Sunday, February 3, 2013

Shrimad BhAgavata in Kannada -Skandha-01-Ch-04(01)

ಚತುರ್ಥೋSಧ್ಯಾಯಃ


ವ್ಯಾಸಾವತಾರ ಮತ್ತು ಭಾಗವತ ರಚನೆಯ ಹಿನ್ನೆಲೆ

ಉಗ್ರಶ್ರವಸ್ಸರ ವಿವರಣೆ ಕೇಳಿದ ಶೌನಕಾದಿಗಳು ಕೇಳುತ್ತಾರೆ: “ವೇದವ್ಯಾಸರು ಎಂದು, ಏತಕ್ಕಾಗಿ ಭಾಗವತವನ್ನು ರಚಿಸಿದರು? ಇತರ ಎಲ್ಲಾ ಪುರಾಣಗಳನ್ನು ರೋಮಹರ್ಷಣರಿಗೆ ಹೇಳಿದ ವೇದವ್ಯಾಸರು, ವಿಶೇಷವಾಗಿ ಭಾಗವತವನ್ನು, ಎಲ್ಲವನ್ನೂ ತೊರೆದ ವಿರಕ್ತ ಶುಕಾಚಾರ್ಯರಿಗೇಕೆ ಹೇಳಿದರು?” ಎಂದು.

ತಸ್ಯ ಪುತ್ರೋ ಮಹಾಯೋಗೀ ಸಮದೃಙ್ ನಿರ್ವಿಕಲ್ಪಕಃ
ಏಕಾಂತಗತಿರುನ್ನಿದ್ರೋ ಗೂಢೋ ಮೂಢ ಇವೇಯತೇ

ಶುಕಾಚಾರ್ಯರು ಎಲ್ಲವನ್ನೂ ತೊರೆದು ಭಗವಂತನಲ್ಲೇ ಮನಸ್ಸು ನೆಟ್ಟವರು. ಪ್ರಪಂಚದಲ್ಲಿ ಅವರಿಗೆ ‘ನನ್ನದು-ನಿನ್ನದು’ ಎನ್ನುವ ಭೇದವಿರಲಿಲ್ಲ. ಎಲ್ಲವೂ ಭಗವಂತನದು ಎಂದು ನಿರ್ವಿಕಲ್ಪವಾಗಿ, ಎಲ್ಲಾ ಕಡೆಯೂ ಭಗವಂತನನ್ನು ಕಂಡು, ಎಲ್ಲವನ್ನೂ ಸಮನಾಗಿ ಕಾಣುತ್ತಾ ಬದುಕುತ್ತಿದ್ದವರು. ಸುಖ-ದುಃಖವನ್ನು ಮೀರಿನಿಂತ ಅವರು ಯಾವುದೇ ಪ್ರಾಪಂಚಿಕ ಆಕರ್ಷಣೆಗೆ ಒಳಗಾಗುತ್ತಿರಲಿಲ್ಲ. ಮಹಾಜ್ಞಾನಿಯಾದ ಶುಕಾಚಾರ್ಯರು ಎಂದೂ ತನ್ನೊಳಗಿನ ಆತ್ಮಶಕ್ತಿಯನ್ನು ತೋರಗೊಟ್ಟವರಲ್ಲ. ಮೇಲ್ನೋಟಕ್ಕೆ ನೋಡಿದರೆ ಅವರು ಒಬ್ಬ ಮೂಢನಂತೆ ಕಾಣಿಸಿಕೊಳ್ಳುತ್ತಿದ್ದರು. ಇಂತಹ ‘ನಿದ್ದೆಯನ್ನು ಗೆದ್ದ ನಿರ್ವಿಕಲ್ಪ ಯೋಗಿ’ ಶುಕಾಚಾರ್ಯರಿಗೆ ಹೇಗೆ ವ್ಯಾಸರು ಭಾಗವತ ಉಪದೇಶ ಮಾಡಿದರು ಎನ್ನುವುದು   ಶೌನಕರ ಪ್ರಶ್ನೆ.
ಇಲ್ಲಿ  ‘ಉನ್ನಿದ್ರ ಮಹಾಯೋಗಿ’ ಎಂದು ಶುಕಾಚಾರ್ಯರನ್ನು ಸಂಬೋಧಿಸಲಾಗಿದೆ. ಇದರ ಅರ್ಥ: ರಾತ್ರಿ ಮಲಗದವ ಎಂದರ್ಥವಲ್ಲ. ಈ ಸಂಬೋಧನೆಯ ಅರ್ಥವನ್ನು ಆಚಾರ್ಯರು ಪ್ರಮಾಣಶ್ಲೋಕದೊಂದಿಗೆ ಈ ರೀತಿ ವಿವರಿಸಿದ್ದಾರೆ:

ಸಾಮ್ಯಮೀಶ್ವರ ರೂಪೇಷು ಸರ್ವತ್ರ ತದಧೀನತಾಂ
ಪಶ್ಯತಿ ಜ್ಞಾನಸಂಪತ್ಯಾ ವಿನಿದ್ರೋ ಯಃ ಸ ಯೋಗವಿತ್ ಇತಿ ಬ್ರಾಹ್ಮೇ

ಯಾರು ಅಜ್ಞಾನದ ನಿದ್ರೆಯನ್ನು ಗೆದ್ದು ಎಚ್ಚರವಾಗಿದ್ದಾನೋ ಅವನು ಉನ್ನಿದ್ರ. ಭಗವಂತನ ರೂಪಗಳಲ್ಲಿ ತಾರತಮ್ಯ ಕಾಣದೆ, ಭಗವಂತನ ಎಲ್ಲಾ ರೂಪಗಳಲ್ಲಿ ಪೂರ್ಣತೆಯನ್ನು ಕಂಡು, ಪ್ರಪಂಚದಲ್ಲಿರುವ ಒಂದೊಂದು ವಸ್ತುವೂ ಭಗವಂತನ ಅಧೀನವಾಗಿ, ಭಗವಂತನ ನಿಯಂತ್ರಣದಲ್ಲಿದೆ ಎಂದು ಯಾರು ಸಾಕ್ಷಾತ್ಕರಿಸಿಕೊಂಡಿದ್ದಾರೆ, ಅವರು ನಿದ್ರೆ ಗೆದ್ದ ಯೋಗಿಗಳು.
ಇಂತಹ ಶುಕಾಚಾರ್ಯರು  ಏಕೆ ಭಾಗವತ ಕೇಳಿದರು? ಏಕೆ ಅವರು ಅದನ್ನು ಪರೀಕ್ಷಿತರಾಜನಿಗೆ ಹೇಳಿದರು? ಭಗವಂತನ ಅನುಗ್ರಹದಿಂದ ಬದುಕುಳಿದ ಮಹಾತ್ಮನಾದ ಪರೀಕ್ಷಿತ ರಾಜನಿಗೆ  ಭಾಗವತ ಕೇಳುವ ಪ್ರಸಂಗ ಹೇಗೆ ಬಂತು? ಇವೆಲ್ಲವನ್ನೂ ವಿವರವಾಗಿ ಹೇಳಬೇಕು ಎಂದು ಶೌನಕರು ಪ್ರಾರ್ಥಿಸುವುದರೊಂದಿಗೆ, ಈ ಅಧ್ಯಾಯ ಪ್ರಾರಂಭವಾಗುತ್ತದೆ. ಇಲ್ಲಿ ಸೂತರು ವೇದವ್ಯಾಸರು ಭೂಮಿಯಲ್ಲಿ ಅವತರಿಸಿದ ಹಿನ್ನೆಲೆಯ ವಿವರಣೆಯೊಂದಿಗೆ ತಮ್ಮ ಮಾತನ್ನು ಮುಂದುವರಿಸುತ್ತಾರೆ. 

No comments:

Post a Comment