Monday, January 27, 2025

Shrimad BhAgavata in Kannada -Skandha-03-Ch-07_03

 ಮುಖತೋsವರ್ತತ ಬ್ರಹ್ಮ ಪುರುಷಸ್ಯ ಕುರೂದ್ವಹ ।

ಯತ್ರೋನ್ಮುಖತ್ವಾದ್  ವರ್ಣಾನಾಂ ಮುಖ್ಯೋSಭೂದ್ ಬ್ರಾಹ್ಮಣೋ  ಗುರುಃ ॥೩೦॥ 


ಬಾಹುಭ್ಯೋSವರ್ತತ ಕ್ಷತ್ರಂ ಕ್ಷತ್ರಿಯಸ್ತಮನುವ್ರತಃ  ।

ಯೋ ಜಾತಸ್ತ್ರಾಯತೇ ವರ್ಣಾನ್ ಪುರುಷಾನ್ ಕಣ್ಠಕಕ್ಷತಾನ್    ॥೩೧॥ 


ವಿಶೋSವರ್ತನ್ತ  ತಸ್ಯೋರ್ವೋರ್ಲೋಕವೃತ್ತಿಕರೀರ್ವಿಭೋಃ ।

ವೈಶ್ಯಸ್ತದುದ್ಭವೋ ವಾರ್ತಾ೦ ನೃಣಾಂ ಯಃ ಸಮವರ್ತಯತ್  ॥೩೨॥


ಪದ್ಭಾಂ ಭಗವತೋ ಜಜ್ಞೇ ಶುಶ್ರೂಷಾ ಕರ್ಮಸಿದ್ಧಯೇ  । 

ತಸ್ಯಾಂ ಜಾತಃ ಪುರಾ ಶೂದ್ರೋ ಯದ್‌ವೃತ್ತ್ಯಾ ತುಷ್ಯತೇ ಹರಿಃ  ॥೩೩॥


ಯಾವರೀತಿ ಭಗವಂತ ನಾಲ್ಕು ವರ್ಣಗಳನ್ನು ಮುಖ, ಬಾಹು, ತೊಡೆ ಮತ್ತು ಪಾದದಿಂದ ಸೃಷ್ಟಿಸಿದ ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ವಿವರಿಸಲಾಗಿದೆ.  ಆಚಾರ್ಯರು ಷಾಡ್ಗುಣ್ಯವೆಂಬ ಗ್ರಂಥದ ಪ್ರಮಾಣದೊಂದಿಗೆ ಇದರ ತಾತ್ಪರ್ಯವನ್ನು ನೀಡಿದ್ದಾರೆ. 


“ ಬ್ರಹ್ಮಾಭಿಮಾನೀ ತು  ಭೃಗುರಜನಿ ಬ್ರಹ್ಮಣೋ ಮುಖಾತ್ । ಕ್ಷತ್ರಾಭಿಮಾನೀ ತು  ಮನುರ್ಬ್ರಹ್ಮಬಾಹ್ವೋರಜಾಯತ । ಊರ್ವೋರ್ವಿಡಭಿಮಾನೀ ಚ ವಾಸ್ತುಃ ಪಾದಾತ್ ಕೃತಿಸ್ತಥಾ  । ಏತೇ ಪೂರ್ವಂ  ಹರೇರ್ಜಾತಾ ಬ್ರಹ್ಮಣಸ್ತದನನ್ತರಮ್ । ಏವಂ ರುದ್ರಾಚ್ಚ ವಾಯೋಶ್ಚ ತದನ್ತಸ್ಥಹರೇರ್ಯತಃ ”  ಇತಿ  ಷಾಡ್ಗುಣ್ಯೇ ॥*॥


ಭಗವಂತನ ಮುಖದಿಂದ ಬ್ರಾಹ್ಮಣ ಸ್ವಭಾವವನ್ನು ಪ್ರತಿನಿಧಿಸುವ ಭೃಗು ಮಹರ್ಷಿಯ ಸೃಷ್ಟಿಯಾಯಿತು. (ಮುಂದೆ ಚತುರ್ಮುಖನ ಮುಖದಿಂದ, ರುದ್ರದೇವರ ಮುಖದಿಂದ, ಪುನಃ ಸೃಷ್ಟಿ ಇದೆ. ಇಲ್ಲಿ ನಾವು ನೋಡುತ್ತಿರುವುದು ಭಗವಂತನ ಸೃಷ್ಟಿಯ ಅನುಸಂಧಾನ). ಭೃಗು ಮಹರ್ಷಿಗಳಿಂದ ಬ್ರಾಹ್ಮಣ ವರ್ಣದ (ಬ್ರಾಹ್ಮಣ ಸ್ವಭಾವದ) ಜನಾಂಗ ಬೆಳೆದು ಬಂತು. (ಸಪ್ತರ್ಷಿಗಳ ಜೊತೆಗೆ  ಸೃಷ್ಟರಾದ ಭೃಗು ಮಹರ್ಷಿಗಳು ಮೂಲತಃ ಸೃಷ್ಟಿಯ ಆದಿ-ಬ್ರಾಹ್ಮಣ. ಹೀಗಾಗಿ ಎಲ್ಲಾ ಬ್ರಾಹ್ಮಣ ವರ್ಣದವರೂ ಒಂದು ರೀತಿಯಲ್ಲಿ ಭಾರ್ಗವ ಗೋತ್ರದವರು! ಇನ್ನೊಂದು ವಿಶೇಷವೆಂದರೆ ಭಾಗವತದಲ್ಲೇ ಮುಂದೆ ಹೇಳುವಂತೆ, ಭೃಗು ಮಹರ್ಷಿಗಳು ದೇವತೆಗಳಲ್ಲಿ ಯಾರು ಶ್ರೇಷ್ಠ ಎನ್ನುವ ಪರೀಕ್ಷೆಯನ್ನು ಮಾಡಿ, ಋಷಿಗಳಿಗೆ ‘ಸರ್ವಶ್ರೇಷ್ಠ ದೇವತೆ ನಾರಾಯಣ’  ಎನ್ನುವುದನ್ನು ತೋರಿಸುತ್ತಾರೆ. ಹೀಗಾಗಿ ನಾರಾಯಣ ಉಪಾಸನೆ ಭಾರ್ಗವ ಗೋತ್ರದವರ ಸ್ವಭಾವ ಕೂಡಾ ಹೌದು).

ಹೀಗೆ ಒಂದು ಸ್ವಭಾವದ ಜನರು ಭಗವಂತನ  ಮುಖದಿಂದ ಸೃಷ್ಟರಾದರು. ಆ ಬ್ರಹ್ಮ ಸ್ವಭಾವದ ಚಿಂತನೆಯೇ ಮುಖದ ಚಿಂತನೆ. ಜ್ಞಾನಕ್ಕೆ ಬೇಕಾಗಿರುವ ಐದು ಇಂದ್ರಿಯಗಳಿರುವುದು ಮುಖದಲ್ಲಿ. ಕಣ್ಣಿನಿಂದ ನೋಡಿ ತಿಳಿಯುತ್ತೇವೆ, ಕಣ್ಣು ನೋಡಲಾಗದ್ದನ್ನು ಕಿವಿಯಿಂದ ಕೇಳಿ ತಿಳಿಯುತ್ತೇವೆ, ಮಾತಿನಿಂದ ಜ್ಞಾನ ಹರಿಯುತ್ತದೆ, ಮೂಗು(ಉಸಿರಾಟ) ಸಮಸ್ತ ಇಂದ್ರಿಯಗಳನ್ನು ಚುರುಕುಗೊಳಿಸುವ ಪ್ರಾಣಶಕ್ತಿ. ಮನಸ್ಸು ಈ ಎಲ್ಲವನ್ನೂ ಗ್ರಹಿಸುವ ಇಂದ್ರಿಯ.

ಎರಡನೇ ಸ್ವಭಾವ ಕ್ಷತ್ತ್ರ-ಸ್ವಭಾವ. ಇನ್ನೊಬ್ಬರ ರಕ್ಷಣೆಗಾಗಿ ತಮ್ಮ ಬಲಿದಾನ ಕೊಡುವ ಸ್ವಭಾವ ಈ ವರ್ಣದವರದ್ದು. ಇಂತಹ ವರ್ಣವನ್ನು ಪ್ರತಿನಿಧಿಸತಕ್ಕ ಸ್ವಾಯಂಭುವ ಮನು ಭಗವಂತನ ತೋಳಿನಿಂದ ಸೃಷ್ಟನಾದ. ಎಲ್ಲಾ ವರ್ಣದವರ ರಕ್ಷಣೆ ಕ್ಷತ್ರಿಯರ ಕರ್ತವ್ಯ.

ಭಗವಂತನ ತೊಡೆಯಿಂದ ವೈಶ್ಯ-ವರ್ಣವನ್ನು ಪ್ರತಿನಿಧಿಸುವ ವಾಸ್ತುದೇವನ ಸೃಷ್ಟಿಯಾಯಿತು. ಊರಿಂದ ಊರಿಗೆ ಹೋಗಿ ಆಹಾರವನ್ನು ಬೆಳೆದು ಸರಬರಾಜು ಮಾಡುವುದು ಈ ವರ್ಣದವರ ವಿಶೇಷತೆ. ತೋಟಗಾರಿಕೆ, ಹೈನು, ವ್ಯಾಪಾರ, ಇತ್ಯಾದಿ ಇವರ ಮೂಲ ಕಸುಬು.

ಇಡೀ ದೇಹವನ್ನು ಹೇಗೆ ಕಾಲು ಧಾರಣೆ ಮಾಡುತ್ತದೋ ಹಾಗೇ, ಇಡೀ  ಸಮಾಜವನ್ನು ಧಾರಣೆ ಮಾಡುವ ವರ್ಣ ಶೂದ್ರವರ್ಣ. ಶುಶ್ರೂಷೆ ಇವರ ಸ್ವಭಾವ. ಇಂತಹ ವರ್ಣದ ಮೂಲಪುರುಷನಾದ ಕೃತಿದೇವ ಭಗವಂತನ ಪಾದದಿಂದ ಸೃಷ್ಟಿಯಾದನು. ಶೂದ್ರಧರ್ಮ ಭಗವಂತನಿಗೆ ಅತ್ಯಂತ ಪ್ರಿಯವಾದ ಧರ್ಮ. ಎಲ್ಲರಲ್ಲೂ ಎಲ್ಲಾ ವರ್ಣವಿರುತ್ತದೆ.  ಯಾರಲ್ಲಿ ಮೂಲವರ್ಣದ ಅಂಶ ಹೆಚ್ಚು ಇರುತ್ತದೋ ಅವನು ಆ ವರ್ಣಕ್ಕೆ ಸೇರುತ್ತಾನೆ ಅಷ್ಟೇ.

[ಸ್ವಭಾವಧರ್ಮವನ್ನೇ ನಾವು ನಮ್ಮ ಸ್ವಧರ್ಮವನ್ನಾಗಿ ಇಟ್ಟುಕೊಳ್ಳಬೇಕು. ಆದರೆ ಅದಕ್ಕಾಗಿ ನಾವು ನಮ್ಮ  ಜೀವಸ್ವಭಾವವನ್ನು ಗುರುತಿಸಿಕೊಳ್ಳಬೇಕು.  ಜೀವ ಮೊದಲು ತನ್ನ ತುಡಿತ ಯಾವುದು ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಅದು ಸುಮಾರಾಗಿ ಸ್ವಧರ್ಮವನ್ನು ಗುರುತಿಸಲು ಸಹಾಯಮಾಡುತ್ತದೆ.  ಸ್ವಧರ್ಮಕ್ಕೆ ಎರಡು ಮುಚ್ಚಳಗಳು. ೧. ಸಮಾಜದ ಪ್ರಭಾವ(Environmental force) ಹಾಗೂ ೨. ಆನುವಂಶಿಕ ಪ್ರಭಾವ(Genetic force).  ಇವೆರಡರ ಮಧ್ಯೆ ನಿಜ ಸ್ವಭಾವ ಮುಚ್ಚಿಹೋಗಿರುತ್ತದೆ.  ಹಾಗಾಗಿ ನಾವು ಪ್ರಭಾವವನ್ನೇ ಸ್ವಭಾವವಾಗಿ ಕಾಣುವ ಅಪಾಯ ಹೆಚ್ಚು.  ಸ್ವಧರ್ಮ ಎಂದರೆ ಸ್ವತಂತ್ರವಾದ ಭಗವಂತನ ಅರಿವಿಗೆ ಪೂರಕವಾದ ಧರ್ಮ. ಹಾಗಾಗಿ ಭಗವಂತನ ನೆನಪು ತರುವ ಧರ್ಮ ಸ್ವಧರ್ಮ ಹಾಗೂ ಭಗವಂತನನ್ನು ಮರೆಸುವ ಧರ್ಮ ಪರಧರ್ಮ.  ಹೀಗಾಗಿ ನಮ್ಮ ಮೂಲ ಜೀವಸ್ವಭಾವವನ್ನು ತಿಳಿದುಕೊಳ್ಳಲು ನಾವು ಪದೇಪದೇ ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು. ಆತ್ಮಸಾಕ್ಷಾತ್ಕಾರವಾದಾಗ ನಮಗೆ ನಮ್ಮ ಮೂಲಸ್ವಭಾವದ ಪೂರ್ಣ ಅರಿವು ಬರುತ್ತದೆ]


ಏತತ್ ಕ್ಷತ್ತರ್ಭರ್ಭಗವತೋ ದೈವಕರ್ಮಾತ್ಮರೂಪಿಣಃ

 ಕಃ ಶ್ರದ್ದಧ್ಯಾದುದಾಹರ್ತುಂ  ಯೋಗಮಾಯಾಬಲೋದಯಮ್  ॥೩೩॥


“ಅಧಿಕತ್ವಾದ್ ದೇವಶಬ್ದಾ ದೇವಾಸ್ತೇಷ್ವಧಿಕೋ ಯತಃ  । ದೈವಂ ಹರಿಃ ಕರ್ಮ ಮೂಲಂ ಕೃತಿರಿತ್ಯೇವ ಭಣ್ಯತೇ  । ವ್ಯಾಪ್ತತ್ವಾದಾತ್ಮಶಬ್ದಶ್ಚ  ಶ್ರೀಪತಿತ್ವಾಚ್ಚ ಮಾಧವಃ”  ಇತಿ ಚ  ॥ * ॥


ವೇದವ್ಯಾಸರ ಗೆಳೆಯರೂ, ಸಹಪಾಠಿಯೂ ಆಗಿರುವ ಮೈತ್ರೆಯರು ವಿದುರನನ್ನು ಇಲ್ಲಿ ಕ್ಷತ್ತಃ ಎಂದು ಸಂಬೋಧಿಸುವುದನ್ನು ಕಾಣುತ್ತೇವೆ. ಈ ಹಿಂದೆ ಹೇಳಿದಂತೆ ಕ್ಷತ್ತಃ ಎನ್ನುವ ಪದ ಸಾಮಾಜಿಕವಾಗಿ ‘ದಾಸಿಯ ಮಗ’ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದ್ದರೂ ಕೂಡಾ,  ಇಲ್ಲಿ ಅದನ್ನು ‘ಕ್ಷತ’ ಧಾತುವಿನ ಅರ್ಥದಲ್ಲಿ  ‘ಶಾಸ್ತ್ರದ ರಹಸ್ಯವನ್ನು ತಿಳಿಯಲು ಸಮರ್ಥ’ ಎನ್ನುವ ಧ್ವನಿಯಲ್ಲಿ  ಹೇಳಿರುವುದನ್ನು ಕಾಣುತ್ತೇವೆ.

ಈ ಹಿಂದೆ ಹೇಳಿದಂತೆ ‘ದೈವ’ ಎಂದರೆ ಸರ್ವೋತ್ತಮ ದೇವತೆಯಾದ ಭಗವಂತ.  ಅಂತಹ ಭಗವಂತನಿಂದಲೇ ಜಗತ್ತಿನ ಸಮಸ್ತ ಕರ್ಮ ನಡೆಯುತ್ತದೆ. ಅವನು ನಮ್ಮ ಒಳಗೂ-ಹೊರಗೂ ತುಂಬಿ ಎಲ್ಲವನ್ನೂ ಮಾಡಿಸುತ್ತಾನೆ. ಅವನಿಲ್ಲದೇ ಕರ್ಮವಿಲ್ಲ. ಅವನು ಸರ್ವೋತ್ತಮ, ಸರ್ವಕರ್ತ, ಸರ್ವತ್ರವ್ಯಾಪ್ತ.  

ಇಲ್ಲಿ ‘ಮಾಯಾ’ ಎನ್ನುವ ಪದ ಬಳಕೆಯಾಗಿದೆ.   ನಾವು ಸಾಮಾನ್ಯವಾಗಿ ಮಾಯಾ ಎಂದರೆ  ಮಯನಿಗೆ ಸಂಬಂಧಿಸಿದ  ಇಂದ್ರಜಾಲ  ಅಥವಾ ಕಣ್ಕಟ್ಟು ವಿದ್ಯೆ   ಎಂದುಕೊಳ್ಳುತ್ತೇವೆ. ಆದರೆ  ವೇದಕಾಲದಿಂದಲೂ ಬಳಕೆಯಲ್ಲಿರುವ  ಮಾಯಾ ಎನ್ನುವ ಪದಕ್ಕೆ  ಜ್ಞಾನ, ಇಚ್ಛೆ,  ಮಹಿಮೆ, ಪ್ರಧಾನ,  ಇತ್ಯಾದಿ  ಅರ್ಥಗಳಿವೆ.   ಭಗವಂತನಿಂದ  ವಿಯೋಗ ಇಲ್ಲದ್ದು ಯೋಗಮಾಯೆ. ಭಗವಂತನ ಸ್ವರೂಪಭೂತವಾದ ಮಹಿಮೆ ಯೋಗಮಾಯೆ. ‘ಇಂತಹ ಭಗವಂತನನ್ನು ಕುರಿತು ಹೇಳುವ ಧೈರ್ಯ ಯಾರಿಗಿದೆ’ ಎಂದು ಪ್ರಶ್ನಿಸುತ್ತಾರೆ ಮೈತ್ರೆಯರು. [ಭಗವಂತನ ಕುರಿತು ಪೂರ್ತಿಯಾಗಿ ಯಾರಿಂದಲೂ ಹೇಳಲು ಸಾಧ್ಯವಿಲ್ಲ, ನಾನು ಭಗವಂತನ ಕುರಿತಾದ ಕಿಂಚಿತ್ ವಿಷಯವನ್ನು ನಿನಗೆ ಹೇಳಲು ಪ್ರಯತ್ನಿಸುವೆ ಎನ್ನುವ ಧ್ವನಿ ಇದಾಗಿದೆ].


ಅಹೋ ಭಗವತೋ ಮಾಯಾ  ಮಾಯಿನಾಮಪಿ ಮೋಹಿನೀ

 ಯತ್ ಸ್ವಯಂ ಚಾssತ್ಮವರ್ತ್ಮಾssತ್ಮಾ ನ ವೇದ ಕಿಮುತಾಪರೇ ॥೩೯॥


 ಯತೋಽಪ್ರಾಪ್ಯ ನಿವರ್ತನ್ತೇ ವಾಚಶ್ಚ ಮನಸಾ ಸಹ

 ಅಹಂ ಚಾನ್ಯ ಇಮೇ ದೇವಾಸ್ತಸ್ಮೈ ಭಗವತೇ ನಮಃ ॥೪೦॥

 

‘ಆತ್ಮಾ ನ ವೇದ ಬ್ರಹ್ಮಾ  ।  ಅಹಂ ರುದ್ರಃ :-

“ಗುಣಪೂರ್ತೇರಾತ್ಮಶಬ್ದೋ  ಬ್ರಹ್ಮಾSಹೀನತ್ವತೋ ಹರಃ ।  ಅಹಂಶಬ್ದಸ್ತಥಾSಪ್ಯೇತೌ ನ ಜಾನೀತೋ  ಹರಿಂ ಪರಮ್” ಇತಿ ಬ್ರಾಹ್ಮೇ । 

ಭಗವತೋ ಮಾಯಾಂ ಮಹಿಮಾನಮ್  । 

“ಮಾಯಾ ತು ಮಹಿಮಾ ಪ್ರೋಕ್ತಾ ಪ್ರಾಚುರ್ಯೇ ತು ಮಯಡ್ ಯತಃ” ಇತಿ ಪಾದ್ಮೇ ।

ಆತ್ಮವರ್ತ್ಮಾ ಪರಮಾತ್ಮಗತಿಃ ॥*॥


ಭಗವಂತನ  ಮಹಿಮೆ ಎನ್ನುವುದು ಹೇಳಲಸಾಧ್ಯವಾದ ವಿಸ್ಮಯ.   ಜೀವೋತ್ತಮನಾದ, ಭಗವಂತನ ಮೊದಲ ಮಗ ಚತುರ್ಮುಖ  ಬ್ರಹ್ಮನಿಗೂ(ಮುಖ್ಯಪ್ರಾಣನಿಗೂ) ಕೂಡಾ ಭಗವಂತನ ಮಹಿಮೆ ದಿಗ್ಭ್ರಮೆಗೊಳಿಸುವಂತಹದ್ದು. ಭಗವಂತನ ಪೂರ್ಣ ಮಹಿಮೆ ಶ್ರೇಷ್ಠರಾದ ಆದಿಜೀವರಿಗೇ ಪೂರ್ಣವಾಗಿ ತಿಳಿದಿಲ್ಲ. ವೇದಗಳಿಂದ ಸದಾ ಭಗವಂತನನ್ನು ಸ್ತೋತ್ರಮಾಡುವ ವಾಗ್ದೇವತೆಗಳಾದ ಸರಸ್ವತಿ-ಭಾರತೀಯರೂ  ಭಗವಂತನನ್ನು ಅರಿಯಲಾಗದೇ ಮರಳಿ ಬಂದವರು.

ಸರಸ್ವತಿ -ಭಾರತೀಯರ ನಂತರ ಬರುವವರು ಗರುಡ-ಶೇಷ-ರುದ್ರರು. ವೇದದ ಮನನಕ್ಕೆ ದೇವತೆ ಗರುಡನಾದರೆ, ಪೌರುಷೇಯ ಗ್ರಂಥಗಳಿಗೆ ಶೇಷ ಅಭಿಮಾನಿ. ಗರುಡ ಭಗವಂತನ ವಾಹನನಾದರೆ ಶೇಷ ಭಗವಂತನ ಹಾಸಿಗೆ. ಜೊತೆಗೆ ಅಹಂ-ತತ್ತ್ವದ ದೇವತೆ ರುದ್ರ. ಇವರೆಲ್ಲರೂ ಕೂಡಾ ಭಗವಂತನ ಮಹಿಮೆಯನ್ನು ಪೂರ್ಣವಾಗಿ ತಿಳಿಯಲಾಗದೇ ಮರಳಿ ಬಂದವರು. ಹೀಗಿರುವಾಗ ಉಳಿದ ದೇವತೆಗಳ ಪಾಡೇನು? ಅದಕ್ಕಾಗಿ ‘ನಮಗೆ ಅರ್ಥವಾಗದ ಆ ಭಗವಂತನಿಗೆ ನಮಸ್ಕಾರ’ ಎಂದಷ್ಟೇ ನಾವು ಹೇಳಬಹುದು. ಯಾವುದೂ ನನ್ನದಲ್ಲ, ಎಲ್ಲವೂ ನಿನ್ನದೇ ಎನ್ನುವ ಸತ್ಯವನ್ನು ಅರಿತು, ಸದಾ ಭಗವಂತನಲ್ಲಿ ತನ್ನನ್ನು ಅರ್ಪಿಸಿಕೊಂಡು ಬದುಕುವುದಷ್ಟೇ ನಮಗಿರುವ ಮಾರ್ಗ. 


‘ಈರೀತಿ ಜಗತ್ತನ್ನು ಸೃಷ್ಟಿಮಾಡಿದ, ಅರಿಯಲಾಗದ ಮಹಿಮೆಯುಳ್ಳ ಭಗವಂತನಿಗೆ ನಮಸ್ಕಾರ’ ಎನ್ನುತ್ತಾರೆ ಮೈತ್ರೇಯರು.



॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು

*********


Shrimad BhAgavata in Kannada -Skandha-03-Ch-07_02

 ನಿರ್ಭಿಣ್ಣಾನ್ಯಸ್ಯ  ಚರ್ಮಾಣಿ ಲೋಕಪಾಲೋಽನಿಲೋಽವಿಶತ್ ।

 ಪ್ರಾಣೇನಾಂಶೇನ ಸಂಸ್ಪರ್ಶಂ ಯೇನಾಸೌ ಪ್ರತಿಪದ್ಯತೇ ॥೧೬॥ 


ಬ್ರಹ್ಮನ ವಿರಾಟ್ ಶರೀರದಲ್ಲಿ ಚರ್ಮ ಆವರಿಸಿತು ಮತ್ತು ಅದರಲ್ಲಿ ಲೋಕಪಾಲಕ ಎನಿಸಿರುವ ಮರೀಚಿ ಎನ್ನುವ ವಾಯು ಬಂದು ಕುಳಿತ. ಅವನು ಚರ್ಮಕ್ಕೆ ಚೈತನ್ಯವನ್ನು ಕೊಟ್ಟು, ಸ್ಪರ್ಶಾನುಭಾವವನ್ನು ನೀಡಿದ. (ಇಲ್ಲಿ ಮರೀಚಿ ಎಂದಾಗ ಅವನೊಳಗೆ ಚತುರ್ಮುಖ ಮತ್ತು ಚತುರ್ಮುಖನೊಳಗೆ ಭಗವಂತ ಇದ್ದಾನೆ ಎನ್ನುವುದನ್ನು ನಾವು ತಿಳಿದಿರಬೇಕು.)

[ಈ ಹಿಂದೆ ಹತ್ತು ರೂಪದಲ್ಲಿ ಚತುರ್ಮುಖನ ದೇಹ ಪ್ರವೇಶಿಸಿದವನು ಪ್ರಧಾನ ವಾಯುವಾದರೆ. ಇಲ್ಲಿ ಹೇಳಿರುವ  ಸ್ಪರ್ಶೇನ್ದ್ರಿಯ ಅಭಿಮಾನಿ ಪ್ರಧಾನ ವಾಯುವಿನ ಪುತ್ರ.  ಈ ವಿಷಯವನ್ನು ಆಚಾರ್ಯರು ಭಾಗವತ ತಾತ್ಪರ್ಯದಲ್ಲಿ ತತ್ತ್ವನಿರ್ಣಯದ ಪ್ರಮಾಣ ಸಹಿತ ವಿವರಿಸಿದ್ದಾರೆ. “ಪ್ರಾಣಃ ಪ್ರಥಮಜೋ ಯಸ್ತು ಪ್ರಧಾನೋ ವಾಯುರೀರಿತಃ  | ತ್ವಗಾತ್ಮಾದ್ಯಾಸ್ತು ತತ್ಪುತ್ರಾ ದ್ವಿಧಾ ಭೂತಮುದಾಹೃತಮ್”.  

ಇಲ್ಲಿ ನಾವು ಇನ್ನೊಮ್ಮೆ ನೆನಪಿಸಿಕೊಳ್ಳಬೇಕಾದ ಮುಖ್ಯವಾದ ವಿಷಯವೇನೆಂದರೆ, ದೇವತೆಗಳಿಗೆ ಅನೇಕ ಹುಟ್ಟು. ಅವರು ಮೊದಲು ಭಗವಂತನಿಂದ ಹುಟ್ಟಿದರೆ, ನಂತರ ಚತುರ್ಮುಖನಿಂದ ಹುಟ್ಟುತ್ತಾರೆ. ಮತ್ತೆ ಮುಖ್ಯಪ್ರಾಣನಿಂದ, ಆನಂತರ ಶಿವನಿಂದ, ಈ ರೀತಿ ಅನೇಕ ಸ್ತರದಲ್ಲಿ ದೇವತೆಗಳು ಸೃಷ್ಟಿಯಾಗುತ್ತಾರೆ ]

ಹೀಗೆ ಮೂಗು, ನಾಲಿಗೆ, ಕಣ್ಣು, ತೊಗಲು, ಕಿವಿ, ವಾಕ್, ಪಾಣಿ, ಪಾದ, ಪಾಯು, ಉಪಸ್ಥಗಳ ಸೃಷ್ಟಿಯಾಯಿತು. ಜೊತೆಗೆ ಪಂಚಭೂತಗಳ ಮತ್ತು ಪಂಚತನ್ಮಾತ್ರೆಗಳ ಸೃಷ್ಟಿಯೂ ಆಯಿತು. ಇಂದ್ರಿಯಗಳ ವಿಷಯ ಗ್ರಹಣಮಾಡಲು ಒಳಗೆ ಮನಸ್ಸಿನ ಸೃಷ್ಟಿಯೂ ಆಯಿತು.  ಮನಸ್ಸು ಗ್ರಹಣ ಮಾಡಿದ ವಿಷಯವನ್ನು ತೀರ್ಮಾನಮಾಡುವ ಬುದ್ಧಿ,  ನೆನಪಿನಲ್ಲಿಟ್ಟುಕೊಳ್ಳುವ ಚಿತ್ತ ಮತ್ತು ಕರ್ತೃತ್ವದ ಅಭಿಮಾನವಾದ ಅಹಂಕಾರ. ಈ ಮೂರರ ಅಭಿವ್ಯಕ್ತಿ ಆಗಬೇಕಿದೆ. ಇವೆಲ್ಲವೂ ಆದ ಬಳಿಕವೇ ಶರೀರಕ್ಕೆ ಪೂರ್ಣತೆ ಬರುತ್ತದೆ. ಆಗ ಅದನ್ನು ಪುರುಷ ಶರೀರ ಎಂದು ಹೇಳುತ್ತಾರೆ. (ಮರ, ಪ್ರಾಣಿ-ಪಕ್ಷಿ ಇತ್ಯಾದಿಗಳಲ್ಲಿ ಈ ಎಲ್ಲಾ ಅಂಗಗಳು ಪೂರ್ಣಪ್ರಮಾಣದಲ್ಲಿ ವಿಕಾಸನ ಹೊಂದಿರುವುದಿಲ್ಲ. ಹಾಗಾಗಿ ಅವುಗಳ ಶರೀರವನ್ನು ಪುರುಷಶರೀರ ಎಂದು ಹೇಳುವುದಿಲ್ಲ. ಕೇವಲ ಮನುಷ್ಯಶರೀರವನ್ನು ಮಾತ್ರ ಪುರುಷಶರೀರ ಎನ್ನುತ್ತಾರೆ. ಅದಕ್ಕಾಗಿ ಭಗವಂತ ಪುರುಷರೂಪನಾಗಿಯೇ ಅದನ್ನು ಸೃಷ್ಟಿಮಾಡಿದ). 


ಆತ್ಮಾನಂ ಚಾಸ್ಯ ನಿರ್ಭಿಣ್ಣಂ ವಾಚಸ್ಪತಿರಥಾsವಿಶತ್ ।  

ಬುದ್ದ್ಯಾ ಸ್ವಾಂಶೇನ ಯೇನಾಸೌ ನಿಶ್ಚಯಂ ಪ್ರತಿಪದ್ಯತೇ ॥೨೪॥


ಅಹಮಸ್ಯ ವಿನಿರ್ಭಿಣ್ಣಮಭಿಮಾನೋSವಿಶತ್ ಪದಮ್  । 

ಕರ್ತ್ರಾಂsಶೇನ ಚ  ಯೇನಾಸೌ ಕರ್ತವ್ಯಂ ಪ್ರತಿಪದ್ಯತೇ ॥೨೫॥


ಸತ್ತ್ವಂ ಚಾಸ್ಯ ವಿನಿರ್ಭಿಣ್ಣಂ  ಮಹಾನ್ ಧಿಷ್ಣ್ಯಮುಪಾವಿಶತ್ । 

ಚಿತ್ತೇನಾಂಶೇನ ಯೇನಾಸೌ ವಿಜ್ಞಾನಂ ಪ್ರತಿಪದ್ಯತೇ ॥೨೬॥


“ಅಹಂ ಸತ್ತ್ವಮಿತಿ ದ್ವೇಧಾ ಬ್ರಹ್ಮನಾಡ್ಯಾ ಅವಾನ್ತರಮ್ । ಕರ್ತೃನಾಮಾ  ತ್ವಹಙ್ಕಾರಸ್ತ್ವಹನ್ನಾಡ್ಯಾಂ ವ್ಯವಸ್ಥಿತಃ । ಸತ್ತ್ವನಾಡ್ಯಾಂ ತಥಾ  ಚಿತ್ತಮಭಿಮಾನೋ ಹರಸ್ತಥಾ । ಅಹನ್ನಾಡ್ಯಾಂ ಸತ್ತ್ವನಾಡ್ಯಾಂ ಬ್ರಹ್ಮಾ ಚೈವ ವ್ಯವಸ್ಥಿತಃ । ಆತ್ಮನಾಡ್ಯಾಂ ತಥಾ ಬುದ್ದಿಸ್ತತ್ರಸ್ಥಶ್ಚ ಬೃಹಸ್ಪತಿಃ” ಇತಿ ಚ  ॥*॥ 


ನಮ್ಮ ದೇಹದ ಒಳಗೆ ಒಂದು ಬ್ರಹ್ಮನಾಡಿ ಇದೆ. ನಾಭೀಮೂಲದಿಂದ ಶಿರೋಮಧ್ಯದ ತನಕ ಹರಿಯುವ ಇದನ್ನು ಆತ್ಮನಾಡಿ ಅಥವಾ ಸುಷುಮ್ನನಾಡಿ ಎಂದೂ ಕರೆಯುತ್ತಾರೆ. ಅದರ ಮಧ್ಯದಲ್ಲಿರುವ ಹೃದಯದಲ್ಲಿ ಹೃತ್ಕಮಲವಿದೆ(thymus gland). ಅಲ್ಲೇ  ಭಗವಂತ, ಜೀವ, ಪ್ರಾಣ, ಮನೋಭಿಮಾನಿಗಳಾದ ಗರುಡ-ಶೇಷ-ರುದ್ರ ಇರುವುದು. ಎಲ್ಲಾ ಇಂದ್ರಿಯಗಳ ಮೂಲ ಇರುವುದೂ ಅಲ್ಲಿಯೇ. ಸಂಸ್ಕೃತದಲ್ಲಿ ಹೃದಯಕ್ಕೆ ‘ಸಂದೇಹ’ ಎನ್ನುತ್ತಾರೆ. ಸಂದೇಹ ಎಂದರೆ ಸಮೀಚೀನವಾದ ದೇಹದ ಪ್ರಮುಖ ಭಾಗ.

ಚತುರ್ಮುಖನ ದೇಹದಲ್ಲಿನ ಆತ್ಮನಾಡಿ ತೆರೆದುಕೊಂಡಿತು ಮತ್ತು ಅಲ್ಲಿ ವಾಚಸ್ಪತಿ(ಬೃಹಸ್ಪತಿ) ಪ್ರವೇಶಿಸಿ ನೆಲೆ ನಿಂತ. ಇದರಿಂದ ಬುದ್ದಿ ಕೆಲಸಮಾಡಲು ಪ್ರಾರಂಭಿಸಿತು. ಇದರಿಂದ ಸರಿ-ತಪ್ಪುಗಳ ನಿರ್ಣಯ ಬಂತು.

ನಂತರ ಬ್ರಹ್ಮನಾಡಿಯಲ್ಲಿ ಇನ್ನೊಂದು ಕವಲು ‘ಅಹಂನಾಡಿ’ ತೆರೆದುಕೊಂಡಿತು.  ಅಲ್ಲಿ ಶಿವ ನೆಲೆನಿಂತು ಪ್ರೇರಣೆ ಮಾಡಿದ. ಇದರಿಂದ ಅಭಿಮಾನ (awareness of self) ಜಾಗೃತವಾಯಿತು. 

ಬ್ರಹ್ಮನಾಡಿಯ ಇನ್ನೊಂದು ಕವಲು ಸತ್ವನಾಡಿ. ಅಲ್ಲಿ ಸ್ವಯಂ ಚತುರ್ಮುಖ ಪ್ರವೇಶಿಸಿದ. ಅದು ನಮ್ಮ ನೆನಪಿನ ಬಂಡಾರ. ಬ್ರಹ್ಮಾಂಡದಲ್ಲಿ ಯಾವುದು ಮಹತತ್ತ್ವವೋ ಅದೇ ಪಿಂಡಾಡದಲ್ಲಿ ಚಿತ್ತ. 

[ಸತ್ವನಾಡಿಯ ಇನ್ನೊಂದು ಹೆಸರು ವಿಜ್ಞಾನನಾಡಿ.  ಚತುರ್ಮುಖನ ಇನ್ನೊಂದು ಹೆಸರೂ ವಿಜ್ಞಾನಶಕ್ತಿ.  ವಿಜ್ಞಾನ ಎಂದರೆ ನಮ್ಮ ಚಿತ್ತದಲ್ಲಿ ತಿಳಿದಿರುವ ವಿಷಯಗಳಿಂದ, ತಿಳಿಯದ ವಿಷಯಗಳನ್ನು ಊಹಿಸಿ ತೀರ್ಮಾನಕ್ಕೆ ಬರುವುದು. ಅದು ತಾರ್ಕಿಕ. ಚಿತ್ತದ ವಿಸ್ತಾರವೇ ಚೇತನ ಮತ್ತು ಅದರ ಅಭಿಮಾನಿ ಶ್ರೀಲಕ್ಷ್ಮಿ. ಅದು ಜನ್ಮ-ಜನ್ಮಾಂತರದ ಸಮಸ್ತ ನೆನಪೂ ಇರುವ ಅದ್ಭುತ ಅಂತರಂಗ ಪ್ರಪಂಚ.  ಚೇತನದ ಕುರಿತು ಇಲ್ಲಿ ವಿಶೇಷವಾಗಿ ಹೇಳಿಲ್ಲ. ಕನಸಿನ ಪ್ರಪಂಚವೂ ಚಿತ್ತದ ಚಮತ್ಕಾರ. ಷಟ್-ಪ್ರಶ್ನ ಉಪನಿಷತ್ ಈ ಕುರಿತು ವಿವರಿಸುತ್ತದೆ].

ಹೀಗೆ ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಲ್ಲವೂ ಕೆಲಸಮಾಡತೊಡಗಿತು. ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ದೆ) ಒಂದು ಪೂರ್ಣಾಂಗನಾದ, ಮನುಷ್ಯನಿಗೆ ಬೇಕಾದ  ವ್ಯವಸ್ಥೆ ಮೊದಲು ಚತುರ್ಮುಖನ ಶರೀರದಲ್ಲಿ ಆಯಿತು. ಮುಂದೆ ಭಗವಂತ, ಚತುರ್ಮುಖ, ಮುಖ್ಯಪ್ರಾಣ, ಶಿವನಿಂದ ಮತ್ತು  ಸಮಸ್ತ ದೇವತೆಗಳಿಂದ  ಲೋಕದಲ್ಲಿ ಸೃಷ್ಟಿಯ ಪುನರಾವರ್ತಿಯಾಗುತ್ತದೆ. ಹೀಗೆ ಪ್ರಪಂಚ ನಿರ್ಮಾಣವಾಗುತ್ತದೆ.


ಹೀಗೆ ನಿರ್ಮಾಣವಾದ ಮನುಷ್ಯರು ಎಲ್ಲರೂ ಒಂದೇ ರೀತಿ ಇರಲಿಲ್ಲ. ಮನುಷ್ಯರಲ್ಲಿ ಕೆಲವರು ಬ್ರಾಹ್ಮಣರಾದರು, ಕೆಲವರು ಕ್ಷತ್ರಿಯರಾದರು, ಕೆಲವರು ವೈಶ್ಯರಾದರು ಮತ್ತೆ ಕೆಲವರು ಶೂದ್ರರಾದರು. 

ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ನಾವಿಲ್ಲಿ ವರ್ಣ ಪದ್ದತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.  ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ- “ಚಾತುರ್ವರ್ಣ್ಯಮ್  ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ”  - ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಾನು ನಿರ್ಮಿಸಿದೆ.  ಇಲ್ಲಿ  ಕೃಷ್ಣ ಹೇಳುತ್ತಾನೆ: "ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು". ನಮಗೆ ತಿಳಿದಂತೆ ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರೂ ಇದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ, ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. 

ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹುಟ್ಟುಗುಣ ಅಥವಾ ಸ್ವಭಾವ(ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತ್ರೈಗುಣ್ಯಕ್ಕೆ ಸಂಬಂಧಪಟ್ಟಿದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದವ ಬ್ರಾಹ್ಮಣ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದವ ಕ್ಷತ್ರಿಯ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ.

ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು" ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ;  ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ.  ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ.

ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ.  ಜಾತಿ- ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು.   ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೇ.  ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು.  ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ  ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳೂ ಹುಟ್ಟಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ  ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ 'ಕ್ಷತ್ತಾ'(ಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! (ಮಹಾಭಾರತ ಕಾಲದಲ್ಲೇ ಜಾತಿ ರಾಜಕೀಯ ದುರ್ಯೋಧನನಿಂದ ಪ್ರಾರಂಭವಾಗಿರುವುದನ್ನು ನಾವು ಕಾಣಬಹುದು).

ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ. ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ  ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ  ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ: “ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ  ಯದ್ವೈಶ್ಯಃ  ಪದ್ಭ್ಯಾಂಮ್ ಶೂದ್ರೋ ಅಜಾಯತ”. ದೇಹಕ್ಕೆ ಪಂಚಾಗವಾಗಿರುವ ಹಾಗು ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರೆಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ  ಗುಣ  ಇಲ್ಲದವ  ಮನುಷ್ಯನೇ  ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(majority), ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು  ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.

ವೈಶ್ಯನನ್ನು  ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ(Production).  ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ದತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ  ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ.

 ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration). ಹಾಗಾಗಿ ಅವರನ್ನು ತೋಳಿಗೆ ಹೋಲಿಸಿದ್ದಾರೆ.

ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ  ಜ್ಞಾನದ ಮಾರ್ಗದರ್ಶನ(Wisdom). ಅದಕ್ಕಾಗಿ  ಇವರನ್ನು  ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ.

ಹೀಗೆ ಈ ನಾಲ್ಕು ವರ್ಣಗಳು  ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲ. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ  ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ ಹೇಳಿರುವುದುಂನು ಕಾಣುತ್ತೇವೆ. 

ಸಾತ್ವಿಕರಾದ ದೇವತೆಗಳಲ್ಲಿ ವರ್ಣವಿಭಾಗ ಇಲ್ಲ; ತಾಮಸರಾದ ಅಸುರರಲ್ಲಿ ವರ್ಣವಿಭಾಗ ಇಲ್ಲ; ರಾಜಸರಾದ ಮನುಷ್ಯರಲ್ಲಿ ಮಾತ್ರವೇ ಈ ವ್ಯವಸ್ಥೆ. ರಾಜಸರಾದ ಮನುಷ್ಯರಲ್ಲಿಯೂ ಮತ್ತೆ ಮೂರು ವಿಧ: ಸಾತ್ವಿಕ-ರಾಜಸರು, ರಾಜಸ-ರಾಜಸರು, ಮತ್ತು ತಾಮಸ-ರಾಜಸರು. ತಮೋಯೋಗ್ಯರಾದ ತಾಮಸ-ರಾಜಸರಲ್ಲಿ ವರ್ಣವ್ಯವಸ್ಥೆ ಇಲ್ಲ. ನಿತ್ಯ ಸಂಸಾರಿಗಳಾದ ರಾಜಸ-ರಾಜಸರಲ್ಲೂ ವರ್ಣವ್ಯವಸ್ಥೆ ಇಲ್ಲ, ಮುಕ್ತಿ ಯೋಗ್ಯರಾದ ಸಾತ್ವಿಕ-ರಾಜಸರಲ್ಲಿ ಮಾತ್ರವೇ ಈ ವಿಭಾಗ.

 

ಬನ್ನಿ, ಈ ಎಲ್ಲಾ ಹಿನ್ನೆಲೆಯೊಂದಿಗೆ ಮುಂದಿನ ಶ್ಲೋಕವನ್ನು ನೋಡೋಣ-


Shrimad BhAgavata in Kannada -Skandha-03-Ch-07_01

 ಸಪ್ತಮೋSಧ್ಯಾಯಃ

ಭಗವಂತನ ಸೃಷ್ಟಿಲೀಲೆಯ ವಿವರಣೆ-ವಿರಾಟ್ ಶರೀರ 


ತನ್ನ ಸೃಷ್ಟಿ ನಿರ್ಮಾಣಕ್ಕಾಗಿ ಸೃಷ್ಟಿಸಲ್ಪಟ್ಟ ದೇವತೆಗಳು ತಮ್ಮ ಅಸಹಾಯಕತೆಯನ್ನು ಭಗವಂತನ ಮುಂದೆ ತೋಡಿಕೊಂಡಾಗ, ಅವರ ಪ್ರಾರ್ಥನೆಯನ್ನು ಕೇಳಿದ ಭಗವಂತ ಏನು ಮಾಡಿದ ಎನ್ನುವುದನ್ನು ಇಲ್ಲಿ ವಿವರಿಸುತ್ತಾರೆ: 


ಋಷಿರುವಾಚ

 ಇತಿ ತಾಸಾಂ ಸ್ವಶಕ್ತೀನಾಮಸತೀನಾಂ ಸಮೇತ್ಯ ಸಃ  ।

 ಪ್ರಸುಪ್ತಲೋಕತನ್ತ್ರಾಣಾಂ ನಿಶಾಮ್ಯ  ಗತಿಮೀಶ್ವರಃ ॥೦೧॥


ಯಾವ ನೆರವೂ ಇಲ್ಲದೇ ಎಲ್ಲವನ್ನೂ ಮಾಡಬಲ್ಲ ಸ್ವರೂಪ ಸಾಮರ್ಥ್ಯವುಳ್ಳ(ಈಶ್ವರಃ) ಭಗವಂತ, ತನ್ನ ಅಧೀನವಾಗಿರುವ, ಬೇರೆಬೇರೆ ಯೋಚನೆ ಮಾಡುತ್ತಿರುವ ದೇವತೆಗಳನ್ನು ಕಂಡು, ತನ್ನೊಳಗೇ ತಾನು ನಕ್ಕ. 


 ಕಾಲಸಞ್ಜ್ಞಾಂ ತತೋ ಮಾಯಾಂ   ಬಿಭ್ರಚ್ಛಕ್ತಿಮುರುಕ್ರಮಃ ।

 ತ್ರಯೋವಿಂಶತಿತತ್ತ್ವಾನಾಂ ಗಣಂ ಯುಗಪದಾವಿಶತ್  ॥೦೨॥ 


ಎಲ್ಲವನ್ನೂ ಮಾಡುವ ಶಕ್ತಿ ಹೊಂದಿದ್ದರೂ, ಎಲ್ಲವನ್ನೂ ಗಣಿತಬದ್ಧವಾಗಿ, ಒಂದು ನಿರ್ದಿಷ್ಟ ಕ್ರಮದಲ್ಲೇ ಮಾಡುವ(ಉರುಕ್ರಮಃ) ಭಗವಂತ,  ತನ್ನ ಪತ್ನಿಯಾದ, ಕಾಲಕಾಲಕ್ಕೆ ಏನನ್ನು ಸೃಷ್ಟಿಮಾಡಬೇಕೋ ಅದನ್ನು ಭಗವಂತನ ನಿಯತಿಯಂತೆ ಅವನ ಜೊತೆಯಲ್ಲಿದ್ದು ಮಾಡುವ ಶ್ರೀಲಕ್ಷ್ಮೀದೇವಿಯೊಂದಿಗೆ, ಇಪ್ಪತ್ಮೂರು ತತ್ತ್ವಾಭಿಮಾನಿ ದೇವತೆಗಳ ಒಳಗೆ ಪ್ರವೇಶಿಸಿದ. ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಮನಸ್ಸು, ಅಹಂಕಾರ, ಮಹತತ್ತ್ವ,  ಇವೇ ಆ ಇಪ್ಪತ್ಮೂರು ತತ್ತ್ವಗಳು. 


 ಸೋSನುಪ್ರವಿಷ್ಟೋ ಭಗವಾಂಶ್ಚೇಷ್ಟಾರೂಪೇಣ ತಂ ಗಣಮ್ ।

 ಭಿನ್ನಂ ಸಂಯೋಜಯಾಮಾಸ ಸುಪ್ತಂ ಕರ್ಮ ಪ್ರಬೋಧಯನ್  ॥೦೩॥


ಮೇಲಿನ ಎರಡು ಶ್ಲೋಕಗಳಲ್ಲಿ ದೇವರನ್ನು ಈಶ್ವರಃ, ಉರುಕ್ರಮಃ ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದು, ಇಲ್ಲಿ ಭಗವಾನ್ ಎಂದು ಸಂಬೋದಿಸುವುದನ್ನು ಕಾಣುತ್ತೇವೆ. ‘ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರಿಯಃ ।  ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಮ್ ಭಗ ಇತೀರ್ಣಾ’ (ವಿಷ್ಣುಪುರಾಣ)  ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಈ ಆರು ಗುಣಗಳಿಂದ ಪೂರ್ಣನಾಗಿರುವವನು ದೇವೋತ್ತಮ ಪರಮಪುರುಷನಾದ, ಜಗತ್ತಿನ ಸರ್ವ ಚಲನೆಗೂ ಕಾರಣನಾದ  ಭಗವಂತ, ಶಕ್ತಿ ಸ್ವರೂಪವಾಗಿರುವ ತಾಯಿ ಶ್ರೀಲಕ್ಷ್ಮಿಯೊಂದಿಗೆ, ಆ ಇಪ್ಪತ್ಮೂರು ದೇವತೆಗಳನ್ನು ಒಗ್ಗೂಡಿಸಿ, ಅವರೊಳಗೆ  ಪ್ರವೇಶಿಸಿ, ಅವರಲ್ಲಿ ಸುಪ್ತವಾದ ಶಕ್ತಿಯನ್ನು ಎಚ್ಚರಿಸಿದ. 


 ಪ್ರಬುದ್ಧಕರ್ಮ ದೈವೇನ ತ್ರಯೋವಿಂಶತಿಕೋ ಗಣಃ ।

 ಪ್ರೇರಿತೋSಜನಯತ್ ಸ್ವಾಭಿರ್ಮಾತ್ರಾಭಿರಧಿಪೂರುಷಮ್  ॥೦೪॥


ಎಲ್ಲಾ ದೇವತೆಗಳಿಗೂ ಪ್ರಭು(ದೈವ*)ವಾದ ಭಗವಂತನ ಪ್ರವೇಶವಾದಾಗ ಎಲ್ಲಾ ಇಪ್ಪತ್ಮೂರು ತತ್ತ್ವಗಳ ಜೊತೆಗೆ ಇಪ್ಪತ್ತಮೂರು ತತ್ತ್ವಾಭಿಮಾನಿ ದೇವತೆಗಳು ಒಂದಾಗಿ ಒಂದು ತಾತ್ತ್ವಿಕ ಆಕಾರವನ್ನು ಹೊಂದಿದರು. ಹೀಗೆ ಚತುರ್ಮುಖನ^ ನೆಲೆಯಾದ ಬ್ರಹ್ಮಾಂಡ ರೂಪುಗೊಂಡಿತು. ಭಗವಂತನ ಪ್ರವೇಶದಿಂದ ಆ ದೇವತೆಗಳಿಗೆ ತಾವು ಏನು ಮಾಡಬೇಕು ಎನ್ನುವುದು ಹೊಳೆಯಿತು.  ಮತ್ತು ಅವರೆಲ್ಲರೂ ತಮ್ಮ ಶಕ್ತಿಯಿಂದ, ತಮ್ಮಿಂದ ಅಭಿಮನ್ಯಮಾನವಾದ ವಸ್ತುವನ್ನು ಜೋಡಿಸಿದರು.    

[* “ಈಶ್ವರೋ ದೈವಮುದ್ದಿಷ್ಟಂ ಸರ್ವಸ್ಯಾಪಿ ಪ್ರಭುತ್ವತಃ” ಯಾರು ಎಲ್ಲಾ ದೇವತೆಗಳಿಗೂ ಸ್ವಾಮಿಯೋ ಅವನು ದೈವ. “ಪವಿತ್ರಾಣಾಂ ಪವಿತ್ರಂ ಯೋ ಮಙ್ಗಲಾನಾಂ ಚ ಮಙ್ಗಲಮ್ |  ದೈವತಂ ದೇವತಾನಾಂ ಚ ಭೂತಾನಾಂ ಯೋsವ್ಯಯಃ ಪಿತಾ” (ವಿಷ್ಣುಸಹಸ್ರನಾಮ) ಹೀಗಾಗಿ ಸಂಸ್ಕೃತದಲ್ಲಿ ದೈವ ಎಂದರೆ ನಾರಾಯಣ ಎಂದರ್ಥ. “ಆತ್ಮಶಕ್ತಿಃ ಪ್ರಕೃತಿಃ” ಆತ್ಮಶಕ್ತಿ ಎಂದರೆ ಪ್ರಕೃತಿ(ಶ್ರೀಲಕ್ಷ್ಮಿ).  ^ಮೂಲಭೂತವಾಗಿ ಪುರುಷ ಎಂದರೆ ಭಗವಂತ. ಎರಡನೇ ಅರ್ಥದಲ್ಲಿ ಬ್ರಹ್ಮಾಂಡದ ಅಭಿಮಾನಿಯಾದ ಚತ್ರುರ್ಮುಖ] 


 ಸ ವೈ ವಿಶ್ವಸೃಜಾಂ ಗರ್ಭೋ  ದೈವಕರ್ಮಾತ್ಮಶಕ್ತಿಮಾನ್ ।

 ವಿಬಭಾಜಾsತ್ಮನಾSSತ್ಮಾನಮೇಕಧಾ ದಶಧಾ ತ್ರಿಧಾ ॥೦೭॥


ಈ ಶ್ಲೋಕ ಚತುರ್ಮುಖನನ್ನು ಕುರಿತು ಹೇಳುವ ಶ್ಲೋಕವಾಗಿದೆ(ಅನೇಕರು ಇದನ್ನು ತಪ್ಪಾಗಿ ಭಗವಂತನ ಪರ ವ್ಯಾಖ್ಯಾನ ಮಾಡುವುದಿದೆ). ಇಪ್ಪತ್ಮೂರು ದೇವತೆಗಳ ಗರ್ಭ (ಬೀಜಸ್ಥಾನ), ಪ್ರಥಮಶಕ್ತಿ, ಬ್ರಹ್ಮಾಂಡದ ಅಭಿಮಾನಿಯಾಗಿ ಚತುರ್ಮುಖ ಬಂದ. ಆ ಚತುರ್ಮುಖನ ಮುಖೇನ ಈ ಜಗತ್ತನ್ನು ಸೃಷ್ಟಿಮಾಡುವುದಕ್ಕಾಗಿ ಭಗವಂತ(ದೈವ) ಚತುರ್ಮುಖನಲ್ಲಿ ತುಂಬಿದ. ಭಗವಂತನ ಜೊತೆಗೆ ಜಡಪ್ರಕೃತಿಮಾನಿನಿಯರಾದ ಲಕ್ಷ್ಮೀ-ಸರಸ್ವತಿಯರು ಚತುರ್ಮುಖನಲ್ಲಿ  ತಮ್ಮ ಶಕ್ತಿ ಆದಾನಮಾಡಿ, (ಭಗವಂತನ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಹಾಗೂ ಸರಸ್ವತೀ ದೇವಿಯ ನೆರವು) ಅವನಿಗೆ ಕರ್ತೃತ್ವಶಕ್ತಿಯನ್ನು ಕೊಟ್ಟು, ಪ್ರಪಂಚ ಸೃಷ್ಟಿಯಾಗುವಂತೆ ಮಾಡಿದರು.

ಭಗವಂತನ ಶಕ್ತಿ ತನ್ನೊಳಗೆ ಪ್ರವೇಶಿಸುತ್ತಿದ್ದಂತೆ, ಭಗವಂತನ ಇಚ್ಛೆಯಂತೆ ಚತುರ್ಮುಖ ತನ್ನನ್ನು ತಾನು ವಿಭಾಗ ಮಾಡಿಕೊಂಡ. ಹೃದಯದಲ್ಲಿ ಏಕರೂಪನಾಗಿ,  ದಶಪ್ರಾಣರೊಂದಿಗೆ* ದಶರೂಪನಾಗಿ, ಆ ದಶರೂಪದಲ್ಲಿ ಪ್ರತಿಯೊಂದರಲ್ಲೂ ಮತ್ತೆ ಮೂರು ರೂಪದಲ್ಲಿ(ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವ ರೂಪದಲ್ಲಿ ) ಚತುರ್ಮುಖ ವಿಭಾಗ ಹೊಂದಿದ. 

[*ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೈಕಾಲ, ದೇವದತ್ತ ಮತ್ತು ಧನಂಜಯ ಎನ್ನುವ ಮುಖ್ಯಪ್ರಾಣನ ದಶರೂಪಗಳು. ಇವು ಚತುರ್ಮುಖನ ದಶರೂಪವನ್ನು ಪ್ರವೇಶಿಸಿದವು. ಇವು ಇಂದ್ರಿಯಗಳಲ್ಲ. ವ್ಯೋಮಸಂಹಿತೆಯಲ್ಲಿ ಮುಖ್ಯಪ್ರಾಣನ ದಶರೂಪದ ಕುರಿತು ಹೇಳಿದ್ದಾರೆ- “ಪ್ರಾಣಾದಿಪಞ್ಚಕಂ ಚೈವ ತಥಾ ನಾಗಾದಿಪಞ್ಚಕಮ್  । ಏವಂ ತು ದಶಧಾ ಪ್ರಾಣ ಅಧ್ಯಾತ್ಮಾದಿ  ತ್ರಿರ್ಧsಖಿಲಾಃ”  ಇತಿ  ವ್ಯೋಮಸಂಹಿತಾಯಾಮ್  ]


ಏಷ ಹ್ಯಶೇಷಸತ್ತ್ವಾನಾಮಾತ್ಮಾಂsಶಃ ಪರಮಾತ್ಮನಃ । 

ಆದ್ಯೋSವತಾರೋ ಯತ್ರಾಸೌ ಭೂತಗ್ರಾಮೋ ವಿಭಾವ್ಯತೇ ॥೦೮॥


 ಸಾಧ್ಯಾತ್ಮಂ ಸಾಧಿಭೂತಂ ಚ ಸಾಧಿದೈವಮಿತಿ ತ್ರಿಧಾ  ।

 ವಿರಾಟ್-ಪ್ರಾಣೋ ದಶವಿಧ ಏಕಧಾ ಹೃದಯೇನ ಚ ॥೦೯॥


ಸಮಸ್ತಜೀವರಿಗೆ ಸ್ವಾಮಿಯಾದ, ಸಮಸ್ತ ತತ್ತ್ವನಿಯಾಮಕನಾಗಿರುವ ಪರಮಾತ್ಮ, ತನ್ನ ಸ್ವರೂಪಾಂಶದಲ್ಲಿ ಸೃಷ್ಟಿ ನಿರ್ಮಾಣಕ್ಕಾಗಿ ಪುರುಷನಾಮಕ ರೂಪವನ್ನು ಆವಿರ್ಭಾವ ಮಾಡಿಕೊಂಡು, ಅದನ್ನು ಚತುರ್ಮುಖನಲ್ಲಿ ಪ್ರವೇಶಮಾಡಿದ. (ಸಮಸ್ತ ಚರಾಚರ ಪ್ರಪಂಚ ಭಗವಂತನಲ್ಲೇ ಇದ್ದು, ಮುಂದೆ ಅದು ತನ್ನ ಆಕಾರವನ್ನು ಪಡೆದು, ನಾನಾ ವಸ್ತುವಿನ ರೂಪದಲ್ಲಿ  ಪ್ರಪಂಚವಾಯಿತು). ಹೀಗೆ ಪ್ರವೇಶಿಸಿದ ಪರಮಾತ್ಮ ಮೂರು ವಿಧದಲ್ಲಿ (ಚತುರ್ಮುಖ ಅಧಿಷ್ಠಾನ ಮಾಡಿರುವ ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವದಲ್ಲಿ) ತುಂಬಿದ. ಚತುರ್ಮುಖನಲ್ಲಿ ಹತ್ತು ಬಗೆಯಿಂದ ಪ್ರಾಣಶಕ್ತಿ  ತುಂಬಿತು. ಆಗ ಚತುರ್ಮುಖನ ಇಂದ್ರಿಯಗಳು ಕೆಲಸ ಮಾಡಲಾರಂಭಿಸಿದವು. ಅವನು ದಶಮುಖನಾದ ಅವನಲ್ಲಿ ಭಗವಂತ ದಶಮುಖನಾಗಿ ನಿಂತ. ಹೃದಯದಲ್ಲಿ ಚತುರ್ಮುಖ ಏಕರೂಪದಲ್ಲಿ ನಿಂತ. ಅಲ್ಲಿ ಭಗವಂತ ‘ಹೃದಯ’ ರೂಪನಾಗಿ ನೆಲಿಸಿದ. ಹೀಗೆ ಪ್ರಾರಂಭದಲ್ಲೇ ಹತ್ತು, ಮೂರು ಹಾಗು ಏಕ ರೂಪಗಳಿಂದ ಸೃಷ್ಟಿಕಾರ್ಯ ಪ್ರಾರಂಭವಾಯಿತು. ತದನಂತರ ಬ್ರಹ್ಮನ ವಿರಾಟ್ ಶರೀರದಲ್ಲಿ ಒಂದೊಂದೇ ಇಂದ್ರಿಯಗಳ ಅಭಿವ್ಯಕ್ತಿ ಪ್ರಾರಂಭವಾಯಿತು. ಇಂದ್ರಿಯ ದೇವತೆಗಳು ಇಂದ್ರಿಯಗಳೊಂದಿಗೆ ಅಲ್ಲಿ ಆಶ್ರಯಪಡೆದರು.


Thursday, January 23, 2025

Shrimad BhAgavata in Kannada -Skandha-03-Ch-06_03

 ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಙ್ಗಿನಃ ।

ನಾನಾತ್ವಾತ್ ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಞ್ಜಲಯೋ ವಿಭುಮ್ ॥೧೫॥


ಈ ಅಧ್ಯಾಯದಲ್ಲಿ ಇಲ್ಲಿಯ ತನಕ ಅನೇಕ ತತ್ತ್ವಗಳ ಸೃಷ್ಟಿಯ ಕುರಿತಾದ ವಿವರಣೆಯನ್ನು ನೋಡಿದೆವು. ಆದರೆ ಈ ಮೇಲಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ: “ಯಾವುದೇ ತತ್ತ್ವದ ಸೃಷ್ಟಿ ಬರೀ ತತ್ತ್ವದ ಸೃಷ್ಟಿಯಲ್ಲ, ಅದು ಅದರ ಅಭಿಮಾನಿ ದೇವತೆಗಳ ಸೃಷ್ಟಿ” ಎಂದು. ಈ ಹಿಂದೆ ಹೇಳಿದಂತೆ: ಮಹತತ್ತ್ವದ ದೇವತೆ ಚತುರ್ಮುಖ, ಅಹಂಕಾರ ತತ್ತ್ವದ ದೇವತೆ ಶಿವ. ಆನಂತರ ಹತ್ತು ಇಂದ್ರಿಯಾಭಿಮಾನಿ ದೇವತೆಗಳು, ಪಂಚಭೂತಗಳ ದೇವತೆಗಳು, ಪಂಚ ತನ್ಮಾತ್ರೆಗಳ ದೇವತೆಗಳು. ಹೀಗೆ ಇದು ಮುಂದುವರಿಯುತ್ತದೆ.

ನಮಗೆ ತಿಳಿದಂತೆ ಪಂಚಭೂತಗಳು ಅಭಿಮಾನಿ ದೇವತೆಗಳ ಹಾಗು ಅವರಿಂದ ಅಭಿಮನ್ಯಮಾನವಾದ ಪಂಚಭೂತಗಳ ಸೃಷ್ಟಿ ಈಗಾಗಲೇ ಆಗಿದೆ. ಆದರೆ ಈ ಪಂಚಭೂತಗಳು ಇಂದು ನಾವು ಕಾಣುವ ಪಂಚಭೂತದಂತೆ ಸೃಷ್ಟಿಯಾಗಿಲ್ಲ. ಏಕೆಂದರೆ ಇಂದು ನಾವು ಕಾಣುವ ಮಣ್ಣು, ನೀರು, ಬೆಂಕಿ ಶುದ್ಧವಾದುದಲ್ಲ. ಅದು  ಮಣ್ಣು-ನೀರು-ಬೆಂಕಿಯ ಮಿಶ್ರಣ. ಆದರೆ ಸೃಷ್ಟಿಯ ಈ ಘಟ್ಟದಲ್ಲಿ ಪರಿಶುದ್ಧ ಪಂಚಭೂತಗಳು ಮಾತ್ರ ಸೃಷ್ಟಿಯಾಗಿವೆ. ಅವು ಇನ್ನೂ ಮಿಶ್ರವಾಗಿಲ್ಲ. 

ಈವರೆಗೆ ಸೃಷ್ಟಿಯಾಗಿರುವ ಎಲ್ಲಾ ತತ್ತ್ವಗಳ ಅಭಿಮಾನಿ ದೇವತೆಗಳನ್ನು ಇಲ್ಲಿ ‘ಭಗವಂತನ ಕಲೆಗಳು’ ಎಂದು ಕರೆದಿದ್ದಾರೆ. ಭಗವಂತನ ಕಲೆಗಳು ಎಂದರೆ ಏನು ಎನ್ನುವ ವಿವರಣೆಯನ್ನು ನಾವು ಪ್ರಶ್ನೋಪನಿಷತ್ತಿನಲ್ಲಿ ಕಾಣುತ್ತೇವೆ. “ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ॥೬-೪॥  ಭಗವಂತನ ಅಧೀನವಾಗಿರುವ ಹದಿನಾರು ದೇವತೆಗಳೇ ಆ ಹದಿನಾರು  ಕಲೆಗಳು. “ಈ ಎಲ್ಲಾ ದೇವತೆಗಳು ಕಾಲಾಧೀನವಾಗಿ ದೇಹವನ್ನು ಪಡೆದರು” ಎಂದಿದ್ದಾರೆ ಮೈತ್ರೇಯರು. ಇಲ್ಲಿ ‘ಕಾಲ’ ಎಂದರೆ ಸಹಜವಾಗಿ ಸರ್ವಸಂಹಾರಕನಾದ ಭಗವಂತ ಎಂದರ್ಥ. ಇದಲ್ಲದೆ ಕಾಲಾಭಿಮಾನಿಯಾದ ಚತುರ್ಮುಖನೂ ಕಾಲ ಶಬ್ದವಾಚ್ಯ. ಏಕೆಂದರೆ ಯಾರು ಎಂದು ಹುಟ್ಟಬೇಕು ಎನ್ನುವ ವ್ಯವಸ್ಥೆಯ ಜವಾಬ್ದಾರಿಯನ್ನು ಭಗವಂತ ಚತುರ್ಮುಖನಿಗೆ ನೀಡಿದ್ದಾನೆ. ಹಾಗಾಗಿ ಚತುರ್ಮುಖ ಒಂದು ರೂಪದಲ್ಲಿ ಕಾಲ ನಿಯಾಮಕ. ಇನ್ನು ಕಾಲ ಶಬ್ದದ ಪ್ರಸಿದ್ಧವಾದ ಅರ್ಥ ಲಕ್ಷ್ಮೀದೇವಿ. ಭಗವಂತನ ಕೈಯಲ್ಲಿರುವ ಲಕ್ಷ್ಮೀಸ್ವರೂಪವಾಗಿರುವ ಸುದರ್ಶನ ಚಕ್ರವನ್ನು ಶ್ರೀಚಕ್ರ ಅಥವಾ ಕಾಲ ಎಂದು ಕರೆಯುತ್ತಾರೆ. ಹೀಗಾಗಿ ಕಾಲ ಎಂದರೆ ಚಿತ್ಪ್ರಕೃತಿ. ಒಟ್ಟಿನಲ್ಲಿ ಹೇಳಬೇಕೆಂದರೆ ಚತುರ್ಮುಖನ ಎರಡು ರೂಪಗಳು(ಕಾಲಾಭಿಮಾನಿ ಹಾಗು ಜೀವಾಭಿಮಾನಿ) ಮತ್ತು ಪ್ರಕೃತಿ ಅಭಿಮಾನಿನಿಯಾದ ಶ್ರೀಲಕ್ಷ್ಮಿ (ಚಿತ್ಪ್ರಕೃತಿ) ಈ ಮೂವರಿಂದ ಭಗವತನ ಕೃಪಾದೃಷ್ಟಿ ಬಿದ್ದ ಸಮಯದಲ್ಲಿ  ದೇವತೆಗಳ ಶರೀರ ಸೃಷ್ಟಿಯಾಯಿತು. ಈ ಮೇಲಿನ ವಿವರಣೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ, ಪಾದ್ಮಪುರಾಣದ ಪ್ರಮಾಣಶ್ಲೋಕವನ್ನು ನೀಡಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಕಾಲಮಾಯಾಂಶಲಿಙ್ಗಿನಃ । ತನ್ನಿಮಿತ್ತಶರೀರಾಃ । ಹಿರಣ್ಯಗರ್ಭಸ್ಯೈವ ಕಾಲಾಭಿಮಾನಿ ಜೀವಾಭಿಮಾನಿ ಚ  ದ್ವಿವಿಧಂ ರೂಪಮ್ ।  ‘ಕಾಲಜೀವಾಭಿಮಾನೇನ ರೂಪದ್ವನ್ದ್ವೀ ಚತುರ್ಮುಖಃ’ ಇತಿ ಪಾದ್ಮೇ ॥

ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದ ಬಳಕೆಯಾಗಿದೆ. ಸಾಮಾನ್ಯವಾಗಿ ಲಿಂಗ ಎಂದು ಹೇಳಿದಾಗ ನಮಗೆ ನೆನಪಿಗೆ ಬರುವುದು ಶಿವಲಿಂಗ. ಆದರೆ ಇತರ ದೇವತೆಗಳನ್ನೂ  ಲಿಂಗ ರೂಪದಲ್ಲಿ ಪೂಜಿಸುತ್ತಾರೆ.  ವಿಷ್ಣುಲಿಂಗವುಳ್ಳ ಅನೇಕ ದೇವಾಲಯಗಳೂ ನಮ್ಮಲ್ಲಿವೆ. ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದವನ್ನು ‘ಕಾಣದ ವಸ್ತುವನ್ನು ಕಾಣುವಂತೆ ಮಾಡುವ ಸಾಧನ’ ಅಥವಾ ‘ಶರೀರ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಎರಡು ರೂಪಗಳು ಮತ್ತು ಚಿತ್ಪ್ರಕೃತಿಯಿಂದ ದೇವತೆಗಳಿಗೆ ಪರಸ್ಪರ ಕಾಣುವಂತಹ ಶರೀರ ಬಂದಿತು.

ಎಲ್ಲಾ ದೇವತೆಗಳಿಗೂ ಶರೀರ, ಶಕ್ತಿ ಎಲ್ಲವೂ ಬಂದಿದೆ, ಆದರೆ ಅವರಲ್ಲಿ ಸಮಷ್ಟಿಪ್ರಜ್ಞೆ ಇರಲಿಲ್ಲ. ಹೀಗಾಗಿ ಒಬ್ಬೊಬ್ಬರು ಪ್ರತ್ಯೇಕವಾಗಿ ಸೃಷ್ಟಿ ಕಾರ್ಯ ಮುಂದುವರಿಸಲಾಗದೇ ಕಂಗಾಲಾಗುತ್ತಾರೆ. ಭಗವಂತ ಸೃಷ್ಟಿ ಮುಂದುವರಿಸುವ ಜವಾಬ್ದಾರಿ ನೀಡಿದ್ದಾನೆ, ಆದರೆ ಹೇಗೆ ಎನ್ನುವ ಯುಕ್ತಿ  ತಿಳಿಯದ ದೇವತೆಗಳು ಭಗವಂತನ ಮುಂದೆ ಕೈಜೋಡಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಮುಂದೆ ಬರುವ ಶ್ಲೋಕಗಳು ದೇವತೆಗಳ ಪ್ರಾರ್ಥನಾ ಮಂತ್ರಗಳಾಗಿವೆ. ಇದು ಬಹಳ ರೋಚಕವಾದ ಭಗವದ್ ಸ್ತುತಿ.  


ನತಾಃ ಸ್ಮ ತೇ  ದೇವ ಪದಾರವಿನ್ದಂ ಪ್ರಪನ್ನತಾಪೋಪಶಮಾತಪತ್ರಮ್ ।

ಯನ್ಮೂಲಕೇತಾ ಯತಯೋSಞ್ಜಸೋರು ಸಂಸಾರದುಃಖಂ ಬಹಿರುತ್ಕ್ಷಿಪನ್ತಿ ॥೧೬॥


 “ಭಗವಂತ, ನೀನು ನಮ್ಮನ್ನು ಸೃಷ್ಟಿ ಮಾಡಿ ನಮಗೆ ಶಕ್ತಿ ನೀಡಿದೆ. ಆದರೆ ಆ ಶಕ್ತಿಯನ್ನು ಬಳಸಿ, ನಾವೆಲ್ಲರೂ ಒಟ್ಟು ಸೇರಿ ಹೇಗೆ ಪ್ರಪಂಚ ಸೃಷ್ಟಿಮಾಡಬಹುದು ಎನ್ನುವುದು ನಮಗೆ ಹೊಳೆಯುತ್ತಿಲ್ಲ. ಶರಣು ಬಂದವರ ‘ಸಮಸ್ಯೆ’ ಎನ್ನುವ ಬಿಸಿಲಿಗೆ ನಿನ್ನ ಪಾದ ಕೊಡೆಯಂತೆ. ಆದ್ದರಿಂದ ನಾವು ನಿನ್ನ ಪಾದ ಕಮಲಗಳಿಗೆ ಮಣಿದಿದ್ದೇವೆ.” ಎಂದು ದೇವತೆಗಳು ಭಗವಂತನ ಮುಂದೆ ಕೈಮಗಿದು ಪ್ರಾರ್ಥಿಸುತ್ತಾರೆ.  ಸಂಸಾರವೆಂದರೆ ಅದು ದುಃಖದ  ಸಾಗರ. ಈ ದುಃಖದಿಂದ ಪಾರಾಗುವ ಒಂದೇ ಒಂದು ಸಾಧನ ಎಂದರೆ ಅದು ಭಗವಂತನ ಪಾದದಲ್ಲಿ ಶರಣಾಗುವುದು. ಭಗವಂತನನ್ನು ನಿರಂತರ ಆರಾಧಿಸುವ ಪ್ರಯತ್ನಶೀಲರು ‘ಯತಿ’ಗಳೆನಿಸುತ್ತಾರೆ. ದುಃಖ ನಿವಾರಣೆಗಿರುವ ಒಂದೇ ಒಂದು ಮಾರ್ಗ ಎಂದರೆ ಅದು ನಿರ್ಲಿಪ್ತತೆ. ಅಂತಹ ನಿರ್ಲಿಪ್ತತೆಯನ್ನು   ಭಗವಂತನ ಪಾದದಲ್ಲಿ ಶರಣಾಗಿ ನಾವು ಪಡೆಯಬಹುದು. ಇಲ್ಲಿ ದೇವತೆಗಳಿಗೆ ಇನ್ನೂ ಸಂಸಾರ ದುಃಖ ಪ್ರಾರಂಭವಾಗಿಲ್ಲ. ಆದರೆ ಅವರು ಮುಂದೆ ಸೃಷ್ಟಿ ಮಾಡುಲು ಹೊರಟಿರುವುದು ಸಂಸಾರವನ್ನು. ಅಂತಹ ಸಂಸಾರವನ್ನು ಸೃಷ್ಟಿ ಮಾಡಲು ಶಕ್ತಿಕೊಡು ಎಂದು ಅವರು ಇಲ್ಲಿ ಭಗವಂತನನ್ನು ಪ್ರಾರ್ಥಿಸಿದ್ದಾರೆ. 


ಋತೇ ಯದಸ್ಮಿನ್  ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ ।

ಆತ್ಮನ್ ಲಭಂತೇ ಭಗವಂಸ್ತವಾಙ್ಘ್ರೇ  ಶ್ಛಾಯಾಂಶವಿದ್ಯಾಮತ ಆಶ್ರಯೇಮ ॥೧೭॥


“ಈ ಸಾಂಸಾರಿಕ ಬದುಕಿನಲ್ಲಿ ನೀನು ಈಶ(ಸರ್ವಸಮರ್ಥ). ನಿನ್ನ ಪಾದಮೂಲದ ಸೇವೆ ಇಲ್ಲದಿದ್ದರೆ ಜೀವರು ಎಲ್ಲಾ ಕಡೆಯಿಂದಲೂ ತಾಪತ್ರಯದ ದುಃಖಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಸ್ಥಿತಿಯಿಂದ ಪಾರಾಗಲು ಇರುವ ಏಕಮಾತ್ರ ಮಾರ್ಗವೆಂದರೆ ಅದು  ನಿನ್ನ ಪಾದದ ನೆರಳಿನ ಒಂದು ಕ್ಲೇಶ ವಿದ್ಯೆಯ ಸೇವನೆ” ಎನ್ನುತ್ತಾರೆ ದೇವತೆಗಳು.

 ಇಲ್ಲಿ  “ಅಙ್ಘ್ರೇ ಶ್ಛಾಯಾಂಶವಿದ್ಯಾ” ಎನ್ನುವ ಪದ ಬಳಕೆಯಾಗಿದೆ. ಇದರ ಸ್ಥೂಲ ಅರ್ಥ: ಯೋಗ್ಯತಾನುಸಾರವಾದ ಭಗವಂತನ ಪ್ರಜ್ಞೆ. ಇದನ್ನು ಬ್ರಹ್ಮಪುರಾಣದ ಪ್ರಮಾಣ ಶ್ಲೋಕದೊಂದಿಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು.  [ಕೆಲವೆಡೆ ಅಂಘ್ರಿ ಚ್ಛಾಯಾಂಶ ಸವಿದ್ಯಾ ಎನ್ನುವ ಪಾಠ ಬಳಸುತ್ತಾರೆ. ಆದರೆ ಸರಿಯಾದ ಪಾಠ  ಅಙ್ಘ್ರೇ ಶ್ಛಾಯಾಂಶವಿದ್ಯಾ ಎನ್ನುವುದಾಗಿದೆ].  ಬ್ರಹ್ಮಪುರಾಣದಲ್ಲಿ ಹೇಳುವಂತೆ:  ‘ಬ್ರಹ್ಮವಿದ್ಯಾ ಹರೇಶ್ಛಾಯಾ ತದಂಶಾ ಹಿ  ಸುರೇಷ್ವಪಿ ।  ಸರ್ವವಿದ್ಯಾಃ ಶ್ರಿಯಃ ಪ್ರೋಕ್ತಾಃ  ಪ್ರಧಾನಾಂಶಶ್ಚತುರ್ಮುಖೇ” ಇತಿ ಬ್ರಾಹ್ಮೇ ॥   ಹರಿಯಲ್ಲಿರುವ ಸ್ವರೂಪಭೂತವಾದ ತನ್ನ ಬಗೆಗಿನ ಜ್ಞಾನಕ್ಕೆ ಛಾಯೆಯಂತೆ ಸಾಕ್ಷಾತ್ ಪ್ರತಿಬಿಂಬಭೂತವಾದ ಬ್ರಹ್ಮವಿದ್ಯೆಯಲ್ಲಿ ಕೆಲವೇ ಅಂಶಗಳು ಮಾತ್ರ ದೇವತೆಗಳಲ್ಲಿ, ಋಷಿಗಳಲ್ಲಿ ಮತ್ತು ಸಾತ್ತ್ವಿಕ ಜೀವರುಗಳಲ್ಲಿ ಅವರವರ ಯೋಗ್ಯತಾನುಸಾರವಾಗಿರುತ್ತದೆ. ಈ ದೇವಾದಿಗಳ ಎಲ್ಲಾ ಬ್ರಹ್ಮವಿದ್ಯೆಗೂ ಬಿಂಬರೂಪವಾದ ವಿದ್ಯೆ ಇರುವುದು ಶ್ರಿಲಕ್ಷ್ಮಿಯಲ್ಲಾದರೆ,  ಪ್ರತಿಬಿಂಬರೂಪವಾದ ವಿದ್ಯೆ  ಇತರ ಎಲ್ಲಾ ದೇವತೆಗಳಿಗಿಂತ ಅಧಿಕವಾಗಿ ಚತುರ್ಮುಖನಲ್ಲಿರುತ್ತದೆ.

ಮೇಲಿನ ಶ್ಲೋಕದಲ್ಲಿ ‘ತಾಪತ್ರಯ’ ಎನ್ನುವ ಪದ ಬಳಕೆಯಾಗಿದೆ. ಈ ಪದವನ್ನು ಸಾಮಾನ್ಯವಾಗಿ ಎಲ್ಲರೂ  ಬಳಸುತ್ತಾರೆ. ಆದರೆ ಹೆಚ್ಚಿನವರು ಇದರ ಹಿಂದಿರುವ ಅರ್ಥವನ್ನು ತಿಳಿದಿರುವುದಿಲ್ಲ. ಕೆಲವರು ತಾಪತ್ರಯ ಎಂದರೆ ‘ಸಮಸ್ಯೆ’ ಎಂದಷ್ಟೇ ತಿಳಿದಿರುತ್ತಾರೆ. ಆದರೆ ತಾಪತ್ರಯ ಎಂದರೆ ಮೂರು ಬಗೆಯ ತಾಪಗಳು:   ೧. ಆಧ್ಯಾತ್ಮಿಕ ತಾಪ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ರೋಗ, ವೇದನೆ ಇತ್ಯಾದಿ. ೨. ಆದಿದೈವಿಕ ತಾಪ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವೃಷ್ಟಿ,  ಅನಾವೃಷ್ಟಿ, ಸಿಡಿಲು ಇತ್ಯಾದಿ ಪ್ರಾಕೃತಿಕ ತಾಪ. ೩. ಆದಿಭೌತಿಕ ತಾಪ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ‘ಭಗವದ್ ಪ್ರಜ್ಞೆಯಿಂದ ಪಡೆಯುವ ಮೋಕ್ಷಸ್ಥಿತಿ’. 


ಮಾರ್ಗಂತಿ ಯತ್ ತೇ ಮುಖಪದ್ಮನೀಡೈ ಶ್ಛಂದಃಸುಪರ್ಣೈರ್ ಋಷಯೋ ವಿವಿಕ್ತೇ ।

 ಯಚ್ಚಾಘಮರ್ಷೋ ದ್ಯುಸರಿದ್ದರಾಯಾಃ ಪರಂ ಪದಂ ತೀರ್ಥಪದಃ ಪ್ರಪನ್ನಾಃ ॥೧೮॥

ವೇದಾಧ್ಯಯನದಿಂದ ಜ್ಞಾನ ಪಡೆದ ಋಷಿಗಳು ಏಕಾಂತದಲ್ಲಿ  ಭಗವಂತನ ಮುಖಕಮಲವೆನ್ನುವ ಗೂಡಿನಿಂದ ಹೊರಬಂದ ವೇದಮಂತ್ರವೆನ್ನುವ ಹಕ್ಕಿಯ ಮುಖೇನ ಭಗವಂತನ ಪಾದವನ್ನು ಹುಡುಕುತ್ತಾರೆ.

ಭಗವಂತನ ಪಾದ ಭಕ್ತರ ಪಾಪವನ್ನು ಕಳೆಯುತ್ತದೆ. ಪವಿತ್ರಳಾದ ಗಂಗೆ ಮತ್ತು ತಾಯಿ ಸ್ಥಾನದಲ್ಲಿರುವ ಈ ಭೂಮಿ ಭಗವಂತನ ಪಾದದಿಂದಲೇ ಹುಟ್ಟಿರುವುದು. 'ದ್ಯುಸರಿತೋ ಧರಾಯಾಶ್ಚ' ಗಂಗೆಗೂ ಧರೆಗೂ ಆಶ್ರಯ  ಆ ಭಗವಂತನ ಪವಿತ್ರವಾದ ಪಾದ. ಹೀಗೆ ದೇವತೆಗಳು ಭಗವಂತನನ್ನು ಧ್ಯಾನಿಸುತ್ತಾರೆ.


   ತಥಾ ಪರೇ  ತ್ವಾತ್ಮಸಮಾಧಿಯೋಗಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ ।

   ತ್ವಾಮೇವ ಧೀರಾಃ ಪುರುಷಂ ವಿಶನ್ತೇ  ತೇಷಾಂ ಶ್ರಮಃ ಸ್ಯಾನ್ನತು ಸೇವಯಾ ತೇ ॥೨೪॥


ತಾವು ಯಾವ ಕಾರ್ಯವನ್ನು ಮಾಡಲು ಸೃಷ್ಟಿಯಾಗಿದ್ದೇವೋ, ಆ ಕಾರ್ಯ ಮಾಡಲು ಬೇಕಾದ ಶಕ್ತಿ ಮತ್ತು ಮಾರ್ಗದರ್ಶನವನ್ನು ಬೇಡಿ ಭಗವಂತನನ್ನು ಸ್ತೋತ್ರ ಮಾಡುತ್ತಿರುವ ದೇವತೆಗಳು ಮುಂದುವರಿದು ಹೇಳುತ್ತಾರೆ: “ಇನ್ನು ಕೆಲವರು ಆತ್ಮಸಮಾಧಿಯೋಗದಿಂದ ಬಲಿಷ್ಠವಾದ ಪ್ರಕೃತಿಯನ್ನು ಗೆದ್ದು ನಿನ್ನನ್ನು ಹೋಗಿ ಸೇರುತ್ತಾರೆ. ಧೀರರಾದ ಇಂಥವರಿಗೆ ಇದು ಶ್ರಮ ಎನಿಸುವುದಿಲ್ಲ”  ಎಂದು.

ಇಲ್ಲಿ ಪ್ರಕೃತಿಯನ್ನು ಗೆಲ್ಲುವುದು  ಎಂದರೆ ಸಂಸಾರ ಬಂಧನದಿಂದ ಕಳಚಿಕೊಳ್ಳುವುದು ಎಂದರ್ಥ. ನಾವು ಬಲಿಷ್ಟವಾದ ಪ್ರಕೃತಿ ಬಂಧನದಿಂದ ಕಳಚಿಕೊಳ್ಳಬೇಕೆಂದರೆ ನಮ್ಮನ್ನು ಈ ಸಂಸಾರದಲ್ಲಿರಿಸಿರುವ ಚಿತ್ಪ್ರಕೃತಿಯಾದ ತಾಯಿ  ಶ್ರೀಲಕ್ಷ್ಮಿಯನ್ನು ಗೆಲ್ಲಬೇಕು. ದತ್ತಾತ್ರೇಯನು ತನ್ನ ಯೋಗಶಾಸ್ತ್ರದಲ್ಲಿ ಹೇಳುವಂತೆ: ‘ವಾಯೋಶ್ಚ ಪ್ರಕೃತೇರ್ವಿಷ್ಣೋರ್ಜಯೋ ಭಕ್ತ್ಯೈವ ನಾನ್ಯಥಾ’. ಅಂದರೆ: ವಾಯುದೇವನನ್ನು ಜಯಿಸುವುದಾಗಲಿ, ಚಿತ್ಪ್ರಕೃತಿಯನ್ನು ಜಯಿಸುವುದಾಗಲಿ ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ ಹೊರತು ಇನ್ಯಾವ ಉಪಾಯದಿಂದಲೂ ಸಾಧ್ಯವಿಲ್ಲ ಎಂದರ್ಥ. ಹೀಗಾಗಿ ಪ್ರಕೃತಿಮಾತೆ ಶ್ರಿಲಕ್ಷ್ಮಿಯನ್ನು ಭಕ್ತಿಯಿಂದ ಒಲಿಸಿಕೊಳ್ಳುವುದೇ ಸಂಸಾರ ಬಂಧನವನ್ನು ದಾಟುವ ಉಪಾಯ. ಆದ್ದರಿಂದ ಅವಿನಾಭಾವಿಯರಾದ ಲಕ್ಷ್ಮೀನಾರಾಯಣರಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದೇ(ಆತ್ಮ ಸಮಾಧಿಯೋಗ) ಪ್ರಕೃತಿಬಂಧದಿಂದ ಕಳಚಿಕೊಳ್ಳುವ ಏಕೈಕ ಮಾರ್ಗ. ಈ ರೀತಿ  ಸಾಧನೆಯ ಮಾರ್ಗದಲ್ಲಿ ಭಗವಂತನ ಅನುಗ್ರಹವಾಗುವ ತನಕ ಬಿಡದೆ ಸಾಧನೆ ಮಾಡುವ ಗಟ್ಟಿಗರು ಮೋಕ್ಷವನ್ನು ಪಡೆಯುತ್ತಾರೆ.

ಯಾರು ಭಗವಂತನ ಅರಿವಿನ ರುಚಿಯನ್ನು ಅನುಭವಿಸುತ್ತಾರೋ ಅವರಿಗೆ ಸಾಧನೆ  ಶ್ರಮ ಎನಿಸುವುದಿಲ್ಲ. ಏಕೆಂದರೆ ಜ್ಞಾನ ಮಾರ್ಗದ ಸಮಸ್ತ ಪ್ರಯತ್ನವೂ ಕೇವಲ ಆನಂದದ ಅನುಭವವೇ ಹೊರತು ಶ್ರಮವಲ್ಲ. 


ತತ್ ತೇ ವಯಂ ಲೋಕಸಿಸೃಕ್ಷಯಾSದ್ಯ  ತ್ವಯಾ ವಿಸೃಷ್ಟಾಸ್ತ್ರಿಭಿರಾತ್ಮಭಿಃ ಸ್ಮ  । 

ಸರ್ವೇ ವಿಯುಕ್ತಾಃ ಸ್ವವಿಹಾರತನ್ತ್ರಂ ನ ಶಕ್ನುಮಸ್ತತ್ ಪ್ರತಿಕರ್ತವೇ  ತೇ ॥೨೫॥


ಯಾವದ್ ಬಲಿಂ ತೇSಜ ಹರಾಮ ಕಾಲೇ ಯಥಾ ವಯಂ ಚಾನ್ನಮದಾಮ ಯತ್ರ ।

ತಥೋಭಯೇಷಾಂ ತ ಇಮೇ ಹಿ ಲೋಕಾ ಬಲಿಂ ಹರನ್ತೋSನ್ನಮದನ್ತ್ಯನೀಶಾಃ ॥೨೭॥


ತ್ವಂ ನಃ ಸುರಾಣಾಮಸಿ ಸಾನ್ವಯಾನಾಂ ಕೂಟಸ್ಥ ಆದ್ಯಃ ಪುರುಷಃ ಪುರಾಣಃ ।

ತ್ವಂ ದೇವ ಶಕ್ತ್ಯಾಂ ಗುಣಕರ್ಮಯೋನೌ ರೇತಸ್ತ್ವಜಾಯಾಂ ಕವಿರಾದಧೇSಜಃ ॥೨೭॥


ತತೋ ವಯಂ ಸತ್ಪ್ರಮುಖಾ  ಯದರ್ಥೇ ಬಭೂವಿಮಾsತ್ಮನ್ ಕರವಾಮ ಕಿಂ ತೇ ।  

ತ್ವಂ ನಃ ಸ ಚಕ್ಷುಃ  ಪರಿದೇಹಿ ಶಕ್ತಾ   ದೇವ ಕ್ರಿಯಾರ್ಥೇ ಯದನುಗ್ರಹೇಣ  ॥೨೯॥


“ಕಾಲನಿಯಾಮಕ ಚತುರ್ಮುಖ, ಚಿತ್ಪ್ರಕೃತಿ ಮತ್ತು ಜೀವ ನಿಯಾಮಕ ಚತುರ್ಮುಖ  ಈ ಮೂವರೊಂದಿಗಿರುವ ನಮಗೆ ನಿನ್ನ ಆಡುಂಬೊಲವಾದ (ವಿಹಾರ ಸಾಧನ/ ಆಡುವ ಹೊಲವಾದ) ಸೃಷ್ಟಿಯನ್ನು ಯಾವ ರೀತಿ ನಿರ್ಮಾಣ ಮಾಡಬೇಕೆಂದು ತಿಳಿಯುತ್ತಿಲ್ಲ” ಎನ್ನುತ್ತಾರೆ ದೇವತೆಗಳು. ಇಲ್ಲಿ ‘ಸತ್’ ಎಂದರೆ ಬ್ರಹ್ಮಾಂಡದಲ್ಲಿ ಚತುರ್ಮುಖ, ಪಿಂಡಾಂಡದಲ್ಲಿ ಮುಖ್ಯಪ್ರಾಣ. ಚತುರ್ಮುಖನ ಮುಂದಾಳತ್ವದಲ್ಲಿರುವ ದೇವತೆಗಳು ‘ಯಾವ ಕಾರಣಕ್ಕೆ ತಾವು ಸೃಷ್ಟಿಯಾಗಿರುವೆವೋ, ಅದನ್ನು ಎಲ್ಲರೂ ಸೇರಿ ಹೇಗೆ ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎನ್ನುತ್ತಿದ್ದಾರೆ. 

 “ಸ್ವಾಮೀ,  ಯಾವ ರೀತಿ ನಾವು ಬ್ರಹ್ಮಾಂಡವನ್ನು ರಚಿಸಿ ಅದನ್ನು ನಿನ್ನ ಪೂಜಾರೂಪವಾಗಿ ಸಮರ್ಪಿಸಲು ಸಮರ್ಥರಾಗುವೆವು? ನೀನು ನಮ್ಮೆಲ್ಲರ ತಂದೆ, ಎಲ್ಲರ ಅಂತರ್ಯಾಮಿ. ನೀನು ಪುರಾತನ. ನಿನಗೆ ಸ್ವಯಂ ಎಲ್ಲವನ್ನೂ ಮಾಡುವ ಶಕ್ತಿ ಇದ್ದರೂ ಕೂಡಾ, ಲಕ್ಷ್ಮೀದೇವಿಯ ಮುಖೇನ ನಮ್ಮನ್ನು ಸೃಷ್ಟಿ ಮಾಡಿದೆ. ಅಂತಹ ನೀನು ನಮಗೆಲ್ಲರಿಗೂ ಬ್ರಹ್ಮಾಂಡ ರಚನೆಯ ಶಕ್ತಿಯನ್ನೂ, ಮುಖ್ಯವಾಗಿ  ದೂರದೃಷ್ಟಿಯನ್ನೂ ಕರುಣಿಸು”  


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಆರನೇ ಅಧ್ಯಾಯ ಮುಗಿಯಿತು


*******

Shrimad BhAgavata in Kannada -Skandha-03-Ch-06_02

 ಸೋSಪ್ಯಂಶಗುಣಕಾಲಾತ್ಮಾ ಭಗವದ್-ದೃಷ್ಟಿಗೋಚರಃ ।

ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ॥೦೬॥


ಚತುರ್ಮುಖ ಹುಟ್ಟುವುದರೊಂದಿಗೆ ಎಲ್ಲಾ ಜೀವರಿಗೂ ಎಚ್ಚರವಾಯಿತು. ಚತುರ್ಮುಖ ಹುಟ್ಟುವುದಕ್ಕೂ ಮೊದಲು ಕಾಲ ಮತ್ತು ಜೀವಜಾತದ ಅಭಿಮಾನಿನಿಯಾಗಿದ್ದ ಲಕ್ಷ್ಮಿ, ಚತುರ್ಮುಖ ಜನಿಸಿದಾಕ್ಷಣ ಆ ಸ್ಥಾನವನ್ನು ಆತನಿಗೆ ನೀಡುತ್ತಾಳೆ. ಈ ರೀತಿ ಭಗವಂತನ ಪ್ರತಿಬಿಂಬರಾದ(ಅಂಶ ಸ್ಥಾನೀಯರಾದ) ಜೀವರುಗಳಿಗೆ ಚತುರ್ಮುಖ ಅಭಿಮಾನಿ ದೇವತೆಯಾದ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಸೂಕ್ಷ್ಮರೂಪದ ಸೃಷ್ಟಿಯಾಗುತ್ತಿದ್ದಂತೆಯೇ ಆತನಿಗೆ ಜೀವರ ಅಭಿಮಾನ, ತ್ರಿಗುಣಗಳ ಅಭಿಮಾನ ಮತ್ತು ಕಾಲದ ಅಭಿಮಾನವನ್ನು ನೀಡಿ ಅನುಗ್ರಹಿಸುತ್ತಾರೆ ಲಕ್ಷ್ಮೀ ನಾರಾಯಣರು. ಇದರಿಂದಾಗಿ ಚತುರ್ಮುಖನಿಗೆ ಎರಡು ರೂಪಗಳು. ಒಂದು ರೂಪದಲ್ಲಿ ಆತ ಜೀವರನ್ನು ಮತ್ತು ತ್ರಿಗುಣಗಳನ್ನೂ ನಿಯಂತ್ರಿಸಿದರೆ, ಮತ್ತೊಂದು ರೂಪದಲ್ಲಿ ಆತ ಕಾಲವನ್ನು ನಿಯಂತ್ರಿಸುತ್ತಾನೆ. [ಇಲ್ಲಿ ಪ್ರಯೋಗಿಸಿರುವ ‘ಅಂಶ’ ಎನ್ನುವ ಪದದ ಅರ್ಥ ‘ಪ್ರತಿಬಿಂಬ’ ಎಂಬುದಾಗಿದೆ. ಇದನ್ನು ಗೀತೆಯಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ     । (೧೫-೦೭)]. ಹೀಗೆ ಚತುರ್ಮುಖ ‘ಆತ್ಮ’ ನೆನಿಸಿ ಸೃಷ್ಟಿ ಕ್ರಿಯೆಯನ್ನು ಮುಂದುವರಿಸಿದ. [ಮುಖ್ಯ ಅರ್ಥದಲ್ಲಿ ಆತ್ಮಾ ಎಂದರೆ ಭಗವಂತ. ಎರಡನೇ ಅರ್ಥದಲ್ಲಿ ಚತುರ್ಮುಖ]

“ಚತುರ್ಮುಖ ಸೃಷ್ಟಿ ಕಾರ್ಯವನ್ನು ಮುಂದುವರಿಸಿರುವುದು ಸ್ವತಂತ್ರನಾಗಿ ಅಲ್ಲ” ಎನ್ನುವುದನ್ನು ಮೈತ್ರೇಯ ಮಹರ್ಷಿಗಳು ಇಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ನಾವು ಕಾಣುತ್ತೇವೆ. ಭಗವಂತ ಚತುರ್ಮುಖನ ಮೇಲೆ ಕಣ್ಣು ಹಾಯಿಸಿದನಂತೆ. ಅಂದರೆ ಸೃಷ್ಟಿ ಮಾಡುವ ಶಕ್ತಿಯನ್ನು ಆಧಾನ ಮಾಡಿ, ಆತನೊಳಗೆ ಕುಳಿತ. ಈ ರೀತಿ ಭಗವಂತನ ಅನುಗ್ರಹದೊಂದಿಗೆ ಚತುರ್ಮುಖ ಸೃಷ್ಟಿ ಕಾರ್ಯವನ್ನು ವಿಸ್ತರಿಸಿದ.


ಮಹತ್ತತ್ತ್ವಾದ್ ವಿಕುರ್ವಾಣಾದಹಂತತ್ತ್ವಮಜಾಯತ ।

ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಭವಃ ॥೦೭॥


ಮೊಟ್ಟಮೊದಲು ಚತುರ್ಮುಖ ತನ್ನಿಂದ ಅಭಿಮನ್ಯಮಾನವಾಗಿರುವ ಮಹತತ್ತ್ವವನ್ನು ವಿಕಾರ/ವಿಸ್ತಾರಗೊಳಿಸಿದ. ಇದರಿಂದ ಅಹಂಕಾರ ತತ್ತ್ವದ ಉದಯವಾಯಿತು. ಅಂದರೆ ಅಹಂಕಾರ ತತ್ತ್ವದ ಅಭಿಮಾನಿ ಶಿವನ ಜನನವಾಯಿತು. ಅಹಂಕಾರತತ್ತ್ವದ ಜನನದಿಂದ ಜೀವರಾಶಿಗೆ ‘ತನ್ನತನದ ಅರಿವು’ (Awareness of Self) ಮೂಡಿತು. ಇದು ಜೀವರಾಶಿಗೆ ಶಿವನ ಕೊಡುಗೆಯಾಯಿತು.


ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ ।

ಅಹಂತತ್ತ್ವಾದ್ ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ ॥೦೮॥


ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಞ್ಜನಂ ಯತಃ ।

ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ ॥೦೯॥

ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ ।

ತಾಮಸಾನುಸೃತಂ  ಸ್ಪರ್ಶಂ ವಿಕುರ್ವನ್ನಿರ್ಮಮೇSನಿಲಮ್ ॥೧೦॥


ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ ಪರವೀಕ್ಷಿತಮ್ ।

ಆಧತ್ತಾಮ್ಭೋ ರಸಮಯಂ ಕಾಲಮಾಯಾಂಶಯೋಗತಃ ॥೧೨॥


ಜ್ಯೋತಿಷಾsಮ್ಭೋSನುಸಂಸೃಷ್ಟಂ ವಿಕುರ್ವದ್ ಬ್ರಹ್ಮವೀಕ್ಷಿತಮ್  ।

ಮಹೀಂ ಗಂಧಗುಣಾಮಾಧಾತ್ ಕಾಲಮಾಯಾಂಶಯೋಗತಃ ॥೧೩॥


ಯಾವಾಗ ಅಹಂಕಾರ ತತ್ತ್ವ ಸೃಷ್ಟಿಯಾಯಿತೋ, ಅದು  ಮೂರು ಮುಖದಲ್ಲಿ ವಿಸ್ತಾರ ಹೊಂದಿತು. ಅಹಂಕಾರ ತತ್ತ್ವದ ದೇವತೆಯಾದ ಶಿವ  ಆ ತತ್ತ್ವವನ್ನು ಮೂರು ವಿಧವಾಗಿ  ವಿಂಗಡಿಸಿದ. (೧) ವೈಕಾರಿಕ ಅಹಂಕಾರ/ಸಾತ್ವಿಕ ಅಹಂಕಾರ (೨) ತೈಜಸ ಅಹಂಕಾರ/ರಾಜಸ ಅಹಂಕಾರ  (೩)ತಾಮಸ ಅಹಂಕಾರ. ವೈಕಾರಿಕ ಅಹಂಕಾರದಿಂದ ವಿಷಯಗಳ ಅರಿವು ಬರುವ ‘ಮನಸ್ಸು’ ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ (ವೈಕಾರಿಕರ)ಸೃಷ್ಟಿಯಾಯಿತು. ಇಲ್ಲಿ ವೈಕಾರಿಕಾ ಸೃಷ್ಟಿ ಎಂದರೆ: ಯಾವುದರಿಂದ ವಿಷಯಗಳ ಗ್ರಹಣವಾಗಿ ಅರಿವು ಬರುತ್ತದೋ ಅಂತಹ ಮನಸ್ಸು ಮತ್ತು ದೇವತೆಗಳ ಸೃಷ್ಟಿ [ವಿಷಯಗಳ ಅನುಭವವಾಗುವುದು ದೇವತೆಗಳ ಮೂಲಕ. ಉದಾಹರಣೆಗೆ ಕಣ್ಣಿನಲ್ಲಿರುವ ಸೂರ್ಯನಿಂದ ನಮಗೆ ಅರಿವು ಬರುತ್ತದೆ ಮತ್ತು ಅಲ್ಲಿ ಕಣ್ಣು ಕೇವಲ ಉಪಕರಣ ಅಷ್ಟೇ. ಸೂರ್ಯನಿಂದ ಬಂದ ಅರಿವನ್ನು ಗ್ರಹಣ ಮಾಡಲು ಮನಸ್ಸು ಬೇಕು. ಸ್ವಯಂ ಶಿವನೇ ಮನಸ್ಸಿನ ಅಭಿಮಾನಿ ದೇವತೆ]. ಈ ಹಿಂದೆ ಎರಡನೇ ಸ್ಕಂಧದಲ್ಲಿ ಈಗಾಗಲೇ ನೋಡಿದಂತೆ: ದಿಗ್ವಾತಾರ್ಕಪ್ರಚೇತೋಶ್ವಿವಹ್ನೀಂದ್ರೋಪೇನ್ದ್ರಮಿತ್ರಕಾಃ  ॥ಭಾಗವತ ೨-೫-೩೦॥ ಸಾತ್ತ್ವಿಕ ಅಹಂಕಾರ ನಿಯಾಮಕನಾದ ಶಿವನಿಂದ ಮನಸ್ಸು ಮತ್ತು ಈ ಕೆಳಗೆ ಹೇಳಿರುವ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಸೃಷ್ಟಿಯಾಯಿತು. 

(೧) ಕಿವಿಯ ಅಭಿಮಾನಿ ದಿಗ್ಧೇವತೆಗಳು. [ಪೂರ್ವದಿಕ್ಕಿಗೆ ಮಿತ್ರ, ಪಶ್ಚಿಮದಿಕ್ಕಿಗೆ    ವರುಣ, ಉತ್ತರ ದಿಕ್ಕಿಗೆ ಕುಬೇರ ಮತ್ತು ದಕ್ಷಿಣ ದಿಕ್ಕಿಗೆ ಯಮ ಅಭಿಮಾನಿ ದೇವತೆಗಳು. ಇವರೆಲ್ಲರ ಮುಖಂಡ ಹಾಗೂ  ಶ್ರೋತ್ರಾಭಿಮಾನಿ: ಸೋಮ(ಚಂದ್ರ)].

 (೨) ಸ್ಪರ್ಶದ ದೇವತೆ ವಾಯು. ಇಲ್ಲಿ ವಾಯು ಎಂದರೆ ಪ್ರಧಾನ ವಾಯು(ಮುಖ್ಯಪ್ರಾಣ) ಅಲ್ಲ, ಸ್ಪರ್ಶ ಶಕ್ತಿಯನ್ನು ಕೊಡುವ ಅಹಂಪ್ರಾಣ. 

(೩) ಕಣ್ಣಿನ ದೇವತೆ ಅರ್ಕ(ಸೂರ್ಯ). 

(೪)ನಾಲಿಗೆ ಅಥವಾ ರಸದ ಅಭಿಮಾನಿ ದೇವತೆ ಪ್ರಚೇತ(ವರುಣ). 

(೫) ಮೂಗಿನ ಅಥವಾ ಗಂಧದ ಅಭಿಮಾನಿ ದೇವತೆ ಆಶ್ವೀದೇವತೆಗಳು.

(೬) ಬಾಯಿ ಅಥವಾ ವಾಗೀನ್ದ್ರಿಯದ ದೇವತೆ ವಹ್ನಿ(ಅಗ್ನಿ). 

(೭) ಕೈಯ ಅಭಿಮಾನಿ ದೇವತೆ ಇಂದ್ರ. 

(೮) ಕಾಲಿನ ಅಭಿಮಾನಿ ದೇವತೆಯಾಗಿ ಸ್ವಯಂ ಭಗವಂತನೇ ಉಪೇಂದ್ರನಾಗಿ ಶಿವನಿಂದ ಹುಟ್ಟಿದ. ಇಂದ್ರಪುತ್ರ ಜಯಂತ ಕೂಡಾ ಕಾಲಿನ ಅಭಿಮಾನಿ ದೇವತೆ. 

(೯) ದೇಹಕ್ಕೆ ಬೇಡವಾದುದನ್ನು ಹೊರ ಹಾಕುವ ಪಾಯುವಿನ ಅಭಿಮಾನಿ ಮಿತ್ರ ಹಾಗೂ 

(೧೦) ಮೂತ್ರ ಮತ್ತು ರೇತಸ್ಸಿನ ವಿಸರ್ಜನೆ ಹಾಗೂ ರೇತಸ್ಸಿನ ಸ್ವೀಕಾರದ ಜನನೇಂದ್ರಿಯದ ಅಭಿಮಾನಿ, ಸಂತಾನ ದೇವತೆಯಾದ ದಕ್ಷಪ್ರಜಾಪತಿ.  

ಹೀಗೆ ವೈಕಾರಿಕ ಅಹಂಕಾರದಿಂದ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಹಾಗು ಮನಸ್ಸಿನ ಸೃಷ್ಟಿಯಾಯಿತು. ಅಭಿಮಾನಿ ದೇವತೆಗಳ ಸೃಷ್ಟಿಯಾದ ನಂತರ  ಅವರಿಂದ ಅಭಿಮನ್ಯಮಾನವಾದ ದಶ ಇಂದ್ರಿಯಗಳ ಸೃಷ್ಟಿ ತೈಜಸ ಅಹಂಕಾರದಿಂದಾದರೆ, ತಾಮಸ ಅಹಂಕಾರದಿಂದ ಪಂಚಭೂತಗಳ ಸೃಷ್ಟಿಯಾಯಿತು. ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳುವಂತೆ:  ಆತ್ಮನಃ ಆಕಾಶ ಸಂಭೂತಃ । ಆಕಾಶಾದ್ವಾಯುಃ । ವಾಯೋರಗ್ನಿಃ । ಅಗ್ನೇರಾಪಃ । ಆಪ್ಯಃ ಪೃಥಿವೀ ।  ಹೀಗೆ ಪಂಚಭೂತಗಳ ಸೃಷ್ಟಿ ಶಿವನಿಂದಾಯಿತು. ಶಿವನ ಮುಖೇನ ಪ್ರಪಂಚ ಪಂಚಮುಖವಾದುದರಿಂದ ಆತನನ್ನು  “ಧ್ಯೇಯಂ ಪಂಚಮುಖೋ ರುದ್ರಃ”  ಎಂದು ಸ್ತುತಿಸುತ್ತಾರೆ.

ಭಗವಂತ ಮೊದಲು ಸೃಷ್ಟಿ ಮಾಡಿರುವುದು ಭೂತಸೂಕ್ಷ್ಮವನ್ನು.  ಆನಂತರ ಅದಕ್ಕೆ  ಸ್ಥೂಲರೂಪ ಬಂದಿರುವುದು. ಇಲ್ಲಿ ಭೂತಸೂಕ್ಷ್ಮ ಎಂದರೆ ಅವ್ಯಕ್ತವಾದುದು(non vibratory sound).  ಅದರಿಂದ ಆಕಾಶವಾಯಿತು. ಆಕಾಶದಲ್ಲಿ ಸ್ಪರ್ಶವಾಗುವಂತಹದ್ದು ಹುಟ್ಟಿತು. ಅದು ಗಾಳಿಯಾಯಿತು. ಸ್ಪರ್ಶದಿಂದ ರೂಪವೆನ್ನುವಂತಹದ್ದು ಹುಟ್ಟಿತು. ಅದು ಜ್ಯೋತಿ ಅಥವಾ ಬೆಂಕಿಯಾಯಿತು. ರೂಪದಿಂದ ರಸ ಹುಟ್ಟಿತು. ಅದೇ ನೀರಾಯಿತು. ರಸದಿಂದ ಗಂಧ ಹುಟ್ಟಿತು. ಅದೇ ಮಣ್ಣಾಯಿತು. ಹೀಗೆ ಭೂತಸೂಕ್ಷ್ಮ ಕಾರಣವಾಗಿ ಮುಂದೆ ಎಲ್ಲವೂ ಹೇಗೆ ಬೆಳೆದುಕೊಂಡು ಬಂತು ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣುತ್ತೇವೆ. ಇಲ್ಲಿ “ಖಂ ಲಿಂಗಮಾತ್ಮನಃ” ಎಂದಿದ್ದಾರೆ. ಖಂ ಎಂದರೆ ಶಬ್ದ. ಆಕಾಶದ ಜೊತೆಗೆ ಭಗವಂತನನ್ನು ಪರಿಚಯಿಸುವಂತಹ ಶಬ್ದ ಹುಟ್ಟಿತು. 


ಮೊದಲು ಆಕಾಶದ(ನಭಃ) ಸೃಷ್ಟಿಯಾಯಿತು. ಇಲ್ಲಿ ಆಕಾಶದ ಸೃಷ್ಟಿ ಎಂದರೆ ಅವಕಾಶದ(space) ಸೃಷ್ಟಿ ಅಲ್ಲ. ಅವಕಾಶ ಮೊದಲಿನಿಂದಲೂ ಇತ್ತು. ಅಂತಹ ಅವಕಾಶದಲ್ಲಿ ಸೃಷ್ಟಿ ಸಾಪೇಕ್ಷವಾದ ವಾತಾವರಣ ಸೃಷ್ಟಿಯಾಯಿತು. ಇದನ್ನು ಇಂದು ನಾವು ಕಣ್ಣಿಗೆ ಕಾಣದ ನೀಲವರ್ಣ  (ultraviolet rays) ಎಂದು ಕರೆಯುತ್ತೇವೆ. ಇದನ್ನೇ ಆಚಾರ್ಯ ಮಧ್ವರು “ಆಕಾಶೋ ನೀಲಿಮೋ ದೇಹಿಃ” ಎಂದು ವರ್ಣಿಸಿದ್ದಾರೆ. [ಇಂದು ವೈಜ್ಞಾನಿಕವಾಗಿ ಏನನ್ನು ಹೇಳುತ್ತಿದ್ದಾರೋ, ಅದನ್ನು  ಅತ್ಯಂತ ನಿಖರವಾಗಿ ವೇದದಲ್ಲಿ ಮೊದಲೇ ಹೇಳಿರುವುದನ್ನು ನಾವು ಕಾಣುತ್ತೇವೆ]. ಹೀಗೆ ಅಹಂಕಾರತತ್ತ್ವಮಾನಿನಿ ಶಿವನಿಂದ ಆಕಾಶತತ್ತ್ವದ ದೇವತೆಯಾದ ಗಣಪತಿಯ ಸೃಷ್ಟಿಯಾಯಿತು.

ಯಾವ ಕಾಲದಲ್ಲಿ ಏನು ಸೃಷ್ಟಿಯಾಗಬೇಕು ಎನ್ನುವುದು ತಿಳಿದಿರುವುದು ಕೇವಲ ಭಗವಂತನಿಗೆ ಮಾತ್ರ. ಹಾಗಾಗಿ ಆತನನ್ನು ಕಾಲಪುರುಷ ಎಂದು ಕರೆಯುತ್ತಾರೆ. ಚತುರ್ಮುಖ, ಪ್ರಕೃತಿ ಮತ್ತು ಕಾಲದ ಸಮಾವೇಶದಿಂದ ಸೃಷ್ಟಿ ಬೆಳೆದುಕೊಂಡು ಬರುತ್ತದೆ. ಅಂದರೆ ಮುಂದಿನ ಸೃಷ್ಟಿಗೆ ನಿಯತಕಾಲ ಕೂಡಿಬರಬೇಕು, ಶ್ರೀಲಕ್ಷ್ಮಿ ಅನುಗ್ರಹವಾಗಬೇಕು,  ಚತುರ್ಮುಖನ ಸಹಕಾರ ಬೇಕು. ಇಷ್ಟೇ ಅಲ್ಲ, ಜೊತೆಗೆ ಭಗವಂತನ ಕೃಪಾದೃಷ್ಟಿ ಬೀಳಬೇಕು.

ಆಕಾಶದ ಸೃಷ್ಟಿಯ ನಂತರ ಮುಂದಿನ ಸೃಷ್ಟಿ ಆಗಬೇಕು ಎಂದು ಭಗವಂತ ದೃಷ್ಟಿಹಾಯಿಸಿದ. ಅವನ ಕೃಪಾದೃಷ್ಟಿ  ಬೀಳುತ್ತಲೇ ಮುಂದಿನ ಸೃಷ್ಟಿಗೆ ಶ್ರೀಲಕ್ಷ್ಮಿ ಮತ್ತು ಚತುರ್ಮುಖ ಸಿದ್ಧರಾದರು. 


ತಾಮಸ ಅಹಂಕಾರದಿಂದ ಅನುಗತವಾಗಿ, ಚತುರ್ಮುಖ ಮತ್ತು ಪ್ರಕೃತಿಯಿಂದ ಕಾಲಬದ್ಧವಾದ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಮೋಮಾನಿನಿಯಾದ ಶಿವನ ಪ್ರೇರಣೆಯಿಂದ ನಿಷ್ಪಂಧವಾದ ಆಕಾಶದಲ್ಲಿ ಕಂಪನ ಹುಟ್ಟಿ ಅದು ಸ್ಪರ್ಶ ತನ್ಮಾತ್ರಾರೂಪವಾಗಿ ಪರಿಣಮಿಸಿ ಆಮೂಲಕ ಗಾಳಿಯನ್ನು ನಿರ್ಮಿಸಿತು. ಗಾಳಿ ಬೀಸತೊಡಗಿತು. ಗಾಳಿಯಿಂದ ಜಗತ್ತಿಗೆಲ್ಲಾ ಕಣ್ಣಾದ ಬೆಳಕಿನ(ಬೆಂಕಿಯ) ಸೃಷ್ಟಿಯಾಯಿತು. ಅಂದರೆ ರೂಪ ತನ್ಮಾತ್ರೆ  ಸೃಷ್ಟಿಯಾಯಿತು. ಇದರಿಂದ ಕಣ್ಣಿಂದ ಕಾಣಬಹುದಾದ ಪ್ರಪಂಚ ಸೃಷ್ಟಿಯಾಯಿತು.


ನೀರು ಸೃಷ್ಟಿಯಾಗುವ ಕಾಲ ಕೂಡಿ ಬರುತ್ತಿದ್ದಂತೆ ಭಗವಂತನ ಕೃಪಾದೃಷ್ಟಿಯಲ್ಲಿ, ಬೆಳಕಿನಿಂದ ಅನುಶಕ್ತವಾಗಿ,  ಹಿಂದೆ ಸೃಷ್ಟಿಯಾಗಿರುವ ಗುಣಗಳನ್ನು ಹೊತ್ತುಕೊಂಡು ರಸ ತನ್ಮಾತ್ರೆ ಸೃಷ್ಟಿಯಾಯಿತು. ಇದರಿಂದ ಜಲ ನಿರ್ಮಾಣವಾಯಿತು. ಪ್ರಪಂಚದಲ್ಲಿ ನಾನಾ ಬಗೆಯ ‘ರುಚಿ’ ಹುಟ್ಟಿಕೊಂಡಿತು. 


ತೇಜಸ್ಸಿನ ಪರಿಣಾಮವಾದ ಜಲವು ಭಗವಂತನ ಕೃಪಾದೃಷ್ಟಿಗೆ ಗೋಚರವಾಗಿ, ಪರಿಣಾಮಕಾಲ, ಚಿತ್ಪ್ರಕೃತಿ ಮತ್ತು ಚತುರ್ಮುಖರ ಪರಸ್ಪರ ಮೇಲನದಿಂದ ಗಂಧ ತನ್ಮಾತ್ರಾ ಪರಿಣಾಮವಾದ ಮಣ್ಣಿನ ಸೃಷ್ಟಿಯಾಯಿತು. ನೀರು ಹಿಮಗಲ್ಲಿನ ಬಂಡೆಯಾಗಿ, ಮಣ್ಣಾಗಿ, ಭೂಮಿಯಾಯಿತು. ಹೀಗೆ ಪಂಚಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಸೃಷ್ಟಿಯಾದವು.  

 ಇಲ್ಲಿ ಪ್ರತಿಯೊಂದು ಹಂತದಲ್ಲೂ ಒಂದನ್ನು ಹಿಂದಿನುದರ ಅನುಗತ ಎಂದು ಹೇಳಿರುವುದನ್ನು ಕಾಣುತ್ತೇವೆ. ಅಂದರೆ: ಮೊದಲು ಕೇವಲ ಶಬ್ದವಿತ್ತು. ನಂತರ ವಾಯುವಿನ ಸೃಷ್ಟಿಯಾಯಿತು. ವಾಯುವಿನಲ್ಲಿ ಶಬ್ದವೂ ಇದೆ, ಸ್ಪರ್ಶವೂ ಇದೆ. ನಂತರ ಅಗ್ನಿ. ಅಲ್ಲಿ ಶಬ್ದ-ಸ್ಪರ್ಶದ ಜೊತೆಗೆ ರೂಪವಿದ್ದರೆ, ನಂತರ ಸೃಷ್ಟಿಯಾದ ನೀರಿನಲ್ಲಿ ಶಬ್ದ-ಸ್ಪರ್ಶ-ರೂಪದ ಜೊತೆಗೆ ರಸ ಹುಟ್ಟಿಕೊಂಡಿತು. ಕೊನೆಯಲ್ಲಿ ಹುಟ್ಟಿದ ಮಣ್ಣಿನಲ್ಲಿ ಮೇಲಿನ ನಾಲ್ಕು ಗುಣಗಳ ಜೊತೆಗೆ ಗಂಧ ಸೇರಿತು. ಹೀಗೆ ಪಂಚಗುಣಗಳು ಉಪೇತವಾದ ಪ್ರಪಂಚ ಸೃಷ್ಟಿಯಾಯಿತು. [ಇನ್ನೂ ಬ್ರಹ್ಮಾಂಡ ಸೃಷ್ಟಿ ಆಗಿಲ್ಲ, ಇದು ಕೇವಲ ಮೂಲವಸ್ತುವಿನ(raw material) ಸೃಷ್ಟಿ ಎನ್ನುವುದನ್ನು ಓದುಗರು ಇಲ್ಲಿ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು].


Shrimad BhAgavata in Kannada -Skandha-03-Ch-06_01

ಷಷ್ಠೋSಧ್ಯಾಯಃ

ವಿದುರ-ಮೈತ್ರೇಯ ಸಂವಾದ: ಭಗವಂತನ ಸೃಷ್ಟಿಲೀಲೆಯ ವಿವರಣೆ


ವೇದವ್ಯಾಸರ ಸಹಪಾಠಿ ಮತ್ತು ಗೆಳೆಯನಾದ ಮೈತ್ರೇಯ,  ಮಹರ್ಷಿ ವೇದವ್ಯಾಸರ ಪುತ್ರನಾದ ವಿದುರನಿಗೆ ತಾನು ಶ್ರೀಕೃಷ್ಣನಿಂದ ಪಡೆದ ಅಧ್ಯಾತ್ಮದ ಸಾರವನ್ನು ವಿವರಿಸಲು ಆರಂಭಿಸುತ್ತಾರೆ. ಪ್ರತಿಯೊಬ್ಬ ಶಾಸ್ತ್ರಕಾರನೂ ಕೂಡಾ ಮೊತ್ತಮೊದಲಿಗೆ ವಿಶ್ಲೇಷಿಸುವುದು ‘ಈ ಪ್ರಪಂಚ ಸೃಷ್ಟಿಯಾದ ಬಗೆ ಹೇಗೆ’ ಎನ್ನುವ ವಿಷಯವನ್ನು.  ಕೆಲವರು ಈ ಪ್ರಪಂಚ ತನ್ನಿಂದ ತಾನೇ ಸೃಷ್ಟಿಯಾಯಿತು ಎನ್ನುತ್ತಾರೆ. ಇನ್ನು ಕೆಲವರು ಎಲ್ಲವೂ ಆಕಸ್ಮಿಕ ಎನ್ನುತ್ತಾರೆ. ಆದರೆ ನಾವು ನಮ್ಮ ಜೀವನದುದ್ದಕ್ಕೂ ಪ್ರತಿಯೊಂದು ಸಂದರ್ಭದಲ್ಲೂ ನೋಡುವಂತೆ ಯಾವುದೂ ಕೂಡಾ ತನ್ನಿಂದ ತಾನೇ ಅಥವಾ ಆಕಸ್ಮಿಕವಾಗಿ  ಸೃಷ್ಟಿಯಾಗುವುದಿಲ್ಲ. ಕಾರಣವಿಲ್ಲದೇ ಕಾರ್ಯವಾಗುವುದಿಲ್ಲ. 

ಪ್ರಾಚೀನ ಸಂಪ್ರದಾಯದ ಸೃಷ್ಟಿಕ್ರಮವನ್ನು ನಂಬಿದವರಿಗೂ ಕೂಡಾ ಪ್ರಪಂಚ ಸೃಷ್ಟಿಯ ಕುರಿತು ಅನೇಕ ಗೊಂದಲಗಳಿವೆ. ಕೆಲವರು ಜಗತ್ತನ್ನು ನಾರಾಯಣ ಸೃಷ್ಟಿಸಿದ ಎಂದರೆ, ಇನ್ನು ಕೆಲವರು ಚತುರ್ಮುಖನಿಂದ ಈ ಜಗತ್ತು ನಿರ್ಮಾಣವಾಯಿತು ಎನ್ನುತ್ತಾರೆ. ಇಲ್ಲಿ ಮೈತ್ರೆಯರು ಮೊತ್ತಮೊದಲಿಗೆ ಈ ವಿಷಯವನ್ನೇ  ವಿವರಿಸುವುದನ್ನು ನಾವು ಕಾಣಬಹುದು.

ನಮ್ಮ ಕಣ್ಣಿಗೆ ಕಾಣುವ  ಈ ಪ್ರಪಂಚ ಸೃಷ್ಟಿಯಾದುದು ಯಾವುದರಿಂದ? ಪ್ರಪಂಚ ಸೃಷ್ಟಿಗೂ ಮುನ್ನ ಏನಿತ್ತು? ಯಾವುದೋ ಮೂಲವಸ್ತುವಿನಿಂದ ಈ ಪ್ರಪಂಚ ಸೃಷ್ಟಿಯಾಯಿತೋ ಅಥವಾ ಏನೂ ಇಲ್ಲದೇ ಎಲ್ಲವೂ ಸೃಷ್ಟಿಯಾಯಿತೋ? ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ:  ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ ಕಿಂಚನ ಮಿಷತ್ | [೧.೧.೧].   ಉಪನಿಷತ್ತಿನ ಈ ಮಾತಿನ ಅರ್ಥವೇನು?  ಈ ಎಲ್ಲಾ ವಿಷಯವನ್ನು ಇಲ್ಲಿನ ಮೊದಲ  ಎರಡು ಶ್ಲೋಕಗಳ ಮುಖೇನ ಮೈತ್ರೇಯ ಮಹರ್ಷಿಗಳು ವಿದುರನಿಗೆ ವಿವರಿಸಿರುವುದನ್ನು ನಾವು ಕಾಣುತ್ತೇವೆ.


ಭಗವಾನೇಕ ಆಸೇದಮಗ್ರ ಆತ್ಮಾSSತ್ಮನಾಂ ವಿಭುಃ ।

ಆತ್ಮೇಚ್ಛಾನುಗತೋ ಹ್ಯಾತ್ಮಾ ನಾನಾಶಕ್ತ್ಯುಪಲಕ್ಷಿತಃ ॥೦೧॥


 ‘ಭಗವಾನ್ ಏಕಃ ಆಸೇದ ಇದಮ್ ಅಗ್ರೇ’. “ಮೊದಲು ಆ ಭಗವಂತನೊಬ್ಬನೇ ಇದ್ದ” ಎನ್ನುತ್ತಾರೆ ಮೈತ್ರೆಯರು. ಆ ಭಗವಂತ ಯಾರು ಎನ್ನುವುದನ್ನು ನಾವು ಈಗಾಗಲೇ ಭಾಗವತದಲ್ಲಿ ನೋಡಿದ್ದೇವೆ. [ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ೧.೨.೧೧] ಯಾರನ್ನು ವೇದದಲ್ಲಿ ಬ್ರಹ್ಮಾ, ಪರಮಾತ್ಮಾ ಎಂದು ಕರೆಯುತ್ತಾರೋ, ಅಂತಹ, ಅನೇಕ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಈ ಪ್ರಪಂಚ ಸೃಷ್ಟಿಯಾಗುವ ಮುಂಚೆ ಇದ್ದ.

ಇಲ್ಲಿ ಆತ್ಮಾ ಎನ್ನುವ ಪದ ಬಳಕೆಯಾಗಿದೆ. ಜೀವನನ್ನೂ ಆತ್ಮಾ ಎಂದು ಕರೆದರೂ ಕೂಡಾ, ಆತ್ಮಾ ಪದದ ಮುಖ್ಯ ಅರ್ಥ ಭಗವಂತ. ಯಾರು ಇಚ್ಛಿಸಿದ್ದೆಲ್ಲವನ್ನೂ ಪಡೆಯಬಲ್ಲನೋ, ಯಾರು ಸಮಸ್ತ ಶಕ್ತಿ-ಸಾಮರ್ಥ್ಯವನ್ನು ಹೊಂದಿದ್ದಾನೋ, ಅಂತಹ ಸರ್ವಸಮರ್ಥನಾದ ಭಗವಂತನೇ ಆತ್ಮಾ. “ಇಂತಹ ಎಲ್ಲಾ ಜೀವರುಗಳ ಸ್ವಾಮಿಯಾದ [ಆತ್ಮನಾಂ ವಿಭುರ್ಜೀವಾಧಿಪಃ] ಭಗವಂತ ಪ್ರಳಯಕಾಲದಲ್ಲಿ ಒಬ್ಬನೇ ಇದ್ದ”.

ಈ ಮೇಲಿನ ಮಾತು ನಮಗೆ ಗೊಂದಲವನ್ನುಂಟುಮಾಡುತ್ತದೆ. “ಎಲ್ಲ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಇದ್ದ” ಎನ್ನುವ ಮಾತಿನ ಅರ್ಥವೇನು? ಜೀವರುಗಳ ಸ್ವಾಮಿಯಾಗಬೇಕಾದರೆ ಅಲ್ಲಿ ಜೀವರುಗಳೂ ಇರಬೇಕಲ್ಲವೇ? ಈ ಗೊಂದಲವನ್ನು ಮೈತ್ರೇಯ ಮಹರ್ಷಿಗಳು ಮುಂದಿನ ಶ್ಲೋಕದಲ್ಲಿ ಬಗೆಹರಿಸಿದ್ದಾರೆ:

ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ ವಿಶ್ವಮೇಕರಾಟ್  ।

ಮೇನೇSಸನ್ತಮಿವಾSತ್ಮಾನಂ ಸುಪ್ತಶಕ್ತಿರಸುಪ್ತದೃಕ್  ॥೦೨॥ 


“ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ, ಪ್ರಳಯಕಾಲದಲ್ಲಿದ್ದ ಜೀವಾತ್ಮರನ್ನು ‘ಇದ್ದಾರೆ’ ಎಂದು ಕಾಣಲಿಲ್ಲ” ಎಂದಿದ್ದಾರೆ ಮೈತ್ರೆಯರು. ಇದ್ದದ್ದನ್ನು ಇಲ್ಲಾ ಎಂದು ಕಂಡರೆ ಅದು ಭ್ರಮೆಯಾಗುತ್ತದಲ್ಲವೇ? ಹಾಗಿದ್ದರೆ ಈ ಮಾತಿನ ಅರ್ಥವೇನು?

ಈ ಮಾತಿನ ಒಳಾರ್ಥವನ್ನು ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಅಗ್ನಿ ಪುರಾಣದಲ್ಲಿ ಹೇಳಿರುವಂತೆ: ಪರಮಾತ್ಮಾ ಯತೋ ಜೀವಂ ಮೇನೇSಸನ್ತಮಶಕ್ತತಃ  । ಅಸನ್ನಸೌ ತತೋ ನಿತ್ಯಂ  ಸತ್ಯಜ್ಞಾನೋ ಯತೋ ಹರಿಃ’   ಪ್ರಳಯಕಾಲದಲ್ಲಿ ಸಮಸ್ತ ಜೀವಾತ್ಮರು ಯಾವ ಶಕ್ತಿಯೂ ಇಲ್ಲದೇ ನಿದ್ರಾವಸ್ಥೆಯಲ್ಲಿದ್ದರು. ಅವರಿಗೆ ಯಾವ ಪ್ರಜ್ಞೆಯೂ ಇರಲಿಲ್ಲ. ಈ ರೀತಿ ಎಚ್ಚರತಪ್ಪಿ ಮೂರ್ಛಾವಸ್ಥೆಯಲ್ಲಿದ್ದುದರಿಂದ ಅಂತಹ ಜೀವಾತ್ಮರನ್ನು ಭಗವಂತ ಇಲ್ಲವೆಂಬಂತೆ ಕಂಡ.  

ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಚತುರ್ಮುಖ-ಪ್ರಾಣದೇವರು ಎಚ್ಚರ ತಪ್ಪುವುದಿಲ್ಲ. [ಪ್ರಳಯೇಪಿ ಪ್ರತಿಭಾತ ಪರಾ-ವರಾಹ]. ಆದರೆ ಅವರೂ ಕೂಡಾ ನಿಷ್ಕ್ರೀಯರಾಗಿರುವುದರಿಂದ ಇದ್ದೂ ಇಲ್ಲದಂತಾಗುತ್ತಾರೆ. 

ಜೀವಾತ್ಮರೇನೋ ಎಚ್ಚರದಲ್ಲಿರಲಿಲ್ಲ ಅಥವಾ ನಿಷ್ಕ್ರೀಯರಾಗಿದ್ದರು ಸರಿ, ಆದರೆ ಶ್ರೀಲಕ್ಷ್ಮಿ?  ಎಂದರೆ ಮೈತ್ರೆಯರು ಹೇಳುತ್ತಾರೆ: “ಆಕೆ ಸುಪ್ತಳಾಗಿದ್ದಳು” ಎಂದು. ಶ್ರೀಲಕ್ಷ್ಮಿಯ ಸುಪ್ತಾವಸ್ಥೆ ಎಂದರೆ ಅದು ಜೀವಾತ್ಮರಂತೆ ಸಂಪೂರ್ಣ ಎಚ್ಚರ ತಪ್ಪಿರುವುದಲ್ಲ. ಬ್ರಹ್ಮತರ್ಕದಲ್ಲಿ ಹೇಳುವಂತೆ: ‘ಶಕ್ಯತ್ವಾಚ್ಛಕ್ತಯೋ ಭಾರ್ಯಾಃ ಶಕ್ತಿಃ ಸಾಮರ್ಥ್ಯಮುಚ್ಯತೇ’ ॥ ಸುಪ್ತಾವಸ್ಥೆಯಲ್ಲಿ ಆಕೆ ಕೇವಲ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಎಚ್ಚರ/ಆಸಕ್ತಿ ಹೊಂದಿರುವುದಿಲ್ಲ. [ಆಚಾರ್ಯ ಮಧ್ವರು ತಮ್ಮ ಭಾಷ್ಯದಲ್ಲಿ ಭಾರ್ಯಾಃ(ಪತ್ನಿಯರು) ಎಂದು ಬಹುವಚನ ಪ್ರಯೋಗ ಮಾಡಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಶ್ರೀಲಕ್ಷ್ಮಿ ಒಬ್ಬಳೇ ಇರುವಾಗ ಬಹುವಚನ ಪ್ರಯೋಗವೇಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಇದಕ್ಕೆ ಕಾರಣವೆಂದರೆ: ಪ್ರಳಯ ಕಾಲದಲ್ಲಿ ಶ್ರಿಲಕ್ಷ್ಮಿಯು ತನ್ನ ಶ್ರೀ-ಭೂ-ದುರ್ಗಾ ರೂಪದಲ್ಲಿ  ಭಗವಂತನ ಜೊತೆಗೆ ಯೋಗ ನಿದ್ರೆಯಲ್ಲಿರುತ್ತಾಳೆ. ಇಷ್ಟೇ ಅಲ್ಲ, ವೇದದ ಒಂದೊಂದು ಮಂತ್ರಕ್ಕೂ ಅಭಿಮಾನಿಯಾಗಿರುವ ಶ್ರೀಲಕ್ಷ್ಮಿಯ ಅನಂತ ರೂಪಗಳಿವೆ. ಆ ಅನಂತ ರೂಪಗಳೊಂದಿಗೆ ಆಕೆ ಭಗವಂತನನ್ನು ನಿರಂತರ ಸ್ತೋತ್ರಮಾಡುತ್ತಿರುತ್ತಾಳೆ].

ಈ ರೀತಿ ಒಂದಕ್ಕೊಂದನ್ನು ತಳಕುಹಾಕಿ ನೋಡುತ್ತಾ ಹೋದಾಗ ಒಂದು ಅದ್ಭುತವಾದ ಸೃಷ್ಟಿಪೂರ್ವದ, ಪ್ರಳಯಕಾಲದ ಪ್ರಪಂಚ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಯಾವುದೂ ಇಲ್ಲ, ಆದರೆ ಎಲ್ಲವೂ ಇದೆ. ಎಚ್ಚರವಾಗಿದ್ದಾರೆ ಆದರೂ ನಿಷ್ಕ್ರೀಯರಾಗಿದ್ದಾರೆ. ವ್ಯೋಮಸಂಹಿತದಲ್ಲಿ ಹೇಳುವಂತೆ: ‘ಸುಪ್ತಿಸ್ತು ಪ್ರಕೃತೇಃ ಪ್ರೋಕ್ತಾ ಅತೀವ ಭಗವದ್ರತಿಃ| ಅನಾಸ್ಥಾSನ್ಯತ್ರ ಚ ಪ್ರೋಕ್ತಾ ವಿಷ್ಣೋಶ್ಚಕ್ಷುರ್ನಿಮೀಲನಮ್ ॥ ಜಡ ಪ್ರಕೃತಿಯೂ ಕೂಡಾ ಪರಿಣಾಮವಿಲ್ಲದೇ ಸುಪ್ತವಾಗಿದೆ. ಕೇವಲ ಭಗವಂತ ಮಾತ್ರ ತನ್ನ ಶಕ್ತಿ ಸಾಮರ್ಥ್ಯದೊಂದಿಗೆ ಯೋಗನಿದ್ರೆಯಲ್ಲಿದ್ದಾನೆ. ಭಗವಂತನ ನಿದ್ರೆ ಎಂದರೆ ಅದು ‘ಚಿಂತಿಸುವ ಅಥವಾ ಯೋಚಿಸುತ್ತಿರುವ ಎಚ್ಚರದ ಸ್ಥಿತಿ. ಆತನಲ್ಲಿ ಮಾತ್ರ ಸಮಸ್ತ ಕಾಲದಲ್ಲಿ ಎಲ್ಲವೂ ಜಾಗೃತವಾಗಿರುತ್ತದೆ. ಇದು ಸೃಷ್ಟಿಪೂರ್ವದ ಒಂದು ಅತ್ಯದ್ಭುತ ಚಿತ್ರಣ.

ಸೃಷ್ಟಿಪೂರ್ವದ ಸ್ಥಿತಿಯನ್ನು ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಕಣ್ಮುಚ್ಚಿ ತನ್ನ ಆನಂದವನ್ನು ತಾನೇ ಅನುಭವಿಸುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನನ್ನು ಸ್ತೋತ್ರಮಾಡುತ್ತಿರುವ ಪತ್ನಿ ಲಕ್ಷ್ಮೀದೇವಿಯ ಶ್ರುತಿಗೀತೆಯನ್ನು ಕೇಳುತ್ತಾ ಅದನ್ನು ಆಸ್ವಾದಿಸುತ್ತಿದ್ದಾನೆ. ಶ್ರೀಲಕ್ಷ್ಮಿ ಪ್ರಳಯಕಾಲದ ಪ್ರಾರಂಭದಿಂದ ಕೊನೆಯತನಕ ಇತರ ಯಾವುದೇ ವಿಷಯದಲ್ಲಿ ಆಸಕ್ತಿ ತೋರದೇ, ಅಖಂಡ ವೇದಮಂತ್ರಗಳಿಂದ ಭಗವಂತನನ್ನು ಸ್ತೋತ್ರ ಮಾಡುತ್ತಿದ್ದಾಳೆ. ಬ್ರಹ್ಮ-ವಾಯುವಿಗೆ ಎಚ್ಚರವಿದೆ(ಇರವಿನ ಅರಿವಿದೆ) ಆದರೆ ಕ್ರಿಯಾತ್ಮಕವಾದ ಶರೀರವಿಲ್ಲದೆ, ಲಿಂಗಶರೀರದಲ್ಲಿ ಅವರು ನಿಷ್ಕ್ರೀಯರಾಗಿದ್ದಾರೆ. ಉಳಿದ ಸಮಸ್ತ ಜೀವಾತ್ಮರುಗಳಿಗೆ ಎಚ್ಚರವೇ ಇಲ್ಲ. ಈ ರೀತಿ ಭಗವಂತನೊಬ್ಬನೆ ಯಾವುದೇ ಜ್ಞಾನ ಲೋಪವಿಲ್ಲದೆ ಎಚ್ಚರದ ಯೋಗನಿದ್ರೆಯಲ್ಲಿದ್ದುದರಿಂದ, ಇತರ ಯಾವುದೇ ಜೀವಜಾತ ಸಕ್ರೀಯವಾಗಿಲ್ಲವಾದ್ದರಿಂದ, ಶ್ರಿಲಕ್ಷ್ಮಿಯೂ ಕೂಡಾ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಆಸಕ್ತಿ ಹೊಂದಿಲ್ಲವಾದ್ದರಿಂದ,   ಸರ್ವಸಮರ್ಥನಾದ, ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ,  ತನ್ನನ್ನು ಬಿಟ್ಟು ಇನ್ನೇನೂ ಇಲ್ಲವೆಂಬಂತೆ ಪ್ರಪಂಚವನ್ನು ಕಂಡ ಸ್ಥಿತಿಯೇ ಸೃಷ್ಟಿಪೂರ್ವ ಸ್ಥಿತಿ.  


ತತೋSಭವನ್ಮಹತ್ತತ್ತ್ವಮವ್ಯಕ್ತಾತ್ ಕಾಲಚೋದಿತಾತ್ ।

ವಿಜ್ಞಾನಾತ್ಮಾSSತ್ಮದೇಹಸ್ಥಂ ವಿಶ್ವಂ ವ್ಯಞ್ಜಂಸ್ತಮೋ ನುದನ್ ॥೦೫॥


ಪ್ರಳಯಕಾಲ ಉರುಳಿ ಸೃಷ್ಟಿ ಕಾಲ ಬರುತ್ತಿದ್ದಂತೆಯೇ ಪ್ರಪಂಚದ ಯೋಚನೆಯೇ ಇಲ್ಲದೆ ನಿರಂತರ ಭಗವಂತನನ್ನು ಸ್ತೋತ್ರಮಾಡುತ್ತಿದ್ದ ಶ್ರೀಲಕ್ಷ್ಮಿಗೆ ‘ಕಣ್ಣಿಗೆ ಕಾಣುವ ಪ್ರಪಂಚವೊಂದನ್ನು ಸೃಷ್ಟಿಮಾಡಬೇಕು’ ಎನ್ನುವ ಚಿಂತನೆ ಮೂಡಿತು. ಇದೇ ಪ್ರಪಂಚ ಸೃಷ್ಟಿಗೆ ನಾಂದಿಯಾಯಿತು. ಶ್ರೀಲಕ್ಷ್ಮಿ ಚಿಂತನೆ ಮಾಡುತ್ತಿದ್ದಂತೆಯೇ ಸರ್ವಗತನಾದ ಭಗವಂತ ಪುರುಷರೂಪಿಯಾಗಿ ನಿಂತ. ಶ್ರೀಲಕ್ಷ್ಮಿ ಸ್ತ್ರೀರೂಪ ತೊಟ್ಟು ನಿಂತಳು. ಹೀಗೆ ಸಹಜವಾದ ದಾಂಪತ್ಯಕ್ಕೆ ಬೇಕಾದ ಸ್ತ್ರೀ-ಪುರುಷ ರೂಪದಲ್ಲಿ ಲಕ್ಷ್ಮೀ-ನಾರಾಯಣರ ಸಮಾಗಮವಾಯಿತು. ಪುರುಷರೂಪಿ ಭಗವಂತ ತನ್ನ ರೇತಸ್ಸನ್ನು ಲಕ್ಷ್ಮಿಯ ಗರ್ಭದಲ್ಲಿ ಇರಿಸಿದ.

ಭಗವಂತ ಸೃಷ್ಟಿಪೂರ್ವದಲ್ಲಿ ಅನುಸರಿಸಿದ ವಿಧಾನವೇ ಇಂದು ಪ್ರಪಂಚದಲ್ಲಿರುವ ವಿಧಾನ. ಆದರೆ ಮುಂದೆ ಜನನದ ವಿಧಾನ ಮಾತ್ರ ಸೃಷ್ಟಿಯ ಆದಿಯಲ್ಲಿ ಭಿನ್ನವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಭಗವಂತ ಲಕ್ಷ್ಮಿಯಿಂದ ಮಹತತ್ತ್ವದ ಅಭಿಮಾನಿಯಾದ ಚತುರ್ಮುಖನನ್ನು ಸೃಷ್ಟಿ ಮಾಡಿದ. ಈ ಹಿಂದೆ ಭಾಗವತದ ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ: ಲಕ್ಷ್ಮಿ ಚತುರ್ಮುಖನನ್ನು ತನ್ನ ಶಿರಸ್ಸಿನಿಂದ  ಸೃಷ್ಟಿಸಿದಳು. [ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ ।  ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ   ॥ಋಗ್ವೇದ ೧೦-೧೨೫-೦೭ ॥].  ಈ ಸೃಷ್ಟಿಗೆ ಕಾರಣ ಎರಡು: ಅವ್ಯಕ್ತ ಮತ್ತು ಕಾಲ. ಇಲ್ಲಿ ಅವ್ಯಕ್ತ(ಶ್ರಿತತ್ತ್ವ) ಎಂದರೆ ಚಿತ್ಪ್ರಕೃತಿ ಮತ್ತು ಜಡಪ್ರಕೃತಿ. ತ್ರಿಗುಣಾತ್ಮಕವಾದ ಜಡಪ್ರಕೃತಿಯ ಸತ್ವಾಂಶದಿಂದ, ಉತ್ಪತ್ತಿಕಾಲದಲ್ಲಿ  ಚತುರ್ಮುಖನ ಸೃಷ್ಟಿಯಾಯಿತು. ಉತ್ಪತ್ತಿಕಾಲ ಜಡವಾದುದರಿಂದ  ಕಾಲನಾಮಕ ಭಗವಂತ ಯಾವ ಕಾಲದಲ್ಲಿ ಸೃಷ್ಟಿಯ ಮೊಟ್ಟಮೊದಲ ಜೀವ ಸೃಷ್ಟಿಯಾಗಬೇಕೋ ಆ ಕಾಲದಲ್ಲಿ, ಲಕ್ಷ್ಮಿಯ ಮೂಲಕ,  ಸತ್ವಗುಣದಿಂದ ಚತುರ್ಮುಖನನ್ನು ಸೃಷ್ಟಿಸಿದ. ಲಕ್ಷ್ಮಿ ಚತುರ್ಮುಖನನ್ನು ತನ್ನ ಬೈತಲೆಯಲ್ಲಿ(ಶಿರಸ್ಸಿನಲ್ಲಿ) ಹಡೆದಳು. ಈ ರೀತಿ ಮಹತತ್ತ್ವದ ಅಭಿಮಾನಿ ದೇವತೆಯಾದ ಚತುರ್ಮುಖನ ಮತ್ತು ಮಹತತ್ತ್ವದ ಸೃಷ್ಟಿಯಾಯಿತು.

ಇಲ್ಲಿ ಮೊದಲು ನಾವು ಮಹತತ್ತ್ವ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ. “ಅಸ್ಥಿತಾ ಸ್ಥಿತಿಃ ಮಹತತ್ತ್ವಮ್” ಅಂದರೆ ಇರವಿನ ಅರಿವು ಅಥವಾ ‘ಇದೆ’ ಎನ್ನುವ ಎಚ್ಚರವೇ ಮಹತತ್ತ್ವ. ಮಹತತ್ತ್ವದ ಸೃಷ್ಟಿಯಾಯಿತು ಎಂದರೆ: ದೀರ್ಘ ನಿದ್ರೆಯಲ್ಲಿದ್ದ ಜೀವರುಗಳಿಗೆ ಇರವಿನ ಅರಿವು(ಅಸ್ಮಿ) ಬಂತು ಅಥವಾ ಜೀವಾತ್ಮರಿಗೆ ಎಚ್ಚರವಾಯಿತು ಎಂದರ್ಥ. [ನಮ್ಮ ದೇಹದಲ್ಲಿ ಮಹತತ್ತ್ವವನ್ನು ನಾವು ಚಿತ್ತ ಎಂದು ಕರೆಯುತ್ತೇವೆ]. ಭಗವಂತನ ಸೃಷ್ಟಿ ಕ್ರಿಯೆಯಲ್ಲಿ ಇನ್ನೂ ಸ್ಥೂಲವಾಗಿ ಯಾವುದೂ ಸೃಷ್ಟಿಯಾಗಿಲ್ಲ.  ಚತುರ್ಮುಖನ ಸೃಷ್ಟಿ ಎನ್ನುವುದು ಸೃಷ್ಟಿ ಪ್ರಕ್ರಿಯೆಯ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ  ಸ್ಥಿತಿ. [ಚತುರ್ಮುಖನಿಗೆ  ಅನೇಕ ಹುಟ್ಟಿದೆ. ಮೊದಲು ಶ್ರೀಲಕ್ಷ್ಮಿಯ ಶಿರಸ್ಸಿನಲ್ಲಿ ಸೂಕ್ಷ್ಮರೂಪದಲ್ಲಿ ಹುಟ್ಟುದ ಆತ ನಂತರ ಭಗವಂತನ ನಾಭಿಯಲ್ಲಿ. ಸ್ಥೂಲರೂಪದಲ್ಲಿ  ಹುಟ್ಟಲಿಕ್ಕಿದ್ದಾನೆ. ಹೀಗೆ ಯಾವ ರೀತಿ ಸೃಷ್ಟಿ ಬೆಳೆಯುತ್ತದೆ ಎನ್ನುವುದನ್ನು ಮುಂದೆ ನೋಡೋಣ].