Saturday, January 26, 2013

Shrimad BhAgavata in Kannada -Skandha-01-Ch-03(05)



ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರಾತ್    
ಚಕ್ರೇ ವೇದತರೋಃ ಶಾಖಾ ದೃಷ್ಟ್ವಾ ಪುಂಸೋSಲ್ಪಮೇಧಸಃ     ೨೧

ಭಗವಂತನ ಹದಿನೇಳನೇ ಅವತಾರ ವ್ಯಾಸಾವತಾರ.  ಸತ್ಯವತಿ-ಪರಾಶರರ ಮಗನಾಗಿ ವ್ಯಾಸಾವತಾರವಾಯಿತು. ಇದು ವೇದವನ್ನು ವಿಭಾಗ ಮಾಡಿದ ವಿಶಿಷ್ಠರೂಪ. ಇಲ್ಲಿ ರಾಮಾವತಾರಕ್ಕೂ ಮೊದಲು ವ್ಯಾಸಾವತಾರವನ್ನು ಕಾಲಕ್ರಮದಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟುಮಾಡುತ್ತದೆ. ಇದನ್ನು ವಿವರಿಸುತ್ತಾ ಆಚಾರ್ಯರು ಹೇಳುತ್ತಾರೆ: “ರಾಮಾತ್ ಪೂರ್ವಮಪ್ಯಸ್ತಿ ವ್ಯಾಸಾವತಾರಃ” ಎಂದು. ಕೂರ್ಮ ಪುರಾಣದಲ್ಲಿ ಹೇಳುವಂತೆ: “ತೃತೀಯಂ ಯುಗಮಾರಭ್ಯ ವ್ಯಾಸೋ ಬಹುಷು ಜಿಜ್ಞವಾನ್”. ಇಲ್ಲಿ ಈ ಮನ್ವಂತರದಲ್ಲಿ ಮೂರನೇ ದ್ವಾಪರದಿಂದಾರಂಭಿಸಿ ಅನೇಕ ದ್ವಾಪರಗಳಲ್ಲಿ ವ್ಯಾಸರು ಅವತರಿಸುತ್ತಾರೆ ಎಂದಿದ್ದಾರೆ. ವ್ಯಾಸರ ಅವತಾರ ಈಗಾಗಲೇ ವೈವಸ್ವತ ಮನ್ವಂತರದ ಮೂರನೇ, ಏಳನೇ, ಹದಿನಾರನೇ, ಇಪ್ಪತ್ತೈದನೇ ಹಾಗೂ ಈಗ ಮುಗಿದಿರುವ ಇಪ್ಪತ್ತೆಂಟನೇ ದ್ವಾಪರದಲ್ಲಿ ಐದು ಬಾರಿ ಆಗಿದೆ. ರಾಮಾವತಾರ ಆಗಿರುವುದು ವೈವಸ್ವತ ಮನ್ವಂತರದ ಇಪ್ಪತ್ನಾಲ್ಕನೇ ತ್ರೇತಾಯುಗದಲ್ಲಿ.  ಈ ಕಾಲಕ್ರಮದಲ್ಲಿ ನೋಡಿದಾಗ ಭಗವಂತನ ಮೊದಲ ವ್ಯಾಸಾವತಾರ ಆಗಿರುವುದು ರಾಮಾವತಾರಕ್ಕಿಂತ ಮೊದಲು. ಇನ್ನೊಂದು ವಿಶೇಷವೇನೆಂದರೆ: ತನ್ನ ಪ್ರತೀ ಅವತಾರದಲ್ಲೂ ವ್ಯಾಸರು ಅವತರಿಸಿರುವುದು ಸತ್ಯವತಿ-ಪರಾಶರರ ಮಗನಾಗಿ.
ವ್ಯಾಸಾವತಾರವಾಗಿರುವುದೇ ವೇದ ವೃಕ್ಷಕ್ಕೆ ಶಾಖೆಗಳನ್ನು ನೀಡುವುದಕ್ಕೋಸ್ಕರ. ಅಖಂಡವಾದ ಮೂಲ ವೇದವನ್ನು ವಿಂಗಡಿಸಿ, ಜನರಿಗೆ ನೀಡಿದ ಅವತಾರವಿದು. ತನ್ನ ಮೊದಲ ನಾಲ್ಕು ಅವತಾರಗಳಲ್ಲಿ ಜ್ಞಾನಿಗಳಿಗೆ ವೇದ ವಿಂಗಡಣೆ ಮಾಡಲು ಮಾರ್ಗದರ್ಶಿಯಾಗಿದ್ದ ವ್ಯಾಸರು, ಇಪ್ಪತ್ತೆಂಟನೇ ದ್ವಾಪರದ ತನ್ನ ಅವತಾರದಲ್ಲಿ ಸ್ವಯಂ ವೇದ ವಿಂಗಡಣೆ ಮಾಡಿ ನಮಗೆ ನೀಡಿರುವುದು ಗಮನಾರ್ಹ.

ನರದೇವತ್ವಮಾಪನ್ನಃ ಸುರಕಾರ್ಯಚಿಕೀರ್ಷಯಾ      
ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್   ೨೨

ರಾಜನಾಗಿ ಭೂಮಿಯಲ್ಲಿ ಅವತರಿಸಿ ಬಂದು, ರಾವಣನ ಸಂಹಾರಕ್ಕಾಗಿ ಸೀತೆಯನ್ನು ಅನ್ವೇಷಿಸುತ್ತಾ ಹೋಗಿ, ಸಮುದ್ರ ಸ್ತಂಭನ ಮಾಡಿ, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ರಾವಣನನ್ನು ಸಂಹಾರ ಮಾಡಿದ, ಅತಿಮಾನುಷ ಪೌರುಷ ತೋರಿದ ವಿಶೇಷ ಅವತಾರ ರಾವಾವತಾರ. ಇದು ಭಗವಂತನ ಹದಿನೆಂಟನೇ ಅವತಾರ.

ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ            
ರಾಮಕೃಷ್ಣಾವಿತಿ ಭುವೋ ಭಗವಾನಹರದ್ ಭರಮ್                 ೨೩

ಬಲರಾಮ ಮತ್ತು ಕೃಷ್ಣ ಭಗವಂತನ ಹತ್ತೊಂಬತ್ತು ಮತ್ತು ಇಪ್ಪತ್ತನೇ ಅವತಾರ. ಇಲ್ಲಿ 'ಬಲರಾಮ' ಅವತಾರ ಪ್ರಥುಚಕ್ರವರ್ತಿಯಂತೆ ಆವೇಶಾವತಾರ. ಶೇಷನಲ್ಲಿ ಭಗವಂತನ ವಿಶೇಷ ಆವೇಶ ಇದ್ದ ರೂಪ ಬಲರಾಮ ರೂಪವಾದರೆ, ಶ್ರೀಕೃಷ್ಣ ಭಗವಂತನ ಸಾಕ್ಷಾತ್ ಅವತಾರ.  ರಾಮ ಮತ್ತು ಕೃಷ್ಣ ಎನ್ನುವ ಹೆಸರಿನಿಂದ, ಭೂಮಿಯ ಭಾರವನ್ನು ಇಳಿಸಲು, ವೃಷ್ಣಿ(ಯಾದವ) ವಂಶದಲ್ಲಿ ಭಗವಂತನ ಅವತಾರವಾಯಿತು.

ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್          
ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ                  ೨೪

ಇಪ್ಪತ್ತೊಂದನೇ  ಅವತಾರ ಬುದ್ಧಾವತಾರ. ಈ ಅವತಾರ ಮೋಹಿನಿ ಅವತಾರದಂತೆ ಇನ್ನೊಂದು ಮೋಹಕ ಅವತಾರ. ತನ್ನ ಮೋಹಕ ರೂಪದಿಂದ ಅಸುರರನ್ನು  ಸೆಳೆದ ಅವತಾರವಿದು. ಹೀಗಾಗಿ ಬುದ್ಧ ದಶಾವತಾರದಲ್ಲಿ ಸೇರಿದ್ದರೂ ಕೂಡಾ, ಜಗತ್ತು ಶೂನ್ಯವೆಂದ ಮೋಹಕ ಅವತಾರಿಯಾಗಿರುವುದರಿಂದ, ಆ ರೂಪದಲ್ಲಿ ಭಗವಂತನ ಆರಾಧನೆ ಇಲ್ಲ. ಬ್ರಹ್ಮಾಂಡಪುರಾಣದಲ್ಲಿ ಬುದ್ಧನ ಮೋಹಕ ರೂಪದ ವರ್ಣನೆ ಕಾಣಬಹುದು:

ಮೋಹನಾರ್ಥಾಂ ದಾನವಾನಾಂ ಬಾಲರೂಪೀ ಪರಃ ಸ್ಥಿತಃ
ಪುತ್ರಂ ತಮ್ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಂ
ತತಃ ಸಂಮೋಹಯಾಮಾಸ ಜಿನಾದ್ಯಾನ ಸುರಾಂಶಕಾನ್
ಭಗವಾನ್ ವಾಗ್ಭಿರುಗ್ರಾಭಿರಹಿಂಸಾವಾಚಿಭಿರ್ಹರಿಃ

ಕಲಿಯುಗದಲ್ಲಿ ಭಗವಂತನ ಅವತಾರವಾಗುವುದಿಲ್ಲ ಎನ್ನುತ್ತಾರೆ. ಹಾಗಿರುವಾಗ ಬುದ್ಧನ ಅವತಾರ ಈ ಕಲಿಯುಗದಲ್ಲಿ ಹೇಗಾಯಿತು ಎನ್ನುವುದು ಕೆಲವರ ಪ್ರಶ್ನೆ. ನಿಜ, ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ. ಆದರೆ ಈ ಅವತಾರವಾಗಿರುವುದು ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ. ಈಗ ನಡೆಯುತ್ತಿರುವುದು ಈ ಸಂಧಿಕಾಲ ಎನ್ನುವುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬೇಕು.  ಇನ್ನೊಂದು ಪ್ರಶ್ನೆ ಏನೆಂದರೆ: ಬುದ್ಧ ಶುದ್ಧೋದನನ ಮಗ ಮತ್ತು ಆತ ಹುಟ್ಟಿದ್ದು ನೇಪಾಳದಲ್ಲಿ. ಆದರೆ ಇಲ್ಲಿ ಬುದ್ಧ ಜಿನನ ಮಗ ಮತ್ತು ಆತ ಕೀಕಟ(ಈಗಿನ ಬಿಹಾರ) ದೇಶದಲ್ಲಿ ಹುಟ್ಟಿದ ಎಂದಿದ್ದಾರೆ. ಹೌದು, ಗೌತಮ ಬುದ್ಧ ಶುದ್ಧೋದನನ ಮಗ . ಆದರೆ ಶುದ್ಧೋದನನ ಇನ್ನೊಂದು ಹೆಸರು ‘ಜಿನ’. ಜಿನನ ಮಗ ‘ಸಿದ್ಧಾರ್ಥ’ ಹುಟ್ಟಿದ್ದು ನೇಪಾಳದಲ್ಲಾದರೂ ಕೂಡಾ, ಆತ ‘ಬುದ್ಧ’ನೆಂದು ಹೆಸರು ಪಡೆದದ್ದು ಕೀಕಟ ದೇಶದಲ್ಲಿ.

ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು      
ಜನಿತಾ ವಿಷ್ಣುಯಶಸೋ ನಾಮ್ನಾ ಕಲ್ಕೀ ಜಗತ್ಪತಿಃ                  ೨೫

ಕಲಿಯುಗ ಮುಗಿದು ತ್ರೇತಾಯುಗ ಸಂಧಿ ಬಂದಾಗ, ರಾಜರುಗಳೇ ದರೋಡೆಕೋರರಾದಾಗ, ‘ವಿಷ್ಣುಯಶಸ್ಸು’ ಎನ್ನುವ ಬ್ರಾಹ್ಮಣನ ಮಗನಾಗಿ  ಭಗವಂತ ಕಲ್ಕಿ ರೂಪದಲ್ಲಿ ಅವತರಿಸುತ್ತಾನೆ. ಇದು ಭಗವಂತನ ಇಪ್ಪತ್ತೆರಡನೇ ಅವತಾರ.
ಹೀಗೆ ಇಲ್ಲಿ ಭಗವಂತನ ‘ಪುರುಷ ‘ ಅವತಾರವನ್ನು ಸೇರಿಸಿ ನೋಡಿದರೆ ಒಟ್ಟು ಇಪ್ಪತ್ಮೂರು ಅವತಾರಗಳನ್ನು ಕಾಣುತ್ತೇವೆ. ಮೂಲ ಪದ್ಮನಾಭ ರೂಪ ಹಾಗೂ ಎರಡು ಆವೇಶಾವತಾರ(ಪ್ರಥುಚಕ್ರವರ್ತಿ ಮತ್ತು ಬಲರಾಮ)ವನ್ನು ಬಿಟ್ಟರೆ ಇಲ್ಲಿ ಒಟ್ಟು ಇಪ್ಪತ್ತು ಸ್ವರೂಪಾವತಾರವನ್ನು ಹೇಳಲಾಗಿದೆ. ಇದು ಒಂದು ರೀತಿಯಲ್ಲಿ ವಾಸುದೇವ ದ್ವಾದಶಾಕ್ಷರ ಮತ್ತು ಅಷ್ಟಾಕ್ಷರಗಳು(೧೨+೮=೨೦) ಹೇಳುವ ಭಗವಂತನ ಇಪ್ಪತ್ತು ಅವತಾರಗಳು.  

No comments:

Post a Comment