Tuesday, September 23, 2014

Shrimad BhAgavata in Kannada -Skandha-02-Ch-06(04)

ಪಾದೋSಸ್ಯ ಸರ್ವಭೂತಾನಿ ಪುಂಸಃ ಸ್ಥಿತಿವಿದೋ ವಿದುಃ
ಅಮೃತಂ ಕ್ಷೇಮಮಭಯಂ ತ್ರಿಮೂರ್ಧ್ನೋSಧಾಯಿ ಮೂರ್ಧಸು  ೧೮

ಪುರುಷಸೂಕ್ತದ ಮುಂದಿನ ಸಾಲಿನ ವಿವರಣೆಯೇ ಮೇಲಿನ ಶ್ಲೋಕ. ಪುರುಷ ಸೂಕ್ತ ಹೀಗೆ ಹೇಳುತ್ತದೆ:  ಪಾದೋsಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ ।।೩।। ತ್ರಿಪಾದೂರ್ಧ್ವ ಉದೈತ್ಪುರುಷಃಪಾದೋsಸ್ಯೇಹಾಭವಾತ್ಪುನಃ ಇದೇ ಮಾತನ್ನು ಇಲ್ಲಿ ಚತುರ್ಮುಖ ನಾರದರಿಗೆ ವಿವರಿಸಿ ಹೇಳುತ್ತಿದ್ದಾನೆ. “ಪ್ರಪಂಚದ ಸಮಸ್ತ ಜೀವಜಾತಗಳ ಒಳಗೆ ತುಂಬಿರುವುದು ಭಗವಂತನ ಒಂದು ಪಾದ” ಎಂದು. ಸಾಮಾನ್ಯವಾಗಿ ಪಾದ ಎಂದರೆ ನಾಲ್ಕನೇ ಒಂದು ಅಂಶ. ಆದರೆ ಮೇಲಿನ ಶ್ಲೋಕದಲ್ಲಿ ಆ ಅರ್ಥದಲ್ಲಿ ಈ ಶಬ್ದ ಬಳಕೆಯಾಗಿಲ್ಲ. ಇಲ್ಲಿ ಪಾದ ಎಂದರೆ ಒಂದು ಚಿಕ್ಕ ಅಂಶವಷ್ಟೇ. ಈ ಅಂಶವನ್ನು ನಾವು ಶಬ್ದದಿಂದ ವರ್ಣಿಸುವುದು ಸಾಧ್ಯವಿಲ್ಲ. ಅದು ಸಮುದ್ರದಲ್ಲಿನ ಒಂದು ಬಿಂದುವಿನಂತೆ, ಮಹಾ ಜ್ವಾಲೆಯ ಒಂದು ಕಿಡಿಯಂತೆ.
ನಮಗೆ ಪ್ರಪಂಚದ ಸಂಪೂರ್ಣ ವಸ್ತುಸ್ಥಿತಿ ತಿಳಿದಿಲ್ಲ. ಪ್ರಪಂಚದ ಸಮಸ್ತ ವಸ್ತುಸ್ಥಿತಿಯನ್ನು ತಿಳಿದವನು ಆ ಭಗವಂತನೊಬ್ಬನೇ. ನಾವು ತಿಳಿದಿರುವುದು ಕೇವಲ ಮಲ್ನೋಟವನ್ನಷ್ಟೇ.  ಇಂದು ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣ ನಾವು ಸಮಸ್ತ ವಸ್ತುಸ್ಥಿಯನ್ನು ತಿಳಿದಿಲ್ಲಾ ಎನ್ನುವ ವಿಷಯವನ್ನೂ ನಾವು ತಿಳಿಯದೇ ಇರುವುದು! ಏನೂ ತಿಳಿಯದೇ ಇರುವ ಮೂಢನಾಗಿದ್ದರೂ ತೊಂದರೆಯಿಲ್ಲಾ, ತನಗೆ ಎಲ್ಲವೂ ತಿಳಿದಿಲ್ಲಾ ಎನ್ನುವ ಸತ್ಯವನ್ನರಿತ ಜ್ಞಾನಿಯಾಗಿದ್ದರೂ ಅಡ್ಡಿಯಿಲ್ಲಾ. ಆದರೆ ಇವೆರಡರ ಮಧ್ಯದಲ್ಲಿದ್ದು ಅಹಂಕಾರಿಯಾಗಿದ್ದರೆ ಕಷ್ಟ. ಭಾಗವತದ ಮೂರನೇ ಸ್ಕಂಧದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ: ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ  ||೩-೭-೧೭||  “ಮೂಢ ಮತ್ತು ಜ್ಞಾನಿ  ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು.  ಆದರೆ ಇವರಿಬ್ಬರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ” ಎಂದು! ಮೇಲಿನ ಶ್ಲೋಕದಲ್ಲಿ: “ಈ ಪ್ರಪಂಚದೊಳಗೆ ಭಗವಂತ ತುಂಬಿದ್ದಾನೆ ಎಂದು ‘ಬಲ್ಲವರು’ ಹೇಳುತ್ತಾರೆ” ಎಂದಿದ್ದಾನೆ ಚತುರ್ಮುಖ. ಭಗವಂತನಿಂದ ನೇರ ಉಪದೇಶ ಪಡೆದ, ಸಮಸ್ತ ಜ್ಞಾನಿಗಳಿಗೂ ಹಿರಿಯನಾದ ಚತುರ್ಮುಖ ಇಲ್ಲಿ ‘ಬಲ್ಲವರು’ ಎಂದು ಭಗವಂತನನ್ನು ಕುರಿತೇ ಹೇಳಿದ್ದಾನೆ.
ಅಮೃತ, ಕ್ಷೇಮ ಮತ್ತು ಅಭಯ ಎನ್ನುವ ಮೂರು ಲೋಕಗಳನ್ನು ಭಗವಂತ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಎಂದು ಚತುರ್ಮುಖ ಇಲ್ಲಿ ವಿವರಿಸುತ್ತಾನೆ.  ಅಮೃತ, ಕ್ಷೇಮ ಮತ್ತು ಅಭಯ ಎನ್ನುವುದು ಮುಕ್ತರು ಮಾತ್ರ ಹೋಗಬಹುದಾದ  ಎತ್ತರದ ಸ್ಥಾನ. ಈ ಮೂರು ಸ್ಥಾನಗಳನ್ನು ಶಾಸ್ತ್ರಕಾರರು ಶ್ವೇತದ್ವೀಪ, ಅನಂತಾಸನ,  ವೈಕುಂಠ ಎಂದೂ ಕರೆಯುತ್ತಾರೆ. ಶ್ವೇತದ್ವೀಪ ಎನ್ನುವುದು ಭೂಮಿಯಲ್ಲೇ ಇರುವ ಮುಕ್ತಸ್ಥಾನವಾದರೂ ಕೂಡಾ ಇದು ನಮ್ಮ ಕಣ್ಣಿಗೆ ಕಾಣದು. ಭೂಮಿಯಲ್ಲೇ ಇರುವ ಸೂಕ್ಷ್ಮ ಸ್ಥಾನಗಳ ಕುರಿತು ವಿಷ್ಣುಪುರಾಣ ವಿವರಿಸುತ್ತದೆ. ಅಲ್ಲಿ ಹೇಳುವಂತೆ:  ಭೂಮಿಯಲ್ಲಿ ಎರಡು ವಿಧವಾದ ಅಸ್ತಿತ್ವವಿದೆ. ಸ್ಥೂಲವಾಗಿ ನಮ್ಮ ಕಣ್ಣಿಗೆ ಕಾಣುವ ಭೂಮಿಯ ಭಾಗ ಒಂದಾದರೆ, ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ಲೋಕ ಕೂಡಾ ಭೂಮಿಯಲ್ಲಿದೆ. ಇಂಥಹ ಒಂದು ಸೂಕ್ಷ್ಮಲೋಕ ಶ್ವೇತದ್ವೀಪ. ಶ್ವೇತದ್ವೀಪಕ್ಕೆ ಇನ್ನೊಂದು ಹೆಸರು ನಾರಾಯಣಪುರ. ಶಾಸ್ತ್ರಕಾರರು ಹೇಳುವಂತೆ  ಮುಕ್ತಿಗೆ ಹೋಗುವಾಗ ಮೊತ್ತಮೊದಲು ಶ್ವೇತದ್ವೀಪದಲ್ಲೇ ಭಗವಂತನ ಮೊದಲ ದರ್ಶನ. ಶ್ವೇತದ್ವೀಪಕ್ಕೆ ಹೋಗದೇ ಮುಕ್ತಿ ಇಲ್ಲಾ. ಇದು ಭೂಮಿಗೆ ಸಂಬಂಧಿಸಿದ ಮುಕ್ತಸ್ಥಾನವಾದರೆ,  ಇದೇ ರೀತಿ ಅಂತರಿಕ್ಷಕ್ಕೆ ಸಂಬಂಧಿಸಿದ ಮೋಕ್ಷ ಸ್ಥಾನ ಅನಂತಾಸನ. ಶ್ವೇತದ್ವೀಪದಲ್ಲಿನ ಭಗವಂತನ ರೂಪವನ್ನು ನಾರಾಯಣ ಹಾಗೂ  ಪದ್ಮನಾಭ ಎಂದೂ ಕರೆಯುತ್ತಾರೆ. ಅನಂತಾಸನದಲ್ಲಿ ಭಗವಂತ ವಾಸುದೇವ ರೂಪದಿಂದಿದ್ದಾನೆ. ವೈಕುಂಠದಲ್ಲಿರುವ ಭಗವಂತನ ರೂಪಕ್ಕೆ ವೈಕುಂಠ ಎಂದೇ ಹೆಸರು. ಈ ಮೂರು ದಿವ್ಯ ರೂಪಗಳದ್ದೇ ನಾಮಾಂತರ:  ಅಮೃತ, ಕ್ಷೇಮ ಮತ್ತು ಅಭಯ. ಈ ಅಪೂರ್ವವಾದ ಹೆಸರನ್ನು ಕೇವಲ ಭಾಗವತವಷ್ಟೇ ವಿವರಿಸಿ ಹೇಳುತ್ತದೆ.

ಲೋಕಾಸ್ತ್ರಯೋ ಬಹಿಶ್ಚಾಸನ್ನಪ್ರಜಾನಾಂ ಯ ಆಶ್ರಮಾಃ
ಅಂತಸ್ತ್ರಿಲೋಕ್ಯಾಸ್ತ್ವಪರೋ ಗೃಹಮೇಧೈರ್ಬೃಹದ್ ಹುತಃ  ೧೯

ಮೇಲೆ ವಿವರಿಸಿದ ಮೂರು ಲೋಕಗಳು ವಿಶೇಷವಾಗಿ ಪ್ರಜೆಗಳಿಲ್ಲದವರು ಹೋಗಿ ಸೇರುವ ಸ್ಥಾನ. ಇಲ್ಲಿ ಪ್ರಜೆಗಳಿಲ್ಲದವರು ಎಂದರೆ ದೇವತೆಗಳು. ದೇವತೆಗಳಿಗೆ ಮಕ್ಕಳಿದ್ದರೂ ಕೂಡಾ ಮಕ್ಕಳಿಗೆ ತಂದೆ-ತಾಯಿಯ ದಾಯೆ(ಪಾಲುಪಟ್ಟಿ) ಇಲ್ಲದ ಕಾರಣ ಅವರನ್ನು ಪ್ರಜೆಗಳಿಲ್ಲದವರು ಎನ್ನುತ್ತಾರೆ.  ಉದಾಹರಣೆಗೆ  ಶಿವನ ಮಗ ಗಣಪತಿ. ಆದರೆ ಗಣಪತಿಗೆ ಎಂದೂ ಶಿವ ಪದವಿ ಸಿಗುವುದಿಲ್ಲಾ. ಶಿವ ಪದವಿ ಶಿವನಿಗೇ ಹೊರತು ಗಣಪತಿಗಲ್ಲ. ದೇವತೆಗಳಲ್ಲದೆ ಗ್ರಹಸ್ಥರಾದವರು ಹೋಗಿ ಸೇರುವ ಮುಕ್ತ ಸ್ಥಾನಗಳೂ ಇವೆ. ಅಗ್ನಿ ಮುಖದಿಂದ ಭಗವಂತನ ಆರಾಧನೆ ಮಾಡುವವರು ಇಂದ್ರ ಲೋಕದ ಸಮೀಪವಿರುವ ಭಗವಂತನ ಲೋಕವನ್ನು ಸೇರುತ್ತಾರೆ. ಅದೇ ರೀತಿ ಯತಿಗಳಾದವರು ದ್ರುವಲೋಕದಲ್ಲಿ, ಬ್ರಹ್ಮಚಾರಿಗಳು ಸೂರ್ಯ ಮಂಡಲದಲ್ಲಿ, ವಾನಪ್ರಸ್ಥರು ಮೇರುಶಿಖರದಲ್ಲಿನ  ಭಗವಂತನ ಸ್ಥಾನವನ್ನು ಹೋಗಿ ಸೇರುತ್ತಾರೆ. ಈ ರೀತಿ ಬೇರೆಬೇರೆ ಸಾಧನೆ ಮಾಡಿದವರಿಗೆ ಬೇರೆಬೇರೆ ಸ್ಥಾನಗಳಿದ್ದರೂ ಸಹ, ಎಲ್ಲರೂ ಶ್ವೇತದ್ವೀಪದ ಮುಖೇನವೇ ಹೋಗಬೇಕು. ಇವೆಲ್ಲವೂ ಮುಕ್ತಿಗೆ ಸಂಬಂಧಿಸಿದ ಮತ್ತು ಮಾನುಷ ಕಲ್ಪನೆಗೆ ಮೀರಿದ ವಿಚಾರ.

ಸೃತೀ ವಿಚಕ್ರಮೇ ವಿಷ್ವಙ್ ಸಾಶನಾನಶನೇ ಅಭಿ  
ಯದವಿದ್ಯಾ ಚ ವಿದ್ಯಾ ಚ ಪುರುಷಸ್ತೂಭಯಾಶ್ರಯಃ  ೨೦

ತತೋ ವಿಷ್ವಙ್ ವ್ಯಕ್ರಾಮತ್ಸಾಶನಾನಶನೇ ಅಭಿ” ಎಂದು ಪುರುಷ ಸೂಕ್ತ ಹೇಳಿದ ಮಾತನ್ನೇ ಇಲ್ಲಿ ಚತುರ್ಮುಖ ವಿವರಿಸಿದ್ದಾನೆ. ಇಲ್ಲಿ ಸಾಶನ ಎಂದರೆ ಕರ್ಮಫಲವನ್ನುನ್ನುಣ್ಣುವ ಅಜ್ಞಾನಿಗಳು ಹಾಗೂ ಅನಶನ ಎಂದರೆ ಕರ್ಮಬಂಧವನ್ನು ದಾಟಿದ ಅಪರೋಕ್ಷಜ್ಞಾನಿಗಳು. ಸಾಶನರು ಎಂದರೆ ಸಂಸಾರಿಗಳು, ಅಸಶನರು ಎಂದರೆ ಮುಕ್ತರು ಎನ್ನುವುದೂ  ಈ  ವಿವರಣೆಯ ಇನ್ನೊಂದು ಅರ್ಥ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ಅವಿದ್ಯೆಗೆ ಒಳಗಾದವರು ಮತ್ತು ವಿದ್ಯೆಯಿಂದ ಪಾರಾದವರು ಎಲ್ಲರಿಗೂ ಪುರುಷ ಶಬ್ದವಾಚ್ಯನಾದ ಭಗವಂತನೇ ಆಶ್ರಯ.   ಭಗವಂತ ಸಾಶನಾನಶನರನ್ನೊಳಗೊಂಡ ಸಮಸ್ತ ಪ್ರಪಂಚವನ್ನು ವ್ಯಾಪಿಸಿ ನಿಂತಿದ್ದಾನೆ” ಎಂದು.

ತಸ್ಮಾದಂಡಾದ್ ವಿರಾಡ್ ಜಜ್ಞೇ ಭೂತೇಂದ್ರಿಯಗುಣಾಶ್ರಯಃ
ತದ್ ದ್ರವ್ಯಮತ್ಯಗಾದ್ ವಿಶ್ವಂ ಗೋಭಿಃ ಸೂರ್ಯ ಇವಾಶ್ರಯಮ್ ೨೧

ಪುರುಷಸೂಕ್ತದಲ್ಲಿ  ಬಂದಿರುವ ಅಪೂರ್ವ ಸಂಗತಿಗಳನ್ನು ಬೇರೆ ಶಬ್ದಗಳಿಂದ ಚತುರ್ಮುಖ ಇಲ್ಲಿ ವಿವರಿಸುವುದನ್ನು ಕಾಣುತ್ತೇವೆ. ಪುರುಷಸೂಕ್ತ ಹೀಗೆ ಹೇಳುತ್ತದೆ: ತಸ್ಮಾದ್ವಿರಾಳಜಾಯತ ವಿರಾಜೋ ಅಧಿ ಪೂರುಷಃ ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ।।೫।। ಮೊಟ್ಟಮೊದಲು ಅಂಡದಲ್ಲಿ ತುಂಬಿರುವ ಭಗವಂತನಿಂದ ಚತುರ್ಮುಖ ಹುಟ್ಟಿದ.  ಹೀಗೆ ಹುಟ್ಟಿದ ಚತುರ್ಮುಖ ಪ್ರಪಂಚದಲ್ಲಿನ ಪಂಚಭೂತಗಳು, ಪಂಚತನ್ಮಾತ್ರೆಗಳು, ಸರ್ವ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳು, ಇವೆಲ್ಲವಕ್ಕೂ ಅಧಿಷ್ಠಾನವಾಗಿರುವ ಸಮಸ್ತಜೀವಜಾತಗಳಿಗೆ ಆಶ್ರಯನಾಗಿ, ಬ್ರಹ್ಮಾಂಡ,  ಪಿಂಡಾಂಡ, ಸಮಸ್ತ ದ್ರವ್ಯಗಳೆಲ್ಲವನ್ನೂ ಮೀರಿ ನಿಂತ. ಇಲ್ಲಿ ದ್ರವ್ಯ ಎಂದರೆ ಧಾವಿಸಿ ಪಡೆಯುವ/ಸೇರುವ  ವಸ್ತು. ಅಂದರೆ ನಮ್ಮ ಚಲನೆಯಿಂದ ನಾವು ಹೋಗಿ ಪಡೆಯಬಹುದಾದ ಅಥವಾ ಮುಟ್ಟಬಹುದಾದ  ವಸ್ತುಗಳು ದ್ರವ್ಯ. ಅಂದರೆ ಪಂಚಭೂತಗಳು ಮತ್ತು ಅದರಿಂದಾದ ಸಮಸ್ತ ಪದಾರ್ಥಗಳು ಎಂದರ್ಥ.  ಹೇಗೆ ಸೂರ್ಯ ತನ್ನ ಕಿರಣಗಳಿಂದ ಅಂತರಿಕ್ಷವನ್ನು ಬೆಳಗಿಸಿ ಮೀರಿ ನಿಲ್ಲುತ್ತಾನೋ ಹಾಗೇ ಈ ಜಗತ್ತಿನ ಆದಿಜೀವನಾದ  ಚತುರ್ಮುಖ ಸಮಸ್ತ ಬ್ರಹ್ಮಾಂಡ ಪಿಂಡಾಂಡವನ್ನು ಮೀರಿ ನಿಂತ. ಇಂಥಹ ಚತುರ್ಮುಖನನ್ನೂ ಮೀರಿ ನಿಂತವವನು ಪುರುಷ ಶಬ್ದವಾಚ್ಯನಾದ ಆ ಭಗವಂತ.  ಇಲ್ಲಿ ‘ವಿರಾಟ್’ ಎನ್ನುವ ವಿಶೇಷಣ ಬಳಕೆಯಾಗಿದೆ. ವಿಶೇಷವಾಗಿ ವಿರಾಟ್ ಎಂದರೆ ಬೆಳಗುವವನು ಎಂದರ್ಥ. 

Saturday, September 20, 2014

Shrimad BhAgavata in Kannada -Skandha-02-Ch-06(03)

ಸ್ವಧಿಷ್ಣ್ಯಂ ಪ್ರತಪನ್ ಪ್ರಾಣೋ ಬಹಿಶ್ಚ ಪ್ರತಪತ್ಯಸೌ
ಏವಂ ವಿರಾಜಂ ಪ್ರತಪಂಸ್ತಪತ್ಯಂತರ್ಬಹಿಃ ಪುಮಾನ್  ೧೬

ನಮ್ಮ ದೇಹ ಭಗವಂತನ ವಾಸಸ್ಥಾನ. ಈ ಶರೀರವೇ ಆತನ ಮನೆ! “ಆತ ತನ್ನ ಮನೆಯನ್ನು ತಾನೇ ತುಂಬಿ ಬೆಳಗಿದ”  ಎನ್ನುತ್ತಾನೆ ಚತುರ್ಮುಖ. ಬೆಳಕು ಹಾಯಿಸಿ ಆತ ಎಲ್ಲವನ್ನೂ ಕಂಡನಂತೆ. ಇದಕ್ಕಾಗಿ ಆತನನ್ನು ಕ್ಷೇತ್ರಜ್ಞ ಎನ್ನುತ್ತಾರೆ.  ನಾವು ಕೇವಲ ಕ್ಷೇತ್ರಸ್ಥರು. ನಮ್ಮ ದೇಹದೊಳಗೇನಿದೆ, ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಷಯವೇ ನಮಗೆ ತಿಳಿದಿಲ್ಲ. ಭಗವಂತ ಪ್ರಾಣಶಕ್ತಿಯಾಗಿ ನಮ್ಮ ದೇಹದೊಳಗೆ ತುಂಬಿ ನಮಗೆ ಚೈತನ್ಯ ಕೊಟ್ಟ, ಚಲನವಲನವನ್ನು ಕೊಟ್ಟ.  ಹೀಗೆ ಪಿಂಡಾಂಡ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿ, ಒಳಗೂ ಹೊರಗೂ ಬೆಳಕು ತುಂಬಿಸಿ, ಎಲ್ಲವನ್ನೂ ಕಾಣುತ್ತಾ, ಸಾಕ್ಷಿಯಾಗಿ   ನಿಂತುಬಿಟ್ಟ ಭಗವಂತ.

ಸೋSಮೃತಸ್ಯಾಭಯಸ್ಯೇಶೋ ಮರ್ತ್ಯಮನ್ನಂ ಯದತ್ಯಗಾತ್
ಮಹಿಮೈಷ ತತೋ ಬ್ರಹ್ಮನ್ ಪುರುಷಸ್ಯ ದುರತ್ಯಯಃ  ೧೭

ಪುರುಷಸೂಕ್ತ ಹೀಗೆ ಹೇಳುತ್ತದೆ: ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ।।೨।। ಏತಾವಾನಸ್ಯ ಮಹಿಮಾSತೋ ಜ್ಯಾಯಾಂಶ್ಚ ಪೂರುಷಃ ಇದೇ ಮಾತನ್ನು ಇಲ್ಲಿ ಚತುರ್ಮುಖ ವಿವರಿಸುವುದನ್ನು ಕಾಣುತ್ತೇವೆ. ಸಾವಿಲ್ಲದ  ಅಭಯ ಸ್ಥಿತಿ ಎಂದರೆ ಮೋಕ್ಷ. ಇಂಥಹ ಮೋಕ್ಷ ಸ್ಥಿತಿಯಲ್ಲೂ ನಮ್ಮನ್ನು ನಿಯಂತ್ರಿಸುವವನು ಆ ಭಗವಂತ. ಇದನ್ನೇ ವಿಷ್ಣುಸಹಸ್ರನಾಮದಲ್ಲಿ  “ಮುಕ್ತಾನಾಂ ಪರಮಾಗತಿಃ” ಎಂದು ಹೇಳಲಾಗಿದೆ. ಬ್ರಹ್ಮಸೂತ್ರ ಕೂಡಾ “ಮುಕ್ತೋಪಸೃಪ್ಯವ್ಯಪದೇಶಾತ್” (ಮುಕ್ತರು ಹೋಗಿ ಸೇರಬೇಕಾದ ‘ಆಶ್ರಯ’) ಎಂದು ಇದೇ ಮಾತನ್ನು ಹೇಳುತ್ತದೆ. ಒಟ್ಟಿನಲ್ಲಿ ಹೇಳಬೇಕಾದರೆ ಮುಕ್ತಾಮುಕ್ತ ನಿಯಾಮಕ ಆ ಭಗವಂತ.

ಮೇಲಿನ ಶ್ಲೋಕದಲ್ಲಿ “ಭಗವಂತ ಅನ್ನವನ್ನು ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ” ಎಂದು ವರ್ಣಿಸಿದ್ದಾರೆ. ಇಲ್ಲಿ ಮರ್ತ್ಯ ಎಂದರೆ ಮರಣಶೀಲ ಮತ್ತು ಅನ್ನ (ಅದ್ಯತೇ) ಎಂದರೆ ನಾಶಕ್ಕೊಳಗಾಗುವಂಥಹದ್ದು ಎಂದರ್ಥ. ಆದರೆ ಈ ರೀತಿ ಅರ್ಥ ಮಾಡಿದರೆ ಈ ಎರಡೂ ಪದಗಳು ಸುಮಾರಾಗಿ ಒಂದೇ ಅರ್ಥವನ್ನು ನೀಡುತ್ತವೆ. ಹಾಗಾಗಿ ಇಲ್ಲಿ ಅನ್ನಂ ಎನ್ನುವ ಪದವನ್ನು ಒಂದು ವಿಶೇಷ ಅರ್ಥದಲ್ಲಿ ಬಳಸಲಾಗಿದೆ ಎನ್ನುವುದು ತಿಳಿಯುತ್ತದೆ. ಐತಾರೇಯ ಬ್ರಾಹ್ಮಣ ದಲ್ಲಿ ಹೇಳುವಂತೆ “ಮೇ ಅನ್ನಂ ದಕ್ಷಿಣಾ”  ನಾನು ಹೆಚ್ಚು ಆಸ್ವಾದಿಸುವ ತತ್ತ್ವ ದಕ್ಷಿಣಾ ಎನ್ನುತ್ತಾನೆ ಭಗವಂತ.  ಇಲ್ಲಿ ದಕ್ಷಿಣಾ ಎಂದರೆ ಶ್ರೀಲಕ್ಷ್ಮಿ. ಹೀಗಾಗಿ ಭಗವಂತ ಅನ್ನವನ್ನು ಮತ್ತು ಮರ್ತ್ಯವನ್ನು ಮೀರಿ ನಿಂತಿದ್ದಾನೆ ಎಂದರೆ  ಹುಟ್ಟುಸಾವಿಗೆ ಒಳಗಾಗುವ ಬ್ರಹ್ಮಾದಿ ಸಮಸ್ತ ಜೀವರು(ಮರ್ತ್ಯರು) ಮತ್ತು ಜಗತ್ತಿನ ತಾಯಿಯಾದ ಚಿತ್ ಪ್ರಕೃತಿ(ಅನ್ನಂ) ರಮಾದೇವಿಯನ್ನೂ ಕೂಡಾ ಮೀರಿ ನಿಂತಿದ್ದಾನೆ ಎಂದರ್ಥ. ಚತುರ್ಮುಖನನ್ನು ಹಿಡಿದು ಸಮಸ್ತ ಜೀವರೂ ಕ್ಷರರು, ಚಿನ್ಮಯಿಯಾದ ಶ್ರೀಲಕ್ಷ್ಮಿ ನಿತ್ಯಮುಕ್ತಳು. ಎಲ್ಲರನ್ನೂ ಮೀರಿ ನಿಂತಿರುವ ಆ ಭಗವಂತ(ಅಕ್ಷರ) ಮುಕ್ತ ನಿಯಾಮಕ. “ಇಷ್ಟು ಹಿರಿದಾದ ತತ್ತ್ವವನ್ನು ಶಬ್ದಗಳಿಂದ ವರ್ಣಿಸುವುದಾಗಲಿ,  ಆತನ ಮಹಿಮೆಯನ್ನು ಹೇಳಿ ಮುಗಿಸುವುದಾಗಲಿ ಯಾರಿಂದಲೂ ಸಾಧ್ಯವಿಲ್ಲಾ” ಎನ್ನುತ್ತಾನೆ ಚತುರ್ಮುಖ.

Tuesday, September 16, 2014

Shrimad BhAgavata in Kannada -Skandha-02-Ch-06(02)

ರೋಮಾಣ್ಯುದ್ಭಿಜಜಾತೀನಾಂ ಯೈರ್ವಾ ಯಜ್ಞಸ್ತು ಸಂಭೃತಃ
ಕೇಶಶ್ಮಶ್ರುನಖಾನ್ಯಸ್ಯ ಶಿಲಾಲೋಹಾಭ್ರವಿದ್ಯುತಾಮ್ ೦೫

ಭಗವಂತನ ರೋಮಮೂಲದಿಂದ  ಯಜ್ಞಕ್ಕೆ ಬಳಕೆಯಾಗುವ ವನಸ್ಪತಿಗಳ ಸೃಷ್ಟಿಯಾಯಿತು.  ಅಂದರೆ ಅಶ್ವತ್ಥ, ಹಲಸು, ದರ್ಭೆ ಇತ್ಯಾದಿ ಯಜ್ಞೋಪಯೋಗಿ ಪವಿತ್ರ ವನಸ್ಪತಿಗಳನ್ನು ಭಗವಂತ ತನ್ನ  ರೋಮ ಮೂಲದಿಂದ ಸೃಷ್ಟಿಸಿದ.   ಇದಲ್ಲದೆ ಇತರ ವನಸ್ಪತಿಗಳು ಭಗವಂತನ ರೋಮದ ತುದಿಯಿಂದ ಸೃಷ್ಟಿಸಲ್ಪಟ್ಟವು. ಇದೇ ಮಾತನ್ನು ಪಾದ್ಮಪುರಾಣ ಹೇಳುವುದನ್ನು ಕಾಣಬಹುದು. ಯಾಜ್ಞಿಕಾ ರೋಮಮೂಲಸ್ಥಾ ರೋಮಾಂತಸ್ಥಾಸ್ತು ತತ್ಪರೇ   ಉದ್ಭೀಜೋ ವಾಸುದೇವಸ್ಯ ಲಿಂಗಗಾಸ್ತು ಜರಾಯುಜಾಃ ಇತಿ ಪಾದ್ಮೇ  
ಭೂ-ವ್ಯೋಮಗಳಲ್ಲಿ ತುಂಬಿ ನಿಂತ ಭಗವಂತನ ಕೆದರಿದ ಕೂದಲುಗಳಿಂದ ಮೋಡದ ಸೃಷ್ಟಿಯಾದರೆ, ಭಗವಂತನ  ಮೀಸೆಯಿಂದ ಮಿಂಚು ಮತ್ತು ಭಗವಂತನ ಉಗುರಿನಿಂದ ಬಂಡೆಗಳು, ಲೋಹಗಳು ಸೃಷ್ಟಿಯಾದವು. ಇದನ್ನು ಅಗ್ನಿಪುರಾಣ ಈ ರೀತಿ ಹೇಳುತ್ತದೆ: ಹರೇಃ ಶ್ಮಶ್ರ್ವಾಶ್ರಯಾ  ವಿದ್ಯುಚ್ಛಿಲಾಲೋಹಾ ನಖಾಶ್ರಯಾಃ ಇತ್ಯಾಗ್ನೇಯ  

ಬಾಹವೋ ಲೋಕಪಾಲಾನಾಂ ಪ್ರಾಯಶಃ ಕ್ಷೇಮಕರ್ಮಣಾಮ್
ವಿಕ್ರಮೋ ಭೂರ್ಭುವಃಸ್ವಶ್ಚ ಕ್ಷೇಮಸ್ಯ ಶರಣಸ್ಯ ಚ
ಸರ್ವಕಾಮವರಸ್ಯಾಪಿ ವಿಷ್ಣೋ(ಹರೇ)ಶ್ಚರಣ ಆಸ್ಪದಮ್ ೦೬
ಭಗವಂತನ ತೋಳುಗಳಿಂದ ಲೋಕಪಾಲಕರ ಸೃಷ್ಟಿಯಾಯಿತು. ಇಲ್ಲಿ ಲೋಕಪಾಲಕರು ಎಂದರೆ ಲೋಕವನ್ನು ರಕ್ಷಣೆ ಮಾಡುವ ಪಾಲಕ ಶಕ್ತಿಗಳು. ಜಗತ್ತಿನ ಕ್ಷೇಮಕ್ಕೊಸ್ಕರ ತಮ್ಮ ಬದುಕನ್ನು ಮುಡಿಪಾಗಿಡುವ ಲೋಕಪಾಲಕರು ಎಂದರೆ ಕ್ಷತ್ರಿಯರೂ ಹೌದು, ದೇವತೆಗಳೂ ಹೌದು. ಇಲ್ಲಿ ಬಂದಿರುವ  ‘ಪ್ರಾಯಶಃ’ ಎನ್ನುವ ಪದ  ‘ಬದುಕಿನ ಪೂರ್ಣ ಪ್ರಮಾಣವನ್ನು ಲೋಕ ಕ್ಷೇಮಕ್ಕಾಗಿ ಮುಡಿಪಾಗಿಟ್ಟವರು’ ಎನ್ನುವ ಅರ್ಥವನ್ನು ಬಿಂಬಿಸುತ್ತದೆ.
ಭಗವಂತನ ಮೂರು ಹೆಜ್ಜೆಗಳಿಂದ ಮೂರು ಲೋಕಗಳು(ಭೂರ್ಲೋಕ, ಭುವೋಲೋಕ  ಮತ್ತು ಸ್ವರ್ಲೋಕ) ಸೃಷ್ಟಿಯಾದವು. ಭಗವಂತನ ಪಾದಗಳಿಂದ ಕ್ಷೇಮ(ಪಡೆದುದನ್ನು ಉಳಿಸಿಕೊಳ್ಳುವ ಭಾಗ್ಯ ಮತ್ತು ಜ್ಞಾನಾನಂದಾದಿಗಳು), ಶರಣ(ಮೋಕ್ಷ) ಮತ್ತು ಸಕಲ ಇಷ್ಟ ಪ್ರಾಪ್ತಿಗಳು  ಸೃಷ್ಟಿಯಾದವು.

ಧರ್ಮಸ್ಯ ಮಮ ತುಭ್ಯಂ ಚ ಕುಮಾರಾಣಾಂ ಭವಸ್ಯ ಚ
ವಿಜ್ಞಾನಸ್ಯ ಚ ತತ್ತ್ವಸ್ಯ ಪರಸ್ಯಾತ್ಮಾ ಪರಾಯಣಮ್  ೧೧

ಪರಮಾತ್ಮನ ಹೃದಯಭಾಗದಿಂದ(ಆತ್ಮಾ) ಧರ್ಮ ದೇವತೆಯಾದ ಯಮನ ಸೃಷ್ಟಿಯಾಯಿತು. “ಅಷ್ಟೇ ಅಲ್ಲಾ, ನನ್ನ ಹಾಗೂ ನಿಮ್ಮೆಲ್ಲರ(ನಾರದ ಹಾಗೂ ಸನಕ, ಸನಂದನ, ಸನತ್ಕುಮಾರ ಇತ್ಯಾದಿ ಊರ್ಧ್ವರೇತಸ್ಕರ) ಸೃಷ್ಟಿ ಕೂಡಾ ಭಗವಂತನ ಮಧ್ಯ ದೇಹದಿಂದಾಯಿತು” ಎನ್ನುತ್ತಾನೆ ಚತುರ್ಮುಖ. ಇಲ್ಲಿ ನಾವು ದೇವತೆಗಳಿಗೆ ಸೃಷ್ಟಿಯಲ್ಲಿ ಅನೇಕ ಹುಟ್ಟುಗಳಿವೆ ಎನ್ನುವುದನ್ನು ತಿಳಿದಿರಬೇಕು. ಉದಾಹರಣೆಗೆ ಚತುರ್ಮುಖ ಭಗವಂತನ ನಾಭಿಯಿಂದ, ಲಕ್ಷ್ಮಿಯ ಹಣೆಯಿಂದ, ಭಗವಂತನ ಹೃದಯ ಭಾಗದಿಂದ, ಹೀಗೆ ಬೇರೆಬೇರೆ ರೂಪದಿಂದ ಹುಟ್ಟುವ ಭಾಗ್ಯ ಪಡೆದಿರುತ್ತಾನೆ. ಹೀಗಾಗಿ ಆತ ಹೇಳುತ್ತಾನೆ: “ನಾನೂ ಕೂಡಾ ಭಗವಂತನ ಆತ್ಮದಿಂದ ಹುಟ್ಟಿದೆ” ಎಂದು. ಇದೇ ರೀತಿ ಶಿವನ ಸೃಷ್ಟಿ, ವಿಜ್ಞಾನ ತತ್ತ್ವ ದೇವತೆಯಾದ ಸರಸ್ವತಿಯ ಸೃಷ್ಟಿ ಕೂಡಾ ಭಗವಂತನ ಹೃದಯ ಭಾಗದಿಂದಾಯಿತು.        

ಸರ್ವಂ ಪುರುಷ ಏವೇದಂ ಭೂತಂ ಭವ್ಯಂ ಭವಚ್ಚ ಯತ್
ತೇನೇದಮಾವೃತಂ ವಿಶ್ವಂ ವಿತಸ್ತಿಮಧಿತಿಷ್ಠತಾ  ೧೫


ಈ ಶ್ಲೋಕ ಪುರುಷಸೂಕ್ತದಲ್ಲಿನ ಒಂದು ಅಪೂರ್ವವಾದ ಉಪಾಸನೆಯ ಮುಖವನ್ನು ತೋರಿಸುತ್ತದೆ. ಪುರುಷಸೂಕ್ತದಲ್ಲಿ ಹೇಳುವಂತೆ: “ಸ ಭೂಮಿಂ ವಿಶ್ವತೋ ವೃತ್ವಾsಅತ್ಯತಿಷ್ಟದ್ದಷಾ೦ಗುಲಂ ।। ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚಭವ್ಯಂ ।।”. ಇದೇ ಮಾತನ್ನು ಇಲ್ಲಿ ಚತುರ್ಮುಖ ವಿವರಿಸಿರುವುದನ್ನು ಕಾಣುತ್ತೇವೆ. ಚತುರ್ಮುಖ ಹೇಳುತ್ತಾನೆ: “ಹಿಂದಿನ ಕಲ್ಪಗಳಲ್ಲಿ ಆದ ಸೃಷ್ಟಿ, ಈಗಿನ ಕಲ್ಪದ ಸೃಷ್ಟಿ ಹಾಗೂ ಮುಂದಿನ ಕಲ್ಪಗಳಲ್ಲಿ ಆಗುವ ಎಲ್ಲಾ ಸೃಷ್ಟಿ ಕೂಡಾ ಆ ಭಗವಂತನಲ್ಲಿ (ಪುರುಷನಲ್ಲಿ )ಆಶ್ರಿತವಾಗಿವೆ” ಎಂದು.   ಇಲ್ಲಿ ಬಳಕೆಯಾಗಿರುವ “ಪುರುಷ ಏವ” ಎನ್ನುವ ಪದವನ್ನು ಎರಡು ರೀತಿ ಪದಚ್ಛೇದ  ಮಾಡಬಹುದು. ೧. ಪುರುಷೇ ಏವ  ೨. ಪುರುಷಃ ಏವ. ‘ಪುರುಷೇ ಏವ’ ಎಂದರೆ ಎಲ್ಲವೂ ಪುರುಷನಲ್ಲಿ ಆಶ್ರಿತವಾಗಿದೆ ಎಂದರ್ಥ.  ಇನ್ನು ‘ಪುರುಷಃ ಏವ’ ಎಂದರೆ ಎಲ್ಲವೂ ಪುರುಷನೇ ಎಂದರ್ಥ. ಇದರರ್ಥ  ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ ಮತ್ತು  ಎಲ್ಲವೂ ಆತನ ಅಧೀನ ಎಂದರ್ಥ. ಇದನ್ನೇ ಗೀತೆಯಲ್ಲಿ ಅರ್ಜುನ ಹೀಗೆ ಹೇಳಿದ್ದಾನೆ: ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ ॥೧೧-೪೦॥  “ನೀನು ಎಲ್ಲವನ್ನೂ ವ್ಯಾಪಿಸಿ ನಿಯಂತ್ರಿಸುತ್ತಿರುವುದರಿಂದ ಎಲ್ಲವೂ ನೀನೇ” ಎಂದಿದ್ದಾನೆ ಅರ್ಜುನ.  ಇದನ್ನೇ ಶ್ರೀಕೃಷ್ಣ ಹೀಗೆ ಹೇಳುತ್ತಾನೆ: ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್           ॥೧೦-೩೯॥  ಅಂದರೆ:  “ಚರಾಚಾರಾತ್ಮಕ ಪ್ರಪಂಚದಲ್ಲಿ ನನ್ನನ್ನು ಬಿಟ್ಟು ಸ್ವತಂತ್ರವಾದುದು ಯಾವುದೂ ಇಲ್ಲಾ” ಎಂದರ್ಥ. ಇದೇ ಅರ್ಥದಲ್ಲಿ ಇಲ್ಲಿ ಚತುರ್ಮುಖ “ಎಲ್ಲವೂ ಆ ಪುರುಷನೇ” ಎಂದಿದ್ದಾನೆ.

Saturday, September 6, 2014

Shrimad BhAgavata in Kannada -Skandha-02-Ch-06(01)

ಷಷ್ಠೋSಧ್ಯಾಯಃ

ನಾರದ ಚತುರ್ಮುಖ ಸಂವಾದ ಮುಂದುವರಿದುದು

ಹಿಂದಿನ ಅಧ್ಯಾಯದಲ್ಲಿ ಬಂದಿರುವ ಮಹತತ್ತ್ವದ ಸೃಷ್ಟಿ, ಅಹಂಕಾರ ತತ್ತ್ವದ ಸೃಷ್ಟಿ , ಪಂಚಭೂತಗಳ ಸೃಷ್ಟಿ, ಇತ್ಯಾದಿ ಸೃಷ್ಟಿ ಪ್ರಕ್ರಿಯೆಗಳು  ವೈಜ್ಞಾನಿಕ ಚಿಂತನೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದಾದ ಸೃಷ್ಟಿಯ ಒಂದು ಪ್ರಕಾರ. ಆದರೆ ಈ ಅಧ್ಯಾಯದಲ್ಲಿ ಬರಲಿರುವ ವಿಚಾರಗಳು ವೈಜ್ಞಾನಿಕ ಚಿಂತನೆಗೆ ಸಿಗುವಂಥವುಗಳಲ್ಲ. ಭಗವಂತನ ಸೃಷ್ಟಿ ಕ್ರಿಯೆ ವಿಜ್ಞಾನದ ಎಲ್ಲಾ ಸೀಮೆಯನ್ನು ಮೀರಿ ನಿಂತಿರುವ ಸತ್ಯ.
ಹಿಂದಿನ ಅಧ್ಯಾಯದಲ್ಲಿ ಬಂದಿರುವ ಭಗವಂತನ ಅವಯವಗಳ ಕಲ್ಪನೆಯೇ ವಿಜ್ಞಾನಕ್ಕೆ ನಿಲುಕದ ವಿಚಾರ. ಭಗವಂತನ ಶರೀರ ಜ್ಞಾನಾನಂದಮಯ. ಹೀಗಿರುವಾಗ ಅಂಥಹ ಜ್ಞಾನಾನಂದಮಯನ  ಅಂಗಾಂಗಗಳನ್ನು ಕಲ್ಪಿಸುವುದು ಹೇಗೆ? ಜ್ಞಾನಾನಂದಮಯವಾದ ಮುಖ, ಜ್ಞಾನಾನಂದಮಾಯವಾದ ತೋಳು, ಜ್ಞಾನಾನಂದಮಾಯವಾದ ಕಾಲು, ಆ ಅವಯವಗಳಿಂದ ಸೃಷ್ಟಿ, ಇತ್ಯಾದಿಯನ್ನು ನಮ್ಮಿಂದ ಕಲ್ಪಿಸುವುದು ಸಾಧ್ಯವಿಲ್ಲ.  ಇದು ನಮಗೆ ತಿಳಿದಿರುವ ಯಾವುದೇ ಪ್ರಾಪಂಚಿಕ ಚಿಂತನೆಗೂ ಒಳಪಡದಂತಹ ಸಂಗತಿಯಾಗಿರುವುದರಿಂದ, ಅಂತರಂಗ ಪ್ರಪಂಚದ ಅನುಭವ ಆಗುವ ತನಕ ಇದನ್ನು ನಮ್ಮಿಂದ ತಿಳಿಯುವುದು ಕಷ್ಟ.
ಮಣ್ಣು-ನೀರು-ಬೆಂಕಿಯಿಂದಾದ ಪದಾರ್ಥಕ್ಕೆ ಬಣ್ಣವಿರುತ್ತದೆ. ಗಾಳಿ ಮತ್ತು ಆಕಾಶಕ್ಕೆ ಬಣ್ಣವಿಲ್ಲ. ಇದಕ್ಕೂ ಭಿನ್ನವಾದ ಇನ್ನೊಂದು ವಿಷಯ ಏನೆಂದರೆ “ಶಕ್ತಿಗೂ ಬಣ್ಣವಿದೆ(Energy has color)”. ಆದರೆ ಶಕ್ತಿ ಎನ್ನುವುದು ಮಣ್ಣು-ನೀರು-ಬೆಂಕಿಯಿಂದಾದ ಪದಾರ್ಥವಲ್ಲ. ಆದರೂ ಅದಕ್ಕೆ ಆಕಾರವಿದೆ, ಬಣ್ಣವಿದೆ! ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳುವುದು ಕಷ್ಟ. ಇದಕ್ಕೆ ನಮಗೆ ಅನುಭವಕ್ಕೆ ಬರುವ ಒಂದು ಉದಾಹರಣೆ ಎಂದರೆ ನಮ್ಮ ದೇಹದ ಸುತ್ತಲು ಇರುವ ಪ್ರಭೆ(Physical aura). ಇದು ನಮ್ಮ ಬರಿಗಣ್ಣಿಗೆ ಕಾಣದಿದ್ದರೂ ಕೂಡಾ ಇದನ್ನು ವಿಜ್ಞಾನ ಪ್ರತಿಪಾದಿಸುತ್ತದೆ. ನಮ್ಮ ಸುತ್ತಲಿನ ಪ್ರಭೆ ನಮ್ಮ ಯೋಚನಾ ಲಹರಿಗನುಗುಣವಾಗಿ ಬದಲಾಗುತ್ತಿರುತ್ತದೆ. ಅಂತರಂಗ ಪ್ರಪಂಚದ ಸ್ಪರ್ಶವೇ ಇಲ್ಲದಿರುವ ವ್ಯಕ್ತಿಯ ಸುತ್ತಲಿನ ಪ್ರಭೆಯ ಬಣ್ಣ ಬೂದಿ ಬಣ್ಣದ್ದಾಗಿರುತ್ತದೆ. ಕೋಪ ಬಂದಾಗ ಈ ಪ್ರಭೆ ಕೆಂಪಾಗುತ್ತದೆ. ಪ್ರಸನ್ನತೆ ಅಥವಾ ಸಂತೋಷವಾದಾಗ ಇದು ಹಳದಿ ಬಣ್ಣವಾಗಿರುತ್ತದೆ. ಸಮೃದ್ಧಿ  ಇದ್ದಾಗ ಹಸಿರಾಗಿರುವ ಈ ಪ್ರಭೆ ಜ್ಞಾನದಲ್ಲಿ ಬಹಳ ಆಳಕ್ಕೆ ಹೋದಾಗ ನೀಲವಾಗಿರುತ್ತದೆ.[ಇದಕ್ಕಾಗಿ ಭಗವಂತ ನೀಲ ಮೇಘ ಶ್ಯಾಮ]. ಇದರಿಂದ ನಮಗೆ ತಿಳಿಯುವುದೇನೆಂದರೆ ಪ್ರತಿಯೊಂದು ಭಾವನೆಗಳಿಗೂ ಒಂದೊಂದು ಶಕ್ತಿ ಇದೆ ಮತ್ತು ಆ ಶಕ್ತಿಗೆ  ಒಂದೊಂದು ಬಣ್ಣವಿದೆ ಎನ್ನುವ ವಿಚಾರ. ನಮ್ಮ ಬೇರೆಬೇರೆ ಯೋಚನಾ ಲಹರಿ, ಭಾವನೆಗಳು(Thoughts) ಬೇರೆಬೇರೆ ಬಣ್ಣವಾಗಿ ನಮ್ಮ ದೇಹದಿಂದ ಹೊರಹೊಮ್ಮುತ್ತಿರುತ್ತವೆ.
ಜ್ಞಾನಾನಂದ ಸ್ವರೂಪನಾದ ಭಗವಂತ ಶಕ್ತಿ ಸ್ವರೂಪ ಆದ್ದರಿಂದ ಅವನಿಗೆ ಬಣ್ಣವಿದೆ ಎನ್ನುವ ಮಾತನ್ನು ನಾವು ಮೇಲಿನ ವಿವರಣೆಯಂತೆ ಒಪ್ಪಿಕೊಳ್ಳಬಹುದು. ಆದರೆ ಸರ್ವವ್ಯಾಪ್ತ ಭಗವಂತನಿಗೆ ಎಲ್ಲಿಯ ಆಕಾರ? ಸರ್ವಗತನಾದ ಭಗವಂತನಿಗೆ ಆಕಾರವೇ ಇಲ್ಲಾ ಎಂದು ಕೆಲವರು ತಮ್ಮ ತರ್ಕವನ್ನು ಮಂಡಿಸುತ್ತಾರೆ.  ಆದರೆ ಅದೇ ಯುಕ್ತಿಗೆ (logic) ಅನುಗುಣವಾಗಿ ನೋಡಿದರೆ  ಭಗವಂತ ಸರ್ವ ಸಮರ್ಥ ಕೂಡಾ ಹೌದು. ಹಾಗಾಗಿ ಆತ ತಾನು ಬಯಸಿದ  ಆಕಾರವನ್ನು  ತಳೆಯಬಲ್ಲನಲ್ಲವೇ?  ಹೀಗಾಗಿ ನಮ್ಮ ಬುದ್ಧಿಯ ಪರಿಮಿತಿಗೆ ಸಿಗದ ಭಗವಂತನನ್ನು ನಾವು ನಮ್ಮ ತರ್ಕದ ಪರಿದಿಯಲ್ಲಿ  ಕಟ್ಟಿಹಾಕಲು ಪ್ರಯತ್ನಿಸಬಾರದು. ಭಗವಂತ ಸಾಕಾರನೂ ಹೌದು, ಆತ ನಿರಾಕಾರನೂ ಹೌದು. ಅವನು ಜ್ಞಾನಾನಂದಮಯ ಆದರೂ ಆತನಿಗೆ ಬಣ್ಣವಿದೆ. ಇದು ಪ್ರಾಪಂಚಿಕವಾಗಿ ನಮ್ಮ ಅನುಭವಕ್ಕೆ ಸಿಗದ ಸತ್ಯ. ಈ ಹಿನ್ನೆಲೆಯಲ್ಲಿ ಈ ಅಧ್ಯಾಯವನ್ನು ನೋಡಿದಾಗ ನಮಗೆ ಇಲ್ಲಿ ಹೇಳಿರುವ ವಿಷಯ ಅರ್ಥವಾದೀತು! ಚತುರ್ಮುಖ ನಾರದನಿಗೆ ವಿವರಿಸಿದ ಸೃಷ್ಟಿಯ ವಿಸ್ತಾರದ ವಿವರಣೆಯನ್ನು ನಾವು ಈ ಅಧ್ಯಾಯದಲ್ಲಿ ಕಾಣಬಹುದು.  

ರೂಪಾಣಾಂ ತೇಜಸಾಂ ಚಕ್ಷುರ್ದಿವಃ ಸೂರ್ಯಸ್ಯ ಚಾಕ್ಷಿಣೀ
ಕರ್ಣೌ ದಿಶಾಂ ಚ ತೀರ್ಥಾನಾಂ ಶ್ರೋತ್ರಮಾಕಾಶಶಬ್ದಯೋಃ ೦೩


ಭಗವಂತ ತನ್ನ ಕಣ್ಣಿನಿಂದ(ಚಕ್ಷುರಿಂದ್ರಿಯದಿಂದ) ರೂಪ ಮತ್ತು ತೇಜಸ್ಸನ್ನೂ(ಬೆಳಕನ್ನೂ), ಚಕ್ಷುರಿಂದ್ರಿಯ ಗೋಲಕದಿಂದ ದ್ಯುಲೋಕಾಭಿಮಾನಿ ದೇವತೆ ಸೂರ್ಯನನ್ನು ಸೃಷ್ಟಿ ಮಾಡಿದ. ಇದನ್ನೇ ಪುರುಷಸೂಕ್ತ “ಚಕ್ಷೋಃ ಸೂರ್ಯೋ ಅಜಾಯತ” ಎಂದು ವಿವರಿಸುತ್ತದೆ. ಸೂರ್ಯನಿಗೆ ಅಧಿಷ್ಠಾನವಾಗಿರುವ ದ್ವಿಲೋಕವೂ ಕೂಡಾ ಭಗವಂತನ ಕಣ್ಣಿನಿಂದ ಸೃಷ್ಟಿಯಾಯಿತು. ಇದೇ ರೀತಿ ಭಗವಂತನ ಕರ್ಣ ಗೋಲಕದಿಂದ ದಿಕ್ಕುಗಳ ಮತ್ತು ತೀರ್ಥಗಳ ಸೃಷ್ಟಿಯಾಯಿತು. ಇಲ್ಲಿ ತೀರ್ಥ ಎಂದರೆ ಗಂಗಾದಿ ತೀರ್ಥ ಎಂದು ಕೆಲವರು ಹೇಳುವುದುಂಟು. ಆದರೆ ಇಲ್ಲಿ ಹೇಳಿರುವುದು ಒಂದಕ್ಕೊಂದು ಸಂಬಂಧವಿರುವ ವಿಷಯವಾಗಿರುವುದರಿಂದ ಸಾಂದರ್ಭಿಕ ಅರ್ಥಾನುಸಂಧಾನದಂತೆ ತೀರ್ಥಗಳು ಎಂದರೆ ಶಾಸ್ತ್ರಗಳೇ ಹೊರತು ನದಿಗಳಲ್ಲ. ದಿಕ್ಕುಗಳಲ್ಲಿ ತುಂಬಿರುವ ಶಾಸ್ತ್ರವಾಣಿ ಮೊಟ್ಟಮೊದಲು ಭಗವಂತನ ಕರ್ಣ ಗೋಲಕದಿಂದ ಸೃಷ್ಟಿಯಾಯಿತು. ಭಗವಂತನ ಕರ್ಣೇಂದ್ರಿಯದಿಂದ ಶಬ್ದ ಮತ್ತು ಆಕಾಶದ ಸೃಷ್ಟಿಯಾಯಿತು. 

Tuesday, September 2, 2014

Shrimad BhAgavata in Kannada -Skandha-02-Ch-05(10)

ವರ್ಷಪೂಗಸಹಸ್ರಾಂತೇ ತದಂಡಮುದಕೇಶಯಮ್
ಕಾಲಕರ್ಮಸ್ವಭಾವಸ್ಥೋ(S)ಜೀವೋ(S)ಜೀವಮಜೀಜನತ್  ೩೪

ಸ ಏಷ ಪುರುಷಸ್ತಸ್ಮಾದಂಡಂ ನಿರ್ಭಿದ್ಯ ನಿರ್ಗತಃ
ಸಹಸ್ರೋರ್ವಂಘ್ರಿಬಾಹ್ವಕ್ಷಃ ಸಹಸ್ರಾನನಶೀರ್ಷವಾನ್  ೩೫

ಭಗವಂತನಿಗೆ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಸೃಷ್ಟಿ ಮಾಡಬಲ್ಲ ಶಕ್ತಿ ಇದ್ದರೂ ಕೂಡಾ ಆತ ತನ್ನದೇ ಆದ ನಿಯಮಕ್ಕನುಗುಣವಾಗಿ ಎಲ್ಲವನ್ನೂ ಮಾಡುತ್ತಾನೆ. ಬ್ರಹ್ಮಾಂಡ ಸೃಷ್ಟಿಯ ನಂತರ ಜೀವಜಾತದ ಸೃಷ್ಟಿಯಾಗಲು ಮತ್ತೆ ಸಾವಿರಾರು ವರ್ಷಗಳು ಹಿಡಿದಿವೆ. ಬ್ರಹ್ಮಾಂಡ ಎಂದರೆ ಅದು ಮೊಟ್ಟೆ. ಆ ಮೊಟ್ಟೆ ಸಾವಿರಾರು ವರ್ಷಗಳ ಕಾಲ ಸೂಕ್ಷ್ಮ ಪ್ರಕೃತಿ ಎನ್ನುವ ಸೂಕ್ಷ್ಮಾಣುಗಳ ಕಡಲಲ್ಲಿ  ಮಲಗಿತ್ತು. ಎಲ್ಲಾ ಜೀವಗಳೂ ತಮ್ಮ ಅಸ್ತಿತ್ವವದ ಅರಿವೇ ಇಲ್ಲದೇ ಇರುವಾಗ,  ಸಕಲ ಜೀವ ನಿಯಾಮಕನಾದ ಭಗವಂತ(ಆಜೀವ) ತನ್ನನ್ನೇ ತಾನು ಸೃಷ್ಟಿ ಮಾಡಿಕೊಂಡ! ಅಂದರೆ ತನ್ನ ಒಂದು ರೂಪದಿಂದ ಅಭಿವ್ಯಕ್ತನಾದ. ಇದು ಬ್ರಹ್ಮಾಂಡದೊಳಗೆ ತುಂಬಿರುವ ಭಗವಂತನ ಪುರುಷ ರೂಪ. ಹೀಗೆ ಬ್ರಹ್ಮಾಂಡವೆನ್ನುವ ಮೊಟ್ಟೆಯಿಂದ ಭಗವಂತನ ರೂಪ ಆವಿರ್ಭಾವವಾಯಿತು. ಇಷ್ಟೇ ಅಲ್ಲದೆ ಮೊಟ್ಟೆಯೊಳಗೆ ಚತುರ್ಮುಖನೆನ್ನುವ ಜೀವವನ್ನು ಭಗವಂತ ಸೃಷ್ಟಿ ಮಾಡಿದ.[ನಾಭಿ ಕಮಲದಿಂದ ಚತುರ್ಮುಖನ ಸೃಷ್ಟಿ]. ಈ ರೀತಿ ಮೊಟ್ಟೆಯೊಳಗೆಲ್ಲಾ ತುಂಬಿದ ಭಗವಂತ ಮೊಟ್ಟೆ ಒಡೆದು ಹೊರ ಬಂದ.
ಮೊಟ್ಟೆಯೊಡೆದು ಹೊರಬಂದ ಭಗವಂತನ ರೂಪವನ್ನು ಕಂಡವನು ಕೇವಲ ಚತುರ್ಮುಖ ಮಾತ್ರ.  ಹೀಗೆ ಹೊರಬಂದ ಭಗವಂತನ ರೂಪವನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ “ ಸಹಸ್ರಾರು ಪಾದ, ಸಹಸ್ರಾರು ತೊಡೆ, ಸಹಸ್ರಾರು ಕೈ-ಕಣ್ಣುಗಳುಳ್ಳ, ಸಾವಿರಾರು ಮುಖದ ಭಗವಂತ ಬ್ರಹ್ಮಾಂಡದಲ್ಲೆಲ್ಲಾ ವ್ಯಾಪಿಸಿ ನಿಂತ” ಎಂದು. ಭಗವಂತನೊಂದಿಗೆ ಮೊಟ್ಟೆ ಒಡೆದು ಹೊರಬಂದ ಇನ್ನೊಂದು ಜೀವ ಚತುರ್ಮುಖ. ಹೀಗೆ ಬ್ರಹ್ಮಾಂಡ ವಿಕಸನವಾಯಿತು. ದಳದಳವಾಗಿ ಅರಳಿ, ಒಂದೊಂದು ದಳವೂ ಒಂದೊಂದು ಲೋಕವಾಗಿ, ಚತುರ್ದಶ ಭುವನ ಸೃಷ್ಟಿಯಾಯಿತು.

ಯಸ್ಯೇಹಾವಯವೈರ್ಲೋಕಾನ್ ಕಲ್ಪಯಂತಿ ಮನೀಷಿಣಃ
ಊರ್ವಾದಿಭಿರಧಃ ಸಪ್ತ ಸಪ್ತೋರ್ಧ್ವಂ ಜಘನಾದಿಭಿಃ ೩೬

ಮೊಟ್ಟೆಯೊಡೆದು ಬಂದ ಭಗವಂತನ ಪುರುಷರೂಪ ಇಡೀ ಬ್ರಹ್ಮಾಂಡದೊಳಗೆಲ್ಲಾ ತುಂಬಿತು.  ಹೀಗೆ ತುಂಬಿದ ಭಗವಂತನ ಒಂದೊಂದು ಅವಯವಗಳಿಂದ ಒಂದೊಂದು ಲೋಕ ಸೃಷ್ಟಿಯಾಯಿತು. ಇಲ್ಲಿ “ಕಲ್ಪಯಂತಿ ಮನೀಷಿಣಃ” ಎಂದಿದ್ದಾರೆ. ಅಂದರೆ ಮನನಮಾಡಿ ಸತ್ಯವನ್ನು ಅರಿತ ಜ್ಞಾನಿಗಳು ಇದನ್ನು ಕಲ್ಪಿಸುತ್ತಾರೆ ಎಂದರ್ಥ.  ಇಲ್ಲಿ ಬಂದಿರುವ  ‘ಕಲ್ಪನೆ’ ಎನ್ನುವ ಪದಕ್ಕೆ ಕನ್ನಡದಲ್ಲಿ ಕೇವಲ ಬುದ್ಧಿ ಬಲದಿಂದ ಕಂಡುಕೊಂಡಿದ್ದೇ ಹೊರತು ನಿಜವಲ್ಲ ಎನ್ನುವ ಅರ್ಥವಿದೆ. ಆದರೆ ಸಂಸ್ಕೃತದಲ್ಲಿ ‘ಕಲ್ಪನೆ’ ಎನ್ನುವುದಕ್ಕೆ ಎರಡು ಅರ್ಥಗಳಿವೆ. ೧. ಇದ್ದದ್ದನ್ನು ಭಾವಿಸುವುದು, ೨. ಇಲ್ಲದ್ದನ್ನು ಭಾವಿಸುವುದು.  ಹೀಗಾಗಿ ಮೇಲಿನ ಶ್ಲೋಕದಲ್ಲಿ ‘ಜ್ಞಾನಿಗಳು  ಕಲ್ಪಿಸುತ್ತಾರೆ’ ಎಂದರೆ: ಅಂತರಂಗದ ಸಾಧನೆಯಿಂದ ಸತ್ಯವನ್ನು ಕಂಡುಕೊಂಡ ಜ್ಞಾನಿಗಳು ಅದನ್ನು ಸಮರ್ಥನೆ ಮಾಡುತ್ತಾರೆ ಎಂದರ್ಥ. ಹೀಗೆ ಭಗವಂತನ ಅವಯವಗಳಿಂದ ಹದಿನಾಲ್ಕು ಲೋಕಗಳಾಗಿ ಈ ಬ್ರಹ್ಮಾಂಡ ನಿರ್ಮಾಣವಾಯಿತು.
ಈ ರೀತಿ ಸೃಷ್ಟಿಯಾದ ಪ್ರಪಂಚದಲ್ಲಿ ಇನ್ನೂ ಜೀವಜಾತಗಳ ಸೃಷ್ಟಿಯಾಗಬೇಕಷ್ಟೇ. ಆದರೆ ಭಾಗವತದ ಈ ಅಧ್ಯಾಯ ಜೀವಜಾತದ ಸೃಷ್ಟಿಯ ವಿವರವನ್ನು ಇಲ್ಲಿ ನೀಡುವುದಿಲ್ಲ. ಜೀವಜಾತದ ಸೃಷ್ಟಿಯ ವಿವರವನ್ನು ಮೂರನೇ ಸ್ಕಂಧದಲ್ಲಿ ಬಹಳ ವಿಸ್ತಾರವಾಗಿ ಹೇಳಿರುವುದನ್ನು ನಾವು ಮುಂದೆ ನೋಡಬಹುದು. ಜಲಚರಗಳು, ವನಸ್ಪತಿಗಳು, ಪಕ್ಷಿಗಳು, ಪ್ರಾಣಿಗಳು ಎಲ್ಲವೂ ಸೃಷ್ಟಿಯಾದ ಮೇಲೆ ಈ ಪ್ರಪಂಚದಲ್ಲಿ ಮನುಷ್ಯನ ಸೃಷ್ಟಿಯಾಯಿತು. ಹೀಗೆ ಸೃಷ್ಟಿಯಾದ ಪ್ರಪಂಚದಲ್ಲಿ ನಾಲ್ಕು ವರ್ಣಗಳ ಸೃಷ್ಟಿಯ ವಿವರಣೆಯನ್ನು ಮುಂದಿನ ಶ್ಲೋಕ ವಿವರಿಸುತ್ತದೆ.
ಭಗವಂತನ ಮುಖ-ತೋಳು-ತೊಡೆ ಮತ್ತು ಪಾದದಿಂದ ಚಾತುರ್ವರ್ಣ್ಯದ ಸೃಷ್ಟಿ

ಪುರುಷಸ್ಯ ಮುಖಂ ಬ್ರಹ್ಮ ಕ್ಷತ್ರಮೇತಸ್ಯ ಬಾಹವಃ
ಊರ್ವೋರ್ವೈಶ್ಯೋ ಭಗವತಃ ಪದ್ಭ್ಯಾಂ ಶೂದ್ರೋ ವ್ಯಜಾಯತ  ೩೭

ಪುರುಷಸೂಕ್ತದಲ್ಲಿ ಹೇಳಿರುವಂತೆ: ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ|  ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ  ಇದೇ ಮಾತನ್ನು ಮೇಲಿನ ಶ್ಲೋಕ ವಿವರಿಸುತ್ತದೆ. ನಾಲ್ಕು ವರ್ಣಗಳು ಎಲ್ಲಾ ಮನುಷ್ಯರಿಗೆ ಅಥವಾ ಎಲ್ಲಾ ಜೀವಜಾತಗಳಿಗೆ ಸಂಬಂಧಿಸಿದ ವಿಚಾರವಲ್ಲ. ಇದು ಸಾಮಾಜಿಕವಾಗಿರುವ ಜಾತಿ ಪದ್ಧತಿಗೆ ಸಂಬಂಧಿಸಿದ ವಿಚಾರವೂ ಅಲ್ಲ. ಅದು ಕೇವಲ ಮೋಕ್ಷ ಯೋಗ್ಯ ಚೇತನಕ್ಕೆ  ಸಂಬಂಧಿಸಿರುವ ವಿಚಾರ.
ಭಗವಂತ ತನ್ನ ಮುಖದಿಂದ ಬ್ರಾಹ್ಮಣ್ಯ ಸ್ವಭಾವದ ಜೀವರನ್ನು ಸೃಷ್ಟಿ ಮಾಡಿದ. ತನ್ನ ತೋಳುಗಳಿಂದ ಕ್ಷತ್ರ ಸ್ವಭಾವದ ಜೀವರನ್ನು, ತೊಡೆಗಳಿಂದ ವೈಶ್ಯ ಸ್ವಭಾವ ಹಾಗೂ ಪಾದಗಳಿಂದ ಶೂದ್ರ ಸ್ವಭಾವದ ಜೀವರನ್ನು ಸೃಷ್ಟಿಸಿದ. ಇಲ್ಲಿ ಭಗವಂತ ಆಯಾ ಸ್ವಭಾವವನ್ನು ಅದಕ್ಕೆ ಸಂಬಂಧಿಸಿದ ಆಯಾ ಜಾಗದಿಂದ ಸೃಷ್ಟಿ ಮಾಡಿರುವುದನ್ನು ನಾವು ಗಮನಿಸಬೇಕು. ಬ್ರಾಹ್ಮಣ್ಯ ಎಂದರೆ ಜ್ಞಾನ. ಜ್ಞಾನಕ್ಕೆ ಸಂಬಂಧಿಸಿದ ಕಣ್ಣು-ಕಿವಿ-ಮನಸ್ಸು ಮತ್ತು ಮಾತು ಇರುವ ಜಾಗ ಶಿರಸ್ಸು. ಹಾಗಾಗಿ ಭಗವಂತನ ಶಿರಸ್ಸಿನಿಂದ ಬ್ರಾಹ್ಮಣ್ಯ ಸ್ವಭಾವದ ಸೃಷ್ಟಿಯಾಯಿತು. ಅದೇ ರೀತಿ ಕ್ಷತ್ರಿಯರ ಮೂಲಭೂತ ಗುಣ ರಕ್ಷಣೆ. ಅದಕ್ಕೆ ಪ್ರಧಾನವಾಗಿ ಬೇಕಾಗಿರುವುದು ತೋಳ್ಬಲ. ಹಾಗಾಗಿ ಕ್ಷತ್ರ ಸ್ವಭಾವದವರ ಸೃಷ್ಟಿ ಭಗವಂತನ ತೋಳಿನಿಂದಾಯಿತು. ಇನ್ನು ವೈಶ್ಯರ ಪ್ರಧಾನ ಸ್ವಭಾವ ಉತ್ಪಾದನೆ ಮತ್ತು ವ್ಯಾಪಾರ. ಇದಕ್ಕೆ ಪ್ರಧಾನವಾಗಿ ಬೇಕಾಗಿರುವುದು ಸೊಂಟ ಅಥವಾ ತೊಡೆ. ಹೀಗಾಗಿ ವೈಶ್ಯ ಸ್ವಭಾವದ ಸೃಷ್ಟಿ ಭಗವಂತನ ತೊಡೆಯಿಂದಾಯಿತು. ಕೊನೆಯದಾಗಿ ಎಲ್ಲವುದರ ಪಂಚಾಂಗ ಸೇವಾ ಮನೋವೃತ್ತಿ. ದೇಹದಲ್ಲಿ ಎಲ್ಲವನ್ನೂ ಹೊತ್ತುಕೊಂಡಿರುವ ಭಾಗ ಕಾಲು.  ಹೀಗಾಗಿ ಇನ್ನೊಬ್ಬರ ಕಷ್ಟಕ್ಕೆ ಕರಗುವ ಮತ್ತು ಸೇವಾ ಮನೋವೃತ್ತಿ ಇರುವ ಶೂದ್ರ ವರ್ಣದ ಸೃಷ್ಟಿ ಭಗವಂತನ ಪಾದದಿಂದಾಯಿತು.
[ಮೇಲಿನ ಶ್ಲೋಕದಲ್ಲಿ ಮುಖಬಾಹುಗಳಿಂದ ಹುಟ್ಟಿದ್ದನ್ನು ಮುಖವೇ ಬ್ರಾಹ್ಮಣ ಮತ್ತು ಬಾಹುವೇ ಕ್ಷತ್ರಿಯ ಎಂದು ಹೇಳಲಾಗಿದೆ. ಸಪ್ತಸು ಪ್ರಥಮಾ ಎನ್ನುವ ಸೂತ್ರದಂತೆ ಇದನ್ನು ಮುಖದಿಂದ ಬ್ರಾಹ್ಮಣ ಹಾಗೂ ಬಾಹುವಿನಿಂದ ಕ್ಷತ್ರಿಯ ಎಂದು ಅರ್ಥೈಸಬೇಕು. ಇದೇ ರೀತಿ ಜೀವನು ಬ್ರಹ್ಮ ಎಂದು ಹೇಳಿದಲ್ಲೆಲ್ಲಾ ಜೀವ ಬ್ರಹ್ಮನಿಂದ ಹುಟ್ಟಿದ್ದಾನೆ ಎಂದು ಅರ್ಥೈಸಬೇಕು. ಇದನ್ನು ಬ್ರಹ್ಮ ಪುರಾಣದಲ್ಲಿ ಹೀಗೆ ಹೇಳಿದ್ದಾರೆ: ಬ್ರಾಹ್ಮಣೋ ಮುಖಮಿತ್ಯೇವ ಮುಖಾಜ್ಜಾತತ್ವಹೇತುತಃ|  ಯಥಾsವದಚ್ಛ್ರುತೌ ತದ್ವಜ್ಜೀವೋ ಬ್ರಹ್ಮೇತಿ ವಾಗ್ ಭವೇತ್|  ಇತಿ ಬ್ರಾಹ್ಮೇ].
ಇಲ್ಲಿ ನಾಲ್ಕು ವರ್ಣದ ಸೃಷ್ಟಿ ಎಂದರೆ ನಾಲ್ಕು ವರ್ಣದ ಅಭಿಮಾನಿ ದೇವತೆಗಳ ಸೃಷ್ಟಿ ಕೂಡಾ ಹೌದು. ಮುಖದಿಂದ ಬ್ರಾಹ್ಮಣ ವರ್ಣದ ಸೃಷ್ಟಿಯಾಯಿತು ಎಂದರೆ ಬ್ರಾಹ್ಮಣ ವರ್ಣವನ್ನು ನಿಯಂತ್ರಿಸತಕ್ಕಂತಹ  ದೇವತಾ ಅಭಿವ್ಯಕ್ತಿಯಾಯಿತು ಎಂದರ್ಥ. ಚತುರ್ಮುಖ ಬ್ರಹ್ಮ ಬ್ರಾಹ್ಮಣವರ್ಣದ ಮುಖ್ಯ ದೇವತೆಯಾದರೆ ಬ್ರಹಸ್ಪತಿ ಮತ್ತು ಅಗ್ನಿ ಕೂಡಾ ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆಯರು. ಇನ್ನು ಕ್ಷತ್ರಿಯ ವರ್ಣದ ಮುಖ್ಯ ಅಭಿಮಾನಿ ದೇವತೆ ಮುಖ್ಯಪ್ರಾಣ  ಅಥವಾ ವಾಯುದೇವರು. ಅವರ ಅನಂತರ ಅನೇಕ ದೇವತೆಗಳು ಕ್ಷತ್ರಿಯ ವರ್ಣದ ಅಭಿಮಾನಿ ದೇವತೆಗಳಾಗಿದ್ದಾರೆ. ಗರುಡ-ಶೇಷ-ರುದ್ರರು, ಇಂದ್ರ-ಕಾಮರು, ಅನಿರುದ್ಧ, ಸ್ವಾಯಂಭುವ ಮನು, ದಕ್ಷ ಪ್ರಜಾಪತಿ,  ವೈವಸ್ವತ ಮನು, ಯಮ, ಚಂದ್ರ, ಸೂರ್ಯ, ವರುಣ, ಇವರೆಲ್ಲರೂ ಕ್ಷತ್ರಿಯ ವರ್ಣದ ಅಭಿಮಾನಿ ದೇವತೆಗಳು. ಇದೇ ರೀತಿ ವೈಶ್ಯ ವರ್ಣದ ಮುಖ್ಯ ಅಭಿಮಾನಿ ದೇವತೆ ಅಹಂಪ್ರಾಣ. ನಂತರ ೪೯ ಮಂದಿ ಮರುತ್ತುಗಳು, ೭ ಮಂದಿ ವಸುಗಳು(ಅಷ್ಟ ವಸುಗಳಲ್ಲಿ ಅಗ್ನಿಯನ್ನು ಬಿಟ್ಟು ಇತರ ಏಳು ಮಂದಿ), ಹತ್ತು ಮಂದಿ ರುದ್ರರು(ಏಕಾದಶ ರುದ್ರರಲ್ಲಿ ಪ್ರಧಾನ ರುದ್ರನನ್ನು ಬಿಟ್ಟು ಇತರ ಹತ್ತು ಮಂದಿ), ಎಂಟು ಮಂದಿ ಆದಿತ್ಯರು(ದ್ವಾದಶಾದಿತ್ಯರಲ್ಲಿ ಇಂದ್ರ, ಸೂರ್ಯ, ವರುಣ ಮತ್ತು ವಿಷ್ಣುವನ್ನು ಬಿಟ್ಟು ಇತರ ಎಂಟು ಮಂದಿ), ಇವರೆಲ್ಲರೂ ವೈಶ್ಯ ವರ್ಣದ ಅಭಿಮಾನಿ ದೇವತೆಗಳು. ಇದೇ ರೀತಿ ಶೂದ್ರ ವರ್ಣದ ಅಭಿಮಾನಿ ದೇವತೆಗಳು: ನಿರ್ಋತಿ, ಅಶ್ವಿನಿಗಳು, ಪ್ರಥ್ವೀ, ಶನಿ, ಕಾಲಾಭಿಮಾನಿ ದೇವತೆಗಳು ಮತ್ತು ಮೃತ್ಯು ದೇವತೆಗಳು. ಹೀಗೆ ವರ್ಣ ಸೃಷ್ಟಿ ಎನ್ನುವುದರ ಮೂಲಭೂತ ಅರ್ಥ ಅಭಿಮಾನಿ ದೇವತೆಗಳ ಸೃಷ್ಟಿ ಎನ್ನುವುದು ಇನ್ನೊಂದು ಮುಖ. ಈ ಅರ್ಥ ವಿವರಣೆಯನ್ನು ನಾವು ಉಪನಿಷತ್ತುಗಳಲ್ಲಿ ಕಾಣಬಹುದು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಪಂಚಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಐದನೇ ಅಧ್ಯಾಯ ಮುಗಿಯಿತು

*********

Sunday, August 24, 2014

Shrimad BhAgavata in Kannada -Skandha-02-Ch-05(09)

ನಭಸೋSಥ ವಿಕುರ್ವಾಣಾದಭೂತ್ ಸ್ಪರ್ಶಗುಣೋSನಿಲಃ
ಪರಾನ್ವಯಾಚ್ಛಬ್ದವಾಂಶ್ಚ ಪ್ರಾಣ ಓಜಃ ಸಹೋ ಬಲಮ್  ೨೬

ಆಕಾಶದಲ್ಲಿ ಆರಂಭವಾದ ಸ್ಪಂದನದಿಂದ ಗಾಳಿಯ ಸೃಷ್ಟಿಯಾಯಿತು. ಸ್ಪರ್ಶ ಗಾಳಿಯ ಅಸಾಧಾರಣ ಗುಣ.  ಗಾಳಿ ಶಬ್ದ ವಾಹಕ ಕೂಡಾ ಹೌದು.  ಪ್ರಾಣ, ಓಜಸ್ಸು, ಸಹಸ್ಸು ಮತ್ತು ಬಲ ಗಾಳಿಯ ನಾಲ್ಕು  ಪ್ರಮುಖ ಗುಣಗಳು. ಗಾಳಿಯಿಂದಾಗಿ ಜೀವಜಾತಗಳಲ್ಲಿ ಪ್ರಾಣಶಕ್ತಿ ತುಂಬಿತು. ಪ್ರಾಣಶಕ್ತಿ ಎಂದರೆ ಎಲ್ಲವನ್ನೂ ಧಾರಣೆ ಮಾಡುವ ಶಕ್ತಿ. ಓಜಸ್ಸು ಎಂದರೆ ಇನ್ನೊಬ್ಬರನ್ನು ಮಣಿಸುವ ಶಕ್ತಿ. ಬಿರುಗಾಳಿ ಬೀಸಿತೆಂದರೆ ಅದರ ಮುಂದೆ ಯಾವುದೂ ನಿಲ್ಲಲಾರದು. ಅದೇ ರೀತಿ ಎಲ್ಲವನ್ನೂ ಮಣಿಸಬಲ್ಲ ಗಾಳಿಯನ್ನು ಮಣಿಸುವ ಶಕ್ತಿ ಇನ್ನೊಂದಿಲ್ಲ(ಸಹಸ್ಸು). ತನ್ನ ಇಚ್ಛೆಯಂತೆ ತಾನು ನಿರ್ಧಾರ ಮಾಡುವ ಶಕ್ತಿ ಬಲ. ಇವೆಲ್ಲವೂ ಪ್ರಾಣದೇವರ ಅಸಾಧಾರಣ ಗುಣಗಳು.

ವಾಯೋರಪಿ ವಿಕುರ್ವಾಣಾತ್  ಕಾಲಕರ್ಮಸ್ವಭಾವತಃ
ಉದಪದ್ಯತ ತೇಜೋ ವೈ ರೂಪವತ್ ಸ್ಪರ್ಶಶಬ್ದವತ್  ೨೭

ತೇಜಸಸ್ತು ವಿಕುರ್ವಾಣಾದಾಸೀದಂಭೋ ರಸಾತ್ಮಕಮ್
ರೂಪವತ್ ಸ್ಪರ್ಶವಚ್ಚಾಂಭೋ ಘೋಷವಚ್ಚ ತದನ್ವಯಾತ್  ೨೮

ಗಾಳಿಯ ಒತ್ತಡದಲ್ಲಿ ಉಂಟಾದ ಸಂಘರ್ಷದಿಂದ  ಬೆಂಕಿ ಸೃಷ್ಟಿಯಾಯಿತು. ‘ರೂಪ’ ಬೆಂಕಿಯ ಅಸಾಧಾರಣ ಗುಣ. ಇದರಿಂದಾಗಿ ಆ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಜೀವಜಾತಗಳ ಕಣ್ಣಿಗೆ ಕಾಣುವ ರೂಪದ ಸೃಷ್ಟಿ ನಿರ್ಮಾಣವಾಯಿತು. ಬೆಂಕಿಯಲ್ಲಿ ಶಬ್ದವಿದೆ ಮತ್ತು  ಸ್ಪರ್ಶವಿದೆ. ಮೂಲಭೂತವಾಗಿ ಏಳು ಬಣ್ಣಗಳಿರುವುದೂ ಬೆಂಕಿಯಲ್ಲೇ (ಸಪ್ತಜಿಹ್ವ). ಶಾಖ ಹೆಚ್ಚಾದಾಗ ಹೇಗೆ ಬೆವರು ಹುಟ್ಟುತ್ತದೋ ಹಾಗೇ ಬೆಂಕಿಯಿಂದ ನೀರಿನ ಸೃಷ್ಟಿಯಾಯಿತು. ಶಬ್ದ,  ಸ್ಪರ್ಶ ಮತ್ತು ರೂಪದ ಜೊತೆಗೆ  ವಿಶೇಷವಾಗಿ ‘ರಸ’ ನೀರಿನ ಅಸಾಧಾರಣ ಗುಣ.

ವಿಶೇಷಸ್ತು ವಿಕುರ್ವಾಣಾದಂಭಸೋ ಗಂಧವಾನಭೂತ್
ಪರಾನ್ವಯಾದ್ ರಸಸ್ಪರ್ಶರೂಪಶಬ್ದಗುಣಾನ್ವಿತಃ  ೨೯

ಆಕಾಶ, ಗಾಳಿ, ಬೆಂಕಿ ಮತ್ತು ನೀರಿನ ಸೃಷ್ಟಿಯ ನಂತರ ಕೊನೆಯದಾಗಿ ಎಲ್ಲಾ ಗುಣವನ್ನು ಹೊಂದಿರುವ ‘ವಿಶೇಷದ’ ಅಥವಾ ಮಣ್ಣಿನ ಸೃಷ್ಟಿಯಾಯಿತು. ನೀರೇ ಗಟ್ಟಿಯಾಗಿ ಮಣ್ಣಿನ ರೂಪ ಪಡೆಯಿತು. ಹೀಗೆ ಏನೂ ಕಾಣದ ಆಕಾಶದಲ್ಲಿ ಕಣ್ಣಿಗೆ ಕಾಣುವ ಘನಪದಾರ್ಥ ವಿಕಸನವಾಯಿತು. ಕೇವಲ ಪಂಚಭೂತಗಳಷ್ಟೇ ಅಲ್ಲ, ಅದರ ಅಭಿಮಾನಿ ದೇವತೆಗಳ ಸೃಷ್ಟಿಯೂ ಆಯಿತು. ಶಿವನಿಂದ ಮನಸ್ಸು ಹುಟ್ಟಿತು. ಶಿವನ ಮೊದಲ ಮಗ ಸ್ಕಂಧ ಮನಸ್ಸಿನ ದೇವತೆ. ಶಿವನಿಂದ ಆಕಾಶದ ಸೃಷ್ಟಿಯಾಯಿತು. ಶಿವನ ಎರಡನೇ ಮಗ ಗಣಪತಿ ಆಕಾಶದ ದೇವತೆ. ಅದೇ ರೀತಿ ಗಾಳಿಯ ಅಭಿಮಾನಿ ದೇವತೆ ಮರೀಚಿ, ಬೆಂಕಿಯ ಅಭಿಮಾನಿ ದೇವತೆ ಅಗ್ನಿಪುತ್ರ ಪಾವಕ, ನೀರಿನ ವಿಶಿಷ್ಠ ಅಭಿಮಾನಿ ದೇವತೆ ಬುಧ ಮತ್ತು ಮಣ್ಣಿನ ವಿಶಿಷ್ಠ ಅಭಿಮಾನಿ ದೇವತೆ ಶನಿ. ಶನಿ ಭೂಮಿಗೆ ಸಂಬಂಧಪಟ್ಟ ದೇವತೆಯಾಗಿರುವುದರಿಂದ ಶನಿಗೂ ಭೂಮಿಗೂ ಒಂದು ನಿಕಟವಾದ ಸಂಬಂಧವಿದೆ. ಹೀಗೆ ದೇವತಾ ತಾರತಮ್ಯದ ಅನುಕ್ರಮದಲ್ಲೇ ಪಂಚಭೂತಗಳ ಅಭಿಮಾನಿ ದೇವತೆಗಳ ಸೃಷ್ಟಿಯಾಯಿತು.
ಸೃಷ್ಟಿ ಪ್ರಕ್ರಿಯೆಯ ಈ ಹಂತದಲ್ಲಿ ಇನ್ನೂ ಬ್ರಹ್ಮಾಂಡ ಮತ್ತು ಪಿಂಡಾಂಡ ರಚನೆ ಆಗಿಲ್ಲ. ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ವಿಧ ಅಂತಃಕರಣ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ, ಎಲ್ಲವೂ ಸೃಷ್ಟಿಯಾಗಿದೆ. ಅನ್ನಮಯಕೋಶ, ಪ್ರಾಣಮಯಕೋಶ,  ಮನೋಮಯಕೋಶ, ವಿಜ್ಞಾನಮಯಕೋಶ ಹೀಗೆ ಎಲ್ಲಾ ಕೊಶಗಳೂ ಸಿದ್ಧವಾಗಿವೆ. ಜೀವಿಗಳ ಸೂಕ್ಷಶರೀರದಲ್ಲಿ ಇಂದ್ರಿಯ ಜಾಗೃತವಾಗಿದೆ.  ಆದರೆ ದೇಹರಚನೆ ಇನ್ನೂ ಆಗಿಲ್ಲ.
ಇಲ್ಲಿ ಪಂಚಭೂತಗಳು ಎಂದರೆ ಶುದ್ಧ ಪಂಚಭೂತಗಳು. ಇಂದು ಪ್ರಪಂಚದಲ್ಲಿರುವ ಪಂಚಭೂತಗಳು ಶುದ್ಧ ಪಂಚಭೂತಗಳಲ್ಲ. ಉದಾಹರಣೆಗೆ ಮಣ್ಣು ಅಥವಾ ನೀರು ಎಂದರೆ ಅದು ಮಣ್ಣು-ನೀರು-ಬೆಂಕಿಯ ಮಿಶ್ರಣ.  ಶುದ್ಧ ಮಣ್ಣು ಅಥವಾ ಶುದ್ಧ ನೀರು ಬ್ರಹ್ಮಾಂಡ ಸೃಷ್ಟಿಯ ಉತ್ತರದಲ್ಲಿ ಇಲ್ಲವೇ ಇಲ್ಲಾ. ಸೃಷ್ಟಿಯ ಈ ಹಂತದಲ್ಲಿ ಶುದ್ಧ ಪಂಚಭೂತಗಳು ಮತ್ತು ಐದು ಶುದ್ಧಗುಣಗಳು ಸೃಷ್ಟಿಯಾಗಿವೆ. ಈ ಗುಣಗಳ (ಪಂಚತನ್ಮಾತ್ರೆಗಳು) ಅಭಿಮಾನಿ ದೇವತೆಗಳು ಕೂಡಾ ಸೃಷ್ಟಿಯಾಗಿದ್ದಾರೆ. ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಗರುಡ ಪತ್ನಿ ಸುಪರ್ಣಿ, ರೂಪ ಮತ್ತು ರಸದ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ,   ಗಂಧದ ಅಭಿಮಾನಿ ದೇವತೆ ರುದ್ರ ಪತ್ನಿ ಪಾರ್ವತಿ. ಇವರಲ್ಲದೆ ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಕೂಡಾ ಪಂಚತನ್ಮಾತೆಗಳ ಅಭಿಮಾನಿ ದೇವತೆಗಳು. ಹೀಗೆ ಬ್ರಹ್ಮಾಂಡ ಸೃಷ್ಟಿಗೆ ಬೇಕಾದ ದ್ರವ್ಯ (raw material) ಸಿದ್ಧವಾಯಿತು. ಮುಂದೆ ತತ್ತ್ವಾಭಿಮಾನಿ ದೇವತೆಗಳು ಈ ದ್ರವ್ಯವನ್ನು ಬಳಸಿ ಒಂದು ವ್ಯವಸ್ಥಿತವಾದ ಬ್ರಹ್ಮಾಂಡ ಮತ್ತು ಪಿಂಡಾಂಡ ರಚನೆ ಮಾಡಬೇಕು. ಆದರೆ ಈ ಕಾರ್ಯ ದೇವತೆಗಳಿಗೆ ಅಷ್ಟು ಸುಲಭದ ಕೆಲಸವಾಗಿರಲಿಲ್ಲಾ.

ತದಾ ಸಂಹತ್ಯ ಚಾನ್ಯೋನ್ಯಂ ಭಗವಚ್ಛಕ್ತಿಚೋದಿತಾಃ
ಸದಸತ್ವಮುಪಾದಾಯ ನೋ ಭಯಂ ಸಸೃಜುರ್ಹ್ಯದಃ  ೩೩

“ದೇವತೆಗಳ ವ್ಯಯಕ್ತಿಕ ಅಥವಾ ಸಾಮೂಹಿಕ ಪ್ರಯತ್ನದಿಂದ ಅವರಿಗೆ ಬ್ರಹ್ಮಾಂಡ ಸೃಷ್ಟಿ ಸಾಧ್ಯವಾಗದೇ ಇದ್ದಾಗ, ಶಕ್ತಿ ರೂಪನಾಗಿ ಭಗವಂತ ಅವರೊಳಗೆ ತುಂಬಿ, ಅವರಿಂದ ಬ್ರಹ್ಮಾಂಡ ಸೃಷ್ಟಿ ಮಾಡಿಸಿದ” ಎನ್ನುತ್ತಾನೆ ಚತುರ್ಮುಖ. ಶಾಸ್ತ್ರಗಳು ಹೇಳುವಂತೆ: ಪರಾಸ್ಯ ಶಕ್ತಿಹೀ ವಿವಿದೈವ್ಯ ಶ್ರೂಯತೇ, ಸ್ವಾಭಾವಿಕೈ ಜ್ಞಾನ ಬಲ ಕ್ರಿಯಾ ಚ . ಶಕ್ತಿಸ್ವರೂಪನಾದ ಭಗವಂತ ಶಕ್ತಿ ಕೊಟ್ಟಾಗ ಮಾತ್ರ ಕಾರ್ಯ ನಡೆಯುತ್ತದೆ. ಭಗವಂತನ ಇಚ್ಛೆ ಇದ್ದಾಗ ಆತ ನಮಗೆ ಶಕ್ತಿ ಕೊಟ್ಟೇ ಕೊಡುತ್ತಾನೆ ಮತ್ತು ಆತನ ಇಚ್ಚೆಯಂತೆ ಕಾರ್ಯ ನೆರವೇರುತ್ತದೆ.  ಭಗವಂತನ ಶಕ್ತಿ ಅಧಾನದಿಂದಾಗಿ ದೇವತೆಗಳಲ್ಲಿ ಹೊಸ ಹುರುಪು ಮೂಡಿತು. ಅವ್ಯಕ್ತಸ್ಥಿತಿಯಲ್ಲಿದ್ದ ಮೂಲದ್ರವ್ಯದ ಮಿಶ್ರಣದಿಂದ ವ್ಯಕ್ತ ರೂಪದ ಬ್ರಹ್ಮಾಂಡ ನಿರ್ಮಾಣ ಪ್ರಾರಂಭವಾಯಿತು. ಹೀಗೆ ಕಣ್ಣಿಗೆ ಕಾಣದ ಶಕ್ತಿಗಳು, ಕಣ್ಣಿಗೆ ಕಾಣುವ ಶಕ್ತಿಗಳು ಸೇರಿ, ಕಾಣದ್ದು ಕಾಣುವ ಶಕ್ತಿಯಾಗಿ, ಇನ್ನು ಕೆಲವು ಕಾಣದ ಶಕ್ತಿಯಾಗೇ ಉಳಿದು, ಸತ್ತು-ಅಸತ್ತು ಒಂದಕ್ಕೊಂದು ಉಪಾದಾನವಾಗಿ, ವ್ಯಕ್ತ ಅವ್ಯಕ್ತದೊಳಗೆ ಸೇರಿ, ಅವ್ಯಕ್ತವು ವ್ಯಕ್ತದೊಳಗೆ ಸೇರಿ ಒಂದು ಭಯಂಕರವಾದ ಪ್ರಪಂಚ ನಿರ್ಮಾಣವಾಯಿತು! [ಈ ಮೇಲಿನ ಮಾತು ಪರಮಾಣು ರಚನೆಯನ್ನು ತಿಳಿದವರಿಗೆ ಚನ್ನಾಗಿ ಅರ್ಥವಾಗುತ್ತದೆ. ಅಲ್ಲಿರುವ atom  ಮತ್ತು sub-atom, ಅದೊರೊಳಗಿನ space, ಅಲ್ಲಿರುವ ನಿರಂತರ ಚಲನೆ, ಇವೆಲ್ಲವೂ ಒಂದು ವಿಸ್ಮಯ].

ಈ ಬ್ರಹ್ಮಾಂಡವೆಂದರೆ ಅದು ಭಯಂಕರ! ಏಕೆಂದರೆ ಅದು ಹುಟ್ಟು-ಸಾವುಗಳ ಚಕ್ರಭ್ರಮಣ. ಅದು ನಮಗೆಲ್ಲರಿಗೂ ಸಾವಿನ, ಸಂಸಾರದ ಭಯವನ್ನು ಹುಟ್ಟಿಸುವಂತಹದ್ದು. ನಮಗೆ ಸಂಸಾರದ ಭಯವನ್ನು ನೀಡುವವನೂ ಭಗವಂತ, ಮೋಕ್ಷದ ಅಭಯವನ್ನು ನೀಡುವವನೂ ಭಗವಂತ. ಹೀಗೆ ಯಾವ ಭಯವನ್ನು ಮೀರಿದರೂ ಮೀರಲಾರದ ಸಾವಿನ ಭಯವನ್ನು ನೀಡುವ  ಬ್ರಹ್ಮಾಂಡ ರಚನೆಯನ್ನು ಭಗವಂತ ತನ್ನ ಪುರುಷನಾಮಕ ರೂಪದಿಂದ ಮಾಡಿದ. ಈ ಹಂತದಲ್ಲಿ ಇನ್ನೂ ಪಿಂಡಾಂಡ ಸೃಷ್ಟಿ ಆಗಿಲ್ಲ.  ಬ್ರಹ್ಮಾಂಡ ಸೃಷ್ಟಿಯಾಗಿ ಅಲ್ಲಿ ಜೀವಜಾತಗಳ ಸೃಷ್ಟಿಯಾಗಲು ಸಾವಿರಾರು ವರ್ಷಗಳು ಹಿಡಿದಿವೆ.  ಭಗವಂತ ತನ್ನ ನಿಯಮದಂತೆ ಹಂತಹಂತವಾಗಿ ಸೃಷ್ಟಿ ಕಾರ್ಯವನ್ನು ದೇವತೆಗಳ ಒಳಗೆ ಕುಳಿತು ಮಾಡಿದ. ಹೀಗಾಗಿ ಸೃಷ್ಟಿ ಪ್ರಾರಂಭವಾಗಿ ಪೂರ್ಣ ಸೃಷ್ಟಿಯಾಗಲು ಮೂರು ಸಾವಿರದ ಎಂಟುನೂರ ಎಂಬತ್ತೆಂಟು ಸಾವಿರ ಕೋಟಿ ವರ್ಷಗಳು ಹಿಡಿದಿವೆ.  ಇದು ಈ ವಿಶ್ವದ ಆಯಸ್ಸಿನ ಎಂಟನೇ ಒಂದು ಭಾಗ (ಸೃಷ್ಟಿಯಾದ ಪ್ರಪಂಚದ ಆಯಸ್ಸು ೩೧,೧೦೪ ಸಾವಿರ ಕೋಟಿ ವರ್ಷಗಳು).