ಸೂತ ಉವಾಚ-
ಪ್ರಜೋಪದ್ರವಮಾಲಕ್ಷ್ಯ
ಲೋಕವ್ಯತಿಕರಂ ಚ ತಮ್ ।
ಮತಂ ಚ ವಾಸುದೇವಸ್ಯ
ಸಂಜಹಾರಾರ್ಜುನೋ ದ್ವಯಮ್ ॥೩೨॥
ಅರ್ಜುನ ಆತ್ಮರಕ್ಷಣೆಗಾಗಿ
ಮೊದಲು ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ತಾನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಈ ರೀತಿ
ಮಾಡಿರುವುದರಿಂದ ಸಮಸ್ಯೆ ಇಮ್ಮಡಿಯಾಗುತ್ತದೆ. ಒಂದು ಅಸ್ತ್ರದ ಬದಲು ಎರಡು ಬ್ರಹ್ಮಾಸ್ತ್ರಗಳು ಲೋಕನಾಶಕವಾಗಿ
ನಿಲ್ಲುತ್ತವೆ! ಹಾಗಾಗಿ ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: “ಈ ಅಸ್ತ್ರ ಲೋಕನಾಶ ಮಾಡುವ ಮೊದಲು ಅದನ್ನು
ಉಪಸಂಹಾರ ಮಾಡು” ಎಂದು.
ಲೋಕನಾಶಕ ಮತ್ತು
ಜನಾಂಗ ನಾಶಕವಾದ ಅಸ್ತ್ರವನ್ನು ಉಪಸಂಹಾರ ಮಾಡಬೇಕೆನ್ನುವುದು ವಾಸುದೇವನ ಇಚ್ಛೆಯಾಗಿರುವುದರಿಂದ, ಅದರಂತೆ
ಅರ್ಜುನ, ದ್ರೋಣಪುತ್ರ ಪ್ರಯೋಗಿಸಿದ ಮತ್ತು ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ
ಮಾಡುತ್ತಾನೆ.
ಇಲ್ಲಿ ಹೇಳಿದ ಈ
ಮಾತು ನಮಗೆ ಗೊಂದಲವನ್ನು ತರುತ್ತದೆ. ಭಾಗವತದಲ್ಲೇ ಮುಂದೆ ಹೇಳುವಂತೆ ಹಾಗೂ ಮಹಾಭಾರತದಲ್ಲಿ
ಹೇಳುವಂತೆ: ‘ಅಶ್ವತ್ಥಾಮ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಲು ಅರ್ಜುನನಿಗೆ
ಅನುಮತಿ ನೀಡಲಿಲ್ಲ. ಆತ ಅದನ್ನು ಪಾಂಡವರ ಸಂತಾನ ಬೆಳೆಯುತ್ತಿದ್ದ ಉತ್ತರೆಯ ಗರ್ಭದತ್ತ
ಗುರಿಮಾಡಿದ. ಇಂತಹ ಸಂದರ್ಭದಲ್ಲಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತನನ್ನು
ಚಕ್ರಧಾರಿ ಭಗವಂತ ರಕ್ಷಿದ ಮತ್ತು ಬ್ರಹ್ಮಾಸ್ತ್ರದಿಂದಾಗಿ ಸತ್ತು ಹುಟ್ಟಿದ ಮಗುವಿಗೆ ಕೃಷ್ಣ
ಜೀವದಾನ ಮಾಡಿದ’. ಈ ಹಿನ್ನೆಲೆಯಲ್ಲಿ ನೋಡಿದರೆ: ಭಾಗವತದಲ್ಲಿ ಬಂದಿರುವ ಕಥೆ ಮಹಾಭಾರತದಲ್ಲಿನ
ಕಥೆಗಿಂತ ಬಹಳ ಭಿನ್ನವಾಗಿದೆ. ಈ ಎರಡೂ ಗ್ರಂಥಗಳನ್ನು ನಿರ್ಮಿಸಿದವರು ವೇದವ್ಯಾಸರೇ ಆಗಿರುವಾಗ ಏಕೆ
ಈ ರೀತಿ ಬೇರೆಬೇರೆ ರೀತಿ ವಿವರಣೆ ನೀಡಿದರು ಎನ್ನುವುದು ಇಲ್ಲಿ ನಮ್ಮನ್ನು ಕಾಡುವ ಪ್ರಶ್ನೆ. ಈ
ಪ್ರಶ್ನೆಗೆ ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ನೀಡಿರುವ ವಿವರಣೆ ಅದ್ಭುತವಾಗಿದೆ. ಅಲ್ಲಿ ಅವರು ಹೇಳುತ್ತಾರೆ: ಸ್ವಪ್ನೋSಯಂ । ಎಂದು. ಮಹಾಭಾರತದಲ್ಲಿ ಬಂದಿರುವ ಕಥೆ
ನಿಜವಾಗಿ ನಡೆದ ಘಟನೆಯಾದರೆ, ಭಾಗವತದಲ್ಲಿ ಬಂದಿರುವ ಈ ಕಥೆ ಅಶ್ವತ್ಥಾಮ ಕಂಡ ಕನಸು. ಶಿಶುಹತ್ಯೆ
ಮಾಡಿದ ನಂತರ ಭಯಗ್ರಸ್ಥನಾಗಿ ವೇದವ್ಯಾಸರ ಆಶ್ರಮದ ಸಮೀಪವಿರುವ ಕಾಡಿನಲ್ಲಿ ಅಡಗಿ ಕುಳಿತಿದ್ದಾಗ, ಅಶ್ವತ್ಥಾಮ
ಕಂಡ ಕನಸಿದು. ಇದಕ್ಕೆ ಪ್ರಮಾಣ ಸ್ಕಾಂದಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:
ಪಾರ್ಥಾನುಯಾತ
ಮಾತ್ಮಾನಂ ದ್ರೌಣಿಃ ಸ್ವಪ್ನೇ ದದರ್ಶ ಹ ।
ಬಂಧನಂ
ಚಾತ್ಮನಸ್ತತ್ರ ದ್ರೌಪದ್ಯಾ ಚೈವ ಮೊಕ್ಷಣಂ ॥
ಇತಿ
ಸ್ಕಂದೇ ।
ತಸ್ಮಾನ್ನೈಷೀಕ ವಿರೋಧಃ ।
ಅಶ್ವತ್ಥಾಮರ
ಬದುಕುವ ಆಸೆ ಅದೆಷ್ಟು ಅದಮ್ಯವಾಗಿತ್ತೆಂದರೆ:
ಕನಸಿನಲ್ಲೂ ಕೂಡಾ “ತಾನು ಕ್ಷೆಮೆಗೆ ಪಾತ್ರನಾಗಿ- ಬದುಕುಳಿದೆ” ಎನ್ನುವುದನ್ನೇ ಅವರು ಕಾಣುತ್ತಿರುತ್ತಾರೆ. ಈ ಅಧ್ಯಾಯದಲ್ಲಿ ಮುಂದೆ
ಅಶ್ವತ್ಥಾಮರ ಕನಸಿನ ಕಥೆ ಮುಂದುವರಿಯುತ್ತದೆ.
ತತ ಆಸಾದ್ಯ ತರಸಾ
ದಾರುಣಂ ಗೌತಮೀಸುತಮ್ ।
ಬಬಂಧಾಮರ್ಷತಾಮ್ರಾಕ್ಷಃ
ಪಶುಂ ರಶನಯಾ ಯಥಾ ॥೩೩॥
ಅರ್ಜುನ
ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಿದಾಗ ಅಶ್ವತ್ಥಾಮ ಅಸಾಹಯಕನಾಗಿ ನಿಲ್ಲುತ್ತಾನೆ. ತಕ್ಷಣ
ಅರ್ಜುನ ಆತನನ್ನು ಬಂಧಿಸಿ, ಒಂದು ಪಶುವನ್ನು ಎಳೆದು ತರುವಂತೆ ಎಳೆದು ತರುತ್ತಾನೆ. ಸಿಟ್ಟಿನಿಂದ
ಅರ್ಜುನನ ಕಣ್ಣು ಕೆಂಪೇರಿರುತ್ತದೆ. ಆತ ಕೃಷ್ಣನ ಬಳಿ ಬಂದು “ಶಿಬಿರಕ್ಕೆ ಹೋಗೋಣ” ಎನ್ನುತ್ತಾನೆ.
ಮೈನಂ ಪಾರ್ಥಾರ್ಹಸಿ
ತ್ರಾತುಂ ಬ್ರಹ್ಮಬಂಧುಮಿಮಂ ಜಹಿ ।
ಯೋSಸಾವನಾಗಸಃ ಸುಪ್ತಾನವಧೀನ್ನಿಶಿ ಬಾಲಕಾನ್ ॥೩೫॥
ಅರ್ಜುನನ ಮಾತನ್ನು
ಕೇಳಿದ ಕೃಷ್ಣ ಹೇಳುತ್ತಾನೆ: ಏತಕ್ಕಾಗಿ ಆತನನ್ನು ಶಿಬಿರಕ್ಕೆ ಕರೆದುಕೊಂಡು ಹೋಗಬೇಕು? ಅವನನ್ನು
ಇಲ್ಲೇ ಮುಗಿಸಿಬಿಡು” ಎಂದು. ಇದು ಕೃಷ್ಣ ಅರ್ಜುನನ್ನು ಪರೀಕ್ಷಿಸುವ ನಡೆ. ಆತ ಹೇಳುತ್ತಾನೆ: ಇವನ
ಮೇಲೆ ಕರುಣೆ ತೋರಬೇಡ. ನಿರಾಪರಾದಿಗಳಾದ ಮಕ್ಕಳ ತಲೆ ಕಡಿದ ಆತನನ್ನು ಇಲ್ಲೇ ಮುಗಿಸಿಬಿಡು
ಎನ್ನುತ್ತಾನೆ ಕೃಷ್ಣ.
ಸ್ವಪ್ರಾಣಾನ್
ಯಃ ಪರಪ್ರಾಣೈಃ ಪ್ರಪುಷ್ಣಾತ್ಯಘೃಣಃ ಖಲಃ ।
ತದ್ವಧಸ್ತಸ್ಯ ಹಿ
ಶ್ರೇಯೋ ಯದ್ದೋಷಾದ್ ಯಾತ್ಯಧಃ ಪುಮಾನ್ ॥೩೭॥
ಮುಂದುವರಿದು ಕೃಷ್ಣ
ಹೇಳುತ್ತಾನೆ: ಯಾರು ಇನ್ನೊಬ್ಬರನ್ನು ಕೊಂದು ತಾನು ಬದುಕಲು ಬಯಸುತ್ತಾರೋ- ಅಂತವರು ದುರ್ಬಲರು.
ಅಂತವರನ್ನು ಕೊಲ್ಲುವುದರಿಂದ ಅವರಿಗೇ ಕ್ಷೇಮ. ಅದು ಅವರು ಮುಂದೆ ಮಾಡಬಹುದಾದ ಪಾಪಗಳಿಂದ ಅವರನ್ನು
ಪಾರುಮಾಡುತ್ತದೆ. ಆದ್ದರಿಂದ ಬದುಕ್ಕಿದ್ದರೆ ಮತ್ತಷ್ಟು ಹತ್ಯೆಗೆ ಕಾರಣವಾಗಬಲ್ಲ ಈತನ ತಲೆಯನ್ನು ಕಡಿದುಬಿಡು ಎನ್ನುತ್ತಾನೆ ಕೃಷ್ಣ.
ಪ್ರತಿಶ್ರುತಂ ಚ
ಭವತಾ ಪಾಂಚಾಲ್ಯೈ ಶೃಣ್ವತೋ ಮಮ ।
ಆಹರಿಷ್ಯೇ ಶಿರಸ್ತಸ್ಯ
ಯಸ್ತೇ ಮಾನಿನಿ ಪುತ್ರಹಾ ॥೩೮॥
“ನೀನು ನಿನ್ನ ಪ್ರತಿಜ್ಞೆಯನ್ನು ಈಡೇರಿಸುವುದು ಬೇಡವೇ?
ಈ ಪಾತಕಿಯ ತಲೆಯನ್ನು ಉಡುಗೊರೆಯಾಗಿ ದ್ರೌಪದಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ನೀನು ಈಗಾಗಲೇ
ಪ್ರತಿಜ್ಞೆ ಮಾಡಿರುವಿ. ಆದ್ದರಿಂದ ತಡಮಾಡದೇ ಕತ್ತರಿಸು ಅವನ ಶಿರವನ್ನು” ಎನ್ನುತ್ತಾನೆ ಕೃಷ್ಣ.
ಕೃಷ್ಣನ ಮಾತನ್ನು
ಕೇಳಿದ ಅರ್ಜುನ ಗುರುಪುತ್ರ ಎನ್ನುವ ಗೌರವದಿಂದ ಹೇಳುತ್ತಾನೆ: “ದ್ರೌಪದಿಯ ಬಳಿ ಹೋಗಿ ಆನಂತರ ಈ
ನಿರ್ಧಾರ ತೆಗೆದುಕೊಳ್ಳೋಣ. ಆಕೆ ಇಚ್ಛೆಪಟ್ಟರೆ ಆಕೆಯ ಪಾದದ ಬುಡದಲ್ಲೇ ಈತನ ಶಿರಛೇಧ ಮಾಡೋಣ”
ಎಂದು.
ಉವಾಚಾಸಹಂತ್ಯಸ್ಯ
ಬಂಧನಾನಯನಂ ಸತೀ ।
ಮುಚ್ಯತಾಂಮುಚ್ಯತಾಮೇಷ
ಬ್ರಾಹ್ಮಣೋ ನಿತರಾಂ ಗುರುಃ ॥೪೩॥
ದ್ರೌಪದಿ
ಬಂಧಿಯಾಗಿರುವ ಅಶ್ವತ್ಥಾಮನನ್ನು ಕಂಡು ಹೇಳುತ್ತಾಳೆ: “ಮೊದಲು ಬಿಟ್ಟುಬಿಡು ಇವನನ್ನು.
ಕ್ಷತ್ರಿಯರು ಹಾಸಿಗೆಯಲ್ಲಿ ಮಲಗಿ ಸಾಯುವವರಲ್ಲ. ರಣರಂಗದಲ್ಲಿ ಇನ್ನೊಬ್ಬರ ವಿರುದ್ಧ ಹೋರಾಡಿ
ಸಾಯುವವರು. ಆದರೆ ಈತ ಗುರುಪುತ್ರ. ಎಲ್ಲಕ್ಕೂ ಮಿಗಿಲಾಗಿ ಆತ ಬ್ರಹ್ಮಜ್ಞಾನಿ. ಗೌರವಿಸಬೇಕಾದ
ವ್ಯಕ್ತಿತ್ವ”.
ಸ ಏಷ ಭಗವಾನ್
ದ್ರೋಣಃ ಪ್ರಜಾರೂಪೇಣ ವರ್ತತೇ ।
ತಸ್ಯಾತ್ಮನೋSರ್ಧಂ ಪತ್ನ್ಯಾಸ್ತೇ ನಾನ್ವಗಾದ್ ವೀರಸೂಃ ಕೃಪೀ ॥೪೫॥
“ಇವನನ್ನು
ಕೊಲ್ಲುವುದರಿಂದ ಸತ್ತ ನನ್ನ ಮಕ್ಕಳು ಮರಳಿ ಬರುತ್ತಾರೆಯೇ? ಈತನ ದೇಹದಲ್ಲಿ ದ್ರೋಣಾಚಾರ್ಯರ
ನೆತ್ತರು ಹರಿಯುತ್ತಿದೆ. ಹಾಗಾಗಿ ನಾನು ಈತನೊಳಗೆ ಭಗವಾನ್ ದ್ರೋಣರನ್ನು ಕಾಣುತ್ತಿದ್ದೇನೆ.
ಹಾಗಾಗಿ ಇವನನ್ನು ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.
ಮಾ ರೋದೀದಸ್ಯ ಜನನೀ
ಗೌತಮೀ ಪತಿದೇವತಾ ।
ಯಥಾSಹಂ ಮೃತವತ್ಸಾSSರ್ತಾ
ರೋದಿಮ್ಯಶ್ರುಮುಖೀ ಮುಹುಃ ॥೪೭॥
“ಒಂದುವೇಳೆ
ಇವನನ್ನು ಕೊಂದರೆ ಅದರಿಂದಾಗುವ ಪರಿಣಾಮವೇನು? ಇಂದು ನಾನು ನನ್ನ ಮಕ್ಕಳನ್ನು ಕಳೆದುಕೊಂಡು
ದುಃಖಿಸುತ್ತಿದ್ದೇನೆ. ಈತನ ತಾಯಿ ಗೌತಮಿ ಈಗಾಗಲೇ ತನ್ನ ಪತಿಯನ್ನು ಕಳೆದುಕೊಂಡು
ದುಃಖದಲ್ಲಿದ್ದಾಳೆ. ಆ ತಾಯಿ ನನ್ನಂತೆ ದುಃಖ ಅನುಭವಿಸುವುದು ಬೇಡ. ಆದ್ದರಿಂದ ಆತನನ್ನು
ಕೊಲ್ಲಬೇಡ. ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.
ಮಹಾಭಾರತದಲ್ಲಿ
ಬರುವ ನಿಜ ಕಥೆಯ ಪ್ರಕಾರ ಅಶ್ವತ್ಥಾಮನನ್ನು ದ್ರೌಪದಿಯ ಬಳಿ ಎಳೆದು ತಂದೇ ಇಲ್ಲ. ಕೃಷ್ಣ,
ವೇದವ್ಯಾಸರು, ಭೀಮ, ಅರ್ಜುನ, ಎಲ್ಲರೂ ಹೇಳಿದರೂ
ಕೂಡಾ, ಅಶ್ವತ್ಥಾಮ ಬ್ರಹ್ಮಾಸ್ತ್ರ ಉಪಸಂಹಾರಕ್ಕೆ ಒಪ್ಪಿಕೊಳ್ಳದೇ ಅದನ್ನು ಉತ್ತರೆಯ ಗರ್ಭಕ್ಕೆ
ಗುರಿಯಾಗಿಸುತ್ತಾನೆ. ಇದರಿಂದಾಗಿ ಆತ ಎಲ್ಲರ ಶಾಪಕ್ಕೆ ಗುರಿಯಾಗುತ್ತಾನೆ. “ನಿನ್ನ ಮೈಯಲ್ಲೆಲ್ಲಾ
ಗಾಯವಾಗಿ, ಅದರಲ್ಲಿ ಕೀವು ತುಂಬಿ, ದುರ್ವಾಸನೆಯಿಂದಾಗಿ, ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ
ನಿನ್ನ ಅಸಹ್ಯ ಶರೀರವನ್ನು ಹೊತ್ತುಕೊಂಡು ನೀನು ಬದುಕು” ಎನ್ನುವ ಶಾಪ ಪಡೆದ ಆತ ತನ್ನಲ್ಲಿ ಜನ್ಮತಃ ಇದ್ದ ಮಣಿಯನ್ನು ಪಾಂಡವರಿಗೋಪ್ಪಿಸಿ
ಶಾಪಗ್ರಸ್ತನಾಗಿ ಕಾಡಾಡಿಯಾಗಿ ಅಲೆಯುತ್ತಾನೆ ಎನ್ನುತ್ತದೆ ಮಹಾಭಾರತ. ಆದರೆ ಇಲ್ಲಿ ಅಶ್ವತ್ಥಾಮ
ತಾನು ದ್ರೌಪದಿಯ ಕರುಣೆಯಿಂದ ಕ್ಷೆಮೆಗೆ ಪಾತ್ರನಾದೆ ಎಂದು ಕನಸು ಕಾಣುತ್ತಿದ್ದಾನೆ.
ಸೂತ ಉವಾಚ-
ಧರ್ಮ್ಯಂ ನ್ಯಾಯ್ಯಂ
ಸಕರುಣಂ ನಿರ್ವ್ಯಳೀಕಂ ಸಮಂ ಮಹತ್ ।
ರಾಜಾ ಧರ್ಮಸುತೋ
ರಾಜ್ಞ್ಯಾಃಪ್ರತ್ಯನಂದದ್ ವಚೋ ದ್ವಿಜಾಃ ॥೪೯॥
ನಕುಲಃ ಸಹದೇವಶ್ಚ
ಯುಯುಧಾನೋ ಧನಂಜಯಃ ।
ಭಗವಾನ್
ದೇವಕೀಪುತ್ರೋ ಯೇ ಚಾನ್ಯೇ ಯಾಶ್ಚ ಯೋಷಿತಃ ॥೫೦॥
ಯುದಿಷ್ಠಿರ
ದ್ರೌಪದಿಯ ಮಾತನ್ನು ಬೆಂಬಲಿಸುತ್ತಾನೆ ಹಾಗೂ ಬಹಳ
ಮೆಚ್ಚಿ ಅಭಿನಂದನೆ ಮಾಡಿ ಹೊಗಳುತ್ತಾನೆ. ಜೊತೆಗೆ ನಕುಲ ಸಹದೇವರೂ ಕೂಡಾ, ದ್ರೌಪದಿಯನ್ನು
ಅಭಿನಂದಿಸುತ್ತಾರೆ. ಸಾತ್ಯಕಿ ಜೊತೆಗೆ ಅರ್ಜುನ ಕೂಡಾ ದ್ರೌಪದಿಯ ಮಾತನ್ನು ಮೆಚ್ಚಿಕೊಡು
ಹೊಗಳುತ್ತಾರೆ. ಶ್ರೀಕೃಷ್ಣ ಹಾಗೂ ಅಲ್ಲಿ ಸೇರಿದ
ಎಲ್ಲರೂ ದ್ರೌಪದಿಯ ನಿರ್ಧಾರವನ್ನು ಬೆಂಬಲಿಸುತ್ತಾರೆ.
ತತ್ರಾಹಾಮರ್ಷಿತೋ
ಭೀಮಸ್ತಸ್ಯ ಶ್ರೇಯಾನ್ ವಧಃ ಸ್ಮೃತಃ ।
ನ ಭರ್ತುರ್ನಾತ್ಮನಶ್ಚಾರ್ಥೇ
ಯೋSಹನ್ ಸುಪ್ತಾನ್ ಶಿಶೂನ್ ವೃಥಾ ॥೫೧॥
ಎಲ್ಲರೂ
ಅಭಿನಂದಿಸಿದಾಗ ಭೀಮನಿಗೆ ಕೊಪ ಬರುತ್ತದೆ. ಆತ ಕೋಪದಿಂದ ಎದ್ದು ನಿಲ್ಲುತ್ತಾನೆ ಮತ್ತು
ಹೇಳುತ್ತಾನೆ. “ಇಂತಹ ಪಾಪಿಯ ತಲೆ ಕಡಿಯುವುದೇ
ನ್ಯಾಯ” ಎಂದು. ಈತ ನಿದ್ರಿಸುತ್ತಿದ್ದ ಮಕ್ಕಳನ್ನು ಕೊಂದ ಪಾಪಿ. ಆತ ಮಾಡಿರುವ ಕೃತ್ಯ
ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಮತ್ತು ಆತ್ಮಹಿತವಾದದ್ದೂ ಅಲ್ಲ. ಹಾಗಾಗಿ ಇಂತಹ ನೀಚನನ್ನು
ಮುಗಿಸಿಬಿಡು ಎನ್ನುತ್ತಾನೆ ಭೀಮ. ಪ್ರಾಯಃ ಭೀಮನನ್ನು ಕಂಡರೆ ಅಶ್ವತ್ಥಾಮನಿಗೆ ಭಯ. ಅದಕ್ಕಾಗಿ ಈ
ರೀತಿಯ ವಿಚಾರಗಳನ್ನು ಆತ ಕನಸಿನಲ್ಲಿ ಕಾಣುತ್ತಿದ್ದಾನೆ.
ನಿಶಮ್ಯ ಭೀಮಗದಿತಂ
ದ್ರೌಪದ್ಯಾಶ್ಚ ಚತುರ್ಭುಜಃ ।
ಆಲೋಕ್ಯ ವದನಂ ಸಖ್ಯುರಿದಮಾಹ
ಹಸನ್ನಿವ ॥೫೨॥
ಶ್ರೀಭಗವಾನುವಾಚ-
ಬ್ರಹ್ಮಬಂಧುರ್ನ
ಹಂತವ್ಯ ಆತತಾಯೀ ವಧಾರ್ಹಣಃ ।
ಮಯೈವೋಭಯಮಾಮ್ನಾತಂ
ಪರಿಪಾಹ್ಯನುಶಾಸನಮ್ ॥೫೩॥
ಕುರು ಪ್ರತಿಶ್ರುತಂ
ಸತ್ಯಂ ಯತ್ತತ್ ಸಾಂತ್ವಯತಾ ಪ್ರಿಯಾಮ್ ।
ಮತಂ ಚ ಭೀಮಸೇನಸ್ಯ
ಪಾಂಚಾಲ್ಯೈ ಮಹ್ಯಮೇವ ಚ ॥೫೪॥
ಭೀಮನ ಮತ್ತು ದ್ರೌಪದಿಯ ಮಾತನ್ನು ಕೇಳಿ ಕೃಷ್ಣ ಅರ್ಜುನನ ಮುಖವನ್ನು
ನೋಡಿ ಮುಗುಳ್ನಗುತ್ತಾನೆ. ಕೃಷ್ಣ ಹೇಳುತ್ತಾನೆ: “ಶಾಸ್ತ್ರದಲ್ಲಿ
ಹೇಳುವಂತೆ- ಬ್ರಹ್ಮಜ್ಞಾನಿಯನ್ನು ಕೊಲ್ಲಬಾರದು; ಆದರೆ ಸಮಾಜ ಕಂಟಕರನ್ನು ಜೀವಂತ ಉಳಿಸಬಾರದು. ಶಾಸ್ತ್ರದ ಮೂಲಕ
ಈ ಎರಡು ವಿಧಿಯನ್ನು ಜಗತ್ತಿಗೆ ಕೊಟ್ಟವನು ನಾನೇ ಆದ್ದರಿಂದ, ಬ್ರಹ್ಮಬಂಧು ಅಶ್ವತ್ಥಾಮನನ್ನು
ಕೊಲ್ಲಬಾರದು. ಆದರೆ ಆತ ಆತತಾಯಿಯಾದ್ದರಿಂದ ಅವನನ್ನು ಕೊಲ್ಲಬೇಕು. ಇದು ಶಾಸ್ತ್ರದ ಮತ್ತು ನನ್ನ ಆಜ್ಞೆ.
ಅದನ್ನು ಪಾಲಿಸು! ಇಷ್ಟೇ ಅಲ್ಲದೆ, ನೀನು ಈತನ ತಲೆಯನ್ನು ದ್ರೌಪದಿಯ ಪಾದಕ್ಕೆ ಉಡುಗೊರೆಯಾಗಿ ಅರ್ಪಿಸುತ್ತೇನೆ
ಎಂದು ಪ್ರತಿಜ್ಞೆ ಮಾಡಿದವನು. ಆ ಪ್ರತಿಜ್ಞೆಯನ್ನು ಉಳಿಸು. ಭೀಮಸೇನನ ಮತ್ತು ಪಾಂಚಾಲಿಯ ಅಭಿಪ್ರಾಯವೇ
ನನ್ನ ಅಭಿಪ್ರಾಯವಾದ್ದರಿಂದ ಎಲ್ಲವನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸು” ಎಂದು ಒಗಟಾಗಿ ಮಾತನಾಡುತ್ತಾನೆ ಕೃಷ್ಣ.
ಸೂತ ಉವಾಚ-
ಅರ್ಜುನಃ ಸಹಸಾSSಜ್ಞಾಯ
ಹರೇರ್ಹಾರ್ದಮಥಾಸಿನಾ ।
ಮಣಿಂ ಜಹಾರ ಮೂರ್ಧನ್ಯಂ
ದ್ವಿಜಸ್ಯ ಸಹಮೂರ್ಧಜಮ್ ॥೫೫॥
ವಿಮುಚ್ಯ ರಶನಾಬದ್ಧಂ
ಬಾಲಹತ್ಯಾಹತಪ್ರಭಮ್ ।
ತೇಜಸಾ ಮಣಿನಾ ಹೀನಂ
ಶಿಬಿರಾನ್ನಿರಯಾಪಯತ್ ॥೫೬॥
ನಮಗೆ ಕೃಷ್ಣನ ಮಾತು
ಅರ್ಥವಾಗದಿದ್ದರೂ ಕೂಡಾ, ಅರ್ಜುನನಿಗೆ ತಕ್ಷಣ ಕೃಷ್ಣನ ಮಾತಿನ ಹಿಂದಿನ ರಹಸ್ಯ ತಿಳಿದು ಬಿಡುತ್ತದೆ.
ಆತ ತಡಮಾಡದೆ ತನ್ನ ಕತ್ತಿಯನ್ನು ತೆಗೆದು, ಅಶ್ವತ್ಥಾಮನ ತಲೆಯನ್ನು ಬೋಳಿಸುತ್ತಾನೆ. ಜೊತೆಗೆ ಜನ್ಮತಃ
ಬಂದಿರುವ ಅಮೂಲ್ಯವಾದ ಮಣಿರತ್ನವನ್ನು ಆತನ ತಲೆಯಿಂದ ಕಿತ್ತು ತೆಗೆಯುತ್ತಾನೆ. ಈ ರೀತಿ ತಲೆಬೋಳಿಸಿ,
ಮಣಿಯನ್ನು ಕಿತ್ತಿರುವುದು ಅಶ್ವತ್ಥಾಮನಿಗೆ ಸಾವಿಗಿಂತ ಮಿಗಿಲಾದ ಅವಮಾನ.
ಇಷ್ಟು ಮಾಡಿ ಅರ್ಜುನ
ಕಟ್ಟಿದ ಹಗ್ಗದಿಂದ ಅಶ್ವತ್ಥಾಮನನ್ನು ಬಿಚ್ಚುತ್ತಾನೆ. ಈ ಅವಮಾನದಿಂದಾಗಿ ಅಶ್ವತ್ಥಾಮನಲ್ಲಿ ಯಾವ ಬ್ರಹ್ಮಕಳೆಯೂ
ಉಳಿದಿರುವುದಿಲ್ಲ. ನಂತರ ಪಾಂಡವರ ಶಿಬಿರದಿಂದ ಆತನನ್ನು ಹೊರಹಾಕಿ “ಇನ್ನು ಮುಂದೆ ನಮ್ಮ ಕಣ್ಣಮುಂದೆ ಸುಳಿಯಬೇಡ”
ಎಂದು ಹೇಳಿ ಗಡಿಪಾರು ಮಾಡುತ್ತಾರೆ.
ಬಂಧನಂ ದ್ರವಿಣಾದಾನಂ
ಸ್ಥಾನಾನ್ನಿರ್ಯಾಪಣಂ ತಥಾ ।
ಏಷ ಹಿ ಬ್ರಹ್ಮಬಂಧೂನಾಂ
ವಧೋ ನಾನ್ಯೋSಸ್ತಿ ದೈಹಿಕಃ ॥೫೭॥
ಒಬ್ಬ ಬ್ರಹ್ಮಜ್ಞಾನಿಯ
ವಂಶದಲ್ಲಿ ಹುಟ್ಟಿದ ವ್ಯಕ್ತಿ ಅಪರಾಧ ಮಾಡಿದಾಗ ಅವನಿಗೆ ಕೊಡಬೇಕಾದ ಶಿಕ್ಷೆ ಏನೆಂಬುದನ್ನು ಶಾಸ್ತ್ರ
ವಿವರಿಸುತ್ತದೆ. ಬಂಧನಕ್ಕೆ ಒಳಪಡಿಸುವುದು, ತಲೆಬೋಳಿಸುವುದು, ಅವರಲ್ಲಿರುವ ಸರ್ವಸಂಪತ್ತನ್ನೂ
ಕಿತ್ತುಕೊಂಡು ಅವರನ್ನು ದೇಶಭ್ರಷ್ಟರನ್ನಾಗಿ ಮಾಡುವುದು, ಇತ್ಯಾದಿ ಶಿಕ್ಷೆ ಮರಣದಂಡನೆಗೆ ಪರ್ಯಾಯ
ಶಿಕ್ಷೆ.
ಇದು ಅಶ್ವತ್ಥಾಮ
ಕಾಡಿನಲ್ಲಿ ಅಡಗಿಕುಳಿತಾಗ ಕಂಡ ಕನಸು. ಈ ಕನಸಿನ ನಂತರದ ಘಟನೆಯನ್ನು ಮಹಾಭಾರತ ವರ್ಣಿಸುತ್ತದೆ.
ಹಿಂದೆ ಹೇಳಿದಂತೆ ಅಶ್ವತ್ಥಾಮಾಚಾರ್ಯರು ಶಾಪಗ್ರಸ್ಥನಾಗುತ್ತಾರೆ. ಅದರಿಂದಾಗಿ ಅವರಿಗೆ ಅಸಹ್ಯ
ಮತ್ತು ದುರ್ನಾತದಿಂದ ಕೂಡಿದ ಶರೀರ ಪ್ರಾಪ್ತಿಯಾಗುತ್ತದೆ. ಮುಂದಿನ ದ್ವಾಪರದ ತನಕ ಮನುಷ್ಯಸಂಚಾರವಿಲ್ಲದ
ಹಿಮಾಲಯದ ದುರ್ಗಮತಾಣದಲ್ಲಿ ಅವರು ಅವತಾರ ಸಮಾಪ್ತಿ ಮಾಡದೇ ಇರಬೇಕಾದ ಪ್ರಸಂಗ ಅವರಿಗೊದಗುತ್ತದೆ.
ಆನಂತರ ಮುಂದಿನ ದ್ವಾಪರದಲ್ಲಿ ಅವರು ಈ ಕಷ್ಟದಿಂದ ಬಿಡುಗಡೆಗೊಂಡು ‘ವ್ಯಾಸ’ ಪದವಿಯನ್ನು
ಅಲಂಕರಿಸಲಿದ್ದಾರೆ. ಇದು ಅವತಾರದಲ್ಲಿ ದೇವತೆಗಳು ಪಡುವ ಕಷ್ಟ! ಅವರು ಅನುಭವಿಸುವ ಕಷ್ಟದ ಮುಂದೆ ನಮ್ಮ
ಕಷ್ಟ ಏನೂ ಅಲ್ಲ. ಅವರ ನೈಜ ಕಥೆಯೇ ನಮಗೆ ಒಂದು ಆತ್ಮವಿಶ್ವಾಸ ಮತ್ತು ಭರವಸೆಯಾಗಿರಬೇಕು.
॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ
ಪ್ರಥಮಸ್ಕಂಧೇ ಸಪ್ತಮೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು.
*********
No comments:
Post a Comment