Sunday, February 3, 2013

Shrimad BhAgavata in Kannada -Skandha-01-Ch-04(02)


ವೇದ ವಿಭಾಗ ಮತ್ತು ಹದಿನೇಳು ಪುರಾಣಗಳ ರಚನೆ

ಸೂತ ಉವಾಚ
ದ್ವಾಪರೇ ಸಮನುಪ್ರಾಪ್ತೇ ತೃತೀಯೇ ಯುಗಪರ್ಯಯೇ
ಜಾತಃ ಪರಾಶರಾದ್ ಯೋಗೀ ವಾಸವ್ಯಾಂ ಕಲಯಾ ಹರೇಃ೧೩

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಗೊಂದಲವಾಗುತ್ತದೆ. ಇಲ್ಲಿ ದ್ವಾಪರ ಪ್ರಾರಂಭವಾದಾಗ ಹಾಗೂ ಯುಗ ಪರ್ಯಾವಸಾನದಲ್ಲಿ  ವ್ಯಾಸರ ಅವತಾರವಾಯಿತು ಎಂದು ಹೇಳಿದಂತೆ ಕಾಣುತ್ತದೆ. ಆದರೆ ಇಲ್ಲಿ ‘ಯುಗಪರ್ಯಯೇ’ ಎಂಬಲ್ಲಿ ಯುಗಶಬ್ದದಲ್ಲಿ ಸುಪಾಂಸುಲುಕ್ ಎಂಬ ವ್ಯಾಕರಣ ನಿಯಮದಂತೆ-ಸಪ್ತಮವಿಭಕ್ತಿ ಲೋಪ. ದ್ವಾಪರೇ ಯುಗೇ ಪರ್ಯಯೇ-ದ್ವಾಪರ ಯುಗದಲ್ಲಿ ತತ್ರಾಪಿ ಅದರ ಪರ್ಯಾವಸಾನ ಭಾಗದಲ್ಲಿ ವ್ಯಾಸಾವತಾರ ತೃತೀಯೇ ಎನ್ನುವುದು ದ್ವಾಪರೇ ಎಂಬುದಕ್ಕೆ ವಿಶೇಷಣ ಎನ್ನಬೇಕು. ಆದ್ದರಿಂದ : “ತೃತೀಯೇ ದ್ವಾಪರೇ ಯುಗೇ ಪರ್ಯಾವಸಾನೇ ಪ್ರಾಪ್ತೇ ಸತಿ ಅಂದರೆ : ಮೂರನೇದ್ವಾಪರಯುಗದಲ್ಲಿ ಅದರ ಕೊನೆಯ ಭಾಗ ಬಂದಾಗ, ವೇದವ್ಯಾಸರ ಜನನವಾಯಿತು ಎನ್ನುವುದು ಇಲ್ಲಿರುವ ಒಳಾರ್ಥ.
ವೇದವ್ಯಾಸರು ಭೂಮಿಯಲ್ಲಿ ವಾಸವಿಯ ಮಗನಾಗಿ ಪರಾಶರ ಮುನಿಯಿಂದ ಜನಿಸಿದರು. ಅವರ ಜನನವಾದಾಗ ದ್ವಾಪರದ ಕೊನೆಯ ೭೨೦ ವರ್ಷ ಬಾಕಿ ಇತ್ತು. ವೇದವ್ಯಾಸರ ತಾಯಿ ವಾಸವಿ-ವಸುಪುತ್ರಿ. ಉಪಾರಿಚರ ಎನ್ನುವ ವಸುವಿನ ರೇತಸ್ಸನ್ನು ಮೀನು ನುಂಗಿ, ಆ ಮೀನಿನ ಗರ್ಭದಲ್ಲಿ ಬೆಸ್ತನೊಬ್ಬನಿಗೆ ಆಕೆ ಮಗಳಾಗಿ ಸಿಕ್ಕಿ, ಸತ್ಯವತಿ ಎನ್ನುವ ಹೆಸರು ಪಡೆದ ವಾಸವಿ, ದೋಣಿ ದಾಟಿಸುವ ಅಂಬಿಗನ ಕೆಲಸ ಮಾಡುತ್ತಿದ್ದಳು. ಈ ಕಾಯಕ ಮಾಡುತ್ತಿದ್ದಾಗ ಒಮ್ಮೆ ಪರಾಶರ ಮುನಿಯ ಸಂದರ್ಶನ ಆಕೆಗಾಗುತ್ತದೆ. “ಭಗವಂತ ನಿನ್ನಲ್ಲಿ ಅವತರಿಸಲು ಇಚ್ಛೆಪಡುತ್ತಿದ್ದಾನೆ” ಎಂದು ಪರಾಶರರು ಆಕೆಗೆ ಹೇಳುತ್ತಾರೆ. ಅದರಿಂದಾಗಿ ಆಕೆ ಮದುವೆಗೆ ಮೊದಲು, ಪರಾಶರರಿಂದ, ವೇದವ್ಯಾಸ ಎನ್ನುವ ಪುತ್ರನನ್ನು ಪಡೆಯುತ್ತಾಳೆ. ಹೀಗೆ ಭಗವಂತನ ಅವತಾರಕ್ಕೆ ಕಾರಣಳಾದ ಮಹಾಮಹಿಳೆ ಸತ್ಯವತಿ.
ಸತ್ಯವತಿಯನ್ನು ಮುಂದೆ ಶಂತನು ಚಕ್ರವರ್ತಿ ಇಷ್ಟಪಟ್ಟು ಮದುವೆಯಾಗುತ್ತಾನೆ. ಇವರ ದಾಂಪತ್ಯದಲ್ಲಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯರ ಜನನವಾಗುತ್ತದೆ. ಆದರೆ ಅವರಿಬ್ಬರೂ ಅಕಾಲದಲ್ಲಿ ಮರಣಹೊಂದಿದಾಗ, ಸತ್ಯವತಿಯ ಮಗನಾದ ವ್ಯಾಸರಿಂದಲೇ ಪಾಂಡು-ದೃತರಾಷ್ಟ್ರ ಸಂತತಿ ಬೆಳೆಯುತ್ತದೆ.  
ಹಿಂದೆ ಹೇಳಿದಂತೆ: ‘ವಾಸವಿ’ ವಸುವಿನ ಮಗಳಾಗಿದ್ದುದರಿಂದ-ಆಕೆ ದೇವಗಣ ಪ್ರವಿಷ್ಠಳು. ಅವಳನ್ನು ಭಗವಂತ ತನ್ನ ಅವತಾರಕ್ಕೆ ಮಾಧ್ಯಮವಾಗಿ ಬಳಸಿದ. ನಂತರ ವಂಶವಿಲ್ಲದೇ ನಿಂತು ಹೋಗಿದ್ದ ಕುರುವಂಶಕ್ಕೆ ಸಂತತಿಯ ಚಾಲನೆ ಕೊಟ್ಟು, ಅದರಿಂದ ಕೌರವ-ಪಾಂಡವ ಸಂತತಿಗೆ ಆಕೆ ಕಾರಣಳಾದಳು. ಹೀಗೆ ಯುಗಾಂತದಲ್ಲಿ ನಡೆದ ಘೋರ ಯುದ್ಧಕ್ಕೆ ಕಾರಣರಾದ ಸಂತತಿಯ ಮೂಲ ಸತ್ಯವತಿ. ಅಷ್ಟೇ ಅಲ್ಲ, ಪಾಂಡವರಂತಹ ಮಹಾ ಪುರುಷರು ಹಾಗೂ ಅವರ ಸಂತತಿ ಈ ದೇಶವನ್ನು ಸುಮಾರು ಎರಡು ಸಾವಿರ ವರ್ಷಗಳ ಕಾಲ ಆಳಲು ಕಾರಣಳಾಗಿ,  ಆ ಸಂತತಿಯನ್ನು ಬೆಳೆಸಿದ ಮೂಲವ್ಯಕ್ತಿ ‘ವಾಸವಿ’. ಇಂತಹ ಮಹಾ ಮಹಿಳೆಯಲ್ಲಿ ಭಗವಂತ ವ್ಯಾಸರೂಪದಲ್ಲಿ ಅವತರಿಸಿದ. ವೇದವ್ಯಾಸರು ವೇದಗಳನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿದರು ಮತ್ತು ಹದಿನೇಳು ಪುರಾಣಗಳನ್ನು ರಚಿಸಿದರು.

ತತ್ರರ್ಗ್ವೇದಧರಃ ಪೈಲಃ ಸಾಮಗೋ ಜೈಮಿನಿಃ ಕವಿಃ
ವೈಶಂಪಾಯನ ಏವೈಕೋ ನಿಷ್ಣಾತೋ ಯಜುಷಾಂ ತತಃ೨೦

ಅಥರ್ವಾಂಗಿರಸಾಮಾಸೀತ್ ಸುಮಂತುರ್ದಾರುಣೋ ಮುನಿಃ
ಇತಿಹಾಸಪುರಾಣಾನಾಂ ಪಿತಾ ಮೇ ರೋಮಹರ್ಷಣಃ೨೧

ಋಗ್ವೇದವನ್ನು ಪೈಲಃ ಎನ್ನುವ ಮುನಿಗೆ, ಸಾಮವೇದವನ್ನು ಜೈಮಿನಿಗೆ ಹಾಗೂ ಯಜುರ್ವೇದವನ್ನು ವೈಶಂಪಾಯನನಿಗೆ ಉಪದೇಶಿಸಿದ ವ್ಯಾಸರು, ಅಥರ್ವವೇದವನ್ನು ವರುಣಪುತ್ರನಾದ ಸುಮಂತು ಎನ್ನುವ ಮುನಿಗೆ ಉಪದೇಶಿಸಿದರು. ಹದಿನೇಳು ಪುರಾಣಗಳು ಉಗ್ರಶ್ರವಸ್ಸಿನ ತಂದೆ ರೋಮಹರ್ಷಣರಿಗೆ ವ್ಯಾಸರಿಂದ ಉಪದೇಶಿಸಲ್ಪಟ್ಟಿತು.
ಇಲ್ಲಿ ಹೇಳಲಾದ ಋಷಿಗಳ ಹೆಸರು ಮೇಲ್ನೋಟಕ್ಕೆ ನಮಗೆ ವಿಚಿತ್ರವಾಗಿ ಕಾಣುತ್ತದೆ. ಆದರೆ ಈ ಹೆಸರಿನ ಹಿಂದಿನ ಅರ್ಥವನ್ನು ನೋಡಿದಾಗ, ಆ ಹೆಸರಿನ ಮಹತ್ವ ತಿಳಿಯುತ್ತದೆ. ಇಲ್ಲಿ ಪೈಲಃ ಎಂದರೆ ‘ಪೀಲ’ ನ ಮಗ. ಪೀಲ ಎಂದರೆ ಜ್ಞಾನಿ ಎಂದರ್ಥ. ಅದೇ ರೀತಿ ಜೈಮಿನಿ ಎಂದರೆ ಜಿಮಿನನ ಮಗ. ಜಿಮಿನಃ ಎಂದರೆ ಜ್ಞಾನದ ಸಾಧನೆಗಾಗಿ ತನ್ನ ಬದುಕನ್ನು ಅರ್ಪಿಸಿಕೊಂಡವ ಎಂದರ್ಥ. ವೈಶಂಪಾಯನ-ವಿಶಂಪನನ ಮಗ. ವಿಶಿಷ್ಟವಾದ ಭಗವದನುಭೂತಿಯಿಂದ ಭಗವದನುಭವದ ಆನಂದವನ್ನು ಕಂಡವರು ವಿಶಂಪನರು.  ಸುಮಂತು ಎಂದರೆ ಆನಂದಮಯನಾದ ಭಗವಂತನನ್ನು ಮನನ ಮಾಡುವವರು ಎಂದರ್ಥ.
ಪೈಲ ಹಾಗೂ ಆತನ ಶಿಷ್ಯವೃಂದದಿಂದ ಋಗ್ವೇದ ೨೪ ಶಾಖೆಗಳಾಗಿ ಬೆಳೆಯಿತು. ವೈಶಂಪಾಯನನ ಶಿಷ್ಯರಿಂದ ಯಜುರ್ವೇದ ೧೦೧ ಶಾಖೆಗಳಾದರೆ, ಜೈಮಿನಿ ಶಿಷ್ಯರಿಂದ ಸಾಮವೇದ ಸಾವಿರ ಶಾಖೆಗಳಾಗಿ ಬೆಳೆಯಿತು. ಅಥರ್ವವೇದ ಸುಮಂತುವಿನ ಶಿಷ್ಯರಿಂದ ೧೨ ಶಾಖೆಯನ್ನು ಕಂಡಿತು. ಹೀಗೆ ಶಾಖೋಪಶಾಖೆಗಳಾಗಿ ವೇದಗಳು, ಆರಣ್ಯಕಗಳು, ಬ್ರಾಹ್ಮಣ-ಉಪನಿಷತ್ತುಗಳು ಹುಟ್ಟಿದವು. ವೇದಗಳ ಅರ್ಥನಿರ್ಣಯಕ್ಕೋಸ್ಕರ ಹದಿನೇಳು ಪುರಾಣ ರಚನೆಯಾಯಿತು. ಈ ಎಲ್ಲಾ ರಚನೆಯ ನಂತರವೂ ಕೂಡಾ ವ್ಯಾಸರಿಗೆ ತೃಪ್ತಿಯಾಗಲಿಲ್ಲ. ಅದಕ್ಕಾಗಿ ಅವರು ಮಹಾಭಾರತವನ್ನು ರಚನೆ ಮಾಡಿದರು.

No comments:

Post a Comment