Saturday, February 2, 2013

Shrimad BhAgavata in Kannada -Skandha-01-Ch-03(07)


ಜನ್ಮ ಗುಹ್ಯಂ ಭಗವತೋ ಯ ಏವಂ ಪ್ರಯತೋ ನರಃ
ಸಾಯಂ ಪ್ರಾತರ್ಗೃಣನ್ ಭಕ್ತ್ಯಾ ದುಃಖಗ್ರಾಮಾದ್ ವಿಮುಚ್ಯತೇ ೨೯

ಏತದ್ರೂಪಂ ಭಗವತೋ ಹ್ಯರೂಪಸ್ಯ ಚಿದಾತ್ಮನಃ      
ಮಾಯಾಗುಣೈರ್ವಿರಚಿತಂ ಮಹದಾದಿಭಿರಾತ್ಮನಿ                    ೩೦

ಭಗವಂತನ ಅವತಾರಗಳೆಂದರೆ ಅದು ಅವನ ಚಿನ್ಮಯವಾದ ಅಪ್ರಾಕೃತ ರೂಪ. ಇದನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ. ಭಗವಂತನ ಅವತಾರ ರೂಪವನ್ನು ಜನರು ಕಂಡರೂ, ಅದನ್ನು ‘ಭಗವಂತ’ ಎಂದಾಗಲೀ, ‘ಜ್ಞಾನಾನಂದಮಯ’ ಎಂದಾಗಲೀ ಕಾಣಲಿಲ್ಲ. ಉದಾಹರಣೆಗೆ: ಕೃಷ್ಣನನ್ನು ಅಥವಾ ರಾಮನನ್ನು ಆ ಕಾಲದ ಜನರು ನಮ್ಮಂತೆ ಪಾಂಚಭೌತಿಕ ಶರೀರವುಳ್ಳ ಒಬ್ಬ ಸಾಮಾನ್ಯ ಮನುಷ್ಯ ಎಂದೇ ತಿಳಿದಿದ್ದರು. ಜ್ಞಾನಿಗಳನ್ನು ಹೊರತುಪಡಿಸಿ, ಇತರರಿಗೆ ಅದು ಜ್ಞಾನಾನಂದಮಯವಾದ, ಅಪ್ರಾಕೃತವಾದ ಭಗವಂತ ಎಂದು ಅನ್ನಿಸಿರಲಿಲ್ಲ. ಹಾಗಾಗಿ ಎಲ್ಲರಿಗೂ ಭಗವಂತನ ದರ್ಶನ ಭಾಗ್ಯ ದೊರೆಯಲಿಲ್ಲ.
ಭಗವಂತ ತನ್ನ  ಅವತಾರ ಕಾಲದಲ್ಲೂ ಕೂಡಾ, ಅಭೌತಿಕ ಅಪ್ರಾಕೃತ ಜ್ಞಾನಾನಂದಮಯ ಶರೀರಿಯಾಗಿರುತ್ತಾನೆ. ಆದರೆ ಆ ಅರಿವು ನಮಗಿಲ್ಲದಿದ್ದಾಗ, ಭಗವಂತನ ದರ್ಶನ ನಮಗಾಗುವುದಿಲ್ಲ. ಇಂದು ನಮಗೆ ಭಗವಂತನ ಅವತಾರ ರೂಪ ನೋಡಲು ಲಭ್ಯವಿಲ್ಲದಿದ್ದರೂ ಕೂಡಾ, ಆತನನ್ನು ನಾವು ಕಾಣಬಹುದು. ನಮಗೆ ತಿಳಿದಂತೆ ಭಗವಂತನಿಗೆ  ಮೂರು ರೂಪಗಳು: ೧. ಆವೇಶರೂಪ ೨. ಅವತಾರರೂಪ ೩. ಪ್ರತೀಕರೂಪ.  ಎಲ್ಲರೂ ಭಗವಂತನನ್ನು ಪ್ರತೀಕರೂಪದಲ್ಲಿ ಆವಾಹನೆ ಮಾಡಿ ಧ್ಯಾನದಲ್ಲಿ ಕಾಣಬಹುದು. 
ಈ ವಿಶ್ವಕ್ಕೊಂದು ರೂಪಕೊಟ್ಟು, ತತ್ತದ್ ರೂಪನಾಗಿ, ವಿಶ್ವದಲ್ಲಿ ಭಗವಂತ ತುಂಬಿದ್ದಾನೆ. ಹಾಗಾಗಿ ಪ್ರತಿಯೊಂದು ವಸ್ತುವೂ ಆತನ ಪ್ರತಿಮೆ. ರೂಪವಿಲ್ಲದ ಭಗವಂತನ ರೂಪವಿದು. ಸತ್ತ್ವ, ರಜಸ್ಸು ಮತ್ತು ತಮೋಗುಣಗಳಿದಾದ ಈ ಪ್ರಪಂಚ, ಮಹತಾದಿ ತತ್ತ್ವಗಳಿಂದ ತುಂಬಿದೆ. ಕಾಣುವ ಈ ಪ್ರಪಂಚದಲ್ಲಿ, ಕಾಣುವ ವಸ್ತುವಿನೊಳಗೆ, ಕಾಣದ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. ಇದನ್ನೇ ನಮಗೆ ಪ್ರಹ್ಲಾದ ಹೇಳಿರುವುದು. ಆತ ಕಂಬದಲ್ಲೂ ಭಗವಂತನನ್ನು ಕಂಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಕಂಬವೂ ಒಂದು ಕಲ್ಲು, ದೇವರ ಪ್ರತಿಮೆಯೂ ಒಂದು ಕಲ್ಲು. ಆದರೆ ಕಲ್ಲಿನೊಳಗೂ ಭಗವಂತನಿದ್ದಾನೆ ಎಂದು ತಿಳಿದಾಗ, ಕಲ್ಲು ಪ್ರತಿಮೆಯಾಗುತ್ತದೆ. ಇಲ್ಲದಿದ್ದರೆ ಪ್ರತಿಮೆಯೂ ಕಲ್ಲೇ!   ಹೀಗೆ ನಾವು ಜಡದಲ್ಲಿ ಪ್ರತೀಕರೂಪನಾದ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು.

ಯಥಾ ನಭಸಿ ಮೇಘೌಘೋ ರೇಣುರ್ವಾ ಪಾರ್ಥಿವೋSನಿಲೇ    
ಏವಂ ದ್ರಷ್ಟರಿ ದೃಶ್ಯತ್ವಮಾರೋಪಿತಮಬುದ್ಧಿಭಿಃ                      ೩೧

ವಿಶ್ವದಲ್ಲಿ ಭಗವಂತ ತುಂಬಿದ್ದಾನೆ, ಪ್ರತಿಮೆಯಲ್ಲಿ ಭಗವಂತನನ್ನು ಕಾಣಬೇಕು, ಇತ್ಯಾದಿ ವಿಚಾರವನ್ನು ಕೆಲವು  ತಿಳಿಗೇಡಿಗಳು ತಪ್ಪಾಗಿ ತಿಳಿದು, ಪ್ರತಿಮಾಪೂಜೆ ಬಗ್ಗೆ ಆರೋಪ ಮಾಡುತ್ತಾರೆ. ಆದರೆ ಇವರಿಗೆ “ಪ್ರತಿಮೆಯಲ್ಲಿ ದೇವರ ಪೂಜೆ ಹೊರತು, ಪ್ರತಿಮೆಯೇ ದೇವರೆಂದು ಪೂಜೆ ಅಲ್ಲ” ಎನ್ನುವ ಸತ್ಯ ತಿಳಿದಿಲ್ಲ. ಭಾರತದಲ್ಲಿ ಶಾಸ್ತ್ರ ತಿಳಿದವರು ಯಾರೂ ಪ್ರತಿಮೆಯನ್ನು ದೇವರು ಎಂದು ಪೂಜಿಸುವುದಿಲ್ಲ, ಬದಲಿಗೆ ಪ್ರತಿಮೆಯಲ್ಲಿ ದೇವರನ್ನು ಆವಾಹನೆ ಮಾಡಿ ಪೂಜಿಸುತ್ತಾರೆ. ಈ ವಿಚಾರವನ್ನು ಸ್ವಯಂ ವೇದವ್ಯಾಸರು ಬ್ರಹ್ಮಸೂತ್ರದಲ್ಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿ ಹೇಳುತ್ತಾರೆ: “ನ ಪ್ರತೀಕೇ ನಹಿಸಃ” ಎಂದು. ಅಂದರೆ “ಪ್ರತಿಮೆಯನ್ನು ದೇವರೆಂದು ಕಾಣಬೇಡ, ಪ್ರತಿಮೆ ದೇವರಲ್ಲ, ಪ್ರತಿಮೆಯಲ್ಲಿ ದೇವರನ್ನು ಕಾಣು” ಎಂದರ್ಥ. ಗಾಳಿಯಲ್ಲಿ ಧೂಳು ತುಂಬಿದೆ ಹೊರತು, ಗಾಳಿಯೇ ದೂಳಲ್ಲ. ಮೋಡದಿಂದ ಆಕಾಶ ಕಪ್ಪಾಗಿ ಕಾಣುತ್ತದೆ ಹೊರತು, ಆಕಾಶವೇ ಕಪ್ಪಲ್ಲ. ಹಾಗೇ ಪ್ರತಿಮೆಯಲ್ಲಿ ಭಗವಂತ ಹೊರತು, ಪ್ರತಿಮೆಯೇ ಭಗವಂತನಲ್ಲ.
ಭಗವಂತ ಎಂದರೆ ಜ್ಞಾನಾನಂದಮಯನಾದ ಪರಿಪೂರ್ಣ ವಸ್ತು. ಆತನಿಗೆ ಅಧಿಷ್ಠಾನ-ಗುಣತ್ರಯಗಳಿಂದ ಆಶ್ರಯವಾದ, ಪಂಚಭೂತಗಳಿಂದಾದ, ಸ್ವತಃ ಚಲನೆ, ಬುದ್ಧಿಶಕ್ತಿ ಇಲ್ಲದ ಜಡ ಪ್ರಪಂಚ. ಈ ಭಗವಂತ ಮತ್ತು ಜಡ ಪ್ರಪಂಚದ ನಡುವೆ ‘ಜೀವ’ ಎಂದರೆ ಯಾರು? ‘ಜೀವ’ ಭಗವಂತನ ಒಂದು ತುಣುಕೇ ಅಥವಾ ಪಂಚಭೂತಗಳಿಂದ ಚೈತನ್ಯ ಸೃಷ್ಟಿಯಾಯಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸೂತರು ಮುಂದಿನ ಶ್ಲೋಕದಲ್ಲಿ ಉತ್ತರ ನೀಡಿದ್ದಾರೆ.

ಅತಃ ಪರಂ ಯದವ್ಯಕ್ತಮವ್ಯೂಢಗುಣಬೃಂಹಿತಮ್      
ಅದೃಷ್ಟಾಶ್ರುತವಸ್ತುತ್ವಾತ್ ಸ ಜೀವೋ ಯಃ ಪುನರ್ಭವಃ           ೩೨

‘ಜೀವ’ ಜಡಕ್ಕಿಂತಲೂ ಭಿನ್ನ ಹಾಗೂ ಪರಮಾತ್ಮನಿಗಿಂತಲೂ ಭಿನ್ನ. ಜೀವ ಜಡದೊಳಗೇ ಇದ್ದರೂ ಕೂಡಾ, ಅದನ್ನು ಕಾಣಲು ಸಾಧ್ಯವಿಲ್ಲ. ಶಾಸ್ತ್ರದಲ್ಲಿ ಹೇಳುವಂತೆ: ಜೀವದ ಆಕಾರ ಸುಮಾರಾಗಿ ಒಂದು ಕುದುರೆಯ ಬಾಲದ ತುದಿಭಾಗದ ಹತ್ತುಸಾವಿರದ ಒಂದನೇ ಭಾಗದಷ್ಟಿರುತ್ತದೆ. ಹಾಗಾಗಿ ಜೀವ ಎನ್ನುವುದು ಕಣ್ಣಿಗೆ ಕಾಣದ ಆದರೆ ಅನುಭವಿಸಬಹುದಾದ ತತ್ತ್ವ.
ಇಲ್ಲಿ ‘ಜೀವ’ನಿಗೆ ಸಂಬಂಧಿಸಿದ ಒಂದು ಅಪೂರ್ವವಾದ ವಿಚಾರವನ್ನು ಸೂತರು ಹೇಳಿರುವುದನ್ನು ಕಾಣುತ್ತೇವೆ. ಅವರು ಹೇಳುತ್ತಾರೆ: “ಜೀವ ನಿತ್ಯವಾದ ಸ್ವಭಾವದಿಂದ ತುಂಬಿದೆ” ಎಂದು. ಪ್ರತಿಯೊಂದು ‘ಜೀವ’ ಕ್ಕೆ ಅದರದ್ದೇ ಆದ ಒಂದು ವಿಶೇಷ ಸ್ವಭಾವವಿದೆ. ಇದೇ ಆ ‘ಜೀವ’ದ ವ್ಯಕ್ತಿತ್ವ[ individuality]. ತನ್ನ ಸ್ವರೂಪ ವ್ಯಕ್ತಿತ್ತ್ವವನ್ನು ಬೆಳೆಸಿಕೊಳ್ಳುವುದೇ ‘ಜೀವ’ನ ಸಾಧನೆ. ಆ ವ್ಯಕ್ತಿತ್ವದ ಪೂರ್ಣತೆ ಸಾಧಿಸುವುದೇ ‘ಜೀವ’ದ ಸಿದ್ಧಿ.  “ನಾನು-ನಾನಾಗಿ, ನನ್ನ ಪೂರ್ಣ ವ್ಯಕ್ತಿತ್ತ್ವದ ವಿಕಸನವನ್ನು ಪಡೆಯುವುದು ನನ್ನ ಮೋಕ್ಷ. ನೀವು ನಿಮ್ಮ ವ್ಯಕ್ತಿತ್ತ್ವದ ಪೂರ್ಣತೆಯನ್ನು ಪಡೆಯುವುದು ನಿಮ್ಮ ಮೋಕ್ಷ. ಹೀಗೆ ‘ಜೀವ’ನಲ್ಲಿ ಎಂದೂ ನಾಶವಾಗದ ಸ್ವಭಾವ ನಿತ್ಯವಾಗಿರುತ್ತದೆ. ಎಲ್ಲ ಜೀವರೊಳಗೂ ನೆಲಸಿ, ಎಲ್ಲಕ್ಕೂ ಒಂದು ರೂಪ ಕೊಟ್ಟ ವಿಶ್ವರೂಪನಾದ ಭಗವಂತನನ್ನು ತಿಳಿಯುವ ತನಕ-‘ಜೀವ’ ಸಂಸಾರದ ಹುಟ್ಟು-ಸಾವಿನ ಚಕ್ರದಲ್ಲಿ ಸುತ್ತುತ್ತಿರುತ್ತಾನೆ.

No comments:

Post a Comment