Wednesday, February 19, 2014

Shrimad BhAgavata in Kannada -Skandha-02-Ch-03(02)

ದೇವೀಂ ಮಾಯಾಂ ತು ಶ್ರೀಕಾಮಃ ತೇಜಸ್ಕಾಮೋ ವಿಭಾವಸುಮ್
ವಸುಕಾಮೋ ವಸೂನ್ ರುದ್ರಾನ್ ವೀರ್ಯಕಾಮಸ್ತು ವೀರ್ಯದಾನ್  ೦೩

ಮುಂದುವರಿದು ಶುಕಾಚಾರ್ಯರು ಹೇಳುತ್ತಾರೆ: “ಜೀವನದಲ್ಲಿ ಉನ್ನತಿಕೆಯನ್ನು ಪಡೆಯಲು ಮಾಯಾ-ದೇವಿ ಶ್ರಿಲಕ್ಷ್ಮಿಯನ್ನು ಆರಾಧಿಸು” ಎಂದು. ಇಲ್ಲಿ ಉನ್ನತಿಕೆ ಎಂದರೆ ಅದು ಜ್ಞಾನದ ಉನ್ನತಿಕೆ ಇರಬಹುದು, ಸಂಪತ್ತಿನಲ್ಲಿ ಉನ್ನತಿಕೆ ಇರಬಹುದು ಅಥವಾ ಇತರೆ ಯಾವುದೇ ಉನ್ನತಿಕೆ ಇರಬಹುದು. ಒಟ್ಟಿನಲ್ಲಿ ಸಮೃದ್ಧಿಯನ್ನು ಪಡೆಯಲು ಲಕ್ಷ್ಮಿಯ ಉಪಾಸನೆ ಜೊತೆಗೆ ಲಕ್ಷ್ಮೀಪತಿ ನಾರಾಯಣನ ಉಪಾಸನೆ ಮಾಡಬೇಕು.
ಮಹಾತೇಜಸ್ವಿಯಾಗಬೇಕು ಎಂದರೆ ಅಗ್ನಿಯನ್ನು ಆರಾಧಿಸಬೇಕು. ಅಗ್ನಿ, ಅಗ್ನಿಯಲ್ಲಿ ಪ್ರಾಣಾಗ್ನಿ ಮತ್ತು ಪ್ರಾಣಾಗ್ನಿಯಲ್ಲಿ ಅಗ್ನಿನಾರಾಯಣನನ್ನು ಆರಾಧಿಸುವುದರಿಂದ ತೇಜಸ್ವೀ ಎಂದು ಖ್ಯಾತಿಗಳಿಸಬಹುದು. ಇನ್ನು ಜ್ಞಾನ ಕಾರ್ಯಕ್ಕೆ, ವಿದ್ಯಾರ್ಥಿ ಸೇವೆ ಇತ್ಯಾದಿ ಪುಣ್ಯಕಾರ್ಯಕ್ಕೆ ದುಡ್ಡು ಬೇಕು ಎನ್ನುವ ಕಾಮನೆ ಇದ್ದರೆ, ಅದಕ್ಕೆ ವಸುಗಳನ್ನು ಆರಾಧನೆ ಮಾಡಬೇಕು. ವಸುಗಳು ಒಟ್ಟಿಗೆ ಎಂಟು ಮಂದಿ. ಅವರೆಂದರೆ: ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ, ವಸ್ತು ಮತ್ತು  ವಿಭಾವಸು(ದ್ಯುವಸು).  ಇವರಲ್ಲಿ ಅಗ್ನಿಯೇ ಪ್ರಧಾನ ವಸು. ಈತನಿಗೆ ಅನೇಕ ನಾಮಗಳು: ವಿಭಾವಸು, ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ, ಇತ್ಯಾದಿ.
ಪೌರುಷ ಅಥವಾ ಪರಾಕ್ರಮಕ್ಕಾಗಿ ರುದ್ರರನ್ನು ಆರಾಧನೆ ಮಾಡಬೇಕು. ರುದ್ರರು ಒಟ್ಟಿಗೆ ಹನ್ನೊಂದು ಮಂದಿ. ಅವರಲ್ಲಿ ಶಿವ ಪ್ರಧಾನ ರುದ್ರ. ದುಷ್ಟರನ್ನು ಬಗ್ಗುಬಡಿಯುವ ಶೌರ್ಯವನ್ನು ಕೊಡುವ ವಿಶೇಷ ಶಕ್ತಿ ರುದ್ರ ಶಕ್ತಿ. ರುದ್ರನಲ್ಲಿ ಪ್ರಾಣಶಕ್ತಿಯನ್ನೂ, ನರಸಿಂಹನನ್ನೂ ಮತ್ತು ಪ್ರಳಯಕಾಲದಲ್ಲಿ ಎಲ್ಲವನ್ನೂ ಸುಡುವ ಸಂಕರ್ಷಣನನ್ನೂ ಉಪಾಸನೆ ಮಾಡುವುದರಿಂದ ಇಂಥಹ ಪೌರುಷ ಸಿಗುತ್ತದೆ.

ಆಧಿಪತ್ಯಕಾಮಃ ಸರ್ವೇಷಾಂ ಯಜೇತ ಪರಮೇಷ್ಠಿನಮ್ ೦೬

ಎಲ್ಲರನ್ನೂ ಆಳುವ ತಾಕತ್ತು, ಜನಾಂಗದ ನಾಯಕನಾಗಬೇಕು ಎನ್ನುವ ಅಪೇಕ್ಷೆ ಉಳ್ಳವನು  ಎಲ್ಲಾ ದೇವತೆಗಳ ಅಧಿಪತಿಯಾದ ಚತುರ್ಮುಖ ಬ್ರಹ್ಮನ ಅಂತರ್ಗತನಾದ ಭಗವಂತನ ಉಪಾಸನೆ ಮಾಡಬೇಕು. [ಆರಾಧನೆ ಮಾಡಿದ ತಕ್ಷಣ ಅಪೇಕ್ಷೆ ಈಡೇರುವುದಿಲ್ಲ. ಅದಕ್ಕೆ ಕಾಲ ಪಕ್ವವಾಗಬೇಕು. ಆಗ ಯೋಗ್ಯತೆಗೆ ತಕ್ಕಂತೆ ಆಧಿಪತ್ಯ ಸಿಗುತ್ತದೆ]

ವಿದ್ಯಾಕಾಮಸ್ತು ಗಿರಿಶಂ ದಾಂಪತ್ಯಾರ್ಥ ಉಮಾಂ ಸತೀಮ್ ೦೭

ವಿದ್ಯೆ ಬೇಕು ಎನ್ನುವ ಅಪೇಕ್ಷೆ ಉಳ್ಳವನು ಗಿರೀಶನನ್ನು ಆರಾಧಿಸಬೇಕು.  ಗಿರೀಶ ಎಂದರೆ ಶಿವ. ಉಪನಿಷತ್ತಿನಲ್ಲಿ ಹೇಳುವಂತೆ ನಮ್ಮ ದೇಹದಲ್ಲಿ ಮುಖ್ಯವಾಗಿ ಐದು ಗಿರಿಗಳಿವೆ. ಚಕ್ಷು, ಶ್ರೋತ್ರಂ, ಮನೋ, ವಾಕ್, ಪ್ರಾಣ- ಇವೇ ಆ ಐದು ಗಿರಿಗಳು. ಇವು ನಮ್ಮ ಜ್ಞಾನ ಸಾಧನಗಳು. ಶಾಸ್ತ್ರಗಳಲ್ಲಿ ಹೇಳುವಂತೆ  ದೃಷ್ಟವ್ಯಃ, ಶ್ರೋತವ್ಯಃ, ಮಂತವ್ಯಃ. ಇವು ಜ್ಞಾನದ ಮೂರು ಬಾಗಿಲುಗಳು.  ನೋಡಿ-ಕೇಳಿ-ಮನನಮಾಡಿ ತಿಳಿಯುವುದು, ತಿಳಿದದ್ದನ್ನು ಇನ್ನೊಬ್ಬರಿಗೆ ಹೇಳುವುದು. ಇವೆಲ್ಲವನ್ನೂ ಮಾಡಲು ಬದುಕಿರಬೇಕು. ಅದಕ್ಕೆ ಪ್ರಾಣ(ಉಸಿರು) ಬೇಕು. ಇಂಥಹ ವಿಶಿಷ್ಟವಾದ ಐದು  ಗಿರಿಗಳಲ್ಲಿರುವ ಶಿವ ಗಿರೀಶ.  ಸದ್ದ್ಯೋಜಾತ, ವಾಮದೇವ, ತತ್ಪುರುಷ, ಅಘೋರ ಮತ್ತು ಈಶಾನ ಇವು ಶಿವನ ಐದು ರೂಪಗಳು. ಇಂತಹ ಶಿವನನ್ನು ಮತ್ತು ಆತನ ಅಂತರ್ಯಾಮಿ ಭಗವಂತನನ್ನು  ಆರಾಧಿಸುವುದರಿಂದ   ವಿದ್ಯೆಯ ಅಪೇಕ್ಷೆ ಕೈಗೂಡುತ್ತದೆ.

ಮದುವೆ ಆಗುವುದಕ್ಕೋಸ್ಕರ ಮತ್ತು ಮದುವೆಯಾದಮೇಲೆ ಅನ್ಯೋನ್ಯ ದಾಂಪತ್ಯ ಪಡೆಯಲು ಶಿವಪತ್ನಿ ಉಮೆ(ಸತೀ)ಯನ್ನು ಆರಾಧಿಸಬೇಕು. ನಮಗೆ ತಿಳಿದಂತೆ ದಾಂಪತ್ಯದಲ್ಲಿ ವಿರಸ ನಮ್ಮ ಇಡೀ ಜೀವನದ ಸಾಧನೆಯನ್ನು ಮಣ್ಣುಪಾಲು ಮಾಡಬಹುದು. ಒಬ್ಬನ ಸಾಧನೆಗೆ ಇನ್ನೊಬ್ಬರು ಪೂರಕವಾಗಿಲ್ಲದೇ ಇದ್ದರೆ ಜೀವನ ನಿತ್ಯ ನರಕವಾಗುತ್ತದೆ. ಈ ರೀತಿ ಆಗದೇ ದಾಂಪತ್ಯದಲ್ಲಿ ಸಾಮರಸ್ಯ ಇರಬೇಕು ಎನ್ನುವ ಅಪೇಕ್ಷೆ ಉಳ್ಳವರು ಉಮೆಯ ಆರಾಧನೆ ಮಾಡಬೇಕು. ಇಲ್ಲಿ ಪಾರ್ವತಿಯ ಉಮೆ ಮತ್ತು ಸತೀ ಎನ್ನುವ ಎರಡು ನಾಮಗಳ ಉಲ್ಲೇಖವನ್ನು ಕಾಣುತ್ತೇವೆ. ಇದು ದಾಂಪತ್ಯದ ಅನ್ಯೋನ್ಯತೆಯ ಶ್ರೇಷ್ಠ ಉದಾಹರಣೆ. ಪಾರ್ವತಿ(ಸತೀ) ದಕ್ಷ ಪ್ರಜಾಪತಿಯ ಮಗಳು. ಒಮ್ಮೆ ದಕ್ಷ ತಾನು ಮಾಡಿದ ಯಜ್ಞದಲ್ಲಿ ಶಿವನನ್ನು ಆಮಂತ್ರಿಸದೇ ಅವಮಾನ ಮಾಡಿದಾಗ, ಅದನ್ನು ಸಹಿಸದ ಸತೀ ಯೋಗಾಗ್ನಿಯಲ್ಲಿ ತನ್ನ ದೇಹತ್ಯಾಗ ಮಾಡುತ್ತಾಳೆ. ನಂತರ ತಾನು ಯಾರನ್ನು ವರಿಸಿದ್ದಳೋ ಆತನನ್ನೇ ಮದುವೆಯಾಗಬೇಕು ಎಂದು ಬಯಸಿ, ಮತ್ತೊಂದು ರೂಪದಲ್ಲಿ ಪರ್ವತರಾಜನ ಮಗಳಾಗಿ(ಉಮೆ) ಬಂದು, ತಪಸ್ಸು ಮಾಡಿ ಶಿವನನ್ನು ವರಿಸುತ್ತಾಳೆ. ಈ ರೀತಿಯ ಅನ್ಯೋನ್ಯತೆ ಪತಿ-ಪತ್ನಿಯಲ್ಲಿರಬೇಕಾದರೆ ಪಾರ್ವತಿಯ ಉಪಾಸನೆ ಮಾಡಬೇಕು. ಹೀಗೆಯೇ  ಮದುವೆ ಆಗದೇ ಇದ್ದಾಗ, ಮದುವೆಯಾಗಲು ಪಾರ್ವತಿ ಆರಾಧನೆ ಮಾಡಬೇಕು. ಇದಕ್ಕಾಗಿ  ಜೋತಿಷಿಗಳು ಮದುವೆಯಾಗದೇ ಇದ್ದಾಗ  ಈ ಕೆಳಗಿನ ಸ್ವಯಂವರ ಪಾರ್ವತೀ ಮಂತ್ರವನ್ನು ಜಪಿಸುವಂತೆ ಹೇಳುತ್ತಾರೆ. [ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗಭಯಂಕರಿ ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ, ಮಮ-ವಶಂ-ಆಕರ್ಷಯ ಆಕರ್ಷಯ ಸ್ವಾಹಾ || ಸ್ವಯಂವರ ಪಾರ್ವತ್ಯೈ ನಮಃ ||

Sunday, February 16, 2014

Shrimad BhAgavata in Kannada -Skandha-02-Ch-03(01)

ತೃತಿಯೋSಧ್ಯಾಯಃ

ಸಾವನ್ನು ಎದುರು ನೋಡುತ್ತಿರುವ ಪರೀಕ್ಷಿತನೊಂದಿಗೆ ಕುಳಿತು ಶುಕಾಚಾರ್ಯರಿಂದ ಭಾಗವತ ಉಪದೇಶವನ್ನು ಕೇಳುತ್ತಿರುವ ನಿಮಗೆ ಈ ಹಂತದಲ್ಲಿ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: “ಪರೀಕ್ಷಿತ ಇನ್ನು ಏಳು ದಿನಗಳಲ್ಲಿ ದೇಹತ್ಯಾಗ ಮಾಡಿ ಹೊರಟು ಹೋಗುತ್ತಾನೆ, ಆದ್ದರಿಂದ ಆತನಿಗೆ ಯಾವುದೇ ಐಹಿಕ ಕಾಮನೆಗಳಿಲ್ಲ. ಆದರೆ ಐಹಿಕ ಕಾಮನೆಗಳೊಂದಿಗೆ ಬದುಕಬೇಕು ಎಂದುಕೊಂಡಿರುವ ನಮಗೆ ಶುಕಾಚಾರ್ಯರ ಸಂದೇಶವೇನು” ಎಂದು. ಬನ್ನಿ, ಈ ನಮ್ಮ ಪ್ರಶ್ನೆಗೆ ಶುಕಾಚಾರ್ಯರ ಉತ್ತರವೇನೆಂದು ಅವರ ಬಾಯಿಂದಲೇ ಕೇಳೋಣ.
                  
ಶ್ರೀಶುಕ ಉವಾಚ--
ಬ್ರಹ್ಮವರ್ಚಸಕಾಮಸ್ತು ಯಜೇತ ಬ್ರಹ್ಮಣಸ್ಪತಿಮ್
ಇಂದ್ರಮಿಂದ್ರಿಯಕಾಮಸ್ತು ಪ್ರಜಾಕಾಮಃ ಪ್ರಜಾಪತೀನ್ ೦೨

ಇಲ್ಲಿ ಶುಕಾಚಾರ್ಯರು ಕಾಮನೆಗಳಲ್ಲಿ ಒಳ್ಳೆಯ ಕಾಮನೆಗಳ ಕುರಿತು ಹೇಳುವುದನ್ನು ಕಾಣುತ್ತೇವೆ.  ನಾವು ಯಾವುದನ್ನೂ ಬಯಸಲೇಬಾರದು ಎಂದೇನೂ ಇಲ್ಲಾ. ಕಾಮನೆಗಳಲ್ಲಿ ಒಳ್ಳೆಯ ಕಾಮನೆಗಳೂ ಇವೆ. ಹಾಗಾಗಿ ಅಂತಹ ಒಳ್ಳೆಯ ಕಾಮನೆಗಳಲ್ಲಿ ಬ್ರಹ್ಮವರ್ಚಸ್ಸು, ಇಂದ್ರಿಯಪಾತವ ಮತ್ತು ಪ್ರಜಾಕಾಮದ ಕುರಿತು ಈ ಶ್ಲೋಕದಲ್ಲಿ ಶುಕಾಚಾರ್ಯರು ವಿವರಿಸುವುದನ್ನು ಕಾಣುತ್ತೇವೆ.
ಇಂದ್ರಿಯನಿಗ್ರಹ ಮಾಡಿ, ವೇದದ ಮೂಲಕ ಭಗವಂತನ ಅರಿವನ್ನು ಪಡೆದಾಗ, ಸಹಜವಾಗಿ ಮುಖದಲ್ಲಿ ತೇಜಸ್ಸು ಮೂಡುತ್ತದೆ. ಇದನ್ನು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ರೀತಿ ವೇದದ ರಹಸ್ಯವನ್ನು ತಿಳಿದು, ಬ್ರಹ್ಮವರ್ಚಸ್ಸಿಯಾಗಬೇಕು ಎನ್ನುವ ಕಾಮನೆ ಉಳ್ಳವರು ಬೃಹಸ್ಪತಿಯ ಅನುಗ್ರಹ ಪಡೆಯಬೇಕು” ಎಂದು. ಸ್ಥೂಲವಾಗಿ ನೋಡಿದರೆ ಬೃಹಸ್ಪತಿ ಎಂದರೆ ದೇವತೆಗಳ ಗುರು, ನಮ್ಮ ಬುದ್ಧಿಯ ದೇವತೆ.  ಆದರೆ ಸೂಕ್ಷ್ಮವಾಗಿ ನೋಡಿದರೆ ಬೃಹಸ್ಪತಿ ಎಂದರೆ ಬೃಹತೀ-ಪತಿ. ಅಂದರೆ ವೇದಮಾನಿನಿ ಭಾರತೀ-ಪತಿ.  ಹಾಗಾಗಿ ವೇದ ನಮಗೆ ಅರ್ಥವಾಗಿ ನಾವು ಬ್ರಹವರ್ಚಸ್ಸಿಯಾಗಬೇಕು ಎಂದರೆ ವಿಜ್ಞಾನಮಯಕೋಶದ ನಿಯಾಮಕರಾದ ಬ್ರಹ್ಮ-ವಾಯುವಿನ ಅನುಗ್ರಹ ಪಡೆಯಬೇಕು. ಬ್ರಹ್ಮಾಂಡದಲ್ಲಿ ವಿಜ್ಞಾನಮಯಕೋಶದ ನಿಯಾಮಕ ಚತುರ್ಮುಖ ಬ್ರಹ್ಮನಾದರೆ, ಪಿಂಡಾಂಡದಲ್ಲಿ ಪ್ರಾಣದೇವರು ವಿಜ್ಞಾನಮಯಕೋಶದ ನಿಯಾಮಕರು. ಹೀಗಾಗಿ ವಿದ್ಯಾದೇವತೆ ನಮಗೆ ಒಲಿಯಬೇಕಾದರೆ ಮತ್ತು ನಮ್ಮ ವಿಜ್ಞಾನಮಯಕೋಶ ತೆರೆದುಕೊಳ್ಳಬೇಕಾದರೆ ನಾವು ಭಾರತೀಪತಿ ಮುಖ್ಯಪ್ರಾಣನಿಗೆ ಹಾಗೂ ಆತನ ಅಂತರ್ಗತ ಮತ್ತು ಅತ್ಯಂತ ಶ್ರೇಷ್ಠನಾದ, ಸರ್ವದೇವತೆಗಳ ಒಡೆಯನಾದ ಭಗವಂತನಿಗೆ ಶರಣಾಗಬೇಕು.
‘ಇಂದ್ರಿಯಪಾತವ’ ಇನ್ನೊಂದು ಉತ್ತಮವಾದ ಬಯಕೆ. ನಮ್ಮ ಕಣ್ಣು-ಕಿವಿ ಇತ್ಯಾದಿ ಇಂದ್ರಿಯಗಳು ಚನ್ನಾಗಿರಬೇಕು ಎನ್ನುವ ಬಯಕೆಯೇ ಇಂದ್ರಿಯಪಾತವ. ನಾನು ಬೇರೆಬೇರೆ ಪುಣ್ಯಕ್ಷೇತ್ರಗಳಿಗೆ ಹೋಗಬೇಕು, ಆ ಕ್ಷೇತ್ರಗಳಲ್ಲಿನ ಭಗವಂತನ ಮೂರ್ತಿಯನ್ನು ಕಣ್ಣಾರೆ ನೋಡಬೇಕು; ವೇದ ಉಪನಿಷತ್ತುಗಳನ್ನು ಓದಬೇಕು; ಜ್ಞಾನಿಗಳ ಮಾತನ್ನು ಕೇಳಬೇಕು; ಒಳ್ಳೆಯ ಮಾತನ್ನಾಡಬೇಕು; ಇತ್ಯಾದಿ ಬಯಕೆಗಳು ಶ್ರೇಷ್ಠ ಬಯಕೆಗಳು. ಈ ರೀತಿಯ ಬಯಕೆಯನ್ನು ವ್ಯಕ್ತಪಡಿಸುವುದನ್ನು ನಾವು ಶಾಂತಿಮಂತ್ರದ ಪ್ರಾರ್ಥನೆಯಲ್ಲಿ ಕಾಣುತ್ತೇವೆ.  ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ,  ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ । ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ ॥    ಇದು ಅಧ್ಯಯನಕ್ಕೆ ಮೊದಲು ಗುರು-ಶಿಷ್ಯರು ಪೂಜಾರ್ಹರಾದ ತಮ್ಮ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಮಾಡುವ ಪ್ರಾರ್ಥನೆ. ಅವರು ಹೇಳುತ್ತಾರೆ:  ನೀವು ನಮ್ಮ ಕಿವಿ ಒಳ್ಳೆಯದನ್ನು ಕೇಳುವಂತೆ, ನಮ್ಮ ಕಣ್ಣು ಒಳ್ಳೆಯದನ್ನು ನೋಡುವಂತೆ ಅನುಗ್ರಹಿಸಿ; ನಾವು ಬದುಕ್ಕಿದ್ದಾಗ ನಮಗೆ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾದ ಇಂದ್ರಿಯ ಮತ್ತು ಶರೀರವನ್ನು ಕೊಡಿಎಂದು. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಇಂಥಹ ಇಂದ್ರಿಯಪಾತವ ಪಡೆಯಲು ಇಂದ್ರನನ್ನು ಪ್ರಾರ್ಥಿಸಿ” ಎಂದು. ನಮಗೆ ತಿಳಿದಂತೆ ನಮ್ಮ ಬಾಹ್ಯೇನ್ದ್ರಿಯಗಳ ಅಭಿಮಾನಿ ದೇವತೆಗಳಲ್ಲಿ ಹಿರಿಯ ದೇವೇಂದ್ರ.  ಹೀಗಾಗಿ ಇಂದ್ರಿಯಪಾತವ ಬೇಕು ಎಂದರೆ ಇಂದ್ರಿಯಾಭಿಮಾನಿಗಳಲ್ಲೇ ಶ್ರೇಷ್ಠನಾದ ಇಂದ್ರನ ಉಪಾಸನೆ ಮಾಡಬೇಕು.  ಇಲ್ಲಿ ಇಂದ್ರ ಎಂದರೆ ಕೇವಲ ಇಂದ್ರನಲ್ಲ. ಆಚಾರ್ಯ ಮಧ್ವರು ತೈತ್ತಿರೀಯ ಭಾಷ್ಯದಲ್ಲಿ ಹೇಳುವಂತೆ: ಪ್ರದ್ಯುಮ್ನಂಚ ಇಂದ್ರ ನಾಮಕಃ. ಆದ್ದರಿಂದ ಇಲ್ಲಿ ಇಂದ್ರಎಂದರೆ ದೇವೇಂದ್ರ ಹಾಗೂ ಆತನ ಅಂತರ್ಗತನಾದ ಭಗವಂತ.
ಇಂದ್ರಿಯ ಕಾಮನೆ ಎನ್ನುವಲ್ಲಿ ಮತ್ತೊಂದು ವಿಶಿಷ್ಟವಾದ ಕಾಮನೆ ಪ್ರಜಾಕಾಮನೆ. ನಾವು ಮಾಡಿದ ಅಧ್ಯಯನವನ್ನು  ಮುಂದುವರಿಸಿಕೊಂಡು ಹೋಗುವ ಒಂದು ತಲೆಮಾರು ಬೇಕು ಎಂದು ಬಯಸುವುದು ಪ್ರಜಾಕಾಮ. ಅದು ಮಗನಾಗಿರಬಹುದು, ಮಗಳಾಗಿರಬಹುದು ಅಥವಾ ಶಿಷ್ಯ/ವಿದ್ಯಾರ್ಥಿಯಾಗಿರಬಹುದು. ಪ್ರಜಾಸಂತತಿಯ ಬೆಳವಣಿಗೆಗೆ ಕಾರಣೀಭೂತರು ಒಂಬತ್ತು ಮಂದಿ ಪ್ರಜಾಪತಿಗಳು. ಇವರಲ್ಲಿ ಹಿರಿಯ ಹತ್ತನೇ ಕಕ್ಷ್ಯದಲ್ಲಿರುವ ಧಕ್ಷ. ನಂತರ ಹದಿನೈದನೇ ಕಕ್ಷ್ಯದಲ್ಲಿರುವ ಭೃಗು ಮತ್ತು ಹದಿನಾರನೇ ಕಕ್ಷ್ಯಯಲ್ಲಿರುವ ಸಪ್ತರ್ಷಿಗಳು(ಕಶ್ಯಪ, ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜ).  ಈ ನವ ಪ್ರಜಾಪತಿಗಳು ಇಡೀ ಪ್ರಪಂಚದ ಸಂತತಿಯ ಮೂಲಪುರುಷರು ಅಥವಾ ಆದಿಮಾನವರು. ಇಷ್ಟೇ ಅಲ್ಲದೆ ದಕ್ಷಪ್ರಜಾಪತಿ ನಮ್ಮ ಜನನೇಂದ್ರಿಯದ ಅಭಿಮಾನಿ ದೇವತೆ ಕೂಡಾ ಹೌದು. ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಪ್ರಜಾಕಾಮಕ್ಕಾಗಿ ಪ್ರಜಾಪತಿಯರನ್ನು ಪೂಜೆಮಾಡು” ಎಂದು. ಪ್ರಜಾಪತಿಗಳು ಒಂಬತ್ತಾದರೂ ಕೂಡಾ, ಮುಖ್ಯ ಪ್ರಜಾಪತಿ ಬ್ರಹ್ಮ-ವಾಯು ಹಾಗೂ ಮಹಾಪ್ರಜಾಪತಿ ಆ ಭಗವಂತ. ಹಾಗಾಗಿ ಪ್ರಜಾಕಾಮ ಸಿಧ್ಯರ್ಥಕ್ಕಾಗಿ ಈ ಎಲ್ಲಾ ನವ ಪ್ರಜಾಪತಿಗಳಲ್ಲಿ ಭಗವಂತನನ್ನು ಕಂಡು ಆರಾಧನೆ ಮಾಡಬೇಕು.  

Monday, February 10, 2014

Shrimad BhAgavata in Kannada -Skandha-02-Ch-02(19)

ಭಗವಾನ್ ಸರ್ವಭೂತೇಷು ಲಕ್ಷಿತಶ್ಚಾತ್ಮನಾ ಹರಿಃ
ದೃಶ್ಯೈರ್ಬುದ್ಧ್ಯಾದಿಭಿರ್ದ್ರಷ್ಟಾ ಲಕ್ಷಣೈರನುಮಾಪಕೈಃ ೩೮

ಭಾಗವತ ಗ್ರಂಥದ ವಿಶೇಷವನ್ನು ಶುಕಾಚಾರ್ಯರು ಇಲ್ಲಿ ಮತ್ತೊಮ್ಮೆ ವಿವರಿಸಿದ್ದಾರೆ. ಭಗವಂತನನ್ನು ಕೇವಲ ಯುಕ್ತಿ(Logic)ಯಿಂದ ತಿಳಿಯುವುದು ಸಾಧ್ಯವಿಲ್ಲವಾದರೂ ಕೂಡಾ, ಅನುಭವದಿಂದ ಕೂಡಿದ ಯುಕ್ತಿಯಿಂದ ಭಗವಂತನನ್ನು ತಿಳಿಯಬಹುದು ಎಂದು ಭಾಗವತ ಹೇಳುತ್ತದೆ. ಪ್ರತಿಯೊಬ್ಬ ಜೀವನೂ ಕೂಡಾ ತನ್ನೊಳಗಿರುವ ಭಗವಂತನನ್ನು ಗುರುತಿಸಬಹುದು ಎನ್ನುವ ಬರವಸೆಯನ್ನು ಭಾಗವತ ನೀಡುತ್ತದೆ. “ಭಗವಂತನನ್ನು ನೀವು ನಿಮ್ಮೊಳಗೇ ಗುರುತಿಸಿಕೊಳ್ಳಬಹುದು” ಎಂದು ವೇದವ್ಯಾಸ ರೂಪದಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ. ಭಗವಂತನ ಅಸ್ಥಿತ್ವದ ಚಿಂತನಾಕ್ರಮವನ್ನು ಹೇಗೆ ಭಾಗವತ ನಮಗೆ ನೀಡುತ್ತದೆ ಎನ್ನುವುದನ್ನು ಇಲ್ಲಿ   ಶುಕಾಚಾರ್ಯರು ವಿವರಿಸಿರುವುದನ್ನು ಕಾಣುತ್ತೇವೆ. ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಇವು ಪ್ರತಿಯೊಂದು ಚೇತನವೂ ಅನುಭವಿಸುವ ಸಂಗತಿಗಳು. ಇವೆಲ್ಲವೂ ನಮ್ಮಲ್ಲೇ ಇದ್ದರೂ ಕೂಡಾ, ಇವು ನಮ್ಮ ಅಧೀನವಾಗಿಲ್ಲ ಎಂದು ಚಿಂತಿಸುವಂತೆ ಮಾಡುತ್ತದೆ ಭಾಗವತ. ಉದಾಹರಣೆಗೆ ನಾವು ಸುಖ ಪಡಬೇಕೆಂದು ಇಚ್ಛೆ ಪಡುತ್ತೇವೆ, ಆದರೆ ದುಃಖ ಸರಮಾಲೆಯಾಗಿ ಬರುತ್ತದೆ. ನಮ್ಮ ಇಚ್ಛೆಯ ಹಿಡಿತ/ನಿಯಂತ್ರಣ ನಮ್ಮಲ್ಲಿಲ್ಲ. ನಾವು ಗೆಲ್ಲಲ್ಲು ಪ್ರಯತ್ನಿಸುತ್ತವೆ, ಆದರೆ ಸೋಲುತ್ತವೆ. ಇವೆಲ್ಲವೂ ಪ್ರತಿಯೊಬ್ಬರಿಗೂ ಜೀವನದಲ್ಲಿ ಅನುಭವಕ್ಕೆ ಬರುವ ಸಂಗತಿ. ಇದರಿಂದ ಸ್ಪಷ್ಟವಾಗಿ ನಮಗೆ ತಿಳಿಯುವುದು ಏನೆಂದರೆ: ನಮ್ಮಲ್ಲಿ    ಜ್ಞಾನ/ಅಜ್ಞಾನ-ಇಚ್ಛೆ-ಪ್ರಯತ್ನ-ಸುಖ/ದುಃಖ ಎಲ್ಲವೂ ಇದೆ, ಆದರೆ ನಾವು ಅದರ ಒಡೆಯರಲ್ಲ ಎನ್ನುವುದು. ಈ ಅನುಭವದ ಯುಕ್ತಿಯಿಂದ ನಾವು ನೋಡಿದಾಗ ಇವೆಲ್ಲವನ್ನೂ ನಿಯಂತ್ರಿಸುವ ಪರಶಕ್ತಿಯೊಂದಿದೆ ಎನ್ನುವುದು ತಿಳಿಯುತ್ತದೆ.  “ನನ್ನಲ್ಲಿ ಇಚ್ಛೆ ಇದೆ, ಪ್ರಯತ್ನವಿದೆ, ಜ್ಞಾನವಿದೆ. ಇವೆಲ್ಲಾ ಇದ್ದರೂ ಕೂಡಾ ಇದರ ಒಡೆತನ ನನ್ನಲ್ಲಿ ಏಕಿಲ್ಲಾ”  ಎಂದು ನಾವು ಚಿಂತನೆ ಮಾಡಬೇಕು. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃ ಶ್ರೋತ್ರಂ ಕ ಉ ದೇವೋ ಯುನಕ್ತಿ ೧-೧  ಅಧ್ಯಾತ್ಮ ಚಿಂತನೆಯ ಮೂಲಭೂತ ಉಪಕ್ರಮವಿದು. ನಮ್ಮ ಮನಸ್ಸು ಯಾವುದ್ಯಾವುದೋ ವಿಷಯಗಳ ಕಡೆಗೆ ಹರಿಯುತ್ತದೆ. ಕೆಲವನ್ನು ಗ್ರಹಿಸುತ್ತದೆ, ಇನ್ನು ಕೆಲವನ್ನು ಗ್ರಹಿಸುವುದಿಲ್ಲ; ಕೆಲವನ್ನು ಬಯಸುತ್ತದೆ, ಇನ್ನು ಕೆಲವನ್ನು ಬಯಸುವುದಿಲ್ಲ; ಕೆಲವನ್ನು ಮರೆಯುತ್ತದೆ, ಇನ್ನು ಕೆಲವನ್ನು ಮರೆಯುವುದಿಲ್ಲ. ವಿಷಯ ಗ್ರಹಣ ಮಾಡಬೇಕು ಎಂದರೆ ಮಾಡಲು ಆಗುವುದಿಲ್ಲ, ಮಾಡಬಾರದು ಎಂದರೆ ಮಾಡುತ್ತದೆ;  ಮರೆತುಬಿಡು ಎಂದರೆ ಮರೆಯುವುದಿಲ್ಲಾ, ನೆನಪಿನಲ್ಲಿಟ್ಟುಕೋ ಎಂದರೆ ಮರೆತುಬಿಡುತ್ತದೆ!  ಇಂತಹ ಮನಸ್ಸೆಂಬ ಒಂದು ವಿಶಿಷ್ಠ ಯಂತ್ರ ನಮ್ಮೊಳಗೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಅದನ್ನು ಯಾರೋ ನಿಯಂತ್ರಿಸುತ್ತಿರುತ್ತಾರೆ. ಇನ್ನು ನಮ್ಮ ಉಸಿರು. ತಾಯಿಯ ಹೊಟ್ಟೆಯಲ್ಲಿದ್ದಾಗ ನಾವು ಮೂಗಿನಿಂದ ಉಸಿರಾಡುತ್ತಿರಲಿಲ್ಲ, ಆದರೆ ಈ ಭೂಮಿಗೆ ಬಿದ್ದ ತಕ್ಷಣ ಉಸಿರು ಆರಂಭವಾಯಿತು. ಈ ಉಸಿರು ಎಂದು ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ, ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ.  ಇದೇ ರೀತಿ ನಮ್ಮ ಮಾತು, ನಮ್ಮ ದೃಷ್ಟಿ(ಕಣ್ಣು) ಇತ್ಯಾದಿ. ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುತ್ತದೆ. ಈ ವ್ಯವಸ್ಥೆಯ ಹಿಂದಿನ ಶಕ್ತಿ ಯಾವುದು ಎನ್ನುವುದಕ್ಕೆ ಇಂದಿನ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಇವೆಲ್ಲವುದಕ್ಕೂ ಉತ್ತರವಾಗಿರುವ ಭಗವಂತನನ್ನು ಭಾಗವತ ನಮ್ಮ ಮುಂದೆ ತೆರೆದಿಡುತ್ತದೆ. ಋಗ್ವೇದದಲ್ಲಿ ಹೇಳುವಂತೆ: ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ೧೦.೦೮೨.೦೩  ಎಲ್ಲಾ ಪ್ರಶ್ನೆಗಳಿಗೂ ಕೊನೇಯ ಉತ್ತರ ಹಾಗೂ ಎಲ್ಲರಿಗೂ ಕೊನೇಯ ತನಕ ಪ್ರಶ್ನೆಯೇ ಆಗಿರುವವ ಯಾರೋ ಅವನೇ ಭಗವಂತ. ಮನುಷ್ಯ ತನ್ನನ್ನು ತಾನು ವಿಶ್ಲೇಷಣೆ ಮಾಡಿಕೊಂಡಾಗ, ಅಲ್ಲಿ ಬರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರರೂಪವಾಗಿ ಸಿಗುವಂತಹ ವಸ್ತುವನ್ನು ವೇದವ್ಯಾಸರು ಭಾಗವತ ರೂಪದಲ್ಲಿ ಶುಕಾಚಾರ್ಯರಿಗೆ ನೀಡಿದರು.  ಇದು ನಮ್ಮೊಳಗಿರುವ ಅಂತರ್ಯಾಮಿ ಭಗವಂತನ ಅರಿವು ಕೊಡುವ ಶ್ರೇಷ್ಠ ಗ್ರಂಥವಾಗಿರುವುದರಿಂದ, ಶುಕಾಚಾರ್ಯರು ಇದನ್ನು ಪರೀಕ್ಷಿತನಿಗೆ ಉಪದೇಶಿಸಲು ಆಯ್ಕೆ ಮಾಡಿಕೊಂಡರು.

ತಸ್ಮಾತ್ ಸರ್ವಾತ್ಮನಾ ರಾಜನ್ ಹರಿಃ ಸರ್ವತ್ರ ಸರ್ವದಾ
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯೋ ಭಗವಾನ್ನೃಣಾಮ್ ೩೯

ಈ ಅಧ್ಯಾಯದ ಪ್ರಾರಂಭದಲ್ಲಿ ಹೇಳಿರುವ ಮಾತನ್ನು ಶುಕಾಚಾರ್ಯರು ಇಲ್ಲಿ ಉಪಸಂಹಾರ ಮಾಡುತ್ತಿದ್ದಾರೆ. ನಾವು ಎಲ್ಲಾ ಕಾಲದಲ್ಲಿ, ಎಲ್ಲಾ ದೇಶದಲ್ಲಿ, ಎಲ್ಲಾ ಬಗೆಯಿಂದ ಮಾಡಬೇಕಾಗಿರುವುದು ಏನೆಂದರೆ: ಸದಾ ಭಗವಂತನ ಬಗೆಗೆ ಕೇಳುವುದು(ತಿಳಿದವರಿಂದ/ಗುರುಮುಖದಿಂದ), ಸದಾ ಭಗವಂತನ  ಸ್ಮರಣೆ ಮಾಡುವುದು ಹಾಗೂ ನಮ್ಮಲ್ಲಿರುವ ಜ್ಞಾನವನ್ನು ಶಿಷ್ಯರಿಗೆ ಕೊಡುವುದು.
ಜೀವನದ ದೊಡ್ಡ ತಪಸ್ಸು ಎಂದರೆ ನಿರಂತರ ಅಧ್ಯಯನ; ಆ ಅಧ್ಯಯನ ಮಾಡಿ ನಾವು ಏನನ್ನು ಜೀರ್ಣಿಸಿಕೊಂಡಿದ್ದೇವೆ, ಅದನ್ನು  ಇನ್ನೊಬ್ಬರಿಗೆ ಕೊಡಬೇಕು. ನಾವು ಗಳಿಸಿದ ಜ್ಞಾನವನ್ನು ಇನ್ನೊಬ್ಬರಿಗೆ ಕೊಡದೇ ಬದುಕುವುದು ಲೋಭತನವಾಗುತ್ತದೆ. ಜ್ಞಾನಲೋಭ ಧನಲೋಭಕ್ಕಿಂತ ಕೆಟ್ಟದ್ದು. ಜ್ಞಾನಿಗಳು ತಮ್ಮೊಳಗಿರುವ ಜ್ಞಾನವನ್ನು ಸಮಾಜಕ್ಕೆ ಕೊಡದೇ ಇದ್ದರೆ, ಸಮಾಜ ಆ ಜ್ಞಾನದಿಂದ ವಂಚಿತವಾಗಿ ಅಜ್ಞಾನದ ದಾರಿದ್ರ್ಯದಲ್ಲಿ ಮುಳುಗುತ್ತದೆ. ಹೀಗಾಗಿ ಮೊದಲು ಕೇಳಬೇಕು, ಕೇಳಿದ್ದನ್ನು ತಿಳಿದುಕೊಳ್ಳಬೇಕು ಮತ್ತು ತಿಳಿದುಕೊಂಡಿದ್ದನ್ನು ಸಮಾಜಕ್ಕೆ ಹಂಚಬೇಕು.
ಜ್ಞಾನವನ್ನು ಹಂಚಬೇಕು ಎಂದು ಹೇಳಿದಾಗ ನಮಗೊಂದು ಸಮಸ್ಯೆ ಬರುತ್ತದೆ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಹೇಳಿರುವಂತೆ: ಓಂ ಅನಾಮಿಷ್ಕುರ್ವನ್ನನ್ವಯಾತ್ ಓಂ ೪೯-೪೮೨  ಅಂದರೆ: ಜ್ಞಾನ ಎಲ್ಲಿ ದುರುಪಯೋಗವಾಗುವ ಸಾಧ್ಯತೆ ಇದೆಯೋ ಅಲ್ಲಿ ಅದನ್ನು ಆವಿಷ್ಕಾರ ಮಾಡಬಾರದು. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ । ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ ॥೧೮-೬೭॥ ಅಂದರೆ: “ಇದನ್ನು ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತೂ ಹೇಳಲೇಬೇಡ” ಎಂದರ್ಥ. ಈ ಎಲ್ಲಾ ವಿಷಯವನ್ನು ಕೇಳಿದಾಗ ಜ್ಞಾನವನ್ನು ಯಾರಿಗೆ ಹೇಳಬೇಕು ಮತ್ತು ಯಾರಿಗೆ ಹೇಳಬಾರದು ಎನ್ನುವ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣದಿಂದ ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ ಪರಿಣಾಮ: ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು ಆಯ್ಕೆ ಮಾಡಿ  ಕೊಡುವ ಕೆಲಸ ಮಾಡಬೇಕಾಗಿದೆ.
ಜ್ಞಾನವನ್ನು ಯಾರಿಗೆ ಕೊಡಬೇಕು ಮತ್ತು ಯಾರಿಗೆ ಕೊಡಬಾರದು ಎನ್ನುವುದನ್ನು ವಿದ್ಯಾದೇವತೆ ಜ್ಞಾನಿಯಲ್ಲಿ ಹೇಳಿದ ಮಾತಿನಿಂದ ತಿಳಿಯಬಹುದು. ಆಕೆ ಹೇಳುತ್ತಾಳೆ:  ವಿದ್ಯಾ ಹ ವೈ ಬ್ರಾಹ್ಮಣಮಾಜಗಾಮ ಗೋಪಾಯ ಮಾಮ್  ಸೇವಧಿಸ್ಟೇ’ಹಮಸ್ಮೀ. “ನಾನು ನಿನ್ನ ನಿಧಿ, ನಿನ್ನಲ್ಲಿರುವ ಈ ಕೊಪ್ಪರಿಗೆಯನ್ನು ಎಲ್ಲೆಲ್ಲೋ ಚಲ್ಲಿ ಹಾಳು ಮಾಡಬೇಡ” ಅನಾರ್ಯಕಾಯ ಅನೃತವೇ ಶಠಾಯ ಮಾಸ್ಮಭ್ರೂಯಾಃ ರುಜವೇ ಬ್ರೂಹಿನಿತ್ಯಂ. “ಇನ್ನೊಬ್ಬರಿಗೆ ಟೋಪಿ ಹಾಕುವುದಕ್ಕಾಗಿಯೇ ವೇದಾಂತ ವಿದ್ಯೆಯನ್ನು ಕಲಿಯ ಬಯಸುವ ದುರ್ಜನರಿಗೆ; ನೇರ ನಡೆ-ನುಡಿ ಇಲ್ಲದ, ಇನ್ನೊಬ್ಬರಿಗೆ ಮೋಸಮಾಡುವುದಕ್ಕಾಗಿ ವೇದಾಂತ ಕಲಿಯಬಯಸುವವರಿಗೆ; ಯಾವ ಸತ್ಯವನ್ನೂ ಒಪ್ಪದ, ಅಸಭ್ಯ-ಅಪ್ರಮಾಣಿಕ  ಮೊಂಡರಿಗೆ ವಿದ್ಯೆಯನ್ನು ಕೊಡಬೇಡ. ಕೇವಲ ಪ್ರಾಮಾಣಿಕರಿಗೆ ಮತ್ತು ತಿಳಿಯಬೇಕು ಎನ್ನುವ ಕಳಕಳಿ ಉಳ್ಳವರಿಗೆ ಅಧ್ಯಾತ್ಮ ವಿದ್ಯೆಯನ್ನು ಕೊಡು” ಎಂದು. ಇದರಿಂದ ನಮಗೆ ತಿಳಿಯುವುದೇನೆಂದರೆ:  ಭಗವಂತನ ಬಗೆಗೆ ಯಾರೂ ಕೇಳಬಾರದು ಎನ್ನುವ ನಿಯಮವಿಲ್ಲ. ಮಾನವ ಜನ್ಮ ಇರುವುದೇ ಭಗವಂತನ ಅರಿವಿಗಾಗಿ. ಹೀಗಾಗಿ ಗಂಡಸು-ಹೆಂಗಸು, ಬ್ರಾಹ್ಮಣ-ಕ್ಷತ್ರೀಯ ಎನ್ನುವ ಭೇದ ಎಣಿಸದೇ, ಯಾರಿಗೆ ಭಗವಂತನನ್ನು ತಿಳಿಯಬೇಕು ಎನ್ನುವ ಕಳಕಳಿ ಇದೆ ಅವರಿಗೆ ಜ್ಞಾನ ದಾನ ಮಾಡಬೇಕು.  

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ದ್ವಿತೀಯೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು

*********

Sunday, February 9, 2014

Shrimad BhAgavata in Kannada -Skandha-02-Ch-02(18)

ಈ ಮೇಲೆ ವಿವರಿಸಿದ ಮೋಕ್ಷ ಮಾರ್ಗದಲ್ಲಿನ ಭಗವಂತನ ವಿವಿಧ ರೂಪದ ದರ್ಶನವನ್ನು ತೈತ್ತಿರೀಯ ಉಪನಿಷತ್ತು  ಈ ರೀತಿ ವರ್ಣಿಸುತ್ತದೆ: ಏತಮನ್ನಮಯಾತ್ಮಾನಮುಪಸಂಕ್ರಮ್ಯ ಏತಂ ಪ್ರಾಣಮಯಾತ್ಮಾನಮುಪಸಂಕ್ರಮ್ಯ ಏತಂ ಮನೋಮಯಾತ್ಮಾನಮುಪಸಂಕ್ರಮ್ಯ ಏತಂ ವಿಜ್ಞಾನಮಯಾತ್ಮಾನಮುಪಸಂಕ್ರಮ್ಯ ಏತಮಾನಂದಮಯಾತ್ಮಾನಮುಪಸಂಕ್ರಮ್ಯ (ಭೃಗುವಲ್ಲಿ-ಹತ್ತನೇ ಅನುವಾಕ).
ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇSಙ್ಗ” ಎಂದು. ಅಂದರೆ: ಈ ಸ್ಥಿತಿಯನ್ನು ಪಡೆದ ಜೀವನಿಗೆ ಸಂಸಾರದ ಲವಲೇಶವಿರುವುದಿಲ್ಲ. ಆತ ಸದಾ ವಾಸುದೇವನ ಜೊತೆಗೆ ವಾಸಮಾಡುತ್ತಾನೆ. ಸಂಸಾರದಲ್ಲಿ ಮುಚ್ಚಿಕೊಂಡು, ಮೋಕ್ಷದಲ್ಲಿ ತನ್ನನ್ನು ತಾನು ಬಿಚ್ಚಿ ಬೆಳಗಿಸಿ ತೋರುವ ರೂಪ-ಭಗವಂತನ ವಾಸುದೇವ ರೂಪ. ಇಂತಹ ವಾಸುದೇವ ರೂಪದ ಸಾಕ್ಷಾತ್ ಸಾನಿಧ್ಯದಲ್ಲಿರುವ ಜೀವ  ಎಂದೂ ಮರಳಿ ಸಂಸಾರಕ್ಕೆ ಬರಬೇಕೆಂದು ಅಪೇಕ್ಷಿಸುವುದಿಲ್ಲ.

ನ ಹ್ಯತೋSನ್ಯಃ ಶಿವಃ ಪಂಥಾ ವಿಶ್ರುತಃ ಸಂಸೃತಾವಿಹ
ವಾಸುದೇವೇ ಭಗವತಿ ಭಕ್ತಿಯೋಗೋ ಯತೋ ಭವೇತ್ ೩೬

ಮೋಕ್ಷ ಮಾರ್ಗವನ್ನು ವಿವರಿಸಿದ ಶುಕಾಚಾರ್ಯರು ಹೇಳುತ್ತಾರೆ: “ಈ ಅದ್ಭುತ ಅರಿವನ್ನು ಕೊಡುವುದಕ್ಕಾಗಿಯೇ  ವೇದವ್ಯಾಸರು ಭಾಗವತ ರಚಿಸಿದರು” ಎಂದು. ಭಾಗವತವನ್ನು ಬಿಟ್ಟು ಅದಕ್ಕಿಂತ ಒಳ್ಳೆಯ ಅಧ್ಯಾತ್ಮ ಮಾರ್ಗದರ್ಶಿ ಇನ್ನೊಂದಿಲ್ಲ. ಇದನ್ನು ಮೂಲದಲ್ಲಿ ಸ್ವಯಂ ಭಗವಂತನೇ ಚತುರ್ಮುಖನಿಗೆ ಉಪದೇಶ ಮಾಡಿದ. ಆನಂತರ ಆತ  ವೇದವ್ಯಾಸರ ರೂಪದಲ್ಲಿ ಭಾಗವತವನ್ನು ಶುಕಾಚಾರ್ಯರಿಗೆ ಉಪದೇಶಿಸಿದ. ಭಗವಂತನನ್ನು ಸೇರುವ ಮೋಕ್ಷ ಮಾರ್ಗವನ್ನು ಇಷ್ಟು ಸ್ಪಷ್ಟವಾಗಿ ಇತರ ಯಾವುದೇ ಗ್ರಂಥ ವಿವರಿಸುವುದಿಲ್ಲ. ಭಗವಂತನನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ(ಸಂಸೃತಾ), ಸಂಸಾರವೇ ಸರ್ವಸ್ವ ಎಂದು ನಂಬುವವರಿಗೂ ಕೂಡಾ ಅರಿವನ್ನು ಕೊಡುವ ಗ್ರಂಥ ಈ  ಭಾಗವತ. ಇದು ಸಮಸ್ತ ವೇದದ ಸಾರವಾಗಿರುವುದರಿಂದ ಶ್ರೇಷ್ಠ ಗ್ರಂಥ ಎನಿಸಿದೆ.
ಭಗವಾನ್ ಬ್ರಹ್ಮ  ಕಾರ್ತ್ಸ್ನ್ಯೇನ ತ್ರಿರನ್ವೀಕ್ಷ್ಯ ಮನೀಷಯಾ
ತದ್ಧಿ ಹ್ಯಪಶ್ಯತ್ ಕೂಟಸ್ಥೇ ರತಿರಾತ್ಮನ್ ಯತೋ ಭವೇತ್ ೩೭

“ಲೋಕಕ್ಕೆ ಮಾರ್ಗದರ್ಶನ ನೀಡಲು ಮೂರು ಬಾರಿ ಸಮಸ್ತ ವೇದ-ವಾಙ್ಮಯವನ್ನು ಅತ್ಯಂತ ಒಳನೋಟದಿಂದ ಚಿಂತನ-ಮಂಥನ ಮಾಡಿ ವ್ಯಾಸರು ನನಗೆ ಉಪದೇಶ ಮಾಡಿದರು” ಎನ್ನುತ್ತಾರೆ ಶುಕಾಚಾರ್ಯರು.  ಇಲ್ಲಿ ಮೂರು ಬಾರಿ ಎಂದು ಹೇಳುವುದಕ್ಕೆ ಒಂದು ವಿಶೇಷ ಕಾರಣವಿದೆ. ಅದೇನೆಂದರೆ ವೇದಕ್ಕೆ ಸಹಜವಾಗಿ ಕಡಿಮೆ ಎಂದರೆ ಮೂರು ಅರ್ಥಗಳಿವೆ. ಲೌಕಿಕವಾಗಿ ಮಾತನಾಡುವಾಗ ಒಂದಕ್ಕಿಂತ ಹೆಚ್ಚು ಅರ್ಥದಲ್ಲಿ ವಾಕ್ಯ ಪ್ರಯೋಗ ಮಾಡಿದರೆ ಅದು ದೋಷವಾಗುತ್ತದೆ. ಆದರೆ ವೇದದಲ್ಲಿ ಮೂರು ಆಯಾಮದಲ್ಲಿ ಅರ್ಥವನ್ನು ಹೇಳಬೇಕು ಎನ್ನುವ ಉದ್ದೇಶದಿಂದಲೇ  ಆ ರೀತಿಯ ರಚನೆ ಮಾಡಲಾಗಿದೆ.  ಇದು ವ್ಯವಹಾರಕ್ಕಿಂತ ಅತೀತವಾದ ವಿಚಾರ. ಇಲ್ಲಿ ಅನೇಕ ಅರ್ಥದಲ್ಲಿ ತಾತ್ಪರ್ಯವಿರುವುದರಿಂದ ಇದು ದೋಷವಾಗುವುದಿಲ್ಲ. ಅನೇಕ ಆಯಾಮದಲ್ಲಿ ಅರ್ಥವನ್ನು ಹೇಳಬೇಕು ಎನ್ನುವುದೇ ವೇದದ ಉದ್ದೇಶ. ಇಂದಿನ ಶಾಲೆಗಳಲ್ಲಿ ತರಗತಿಗೊಂದು ಪಠ್ಯವಾದರೆ ಅಧ್ಯಾತ್ಮದಲ್ಲಿ ಎಲ್ಲಾ ತರಗತಿಗೂ ಒಂದೇ  ಪಠ್ಯ. ಅಲ್ಲಿ ಬೇರೆಬೇರೆ ಮಟ್ಟದಲ್ಲಿ ಬೇರೆಬೇರೆ ಆಯಾಮದಲ್ಲಿ  ವೇದಾಧ್ಯಯನ ನಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಈ ಹಿಂದೆ ವಿವರಿಸಿದ ‘ಆತ್ಮಾ’ ಎನ್ನುವ ಪದ. ವೇದಾಧ್ಯಯನ ಆರಂಭಿಸುವಾಗ ಆತ್ಮಾ ಎನ್ನುವ ಪದಕ್ಕೆ ವಿದ್ಯಾರ್ಥಿ ಕೇವಲ ಶರೀರ ಎನ್ನುವ ಅರ್ಥವನ್ನು ಕಂಡುಕೊಳ್ಳುತ್ತಾನೆ. ಆನಂತರ ಆತ್ಮಾ ಎಂದರೆ ಕೇವಲ ಶರೀರವಷ್ಟೇ ಅಲ್ಲಾ,  ಹೃದಯ ಕೂಡಾ ಆತ್ಮಾ ಎನ್ನುವುದು ಆತನಿಗೆ ತಿಳಿಯುತ್ತದೆ. ಹೀಗೆ ವಿದ್ಯಾಭ್ಯಾಸ ಮುಂದುವರಿದಾಗ ಹಂತ ಹಂತವಾಗಿ ಆತನಿಗೆ ಆತ್ಮಾ ಎಂದರೆ ಮನಸ್ಸು, ಆತ್ಮಾ ಎಂದರೆ ಜೀವ, ಆತ್ಮಾ ಎಂದರೆ ಪರಮಾತ್ಮಾ ಎನ್ನುವುದು ತಿಳಿಯುತ್ತದೆ. ಈ ರೀತಿ ಒಂದೇ ವೇದಮಂತ್ರಕ್ಕೆ ಹಂತಹಂತವಾಗಿ ಅನೇಕ ಆಯಾಮದಲ್ಲಿ ಅರ್ಥವನ್ನು ತಿಳಿಯುತ್ತಾ ವಿದ್ಯಾರ್ಥಿ ಎತ್ತರಕ್ಕೇರುತ್ತಾನೆ. ಓದುವ ಪುಸ್ತಕ ಒಂದೇ ಆದರೂ ಕೂಡಾ, ಅಲ್ಲಿ ವಿವಿಧ ಹಂತದಲ್ಲಿ ಎತ್ತರದ ಜ್ಞಾನ ಅಡಗಿರುವುದನ್ನು ತಿಳಿಯುತ್ತಾ ಮುಂದೆ ಸಾಗುವುದು ವೇದಾಂತ ವಿದ್ಯೆಯ ಕ್ರಮ. [ಹೇಗೆ ವೇದ ಮಂತ್ರ ಅನೇಕ ಆಯಾಮದಲ್ಲಿ ತೆರೆದುಕೊಳ್ಳುತ್ತದೆ ಎನ್ನುವುದನ್ನು ನಾವು ಈ ಹಿಂದೆ ನೋಡಿದ್ದೇವೆ]

ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ನಿರ್ವೀಕಾರನಾದ ಭಗವಂತನಲ್ಲಿ ವಿಕಾರಕ್ಕೊಳಪಡುವ ಮನಸ್ಸು ನೆಲೆ ನಿಲ್ಲಲು ಸಾಧ್ಯವಾಗುವ ಒಂದು ವಾಙ್ಮಯವನ್ನು ಕೊಡಬೇಕಾದರೆ, ವೇದವ್ಯಾಸರು ಸಮಸ್ತ ವೇದವನ್ನು ಮೂರು ಬಾರಿ ಚಿಂತನೆ ಮಾಡಿದರು” ಎಂದು. ಇದರರ್ಥ ವೇದವ್ಯಾಸರು ಅಷ್ಟೊಂದು ಕಷ್ಟಪಟ್ಟರು ಎಂದಲ್ಲ. ಎಲ್ಲರೂ ಎಷ್ಟು ಸಾಧನೆ ಮಾಡಬೇಕು ಎನ್ನುವುದನ್ನು ಭಗವಂತ ವೇದವ್ಯಾಸ ರೂಪದಲ್ಲಿ ತೋರಿಸಿದ ಬಗೆ ಇದು. “ಹೀಗೆ ಸ್ವಯಂ ಭಗವಂತನೇ ಹೇಳಿದ, ವೇದಮೂಲವಾಗಿರುವ,  ಸಮಸ್ತ ವೇದಗಳ ಸಾರಭೂತವಾಗಿರುವ ಭಾಗವತವನ್ನು ನನ್ನ ತಂದೆ ನನಗೆ ಕರುಣಿಸಿದರು” ಎಂದು ಪುನರುಚ್ಛರಿಸಿದ್ದಾರೆ ಶುಕಾಚಾರ್ಯರು.   

Wednesday, February 5, 2014

Shrimad BhAgavata in Kannada -Skandha-02-Ch-02(17)

ಸ ಭೂತಸೂಕ್ಷ್ಮೇಂದ್ರಿಯಸನ್ನಿಕರ್ಷಾತ್  ಸನಾತನೋSಸೌ ಭಗವಾನನಾದಿಃ
ಮನೋಮಯಂ ದೇವಮಯಂ ವಿಕಾರ್ಯಂ ಸಂಸಾದ್ಯ ಮತ್ಯಾ ಸಹ ತೇನ ಯಾತಿ ೩೩
     
 ಈ ಹಂತದಲ್ಲಿ ಪಂಚಭೂತಗಳು, ಪಂಚಜ್ಞಾನೇಂದ್ರಿಯಗಳು, ಪಂಚತನ್ಮಾತ್ರೆಗಳು ಈ ಎಲ್ಲವುದರ ಅಭಿಮಾನಿ ದೇವತೆಗಳು ಅಂತರ್ಭಾವವಾಗಿ ಭಗವಂತನಲ್ಲಿ ಸೇರಿದ್ದಾರೆ. ಇವರೆಲ್ಲರ ಜೊತೆಗೆ ‘ಜೀವರು’ ಮೋಕ್ಷ ಮಾರ್ಗದಲ್ಲಿ ಮುನ್ನೆಡೆಯುತ್ತಾ, ಆಕಾಶದಲ್ಲಿರುವ ಪ್ರದ್ಯುಮ್ನನ ಪ್ರಾಣಮಯ ರೂಪದಲ್ಲಿ ಸೇರಿದ್ದಾರೆ. ಇಲ್ಲಿ ಶುಕಾಚಾರ್ಯರು “ಭಗವಂತನ ಈ ರೂಪ ಸನಾತನ ಹಾಗೂ ಅನಾಧಿ” ಎಂದಿದ್ದಾರೆ. ಮೇಲ್ನೋಟಕ್ಕೆ ಅನಾಧಿ ಮತ್ತು ಸನಾತನ ಎನ್ನುವ ಎರಡೂ ಪದಗಳು ಒಂದೇ ಅರ್ಥವನ್ನು ಕೊಡುತ್ತವೆ ಎನಿಸಿದರೂ ಕೂಡಾ, ಇಲ್ಲಿನ ಪ್ರಯೋಗವನ್ನು ನೋಡಿದಾಗ ಸನಾತನ ಎನ್ನುವ ಪದಕ್ಕೆ ಭಿನ್ನ ಅರ್ಥವಿದೆ ಎನ್ನುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ‘ನಾತನ’ ಎಂದರೆ ‘ನಾದನ’, ಅಂದರೆ  ‘ಶಬ್ದ’ ಎಂದರ್ಥ. [ತೃತಿಯೇ ಅತಿಶಯೋ ಎನ್ನುವ ವ್ಯಾಕರಣ ನಿಯಮದಂತೆ ನಾತನ=ನಾದನ] ಆದ್ದರಿಂದ ಸನಾತನ ಎಂದರೆ ಶಬ್ದದಿಂದ ಕೂಡಿದ ಆಕಾಶಗತನಾಗಿರುವ ಪ್ರಾಣಮಯ ನಾಮಕ ಭಗವಂತ. ಭಗವಂತನ ಈ ಪ್ರದ್ಯುಮ್ನ ರೂಪದೊಂದಿಗೆ ಮುಂದೆ ಸಾಗುವ ಜೀವರು ಮುಂದೆ ಮನಸ್ಸಿನ ನಿಯಾಮಕನಾಗಿರುವ ಸಂಕರ್ಷಣ ರೂಪವನ್ನು ಹೊಂದುತ್ತಾರೆ.
ಸಂಕರ್ಷಣನಿಗೆ ಮೂರು ರೂಪಗಳು.  ಮನಸ್ಸು-ಬುದ್ಧಿ-ಅಹಂಕಾರ. ಈ ಮೂರು ತತ್ವಗಳಲ್ಲಿ ಮೂರು ರೂಪದಲ್ಲಿರುವ ಭಗವಂತನನ್ನು ಇಲ್ಲಿ ಶುಕಾಚಾರ್ಯರು ‘ದೇವಮಯ’ ಎಂದು ಕರೆದಿದ್ದಾರೆ. ಏಕೆಂದರೆ ಮನಸ್ಸನ್ನು ನಿಯಂತ್ರಿಸತಕ್ಕಂತಹ ಶಿವನಲ್ಲಿರುವ ಭಗವಂತನ ರೂಪವೇ ಇಂದ್ರಾದಿ ಸಮಸ್ತ ದೇವತೆಗಳನ್ನು ಎತ್ತರಕ್ಕೇರಿಸುವ ರೂಪ. ಇದು ಮನಸ್ಸಿನ ಪ್ರೇರಕರಾದ ರುದ್ರದೇವರ ಒಳಗಿರುವ, ಎಲ್ಲಾ ದೇವತೆಗಳಿಗೂ ಪ್ರಾಧಾನ್ಯವನ್ನು ಕೊಡುವ, ದೇವತೆಗಳನ್ನು ಎತ್ತರಕ್ಕೆ ಕರ್ಷಣೆ ಮಾಡುವ ರೂಪ.

ವಿಜ್ಞಾನತತ್ತ್ವಂ ಗುಣಸನ್ನಿರೋಧಂ ತೇನಾತ್ಮನಾSSತ್ಮಾನಮುಪೈತಿ ಶಾಂತಿಮ್  
ಆನಂದಮಾನಂದಮಯೋSವಸಾನೇ ಸರ್ವಾತ್ಮಕೇ ಬ್ರಹ್ಮಣಿ ವಾಸುದೇವೇ ೩೪

ಮನಸ್ಸು-ಬುದ್ಧಿ-ಅಹಂಕಾರದಿಂದಾಚೆಗೆ ಚಿತ್ತ. ಅದು ನಮ್ಮ ಅನುಭವಗಳ, ನೆನಪಿನ ಸಂಗ್ರಹ ಸ್ಥಾನ (ವಿಜ್ಞಾನಮಯಕೋಶ). ಈ ಚಿತ್ತದಲ್ಲಿ ಭಗವಂತ ವಾಸುದೇವ ರೂಪನಾಗಿದ್ದಾನೆ. ಇದು ಯಾವ ಗುಣಗಳ ಸ್ಪರ್ಶವೂ ಇಲ್ಲದ ನಿರ್ಗುಣರೂಪ. ಭಗವಂತನ ಅನಿರುದ್ಧ, ಪ್ರದ್ಯುಮ್ನ ಮತ್ತು ಸಂಕರ್ಷಣ ರೂಪಗಳು ಸೃಷ್ಟಿ-ಸ್ಥಿತಿ-ಸಂಹಾರಕ್ಕಾಗಿ ಸತ್ವ-ರಜಸ್ಸು-ತಮೋಗುಣಗಳನ್ನು ಬಳಸುವ ರೂಪವಾದರೆ, ವಾಸುದೇವ ರೂಪ  ಈ ತ್ರಿಗುಣಗಳಿಂದಾಚೆಗಿನ ಮೋಕ್ಷವನ್ನು ಕರುಣಿಸುವ ರೂಪ. ಇಂತಹ ವಿಜ್ಞಾನಮಯ ರೂಪವನ್ನು ಕಂಡ ಜೀವರು ಮುಂದೆ ಭಗವಂತನ ಆನಂದಮಯರೂಪವನ್ನು ಕಾಣುತ್ತಾರೆ. ಈ ಆನಂದಮಯ ಕೋಶದಲ್ಲಿ ಆನಂದದ ಪರಾಕಾಷ್ಠೆಯಲ್ಲಿ ಶ್ರೀಲಕ್ಷ್ಮಿ ಇದ್ದಾಳೆ. ಈ ಶ್ರಿತತ್ತ್ವದ ಜೊತೆಗೆ ಜೀವರು ಚೇತನದ ನಿಯಾಮಕನಾದ ಭಗವಂತನ ನಾರಾಯಣ ರೂಪದ ದರ್ಶನ ಪಡೆಯುತ್ತಾರೆ. ಈ ದರ್ಶನದ ನಂತರ ಎಲ್ಲಾ ಜೀವರು ಮುಕ್ತ ನಿಯಾಮಕ ವಾಸುದೇವ ರೂಪದ ಅಧೀನದಲ್ಲಿ ಸದಾ ಕಾಲ ಮೊಕ್ಷದಲ್ಲಿರುತ್ತಾರೆ.    

ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇSಙ್ಗ” ಎಂದು. ಅಂದರೆ: ಈ ಸ್ಥಿತಿಯನ್ನು ಪಡೆದ ಜೀವನಿಗೆ ಸಂಸಾರದ ಲವಲೇಶವಿರುವುದಿಲ್ಲ. ಆತ ಸದಾ ವಾಸುದೇವನ ಜೊತೆಗೆ ವಾಸಮಾಡುತ್ತಾನೆ. ಸಂಸಾರದಲ್ಲಿ ಮುಚ್ಚಿಕೊಂಡು, ಮೋಕ್ಷದಲ್ಲಿ ಮೋಕ್ಷವನ್ನು ಸೇರಿದ ಜೀವರಿಗೆ ತನ್ನನ್ನು ತಾನು ಬಿಚ್ಚಿ ಬೆಳಗಿಸಿ ತೋರುವ ರೂಪ-ಭಗವಂತನ ವಾಸುದೇವ ರೂಪ.