ಸ ವಾಗ್ವಿಸರ್ಗೋ ಜನತಾಘವಿಪ್ಲವೋ ಯಸ್ಮಿನ್ ಪ್ರತಿಶ್ಲೋಕಮಬದ್ಧವತ್ಯಪಿ ।
ನಾಮಾನ್ಯನಂತಸ್ಯ ಯಶೋSಙ್ಕಿತಾನಿ ಯತ್ ಶೃಣ್ವಂತಿ ಗಾಯಂತಿ ಗೃಣಂತಿ ಸಾಧವಃ ॥೧೧॥
ಅಲಂಕಾರ, ಛಂದಸ್ಸು,
ವ್ಯಾಕರಣ ಸರಿ ಇಲ್ಲದೇ ಇರುವ ಕೃತಿ ಕೂಡಾ ಭಗವಂತನ
ಎಚ್ಚರದಿಂದ ಬರೆದ ಕೃತಿಯಾಗಿದ್ದರೆ ಅದು ಮಾನ್ಯತೆಯನ್ನು ಪಡೆಯುತ್ತದೆ. ಒಬ್ಬ ಭಗವಂತನ ಗುಣಗಾನವನ್ನು
ವ್ಯಾಕರಣ ತಪ್ಪಿ ಮಾಡಿದರೂ ಕೂಡಾ, ಅದು ಆ ಗುಣಗಾನವನ್ನು ಕೇಳಿದವನ ಪಾಪವನ್ನು ಪರಿಹರಿಸಬಲ್ಲದು.
ಶ್ಲೋಕ ತಪ್ಪಾಗಿದ್ದರೂ ಕೂಡಾ, ಅನಂತಶಕ್ತಿಯಾದ ಭಗವಂತನ ಯಶಸ್ಸನ್ನು ಆ ಶ್ಲೋಕ ಹೇಳಿದರೆ ಅದು
ಗ್ರಾಹ್ಯ ಮತ್ತು ಅದು ಜ್ಞಾನಿಗಳ ಮೆಚ್ಚುಗೆ
ಪಡೆಯಬಲ್ಲದು. ಜ್ಞಾನಿಗಳು ಅಂತಹ ಶ್ಲೋಕದಲ್ಲಿರುವ
ಅಲಂಕಾರದೋಷ, ವ್ಯಾಕರಣದೋಷ, ಸಾಹಿತ್ಯ ದೋಷವನ್ನು ನಿರ್ಲಕ್ಷಿಸಿ, ಅಲ್ಲಿರುವ ಭಗವಂತನ ಗುಣಗಾನವನ್ನು
ಸ್ವೀಕರಿಸುತ್ತಾರೆ. ಅಪೂರ್ವವಾದ ಭಗವಂತನ ಗುಣಗಾನದ ನಡುವೆ ಬೇರೆ ಯಾವ ಕಾಳಜಿಯೂ
ಜ್ಞಾನಿಗಳಿಗಿರುವುದಿಲ್ಲ.
ನೈಷ್ಕರ್ಮ್ಯಮಪ್ಯಚ್ಯುತಭಾವವರ್ಜಿತಂ ನ ಶೋಭತೇ ಜ್ಞಾನಮಲಂ ನಿರಂಜನಮ್ ।
ಕುತಃ ಪುನಃ ಶಶ್ವದಭದ್ರಮೀಶ್ವರೇ ನ ಚಾರ್ಪಿತಂ ಕರ್ಮ ಯದಪ್ಯಕಾರಣಮ್ ॥೧೨॥
ಭಗವಂತನ ಗುಣದ
ಅರಿವು ಇಲ್ಲದಾಗ ನಮ್ಮ ಸಾಧನೆ ಹೇಗೆ ವ್ಯರ್ಥ ಎನ್ನುವುದನ್ನು ನಾರದರು ಇಲ್ಲಿ ಬಹಳ ಸುಂದರವಾಗಿ
ವರ್ಣಿಸಿದ್ದಾರೆ. ಭಗವಂತನ ಭಕ್ತಿ ಇಲ್ಲದ ಕಾವ್ಯ-ಕಾವ್ಯವಲ್ಲ, ಭಗವಂತನ ಭಕ್ತಿ ಇಲ್ಲದ ಸಂನ್ಯಾಸ-
ಸಂನ್ಯಾಸವಲ್ಲ, ಭಗವಂತನ ಜ್ಞಾನವಿಲ್ಲದ ಜ್ಞಾನ-ಜ್ಞಾನವಲ್ಲ,
ಭಗವಂತನ ಭಕ್ತಿ ಇಲ್ಲದ ನಿತ್ಯ ಕರ್ಮಾನುಷ್ಠಾನ ಕರ್ಮವೇ ಅಲ್ಲ ಎನ್ನುತ್ತಾರೆ ನಾರದರು!
ಸರ್ವಸ್ವವನ್ನೂ
ತ್ಯಾಗಮಾಡಿ ಭಗವಂತನಿಗೋಸ್ಕರ ಬದುಕುವ ಆಶ್ರಮ ಸಂನ್ಯಾಸಾಶ್ರಮ. ಇತರ ಆಶ್ರಮದಲ್ಲಿ ಸಾಮಾಜಿಕ
ಹೊಣೆಗಾರಿಕೆ ಇದ್ದರೆ ಸಂನ್ಯಾಸಾಶ್ರಮದಲ್ಲಿ ಅಂತಹ ಹೊಣೆಗಾರಿಕೆ ಇಲ್ಲ. ಸಂನ್ಯಾಸದಲ್ಲಿ ಕೇವಲ
ಭಗವಂತನ ಚಿಂತನೆ, ಧ್ಯಾನ ಮತ್ತು ಭಗವಂತನನ್ನು ಬಯಸುವವರಿಗೆ ಭಗವಂತನ ಅರಿವಿನ ದಾನವೇ
ಮೂಲಕರ್ತವ್ಯ. ಇಲ್ಲಿ ನಾರದರು ಹೇಳುತ್ತಾರೆ: “ಇಂತಹ ನೈಷ್ಕರ್ಮ್ಯಮತಿಗಳಿಗೆ ‘ಅಚ್ಯುತನಲ್ಲಿ’
ಭಕ್ತಿ ಇಲ್ಲದಿದ್ದರೆ ಅವರ ಸಂನ್ಯಾಸ ವ್ಯರ್ಥ” ಎಂದು. ಯಾವ ವಿರಕ್ತಿ ನಮ್ಮನ್ನು ಭಗವಂತನತ್ತ
ಒಯ್ಯುವುದಿಲ್ಲವೋ ಆ ವಿರಕ್ತಿ ಅರ್ಥಶೂನ್ಯವಾಗುತ್ತದೆ. ನಾವು ಭಕ್ತಿ ಮಾಡಬೇಕಾಗಿರುವುದು ಯಾವುದೋ
ದೆವ್ವ-ಪಿಶಾಚಿಯನ್ನಲ್ಲ, ಬದಲಿಗೆ ಯಾವುದೇ ಚ್ಯುತಿ ಇಲ್ಲದ ಭಗವದ್ ತತ್ತ್ವ ಅಚ್ಯುತನನ್ನು.
ನೈಷ್ಕರ್ಮ್ಯಜ್ಞಾನ
ಎಂದರೆ ಕರ್ಮದ ಬಂಧನವನ್ನು ಕಳಚಲು ಸಾಧನವಾದ ಜ್ಞಾನ. “ಶಾಸ್ತ್ರದ ಯಥಾರ್ಥ ಜ್ಞಾನ ಇದ್ದೂ ಕೂಡಾ,
ಭಕ್ತಿ ಇಲ್ಲದಿದ್ದರೆ ಆ ಜ್ಞಾನ ವ್ಯರ್ಥ”. ಅದೇ
ರೀತಿ ಕರ್ಮ. ಸಾಮಾನ್ಯವಾಗಿ ಕರ್ಮ ನಮ್ಮನ್ನು ಸೆಳೆಯುವುದು ಪ್ರಾಪಂಚಿಕ ವಿಷಯದತ್ತ. ಹಾಗಾಗಿ
ಅಲ್ಲಿ ಭಗವದ್ ಭಕ್ತಿ ಬಹಳ ಮುಖ್ಯ. ಫಲಾಪೇಕ್ಷೆ ಇಲ್ಲದೆ, ಭಗವಂತನ ಸೇವೆ ಎಂದು ಕರ್ಮ ಮಾಡಿದಾಗ
ಮಾತ್ರ ಆ ಕರ್ಮ ಸಾರ್ಥಕವಾಗುತ್ತದೆ. ಹೀಗೆ ಭಗವಂತನ ಭಕ್ತಿ ಇಲ್ಲದ ಜ್ಞಾನ-ವೈರಾಗ್ಯ-ಕರ್ಮ ಎಲ್ಲವೂ
ವ್ಯರ್ಥ ಎನ್ನುವುದನ್ನು ನಾರದರು ಇಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಇಷ್ಟು ಹೇಳಿ ನಾರದರು ವೇದವ್ಯಾಸರಲ್ಲಿ ಭಾಗವತ ಗ್ರಂಥ
ರಚನೆ ಮಾಡುವಂತೆ ಪ್ರಾರ್ಥಿಸಿಕೊಳ್ಳುವುದನ್ನು
ಮುಂದಿನ ಶ್ಲೋಕದಲ್ಲಿ ಕಾಣಬಹುದು.
ಅತೋ ಮಹಾಭಾಗ ಭವಾನಮೋಘದೃಕ್ ಶುಚಿಶ್ರವಾಃ ಸತ್ಯರತೋ
ಧೃತವ್ರತಃ ।
ಉರುಕ್ರಮಸ್ಯಾಖಿಲಬಂಧಮುಕ್ತಯೇ ಸಮಾಧಿನಾSನುಸ್ಮರ ಯದ್ ವಿಚೇಷ್ಟಿತಮ್ ॥೧೩॥
ನಾರದರು
ಹೇಳುತ್ತಾರೆ: “ ನೀವು ಮಹಾಭಾಗರು; ನಿಮ್ಮ ಜ್ಞಾನ ದೃಷ್ಟಿ ಅಮೋಘವಾದುದು. ಅದೆಂದೂ ಹುಸಿಯಾಗದು”
ಎಂದು. ಇಲ್ಲಿ ‘ಮಹಾಭಾಗ’ ಎನ್ನುವಲ್ಲಿ ‘ಭಾಗ’ ಎಂದರೆ ಸಮುದಾಯ ಎಂದರ್ಥ. ಆದ್ದರಿಂದ ಮಹಾಭಾಗ
ಎಂದರೆ ‘ಷಡ್ಗುಣಸಂಪನ್ನ’. ಈ ಶ್ಲೋಕದಲ್ಲಿ ನಾರದರು ವೇದವ್ಯಾಸರನ್ನು ‘ಶುಚಿಶ್ರವಾಃ, ಸತ್ಯರತಃ, ಧೃತವ್ರತಃ ಇತ್ಯಾದಿಯಾಗಿ
ಸಂಬೋಧಿಸುವುದನ್ನು ಕಾಣುತ್ತೇವೆ. ಇವು ಭಗವಂತನ ಗುಣವಾಚಕ ನಾಮಗಳು.
(೧) ಶುಚಿಶ್ರವಾಃ :
ಯಾರ ಗುಣಗಳ ಶ್ರವಣ ನಮ್ಮನ್ನು ಪವಿತ್ರಗೊಳಿಸುತ್ತದೋ ಅವನು
‘ಶುಚಿಶ್ರವಾಃ’.
(೨) ಸತ್ಯರತಃ
ಎಂದರೆ ಜ್ಞಾನಪೂರ್ವಕ ಕೃತಿ. ಯತಾವತ್ತಾಗಿ ಎಲ್ಲವನ್ನೂ ತಿಳಿದು, ಯತಾವತ್ತಾಗಿ ಮಾಡುವವ ಸತ್ಯರತಃ.
ಇದು ಸಾಧ್ಯವಾಗುವುದು ಕೇವಲ ಭಗವಂತನಿಗೆ ಮಾತ್ರ. ನಮಗೆ ನಾವು ಮಾಡುವ ಯಾವುದೇ ಕೆಲಸದಲ್ಲಿ ಪೂರ್ಣ
ಅರಿವು ಇರುವುದಿಲ್ಲ. ಪ್ರತಿಯೊಂದು ಕರ್ಮದ ಸಮಗ್ರ ಪೂರ್ವೋತ್ತರ ತಿಳಿದು, ಯಥಾರ್ಥ
ಜ್ಞಾನಪೂರ್ವಕವಾಗಿ ಕರ್ಮವನ್ನು ಮಾಡಬಲ್ಲ ಭಗವಂತ ಸತ್ಯರತಃ.
(೩) ಧೃತವ್ರತಃ
ಎಂದರೆ ವೃತವನ್ನು ತೊಟ್ಟವ ಎಂದರ್ಥ. ತನ್ನಲ್ಲಿ ಶರಣಾದ ಭಕ್ತರನ್ನು ರಕ್ಷಿಸುವುದೇ ಭಗವಂತನ ವೃತ. ಗೀತೆಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅನನ್ಯಾಶ್ಚಿಂತಯಂತೋ
ಮಾಂ ಯೇ ಜನಾಃ ಪರ್ಯುಪಾಸತೇ । ತೇಷಾಂ
ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೯-೨೨॥ “ನನ್ನನ್ನೇ ನೆನೆಯುತ್ತಾ ಪರಿಪರಿಯಿಂದ ಪೂಜಿಸುವ ಜನರು
ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು” ಎಂದಿದ್ದಾನೆ ಕೃಷ್ಣ.
ರಾಮಾಯಣದಲ್ಲಿ ಕೂಡಾ ಈ ಮಾತು ಬರುತ್ತದೆ. “ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವೃತಂ
ಮಮ” : “ ನಾನು
ನಿನ್ನವ, ನನ್ನನ್ನು ರಕ್ಷಿಸು ಎಂದು ಯಾರು ಶರಣಾಗುತ್ತಾರೋ, ಅವರನ್ನು ರಕ್ಷಿಸುವುದು ನನ್ನ ವೃತ”
ಎಂದಿದ್ದಾನೆ ಶ್ರೀರಾಮ. ಇಂತಹ ವಿಶಿಷ್ಠ ವೃತವುಳ್ಳ ‘ಶರಣಾಗತವತ್ಸಲ’ ಭಗವಂತ ಧೃತವ್ರತಃ.
ಮುಂದುವರಿದು
ನಾರದರು ಹೇಳುತ್ತಾರೆ: “ಯಾರು ಮೂರು ಹೆಜ್ಜೆಯಿಂದ ಮೂರು ಲೋಕವನ್ನು ವ್ಯಾಪಿಸಿದನೋ, ಯಾರ
ನಿಯಮ(ಕ್ರಮ)ದಂತೆ ಇಡೀ ಪ್ರಪಂಚ ನಡೆಯುತ್ತಿದೆಯೋ, ಅಂತಹ ಉರುಕ್ರಮ ನಾರಾಯಣನ ಅನೇಕ ಅವತಾರಗಳನ್ನು
ನೀವು ‘ಅನುಸ್ಮರ’ ಮಾಡಬೇಕು” ಎಂದು. ಇಲ್ಲಿ ಅನುಸ್ಮರ ಎಂದರೆ ಮಾನಸಿಕ ಗ್ರಂಥ ರಚನೆ.
ಹಿಂದಿನಕಾಲದಲ್ಲಿ ಬರೆದಿಟ್ಟುಕೊಳ್ಳುವ ಪದ್ಧತಿ ಇರಲಿಲ್ಲ. ಎಲ್ಲಾ ರಚನೆ ಮಾನಸಿಕವಾಗಿದ್ದು, ಅದು
ಅನುಗಾಲವೂ ಅವರಿಗೆ ಸ್ಮರಣೆಯಲ್ಲಿರುತ್ತಿತ್ತು. “ಭಗವಂತನನ್ನು ತಿಳಿದು ಸಾಧನೆಯ ಪೂರ್ಣತೆಯನ್ನು
ಪಡೆಯುವ ಯೋಗ್ಯತೆಯುಳ್ಳವರಿಗಾಗಿ(ಅ-ಖಿಲ), ಸಮಾಧಿಭಾಷೆಯಲ್ಲಿ ನೀವು ಒಂದು ಗ್ರಂಥ ರಚನೆ ಮಾಡಬೇಕು”
ಎಂದು ನಾರದರು ವ್ಯಾಸರಲ್ಲಿ ಪ್ರಾರ್ಥಿಸುತ್ತಾರೆ.
ಈ ಹಿಂದೆ ನಾವು
ಸಮಾಧಿ, ಗುಹ್ಯ ಮತ್ತು ದರ್ಶನ ಭಾಷೆಗಳ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿ ನಾರದರು ವಿಶೇಷವಾಗಿ
ಸಮಾಧಿ ಭಾಷೆಯಲ್ಲಿ ಭಾಗವತ ನಿರ್ಮಾಣ ಮಾಡಬೇಕು ಎಂದು ವ್ಯಾಸರಲ್ಲಿ ಪ್ರಾರ್ಥಿಸಿದ್ದಾರೆ. ಸಮಾಧಿ
ಭಾಷೆ ಎಂದರೆ ಇದ್ದದ್ದನ್ನು ಇದ್ದಂತೆ ಹೇಳುವುದು. ಈ ಮಾತನ್ನು ಕೇಳಿದಾಗ ನಮಗೆ ಒಂದು ಸಂಶಯ
ಬರುತ್ತದೆ. ಭಾಗವತ ಸಮಾಧಿ ಭಾಷೆಯಲ್ಲಿದ್ದರೆ ಅದಕ್ಕೆ ಏತಕ್ಕೆ ಭಾಷ್ಯ ಎಂದು. ನಿಜ, ಸಮಾಧಿ ಭಾಷೆ
ಎಂದರೆ ನೇರ ಭಾಷೆ. ಆದರೆ ಅದರಲ್ಲಿ ಮೂರು ವಿಧ. ಅವುಗಳೆಂದರೆ: ಸಮಾಧಿ-ದರ್ಶನ ಭಾಷೆ, ಸಮಾಧಿ-ಗುಹ್ಯ
ಭಾಷೆ ಮತ್ತು ಸಮಾಧಿ-ಸಮಾಧಿ ಭಾಷೆ.
ಸಂಸಾರ ಬಂಧದಲ್ಲಿ
ತೊಳಲಾಡುತ್ತಿರುವ ಜನರ ಬವಬಂಧನದ ಬಿಡುಗಡೆಗಾಗಿ, ಜನರಿಗೆ ಅರ್ಥವಾಗುವಂತಹ ಸಮಾಧಿ ಭಾಷೆಯಲ್ಲಿ, ಭಗವಂತನ ಮಹಿಮೆಯನ್ನು ಹೇಳತಕ್ಕಂತಹ
ಒಂದು ಅಪೂರ್ವ ಗ್ರಂಥ ರಚನೆ ನಿಮ್ಮಿಂದಾಗಬೇಕು ಎಂದು ನಾರದರು ವ್ಯಾಸರಲ್ಲಿ
ಪ್ರಾರ್ಥಿಸುತ್ತಾರೆ.
No comments:
Post a Comment