Saturday, February 9, 2013

Shrimad BhAgavata in Kannada -Skandha-01-Ch-05(03)


ಜುಗುಪ್ಸಿತಂ ಧರ್ಮಕೃತೇSನುಶಾಸನಂ ಸ್ವಭಾವರಕ್ತಸ್ಯ ಮಹಾನ್ ವ್ಯತಿಕ್ರಮಃ
ಯದ್ವಾಕ್ಯತೋ ಧರ್ಮ ಇತೀತರಃ ಸ್ಥಿತೋ ನ ಮನ್ಯತೇ ತಸ್ಯ ನಿವಾರಣಂ ಜನಃ ೧೫

ಈ ಹಿಂದೆ ಹೇಳಿದಂತೆ: ಪುರಾಣಗಳೆಲ್ಲವೂ ಶ್ರೇಷ್ಠ. ಅದರಲ್ಲಿ ಮೇಲು-ಕೀಳು ಎಂಬುದಿಲ್ಲ. ಆದರೆ ಅದನ್ನು ಸ್ವೀಕರಿಸುವ ನಮ್ಮ ಗ್ರಹಣ ಪಾತ್ರೆಯಲ್ಲಿ ವ್ಯತ್ಯಾಸವಿದೆ! ಅನೇಕ ಪುರಾಣಗಳು ನಾವು ಸಾತ್ವಿಕರಲ್ಲದಿದ್ದರೆ ನಮ್ಮನ್ನು ರಾಜಸದತ್ತ ಅಥವಾ ತಾಮಸದತ್ತ  ಒಯ್ಯಬಲ್ಲವು! ಅಲ್ಲಿ ಪುರಾಣ ರಾಜಸ ಅಥವಾ ತಾಮಸ ಅಲ್ಲ. ನಾವು ತಾಮಸರಾಗಿ ಅಥವಾ ರಾಜಸರಾಗಿ ಆ ಪುರಾಣ ಓದಿದರೆ, ಅಲ್ಲಿ ನಮಗೆ ತಾಮಸ ಅಥವಾ ರಾಜಸದ ಒತ್ತು ಕಾಣುವ ಅಪಾಯವಿದೆ ಅಷ್ಟೇ. ವೇದವ್ಯಾಸರು ರಚಿಸಿರುವ ಹದಿನೇಳು ಪುರಾಣಗಳನ್ನು ಮೇಲ್ನೋಟದಲ್ಲಿ ನೋಡಿದಾಗ ಅಲ್ಲಿ ಅನೇಕ ಕಾಮ್ಯಕರ್ಮ ವ್ರತ ನಿಯಮಗಳನ್ನು ಕಾಣಬಹುದು. ಇವು ಸಾತ್ವಿಕರಲ್ಲದವರನ್ನು ದಾರಿ ತಪ್ಪಿಸಲು ಹೇಳಿರುವ ವ್ರತಗಳು! ಇವು ಕೇವಲ ಪ್ರವೃತ್ತಿಧರ್ಮವನ್ನು ಹೇಳುವ ವ್ರತಗಳು.
ಸಾತ್ವಿಕರಿಗೆ ಭಗವಂತ ಜ್ಞಾನಪ್ರದನಾದರೆ, ಅಯೋಗ್ಯರಿಗೆ ಆತನೇ ಅಜ್ಞಾನಪ್ರದ! ಆದ್ದರಿಂದ ವ್ಯಾಸ ರೂಪದಲ್ಲಿ ಭಗವಂತನೇ ರಚಿಸಿರುವ ಪುರಾಣಗಳು ಸಾತ್ವಿಕರಿಗೆ ಒಂದು ರೀತಿ ತೆರೆದುಕೊಂಡರೆ, ತಾಮಸಿಗಳಿಗೆ ಇನ್ನೊಂದು ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪುರಾಣಗಳನ್ನು ಎಚ್ಚರದಿಂದ ಯೋಗ್ಯ ಗುರುವಿನ ಸಮ್ಮುಖದಲ್ಲಿ ಅಧ್ಯಯನ ಮಾಡಬೇಕು. ಪುರಾಣದಲ್ಲಿ ಹೇಳಲಾಗಿದೆ ಎಂದು ನಾವು ನಮ್ಮ ಜೀವಮಾನವೆಲ್ಲಾ ಕೇವಲ ಕಾಮ್ಯಕರ್ಮವನ್ನು ಹೇಳುವ ವ್ರತದಲ್ಲಿ ಬಿದ್ದಿದ್ದರೆ ಅಧೋಗತಿಯನ್ನು ಹೊಂದುತ್ತೇವೆ. ಅದಕ್ಕಾಗಿ ಅಂತಹ ಕಾಮ್ಯವ್ರತಗಳ ಬೆನ್ನುಹತ್ತದೇ, ಧೃತವ್ರತಃನಾದ ಭಗವಂತನ ಭಕ್ತಿ ಮಾಡಬೇಕು.
ಸಾಮಾನ್ಯವಾಗಿ ಮನುಷ್ಯಸ್ವಭಾವದ ಆಸಕ್ತಿ ‘ಪ್ರವೃತ್ತಿಮಾರ್ಗ’. ಆದರೆ ಭಗವಂತನನ್ನು ಸೇರಲು ನಾವು ಪ್ರವೃತ್ತಿಮಾರ್ಗ ಬಿಟ್ಟು ನಿವೃತ್ತಿಮಾರ್ಗ ಹಿಡಿಯಬೇಕು. ಇಲ್ಲಿ ನಾರದರು ಹೇಳುತ್ತಾರೆ: “ಅಯೋಗ್ಯರನ್ನು ಮೋಹಗೊಳಿಸುವ ಅನೇಕ ಕಾಮ್ಯವ್ರತವನ್ನು ನೀವು ಹದಿನೇಳು ಪುರಾಣಗಳಲ್ಲಿ ಹೇಳಿದಿರಿ. ಜನರು ಈ ವ್ರತಗಳ ಬೆನ್ನುಹತ್ತಿ ಭಗವಂತನನ್ನೇ ಮರೆಯುತ್ತಿದ್ದಾರೆ. ಅದಕ್ಕಾಗಿ ಸಾತ್ವಿಕರಿಗೆ ಇಂತಹ ಕಾಮ್ಯವ್ರತಗಳ ಮೇಲೆ ಜಿಗುಪ್ಸೆ ಹುಟ್ಟುವ, ಭಗವಂತನನ್ನು ನೇರವಾಗಿ ಹೇಳುವ ಒಂದು ಗ್ರಂಥವನ್ನು ನೀವು ಪ್ರಪಂಚಕ್ಕೆ ಕೊಡಬೇಕು” ಎಂದು.
ಇಂದು ನಾವು ಪ್ರಪಂಚದಲ್ಲಿ ಕಾಮ್ಯವ್ರತದ ಬೆನ್ನು ಹತ್ತಿದ ಜನಸಮುದಾಯವನ್ನು ಕಾಣುತ್ತೇವೆ. ಅವರು ಅಲ್ಲಿ ಭಗವಂತನ ನೆನಪೊಂದನ್ನು ಬಿಟ್ಟು, ಉಳಿದಿದ್ದೆಲ್ಲವನ್ನು ಮಾಡುವುದನ್ನು ಕಾಣುತ್ತೇವೆ. ಪುರಾಣದಲ್ಲಿ ಹೇಳಿದ ವ್ರತನಿಯಮಗಳ ನಿಜಕಾರಣ ಗೊತ್ತಿಲ್ಲದೇ “ಈ ರೀತಿ  ಪುರಾಣದಲ್ಲಿ  ಹೇಳಿದ್ದಾರೆ” ಎಂದು ವ್ರತ ಮಾಡುವವರಿದ್ದಾರೆ. ಇದು ಪುರಾಣದ ತಿರುಳು ಅರ್ಥವಾಗದೇ ಇರುವುದರಿಂದಾದ ದುರಂತ. ಅದಕ್ಕಾಗಿ ಇಲ್ಲಿ ನಾರದರು: “ಎಲ್ಲಾ ವ್ರತಾನುಷ್ಠಾನಗಳಿಗೆ ಮೀರಿದ, ಕೇವಲ ಭಗವದ್ ವ್ರತವನ್ನು ಹೇಳುವ ಒಂದು ಗ್ರಂಥವನ್ನು ನೀವು ಕೊಡಬೇಕು” ಎಂದು ವ್ಯಾಸರಲ್ಲಿ ಪ್ರಾರ್ಥಿಸುತ್ತಾರೆ.
ನಾರದರು ಹೇಳುತ್ತಾರೆ: “ವಾಕ್ಯತಃ ಧರ್ಮ ಇತಿ ಇತರಃ ಸ್ಥಿತಃ” ಎಂದು. ಅಂದರೆ: “ಸಾಮಾನ್ಯರು ಪುರಾಣದಲ್ಲಿ ಹೇಳಿದ ‘ಕಾಮ್ಯವ್ರತ’ವೇ ತಾವು ಜೀವಮಾನವಿಡೀ ಮಾಡಬೇಕಾದ ಧರ್ಮ ಎಂದು ತಿಳಿದರು. ಆದರೆ ಭಗವಂತನ ಉಪಾಸನೆಯ ಮುಂದೆ ಈ ಫಲಾಪೇಕ್ಷೆಯಿಂದ ಮಾಡುವ ಕ್ಷುದ್ರ ವ್ರತಾನುಷ್ಠಾನ ಧರ್ಮವಲ್ಲ ಎನ್ನುವ ವಿಚಾರ ಅವರಿಗೆ ತಿಳಿಯಲಿಲ್ಲ”.
ನಾರದರ ಈ ಮಾತನ್ನು ಇನ್ನೊಂದು ರೀತಿಯಲ್ಲಿ ಪದಛೇದ ಮಾಡಿದರೆ: “ವಾಕ್ಯತಃ ಅಧರ್ಮಃ ಇತಿ ಇತರಸ್ಥಿತಃ”  ಎಂದಾಗುತ್ತದೆ. ಅಂದರೆ: “ಜನರು ಆಚರಿಸುವ ಇಂತಹ ಕಾಮ್ಯವ್ರತ ಜ್ಞಾನಿಗೆ ಅಸಹ್ಯವಾಗಿ ಕಾಣುತ್ತದೆ. ಭಗವಂತನ ಭಕ್ತಿಯನ್ನು ಪ್ರಚೋದನೆ ಮಾಡುವ ಸತ್ಕರ್ಮವೇ ಧರ್ಮ ಹೊರತು, ಇತರ ಕಾಮ್ಯವ್ರತವಲ್ಲ ಎನ್ನುವುದನ್ನು ಜ್ಞಾನಿ ತಿಳಿದಿರುತ್ತಾನೆ”.
ಜನರು ಅಧರ್ಮವನ್ನೇ ಧರ್ಮವೆಂದುಕೊಂಡು ಕ್ಷುದ್ರ ವ್ರತೋಪಾಸನೆಯಲ್ಲಿ ತೊಡಗಿದ್ದಾರೆ ಮತ್ತು ಅದನ್ನೇ ಮಹಾ ಪುರುಷಾರ್ಥ ಎಂದು ತಿಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಿಳಿದವರು ಸಮಾಜವನ್ನು ತಿದ್ದದಿದ್ದರೆ ಅನ್ಯಾಯವಾಗುತ್ತದೆ. ಧರ್ಮವು ಭಗವದ್ ಭಕ್ತಿಯ ಪೋಷಣೆಗೆ ಸಹಾಯವಾಗಿರದಿದ್ದರೆ ಆ ಧರ್ಮಕ್ಕೆ ಯಾವ ಅರ್ಥವೂ ಇರುವುದಿಲ್ಲ. ಆದ್ದರಿಂದ ತಾವು ಭಗವದ್ ಭಕ್ತಿರೂಪವಾದ ಧರ್ಮವನ್ನು ಜನರಿಗೆ ತಿಳಿಯಪಡಿಸುವ ಗ್ರಂಥ ರಚನೆ ಮಾಡಬೇಕೆಂದು ನಾರದರು ವೇದವ್ಯಾಸರಲ್ಲಿ ಪ್ರಾರ್ಥಿಸುತ್ತಾರೆ.

ವಿಚಕ್ಷಣೋSಸ್ಯಾರ್ಹತಿ ವೇದಿತುಂ ವಿಭೋರನಂತಪಾರಸ್ಯ ನಿವೃತ್ತಿತಃ ಸುಖಮ್
ಪ್ರವರ್ತಮಾನಸ್ಯ ಗುಣೈರನಾತ್ಮನಸ್ತತೋ ಭವಾನ್ ದರ್ಶಯ ಚೇಷ್ಟಿತಂ ವಿಭೋಃ ೧೬

“ನಿವೃತ್ತಿಮಾರ್ಗದ ವಾಸ್ತವಿಕತೆಯನ್ನು ಅರಿಯದ ಜನ ಕೇವಲ ಪ್ರವೃತ್ತಿಮಾರ್ಗದ ಬೆನ್ನುಹತ್ತಿ ಅದರಲ್ಲೇ ಮುಳುಗಿಹೋಗುತ್ತಿದ್ದಾರೆ. ನೀವು ಬಲ್ಲವರು; ಪ್ರವೃತ್ತಿಮಾರ್ಗದಲ್ಲಿ ಸುಖವಿಲ್ಲ, ನಿಜವಾದ ಸುಖ ನಿವೃತ್ತಿಮಾರ್ಗ ಎನ್ನುವ ಸತ್ಯ ನಿಮಗೆ ತಿಳಿದಿದೆ. ಆ ಸತ್ಯವನ್ನು ಸಮಾಜಕ್ಕೆ ನೀಡಬೇಕು” ಎಂದು ನಾರದರು ವ್ಯಾಸರಲ್ಲಿ ಕೇಳಿಕೊಳ್ಳುತ್ತಾರೆ. ಭಗವಂತನ ಅನುಗ್ರಹದಿಂದ ಪಡೆಯುವ ಸುಖ ಅನಂತಪಾರವಾದದ್ದು. ಅದನ್ನು ಜನಕ್ಕೆ ತಿಳಿಯಪಡಿಸಬೇಕು. ಇಲ್ಲದಿದ್ದರೆ ಎಲ್ಲರೂ ಕ್ಷುದ್ರ ವ್ರತದ ಹಿಂದೆ ಬಿದ್ದು ಹಾಳಾಗುತ್ತಾರೆ ಎನ್ನುವುದು ನಾರದರ ಕಳಕಳಿ. “ತ್ರಿಗುಣದ ಪ್ರಭಾವಕ್ಕೊಳಗಾಗಿ ದಾರಿತಪ್ಪುವ ಜೀವನಿಗೆ, ಪ್ರಕೃತಿಯ ತ್ರಿಗುಣಗಳಿಂದಲೇ ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ, ತ್ರೈಗುಣ್ಯವರ್ಜಿತ ಭಗವಂತನ ಮಹಿಮೆಯನ್ನು ತಿಳಿಹೇಳಬೇಕು” ಎಂದು ನಾರದರು ಕೇಳಿಕೊಳ್ಳುತ್ತಾರೆ.
ಈ ಶ್ಲೋಕದಲ್ಲಿ  “ಭವಾನ್ ದರ್ಶಯ” ಎಂದಿದ್ದಾರೆ. ಈಗ ಬಳಕೆಯಲ್ಲಿರುವ ಸಂಸ್ಕೃತ ಭಾಷಾ ನಿಯಮದಂತೆ ಇದು ಸರಿ ಹೊಂದುವ ಶಬ್ದ ಬಳಕೆ ಅಲ್ಲ. ಏಕೆಂದರೆ: ಭವಾನ್ ಎಂದರೆ ‘ತಾವು’ ಎಂದರ್ಥ. ಇದು ಗುಣವಾಚಕ. ದರ್ಶಯ ಎಂದರೆ ‘ತೋರಿಸು’ ಎಂದರ್ಥ. ಇದು ಸ್ನೇಹವಾಚಕ. ಆದ್ದರಿಂದ “ತಾವು ತೋರಿಸು” ಎನ್ನುವುದು ವ್ಯಾಕರಣದ ಪ್ರಕಾರ ಸರಿಹೊಂದುವುದಿಲ್ಲ. ಆದರೆ ಇಲ್ಲಿ ವ್ಯಾಕರಣ ಮುರಿದು ಪ್ರಯೋಗ ಮಾಡಿರುವುದರಿಂದಲೇ ಒಂದು ವಿಶಿಷ್ಠಾರ್ಥ ಸೃಷ್ಟಿಯಾಗಿದೆ. ಉದಾಹರಣೆಗೆ ನಾವು “ದೇವನು ದೊಡ್ಡವನು”  ಎಂದು ಹೇಳದೇ,  “ದೇವರು ದೊಡ್ಡವನು” ಎನ್ನುತ್ತೇವೆ. ಇಲ್ಲಿ ‘ದೇವರು’ ಎನ್ನುವಲ್ಲಿ ಭಕ್ತಿ ಮತ್ತು ಗೌರವವಿದೆ. ‘ದೊಡ್ಡವನು’ ಎನ್ನುವಲ್ಲಿ ಸ್ನೇಹ ಮತ್ತು ಪ್ರೀತಿ ಇದೆ. ಇದು ಭಕ್ತಿ-ಗೌರವ-ಸ್ನೇಹ ಮತ್ತು ಪ್ರೀತಿಯ ಸಮ್ಮಿಲನದ ಸಂಬೋಧನೆ. ಆದ್ದರಿಂದ ‘ಭವಾನ್ ದರ್ಶಯ’ ಎನ್ನುವುದು  ಮಹಾತ್ಮ್ಯಜ್ಞಾನಪೂರ್ವಕ-ಭಕ್ತಿ ಮತ್ತು  ಸ್ನೇಹವಾಚಕ ಸಂಬೋಧನೆ.

ಮೇಲಿನ ಶ್ಲೋಕಗಳಲ್ಲಿ ನಾರದರು ವ್ರತದ ಬಗ್ಗೆ  ಹೇಳಿರುವ ಮಾತಿನಿಂದ ನಮಗೆ: ನಾವು ಮಾಡುವ ಎಲ್ಲಾ ವ್ರತಗಳು ವ್ಯರ್ಥವೋ? ಯಾವ ವ್ರತ ವಿಹಿತ, ಯಾವುದು ವಿಹಿತವಲ್ಲ? ಯಾವ ವ್ರತ ಮಾಡಬೇಕು, ಯಾವುದನ್ನು ಮಾಡಬಾರದು? ಎಲ್ಲಾ ವ್ರತಗಳನ್ನೂ ಬಿಟ್ಟುಬಿಡಬೇಕೋ? ಇತ್ಯಾದಿ ಪ್ರಶ್ನೆಗಳು  ಬರುತ್ತದೆ.  ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನಾವು ನಾರದರ ಮಾತನ್ನು ಎಚ್ಚರಿಕೆಯಿಂದ ವಿಶ್ಲೇಷಿಸಬೇಕು. ಇಲ್ಲಿ ನಾರದರು ಮುಖ್ಯವಾಗಿ ಹೇಳಿರುವುದು: ಲೌಕಿಕ ಫಲಕಾಮನೆಯಿಂದ ಮಾಡುವ ಕಾಮ್ಯವ್ರತ ಅಸಹ್ಯ ಎಂದೇ ಹೊರತು, ಭಗವಂತನ ಮೇಲೆ ಭಕ್ತಿ ವೃದ್ಧಿಯಾಗುವ ವ್ರತ ಅಸಹ್ಯ ಎಂದಲ್ಲ.  ಹಾಗಾಗಿ ಭಕ್ತಿ-ಜ್ಞಾನ-ವೈರಾಗ್ಯ ವೃದ್ಧಿಗಾಗಿ ನಾವು ಯಾವ ವ್ರತವನ್ನಾದರೂ ಮಾಡಬಹುದು. ಉದಾಹರಣೆಗೆ: ಏಕಾದಶಿ, ಚಾತುರ್ಮಾಸ್ಯ, ಕೃಷ್ಣಜನ್ಮಾಷ್ಟಮಿ, ಇತ್ಯಾದಿ ವ್ರತಗಳು ಭಗವದ್ ಪ್ರೀತ್ಯರ್ಥ ನಾವು ಮಾಡಲೇ ಬೇಕಾದ ಕೆಲವು ವ್ರತಗಳು. ಇದರಿಂದ ಇಂದ್ರಿಯ ನಿಗ್ರಹ, ಆರೋಗ್ಯವೃದ್ಧಿ ಮತ್ತು ಮುಖ್ಯವಾಗಿ ಭಗವಂತನ ಅನುಗ್ರಹ ಸಾಧ್ಯ. 

No comments:

Post a Comment