Sunday, January 20, 2013

Shrimad BhAgavata in Kannada -Skandha-01-Ch-03(03)


ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋSಭ್ಯಜಾಯತ         
ಸ ಯಾಮಾದ್ಯೈಃ ಸುರಗಣೈರಪಾತ್ ಸ್ವಾಯಂಭುವಾಂತರಮ್ ೧೨

ಸ್ವಾಯಂಭುವ ಮನುವಿನ ಮಗಳು ಆಕೂತಿಯನ್ನು ರುಚಿಪ್ರಜಾಪತಿ ವಿವಾಹವಾದ. ಇವರ ದಾಂಪತ್ಯ ಫಲವಾಗಿ ಇವರಿಗೆ ಗಂಡು ಮಗುವಾಗುತ್ತದೆ. ಆತನೇ ಯಜ್ಞ. ಈತನೇ ಸ್ವಾಯಂಭುವ ಮನ್ವಂತರದ ಇಂದ್ರ. ಸ್ವಾಯಂಭುವ ಮನುವನ್ನು ನಾಶಮಾಡಬೇಕೆಂದು ಅಸುರ ಶಕ್ತಿಗಳು ಒಂದಾಗಿ ಕುತಂತ್ರ ಮಾಡಿದಾಗ, ಮನು ಭಗವಂತನನ್ನು ಧ್ಯಾನ ಮಾಡುತ್ತಾನೆ. ಹೀಗೆ ಧ್ಯಾನ ಮಾಡುತ್ತಾ ಸ್ವಾಯಂಭುವ ಮನು ಕಂಡ ವೇದ ಮಂತ್ರವೇ ಇಂದಿನ ಈಶಾವಾಸ್ಯ ಉಪನಿಷತ್ತು. ಈ ಉಪನಿಷತ್ತಿಗೆ ಭಗವಂತನ ಪ್ರತಿಪಾದ್ಯ ರೂಪಮೂಲವಾದ ಹೆಸರು ‘ಯಾಜ್ಞೇಯ ಮಂತ್ರೋಪನಿಷತ್ತು’. ಇದು ಯಜ್ಞ ನಾಮಕ ಭಗವಂತನನ್ನು ಸ್ತುತಿಸುವ ಉಪನಿಷತ್ತು. ವೇದ ಮಂತ್ರದಿಂದ ಮನು  ಭಗವಂತನ ಧ್ಯಾನ ಮಾಡಿದಾಗ, ಭಗವಂತ ಯಜ್ಞ ನಾಮಕನಾಗಿ ಸ್ವಾಯಂಭುವ ಮನುವಿಗೆ ರಕ್ಷಣೆ ಕೊಡುತ್ತಾನೆ. ಇದು ಭಗವಂತನ ಏಳನೇ ಅವತಾರ.

ಅಷ್ಟಮೋ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ      
ದರ್ಶಯನ್ ವರ್ತ್ಮ ಧೀರಾಣಾಂ ಸರ್ವಾಶ್ರಮನಮಸ್ಕೃತಮ್      ೧೩

ಸ್ವಾಯಂಭುವ ಮನುವಿಗೆ ಇಬ್ಬರು ಗಂಡು ಮಕ್ಕಳು. ಉತ್ತಾನಪಾದ ಮತ್ತು ಪ್ರಿಯವೃತ. ಪ್ರಿಯವೃತನ ಮಗ ಆಗ್ನೀಂದ್ರ, ಆಗ್ನೀಂದ್ರನ ಮಗ ನಾಭಿರಾಜ. ನಾಭಿರಾಜ-ಮೇರುದೇವಿ ದಂಪತಿಗಳು. ಇವರು ತಮಗೆ ‘ದೇವರಂತಹ ಮಗ ಹುಟ್ಟಬೇಕು’ ಎಂದು ತಪಸ್ಸು ಮಾಡಿದುದರ ಫಲವಾಗಿ ಅವರಲ್ಲಿ ಭಗವಂತ ಋಷಭದೇವನಾಗಿ ಅವತರಿಸಿದ. ಇದು ಭಗವಂತನ ಎಂಟನೇ ಅವತಾರ. ಚಕ್ರವರ್ತಿಯಾಗಿ ದೇಶವಾಳಿದ ಋಷಭದೇವ, ಕೊನೆಗೆ ಒಂದು ದಿನ ಈ ದೇಶಕ್ಕೆ ಭಾರತ ಎಂದು ಹೆಸರು ಬರಲು ಕಾರಣನಾದ ತನ್ನ ಮಗ ಭರತನಿಗೆ ಅಧಿಕಾರವನ್ನು ಒಪ್ಪಿಸಿ, ಸರ್ವಸ್ವವನ್ನೂ ತ್ಯಾಗಮಾಡಿ, ಉಟ್ಟ ಬಟ್ಟೆಯನ್ನೂ ತೊರೆದು ಬತ್ತಲಾಗಿ ಹೊರಟು, ಕೊಡಚಾದ್ರಿಗೆ(ಇಂದಿನ ಕೊಲ್ಲೂರು) ಬಂದು ನೆಲೆಸಿ, ಅಲ್ಲಿ ತನ್ನ ಯೋಗಾಗ್ನಿಯಿಂದ ಅವತಾರ ಸಮಾಪ್ತಿ ಮಾಡಿದ ಎನ್ನಲಾಗುತ್ತದೆ. ಇದೊಂದು ಮೋಹಕ ಲೀಲೆ. ಋಷಭದೇವನನ್ನು ಜೈನ ಧರ್ಮದ ಆದಿತೀರ್ಥಂಕರ ಎಂದು ಹೇಳುತ್ತಾರೆ.      

ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ         
ದುಗ್ಧೇಮಾನೋಷಧೀರ್ವಿಪ್ರಾಸ್ತೇನಾಯಂ ಚ ಉಶತ್ತಮಃ           ೧೪

ಸ್ವಾಯಂಭುವ ಮನ್ವಂತರದಲ್ಲಿನ ಎಂಟು ಅವತಾರಗಳ ನಂತರ ವೈವಸ್ವತ ಮನ್ವಂತರದ ತನಕ ಭಗವಂತನ ವಿಶೇಷ ಅವತಾರದ ಬಗ್ಗೆ ಭಾಗವತದಲ್ಲಿ ವಿವರಣೆ ಇಲ್ಲ. ಆದರೆ ಚಾಕ್ಷುಷ ಮನ್ವಂತರದಲ್ಲಿ ಭಗವಂತನ ಆವೇಶ ಅವತಾರವೊಂದಿದೆ. ಇದು  ಉತ್ತಾನಪಾದನ ಪರಂಪರೆಯಲ್ಲಿ ಬಂದ ‘ಪ್ರಥುಚಕ್ರವರ್ತಿ’ಯಲ್ಲಿ ಆವಿಷ್ಠನಾಗಿ ಭಗವಂತ ನೆಲೆಸಿದ ರೂಪ.
ಪ್ರಥುಚಕ್ರವರ್ತಿಯ ಅಜ್ಜ ಅಂಗರಾಜ. ಆತನ ಮಗ ವೇನ. ‘ವೇನ’ ಎಂದರೆ ಜ್ಞಾನಿ ಎನ್ನುವುದು ಒಂದರ್ಥವಾದರೆ ಲೋಕಕಂಟಕ ಎನ್ನುವುದು ಇನ್ನೊಂದು ಅರ್ಥ.  ತಂದೆ ತನ್ನ ಮಗ ಜ್ಞಾನಿಯಾಗಲಿ ಎಂದು ಬಯಸಿದರೆ, ವೇನ ಲೋಕಕಂಟಕನಾಗಿ ಬೆಳೆದ. ಚಿಕ್ಕವನಿರುವಾಗಲೇ ತನ್ನ ಸಹಪಾಟಿಗಳನ್ನು ಬಾವಿಗೆ ತಳ್ಳಿ ಆನಂದಿಸುತ್ತಿದ್ದ ವಿಚಿತ್ರ ಸ್ವಭಾವ ವೇನನದ್ದಾಗಿತ್ತು! ಇಂತಹ ಮಗ ಹುಟ್ಟಿರುವುದರಿಂದ ಅಂಗರಾಜನಿಗೆ ಬೇಸರವಾಗುತ್ತದೆ. ಮಗನನ್ನು ನಿಯಂತ್ರಿಸಲು ಆತ ಅನೇಕ ರೀತಿಯಿಂದ ಪ್ರಯತ್ನಪಟ್ಟ. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಒಂದು ದಿನ ರಾಜ ಯಾರಿಗೂ ಹೇಳದೆ, ಊರುಬಿಟ್ಟು ಕಾಡಿಗೆ ಹೊರಟುಹೋದ. ಇದರಿಂದಾಗಿ ‘ವೇನ’ ದೇಶದ ಅಧಿಪತಿಯಾದ. ರಾಜನಾದ ‘ವೇನ’ ತಕ್ಷಣ “ರಾಜಾ ಪ್ರತ್ಯಕ್ಷ ದೇವತಾ, ತನ್ನನ್ನು ಬಿಟ್ಟು ದೇವರನ್ನು ಯಾರೂ ಪೂಜಿಸಕೂಡದು” ಎನ್ನುವ ಆಜ್ಞೆಯನ್ನು ಹೊರಡಿಸಿ, ದೇಶದಲ್ಲಿ ಅಧಾರ್ಮಿಕತೆಯ ವಾತಾವರಣ ನಿರ್ಮಾಣಮಾಡಿದ. ಇದರ ಪರಿಣಾಮ ದೇಶದಲ್ಲಿ ದುರ್ಭಿಕ್ಷೆ ಬಂದು ಮನುಷ್ಯರಷ್ಟೇ ಅಲ್ಲ, ಸಾವಿರಾರು ಹಸುಗಳೂ ಕೂಡಾ ಆಹಾರವಿಲ್ಲದೆ ಸಾವನ್ನಪ್ಪಿದವು. ಇಷ್ಟಾದರೂ ಕೂಡಾ ವೇನ ಪಶ್ಚಾತ್ತಾಪಪಡಲಿಲ್ಲ. ಇದರಿಂದಾಗಿ ಕೋಪಗೊಂಡ ಋಷಿಗಳು ವೇನನನ್ನು ಅಧಿಕಾರದಿಂದ ಕಿತ್ತೆಸೆದರು. ಅಷ್ಟೇ ಅಲ್ಲ, ತಮ್ಮ ತಪಶಕ್ತಿಯಿಂದ, ಹೂಂಕಾರದಿಂದ ಆತನನ್ನು ನಾಶಮಾಡಿದರು. ಋಷಿಗಳು ತಮ್ಮ ತಪಶಕ್ತಿಯಿಂದ ವೇನನನ್ನು ಮಥನಮಾಡಿ, ಅಲ್ಲಿ ಇನ್ನೊಂದು ಜೀವ ಸೃಷ್ಟಿಯಾಗುವಂತೆ ಮಾಡಿದರು. ಅವನೇ ‘ಪ್ರಥುಚಕ್ರವರ್ತಿ’. ಋಷಿಗಳ ಪ್ರಾರ್ಥನೆಯಂತೆ ಭಗವಂತ ಪ್ರಥುಚಕ್ರವರ್ತಿಯಲ್ಲಿ ವಿಶೇಷವಾಗಿ ಆವಿಷ್ಠನಾಗಿ ಬಂದ.
ಪ್ರಥುಚಕ್ರವರ್ತಿ ಅಧಿಕಾರಕ್ಕೆ ಬರುವ ಮೊದಲು ಭೂಮಿಯಲ್ಲಿ ನಾಗರಿಕತೆ, ಉದ್ಯಮ, ಕಾಲುವೆಗಳು, ಕೃಷಿ, ಇತ್ಯಾದಿ ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿರಲಿಲ್ಲ.  ಭೂಮಿ ಏರುಪೇರಾಗಿತ್ತು. ಜನಸಂಖ್ಯೆ ಕಡಿಮೆ ಇದ್ದುದರಿಂದ ಎಲ್ಲಿ ಅನುಕೂಲವೋ ಅಲ್ಲಿ ಜನ ವಾಸ ಮಾಡುತ್ತಿದ್ದರು. ಪ್ರಥುಚಕ್ರವರ್ತಿ ಪ್ರಪಂಚದಲ್ಲಿ ಮೊಟ್ಟಮೊದಲಬಾರಿಗೆ ಒಂದು ವ್ಯವಸ್ಥಿತ ರೀತಿಯ ನಾಗರೀಕತೆಯನ್ನು ಪರಿಚಯಿಸಿ ಅಭಿವೃದ್ಧಿಪಡಿಸಿದ.  ಏರುಪೇರಾಗಿದ್ದ ಭೂಮಿಯನ್ನು ಸಮತಟ್ಟುಮಾಡಿ, ಕಾಲುವೆಗಳು, ಜಲಾಶಯ, ಬೇಸಾಯಕ್ಕೆ ಬೇಕಾದ ನೀರಿನ ವ್ಯವಸ್ಥೆ, ನಗರ, ಹುಲ್ಲುಗಾವಲು, ಕಾಡು, ನಾಡು, ಇತ್ಯಾದಿಯನ್ನು  ಅಭಿವೃದ್ಧಿಪಡಿಸಿದ. ಇದರಿಂದಾಗಿ ಸಂಪತ್ತಿನ ಹೊಳೆ ಹರಿಯಿತು. ಆತನ ಆಡಳಿತ ಅವಧಿಯಲ್ಲಿ ಭೂಮಿಗೊಂದು ಹೊಸ ಆಯಾಮ ಬಂದಿತು. [ಈ ಕಾರಣಕ್ಕಾಗಿ ಭೂಮಿಗೆ ಪೃಥ್ವಿ ಎನ್ನುವ ಹೆಸರು ಬಂದಿದೆ. ಪೃಥ್ವೀ ಎಂದರೆ ಪ್ರಥುಚಕ್ರವರ್ತಿಯ ಮಗಳು ಎಂದರ್ಥ]. ಇಂತಹ ಪ್ರಥುಚಕ್ರವರ್ತಿಯನ್ನು  ಜನರು ‘ಉಶತ್ತಮಃ’ ಎಂದು ಕರೆದರು. ಅಂದರೆ ಬಯಸಿದ್ದನ್ನು ಮಾಡಬಲ್ಲವ, ಸತ್ಯಕಾಮ ಎಂದರ್ಥ.
ಚಾಕ್ಷುಷ ಮನ್ವಂತರದಲ್ಲಿ ಭಗವಂತನ ಈ ಆವೇಶಾವತಾರದ ನಂತರ ಮನ್ವಂತರದ ಉಪೇಂದ್ರರೂಪ ಹಾಗೂ ತಾಪಸ ಮನ್ವಂತರದಲ್ಲಿ ಮನ್ವಂತರ ನಿಯಾಮಕ ‘ತಾಪಸ’ ರೂಪವನ್ನು ಬಿಟ್ಟರೆ, ವೈವಸ್ವತ ಮನ್ವಂತರದ ತನಕ ಭಗವಂತನ ಬೇರೆ ಅವತಾರಗಳಿಲ್ಲ. ವೈವಸ್ವತ ಮನ್ವಂತರದಲ್ಲಿನ ಭಗವಂತನ ವಿಶಿಷ್ಠ ಅವತಾರಗಳನ್ನು ಸೂತರು ಮುಂದೆ ವಿವರಿಸುವುದನ್ನು ಕಾಣಬಹುದು.

No comments:

Post a Comment