ಅಥ ತೇ ಸಂಪರೇತಾನಾಂ
ಸ್ವಾನಾಮುದಕಮಿಚ್ಛತಾಂ ।
ದಾತುಂ ಸಕೃಷ್ಣಾ
ಗಂಗಾಯಾಂ ಪುರಸ್ಕೃತ್ಯ ಯಯುಃ ಸ್ತ್ರಿಯಃ ॥೪॥
ಸಾಮಾನ್ಯವಾಗಿ ಸತ್ತ
ಜೀವಗಳು ಹತ್ತನೇ ದಿನ ತಮ್ಮ ಬಂಧುಗಳು ಕೊಡುವ ದಶಾಂಜಲಿಗಾಗಿ ಕಾದು ಕುಳಿತಿರುತ್ತವಂತೆ. ಇದರ ಅರ್ಥ
ಆ ಜೀವಗಳು ಹಸಿವೆ-ಬಾಯಾರಿಕೆಯಿಂದ ಕಾಯುತ್ತವೆ ಎಂದಲ್ಲ. ಸಾಮಾನ್ಯವಾಗಿ ನಿಜವಾದ ಬಂಧುಗಳು ಎಂದರೆ
ನಾವು ಆಪತ್ತಿನಲ್ಲಿರುವಾಗ ಬಂದು ನೋಡುವವರು. ಸತ್ತ ಜೀವಗಳಿಗೂ ಸಹ ತಮ್ಮ ಆತ್ಮೀಯರನ್ನು ನೋಡುವ
ಆಸೆ ಇರುತ್ತದೆ. ಅದಕ್ಕಾಗಿ ಹತ್ತನೇ ದಿನ ಯಾರ್ಯಾರು ಧರ್ಮೊದಕ ಕೊಡುತ್ತಾರೆ ಎಂದು ನೋಡಲು ಬಯಸಿ
ಕುಳಿತಿರುತ್ತವಂತೆ ಜೀವಗಳು! ಹೀಗೆ “ತಮ್ಮವರು ಧರ್ಮೊದಕ ಕೊಡಬೇಕು” ಎಂದು ಬಯಸುವ ಬಂಧುಗಳಿಗೆ,
ಧರ್ಮೊದಕ ಕೊಡುವುದಕ್ಕೋಸ್ಕರ, ಪಾಂಡವರೆಲ್ಲರೂ ದ್ರೌಪದಿ ಮತ್ತು ಇತರ ಸ್ತ್ರೀಯರೊಂದಿಗೆ ಗಂಗಾನದಿ ತೀರಕ್ಕೆ
ಹೋಗುತ್ತಾರೆ.
ತೇ ನಿನೀಯೋದಕಂ
ಸರ್ವೇ ವಿಲಪ್ಯ ಚ ಭೃಶಂ ಪುನಃ ।
ಆಪ್ಲುತಾ ಹರಿಪಾದಾಬ್ಜರಜಃಪೂತಸರಿಜ್ಜಲೇ
॥೫॥
ಗಂಗಾ ನದಿಯಲ್ಲಿ
ಎಲ್ಲರೂ ಸತ್ತವರ ಹೆಸರು ಹೇಳಿ ಧರ್ಮೋದಕ ಕೊಟ್ಟು, ಸತ್ತ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣೀರು
ಸುರಿಸುತ್ತಾರೆ. ನಂತರ ಭಗವಂತನ ಪಾದದ ದೂಳಿಯಿಂದ ಪವಿತ್ರವಾದ ನೀರಿನಲ್ಲಿ ಮಿಂದು, ಸೂತಕ
ಮುಕ್ತರಾಗಿ, ಹೊರಟುಬಂದು ನಗರ ಪ್ರವೇಶಿಸುತ್ತಾರೆ. ಇಲ್ಲಿ ಭಗವಂತನ ಪಾದದ ದೂಳಿ ಎಂದಿದ್ದಾರೆ.
ಭಗವಂತನ ಪಾದದ ಕಿರುಬೆರಳಿನ ಎಡೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಣ್ಣ ಕಣ ಈ ಬ್ರಹ್ಮಾಂಡ. ನಮ್ಮ
ದೃಷ್ಟಿಯಲ್ಲಿ ಅನಂತವಾದ ಈ ಬ್ರಹ್ಮಾಂಡ, ಭಗವಂತನ ಅನಂತತೆಯ ಮುಂದೆ ಒಂದು ಪುಟ್ಟ ದೂಳಿನ
ಕಣವಿದ್ದಂತೆ. ಈ ರೀತಿ ದೂಳಿನ ಕಣದಂತಿರುವ ಲೋಕಗಳನ್ನು ಪಾವನಗೊಳಿಸುವವಳು ಗಂಗೆ.
ತತ್ರಾಸೀನಂ ಕುರುಪತಿಂ
ಧೃತರಾಷ್ಟ್ರಂ ಸಹಾನುಜಮ್ ।
ಗಾಂಧಾರೀಂ ಪುತ್ರಶೋಕಾರ್ತಾಂ
ಪೃಥಾಂ ಕೃಷ್ಣಾಂ ಚ ಕೇಶವಃ ॥೬॥
ಸಾಂತ್ವಯಾಮಾಸ ಮುನಿಭಿರ್ಹತಪುತ್ರಾಂಛುಚಾರ್ಪಿತಾನ್
।
ಭೂತೇಷು ಕಾಲಸ್ಯ
ಗತಿಂ ದರ್ಶಯನ್ನ ಪ್ರತಿಕ್ರಿಯಾಮ್ ॥೭॥
ಉತ್ತರಕ್ರಿಯೆ ಕರ್ಮಾದಿಗಳು
ಮುಗಿದ ಮೇಲೂ ಕೂಡಾ ದೃತರಾಷ್ಟ್ರ, ಗಾಂಧಾರಿ,
ಕುಂತಿ(ಪ್ರಥಾ), ದ್ರೌಪದಿ(ಕೃಷ್ಣಾ) ಎಲ್ಲರೂ ಪುತ್ರ-ಪೌತ್ರ ಶೋಕದಲ್ಲಿ ಮುಳುಗಿದ್ದಾರೆ. ಅವರನ್ನು
ಕೃಷ್ಣ ಸಂತೈಸುತ್ತಿದ್ದಾನೆ. ಕೃಷ್ಣ ಸಂತೈಸಿದರೂ ಕೂಡಾ ಸಮಾಧಾನವಾಗುವ ಸ್ಥಿತಿಯಲ್ಲಿಲ್ಲದ ಅವರನ್ನು
ಅಲ್ಲಿ ಸೇರಿರುವ ಋಷಿ-ಮುನಿಗಳು ಸಂತೈಸುತ್ತಿದ್ದಾರೆ. ಅವರು ಹೇಳುತ್ತಾರೆ: ನೀವ್ಯಾರೂ ಅಪರಾಧಿಗಳಲ್ಲ.
ಇದೆಲ್ಲವೂ ವಿಧಿ ನಿಯತಿ. ಅದನ್ನು ನಾವು ಎದುರಿಸಲೇ ಬೇಕು” ಎಂದು. ಕಾಲಕ್ಕೆ ಕರುಣೆ ಇಲ್ಲ.
ಎಲ್ಲರೂ ಕಾಲವಶವಾಗಿರುವುದು ಅನಿವಾರ್ಯ. ಅದಕ್ಕಾಗಿ ದುಃಖಿಸಿ ಫಲವಿಲ್ಲ ಎನ್ನುತ್ತಾರೆ ಋಷಿಗಳು. ಇಲ್ಲಿ
ಕಾಲ ಎಂದರೆ ಆ ಭಗವಂತ. ಇದನ್ನು ಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಕಾಲೋSಸ್ಮಿ
ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ
। ಲೋಕಗಳನ್ನು
ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನೇ ಎಂದಿದ್ದಾನೆ ಕೃಷ್ಣ. ಕಾಲಪುರುಷ ಕಬಳಿಸಲು ಹೊರಟಾಗ ಅವನನ್ನು ತಡೆಯುವವರು ಯಾರೂ ಇಲ್ಲ.
ಎಲ್ಲವೂ ಅವನ ಅಧೀನ. ಕಾಲದ ನಿರ್ಧಾರ ಅಚಲ. ಅದು ಮಾಡಬೇಕಾದ ಕಾಲದಲ್ಲಿ ಮಾಡಬೇಕಾದದ್ದನ್ನು ಮಾಡಿಯೇ
ತೀರುತ್ತದೆ. ಅದು ಯಾರ ಕಣ್ಣೀರಿಗೂ ಕರಗುವುದಿಲ್ಲ.
ಆದ್ದರಿಂದ ಈ ಸತ್ಯವನ್ನು ತಿಳಿದು, ಹಿಂದೆ ನಡೆದದ್ದನ್ನು ಮರೆತು, ಮುಂದೆ ಚನ್ನಾಗಿ ಬದುಕುವ ಯೋಚನೆ
ಮಾಡಿ ಎಂದು ಋಷಿಗಳು ಸಮಾಧಾನ ಮಾಡುತ್ತಾರೆ.
No comments:
Post a Comment