Tuesday, March 5, 2013

Shrimad BhAgavata in Kannada -Skandha-01-Ch-08(03)


ಘಾತಯಿತ್ವಾSಸತೋ ರಾಜ್ಞಾಃ ಕಚಸ್ಪರ್ಶಹತಾಯುಷಃ ।
ಸಾಧಯಿತ್ವಾSಜಾತಶತ್ರೋಃ ಸ್ವಾರಾಜ್ಯಂ ಕಿತವೈರ್ಹೃತಮ್ ॥೮॥

ದ್ರೌಪದಿಯ ತಲೆಮುಡಿಯನ್ನು ಮುಟ್ಟಿದ್ದರಿಂದಲೇ ತಮ್ಮ ಆಯುಸ್ಸಿನ ಶೇಷವನ್ನು ಕಳೆದುಕೊಂಡ ದುಷ್ಟ ರಾಜರನ್ನು ಕೊಲ್ಲಿಸಿ, ಕಪಟಿಗಳು ಅಪಹಾರ ಮಾಡಿದ್ದ ಧರ್ಮರಾಯನ ಸ್ವರಾಜ್ಯವನ್ನು ಅವನಿಗೆ ಒಪ್ಪಿಸಿ, ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಲ್ಲುತ್ತಾನೆ.
  
ಆಮಂತ್ರ್ಯ ಪಾಂಡುಪುತ್ರಾಂಶ್ಚ ಶೈನೇಯೋದ್ಧವಸಂಯುತಃ ।
ದ್ವೈಪಾಯನಾದಿಭಿರ್ವಿಪ್ರೈಃ ಪೂಜಿತೈಃ ಪ್ರತಿಪೂಜಿತಃ ॥೧೦॥

ಕೃಷ್ಣ ಪಾಂಡವರರಲ್ಲಿ ತಾನು ಹೋಗಿ ಬರುತ್ತೇನೆಂದು ಹೇಳುತ್ತಾನೆ. ಅಲ್ಲಿ ಆಗಮಿಸಿದ್ದ ವೇದವ್ಯಾಸರು,ಪರಶುರಾಮ ಮತ್ತು ಆ ಕಾಲದ ಎಲ್ಲಾ ಋಷಿಗಳಿಗೆ ಶ್ರೀಕೃಷ್ಣ ನಮಸ್ಕರಿಸುತ್ತಾನೆ. ಅವರನ್ನು  ಪೂಜಿಸಿ ಸತ್ಕರಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಅವರೆಲ್ಲರೂ ಕೃಷ್ಣನನ್ನು ಸತ್ಕರಿಸುತ್ತಾರೆ. ಕೃಷ್ಣನ ಜೊತೆಗಾರರಾದ ಸಾತ್ಯಕಿ ಮತ್ತು ಉದ್ಧವ ಕೂಡಾ  ಕೃಷ್ಣನ ಜೊತೆಗೆ ಹೊರಟು ನಿಲ್ಲುತ್ತಾರೆ.

ಗಂತುಂ ಕೃತಮತಿರ್ಬ್ರಹ್ಮನ್ ದ್ವಾರಕಾಂ ರಥಮಾಸ್ಥಿತಃ ।
ಉಪಲೇಭೇSಭಿಧಾವಂತೀಮುತ್ತರಾಂ ಭಯವಿಹ್ವಲಾಮ್ ॥೧೧॥

ಸತ್ಕಾರ, ಬೀಳ್ಕೊಡುಗೆ ಮುಗಿದ ಮೇಲೆ ದ್ವಾರಕೆಗೆ ಹೋಗಲು ಕೃಷ್ಣ ರಥವನ್ನೇರುತ್ತಾನೆ. ಕೃಷ್ಣ ರಥದಲ್ಲಿ ಕುಳಿತಿದ್ದಾಗ ಅಲ್ಲಿ ಒಂದು ಘಟನೆ ನಡೆಯುತ್ತದೆ. ತುಂಬು ಗರ್ಭಿಣಿ, ಅಭಿಮನ್ಯುವಿನ ಪತ್ನಿಯಾದ ಉತ್ತರೆ ಭಯಗ್ರಸ್ತಳಾಗಿ ಕೂಗಿಕೊಂಡು ಕೃಷ್ಣನ ಬಳಿ ಬಂದು, ಕೃಷ್ಣನ ಪಾದವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ.

ಉತ್ತರೋವಾಚ-
ಪಾಹಿಪಾಹಿ ಮಹಾಬಾಹೋ ದೇವದೇವ ಜಗತ್ಪತೇ ।
ನಾನ್ಯಂ ತ್ವದಭಯಂ ಪಶ್ಯೇ ಯತ್ರ ಮೃತ್ಯುಃ ಪರಸ್ಪರಮ್ ॥೧೨॥

ಉತ್ತರೆ ಕೃಷ್ಣನ ಪಾದವನ್ನು ಹಿಡಿದುಕೊಂಡು ಹೇಳುತ್ತಾಳೆ: “ಹೇ ಕೃಷ್ಣ, ನನ್ನನ್ನು ಸಾವಿನ ದವಡೆಯಿಂದ ಪಾರುಮಾಡು. ಈ ಪ್ರಪಂಚದಲ್ಲಿ ಭಯಪರಿಹಾರ ಮಾಡುವ ಶಕ್ತಿ ನಿನಗಲ್ಲದೆ ಇನ್ನೊಬ್ಬರಿಗಿಲ್ಲ. ನೀನೇ ನನ್ನನ್ನು ಕಾಪಾಡಬೇಕು” ಎಂದು. ಇಲ್ಲಿ ಉತ್ತರೆ ಹೇಳಿರುವ ಮಾತನ್ನೇ ಉಪನಿಷತ್ತು ಹೇಳುತ್ತದೆ. ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ ॥ಕಠ-೧.೩.೨॥ ಭಗವಂತನೊಬ್ಬನೇ ಅಭಯಪ್ರದ. ಉಳಿದವರೆಲ್ಲರೂ ಒಂದಲ್ಲಾ ಒಂದು ರೀತಿಯಿಂದ ಭಯಗ್ರಸ್ಥರೇ. ಉತ್ತರೆ ಹೇಳುತ್ತಾಳೆ: ಎಲ್ಲರೂ ಒಂದಲ್ಲಾ ಒಂದು ದಿನ ಸಾಯುವವರೇ. ಅಂತವರು ಹೇಗೆ ಇನ್ನೊಬ್ಬರನ್ನು ರಕ್ಷಿಸಬಲ್ಲರು? ಜನ್ಮ-ಮರಣಗಳಿಂದಾಚೆಗಿರುವ ನೀನೊಬ್ಬನೇ ನಮ್ಮನ್ನು ರಕ್ಷಿಸಬಲ್ಲೆ” ಎಂದು.

ಅಭಿದ್ರವತಿ ಮಾಮೀಶ ಶರಸ್ತಪ್ತಾಯಸೋ ವಿಭೋ ।
ಕಾಮಂ ದಹತು ಮಾಂ ನಾಥ ಮಾ ಮೇ ಗರ್ಭೋ ನಿಪಾತ್ಯತಾಮ್ ॥೧೩॥

ಮುಂದುವರಿದು ಉತ್ತರೆ ಹೇಳುತ್ತಾಳೆ: “ಒಂದು ಕಾದ ಕಬ್ಬಿಣದ ಸಲಾಕೆಯಂತಹ ಭಯಂಕರ ಬೆಂಕಿ ನನ್ನನ್ನು ಸುಟ್ಟುಬಿಡಬೇಕೆಂದು ನನ್ನ  ಕಡೆ ಓಡಿ ಬರುತ್ತಿದೆ. ಒಂದು ವೇಳೆ ಅದು ನನ್ನನ್ನು ಸುಡುವುದಾದರೆ ಸುಟ್ಟುಬಿಡಲಿ. ನನ್ನ ಆಸೆ ಅದಲ್ಲ. ಇಂದು ಪಾಂಡವರ ಒಂದೇ ಒಂದು ಸಂತಾನ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಅದನ್ನು ಕಳೆದುಕೊಂಡರೆ ಪಾಂಡವರ ಸಂತು ನಿಸಂತುವಾಗುತ್ತದೆ. ಆದ್ದರಿಂದ ನನ್ನ ಗರ್ಭಕ್ಕೆ ಏನೂ ಅಪಾಯವಾಗದಂತೆ ರಕ್ಷಣೆ ಮಾಡು” ಎಂದು ಕೃಷ್ಣನ ಪಾದಕ್ಕೆ ಶರಣಾಗುತ್ತಾಳೆ ಉತ್ತರೆ.

ಸೂತ ಉವಾಚ-
ಉಪಧಾರ್ಯ ವಚಸ್ತಸ್ಯಾ ಭಗವಾನ್ ಭಕ್ತವತ್ಸಲಃ ।
ಅಪಾಂಡವಮಿದಂ ಕರ್ತುಂ ದ್ರೌಣೇರಸ್ತ್ರಮಬುಧ್ಯತ ॥೧೪॥

ಉತ್ತರೆಯ ಮಾತನ್ನು ಕೇಳಿದ ತಕ್ಷಣ, ಪಾಂಡವರ ವಂಶವನ್ನು ನಿರ್ವಂಶಮಾಡುವ ದುರುದ್ದೇಶದಿಂದ ಅಶ್ವತ್ಥಾಮ ಪ್ರಯೋಗಿಸಿದ ಬ್ರಹ್ಮಾಸ್ತ್ರವೇ ಉತ್ತರೆಯ ಬೆನ್ನೆಟ್ಟಿ ಬಂದಿದೆ ಎನ್ನುವ ಸತ್ಯ  ಕೃಷ್ಣನಿಗೆ ತಿಳಿಯುತ್ತಾನೆ.

ವ್ಯಸನಂ ವೀಕ್ಷ್ಯ ತತ್ ತೇಷಾಮನನ್ಯವಿಷಯಾತ್ಮನಾಮ್ ।
ಸುದರ್ಶನೇನ ಸ್ವಾಸ್ತ್ರೇಣ ಸ್ವಾನಾಂ ರಕ್ಷಾಂ ವ್ಯಧಾದ್ ವಿಭುಃ ॥೧೬॥

ಇದು ಉತ್ತರೆಯೊಬ್ಬಳ ದುಃಖವಲ್ಲ. ಇಡೀ ಪಾಂಡವ ವಂಶದ ದುಃಖ. ಇಲ್ಲಿ ಪಾಂಡವರ ಎಲ್ಲಾ ಸಾಧನೆಯನ್ನು ವ್ಯರ್ಥ ಮಾಡುವ ಪ್ರಯತ್ನ ಅಶ್ವತ್ಥಾಮನಿಂದ ನಡೆಯುತ್ತಿದೆ. ಇಡೀ ಪಾಂಡವ ಮನೆತನಕ್ಕೆ ಬಂದಿರುವ ಈ ವ್ಯಸನವನ್ನು ಕೃಷ್ಣ ಗಮನಿಸಿದ. ಈ ಹಿಂದೆ ಹೇಳಿದಂತೆ ಭಗವಂತ ಭಕ್ತವತ್ಸಲ. ಆತ ಒಬ್ಬ ಸಾಮಾನ್ಯ ಭಕ್ತನ ಕರೆಗೂ ಓಗೊಡುತ್ತಾನೆ. ಹೀಗಿರುವಾಗ ಪಾಂಡವರ ಕರೆಗೆ ಸ್ಪಂದಿಸನೇ ಭಗವಂತ? ಪಾಂಡವರ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದಾರಾಧನೆ ಇದೆ. ಅವರು ತಮ್ಮ ಇಡೀ ಬದುಕಿನಲ್ಲಿ ಭಗವಂತನನ್ನು ಅನನ್ಯವಾಗಿ ಪ್ರೀತಿಸಿದವರು. ಗೀತೆಯಲ್ಲಿ ಹೇಳುವಂತೆ: ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ । ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ॥೮-೧೪॥ ಅಂದರೆ: “ನಿರಂತರ ನನ್ನನ್ನು ನೆನೆಯುವವನಿಗೆ, ಅಂತಹ ನಿರಂತರ ಸಾಧನೆಯಿಂದ ಸಿದ್ಧಿಪಡೆದವನಿಗೆ ನಾನು ಕೈಸೆರೆ” ಎಂದರ್ಥ. ಈ ಹಿನ್ನೆಲೆಯಲ್ಲಿ ಪಾಂಡವರನ್ನು ನೋಡಿದರೆ ಅವರು ಕೃಷ್ಣ ಇಟ್ಟ ಹೆಜ್ಜೆಯನ್ನು ಅನುಸರಿಸಿ ನಡೆದವರು. ತಮ್ಮ ಜೀವನರಥಕ್ಕೆ ಕೃಷ್ಣನನ್ನು ಸಾರಥಿಯನ್ನಾಗಿಸಿಕೊಂಡು ಬದುಕಿದವರು. ಅಂತಹ ಪಾಂಡವರ ರಕ್ಷಣೆಯ ಭಾರವನ್ನು ಇಲ್ಲಿ ಶ್ರೀಕೃಷ್ಣ ವಹಿಸುತ್ತಾನೆ.
ನಮಗೆ ತಿಳಿದಂತೆ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಈಗಾಗಲೇ ಅನೇಕ ದಿನಗಳಾಗಿವೆ. ಆದರೆ ಇಲ್ಲಿಯ ತನಕ ಯಾವುದೇ ಪ್ರಭಾವ ಬೀರದ ಆ ಅಸ್ತ್ರ, ಈಗ ಕೃಷ್ಣ ದ್ವಾರಕೆಗೆ ಹೊರಟು ನಿಂತಾಗ ಕೆಲಸ ಮಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ  ಶ್ರೀಕೃಷ್ಣ ಉತ್ತರೆಯ ಗರ್ಭದಲ್ಲಿ ಚಕ್ರಧಾರಿಯಾಗಿ ನಿಂತು ಮಗುವಿನ ರಕ್ಷಣೆ ಮಾಡುವುದರ ಮೂಲಕ ಪಾಂಡವರ ರಕ್ಷಣೆ ಮಾಡುತ್ತಾನೆ.

ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ ।
ಸ್ವಮಾಯಯಾSSವೃಣೋದ್ ಗರ್ಭಂ ವೈರಾಟ್ಯಾಃ ಕುರುತಂತವೇ ॥೧೭॥

ಭಗವಂತ ಸರ್ವಾಂತರ್ಯಾಮಿ. ಆತ ದ್ವಾರಕೆಗೆ ಹೊರಟು ನಿಂತ ಎಂದರೆ ಹಸ್ತಿನಾಪುರವನ್ನು ತ್ಯಜಿಸಿದ ಎಂದರ್ಥವಲ್ಲ. ಸರ್ವಗತನಾದ ಭಗವಂತ ಒಂದು ರೂಪದಿಂದ ಹೊರಟರೆ ಇನ್ನೊಂದು ರೂಪದಲ್ಲಿ  ಇದ್ದೇ ಇರುತ್ತಾನೆ. ವಾಸ್ತವವಾಗಿ ನೋಡಿದರೆ ಭಗವಂತ ಪ್ರತಿಯೊಬ್ಬರೊಳಗೂ ತದ್ದತ್ ರೂಪನಾಗಿ ನೆಲೆಸಿದ್ದಾನೆ. ಇಲ್ಲಿ ಒಂದು ರೂಪದಲ್ಲಿ ಉತ್ತರೆಯ ಒಳಗಿರುವ ಭಗವಂತ, ಇನ್ನೊಂದು ರೂಪನಾಗಿ ಆಕೆಯ ದೇಹವನ್ನು ಪ್ರವೇಶಿಸಿದ. ಇದು ಭಗವಂತನ ಲೀಲೆ.  
ಇಲ್ಲಿ ಭಗವಂತನನ್ನು ‘ಆತ್ಮಾ’ ಮತ್ತು  ‘ಯೋಗೇಶ್ವರಃ’ ಎಂದು ಸಂಬೋಧಿಸಿದ್ದಾರೆ. ಆತ್ಮಾ ಎಂದರೆ ಸ್ವಾಮಿ. ನಮ್ಮೊಳಗೆ ತುಂಬಿ, ನಮ್ಮನ್ನು ನಿಯಂತ್ರಿಸಿ, ವಿಷಯಭೋಗಗಳನ್ನು ಮಾಡಿ, ನಮಗೂ ವಿಷಯ ಭೋಗಗಳನ್ನು ಕೊಡುತ್ತಾ, ನಮ್ಮ ಜೀವನದ ಎಲ್ಲಾ ಮುಖಗಳನ್ನೂ  ನಿಯಂತ್ರಿಸುವ ‘ಸ್ವಾಮಿ’ ಭಗವಂತ ‘ಆತ್ಮಾ’. ಇನ್ನು ‘ಯೋಗೇಶ್ವರಃ’ ಎಂದರೆ:  ಎಲ್ಲಾ ಐಶ್ವರ್ಯಗಳ ಸಿದ್ಧಿ ಉಳ್ಳವನು. ಗೀತೆಯಲ್ಲಿ ಹೇಳುವಂತೆ ‘ಯತ್ರ ಯೋಗೇಶ್ವರಃ ಕೃಷ್ಣಃ’. ಆತ  ಎಲ್ಲಾ ಯೋಗಗಳ ಒಡೆಯ. ಇಂತಹ ಯೋಗೇಶ್ವರ ಕೃಷ್ಣ, ವಿರಾಟನ ಮಗಳಾದ  ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವ ಕುರುವಂಶದ ಸಂತತಿಗೆ ವಿಶೇಷ ಆವರಣವಾಗಿ ನಿಂತುಬಿಟ್ಟ.  [ತಾನು ಗರ್ಭದಲ್ಲಿದ್ದಾಗ ಚಕ್ರಧಾರಿ ರೂಪದಲ್ಲಿ ಕೃಷ್ಣ ದರ್ಶನ ಕೊಟ್ಟಿರುವುದನ್ನು ಪರೀಕ್ಷಿತ ರಾಜ ವಿವರಿಸುವುದನ್ನು ಮುಂದೆ ಭಾಗವತವೇ ವಿವರಿಸುತ್ತದೆ]. 

Wednesday, February 27, 2013

Shrimad BhAgavata in Kannada -Skandha-01-Ch-08(02)


ಅಥ ತೇ ಸಂಪರೇತಾನಾಂ ಸ್ವಾನಾಮುದಕಮಿಚ್ಛತಾಂ ।
ದಾತುಂ ಸಕೃಷ್ಣಾ ಗಂಗಾಯಾಂ ಪುರಸ್ಕೃತ್ಯ ಯಯುಃ ಸ್ತ್ರಿಯಃ ॥೪॥

ಸಾಮಾನ್ಯವಾಗಿ ಸತ್ತ ಜೀವಗಳು ಹತ್ತನೇ ದಿನ ತಮ್ಮ ಬಂಧುಗಳು ಕೊಡುವ ದಶಾಂಜಲಿಗಾಗಿ ಕಾದು ಕುಳಿತಿರುತ್ತವಂತೆ. ಇದರ ಅರ್ಥ ಆ ಜೀವಗಳು ಹಸಿವೆ-ಬಾಯಾರಿಕೆಯಿಂದ ಕಾಯುತ್ತವೆ ಎಂದಲ್ಲ. ಸಾಮಾನ್ಯವಾಗಿ ನಿಜವಾದ ಬಂಧುಗಳು ಎಂದರೆ ನಾವು ಆಪತ್ತಿನಲ್ಲಿರುವಾಗ ಬಂದು ನೋಡುವವರು. ಸತ್ತ ಜೀವಗಳಿಗೂ ಸಹ ತಮ್ಮ ಆತ್ಮೀಯರನ್ನು ನೋಡುವ ಆಸೆ ಇರುತ್ತದೆ. ಅದಕ್ಕಾಗಿ ಹತ್ತನೇ ದಿನ ಯಾರ್ಯಾರು ಧರ್ಮೊದಕ ಕೊಡುತ್ತಾರೆ ಎಂದು ನೋಡಲು ಬಯಸಿ ಕುಳಿತಿರುತ್ತವಂತೆ ಜೀವಗಳು! ಹೀಗೆ “ತಮ್ಮವರು ಧರ್ಮೊದಕ ಕೊಡಬೇಕು” ಎಂದು ಬಯಸುವ ಬಂಧುಗಳಿಗೆ, ಧರ್ಮೊದಕ ಕೊಡುವುದಕ್ಕೋಸ್ಕರ, ಪಾಂಡವರೆಲ್ಲರೂ ದ್ರೌಪದಿ ಮತ್ತು ಇತರ ಸ್ತ್ರೀಯರೊಂದಿಗೆ ಗಂಗಾನದಿ ತೀರಕ್ಕೆ ಹೋಗುತ್ತಾರೆ.

ತೇ ನಿನೀಯೋದಕಂ ಸರ್ವೇ ವಿಲಪ್ಯ ಚ ಭೃಶಂ ಪುನಃ ।
ಆಪ್ಲುತಾ ಹರಿಪಾದಾಬ್ಜರಜಃಪೂತಸರಿಜ್ಜಲೇ ॥೫॥

ಗಂಗಾ ನದಿಯಲ್ಲಿ ಎಲ್ಲರೂ ಸತ್ತವರ ಹೆಸರು ಹೇಳಿ ಧರ್ಮೋದಕ ಕೊಟ್ಟು, ಸತ್ತ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಾರೆ. ನಂತರ ಭಗವಂತನ ಪಾದದ ದೂಳಿಯಿಂದ ಪವಿತ್ರವಾದ ನೀರಿನಲ್ಲಿ ಮಿಂದು, ಸೂತಕ ಮುಕ್ತರಾಗಿ, ಹೊರಟುಬಂದು ನಗರ ಪ್ರವೇಶಿಸುತ್ತಾರೆ. ಇಲ್ಲಿ ಭಗವಂತನ ಪಾದದ ದೂಳಿ ಎಂದಿದ್ದಾರೆ. ಭಗವಂತನ ಪಾದದ ಕಿರುಬೆರಳಿನ ಎಡೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಣ್ಣ ಕಣ ಈ ಬ್ರಹ್ಮಾಂಡ. ನಮ್ಮ ದೃಷ್ಟಿಯಲ್ಲಿ ಅನಂತವಾದ ಈ ಬ್ರಹ್ಮಾಂಡ, ಭಗವಂತನ ಅನಂತತೆಯ ಮುಂದೆ ಒಂದು ಪುಟ್ಟ ದೂಳಿನ ಕಣವಿದ್ದಂತೆ. ಈ ರೀತಿ ದೂಳಿನ ಕಣದಂತಿರುವ ಲೋಕಗಳನ್ನು ಪಾವನಗೊಳಿಸುವವಳು ಗಂಗೆ.

ತತ್ರಾಸೀನಂ ಕುರುಪತಿಂ ಧೃತರಾಷ್ಟ್ರಂ ಸಹಾನುಜಮ್ ।
ಗಾಂಧಾರೀಂ ಪುತ್ರಶೋಕಾರ್ತಾಂ ಪೃಥಾಂ ಕೃಷ್ಣಾಂ ಚ ಕೇಶವಃ ॥೬॥

ಸಾಂತ್ವಯಾಮಾಸ ಮುನಿಭಿರ್ಹತಪುತ್ರಾಂಛುಚಾರ್ಪಿತಾನ್ ।
ಭೂತೇಷು ಕಾಲಸ್ಯ ಗತಿಂ ದರ್ಶಯನ್ನ ಪ್ರತಿಕ್ರಿಯಾಮ್ ॥೭॥

ಉತ್ತರಕ್ರಿಯೆ ಕರ್ಮಾದಿಗಳು  ಮುಗಿದ ಮೇಲೂ ಕೂಡಾ ದೃತರಾಷ್ಟ್ರ, ಗಾಂಧಾರಿ, ಕುಂತಿ(ಪ್ರಥಾ), ದ್ರೌಪದಿ(ಕೃಷ್ಣಾ) ಎಲ್ಲರೂ ಪುತ್ರ-ಪೌತ್ರ ಶೋಕದಲ್ಲಿ ಮುಳುಗಿದ್ದಾರೆ. ಅವರನ್ನು ಕೃಷ್ಣ ಸಂತೈಸುತ್ತಿದ್ದಾನೆ. ಕೃಷ್ಣ ಸಂತೈಸಿದರೂ ಕೂಡಾ ಸಮಾಧಾನವಾಗುವ ಸ್ಥಿತಿಯಲ್ಲಿಲ್ಲದ ಅವರನ್ನು ಅಲ್ಲಿ ಸೇರಿರುವ ಋಷಿ-ಮುನಿಗಳು ಸಂತೈಸುತ್ತಿದ್ದಾರೆ. ಅವರು ಹೇಳುತ್ತಾರೆ: ನೀವ್ಯಾರೂ ಅಪರಾಧಿಗಳಲ್ಲ. ಇದೆಲ್ಲವೂ ವಿಧಿ ನಿಯತಿ. ಅದನ್ನು ನಾವು ಎದುರಿಸಲೇ ಬೇಕು” ಎಂದು. ಕಾಲಕ್ಕೆ ಕರುಣೆ ಇಲ್ಲ. ಎಲ್ಲರೂ ಕಾಲವಶವಾಗಿರುವುದು ಅನಿವಾರ್ಯ. ಅದಕ್ಕಾಗಿ ದುಃಖಿಸಿ ಫಲವಿಲ್ಲ ಎನ್ನುತ್ತಾರೆ ಋಷಿಗಳು. ಇಲ್ಲಿ ಕಾಲ ಎಂದರೆ ಆ ಭಗವಂತ. ಇದನ್ನು ಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ । ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನೇ ಎಂದಿದ್ದಾನೆ ಕೃಷ್ಣ. ಕಾಲಪುರುಷ ಕಬಳಿಸಲು ಹೊರಟಾಗ ಅವನನ್ನು ತಡೆಯುವವರು ಯಾರೂ ಇಲ್ಲ. ಎಲ್ಲವೂ ಅವನ ಅಧೀನ. ಕಾಲದ ನಿರ್ಧಾರ ಅಚಲ. ಅದು ಮಾಡಬೇಕಾದ ಕಾಲದಲ್ಲಿ ಮಾಡಬೇಕಾದದ್ದನ್ನು ಮಾಡಿಯೇ  ತೀರುತ್ತದೆ. ಅದು ಯಾರ ಕಣ್ಣೀರಿಗೂ ಕರಗುವುದಿಲ್ಲ. ಆದ್ದರಿಂದ ಈ ಸತ್ಯವನ್ನು ತಿಳಿದು, ಹಿಂದೆ ನಡೆದದ್ದನ್ನು ಮರೆತು, ಮುಂದೆ ಚನ್ನಾಗಿ ಬದುಕುವ ಯೋಚನೆ ಮಾಡಿ ಎಂದು ಋಷಿಗಳು ಸಮಾಧಾನ ಮಾಡುತ್ತಾರೆ.

Monday, February 25, 2013

Shrimad BhAgavata in Kannada -Skandha-01-Ch-08(01)


ಅಷ್ಠಮೋಧ್ಯಾಯಃ

ಸೂತ ಉವಾಚ
ಪುತ್ರಶೋಕಾತುರಾಃ ಸರ್ವೇ ಪಾಂಡವಾಃ ಸಹ ಕೃಷ್ಣಯಾ ।
ಸ್ವಾನಾಂ ಮೃತಾನಾಂ ಯತ್ ಕೃತ್ಯಂ ಚಕ್ರುರ್ನಿರ್ಹರಣಾದಿಕಮ್  ॥೧॥

ಅಶ್ವತ್ಥಾಮ ನಿಗ್ರಹದ ನಂತರ ತಮ್ಮ ಮಕ್ಕಳು, ಬಂಧು-ಬಳಗವನ್ನು ಕಳೆದುಕೊಂಡ ಪಾಂಡವರು, ದ್ರೌಪದಿ ಸಮೇತರಾಗಿ ಬಂದು, ಎಲ್ಲರ ಉತ್ತರಕ್ರಿಯೆ, ಶ್ರಾದ್ಧ ಕರ್ಮಾದಿಗಳಲ್ಲಿ ತೊಡಗುತ್ತಾರೆ. ಈ ರೀತಿ ಜಲಾಂಜಲಿ ಕೊಡುವಾಗ ನಡೆದ ಒಂದು ಘಟನೆಯನ್ನು ಭಾಗವತದಲ್ಲಿ ವರ್ಣಿಸಿಲ್ಲವಾದರೂ, ನಾವಿಲ್ಲಿ, ಮಹಾಭಾರತದಲ್ಲಿ ಬಂದಿರುವ ಆ ವಿವರಣೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ಜಲಾಂಜಲಿ ಕೊಡುವ ಹತ್ತನೇ ದಿನವನ್ನು ದಶಾಂಜಲಿ ಎನ್ನುತ್ತಾರೆ.  ಆ ದಿನ ಜಲಾಂಜಲಿ ಕೊಡಲು ಹೋಗಿದ್ದಾಗ, ಅಲ್ಲಿಯ ತನಕ ಸುಮ್ಮನಿದ್ದ ಕುಂತಿ ಹೇಳುತ್ತಾಳೆ: “ಅಪ್ಪಾ, ಕರ್ಣನಿಗೂ ಕೂಡಾ ಜಲಾಂಜಲಿ ಕೊಟ್ಟುಬಿಡಿ” ಎಂದು! ಈ ಮಾತನ್ನು ಕೇಳಿ ಧರ್ಮರಾಯನಿಗೆ ಆಶ್ಚರ್ಯವಾಗುತ್ತದೆ. ಆತ ಕೇಳುತ್ತಾನೆ: “ನಮ್ಮ ಪರಮ ಶತ್ರು ಆತ. ದುರ್ಯೋಧನನಿಗಿಂತ ಹೆಚ್ಚಾಗಿ ಹಠತೊಟ್ಟು ಯುದ್ಧ ಮಾಡಿಸಿದವನಾತ. ದ್ರೌಪದಿಯನ್ನು ಸಭೆಗೆಳೆದು ತರಲು ಮೂಲ ಕಾರಣ ಕರ್ಣ. ಅಂತವನಿಗೆ ನಾವೇಕೆ ಜಲಾಂಜಲಿ ಕೊಡಬೇಕು” ಎಂದು. ಪಾಪ, ಕುಂತಿ ಅದೆಷ್ಟು ದಿನ ಗುಟ್ಟು ಮಾಡಿಯಾಳು ಹೇಳಿ? ಹೆತ್ತ ಕರುಳಲ್ಲವೇ ಅದು? ಆಕೆ ಹೇಳುತ್ತಾಳೆ: “ಕರ್ಣ ನಿಮ್ಮ ಶತ್ರು ಅಲ್ಲ! ಆತ ನನ್ನ ಮಗ. ನಿನ್ನ ಅಣ್ಣ” ಎಂದು. ಯಾವುದನ್ನು ಸಮಾಜದ ಅಪವಾದಕ್ಕೆ ಹೆದರಿ ಮುಚ್ಚಿಟ್ಟಿದ್ದಳೋ, ಅದನ್ನು ಇಲ್ಲಿ ‘ಕರ್ಣನಿಗೆ ಜಲಾಂಜಲಿ ಸಿಗಲಿ’ ಎನ್ನುವ ಉದ್ದೇಶದಿಂದ ಹೊರಗೆಡಹುತ್ತಾಳೆ ಕುಂತಿ. ಈ ಮಾತನ್ನು ಕೇಳಿದ ಧರ್ಮರಾಯನಿಗೆ ತಡೆಯಲಾಗುವುದಿಲ್ಲ. ಆತ ಹೇಳುತ್ತಾನೆ: “ಎಂತಹ ಕ್ರೂರ ಹೃದಯ ನಿನ್ನದು? ನಿನ್ನ ಮಕ್ಕಳ ಕೈಯಿಂದಲೇ ನಿನ್ನ ಮಗನನ್ನು ಕೊಲ್ಲಿಸಿದೆಯ? ಈ ಮಾತನ್ನು ನೀನು ಮೊದಲೇ ಏಕೆ ಹೇಳಲಿಲ್ಲ? ನಮ್ಮ ಹಿರಿಯಣ್ಣ ಆತ ಎಂದು ತಿಳಿದಿದ್ದರೆ ನಾವು ಯುದ್ಧ ಮಾಡುತ್ತಿದ್ದೆವೇ? ನೀನಿಷ್ಟು ಕ್ರೂರಳಾಗಬಾರದಿತ್ತು ತಾಯಿ” ಎಂದು. ಧರ್ಮರಾಯನ ಮಾತಿಗೆ ಉತ್ತರವಾಗಿ ಕುಂತಿ ಹೇಳುತ್ತಾಳೆ: “ನನ್ನ ನಿರ್ಧಾರಕ್ಕೆ ಅನೇಕ ಕಾರಣಗಳಿವೆ. ಈ ವಿಚಾರವನ್ನು ಹೇಳಬೇಕು ಎಂದು ಎಣಿಸಿದೆ. ಆದರೆ ಕರ್ಣ ಅದಾಗಲೇ ಅನ್ಯಾಯದ ಮಾರ್ಗ ಹಿಡಿದಿದ್ದ. ಅವನು ಮಾಡಿದ ಅನ್ಯಾಯಕ್ಕೆ ಶಿಕ್ಷೆ ಸಿಗಲೇಬೇಕು. ಅದಕ್ಕಾಗಿ ಈವರೆಗೆ ಈ ವಿಚಾರವನ್ನು ಗುಟ್ಟಾಗಿಸಿದೆ” ಎಂದು.
ಕುಂತಿಯ ಮಾತನ್ನು ಕೇಳಿ ಧರ್ಮರಾಯನಿಗೆ ದುಃಖ ತಡೆಯಲಾಗುವುದಿಲ್ಲ. ಕುಂತಿಯಷ್ಟು ಗಟ್ಟಿ ಹೃದಯ ಆತನದಲ್ಲ. ಈ ಸಂದರ್ಭದಲ್ಲೇ ಆತ ಸಮಸ್ತ ಸ್ತ್ರೀ ಸಮುದಾಯಕ್ಕೊಂದು ಶಾಪ ಕೊಡುತ್ತಾನೆ. ಆತ ಹೇಳುತ್ತಾನೆ: “ಇಷ್ಟು ಕಾಲ ಈ ವಿಷಯವನ್ನು ನೀನು ಯಾರಿಗೂ ಹೇಳಲಿಲ್ಲ. ಇದರಿಂದಾಗಿ ನಾವು ನಮ್ಮ ಅಣ್ಣನ ವಿರುದ್ಧ ಹೋರಾಡಿ ಅವನನ್ನು ಕೊಲ್ಲುವಂತಾಯಿತು. ಇದಕ್ಕೆಲ್ಲಾ ಕಾರಣ ‘ನಿನ್ನ ಗುಟ್ಟು’. ಹಾಗಾಗಿ ಇನ್ನು ಮುಂದೆ ಹೆಂಗಸರ ಬಾಯಿಯಲ್ಲಿ ಯಾವ ಗುಟ್ಟೂ ಉಳಿಯದಿರಲಿ” ಎಂದು ನೋವಿನಿಂದ ಶಾಪ ಕೊಡುತ್ತಾನೆ.
ಮೇಲೆ ವಿವರಿಸಿದ ಘಟನೆ ಅಲ್ಲದೇ, ಯುದ್ಧ ಕಳೆದ ಮೇಲೆ, ಕೃಷ್ಣ ಮತ್ತು ವ್ಯಾಸರು ಮಾಡಿದ ಒಂದು ದೊಡ್ಡ ಕಾರ್ಯವಿದೆ. ಅದೇನೆಂದರೆ: ಗಾಂಧಾರಿಯನ್ನು  ವೇದವ್ಯಾಸರು ಮತ್ತು ದ್ರೌಪದಿಯನ್ನು ಕೃಷ್ಣ  ರಣರಂಗಕ್ಕೆ ಕರೆದುಕೊಂಡು ಹೋಗಿರುವುದು. ಮಹಾಭಾರತ ಗಾಂಧಾರಿಯ ರಣರಂಗ ಭೇಟಿಯನ್ನು ವಿಸ್ತಾರವಾಗಿ ವಿವರಿಸಿದರೆ, ಭಾಗವತ ದ್ರೌಪದಿಯ ಯುದ್ಧರಂಗದ ನೋಟದ ಅಭಿವ್ಯಕ್ತಿಯನ್ನು ಚಿತ್ರಿಸುತ್ತದೆ. ಇಲ್ಲಿ ನಾವು ಮಹಾಭಾರತದಲ್ಲಿ ಬಂದಿರುವ  ಗಾಂಧಾರಿಯ ಕಥೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ವೇದವ್ಯಾಸರು ಗಾಂಧಾರಿಯನ್ನು ಯುದ್ಧರಂಗಕ್ಕೆ ಕರೆದುಕೊಂಡು ಹೋಗಿ, ಅವಳಿಗೆ ದೃಷ್ಟಿ ಕೊಟ್ಟು ಹೇಳುತ್ತಾರೆ: “ನೋಡು ನಿನ್ನ ಮಕ್ಕಳನ್ನು” ಎಂದು. ಎಂತಹ ವಿಚಿತ್ರ! ಮದುವೆಗೆ ಮೊದಲು ಕಣ್ಣಿಗೆ ಕಣ್ಪಟ್ಟಿ ಕಟ್ಟಿಕೊಂಡಿದ್ದ ಗಾಂಧಾರಿ, ತನ್ನನ್ನು ಕೈಹಿಡಿದ ಗಂಡನನ್ನಾಗಲೀ, ತಾನು ಹೆತ್ತ ಮಕ್ಕಳನ್ನಾಗಲೀ, ತಾನು ಮದುವೆಯಾಗಿ ಬಂದ ಊರನ್ನಾಗಲೀ ನೋಡಿಲ್ಲ. ಆದರೆ ಆಕೆ ಇಂದು ನೋಡುತ್ತಿರುವುದು ತನ್ನ ಮಕ್ಕಳ ಹೆಣವನ್ನು! ಗಾಂಧಾರಿ ಒಬ್ಬ ಮಹಾಮಹಿಳೆ. ಆಕೆಯ ಮನೋಧೈರ್ಯ, ಸಹನಾಶಕ್ತಿ, ಪ್ರತಿಯೊಂದನ್ನೂ ವಸ್ತುನಿಷ್ಠವಾಗಿ ನೋಡಿ ತಟಸ್ಥವಾಗಿ ಯೋಚಿಸುವ ನಿಲುವು ಅದ್ಭುತ. ಆಕೆ ಅಲ್ಲಿ ಬಿದ್ದಿರುವ ತನ್ನ ಮಕ್ಕಳ, ಬಂಧು-ಬಾಂಧವರ ಹೆಣವನ್ನು ನೋಡುತ್ತಾಳೆ. ಅಲ್ಲಿ ಒಂದು ದೇಹದ ಕೈ ದೇಹದಿಂದ ಬೇರೆಯಾಗಿರುತ್ತದೆ ಮತ್ತು ಅದನ್ನು ನರಿಯೊಂದು ತಿನ್ನುತ್ತಿರುತ್ತದೆ. ಈ ಭೀಕರ ದೃಶ್ಯವನ್ನು ನೋಡಿ ಆಕೆ ಹೇಳುತ್ತಾಳೆ: “ಬದುಕಿದ್ದಾಗ ಸಾವಿರಾರು ಗೋವುಗಳನ್ನು ದಾನಮಾಡಿದ ಕೈ, ಎದುರಾಳಿ ಶತ್ರುಗಳ ಸೊಕ್ಕು ಮುರಿದ ಕೈ ಇಂದು ನರಿ-ನಾಯಿ ಪಾಲಾಗಿದೆ” ಎಂದು.  ಆಕೆ ಇನ್ನೊಂದು ವಿಚಿತ್ರ ಮಾತನ್ನಾಡುತ್ತಾಳೆ. ಆಕೆ ಹೇಳುತ್ತಾಳೆ: ಬದುಕಿದ್ದಾಗ ಸ್ತ್ರೀಭೋಗವೇ ಸರ್ವಸ್ವ ಎಂದು ಅದರಲ್ಲೇ  ಮೈಮರೆತ ಕೈಯನ್ನು ಇಂದು ನರಿಗಳು ಕಿತ್ತುತಿನ್ನುತ್ತಿವೆ” ಎಂದು. ಹೀಗೆ ಮಹಾಭಾರತದ ಸ್ತ್ರೀವಿಲಾಪ ಪರ್ವದಲ್ಲಿ ಗಾಂಧಾರಿಯ ನೋಟದಲ್ಲಿ ರಣರಂಗದ ಅಭಿವ್ಯಕ್ತಿ ಚಿತ್ರಿತವಾಗಿದೆ. ಬನ್ನಿ, ಈ ಹಿನ್ನೆಲೆಯೊಂದಿಗೆ ಭಾಗವದದಲ್ಲಿ ‘ಕೃಷ್ಣ ದ್ರೌಪದಿಗೆ ರಣರಂಗವನ್ನು ತೋರಿಸಿದ ಚಿತ್ರಣವನ್ನು’ ನೋಡೋಣ.

ಅಥೋ ನಿಶಾಮಯಾಮಾಸ ಕೃಷ್ಣಾಯೈ ಭಗವಾನ್ ಪುರಾ ।
ಪತಿತಾಯಾಃ ಪಾದಮೂಲೇ ರುದಂತ್ಯಾ ಯತ್ ಪ್ರತಿಶ್ರುತಮ್ ॥೨॥

ಪಶ್ಯ ರಾಜ್ಞ್ಯರಿದಾರಾಂಸ್ತೇ ರುದತೋ ಮುಕ್ತಮೂರ್ಧಜಾನ್ ।
ಆಲಿಂಗ್ಯ ಸ್ವಪತೀನ್ ಭೀಮಗದಾಭಗ್ನೋರುವಕ್ಷಸಃ  ॥೩॥

ದ್ರೌಪದಿಯನ್ನು ಕೃಷ್ಣ ಯುದ್ಧರಂಗಕ್ಕೆ ಕರೆದುಕೊಂಡು ಹೋಗುತ್ತಾನೆ. ಮೇಲ್ನೋಟಕ್ಕೆ ಇದು ನಮಗೆ ಆಶ್ಚರ್ಯವನ್ನುಂಟುಮಾಡುವ ವಿಷಯ. ಹೆಣದ ರಾಶಿಗಳನ್ನು ನೋಡಲು ಹೆಣ್ಣೊಬ್ಬಳನ್ನು ಕೃಷ್ಣ ಏಕೆ ಯುದ್ಧರಂಗಕ್ಕೆ ಕರೆದುಕೊಂಡು ಹೋದ ಎನ್ನುವುದು ಇಲ್ಲಿ ನಮ್ಮ ಪ್ರಶ್ನೆಯಾದರೆ, ಅದಕ್ಕೊಂದು ಹಿನ್ನೆಲೆ ಇದೆ. ಈ ಹಿಂದೆ ಹೇಳಿದಂತೆ: ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿ, ತನ್ನ ಬಿಚ್ಚಿದ ತಲೆಮುಡಿಯನ್ನು ಹಿಡಿದುಕೊಂಡು ಬಂದು  ಹೇಳುತ್ತಾಳೆ: ರಾಜಸೂಯದ ಪವಿತ್ರ ತೀರ್ಥದಿಂದ ಅಭಿಷೇಕವಾಗಿದ್ದ ಈ ಕೂದಲನ್ನು ನೀಚ ದುಶ್ಯಾಸನ ಮುಟ್ಟಿ ಅಪವಿತ್ರಗೊಳಿಸಿದ. ಇದರಿಂದ ನನಗಾದ ನೋವು ಎಷ್ಟೆಂಬುದು ನಿನಗೆ ತಿಳಿದಿದೆ” ಎಂದು ಹೇಳಿ ಬಗ್ಗಿ ನಮಸ್ಕರಿಸುತ್ತಾಳೆ ದ್ರೌಪದಿ. ಹೀಗೆ ನಮಸ್ಕರಿಸುವಾಗ ಆಕೆಯ ಕಣ್ಣೀರು ಕೃಷ್ಣನ ಪಾದದ ಮೇಲೆ ಬೀಳುತ್ತದೆ. ಆಗ ಕೃಷ್ಣ ಹೇಳುತ್ತಾನೆ: ಕಣ್ಣೀರು ಒರೆಸಿಕೋ. ಯಾರ ಮೇಲೆ ಕೋಪದಿಂದ ಕಣ್ಣೀರು ಸುರಿಸುತ್ತಿರುವೆಯೋ, ಅವರು ದುರಂತದ ಫಲವನ್ನನುಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು. ಈ ಮಾತಿಗನುಗುಣವಾಗಿ  ಇಲ್ಲಿ ಕೃಷ್ಣ ದ್ರೌಪದಿಯನ್ನು ರಣರಂಗಕ್ಕೆ ಕರೆದು ತಂದು ಹೇಳುತ್ತಾನೆ: “ನೋಡು ನಿನ್ನ ಕಣ್ಣೀರಿನ ಫಲ. ಇದು ಭೀಮನ ಗದೆಯ ಅಥವಾ ಅರ್ಜುನನ ಗಾಂಢೀವದ ಆಘಾತದ ಫಲವಲ್ಲ. ಇದು ನಿನ್ನ ಕಣ್ಣೀರಿನ ಫಲ” ಎಂದು.  ಒಬ್ಬ ಪತಿವೃತೆ ಹೆಣ್ಣಿನ ಕಣ್ಣೀರಿಗಿರುವ ಶಕ್ತಿ ಪ್ರಪಂಚದ ಯಾವ ಆಯುಧಕ್ಕೂ ಇಲ್ಲ. ದ್ರೌಪದಿಯ ಕಣ್ಣೀರಿನ ಫಲವನ್ನು ಇಲ್ಲಿ ಕೃಷ್ಣ ಆಕೆಗೆ ತೋರಿಸುತ್ತಿದ್ದಾನೆ.
ಕೃಷ್ಣ ಹೇಳುತ್ತಾನೆ: “ನೀನು ಯಾರ ಮೇಲೆ ಕೋಪಿಸಿಕೊಂಡು ಕಣ್ಣೀರು ಸುರಿಸಿದೆಯೋ, ನೋಡು ಅವರ ಸ್ಥಿತಿಯನ್ನು. ಸತ್ತು ಬಿದ್ದಿರುವ ತಮ್ಮ ಗಂಡಂದಿರ ದೇಹದಮೇಲೆ ಬಿದ್ದು ಹೊರಳಾಡುತ್ತಿರುವ ಅವರ ಹೆಂಡಂದಿರರನ್ನು ನೋಡು. ಇದು ನಿನ್ನ ಕಣ್ಣೀರಿನ ಮತ್ತು ನಿನ್ನ ಕಣ್ಣೀರಿನಿಂದ ಜಾಗೃತವಾದ ಭೀಮನ ಗದೆಯ ಪ್ರಹಾರದ ಫಲ. ಭೀಮನ ಗದೆಯಿಂದ ಮುರಿದ ತೊಡೆ, ಒಡೆದ ಎದೆಯನ್ನು ನೋಡು” ಎಂದು ಕೃಷ್ಣ ದ್ರೌಪದಿಗೆ ರಣರಂಗದ ಆ ಭೀಕರ ದೃಶ್ಯವನ್ನು ತೋರಿಸಿದ.  

Sunday, February 24, 2013

Shrimad BhAgavata in Kannada -Skandha-01-Ch-07(05)


ಸೂತ ಉವಾಚ-
ಪ್ರಜೋಪದ್ರವಮಾಲಕ್ಷ್ಯ ಲೋಕವ್ಯತಿಕರಂ ಚ ತಮ್ ।
ಮತಂ ಚ ವಾಸುದೇವಸ್ಯ ಸಂಜಹಾರಾರ್ಜುನೋ ದ್ವಯಮ್ ॥೩೨॥

ಅರ್ಜುನ ಆತ್ಮರಕ್ಷಣೆಗಾಗಿ ಮೊದಲು ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ತಾನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಈ ರೀತಿ ಮಾಡಿರುವುದರಿಂದ ಸಮಸ್ಯೆ ಇಮ್ಮಡಿಯಾಗುತ್ತದೆ. ಒಂದು ಅಸ್ತ್ರದ ಬದಲು ಎರಡು ಬ್ರಹ್ಮಾಸ್ತ್ರಗಳು ಲೋಕನಾಶಕವಾಗಿ ನಿಲ್ಲುತ್ತವೆ! ಹಾಗಾಗಿ ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: “ಈ ಅಸ್ತ್ರ ಲೋಕನಾಶ ಮಾಡುವ ಮೊದಲು ಅದನ್ನು ಉಪಸಂಹಾರ ಮಾಡು” ಎಂದು.
ಲೋಕನಾಶಕ ಮತ್ತು ಜನಾಂಗ ನಾಶಕವಾದ ಅಸ್ತ್ರವನ್ನು ಉಪಸಂಹಾರ ಮಾಡಬೇಕೆನ್ನುವುದು ವಾಸುದೇವನ ಇಚ್ಛೆಯಾಗಿರುವುದರಿಂದ, ಅದರಂತೆ ಅರ್ಜುನ, ದ್ರೋಣಪುತ್ರ ಪ್ರಯೋಗಿಸಿದ ಮತ್ತು ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡುತ್ತಾನೆ.
ಇಲ್ಲಿ ಹೇಳಿದ ಈ ಮಾತು ನಮಗೆ ಗೊಂದಲವನ್ನು ತರುತ್ತದೆ. ಭಾಗವತದಲ್ಲೇ ಮುಂದೆ ಹೇಳುವಂತೆ ಹಾಗೂ ಮಹಾಭಾರತದಲ್ಲಿ ಹೇಳುವಂತೆ: ‘ಅಶ್ವತ್ಥಾಮ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಲು ಅರ್ಜುನನಿಗೆ ಅನುಮತಿ ನೀಡಲಿಲ್ಲ. ಆತ ಅದನ್ನು ಪಾಂಡವರ ಸಂತಾನ ಬೆಳೆಯುತ್ತಿದ್ದ ಉತ್ತರೆಯ ಗರ್ಭದತ್ತ ಗುರಿಮಾಡಿದ. ಇಂತಹ ಸಂದರ್ಭದಲ್ಲಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತನನ್ನು ಚಕ್ರಧಾರಿ ಭಗವಂತ ರಕ್ಷಿದ ಮತ್ತು ಬ್ರಹ್ಮಾಸ್ತ್ರದಿಂದಾಗಿ ಸತ್ತು ಹುಟ್ಟಿದ ಮಗುವಿಗೆ ಕೃಷ್ಣ ಜೀವದಾನ ಮಾಡಿದ’. ಈ ಹಿನ್ನೆಲೆಯಲ್ಲಿ ನೋಡಿದರೆ: ಭಾಗವತದಲ್ಲಿ ಬಂದಿರುವ ಕಥೆ ಮಹಾಭಾರತದಲ್ಲಿನ ಕಥೆಗಿಂತ ಬಹಳ ಭಿನ್ನವಾಗಿದೆ. ಈ ಎರಡೂ ಗ್ರಂಥಗಳನ್ನು ನಿರ್ಮಿಸಿದವರು ವೇದವ್ಯಾಸರೇ ಆಗಿರುವಾಗ ಏಕೆ ಈ ರೀತಿ ಬೇರೆಬೇರೆ ರೀತಿ ವಿವರಣೆ ನೀಡಿದರು ಎನ್ನುವುದು ಇಲ್ಲಿ ನಮ್ಮನ್ನು ಕಾಡುವ ಪ್ರಶ್ನೆ. ಈ ಪ್ರಶ್ನೆಗೆ ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ನೀಡಿರುವ ವಿವರಣೆ ಅದ್ಭುತವಾಗಿದೆ.  ಅಲ್ಲಿ ಅವರು ಹೇಳುತ್ತಾರೆ: ಸ್ವಪ್ನೋSಯಂ । ಎಂದು. ಮಹಾಭಾರತದಲ್ಲಿ ಬಂದಿರುವ ಕಥೆ  ನಿಜವಾಗಿ ನಡೆದ ಘಟನೆಯಾದರೆ, ಭಾಗವತದಲ್ಲಿ ಬಂದಿರುವ ಈ ಕಥೆ ಅಶ್ವತ್ಥಾಮ ಕಂಡ ಕನಸು. ಶಿಶುಹತ್ಯೆ ಮಾಡಿದ ನಂತರ ಭಯಗ್ರಸ್ಥನಾಗಿ ವೇದವ್ಯಾಸರ ಆಶ್ರಮದ ಸಮೀಪವಿರುವ ಕಾಡಿನಲ್ಲಿ ಅಡಗಿ ಕುಳಿತಿದ್ದಾಗ, ಅಶ್ವತ್ಥಾಮ ಕಂಡ ಕನಸಿದು. ಇದಕ್ಕೆ ಪ್ರಮಾಣ ಸ್ಕಾಂದಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:

ಪಾರ್ಥಾನುಯಾತ ಮಾತ್ಮಾನಂ ದ್ರೌಣಿಃ ಸ್ವಪ್ನೇ ದದರ್ಶ ಹ  ।
ಬಂಧನಂ ಚಾತ್ಮನಸ್ತತ್ರ ದ್ರೌಪದ್ಯಾ ಚೈವ ಮೊಕ್ಷಣಂ ॥
ಇತಿ ಸ್ಕಂದೇ  । ತಸ್ಮಾನ್ನೈಷೀಕ ವಿರೋಧಃ ।

ಅಶ್ವತ್ಥಾಮರ ಬದುಕುವ ಆಸೆ ಅದೆಷ್ಟು ಅದಮ್ಯವಾಗಿತ್ತೆಂದರೆ:  ಕನಸಿನಲ್ಲೂ ಕೂಡಾ “ತಾನು ಕ್ಷೆಮೆಗೆ ಪಾತ್ರನಾಗಿ- ಬದುಕುಳಿದೆ” ಎನ್ನುವುದನ್ನೇ  ಅವರು ಕಾಣುತ್ತಿರುತ್ತಾರೆ. ಈ ಅಧ್ಯಾಯದಲ್ಲಿ ಮುಂದೆ ಅಶ್ವತ್ಥಾಮರ ಕನಸಿನ ಕಥೆ ಮುಂದುವರಿಯುತ್ತದೆ.
 
ತತ ಆಸಾದ್ಯ ತರಸಾ ದಾರುಣಂ ಗೌತಮೀಸುತಮ್ ।
ಬಬಂಧಾಮರ್ಷತಾಮ್ರಾಕ್ಷಃ ಪಶುಂ ರಶನಯಾ ಯಥಾ ॥೩೩॥

ಅರ್ಜುನ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಿದಾಗ ಅಶ್ವತ್ಥಾಮ ಅಸಾಹಯಕನಾಗಿ ನಿಲ್ಲುತ್ತಾನೆ. ತಕ್ಷಣ ಅರ್ಜುನ ಆತನನ್ನು ಬಂಧಿಸಿ, ಒಂದು ಪಶುವನ್ನು ಎಳೆದು ತರುವಂತೆ ಎಳೆದು ತರುತ್ತಾನೆ. ಸಿಟ್ಟಿನಿಂದ ಅರ್ಜುನನ ಕಣ್ಣು ಕೆಂಪೇರಿರುತ್ತದೆ. ಆತ ಕೃಷ್ಣನ ಬಳಿ ಬಂದು “ಶಿಬಿರಕ್ಕೆ ಹೋಗೋಣ” ಎನ್ನುತ್ತಾನೆ.

ಮೈನಂ ಪಾರ್ಥಾರ್ಹಸಿ ತ್ರಾತುಂ ಬ್ರಹ್ಮಬಂಧುಮಿಮಂ ಜಹಿ ।
ಯೋSಸಾವನಾಗಸಃ ಸುಪ್ತಾನವಧೀನ್ನಿಶಿ ಬಾಲಕಾನ್ ॥೩೫॥

ಅರ್ಜುನನ ಮಾತನ್ನು ಕೇಳಿದ ಕೃಷ್ಣ ಹೇಳುತ್ತಾನೆ: ಏತಕ್ಕಾಗಿ ಆತನನ್ನು ಶಿಬಿರಕ್ಕೆ ಕರೆದುಕೊಂಡು ಹೋಗಬೇಕು? ಅವನನ್ನು ಇಲ್ಲೇ ಮುಗಿಸಿಬಿಡು” ಎಂದು. ಇದು ಕೃಷ್ಣ ಅರ್ಜುನನ್ನು ಪರೀಕ್ಷಿಸುವ ನಡೆ. ಆತ ಹೇಳುತ್ತಾನೆ: ಇವನ ಮೇಲೆ ಕರುಣೆ ತೋರಬೇಡ. ನಿರಾಪರಾದಿಗಳಾದ ಮಕ್ಕಳ ತಲೆ ಕಡಿದ ಆತನನ್ನು ಇಲ್ಲೇ ಮುಗಿಸಿಬಿಡು ಎನ್ನುತ್ತಾನೆ ಕೃಷ್ಣ.

ಸ್ವಪ್ರಾಣಾನ್ ಯಃ ಪರಪ್ರಾಣೈಃ ಪ್ರಪುಷ್ಣಾತ್ಯಘೃಣಃ ಖಲಃ ।
ತದ್ವಧಸ್ತಸ್ಯ ಹಿ ಶ್ರೇಯೋ ಯದ್ದೋಷಾದ್ ಯಾತ್ಯಧಃ ಪುಮಾನ್ ॥೩೭॥

ಮುಂದುವರಿದು ಕೃಷ್ಣ ಹೇಳುತ್ತಾನೆ: ಯಾರು ಇನ್ನೊಬ್ಬರನ್ನು ಕೊಂದು ತಾನು ಬದುಕಲು ಬಯಸುತ್ತಾರೋ- ಅಂತವರು ದುರ್ಬಲರು. ಅಂತವರನ್ನು ಕೊಲ್ಲುವುದರಿಂದ ಅವರಿಗೇ ಕ್ಷೇಮ. ಅದು ಅವರು ಮುಂದೆ ಮಾಡಬಹುದಾದ ಪಾಪಗಳಿಂದ ಅವರನ್ನು ಪಾರುಮಾಡುತ್ತದೆ. ಆದ್ದರಿಂದ ಬದುಕ್ಕಿದ್ದರೆ ಮತ್ತಷ್ಟು ಹತ್ಯೆಗೆ ಕಾರಣವಾಗಬಲ್ಲ ಈತನ  ತಲೆಯನ್ನು ಕಡಿದುಬಿಡು ಎನ್ನುತ್ತಾನೆ ಕೃಷ್ಣ. 

ಪ್ರತಿಶ್ರುತಂ ಚ ಭವತಾ ಪಾಂಚಾಲ್ಯೈ ಶೃಣ್ವತೋ ಮಮ ।
ಆಹರಿಷ್ಯೇ ಶಿರಸ್ತಸ್ಯ ಯಸ್ತೇ ಮಾನಿನಿ ಪುತ್ರಹಾ ॥೩೮॥

 “ನೀನು ನಿನ್ನ ಪ್ರತಿಜ್ಞೆಯನ್ನು ಈಡೇರಿಸುವುದು ಬೇಡವೇ? ಈ ಪಾತಕಿಯ ತಲೆಯನ್ನು ಉಡುಗೊರೆಯಾಗಿ ದ್ರೌಪದಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ನೀನು ಈಗಾಗಲೇ ಪ್ರತಿಜ್ಞೆ ಮಾಡಿರುವಿ. ಆದ್ದರಿಂದ ತಡಮಾಡದೇ ಕತ್ತರಿಸು ಅವನ ಶಿರವನ್ನು” ಎನ್ನುತ್ತಾನೆ ಕೃಷ್ಣ.
ಕೃಷ್ಣನ ಮಾತನ್ನು ಕೇಳಿದ ಅರ್ಜುನ ಗುರುಪುತ್ರ ಎನ್ನುವ ಗೌರವದಿಂದ ಹೇಳುತ್ತಾನೆ: “ದ್ರೌಪದಿಯ ಬಳಿ ಹೋಗಿ ಆನಂತರ ಈ ನಿರ್ಧಾರ ತೆಗೆದುಕೊಳ್ಳೋಣ. ಆಕೆ ಇಚ್ಛೆಪಟ್ಟರೆ ಆಕೆಯ ಪಾದದ ಬುಡದಲ್ಲೇ ಈತನ ಶಿರಛೇಧ ಮಾಡೋಣ” ಎಂದು.

ಉವಾಚಾಸಹಂತ್ಯಸ್ಯ ಬಂಧನಾನಯನಂ ಸತೀ ।
ಮುಚ್ಯತಾಂಮುಚ್ಯತಾಮೇಷ ಬ್ರಾಹ್ಮಣೋ ನಿತರಾಂ ಗುರುಃ ॥೪೩॥

ದ್ರೌಪದಿ ಬಂಧಿಯಾಗಿರುವ ಅಶ್ವತ್ಥಾಮನನ್ನು ಕಂಡು ಹೇಳುತ್ತಾಳೆ: “ಮೊದಲು ಬಿಟ್ಟುಬಿಡು ಇವನನ್ನು. ಕ್ಷತ್ರಿಯರು ಹಾಸಿಗೆಯಲ್ಲಿ ಮಲಗಿ ಸಾಯುವವರಲ್ಲ. ರಣರಂಗದಲ್ಲಿ ಇನ್ನೊಬ್ಬರ ವಿರುದ್ಧ ಹೋರಾಡಿ ಸಾಯುವವರು. ಆದರೆ ಈತ ಗುರುಪುತ್ರ. ಎಲ್ಲಕ್ಕೂ ಮಿಗಿಲಾಗಿ ಆತ ಬ್ರಹ್ಮಜ್ಞಾನಿ. ಗೌರವಿಸಬೇಕಾದ ವ್ಯಕ್ತಿತ್ವ”.

ಸ ಏಷ ಭಗವಾನ್ ದ್ರೋಣಃ ಪ್ರಜಾರೂಪೇಣ ವರ್ತತೇ ।
ತಸ್ಯಾತ್ಮನೋSರ್ಧಂ ಪತ್ನ್ಯಾಸ್ತೇ ನಾನ್ವಗಾದ್ ವೀರಸೂಃ ಕೃಪೀ ॥೪೫॥

“ಇವನನ್ನು ಕೊಲ್ಲುವುದರಿಂದ ಸತ್ತ ನನ್ನ ಮಕ್ಕಳು ಮರಳಿ ಬರುತ್ತಾರೆಯೇ? ಈತನ ದೇಹದಲ್ಲಿ ದ್ರೋಣಾಚಾರ್ಯರ ನೆತ್ತರು ಹರಿಯುತ್ತಿದೆ. ಹಾಗಾಗಿ ನಾನು ಈತನೊಳಗೆ ಭಗವಾನ್ ದ್ರೋಣರನ್ನು ಕಾಣುತ್ತಿದ್ದೇನೆ. ಹಾಗಾಗಿ ಇವನನ್ನು ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.

ಮಾ ರೋದೀದಸ್ಯ ಜನನೀ ಗೌತಮೀ ಪತಿದೇವತಾ ।
ಯಥಾSಹಂ ಮೃತವತ್ಸಾSSರ್ತಾ ರೋದಿಮ್ಯಶ್ರುಮುಖೀ ಮುಹುಃ ॥೪೭॥

“ಒಂದುವೇಳೆ ಇವನನ್ನು ಕೊಂದರೆ ಅದರಿಂದಾಗುವ ಪರಿಣಾಮವೇನು? ಇಂದು ನಾನು ನನ್ನ ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿದ್ದೇನೆ. ಈತನ ತಾಯಿ ಗೌತಮಿ ಈಗಾಗಲೇ ತನ್ನ ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾಳೆ. ಆ ತಾಯಿ ನನ್ನಂತೆ ದುಃಖ ಅನುಭವಿಸುವುದು ಬೇಡ. ಆದ್ದರಿಂದ ಆತನನ್ನು ಕೊಲ್ಲಬೇಡ. ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.
ಮಹಾಭಾರತದಲ್ಲಿ ಬರುವ ನಿಜ ಕಥೆಯ ಪ್ರಕಾರ ಅಶ್ವತ್ಥಾಮನನ್ನು ದ್ರೌಪದಿಯ ಬಳಿ ಎಳೆದು ತಂದೇ ಇಲ್ಲ. ಕೃಷ್ಣ, ವೇದವ್ಯಾಸರು, ಭೀಮ, ಅರ್ಜುನ,  ಎಲ್ಲರೂ ಹೇಳಿದರೂ ಕೂಡಾ, ಅಶ್ವತ್ಥಾಮ ಬ್ರಹ್ಮಾಸ್ತ್ರ ಉಪಸಂಹಾರಕ್ಕೆ ಒಪ್ಪಿಕೊಳ್ಳದೇ ಅದನ್ನು ಉತ್ತರೆಯ ಗರ್ಭಕ್ಕೆ ಗುರಿಯಾಗಿಸುತ್ತಾನೆ. ಇದರಿಂದಾಗಿ ಆತ ಎಲ್ಲರ ಶಾಪಕ್ಕೆ ಗುರಿಯಾಗುತ್ತಾನೆ. “ನಿನ್ನ ಮೈಯಲ್ಲೆಲ್ಲಾ ಗಾಯವಾಗಿ, ಅದರಲ್ಲಿ ಕೀವು ತುಂಬಿ, ದುರ್ವಾಸನೆಯಿಂದಾಗಿ, ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ನಿನ್ನ ಅಸಹ್ಯ ಶರೀರವನ್ನು ಹೊತ್ತುಕೊಂಡು ನೀನು ಬದುಕು” ಎನ್ನುವ ಶಾಪ ಪಡೆದ ಆತ ತನ್ನಲ್ಲಿ  ಜನ್ಮತಃ ಇದ್ದ ಮಣಿಯನ್ನು ಪಾಂಡವರಿಗೋಪ್ಪಿಸಿ ಶಾಪಗ್ರಸ್ತನಾಗಿ ಕಾಡಾಡಿಯಾಗಿ ಅಲೆಯುತ್ತಾನೆ ಎನ್ನುತ್ತದೆ ಮಹಾಭಾರತ. ಆದರೆ ಇಲ್ಲಿ ಅಶ್ವತ್ಥಾಮ ತಾನು ದ್ರೌಪದಿಯ ಕರುಣೆಯಿಂದ ಕ್ಷೆಮೆಗೆ ಪಾತ್ರನಾದೆ ಎಂದು ಕನಸು ಕಾಣುತ್ತಿದ್ದಾನೆ.    

ಸೂತ ಉವಾಚ-
ಧರ್ಮ್ಯಂ ನ್ಯಾಯ್ಯಂ ಸಕರುಣಂ ನಿರ್ವ್ಯಳೀಕಂ ಸಮಂ ಮಹತ್ ।
ರಾಜಾ ಧರ್ಮಸುತೋ ರಾಜ್ಞ್ಯಾಃಪ್ರತ್ಯನಂದದ್ ವಚೋ ದ್ವಿಜಾಃ ॥೪೯॥

ನಕುಲಃ ಸಹದೇವಶ್ಚ ಯುಯುಧಾನೋ ಧನಂಜಯಃ ।
ಭಗವಾನ್ ದೇವಕೀಪುತ್ರೋ ಯೇ ಚಾನ್ಯೇ ಯಾಶ್ಚ ಯೋಷಿತಃ ॥೫೦॥

ಯುದಿಷ್ಠಿರ ದ್ರೌಪದಿಯ ಮಾತನ್ನು ಬೆಂಬಲಿಸುತ್ತಾನೆ ಹಾಗೂ  ಬಹಳ ಮೆಚ್ಚಿ ಅಭಿನಂದನೆ ಮಾಡಿ ಹೊಗಳುತ್ತಾನೆ. ಜೊತೆಗೆ ನಕುಲ ಸಹದೇವರೂ ಕೂಡಾ, ದ್ರೌಪದಿಯನ್ನು ಅಭಿನಂದಿಸುತ್ತಾರೆ. ಸಾತ್ಯಕಿ ಜೊತೆಗೆ ಅರ್ಜುನ ಕೂಡಾ ದ್ರೌಪದಿಯ ಮಾತನ್ನು ಮೆಚ್ಚಿಕೊಡು ಹೊಗಳುತ್ತಾರೆ.  ಶ್ರೀಕೃಷ್ಣ ಹಾಗೂ ಅಲ್ಲಿ ಸೇರಿದ ಎಲ್ಲರೂ ದ್ರೌಪದಿಯ ನಿರ್ಧಾರವನ್ನು ಬೆಂಬಲಿಸುತ್ತಾರೆ.

ತತ್ರಾಹಾಮರ್ಷಿತೋ ಭೀಮಸ್ತಸ್ಯ ಶ್ರೇಯಾನ್ ವಧಃ ಸ್ಮೃತಃ ।
ನ ಭರ್ತುರ್ನಾತ್ಮನಶ್ಚಾರ್ಥೇ ಯೋSಹನ್ ಸುಪ್ತಾನ್ ಶಿಶೂನ್ ವೃಥಾ ॥೫೧॥

ಎಲ್ಲರೂ ಅಭಿನಂದಿಸಿದಾಗ ಭೀಮನಿಗೆ ಕೊಪ ಬರುತ್ತದೆ. ಆತ ಕೋಪದಿಂದ ಎದ್ದು ನಿಲ್ಲುತ್ತಾನೆ ಮತ್ತು ಹೇಳುತ್ತಾನೆ. “ಇಂತಹ ಪಾಪಿಯ ತಲೆ ಕಡಿಯುವುದೇ  ನ್ಯಾಯ” ಎಂದು. ಈತ ನಿದ್ರಿಸುತ್ತಿದ್ದ ಮಕ್ಕಳನ್ನು ಕೊಂದ ಪಾಪಿ. ಆತ ಮಾಡಿರುವ ಕೃತ್ಯ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಮತ್ತು ಆತ್ಮಹಿತವಾದದ್ದೂ ಅಲ್ಲ. ಹಾಗಾಗಿ ಇಂತಹ ನೀಚನನ್ನು ಮುಗಿಸಿಬಿಡು ಎನ್ನುತ್ತಾನೆ ಭೀಮ. ಪ್ರಾಯಃ ಭೀಮನನ್ನು ಕಂಡರೆ ಅಶ್ವತ್ಥಾಮನಿಗೆ ಭಯ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಆತ ಕನಸಿನಲ್ಲಿ ಕಾಣುತ್ತಿದ್ದಾನೆ.

ನಿಶಮ್ಯ ಭೀಮಗದಿತಂ ದ್ರೌಪದ್ಯಾಶ್ಚ ಚತುರ್ಭುಜಃ ।
ಆಲೋಕ್ಯ ವದನಂ ಸಖ್ಯುರಿದಮಾಹ ಹಸನ್ನಿವ ॥೫೨॥
ಶ್ರೀಭಗವಾನುವಾಚ-
ಬ್ರಹ್ಮಬಂಧುರ್ನ ಹಂತವ್ಯ ಆತತಾಯೀ ವಧಾರ್ಹಣಃ ।
ಮಯೈವೋಭಯಮಾಮ್ನಾತಂ ಪರಿಪಾಹ್ಯನುಶಾಸನಮ್ ॥೫೩॥

ಕುರು ಪ್ರತಿಶ್ರುತಂ ಸತ್ಯಂ ಯತ್ತತ್ ಸಾಂತ್ವಯತಾ ಪ್ರಿಯಾಮ್ ।
ಮತಂ ಚ ಭೀಮಸೇನಸ್ಯ ಪಾಂಚಾಲ್ಯೈ ಮಹ್ಯಮೇವ ಚ ॥೫೪॥

ಭೀಮನ ಮತ್ತು  ದ್ರೌಪದಿಯ ಮಾತನ್ನು ಕೇಳಿ ಕೃಷ್ಣ ಅರ್ಜುನನ ಮುಖವನ್ನು ನೋಡಿ ಮುಗುಳ್ನಗುತ್ತಾನೆ.  ಕೃಷ್ಣ ಹೇಳುತ್ತಾನೆ: “ಶಾಸ್ತ್ರದಲ್ಲಿ ಹೇಳುವಂತೆ- ಬ್ರಹ್ಮಜ್ಞಾನಿಯನ್ನು ಕೊಲ್ಲಬಾರದು;  ಆದರೆ ಸಮಾಜ ಕಂಟಕರನ್ನು ಜೀವಂತ ಉಳಿಸಬಾರದು. ಶಾಸ್ತ್ರದ ಮೂಲಕ ಈ ಎರಡು ವಿಧಿಯನ್ನು ಜಗತ್ತಿಗೆ ಕೊಟ್ಟವನು ನಾನೇ ಆದ್ದರಿಂದ, ಬ್ರಹ್ಮಬಂಧು ಅಶ್ವತ್ಥಾಮನನ್ನು ಕೊಲ್ಲಬಾರದು. ಆದರೆ ಆತ ಆತತಾಯಿಯಾದ್ದರಿಂದ ಅವನನ್ನು ಕೊಲ್ಲಬೇಕು. ಇದು ಶಾಸ್ತ್ರದ ಮತ್ತು ನನ್ನ ಆಜ್ಞೆ. ಅದನ್ನು ಪಾಲಿಸು! ಇಷ್ಟೇ ಅಲ್ಲದೆ, ನೀನು ಈತನ ತಲೆಯನ್ನು ದ್ರೌಪದಿಯ ಪಾದಕ್ಕೆ ಉಡುಗೊರೆಯಾಗಿ ಅರ್ಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದವನು. ಆ ಪ್ರತಿಜ್ಞೆಯನ್ನು ಉಳಿಸು. ಭೀಮಸೇನನ ಮತ್ತು ಪಾಂಚಾಲಿಯ ಅಭಿಪ್ರಾಯವೇ ನನ್ನ ಅಭಿಪ್ರಾಯವಾದ್ದರಿಂದ ಎಲ್ಲವನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸು”  ಎಂದು ಒಗಟಾಗಿ ಮಾತನಾಡುತ್ತಾನೆ ಕೃಷ್ಣ.
ಸೂತ ಉವಾಚ-
ಅರ್ಜುನಃ ಸಹಸಾSSಜ್ಞಾಯ ಹರೇರ್ಹಾರ್ದಮಥಾಸಿನಾ ।
ಮಣಿಂ ಜಹಾರ ಮೂರ್ಧನ್ಯಂ ದ್ವಿಜಸ್ಯ ಸಹಮೂರ್ಧಜಮ್ ॥೫೫॥

ವಿಮುಚ್ಯ ರಶನಾಬದ್ಧಂ ಬಾಲಹತ್ಯಾಹತಪ್ರಭಮ್ ।
ತೇಜಸಾ ಮಣಿನಾ ಹೀನಂ ಶಿಬಿರಾನ್ನಿರಯಾಪಯತ್ ॥೫೬॥

ನಮಗೆ ಕೃಷ್ಣನ ಮಾತು ಅರ್ಥವಾಗದಿದ್ದರೂ ಕೂಡಾ, ಅರ್ಜುನನಿಗೆ ತಕ್ಷಣ ಕೃಷ್ಣನ ಮಾತಿನ ಹಿಂದಿನ ರಹಸ್ಯ ತಿಳಿದು ಬಿಡುತ್ತದೆ. ಆತ ತಡಮಾಡದೆ ತನ್ನ ಕತ್ತಿಯನ್ನು ತೆಗೆದು, ಅಶ್ವತ್ಥಾಮನ ತಲೆಯನ್ನು ಬೋಳಿಸುತ್ತಾನೆ. ಜೊತೆಗೆ ಜನ್ಮತಃ ಬಂದಿರುವ ಅಮೂಲ್ಯವಾದ ಮಣಿರತ್ನವನ್ನು ಆತನ ತಲೆಯಿಂದ ಕಿತ್ತು ತೆಗೆಯುತ್ತಾನೆ. ಈ ರೀತಿ ತಲೆಬೋಳಿಸಿ, ಮಣಿಯನ್ನು ಕಿತ್ತಿರುವುದು ಅಶ್ವತ್ಥಾಮನಿಗೆ ಸಾವಿಗಿಂತ ಮಿಗಿಲಾದ ಅವಮಾನ.
ಇಷ್ಟು ಮಾಡಿ ಅರ್ಜುನ ಕಟ್ಟಿದ ಹಗ್ಗದಿಂದ ಅಶ್ವತ್ಥಾಮನನ್ನು ಬಿಚ್ಚುತ್ತಾನೆ. ಈ ಅವಮಾನದಿಂದಾಗಿ ಅಶ್ವತ್ಥಾಮನಲ್ಲಿ ಯಾವ ಬ್ರಹ್ಮಕಳೆಯೂ ಉಳಿದಿರುವುದಿಲ್ಲ. ನಂತರ ಪಾಂಡವರ ಶಿಬಿರದಿಂದ  ಆತನನ್ನು ಹೊರಹಾಕಿ “ಇನ್ನು ಮುಂದೆ ನಮ್ಮ ಕಣ್ಣಮುಂದೆ ಸುಳಿಯಬೇಡ” ಎಂದು  ಹೇಳಿ ಗಡಿಪಾರು ಮಾಡುತ್ತಾರೆ.

ಬಂಧನಂ ದ್ರವಿಣಾದಾನಂ ಸ್ಥಾನಾನ್ನಿರ್ಯಾಪಣಂ ತಥಾ ।
ಏಷ ಹಿ ಬ್ರಹ್ಮಬಂಧೂನಾಂ ವಧೋ ನಾನ್ಯೋSಸ್ತಿ ದೈಹಿಕಃ ॥೫೭॥

ಒಬ್ಬ ಬ್ರಹ್ಮಜ್ಞಾನಿಯ ವಂಶದಲ್ಲಿ ಹುಟ್ಟಿದ ವ್ಯಕ್ತಿ ಅಪರಾಧ ಮಾಡಿದಾಗ ಅವನಿಗೆ ಕೊಡಬೇಕಾದ ಶಿಕ್ಷೆ ಏನೆಂಬುದನ್ನು ಶಾಸ್ತ್ರ ವಿವರಿಸುತ್ತದೆ. ಬಂಧನಕ್ಕೆ ಒಳಪಡಿಸುವುದು, ತಲೆಬೋಳಿಸುವುದು, ಅವರಲ್ಲಿರುವ ಸರ್ವಸಂಪತ್ತನ್ನೂ ಕಿತ್ತುಕೊಂಡು ಅವರನ್ನು ದೇಶಭ್ರಷ್ಟರನ್ನಾಗಿ ಮಾಡುವುದು, ಇತ್ಯಾದಿ ಶಿಕ್ಷೆ ಮರಣದಂಡನೆಗೆ ಪರ್ಯಾಯ ಶಿಕ್ಷೆ.

ಇದು ಅಶ್ವತ್ಥಾಮ ಕಾಡಿನಲ್ಲಿ ಅಡಗಿಕುಳಿತಾಗ ಕಂಡ ಕನಸು. ಈ ಕನಸಿನ ನಂತರದ ಘಟನೆಯನ್ನು ಮಹಾಭಾರತ ವರ್ಣಿಸುತ್ತದೆ. ಹಿಂದೆ ಹೇಳಿದಂತೆ ಅಶ್ವತ್ಥಾಮಾಚಾರ್ಯರು ಶಾಪಗ್ರಸ್ಥನಾಗುತ್ತಾರೆ. ಅದರಿಂದಾಗಿ ಅವರಿಗೆ ಅಸಹ್ಯ ಮತ್ತು ದುರ್ನಾತದಿಂದ ಕೂಡಿದ ಶರೀರ ಪ್ರಾಪ್ತಿಯಾಗುತ್ತದೆ. ಮುಂದಿನ ದ್ವಾಪರದ ತನಕ ಮನುಷ್ಯಸಂಚಾರವಿಲ್ಲದ ಹಿಮಾಲಯದ ದುರ್ಗಮತಾಣದಲ್ಲಿ ಅವರು ಅವತಾರ ಸಮಾಪ್ತಿ ಮಾಡದೇ ಇರಬೇಕಾದ ಪ್ರಸಂಗ ಅವರಿಗೊದಗುತ್ತದೆ. ಆನಂತರ ಮುಂದಿನ ದ್ವಾಪರದಲ್ಲಿ ಅವರು ಈ ಕಷ್ಟದಿಂದ ಬಿಡುಗಡೆಗೊಂಡು ‘ವ್ಯಾಸ’ ಪದವಿಯನ್ನು ಅಲಂಕರಿಸಲಿದ್ದಾರೆ. ಇದು ಅವತಾರದಲ್ಲಿ ದೇವತೆಗಳು ಪಡುವ ಕಷ್ಟ! ಅವರು ಅನುಭವಿಸುವ ಕಷ್ಟದ ಮುಂದೆ ನಮ್ಮ ಕಷ್ಟ ಏನೂ ಅಲ್ಲ. ಅವರ ನೈಜ ಕಥೆಯೇ ನಮಗೆ ಒಂದು ಆತ್ಮವಿಶ್ವಾಸ ಮತ್ತು ಭರವಸೆಯಾಗಿರಬೇಕು.  

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಸಪ್ತಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು.
*********