Tuesday, January 29, 2013

Shrimad BhAgavata in Kannada -Skandha-01-Ch-03(06)


ಅವತಾರಾ ಹ್ಯಸಂಖ್ಯೇಯಾ ಹರೇಃ ಸತ್ತ್ವನಿಧೇರ್ದ್ವಿಜಾಃ                       
ಯಥಾ ವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ                 ೨೬

ಭಗವಂತನ ಅವತಾರಗಳ ಕುರಿತು ವಿವರಿಸಿದ ಉಗ್ರಶ್ರವಸ್ ಹೇಳುತ್ತಾರೆ: “ಭಗವಂತನ ಅವತಾರವನ್ನು ‘ಇಷ್ಟು’ ಎಂದು ಲೆಕ್ಕ ಹಿಡಿಯಲು ಸಾಧ್ಯವಿಲ್ಲ. ಆತನ ಅನುಸಂಧಾನಕ್ಕಾಗಿ ಕೆಲವು ಮುಖ್ಯ ಅವತಾರಗಳನ್ನು ಹೇಳುತ್ತೇವೆ ಹೊರತು, ನಾವು ಹೇಳಿದಷ್ಟೇ ಅವತಾರಗಳಲ್ಲ” ಎಂದು. ಭಗವಂತನ ಅವತಾರಗಳು ಅಸಂಖ್ಯ. ಅವುಗಳನ್ನು ಎಣಿಸಲು ಸಾಧ್ಯವಿಲ್ಲ. ಲೋಕದಲ್ಲಿ ರಜಸ್ಸು-ತಮಸ್ಸು ವೃದ್ಧಿಯಾದಾಗ, ಸತ್ತ್ವವನ್ನು ಸ್ಥಾಪಿಸಲು ಭಗವಂತ ಅವತರಿಸಿ ಬರುತ್ತಾನೆ. ಹೀಗಾಗಿ ಆತ ರಜಸ್ಸು-ತಮಸ್ಸನ್ನು ಪರಿಹರಿಸುವ ಹರಿಯೂ ಹೌದು, ಸತ್ತ್ವ ನಿಧಿಯೂ ಹೌದು. ಇಂತಹ ಭಗವಂತನ ಅನಂತ ಅವತಾರಗಳನ್ನು ನಮ್ಮಿಂದ ಊಹಿಸುವುದೂ ಕಷ್ಟ.
ಇಲ್ಲಿ   “ಯಥಾ ವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ” ಎಂದರೆ: "ವಿದಾಸಿನವಾದ ಸರೋಹರದಿಂದ ಸಾವಿರಾರು ಮುಖವಾಗಿ ನೀರು ಕೆಳಕ್ಕೆ ಹರಿದು ಬರುವಂತೆ ಭಗವಂತ ಅವತರಿಸಿ ಬರುತ್ತಾನೆ" ಎಂದರ್ಥ. ಇಲ್ಲಿ ಬಳಸಿರುವ  ‘ವಿದಾಸಿನಃ’ ಎನ್ನುವ ಪದಕ್ಕೆ ಇಂದಿನ ಕೊಶಗಳಲ್ಲಿ ಅರ್ಥ ವಿವರಣೆ ಇಲ್ಲ. ‘ವಿದಾಸಿ’ ಎನ್ನುವುದಕ್ಕೆ ‘ಉನ್ನತ’ ಮತ್ತು ‘ಒಡೆದು ಹೋಗಿರುವ’ ಎನ್ನುವ ಅರ್ಥ ಕೊಡುವ ಎರಡು ಪೌರಾಣಿಕ ಪ್ರಯೋಗವನ್ನು ಆಚಾರ್ಯರು ಉಲ್ಲೇಖಿಸುತ್ತಾರೆ:
ವಿದಾಸಿನಃ ಉನ್ನತಾದ್ ಭಿನ್ನಾದ್ವಾ  
ತ್ರಿವಿಧಾ ಪುರುಷಾ ಲೋಕೇ ನೀಚಮಧ್ಯವಿದಾಸಿನಃ ಇತಿ ಬ್ರಾಹ್ಮೇ
ಚತುರ್ದಾ ವರ್ಣರೂಪೇಣ ಜಾಗದೇತದ್ ವಿದಾಸಿತಂ ಇತಿ ಚ

ಹೀಗಾಗಿ ವಿದಾಸಿಯಾದ ಸರೋಹರ ಎಂದರೆ ಎತ್ತರದಲ್ಲಿರುವ ಅಥವಾ ಒಡೆದುಹೋದ ಸರೋಹರ ಎಂದರ್ಥ. ಭಗವಂತ ಎತ್ತರದಲ್ಲಿರುವ ತುಂಬಿದ ಕೊಡ. ಎಂದೂ ಬತ್ತದ ಆ  ತುಂಬಿದ ಕೊಡ ಸಾವಿರಾರು ಮುಖವಾಗಿ ನಮ್ಮ ಉದ್ಧಾರಕ್ಕಾಗಿ ಕೆಳಕ್ಕೆ ಹರಿದು ಬರುತ್ತದೆ.

ಋಷಯೋ ಮನವೋ ದೇವಾ ಮನುಪುತ್ರಾ ಮಹೌಜಸಃ          
ಕಲಾಃ ಸರ್ವೇ ಹರೇರೇವ ಸಪ್ರಜಾಪತಯಃ ಸ್ಮೃತಾಃ                ೨೭

ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್      
ಇಂದ್ರಾರಿವ್ಯಾಕುಲಂ ಲೋಕಂ ಮೃಡಯಂತಿ ಯುಗೇ ಯುಗೇ     ೨೮

ಭಗವಂತನ ಅವತಾರಗಳ ಬಗ್ಗೆ ಹೆಚ್ಚಿನವರಲ್ಲಿ ಒಂದು ಸಂಶಯವಿದೆ. ಅದೇನೆಂದರೆ:  ಭಗವಂತನ ಅವತಾರರೂಪಕ್ಕೂ ಹಾಗೂ ಮೂಲ ರೂಪಕ್ಕೂ ಏನಾದರೂ ವ್ಯತ್ಯಾಸವಿದೆಯೋ ಎನ್ನುವುದು.  ಏಕೆಂದರೆ  ದೇವತೆಗಳು ಭೂಮಿಯಲ್ಲಿ ಅವತರಿಸಿದಾಗ ಅಲ್ಲಿ ಅವರಿಗೆ ಮೂಲ ರೂಪದ ಶಕ್ತಿ ಇರಬೇಕೆಂದೇನೂ ಇಲ್ಲ. ಇದೇ ರೀತಿ ಭಗವಂತನ ಅವತಾರ ಕೂಡಾ ಇರಬಹುದೇ ಎನ್ನುವುದು ಕೆಲವರ ಪ್ರಶ್ನೆ. ಈ ಸಂಶಯಕ್ಕೆ ಪೂರಕವಾಗಿ ರಾಮಾಯಣದಲ್ಲಿನ ಶ್ರೀರಾಮಚಂದ್ರನ ನುಡಿ. ಅಲ್ಲಿ ರಾಮ ಹೇಳುತ್ತಾನೆ: “ಆತ್ಮಾನಮ್ ಮಾನುಷಮ್ ಮನ್ಯೇ” ಎಂದು (ಯುದ್ಧಕಾಂಡ-೧೨೦-೧೧). ಅಂದರೆ: ‘ನಾನು ಒಬ್ಬ ಸಾಮಾನ್ಯ ಮನುಷ್ಯ’  ಎಂದರ್ಥ. ಇದು ಹೆಚ್ಚಿನವರಿಗೆ ಗೊಂದಲವನ್ನುಂಟುಮಾಡುತ್ತದೆ. ಕೆಲವರು “ಶ್ರೀರಾಮನಿಗೆ ತನ್ನ ಮೂಲರೂಪದ ಅರಿವಿರಲಿಲ್ಲ” ಎಂದು ತಪ್ಪಾಗಿ ತಿಳಿದಿರುವುದೂ ಉಂಟು. ಹಾಗಾಗಿ ನಾವಿಲ್ಲಿ ತಿಳಿಯಬೇಕಾಗಿರುವುದು ಭಗವಂತನ ಅವತಾರ ಮತ್ತು ಮೂಲರೂಪ ಎರಡೂ ಸಮಾನವೋ ಅಥವಾ ಅಲ್ಲಿ ವ್ಯತ್ಯಾಸವಿದೆಯೋ ಎನ್ನುವ ವಿಚಾರವನ್ನು. ಇದನ್ನು ತಿಳಿಸುವುದಕ್ಕಾಗಿಯೇ ಮೇಲಿನ ಶ್ಲೋಕವಿದೆ. ಈ ಶ್ಲೋಕವನ್ನು ಎಚ್ಚರದಿಂದ ಗಮನಿಸದೇ ಇದ್ದರೆ, ಇಲ್ಲೂ ಕೂಡಾ, ಇನ್ನೊಂದು ಗೊಂದಲ ಹುಟ್ಟುವ ಸಾಧ್ಯತೆ ಇದೆ!  ಇಲ್ಲಿ ಹೇಳುತ್ತಾರೆ: “ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್” ಎಂದು. ಇದನ್ನು ಮೇಲ್ನೋಟದಲ್ಲಿ ನೋಡಿದರೆ: “ಎಲ್ಲಾ ಅವತಾರಗಳು ಭಗವಂತನ ಒಂದು ಅಂಶ, ಕೃಷ್ಣ ಒಬ್ಬನೇ ಪೂರ್ಣಾವತಾರ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ನಾವು ಇಲ್ಲಿ ಹೇಳಿರುವ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. “ಏತೇ ಸ್ವಾಂಶಕಲಾಃ” ಎಂದರೆ: “ಇವು ಭಗವಂತನ ಕಲೆಗಳು ಅಥವಾ ಭಗವಂತನ ಅಂಶ” ಎಂದರ್ಥ. ಆದರೆ ಭಗವಂತ ಒಂದು ಅಖಂಡವಾದ ಶಕ್ತಿಯಾಗಿರುವುದರಿಂದ,  ಅಲ್ಲಿ ಒಂದು ತುಣುಕು ಎಂದೇನೂ ಇಲ್ಲ. ಆದ್ದರಿಂದ ಆತನ ಎಲ್ಲಾ ಅವತಾರಗಳೂ ಪೂರ್ಣಾವತಾರವೇ. ಇನ್ನು ಇಲ್ಲಿ ಬಳಕೆಯಾಗಿರುವ ‘ಕೃಷ್ಣ’ ಎನ್ನುವ ಪದ. ಈ ನಾಮ ಭಗವಂತನ ಮೂಲ ನಾಮ. ಕೃಷ್ಣಾವತಾರಕ್ಕೂ ಮೊದಲು ಭಗವಂತನನ್ನು ‘ಕೃಷ್ಣ’ ಎನ್ನುವ ನಾಮದಿಂದ ಸಂಬೋಧಿಸುವುದನ್ನು ನಾವು ಶಾಸ್ತ್ರದಲ್ಲಿ ಕಾಣಬಹುದು. ‘ಕೃಷ್ಣ’ ಎಂದರೆ ‘ಕರ್ಷಣೆ ಮಾಡುವವ. ನಮ್ಮನ್ನು ಸಂಸಾರದಿಂದ ಕರ್ಷಣೆ ಮಾಡಿ ಮೋಕ್ಷ ಕರುಣಿಸುವವ ಎಂದರ್ಥ. ಭಗವಂತನ ಸ್ವರೂಪಾವತಾರದಲ್ಲಿ ಎಂದೂ ಭೇದವಿಲ್ಲ. ಇದನ್ನು ಸ್ಪಷ್ಟವಾಗಿ ಬ್ರಹ್ಮವೈವರ್ತ ಪುರಾಣದಲ್ಲಿ  ಹೇಳಲಾಗಿದೆ:

ಏತೇ ಪ್ರೋಕ್ತಾ ಅವತಾರಾ ಮೂಲರೂಪೀ ಕೃಷ್ಣಃ ಸ್ವಯಮೇವ
ಜೀವಾಸ್ತತ್ಪ್ರತಿಬಿಂಬಾಂಶಾ ವರಾಹಾದ್ಯಾಃ ಸ್ವಯಂ ಹರಿಃ
ದೃಶ್ಯತೇ ಬಹುಧಾ ವಿಷ್ಣುರೈಶ್ವರ್ಯಾದೇಕ ಏವ ತು ಇತಿ ಬ್ರಹ್ಮವೈವರ್ತೇ

ಅಂದರೆ: “ಋಷಿಗಳು, ದೇವತೆಗಳು ಮುಂತಾದ ಜೀವರು ಭಗವಂತನ ಪ್ರತಿಬಿಂಬರೂಪ. ಆದರೆ  ವರಾಹ ಮುಂತಾದ  ಅವತಾರಗಳು ಸ್ವಯಂ ಭಗವಂತನಿಂದ ಅಭಿನ್ನ. ಒಬ್ಬನೇ ಒಬ್ಬ ವಿಷ್ಣುವು ತನ್ನ ಅನಂತ ಶಕ್ತಿಯಿಂದ ಅನೇಕ ರೂಪನಾಗಿ ಕಾಣಿಸಿಕೊಳ್ಳುತ್ತಾನೆ” ಎಂದರ್ಥ. ಭಗವಂತನ ಎಲ್ಲಾ ಅವತಾರಗಳೂ ಒಂದೇ. ಅಲ್ಲಿ ಒಂದು ಕಡಿಮೆ- ಇನ್ನೊಂದು ಹೆಚ್ಚು, ಒಂದು ಸಮಗ್ರ-ಇನ್ನೊಂದು ಅಸಮಗ್ರ; ಒಂದು ಪೂರ್ಣ-ಇನ್ನೊಂದು ಅಪೂರ್ಣ; ಒಂದರಲ್ಲಿ ಹೆಚ್ಚು ಶಕ್ತಿ-ಇನ್ನೊಂದರಲ್ಲಿ ಕಡಿಮೆ ಶಕ್ತಿ  ಎನ್ನುವ ವಿಭಾಗಗಳಿಲ್ಲ. ಸರ್ವಶಕ್ತನಾದ ಭಗವಂತನ ಪೂರ್ಣವಾದ ಶಕ್ತಿಯಲ್ಲಿ ಅಪೂರ್ಣತೆ ಇಲ್ಲ. ಆದರೆ ಅದನ್ನು ಆತ ಅಭಿವ್ಯಕ್ತ ಮಾಡುವುದರಲ್ಲಿ ವ್ಯತ್ಯಾಸವಿರಬಹುದು. ಭಗವಂತನ ಶಕ್ತಿ ಬೇರೆ ಮತ್ತು ಅದರ ಅಭಿವ್ಯಕ್ತಿ ಬೇರೆ. ಗೀತೆಯಲ್ಲಿ ಹೇಳುವಂತೆ:
ವಿದ್ಯಾವಿನಯಸಂಪನ್ನೇ  ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ  ಸಮದರ್ಶಿನಃ      ॥೫-೧೮॥

ಎಲ್ಲಾ ಕಡೆ ಇರುವ ಭಗವಂತ ಸಮಾನ. ಆದ್ದರಿಂದ ಅವನ ರೂಪದಲ್ಲಿ ನಾವು ತಾರತಮ್ಯ ಕಲ್ಪಿಸಬಾರದು.
ಏಕೆ ಭಗವಂತ ಭೂಮಿಗಿಳಿದು  ಬರುತ್ತಾನೆ ಎಂದರೆ: ದೈತ್ಯರಿಂದ ಲೋಕಕ್ಕೆ ತೊಂದರೆಯುಂಟಾದಾಗ, ದೇವ-ದಾನವರ ಸಂಘರ್ಷದಲ್ಲಿ  ಆಸುರೀ ಶಕ್ತಿ ಅಥವಾ ತಮೋಗುಣ ಗೆದ್ದಾಗ-ಭಗವಂತ ಅನೇಕ ರೂಪದಲ್ಲಿ, ಯುಗ-ಯುಗದಲ್ಲೂ ಭೂಮಿಗಿಳಿದು ಬರುತ್ತಾನೆ. "ಸತ್ತ್ವವನ್ನು ಸ್ಥಾಪಿಸಿ ಜಗತ್ತಿಗೆ ನೆಮ್ಮದಿಯನ್ನು ಕೊಡಲು ಭಗವಂತ ಅವತಾರ ರೂಪಿಯಾಗಿ ಬರುತ್ತಾನೆ" ಎನ್ನುತ್ತಾರೆ ಉಗ್ರಶ್ರವಸ್

No comments:

Post a Comment