ತೃತಿಯೋSಧ್ಯಾಯಃ
ಶೌನಕಾದಿಗಳು ಕೇಳಿದ
ಭಗವಂತನ ಅವತಾರಗಳ ವಿವರವನ್ನು ಈ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇಲ್ಲಿ ಭಗವಂತನ
ಮೂಲರೂಪವನ್ನೊಳಗೊಂಡ ಇಪ್ಪತ್ಮೂರು ಅವತಾರಗಳನ್ನು ವಿವರಿಸಲಾಗಿದೆ. ಈ ಅವತಾರಗಳಲ್ಲಿ ನರ-ನಾರಾಯಣ
ರೂಪದಲ್ಲಿನ ಭಗವಂತನ ಆವೇಶಾವತಾರವಾದ ‘ನರ’ ರೂಪವನ್ನು ಸೇರಿಸಿದರೆ, ಒಟ್ಟು ಇಪ್ಪತ್ನಾಲ್ಕು
ಅವತಾರಗಳ ವಿವರಣೆ ಇಲ್ಲಿದೆ. ಅಖಂಡವಾಗಿರುವ ಭಗವಂತ ಮೊಟ್ಟಮೊದಲು ಸೃಷ್ಟಿ ನಿರ್ಮಾಣ ಮಾಡುವುಕ್ಕೋಸ್ಕರ
ತಳೆದ ಅವತಾರದ ವಿವರಣೆಯೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.
ಭಗವದವತಾರಗಳು
ಸೂತ ಉವಾಚ:
ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ ।
ಸಂಭೂತಂ ಷೋಡಶಕಲಮಾದೌ ಲೋಕಸಿಸೃಕ್ಷಯಾ ॥೧॥
ಯಸ್ಯಾಂಭಸಿ ಶಯಾನಸ್ಯ ಯೋಗನಿದ್ರಾಂ ವಿತನ್ವತಃ ।
ನಾಭಿಹ್ರದಾಂಬುಜಾದಾಸೀದ್ಬ್ರಹ್ಮಾ ವಿಶ್ವಸೃಜಾಂ ಪತಿಃ ॥೨॥
ಜಗತ್ತಿನ
ಸೃಷ್ಟಿಗಾಗಿ ಭಗವಂತ ವಿಶೇಷ ರೂಪದಲ್ಲಿ ಆವಿರ್ಭಾವಗೊಂಡ ರೂಪವೇ ಆತನ ‘ಪುರುಷಃ’ ನಾಮಕ ರೂಪ. ಇದು
ಎಲ್ಲಕ್ಕಿಂತ ಮೊದಲ ಅವತಾರರೂಪ. ಭಗವಂತನ ಈ ರೂಪಕ್ಕೆ ಇನ್ನೊಂದು ಹೆಸರು ‘ಪದ್ಮನಾಭ’. ಜಗತ್ತನ್ನು
ಸೃಷ್ಟಿಮಾಡುವ ಮೊದಲು ತಾನೊಂದು ರೂಪಧರಿಸಿ, ತನ್ನ ನಾಭಿಯಿಂದ ಚತುರ್ಮುಖನನ್ನು ಸೃಷ್ಟಿಮಾಡಿ,
ಬ್ರಹ್ಮಾಂಡವನ್ನು ಸೃಷ್ಟಿಮಾಡಿದ ರೂಪವೇ ಈ ಪದ್ಮನಾಭ ರೂಪ.
ಶಾಸ್ತ್ರಕಾರರು ಸೃಷ್ಟಿಗೆ
ಕಾರಣವಾಗಿರುವ ಮೂರು ಪುರುಷರೂಪಗಳನ್ನು ಉಲ್ಲೇಖಿಸುತ್ತಾರೆ. ೧. ನಾಭಿಕಮಲದಿಂದ
ಚತುರ್ಮುಖಬ್ರಹ್ಮನನ್ನು ಸೃಷ್ಟಿಮಾಡಿದ ರೂಪ. ೨. ಚತುರ್ಮುಖನ ಮುಖೇನ ಸೃಷ್ಟಿಯಾದ
ಬ್ರಹ್ಮಾಂಡದೊಳಗೆ ತುಂಬಿದ ರೂಪ. ೩. ಬ್ರಹ್ಮಾಂಡದೊಳಗೆ ಅನಂತಾನಂತ ಪಿಂಡಾಂಡವನ್ನು ಸೃಷ್ಟಿಮಾಡಿ,
ಆ ಪಿಂಡಾಂಡದೊಳಗೆ ತುಂಬಿದ ಪುರುಷರೂಪ. ಮೇಲಿನ ಶ್ಲೋಕದಲ್ಲಿ ಹೇಳಿರುವ ಪುರುಷರೂಪ ಮೊಟ್ಟಮೊದಲು
ಮಹತತ್ತ್ವ ಧ್ಯೇಯನಾದ ಚತುರ್ಮುಖಬ್ರಹ್ಮನನ್ನು ನಾಭಿಕಮಲದಿಂದ ಸೃಷ್ಟಿ ಮಾಡಿದ ರೂಪ.
ಇಲ್ಲಿ “ಜಗೃಹೇ ಪೌರುಷಂ
ರೂಪಂ” ಎನ್ನುವಲ್ಲಿ “ಭಗವಂತ ಪುರುಷನಾಮಕ ರೂಪವನ್ನು ಗ್ರಹಣ ಮಾಡಿದ” ಎಂದಿದ್ದಾರೆ.
ಗ್ರಹಣಮಾಡುವುದು ಎಂದರೆ ‘ಸ್ವೀಕರಿಸುವುದು’ ಎಂದರ್ಥ. ಇಲ್ಲಿ ಭಗವಂತ ರೂಪವನ್ನು ಸ್ವೀಕರಿಸುವುದು
ಅಂದರೆ: ಆತನ ಒಂದು ರೂಪದಿಂದ ಇನ್ನೊಂದು ರೂಪ ಅಭಿವ್ಯಕ್ತವಾಗುವುದು. ಸೃಷ್ಟಿಯ ಮೊದಲು ಎಲ್ಲವೂ
ಕತ್ತಲು. ಸೃಷ್ಟಿಯ ಆರಂಭ ಎಂದರೆ ಅದು ರಾತ್ರಿ ಕಳೆದು ಅರುಣೋದಯವಾದಂತೆ. ಕತ್ತಲನ್ನು ಕಳೆದು
ಪದ್ಮನಾಭರೂಪನಾಗಿ ಭಗವಂತ ಅಭಿವ್ಯಕ್ತನಾಗುವುದನ್ನೇ ಇಲ್ಲಿ
‘ಗ್ರಹಣ’ ಮಾಡುವುದು ಎಂದಿದ್ದಾರೆ.
ಸೃಷ್ಟಿಯ ಆದಿಯಲ್ಲಿ
ಎಲ್ಲವೂ ಭಗವಂತನ ಉದರದಲ್ಲಿದ್ದು, ಪ್ರಪಂಚದ ಸೃಷ್ಟಿಗಾಗಿ ಭಗವಂತ ಸಮಸ್ತ ಪ್ರಕೃತಿ ವಿಕಾರಗಳ
ಮೂಲವಾದ ಷೋಡಶಕಲೆಗಳ ಸಂಗತನಾಗಿ ಪದ್ಮನಾಭ
ರೂಪಧಾರಣೆ ಮಾಡಿದ. ಈ ಷೋಡಶಕಲೆಗಳ ವಿವರವನ್ನು
ನಾವು ವೇದದಲ್ಲಿ ಕಾಣಬಹುದು. ಅಲ್ಲಿ
ಹೇಳುತ್ತಾರೆ: “ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ
ಮನೋSನ್ನಮನ್ನಾದ್
ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ” ಎಂದು.
ಜೀವ, ಶ್ರದ್ಧೆ, ಖಂ(ಆಕಾಶ), ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ನಾಮ ಇವೇ ಆ ಹದಿನಾರು ಕಲೆಗಳು.[ಈ ಕುರಿತ
ವಿವರವಾದ ವಿವರಣೆ ಪ್ರಶ್ನೋಪನಿಷತ್ತಿನ ಆರನೇ ಪ್ರಶ್ನೆಯಲ್ಲಿ ಕಾಣಬಹುದು].
ಅಭಿಮಾನಿದೇವತೆಗಳನ್ನೊಳಗೊಂಡ ಈ ಷೋಡಶಕಲೆ ಭಗವಂತನ ಉದರದಲ್ಲಿದ್ದು, ಅದಕ್ಕೆ ಅಭಿವ್ಯಕ್ತಿಕೊಡುವ
ಸ್ಥಿತಿಯಲ್ಲಿ ಪುರುಷನಾಮಕ ರೂಪ ಧಾರಣೆ ಮಾಡಿದ ಭಗವಂತ, ಮಹತತ್ತ್ವದ ಸೃಷ್ಟಿಮಾಡಿ, ಬ್ರಹ್ಮಾಂಡದ
ಸೃಷ್ಟಿಮಾಡಿದ.
ಯಸ್ಯಾವಯವಸಂಸ್ಥಾನೈಃ ಕಲ್ಪಿತೋ ಲೋಕವಿಸ್ತರಃ ।
ತದ್ವೈ ಭಗವತೋ ರೂಪಂ ವಿಶುದ್ಧಂ ಸತ್ತ್ವಮೂರ್ಜಿತಮ್ ॥೩॥
ಪಶ್ಯಂತ್ಯದೋ ರೂಪಮದಭ್ರಚಕ್ಷುಷಃ ಸಹಸ್ರಪಾದೋರುಭುಜಾನನಾದ್ಭುತಮ್ ।
ಸಹಸ್ರಮೂರ್ಧಶ್ರವಣಾಕ್ಷಿನಾಸಿಕಂ ಸಹಸ್ರಮೌಳ್ಯಂಬರಕುಂಡಲೋಲ್ಲಸತ್ ॥೪॥
ಭಗವಂತನ ಬೇರೆಬೇರೆ
ಅವಯವಗಳ ನೆಲೆಯಿಂದ ಬೇರೆಬೇರೆ ಲೋಕಗಳ ಸೃಷ್ಟಿಯಾಯಿತು. ಭಗವಂತನ ಪಾದದಿಂದ ಭೂಮಿಯ ಸೃಷ್ಟಿ,
ನಾಭಿಯಿಂದ ಅಂತರಿಕ್ಷ ಸೃಷ್ಟಿ, ಶಿರಸ್ಸಿನಿಂದ ಸ್ವರ್ಗದ ಸೃಷ್ಟಿ. ಅರ್ಥಾತ್: ಸಮಸ್ತ
ಬ್ರಹ್ಮಾಂಡದೊಳಗೆ ಭಗವಂತ ವಿರಾಡ್ರೂಪದಿಂದ ವ್ಯಾಪಿಸಿನಿಂತ. ರೂಪದೋಷ ರಹಿತನಾದ ಆತನ ಆಯಾ ಅವಯವಗಳೇ ಆಯಾ ಲೋಕಗಳ ಉತ್ಪತ್ತಿಸ್ಥಾನ. ಇದೇ ಆತನ ಎರಡನೇ ಪುರುಷರೂಪ.
ಏತನ್ನಾನಾವತಾರಾಣಾಂ ನಿಧಾನಂ ಬೀಜಮವ್ಯಯಮ್ ।
ಯಸ್ಯಾಂಶಾಂಶೇನ ಸೃಜ್ಯಂತೇ ದೇವತಿರ್ಯಙ್ನರಾದಯಃ ॥೫॥
ಭಗವಂತನ ಪುರುಷರೂಪವೇ
ಮುಂದಿನ ಎಲ್ಲಾ ರೂಪಗಳ ಬೀಜ. ಆತನ ಪುರುಷರೂಪದಿಂದಲೇ ಇತರ ರೂಪಗಳ ಅಭಿವ್ಯಕ್ತವಾಗುತ್ತದೆ. ಇದು
ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದಂತೆ. ಹೇಗೆ ಎಲ್ಲಾ ರೂಪಗಳು ಪುರುಷರೂಪದಿಂದ
ಅಭಿವ್ಯಕ್ತವಾಗುತ್ತವೋ, ಅದೇ ರೀತಿ ಕೊನೆಗೆ ಹೋಗಿ ಸೇರುವುದು ಅದೇ ಪುರುಷರೂಪದಲ್ಲಿ. ಭಗವಂತ ಈ
ಬ್ರಹ್ಮಾಂಡದಲ್ಲಿ ದೇವತೆಗಳು, ಪ್ರಾಣಿಗಳು, ಮನುಷ್ಯರು ಹಾಗೂ ಅಸಂಖ್ಯ ಜೀವಜಾತಗಳನ್ನು ಸೃಷ್ಟಿಸಿ,
ತನ್ನ ಅನಂತ ಅಂಶಗಳಿಂದ ಪ್ರತಿಯೊಂದು ಜೀವರೊಳಗೆ ತುಂಬಿದ. ಇದು ಸೃಷ್ಟಿಗೆ ಕಾರಣವಾದ ಮೂರನೇ
ಪುರುಷರೂಪ.
ಸೃಷ್ಟಿಯ ಮೊದಲ
ಮನ್ವಂತರ ಸ್ವಾಯಂಭುವ ಮನ್ವಂತರ. ಆನಂತರ ಸ್ವಾರೋಚಿಷ, ಉತ್ತಮ, ರೈವತ, ತಾಪಸ, ಚಾಕ್ಷುಷ
ಮನ್ವಂತರಗಳು. ಈ ಆರು ಮನ್ವಂತರಗಳು ಈ ಕಲ್ಪದಲ್ಲಿ ಈಗಾಗಲೇ ಸಂದುಹೋದ ಮನ್ವಂತರಗಳು. ಈಗ
ನಡೆಯುತ್ತಿರುವ ಮನ್ವಂತರ-ವೈವಸ್ವತ ಮನ್ವಂತರ. [ಭೂಮಿಯ ಆಯಸ್ಸು ಒಂದು ದಿನಕಲ್ಪ. ಅದು ಚತುರ್ಮುಖನ ಒಂದು ಹಗಲು. ಒಂದು ದಿನ ಕಲ್ಪದಲ್ಲಿ ೧೪
ಮನ್ವಂತರಗಳು. ಈ ೧೪ ಮನ್ವಂತರಗಳನ್ನು ೧೪ ಮಂದಿ ಮನುಗಳು ನಿಯಂತ್ರಿಸುತ್ತಾರೆ. ಒಂದು ಮನ್ವಂತರಕಾಲ
ಎಂದರೆ ಸುಮಾರು ೭೧ ಯುಗಚಕ್ರ ಅಥವಾ ೩೦,೮೫,೭೦,೦೦೦ ವರ್ಷಗಳು. ಇಂತಹ ೧೪ ಮನ್ವಂತರಗಳು ಹಾಗೂ
ಮನ್ವಂತರಗಳ ನಡುವಿನ ಪ್ರಳಯಕಾಲ (೨೦,೦೦೦ವರ್ಷಗಳು) ಸೇರಿದಾಗ ಅದು ಒಂದು ದಿನಕಲ್ಪ. ಅಂದರೆ ೪೩೨ಕೋಟಿ
ವರ್ಷಗಳು.]
ಸ ಏವ ಪ್ರಥಮಂ ದೇವಃ ಕೌಮಾರಂ ಸರ್ಗಮಾಸ್ಥಿತಃ ।
ಚಚಾರ ದುಶ್ಚರಂ ಬ್ರಹ್ಮಾ ಬ್ರಹ್ಮಚರ್ಯಮಖಂಡಿತಮ್ ॥೬॥
ತಾನು ಸೃಷ್ಟಿಸಿದ
ಪ್ರಪಂಚದಲ್ಲಿ ಮೊಟ್ಟಮೊದಲು ಸ್ವಾಯಂಭುವ ಮನ್ವಂತರದಲ್ಲಿ ಭಗವಂತ ಸನತ್ಕುಮಾರನಾಗಿ ಅವತರಿಸಿದ. ಇದನ್ನು ಕೆಲವರು
ಚತುರ್ಸನಾವತಾರ ಎಂದು ಹೇಳುತ್ತಾರೆ. ಸನಕ-ಸನಂದನ-ಸನಾತನ-ಸನತ್ಕುಮಾರ ಈ ನಾಲ್ಕು ಮಂದಿ ‘ಸನ’ರಲ್ಲಿನ
ಸನತ್ಕುಮಾರನೇ-ಭಗವಂತನ ರೂಪ ಎಂದು ಹಲವು ವ್ಯಾಖ್ಯಾನಕಾರರು ಹೇಳಿದ್ದಾರೆ. ಆದರೆ ಅದು ಸರಿಯಲ್ಲ. ಏಕೆಂದರೆ
ಆ ಸನತ್ಕುಮಾರ ಒಬ್ಬ ಋಷಿ. ಆತ ಬ್ರಹ್ಮಪುತ್ರ. ಅವನೇ ವಿಷ್ಣುಪುತ್ರನಾಗಿ ಕಾಮನಾದ, ಶಿವಪುತ್ರನಾಗಿ ಷಣ್ಮುಖ/ಸ್ಕಂಧನಾದ.
ಆದ್ದರಿಂದ ಆ ಋಷಿಯೇ ಬೇರೆ, ಭಗವಂತನ ಈ ಅವತಾರವೇ ಬೇರೆ. ಬ್ರಹ್ಮಪುರಾಣದಲ್ಲಿ ಹೇಳುವಂತೆ:
ಸನತ್ಕುಮಾರ ಋಷಿಗೆ ಬ್ರಹ್ಮಚರ್ಯದ ಉಪದೇಶ ಮಾಡಿದ ಮನ್ವಂತರದ ಮೊಟ್ಟಮೊದಲ ಭಗವಂತನ ಅವತಾರವೇ
‘ಸನತ್ಕುಮಾರ ರೂಪ’. ಈ ರೂಪದಲ್ಲೇ ಭಗವಂತ ಚತುರ್ಮುಖನಿಗೆ ವೇದೋಪದೇಶ ಮಾಡಿದ. ಅಖಂಡ ಬ್ರಹ್ಮಚರ್ಯ ಸಾಧನೆಯನ್ನು
ನಡೆದು ತೋರಿದ ಅವತಾರವಿದು. ಇದು ಸುಮಾರು ಇನ್ನೂರು ಕೋಟಿ ವರ್ಷಗಳ ಹಿಂದೆ ನಡೆದ ಮನ್ವಂತರದ ಮೊದಲ ಅವತಾರ.
ದ್ವಿತೀಯಂ ತು ಭವಾಯಾಸ್ಯ ರಸಾತಳಗತಾಂ ಮಹೀಮ್ ।
ಉದ್ಧರಿಷ್ಯನ್ನುಪಾದತ್ತ ಯಜ್ಞೇಶಃ ಸೌಕರಂ ವಪುಃ ॥೭॥
ಭಗವಂತನ ಎರಡನೇ
ಅವತಾರ ವರಾಹ ಅವತಾರ. ಭಗವಂತ ವರಾಹ ರೂಪಿಯಾಗಿ ಎರಡು ಬಾರಿ ಅವತರಿಸಿರುವುದನ್ನು ಕಾಣುತ್ತೇವೆ.
ಒಂದು ಸ್ವಾಯಂಭುವ ಮನ್ವಂತರದಲ್ಲಿ ಹಾಗು ಇನ್ನೊಂದು ವೈವಸ್ವತ ಮನ್ವಂತರದಲ್ಲಿ. ಸ್ವಾಯಂಭುವ ಮನ್ವಂತರದಲ್ಲಿ ಮೊದಲ ವರಾಹ ಅವತಾರವಾಗಿರುವುದರಿಂದ ಅದು ಭಗವಂತನ ಎರಡನೇ ಅವತಾರ[Chronologically]. ದೈತ್ಯ ಶಕ್ತಿಯ
ಪ್ರಭಾವದಿಂದಾಗಿ ಈ ಭೂಮಿ ತನ್ನ ಕಕ್ಷೆಯಿಂದ ಕಳಚಿಕೊಂಡಾಗ, ವರಾಹರೂಪದಲ್ಲಿ ಬಂದು ಭೂಮಿಯನ್ನು
ಮರಳಿ ಕಕ್ಷೆಯಲ್ಲಿಟ್ಟ ಅವತಾರವಿದು. ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮಪುತ್ರನಾದ ಆದಿದೈತ್ಯ
ಹಿರಣ್ಯಾಕ್ಷನನ್ನು ವರಾಹರೂಪನಾಗಿ ಭಗವಂತ ಸಂಹಾರ ಮಾಡಿದರೆ, ವೈವಸ್ವತ ಮನ್ವಂತರದಲ್ಲಿ ಅದಿತಿ-ಕಾಶ್ಯಪರ
ಮಗನಾದ ಹಿರಣ್ಯಾಕ್ಷನನ್ನು ಮರಳಿ ವರಾಹರೂಪಿಯಾಗಿ ಸಂಹರಿಸಿದ. [ಭೂಮಿ ಎರಡು ಬಾರಿ ಕಕ್ಷೆಯಿಂದ
ಕಳಚಿಕೊಂಡಿರುವುದು ಮತ್ತು ಅದು ಮರಳಿ ತನ್ನ ಕಕ್ಷೆಗೆ ಮರಳಿರುವ ಕುರಿತು Velikovsky ಬರೆದಿರುವ ‘Words
in collision’ ಪುಸ್ತಕದಲ್ಲಿ ಪ್ರಸ್ತಾಪವಿದೆ. ಅಲ್ಲಿ ಆತ ಭಾಗವತವನ್ನು ಉಲ್ಲೇಖಿಸಿರುವುದನ್ನು ಕಾಣಬಹುದು]
No comments:
Post a Comment