾಧಿಕಂ ವಿಷ್ಣೋರ್ಮಹಿಮಾವಾಚಕಂ ಕ್ವಚಿತ್ । ಭಾರತಾನ್ನ ವಿರಾಗಾಯ ಭಾರತಾನ್ನ ವಿಮುಕ್ತಯೇ”  ಇತಿ ಪಾದ್ಮೇ ॥ 

ಭಾರತಕ್ಕೆ ಮಿಗಿಲಾಗಿ ಭಗವಂತನ ಮಹಿಮೆಯನ್ನು ಹೇಳುವ ಇನ್ನೊಂದು ಗ್ರಂಥ ಈ ದೇಶದಲ್ಲಿ ನಿರ್ಮಾಣವಾಗಿಲ್ಲ. ಅಧ್ಯಾತ್ಮ ಗ್ರಂಥಗಳಲ್ಲೇ ಸರ್ವಶ್ರೇಷ್ಠ ಗ್ರಂಥ ಭಾರತ. ಹರಿವಂಶದಲ್ಲಿ ಹೇಳುವಂತೆ: ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ ಮಧ್ಯೆ ಚ, ವಿಷ್ಣುಃ ಸರ್ವತ್ರಗೀಯತೆ. ಮಹಾಭಾರತ ಮೊದಲಿನಿಂದ ಕೊನೆ ತನಕ ಅದು ವಿಷ್ಣುವಿನ ಗುಣಗಾತಾ. ಭಾರತಕ್ಕಿಂತ ಹೆಚ್ಚಿನ ವೈರಾಗ್ಯಜನಕವಾದ ಗ್ರಂಥ ಇನ್ನೊಂದಿಲ್ಲ. ಅದಕ್ಕಿಂತ ಹೆಚ್ಚು ಮೋಕ್ಷಸಾಧಕವಾದ ಗ್ರಂಥವೂ ಇನ್ನೊಂದಿಲ್ಲ.

ಇತಿಹಾಸಪುರಾಣಂ ಪಂಚಮಂ ವೇದಾನಾಂ ವೇದಃ. ಮಹಾಭಾರತವನ್ನು ವೇದಗಳಿಗೂ ಮಿಗಿಲಾದ ಗ್ರಂಥ ಎನ್ನುತ್ತಾರೆ. ಇದಕ್ಕೆ ಕಾರಣವೇನೆಂದರೆ: ವೇದದ ಅರ್ಥ ವೇದವನ್ನು ಭಗವಂತನಿಂದ ಉಪದೇಶವಾಗಿ ಪಡೆದ ಚತುರ್ಮುಖ ಸಂಪೂರ್ಣವಾಗಿ ತಿಳಿದಿದ್ದಾನೆ. ಆದರೆ ಮಹಾಭಾರತದ ಪೂರ್ತಿ ಅರ್ಥ ಚತುರ್ಮುಖನಿಗೂ ತಿಳಿದಿಲ್ಲ. ಭಾರತದಲ್ಲಿ ಭಗವಂತ ತನ್ನ ಪ್ರಜ್ಞೆಗೆ ಮಾತ್ರ ಗೋಚರವಾಗುವ ಅನೇಕ ರಹಸ್ಯವನ್ನು ಅಡಗಿಸಿಟ್ಟಿದ್ದಾನೆ. ಹೀಗಾಗಿ ಅದನ್ನು ವೇದಕ್ಕಿಂತ ಮಿಗಿಲಾದ ಗ್ರಂಥ ಎನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ಮಹಾಭಾರತ ಅನಧಿಕಾರಿಗಳಿಗೆ ಅರ್ಥವಾಗದ ಗ್ರಂಥ ನಿಜ, ಆದರೆ ಅದು ಅನಧಿಕಾರಿಗಳಿಗಾಗಿ ರಚಿಸಿರುವ ಗ್ರಂಥವಲ್ಲ. ಆದರೆ ಅದು ಭಗವಂತನ ಗುಣವನ್ನು ಸಾರುವ ಮಹತ್ತರವಾದ ಗ್ರಂಥ ಎನ್ನುವ ಸತ್ಯ ಸ್ಪಷ್ಟವಾಗುತ್ತದೆ.   


ಸಾ ಶ್ರದ್ದಧಾನಸ್ಯ ವಿವರ್ದ್ಧಮಾನಾ ವಿರಕ್ತಿಮನ್ಯತ್ರ ಕರೋತಿ ಪುಂಸಃ ।

ಹರೇಃ  ಪದಾನುಸ್ಮೃತಿನಿರ್ವೃತಸ್ಯ ಸಮಸ್ತದುಃಖಾಪ್ಯಯಮಾಶು  ಧತ್ತೇ ॥೧೩॥


ಭಗವಂತನ ಕಥೆಯಲ್ಲಿ ಇರುವ ‘ಮತಿ’ ಶ್ರೆದ್ಧೆಯಿಂದ ಹೆಚ್ಚುತ್ತಾ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಈ ‘ಮತಿ’  ಸಂಸ್ಮೃತಿ ಬಂಧವನ್ನು[ವಿಷಯ ಸುಖದ ಬಂಧವನ್ನು] ಬಿಡಿಸಿ ಬಿಡುತ್ತದೆ. ಇದರಿಂದ ದುಃಖವನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಹೃದಯದಲ್ಲಿ ಸಂಪೂರ್ಣ ಭಗವಂತನನ್ನು ತುಂಬಿಕೊಂಡಾಗ ಅಲ್ಲಿ ದುಃಖಕ್ಕೆ ಯಾವ ಸ್ಥಾನವೂ ಇಲ್ಲವಾಗುತ್ತದೆ.

ಈ ರೀತಿಯ ಪೀಠಿಕೆಯೊಂದಿಗೆ ಮಾತನ್ನಾರಂಭಿಸಿದ  ವಿದುರ  ಮೈತ್ರೇಯನಲ್ಲಿ ತನಗೆ ಶ್ರೀಕೃಷ್ಣನ ಕಥೆಯನ್ನು ವಿವರಿಸಿ ಹೇಳಬೇಕಾಗಿ ಕೋರಿಕೊಳ್ಳುತ್ತಾನೆ.


ಮೈತ್ರೇಯ ಉವಾಚ

ಸಾಧು ಪೃಷ್ಟಂ ತ್ವಯಾ ಸಾಧೋ ಲೋಕಾನ್ ಸಾಧ್ವನುಗೃಹ್ಣತಾ ।

ಕೀರ್ತಿಂ ವಿತನ್ವತಾ ಲೋಕೇ ಆತ್ಮನೋSಧೋಕ್ಷಜಾತ್ಮನಃ ॥೧೮॥


ನೈತಚ್ಚಿತ್ರಂ ತ್ವಯಿ ಕ್ಷತ್ತರ್ಬಾದರಾಯಣವೀರ್ಯಜೇ ।

ಗೃಹೀತೋSನನ್ಯಭಾವೇನ ಯತ್ ತ್ವಯಾ ಹರಿರೀಶ್ವರಃ ॥೧೯॥


ಮಾಣ್ಡವ್ಯಶಾಪಾದ್ ಭಗವಾನ್ ಪ್ರಜಾಸಂಯಮನೋ ಯಮಃ ।

ಭ್ರಾತುಃ ಕ್ಷೇತ್ರೇ ಭುಜಿಷ್ಯಾಯಾಂ ಜಾತಃ ಸತ್ಯವತೀಸುತಾತ್ ॥೨೦॥


ಭವಾನ್ ಭಗವತೋ ನಿತ್ಯಂ ಸಮ್ಮತಃ ಸಾನುಗಸ್ಯ ಹಿ ।

ಜ್ಞಾನೋಪದೇಶಾಯ ಚ ಮಾಮಾದಿಶದ್ ಭಗವಾನ್ ವ್ರಜನ್ ॥೨೧॥


 “ಸರ್ವ ಸಮರ್ಥನಾದ ಭಗವಂತನನ್ನು ಅನನ್ಯ ಭಕ್ತಿಯಿಂದ  ಹೃದಯದಲ್ಲಿ ಹೊತ್ತುಕೊಂಡಿರುವ ನೀನು ಇಂಥಹ ಪ್ರಶ್ನೆ ಹಾಕಿರುವುದು ಆಶ್ಚರ್ಯದ ಸಂಗತಿಯೇನಲ್ಲ.  ನೀನೇನೂ ಸಾಮಾನ್ಯ ವ್ಯಕ್ತಿಯಲ್ಲ.  ಬೇಕೆಂದೇ ಮಾಂಡವ್ಯನಿಂದ ಶಾಪಗ್ರಸ್ತನಾಗಿ  ಮನುಷ್ಯ ಜನ್ಮದಲ್ಲಿ ಹುಟ್ಟಿರುವ, ಅಧರ್ಮಿಗಳಿಗೆ ಶಿಕ್ಷೆಯನ್ನು ನೀಡುವ ಯಮಧರ್ಮನಲ್ಲವೇ ನೀನು? ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಜನಿಸಬೇಕಾಗಿದ್ದ ನೀನು, ಅರಮನೆಯ ದಾಸಿಯಲ್ಲಿ ವೇದವ್ಯಾಸರಿಂದ ಜನಿಸಿದೆ. ಇಂತಹ ದೇವಾಂಶ ಸಂಭೂತನಾಗಿರುವ ನಿನಗೆ ನಾನು ಉಪದೇಶಿಸುವುದೇನಿದೆ” ಎಂದು ವಿದುರನನ್ನು ಮೈತ್ರೇಯ ಪ್ರಶ್ನಿಸುತ್ತಾನೆ. 

 “ಶ್ರೀಕೃಷ್ಣನಿಗೆ ನೀನೆಂದರೆ ಅತ್ಯಂತ ಪ್ರೀತಿ. ನೀನು ನನ್ನಿಂದ ಹಿರಿಯನಾದರೂ ಕೂಡಾ, ನಾನು ಭಗವಂತನಿಂದ ಪಡೆದ ಜ್ಞಾನವನ್ನು ನಿನಗೆ ನೀಡಬೇಕೆಂಬುದು ಶ್ರೀಕೃಷ್ಣನ ಆದೇಶ. ಆದ್ದರಿಂದ ನಾನು ನಿನಗೆ ಜ್ಞಾನೋಪದೇಶ ಮಾಡುತ್ತೇನೆ”   ಎನ್ನುತ್ತಾನೆ ಮೈತ್ರೇಯ. 


ಅಥ ತೇ ಭಗವಲ್ಲೀಲಾ ಯೋಗಮಾಯೋಪಬೃಂಹಿತಾಃ ।

ವಿಶ್ವಸ್ಥಿತ್ಯುದ್ಭವಾನ್ತಾರ್ಥಾ ವರ್ಣಯಾಮ್ಯನುಪೂರ್ವಶಃ ॥೨೨॥


“ತನ್ನ ಯೋಗಮಾಯೆಯಿಂದ(ಸ್ವರೂಪ ಸಾಮರ್ಥ್ಯದಿಂದ) ಈ ಭೂಮಿಯ ಮೇಲೆ ಭಗವಂತನಾಡಿದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದ  ಲೀಲೆಗಳನ್ನು,   ಶ್ರೀಕೃಷ್ಣನಿಂದ  ನನಗೆ ಉಪದೇಶಿಸಲ್ಪಟ್ಟ ಸಮಸ್ತ  ಅಧ್ಯಾತ್ಮದ ಮತ್ತು ಸೃಷ್ಟಿಯ ರಹಸ್ಯವನ್ನು ಕ್ರಮವಾಗಿ ನಿನಗೆ ಉಪದೇಶಿಸುತ್ತೇನೆ” ಎಂದು ಮೈತ್ರೇಯ ವಿದುರನಿಗೆ ಹೇಳಿದ ಎನ್ನುವಲ್ಲಿಗೆ ಐದನೇ ಅಧ್ಯಾಯ ಕೊನೆಗೊಳ್ಳುತ್ತದೆ.  


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪಂಚಮೋSಧ್ಯಾಯಃ  ॥


ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಐದನೇ ಅಧ್ಯಾಯ ಮುಗಿಯಿತು

*********


Monday, December 2, 2024

Shrimad BhAgavata in Kannada -Skandha-03-Ch-05_01

 ಪಂಚಮೋSಧ್ಯಾಯಃ


ಮೈತ್ರೇಯ ಆಶ್ರಮ: ವಿದುರ-ಮೈತ್ರೇಯ ಸಂವಾದ


ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರವನ್ನು ವಿದುರನಿಗೆ ನೀಡಿದ ಉದ್ಧವ, ಆ ರಾತ್ರಿ ಯಮುನಾ ನದಿ ತೀರದಲ್ಲೇ ತಂಗುತ್ತಾನೆ. ಮರುದಿನ ಆತ ವಿದುರನಿಗೆ ಗಂಗಾನದಿ ತೀರದಲ್ಲಿರುವ ಮೈತ್ರೇಯನನ್ನು ಭೇಟಿಯಾಗುವಂತೆ ತಿಳಿಸಿ, ತಾನು ಬದರಿಗೆ ತೆರಳುತ್ತಾನೆ. ಉದ್ಧವನನ್ನು ಬೀಳ್ಕೊಟ್ಟ ವಿದುರ ನೇರವಾಗಿ ಗಂಗಾನದಿ ತೀರದಲ್ಲಿರುವ ಮೈತ್ರೇಯರ ಆಶ್ರಮಕ್ಕೆ ಬರುತ್ತಾನೆ.

ಈ ಹಿಂದೆ ಹೇಳಿದಂತೆ ಮೈತ್ರೇಯ ಶುಕಾಚಾರ್ಯರ ಪ್ರೀತಿಯ ಶಿಷ್ಯರಲ್ಲಿ ಒಬ್ಬ. ವೇದವ್ಯಾಸರು ಭಾಗವತದಲ್ಲಿ ಉಲ್ಲೇಖಿಸಿದಂತೆ:  ಮೈತ್ರೇಯ ‘ಮಿತ್ರಾ’ ಎನ್ನುವವಳ ಮಗ (ಮಿತ್ರಾಸುತೋ ಮುನಿಃ). ಈತನ ತಂದೆ ಕುಶಾರವ. ಹೀಗಾಗಿ ಈತನನ್ನು ಕೌಶಾರವ ಎಂದೂ ಕರೆಯುತ್ತಾರೆ.[ ಕೌಶಾರವ : ಕುತ್ಸಿತ ಮತ್ತು ಸಾರಭೂತವಾದುದನ್ನು ಗುರುತಿಸಿ,  ಅರಿತು ನಡೆಯಬಲ್ಲ ಜ್ಞಾನಿ]. ತತ್ತ್ವಜ್ಞಾನದ ಆದಿಪುರುಷರಾದ ವೇದವ್ಯಾಸರು ‘ಮಿತ್ರ’ ಎಂದು ಪರಿಗ್ರಹಿಸಿರುವ ಮೈತ್ರೇಯ ಬಹಳ ದೊಡ್ಡ ಜ್ಞಾನಿ. ಈಗಾಗಲೇ ಹೇಳಿರುವಂತೆ: ಶ್ರೀಕೃಷ್ಣ  ಜಗತ್ತಿನ ಮೂಲ ಸತ್ಯವನ್ನು ಉದ್ಧವ ಮತ್ತು ಮೈತ್ರೇಯನಿಗೆ ಉಪದೇಶ ಮಾಡಿ, ಆ ಜ್ಞಾನವನ್ನು ವಿದುರನಿಗೆ ನೀಡುವ ಜವಾಬ್ದಾರಿಯನ್ನು ಮೈತ್ರೇಯನಿಗೆ ವಹಿಸಿದ್ದ. 

ಮೈತ್ರೇಯನನ್ನು ಕಂಡ ತಕ್ಷಣ ವಿದುರನಿಗೆ ಆತನಿಂದ ಜ್ಞಾನ ಪಡೆಯಬೇಕು ಎನ್ನುವ ಹಂಬಲವಾಗುತ್ತದೆ. ವಾಸ್ತವವಾಗಿ ವಿದುರ ಜೀವಯೋಗ್ಯತೆಯಲ್ಲಿ ಮೈತ್ರೇಯನಿಗಿಂತ ಎತ್ತರದಲ್ಲಿರುವವನು. ಆದರೆ ಮೈತ್ರೇಯ ಸ್ವಯಂ ಭಗವಂತನಿಂದ ಜ್ಞಾನ ಪಡೆದು ಬಂದಿರುವವನು. ಅಂತಹ ಜ್ಞಾನವನ್ನು ಪಡೆಯುವುದು ವಿದುರನಿಗೆ ದೊಡ್ಡ ಭಾಗ್ಯ. [ಎಷ್ಟೋ ಬಾರಿ ಗುರುವಿಗಿಂತ ಶಿಷ್ಯ ಯೋಗ್ಯತೆಯಲ್ಲಿ ದೊಡ್ದವನಿದ್ದರೂ ಕೂಡಾ, ಅವರು ಲೋಕದ ಗುರು-ಶಿಷ್ಯ ಭಾವವನ್ನು ಅನುಸರಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ: ಶ್ರೀಕೃಷ್ಣ ಸಾಂದೀಪನಿ ಮುನಿಯನ್ನು ಗುರುವಾಗಿ ಸ್ವೀಕರಿಸಿ ಅರವತ್ತು ದಿನ ವಿದ್ಯಾಭಾಸ ಮಾಡಿರುವುದು].  ಹೀಗೆ ಶ್ರೀಕೃಷ್ಣ ಮೈತ್ರೇಯನಿಗೆ ಉಪದೇಶ ಮಾಡಿರುವ ವಿದ್ಯೆಯನ್ನು ಅವನ ಬಾಯಿಯಿಂದ ಕೇಳಿ ತಿಳಿಯುವ ಅಭಿಲಾಷೆಯೊಂದಿಗೆ ವಿದುರ ಒಂದು ಸುಂದರವಾದ ಪೀಠಿಕೆಯನ್ನು ಹಾಕುತ್ತಾನೆ.


ವಿದುರ ಉವಾಚ

ಸುಖಾಯ ಕರ್ಮಾಣಿ ಕರೋತಿ ಲೋಕೋ ನ ತೈಃ ಸುಖಂ ಚಾನ್ಯದುಪಾರಮಂ ವಾ ।

ವಿನ್ದೇತ ಭೂಯಸ್ತತ ಏವ ದುಃಖಂ ಯದತ್ರ ಯುಕ್ತಂ ಭಗವಾನ್ ವದೇನ್ನಃ ॥೦೨॥


ಜನಸ್ಯ ಕೃಷ್ಣಾದ್ ವಿಮುಖಸ್ಯ ದೈವಾದಧರ್ಮಶೀಲಸ್ಯ ಸುದುಃ ಖಿತಸ್ಯ ।

ಅನುಗ್ರಹಾಯೇಹ ಚರಂತಿ ನೂನಂ ಭೂತಾನಿ ಭವ್ಯಾನಿ ಜನಾರ್ದನಸ್ಯ ॥೦೩॥


ಈ ಜಗತ್ತಿನಲ್ಲಿ ಪ್ರತಿಯೊಬ್ಬನೂ ಕೂಡಾ ಒಂದಲ್ಲಾ ಒಂದು ಕರ್ಮದಲ್ಲಿ ನಿರತನಾಗಿರುತ್ತಾನೆ. ಅದು ಲೌಕಿಕ ಕರ್ಮವಿರಬಹುದು ಅಥವಾ ವೈದಿಕ ಕರ್ಮವಿರಬಹುದು. ಯಾವ ಕರ್ಮವಿದ್ದರೂ ಕೂಡಾ ಆ ಕರ್ಮದ ಹಿಂದೆ ಒಂದು ಸುಖದ ಬಯಕೆ ಇದ್ದೇ ಇರುತ್ತದೆ. ಯಾರೂ ಕೂಡಾ ಸುಖದ ಬಯಕೆ ಇಲ್ಲದೆ ನಿರ್ವ್ಯಾಜ ಕರ್ಮ ಮಾಡುವುದಿಲ್ಲ. ಆದರೆ ಸುಖವನ್ನೇ ಗುರಿಯಾಗಿಟ್ಟುಕೊಂಡು ಕರ್ಮಮಾಡಿದವನಿಗೆ ಸುಖ ಸಿಗುತ್ತದೆ ಎಂದು ಹೇಳುವುದು ಕಷ್ಟ! ಇದರಿಂದಾಗಿ ಬಯಸಿದ ಸುಖ ಸಿಗದೇ ಇದ್ದವನು ತಾನು ಕಷ್ಟಪಡುವುದಲ್ಲದೆ, ಇನ್ನೊಬ್ಬರಿಗೂ ದುಃಖ ಕೊಡುತ್ತಾ  ಜೀವನ ಸಾಗಿಸುತ್ತಾನೆ. ಇದು ಸಾರ್ವತ್ರಿಕ ಸಾಮಾಜಸತ್ಯ. ಹೀಗಾಗಿ ಇಲ್ಲಿ ವಿದುರ ಮೈತ್ರೇಯನನ್ನು ಕೇಳುತ್ತಾನೆ:  “ಯಾವುದರಿಂದ ನಾವು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬಹುದು?  ಸುಖದ ಭ್ರಮೆಯಿಂದಾಚೆಗಿರುವ ನಿಜವಾದ ಸುಖವನ್ನು ಕಾಣುವುದು ಹೇಗೆ? ಸ್ವಯಂ ಶ್ರೀಕೃಷ್ಣನಿಂದ ಉಪದೇಶ ಪಡೆದ ನೀವು ಇದಕ್ಕೆ ಪರಿಹಾರ ಸೂಚಿಸಬೇಕು” ಎಂದು.

“ನಮ್ಮ ದುಃಖವನ್ನು ನೀಗಿಸಬಲ್ಲ ಭಗವಂತ  ಕಣ್ಮುಂದೆ ನಿಂತಿದ್ದರೂ, ದುರ್ದೈವದಿಂದ ಆತನನ್ನು ಗುರುತಿಸದೇ, ‘ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು’ ಎಂದು, ದೇವರು-ಧರ್ಮದ ಬಗ್ಗೆ ನಂಬಿಕೆ ಕಳೆದುಕೊಂಡು ಬದುಕುವ ಜನರ ಉದ್ಧಾರಕ್ಕಾಗಿಯೇ ಇರುವ ನೀವು  ಜನಾರ್ದನನ ಪ್ರತಿನಿಧಿಗಳು. ನಿಮ್ಮಂತಹ ಅನೇಕರು ಭಗವಂತನ ಸಂದೇಶಕಾರರಾಗಿ ಭೂತ-ವರ್ತಮಾನ ಕಾಲದಲ್ಲಷ್ಟೇ ಅಲ್ಲ,  ಭವಿಷ್ಯತ್ ಕಾಲದಲ್ಲೂ   ಇದ್ದೇ ಇರುತ್ತಾರೆ. ಹಾಗೆಯೇ  ಜ್ಞಾನ ನಿರಾಕರಣೆ ಮಾಡುವವರೂ ಕೂಡಾ ಎಲ್ಲಾ ಕಾಲದಲ್ಲೂ ಇರುತ್ತಾರೆ. ಭಗವಂತನ ಸಂದೇಶವನ್ನು ಜನಾಂಗಕ್ಕೆ ಮುಟ್ಟಿಸುವ ಜ್ಞಾನಿಗಳು ಇದ್ದಾಗಲೂ  ಕಣ್ಮುಚ್ಚಿ ಬದುಕುವುದು ಶ್ರೇಯಸ್ಕರವಲ್ಲ. ಹೀಗಾಗಿ  ದುಃಖವನ್ನು ದಾಟಿ ಸುಖದಲ್ಲಿ ನಿಂತಿರುವ ನೀವು  ನಮಗೆ ಜ್ಞಾನದ ದಾರಿ ತೋರಬೇಕು” ಎಂದು ವಿದುರ ಮೈತ್ರೇಯನಲ್ಲಿ ಕೇಳಿಕೊಳ್ಳುತ್ತಾನೆ.

ಇಲ್ಲಿ ಭಗವಂತನನ್ನು ‘ಜನಾರ್ದನ’ ಎಂದು ಸಂಬೋಧಿಸಲಾಗಿದೆ.  ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಎನ್ನುವ ಪದ  ‘ಕೊನೆಗೊಳಿಸುವವನು’ ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ: (೧)ಜನ ಎಂದರೆ ದುರ್ಜನ. ಜನಾರ್ದನ ಎಂದರೆ ದುರ್ಜನ ನಾಶಕ. (೨) ಜನ ಎಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು. ಅಂದರೆ ಮುಕ್ತಿಪ್ರದಾಯಕ. (೩) ಜನ ಎಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು[ಮೋಕ್ಷಪ್ರದ]. (೪) ಜನ ಎಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭೀಷ್ಟವನ್ನು ಪೂರೈಸುವವನು. ಇದೇ ರೀತಿ ಭಗವಂತನ ಪ್ರತಿನಿಧಿಗಳಾದ ಜ್ಞಾನಿಗಳನ್ನು ಇಲ್ಲಿ ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಭೂತಿ ಅಂದರೆ ಉನ್ನತಿ, ಎತ್ತರಕ್ಕೆ ಏರುವ ಸ್ಥಿತಿ. ಹೀಗಾಗಿ ಭಗವಂತನ ಅರಿವಿನಿಂದ ಎತ್ತರಕ್ಕೇರಿದವರನ್ನು ಇಲ್ಲಿ  ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಎಲ್ಲರಿಗಿಂತ ಎತ್ತರದಲ್ಲಿರುವ ಅರಿವಿನ ಕಡಲಾದ ಭಗವಂತ ಮಹಾಭೂತಃ.


ವಿದುರ ಹೇಳುತ್ತಾನೆ: “ಸುಖದ ದಾರಿಯನ್ನು ತೋರಬಲ್ಲವರು ನೀವು ಮಾತ್ರ. ಏಕೆಂದರೆ ನೀವು ದುಃಖವನ್ನು ದಾಟಿ ಆನಂದದಲ್ಲಿರುವವರು. ಹೀಗಾಗಿ ಯಾವುದನ್ನೂ ಅಂಟಿಸಿಕೊಳ್ಳದ ನೀವು ನಮಗೆ ದಾರಿ ತೋರಬಲ್ಲಿರಿ” ಎಂದು.


ಪರಾವರೇಷಾಂ ಭಗವನ್ ಕೃತಾನಿ  ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್ ।

ನ ತೃಪ್ನುಮಃ ಕರ್ಣಸುಖಾವಹಾನಾಮ್  ತೇಷಾಮೃತೇ ಕೃಷ್ಣಕಥಾಮೃತೌಘಾತ್ ॥೧೦॥


“ನನ್ನ ತಂದೆಯವರಾದ ವೇದವ್ಯಾಸರ ತರಬೇತಿಯಲ್ಲಿ ಬೆಳೆದ ನಾನೂ ಕೂಡ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಹಿಂದಿನ ಹಾಗು ಇಂದಿನ ಸಮಸ್ತ  ಮಹಾನುಭಾವರ ಜೀವನಚರಿತ್ರೆಯನ್ನು ನನ್ನ ತಂದೆಯಿಂದ ನಿರಂತರ ಕೇಳುತ್ತಾ ಬೆಳೆದವನು ನಾನು. ಮಹಾತ್ಮರ  ಜೀವನ ಚರಿತ್ರೆಯನ್ನು ಕೇಳುವುದು ಕಿವಿಗೆ ಆನಂದ. ಎಲ್ಲಾ  ಮಹಾತ್ಮರ ಕಥೆಯನ್ನು ಕೇಳಿದಾಗ ನನಗೆ ತಿಳಿದದ್ದು ಏನೆಂದರೆ: ‘ಪ್ರತಿಯೊಬ್ಬ ಮಹಾತ್ಮನ ಕಥೆಯ ಹಿಂದಿರುವುದು ಶ್ರೀಕೃಷ್ಣನ ಕಥೆ ಮತ್ತು  ಅವೆಲ್ಲವೂ ಶ್ರೀಕೃಷ್ಣನ ಕಥೆಯ ಅಮೃತದ ಹೊಳೆ’ ಎನ್ನುವ ವಿಷಯ. ಹೀಗಾಗಿ ಇನ್ನಷ್ಟು ಕೃಷ್ಣ ಕಥೆಯನ್ನು ನಿಮ್ಮ ಬಾಯಿಂದ ನಾನು ಕೇಳಬೇಕು” ಎಂದು ತನ್ನ ಅಪೇಕ್ಷೆಯನ್ನು ವಿದುರ ಮೈತ್ರೇಯನಲ್ಲಿ ವ್ಯಕ್ತಪಡಿಸುತ್ತಾನೆ.


Tuesday, April 16, 2024

Shrimad BhAgavata in Kannada -Skandha-03-Ch-04_02

 

ನೋದ್ಧವೋSಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ[1] ಪ್ರಭುಃ ।

 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೨॥

 

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.

 

ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ‘ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋSಪಿ ವಾ । ಉಚ್ಯತೇSಪಿತು ನೀಚಾನಾಂ ಮೋಹನಾರ್ಥೇ ವ್ಯಪೇಕ್ಷಯಾ[2]  । ಮೂಢದೃಷ್ಟ್ಯನುಸಾರಾದ್ ವಾ ಕಿಞ್ಚಿತ್ಸಾಮ್ಯೇನ ವಾ ಕ್ವಚಿತ್॥  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).

 

ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಅಲ್ಲಿನ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********



[1] “ಗುಣೈರ್ನಿರ್ದಿತಃ” – ಪ್ರಚಲಿತ ಪಾಠ

[2] “ಮೋಹಾರ್ಥಂ ವಾSಪ್ಯುಪೇಕ್ಷಯಾ” – ಪ್ರಚಲಿತ ಪಾಠ

Thursday, April 4, 2024

Shrimad BhAgavata in Kannada -Skandha-03-Ch-04_01

 

ಚತುರ್ಥೋSಧ್ಯಾಯಃ

 

ಉದ್ಧವ ವಿದುರ ಸಂವಾದ- ಭಗವಂತನ ಅವತಾರ ಸಮಾಪ್ತಿ ಸಂಕಲ್ಪ

 

ಉದ್ಧವ ಉವಾಚ

ಭಗವಾನಾತ್ಮಮಾಯಾಯಾ[1] ಗತಿಂ ತಾಮವಲೋಕ್ಯ ಸಃ ।

 ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲ ಉಪಾವಿಶತ್[2] ॥೦೩॥

 

 ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಹ ।

 ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಞ್ಜಿಹೀರ್ಷುಣಾ ॥೦೪॥

 

ವಿದುರನಿಗೆ ಕೃಷ್ಣಕಥೆಯನ್ನು ವಿವರಿಸುತ್ತಿರುವ ಉದ್ಧವ, ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯುವ ಕಥೆಯನ್ನು ಇಲ್ಲಿ ವಿವರಿಸಿದ್ದಾನೆ. ಮುಂದೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು ಎನ್ನುವುದು ಭಗವಂತನ ಇಚ್ಛೆಯಾಗಿತ್ತು.  ಇದರ ಹಿಂದೆ ಋಷಿ ಶಾಪ ಮತ್ತು ಗಾಂಧಾರಿಯ ಶಾಪವಿರುವ ವಿಷಯ ನಮಗೆ ತಿಳಿದಿದೆ. ಗಾಂಧಾರಿ ತನ್ನ ಜೀವಮಾನದಲ್ಲಿ ಸಂಯಮ ಕಳೆದುಕೊಂಡು ಮಾತನಾಡಿದ ಏಕಮಾತ್ರ ಘಟನೆ ಅದಾಗಿದೆ. ಎಂದೂ ತನ್ನ ಮಕ್ಕಳ ಮೇಲೆ ಮೋಹಪಟ್ಟು ಮಾತನಾಡದ ಆಕೆ,  ಯುದ್ಧದ ನಂತರ, ತನಗೆ ನಮಸ್ಕರಿಸಲು ಬಂದ ಶ್ರೀಕೃಷ್ಣನಿಗೆ ಸಂಯಮ ಕಳೆದುಕೊಂಡು: “ಹೇಗೆ ನನ್ನ ವಂಶ ನಿರ್ವಂಶವಾಯಿತೋ ಹಾಗೇ  ನಿನ್ನ ವಂಶವೂ ನಿರ್ವಂಶವಾಗಲಿ” ಎಂದು ಶಾಪ ನೀಡುತ್ತಾಳೆ.  ಈ ಶಾಪವನ್ನು ಸಂತೋಷವಾಗಿ ಸ್ವೀಕರಿಸಿದ ಶ್ರೀಕೃಷ್ಣ : “ಪತಿವೃತೆಯ ಆಶೀರ್ವಾದ” ಎಂದು ನಗುತ್ತಾ ಹೇಳಿ ಹೊರಟು ಹೋಗುತ್ತಾನೆ. “ಅಂತಹ ಪತಿವೃತೆ ಗಾಂಧಾರಿಯ ಮಾತನ್ನು ಉಳಿಸುವುದಕ್ಕಾಗಿ: ‘ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು’ ಎಂದು  ಶ್ರೀಕೃಷ್ಣ ಸಂಕಲ್ಪಿಸಿದ” ಎನ್ನುತ್ತಾನೆ ಉದ್ಧವ.

ಹೇಗೆ ಮಹಾಭಾರತ ಯುದ್ಧದಲ್ಲಿ ಭಗವಂತ ಯಾವುದೇ ಆಯುಧ ಹಿಡಿಯದೆ ಇಡೀ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದನೋ, ಅದೇ ರೀತಿ, ತನ್ನ ಸಾಮರ್ಥ್ಯದಿಂದ, ತಾನು ಯಾರನ್ನೂ ಕೊಲ್ಲದೆ, ಸಮಸ್ತ ಯಾದವ ಕುಲವನ್ನು ಸಂಹಾರ ಮಾಡುವ ಸಂಕಲ್ಪವನ್ನು ಭಗವಂತ ಮಾಡುತ್ತಾನೆ.

ಪ್ರಭಾಸ ಕ್ಷೇತ್ರಕ್ಕೆ ಬಂದ ಯಾದವರು ದಾನ ಧರ್ಮಾದಿ ಪುಣ್ಯಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ,  ಶ್ರೀಕೃಷ್ಣನ ಅನುಮತಿಯಂತೆ ಎಲ್ಲರೂ ಮಧ್ಯಪಾನ ಮಾಡುತ್ತಾರೆ. [ಕ್ಷತ್ರಿಯರಿಗೆ ಮಧ್ಯಪಾನ, ಮಾಂಸ ಭಕ್ಷಣೆ ನಿಷಿದ್ಧವಲ್ಲ].  ಮಧ್ಯಪಾನ ಮಾಡಿ ಮೈಮರೆತ ಎಲ್ಲರೂ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಶ್ರೀಕೃಷ್ಣ ಸರಸ್ವತೀ ನದಿ ನೀರನ್ನು ಆಚಮನ ಮಾಡಿ, ದೂರದಲ್ಲಿನ ಒಂದು ವೃಕ್ಷದ ಕೆಳಗೆ ನಗುತ್ತಾ ಕುಳಿತಿದ್ದ. ತನಗೆ ಶರಣಾದವರ ಸಮಸ್ತ ದುಃಖವನ್ನು ಪರಿಹರಿಸುವ, ಯಾವ ದೋಷದ ಸ್ಪರ್ಶವೂ ಇಲ್ಲದ ನಿರ್ದುಷ್ಟ ಸ್ವರೂಪಿ ಭಗವಂತ, ಯಾದವರ ಸಂಸಾರ ದುಃಖವನ್ನು ಈ ರೀತಿ ಪರಿಹರಿಸಿದ.   ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯುತ್ತಿದ್ದಂತೆ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಾನೆ.

ಮುಂದೆ ನಡೆಯಲಿರುವ ಈ ಎಲ್ಲಾ ಘಟನೆಗಳನ್ನು ಶ್ರೀಕೃಷ್ಣ ಇಪ್ಪತ್ತಾರು ವರ್ಷಗಳ ಹಿಂದೆ ಸಂಕಲ್ಪ ಮಾಡಿ ಉದ್ಧವನಿಗೆ ವಿವರಿಸಿ, ಆತನಿಗೆ ಸಮಸ್ತ ಧರ್ಮೋಪದೇಶ ಮಾಡಿ ಹೇಳುತ್ತಾನೆ: “ಇದು ನನ್ನ ಸಂದೇಶ. ಇದನ್ನು ನೀನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ನೀಡು” ಎಂದು. ಶ್ರೀಕೃಷ್ಣನಿಂದ ಉಪದೇಶ ಪಡೆದು ಬದರಿಗೆ ಹೋಗತ್ತಿರುವ ಉದ್ಧವನಿಗೆ  ದಾರಿ ಮಧ್ಯೆ ವಿದುರ ಸಿಕ್ಕಿದ್ದಾನೆ. ಅಲ್ಲಿ ಉದ್ಧವ ಈ ಎಲ್ಲಾ ವಿವರಗಳನ್ನು ವಿದುರನಿಗೆ ವಿವರಿಸಿದ್ದಾನೆ.

ಈ ಮೇಲಿನ ಶ್ಲೋಕದಲ್ಲಿ ‘ಸ್ವಕುಲಂ ಸಂಜಿಹೀರ್ಷುಣಾ’ ಎನ್ನುವಲ್ಲಿ ‘ಮುಂದೆ(ಇಪ್ಪತ್ತಾರು ವರ್ಷಗಳ ನಂತರ) ಯದುಕುಲ ನಾಶ ಮಾಡುವ ಸಂಕಲ್ಪವನ್ನು ಶ್ರೀಕೃಷ್ಣ ಮಾಡಿದ’ ಎಂದು ಹೇಳಲಾಗಿದೆ. ಆದರೆ ‘ಯದುಕುಲ ನಾಶವಾಗುವ ಕಾಲದಲ್ಲಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ಮಾಡಿದ’ ಎನ್ನುವ ವಿಷಯವೂ ಈ ಅಧ್ಯಾಯದಲ್ಲಿ ಬರುತ್ತದೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಈ ಗೊಂದಲವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಪರಿಹರಿಸಿದ್ದಾರೆ. ‘ಆತ್ಮಮಾಯಾಯಾಃ ಆತ್ಮಸಾಮರ್ಥ್ಯಸ್ಯ ಗತಿಂ ಪೂರ್ವಮೇವಾವಲೋಕ್ಯ[3]’ ಅಂದರೆ: ಯದುಕುಲ ನಾಶದ ತನ್ನ ಸಾಮರ್ಥ್ಯದ ಮುಂದಿನ ಕಾರ್ಯತಂತ್ರವನ್ನು ಭಗವಂತ ಮೊದಲೇ ನಿರ್ಧರಿಸಿದ್ದ.

ಗರುಡ ಪುರಾಣದಲ್ಲಿ ಹೇಳುವಂತೆ: ‘ಜ್ಞಾತ್ವಾ ಕತಿಪಯೈರ್ವಷ್ಯೈಃ ಪೂರ್ವಮೇವ ಜನಾರ್ದನಃ । ಮೌಸಲಂ ಜ್ಞಾನಸನ್ತತ್ಯಾ[4] ಉದ್ಧವಂ ಬದರೀಂ ನಯತ್[5] । ಸ ಜ್ಞಾನಂ[6] ತತ್ರ ವಿಸ್ತೀರ್ಯ ಪುನರ್ದ್ವಾರವತೀಂ ಯಯೌ ।  ಪೂರ್ವಮೇವೋಪದಿಷ್ಟೋSಪಿ ಹರಿಣಾ ಜ್ಞಾನಮುದ್ಧವಃ | ಸ್ವರ್ಗಾರೋಹಣಕಾಲೇ ತು ಪುನಃ ಪಪ್ರಚ್ಛ ಕೇಶವಮ್ । ಪುನಃ ಶ್ರುತ್ವಾ ಬದರ್ಯೇ ತು[7] ವಷತ್ರಯಮುವಾಸ ಹ । ಜ್ಞಾನಂ ಸಂಸ್ಥಾಪ್ಯ ಪಶ್ಚಾಚ್ಚ ಸ್ವೇಚ್ಛಯಾ ಸ್ವರ್ಗತಃ ಪ್ರಭುಃ” ಇತಿ ಗಾರುಡೇ[8] ॥ ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯದುಕುಲ ನಾಶದ ವಿಷಯವನ್ನು ಉದ್ಧವನಿಗೆ ಹೇಳಿ ಆಗಲೇ ಆತನಿಗೆ ತತ್ವೋಪದೇಶ ನೀಡಿದ ಶ್ರೀಕೃಷ್ಣ,  ಆತನಲ್ಲಿ ಆ ಜ್ಞಾನವನ್ನು ಬದರಿಗೆ ತೆರಳಿ ಅಲ್ಲಿನ ಋಷಿಗಳಿಗೆ ನೀಡುವಂತೆ ಹೇಳಿದ್ದ.  ಬದರಿಗೆ ತೆರಳಿದ ಉದ್ಧವ ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ ಮತ್ತೆ ಮರಳಿ ದ್ವಾರಕೆಗೆ ಬಂದಿದ್ದ.  ಮುಂದೆ ಯಾದವ ಸಂಹಾರ ಕಾಲದಲ್ಲಿ ಮರಳಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ನೀಡಿ ಮತ್ತೆ ಬದರಿಗೆ ಕಳುಹಿಸಿಕೊಡುತ್ತಾನೆ. ಈ ರೀತಿ ಮತ್ತೆ ಬದರಿಗೆ ಬಂದ ಉದ್ಧವ ಅಲ್ಲಿ ಮೂರುವರ್ಷಗಳ ಕಾಲ ವಾಸವಿದ್ದು, ತಾನು ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ, ಆನಂತರ ಸ್ವಇಚ್ಛೆಯಿಂದ ದೇಹತ್ಯಾಗ ಮಾಡುತ್ತಾನೆ.  ಈ ಹಿನ್ನೆಲೆ ತಿಳಿದಾಗ ಮೇಲಿನ ಮಾತಿನಲ್ಲಿನ ಗೊಂದಲ ಪರಿಹಾರವಾಗುತ್ತದೆ.

ಹೀಗೆ ಉದ್ಧವ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರಣೆಯನ್ನು ವಿದುರನಿಗೆ ನೀಡಿ, “ಗಂಗಾನದಿ ತೀರದಲ್ಲಿರುವ ಮೈತ್ರೇಯರು ನಿನಗೆ ಶ್ರೀಕೃಷ್ಣ ನೀಡಿರುವ ಜ್ಞಾನೋಪದೇಶವನ್ನು ನೀಡಲಿದ್ದಾರೆ” ಎಂದು ಹೇಳಿ ಬದರಿಗೆ ಹೊರಟು ಹೋಗುತ್ತಾನೆ.

 

 ರಾಜೋವಾಚ

 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ ।

 ಸ ತು ಕಥಮವಶಿಷ್ಟ ಉದ್ಧವೋ ಯತ್[9] ಪ್ರಭುರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

 

ಈ ಹಂತದಲ್ಲಿ  ಶುಕಾಚಾರ್ಯರಿಂದ ಭಾಗವತ ಶ್ರವಣ ಮಾಡುತ್ತಿರುವ ಪರೀಕ್ಷಿತನಿಗೊಂದು ಪ್ರಶ್ನೆ ಬರುತ್ತದೆ.  ಋಷಿ ಶಾಪ ಮತ್ತು ಗಾಂಧಾರಿಯ ಶಾಪದಿಂದಾಗಿ ಇಡೀ ಯಾದವ ಕುಲ ನಾಶವಾಯಿತು. ಮಹಾರಥಿಗಳ ಸಮುದಾಯ ಮತ್ತು ಅಂತಹ ಮಹಾರಥಿಗಳ ಮುಖಂಡರೆಲ್ಲರೂ ಹೊಡೆದಾಡಿಕೊಂಡು ಸತ್ತರು. ಮೂರು ಲೋಕದ ಒಡೆಯನಾದ(ತ್ರ್ಯಧೀಶಃ) ಸ್ವಯಂ ಶ್ರೀಕೃಷ್ಣನೇ ಆಕೃತಿಯನ್ನು ತೊರೆದ (ಅವತಾರ ಸಮಾಪ್ತಿ ಮಾಡಿದ). ಹೀಗಿರುವಾಗ ಯಾದವರಲ್ಲಿ ಮುಖ್ಯನಾದ, ಮಹಾಜ್ಞಾನಿ ಉದ್ಧವ ಹೇಗೆ ಬದುಕುಳಿದ? ಇದು ಪರೀಕ್ಷಿತನ ಪ್ರಶ್ನೆ.

ಈ ಮೇಲಿನ ಶ್ಲೋಕದಲ್ಲಿ  ‘ಆಕೃತಿಂ ತತ್ಯಜೇ’ ಎನ್ನುವ ಮಾತು ಬಳಕೆಯಾಗಿದೆ. ಈ ಮಾತನ್ನು ಮೇಲ್ನೋಟದಲ್ಲಿ ನೋಡಿದರೆ ‘ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ.  ಜ್ಞಾನಾನಂದಸ್ವರೂಪನಾದ ಭಗವಂತನಿಗೆ ಅದೆಲ್ಲಿಯ ದೇಹ? ಅಂತಹ ಭಗವಂತ ದೇಹ ತೊರೆಯುವುದು ಎಂದರೇನು? ಈ ಎಲ್ಲಾ ಗೊಂದಲಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ: ಆಕೃತಿಂ  ಪೃಥಿವೀಮ್ -  ‘ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ”  ಹ್ಯಭಿಧಾನೇ[10] । ಇಲ್ಲಿ ಹೇಳುವಂತೆ:  ‘ಆಕೃತಿ, ದೇಹ, ಕಂ, ಪೃಥ್ವಿ ಮತ್ತು  ಮಹೀ’  ಈ ಎಲ್ಲಾ ಶಬ್ದಗಳು ಸಮನಾರ್ಥಕ ಪದಗಳು.  ಈ ಅರ್ಥದಂತೆ ನೋಡಿದಾಗ: ಮೇಲಿನ ಮಾತು “ಭಗವಂತ ಭೂಮಿಯನ್ನು ತ್ಯೆಜಿಸಿದ” ಎಂದು ಹೇಳಿದಂತಾಗುತ್ತದೆ. ಆದರೆ ಸರ್ವಾಂತರ್ಯಾಮಿ, ಸರ್ವವ್ಯಾಪ್ತ ಭಗವಂತ ಭೂಮಿಯನ್ನು ತ್ಯಜಿಸಿದ ಎನ್ನುವುದು ಇಲ್ಲಿ  ಕೂಡುವುದಿಲ್ಲ. ಈ ಸಮಸ್ಯೆಗೆ  ಸ್ಕಾಂಧ ಪುರಾಣದಲ್ಲಿ ಉತ್ತರವಿದೆ. ಅಲ್ಲಿ ಹೇಳುವಂತೆ: ‘ಪೃಥಿವೀಲೋಕಸನ್ತ್ಯಾಗೋ ದೇಹತ್ಯಾಗೋ ಹರೇಃ ಸ್ಮೃತಃ । ನಿತ್ಯಾನನ್ದಸ್ವರೂಪತ್ವಾದನ್ಯನ್ನೈವೋಣ್ಪದ್ಯತೇ[11] । ದರ್ಶಯೇಜ್ಜನಮೋಹಾಯ ಸದೃಶೀಂ ಮೃತಕಾಕೃತಿಮ್ । ನಟವದ್ ಭಗವಾನ್ ವಿಷ್ಣುಃ ಪರಜ್ಞಾನಾತ್ಮಕೋ ವಿಭುಃ[12] ’ ॥ಇತಿ ಸ್ಕಾನ್ದೇ॥  ಮಾನವ ರೂಪಿಯಾಗಿ ನಮ್ಮ ಕಣ್ಣಿಗೆ ಕಂಡ ಭಗವಂತ,  ಅವತಾರ ಸಮಾಪ್ತಿ ಮಾಡಿದಾಗ, ನಮ್ಮ ಕಣ್ಣಿಗೆ ಕಾಣುತ್ತಿದ್ದ ಆತನ ಶರೀರ ಅದೃಶ್ಯವಾಗುತ್ತದೆ. ಉಳಿದಂತೆ ಅಲ್ಲಿ  ಮೃತ ದೇಹ ಕಾಣುವಂತೆ ಮಾಡಿ ಜನರಿಗೆ ಭ್ರಮೆ ಬರಿಸಿರುವುದು ಭಗವಂತನ ಲೀಲಾ ನಾಟಕದ ಒಂದು ಭಾಗವಷ್ಟೇ. ಮುಂದೆ ಭಾಗವತದಲ್ಲೇ ಹೇಳುವಂತೆ(೧೧.೩೧): ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾ[13] ಮಾಯಾವಿಡಮ್ಬನಮವೈಹಿ ಯಥಾ ನಟಸ್ಯ’ ॥ಇತಿ ಚ ॥  : ನಮಗೆ ಕಾಣುವ ಭಗವಂತನ ಜನನ-ಮರಣ  ಇತ್ಯಾದಿ ವ್ಯಾಪಾರಗಳು ಕೇವಲ ಆತನ ಲೀಲಾ ನಾಟಕವಷ್ಟೇ. ಹೀಗಾಗಿ ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ ಎಂದರೆ : ನಮ್ಮ ಪಾಲಿಗೆ ಅದೃಶ್ಯನಾದ ಎಂದರ್ಥ.

 

[ಯದುಕುಲ ನಾಶಕ್ಕೆ ಕೇವಲ ಗಾಂಧಾರಿಯ ಶಾಪವೊಂದೇ ಕಾರಣವಲ್ಲ. ಜೊತೆಗೆ ಋಷಿ ಶಾಪವೂ ಕಾರಣವಾಗಿದೆ. ಶ್ರೀಕೃಷ್ಣನ ಮಗ ಸಾಂಬ ಯದುಕುಲದಲ್ಲಿ ಅತ್ಯಂತ ಸುಂದರ ವ್ಯಕ್ತಿಯಾಗಿದ್ದ. ಒಮ್ಮೆ ಯಾದವರು ಸಾಂಬನಿಗೆ ಗರ್ಭಿಣಿ ವೇಷ ತೊಡಿಸಿ, ಆತನನ್ನು ದೂರ್ವಾಸ ಮುನಿ ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆ ಕರೆತಂದು, ಅವರಲ್ಲಿ: “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣು ಮಗುವಾಗುತ್ತದೋ” ಎಂದು ಕೇಳುತ್ತಾರೆ. ಜ್ಞಾನ ದೃಷ್ಟಿಯಲ್ಲಿ ಎಲ್ಲವನ್ನೂ ಕಂಡ ದುರ್ವಾಸರು: “ಈತನ ಹೊಟ್ಟೆಯಲ್ಲಿ ಕಬ್ಬಿಣದ ಸಲಾಖೆ ಹುಟ್ಟುತ್ತದೆ ಮತ್ತು ಅದರಿಂದ ನಿಮ್ಮ ವಂಶ ನಾಶವಾಗುತ್ತದೆ” ಎಂದು ಶಾಪ ನೀಡುತ್ತಾರೆ. ಇದರಿಂದಾಗಿ ಸಾಂಬ ಕಬ್ಬಿಣದ ಸಲಾಖೆಗೆ ಜನ್ಮ ನೀಡುತ್ತಾನೆ. ಈ ಘಟನೆಯಿಂದ ಬೆದರಿದ ಯಾದವರು  ಆ ಸಲಾಖೆಯನ್ನು ಗಂಧದಂತೆ ತೇಯ್ದು ಸಮುದ್ರಕ್ಕೆ ಎಸೆಯುತ್ತಾರೆ. ಈ ಗಂಧ ಸಮುದ್ರದ ತಡಿಯಲ್ಲಿ ಬೆಳೆಯುವ ಮುಳ್ಳಿನ ಗಿಡಕ್ಕೆ ಗೊಬ್ಬರವಾಗುತ್ತದೆ. ಮುಂದೆ ಇದೇ ಮುಳ್ಳಿನ ಗಿಡಗಳಿಂದ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು  ಸಾಯುವಂತಾಗುತ್ತದೆ. ಭಗವಂತ ಎಂದೂ ಜ್ಞಾನಿಗಳ ಮಾತನ್ನು ಸುಳ್ಳಾಗಿಸುವುದಿಲ್ಲ. ಸಮುದ್ರದ ತಡಿಯಲ್ಲಿ ಸಿಕ್ಕ ಆ ಕಬ್ಬಿಣದ ಸಲಾಖೆಯ ಒಂದು ಚಿಕ್ಕ ಭಾಗವನ್ನು ಬೇಡನೊಬ್ಬ ತನ್ನ ಬಾಣದ ತುದಿಯಲ್ಲಿ ಬಳಸುತ್ತಾನೆ. ಈ ಬಾಣವೇ ಶ್ರೀಕೃಷ್ಣನ ಅವತಾರ ಸಮಾಪ್ತಿಗೆ ಕಾರಣವಾಗುತ್ತದೆ.  ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷತ ಮೇಲಿನ ಪ್ರಶ್ನೆ ಹಾಕಿದ್ದಾನೆ. ಪತಿವೃತೆ ಮತ್ತು ಋಷಿ ಶಾಪವನ್ನು ನಿಜವಾಗಿಸುವುದಕ್ಕೆ ಸ್ವಯಂ ಭಗವಂತನೇ ಸಾಕ್ಷಿಯಾಗಿ ನಿಂತು ತನ್ನ ಅವತಾರ ಸಮಾಪ್ತಿ ಮಾಡಿದ. ಆದರೆ ಯಾದವರಲ್ಲೇ ಒಬ್ಬನಾದ ಉದ್ಧವ ಹೇಗೆ  ಈ ಘಟನೆಯಿಂದ ಪಾರಾದ ಎನ್ನುವುದು ಆತನ ಪ್ರಶ್ನೆ].



[1] “ಭಗವಾನ್ ಸ್ವಾತ್ಮಮಾಯಾಯಾಃ” -ಪ್ರಚಲಿತ ಪಾಠ, “ಭಗವಾಂಸ್ತ್ವಾತ್ಮಮಾಯಾಯಾ” – ಎಂದು ಕೆಲವರು.

[2] “ವೃಕ್ಷಮೂಲಮುಪಾವಿಶತ್” – ಪ್ರಚಲಿತ ಪಾಠ

[3]“ಪೂರ್ವಮೇವಾsಲೋಚ್ಯ”-ಪಾಠಾನ್ತರ

[4] “ಜ್ಞಾನಸಮ್ಪತ್ತ್ಯೈ” – ಎಂದು ಕೆಲವರು

[5] “ನಯನ್” – ಪಾಠಾನ್ತರ

[6] “ತಜ್ಞಾನಂ” – ಎಂದು ಕೆಲವರು

[7] “ಬದರ್ಯಾಂ ಚ” – ಎಂದು ಕೆಲವರು

[8] “ಇತಿ ಚ ಗಾರುಡೇ” – ಎಂದು ಕೆಲವರು

[9] ಉದ್ಧವೋsಯಮ್ - ಪಾಠಾನ್ತರ

[10] “ಇತ್ಯಾಭಿಧಾನಮ್”- ಪ್ರಚಲಿತ ಪಾಠ

[11] “ನೈವೋಪಲಭ್ಯತೇ” – ಪ್ರಚಲಿತ ಪಾಠ, “ಅನ್ಯೋ ನೈವೋಪಲಭ್ಯತೇ” – ಎಂದು ಕೆಲವರು.

[12] “ಪರಜ್ಞಾನಾಕೃತಿಃ ಸ್ವಯಮ್” – ಪ್ರಚಲಿತ ಪಾಠ, ““ಪರಜ್ಞಾನಾಕೃತಿಃ ಸದಾ”, “ಪರಂ ಪರಜ್ಞಾನಾಕೃತಿಃ ಸದಾ” ಎಂದೂ ಹೇಳುತ್ತಾರೆ.

[13] “-ಪ್ಯಯೇಹಾಂ ಮಾಯಾವಿಡಮ್ಬನ-“ , [13] “-ಪ್ಯಯೇಹಾಂ ಮಾಯಾಂ ವಿಡಮ್ಬನ-“ ಎಂದು ಕೆಲವರು.