ಸರ್ವಶಾಸ್ತ್ರಗಳ ಸಾರ
ಮುನಯಃ ಸಾಧು
ಪೃಷ್ಟೋSಹಂ
ಭವದ್ಭಿರ್ಲೋಕಮಂಗಳಮ್ ।
ಯತ್ಕೃತಃ
ಕೃಷ್ಣಸಂಪ್ರಶ್ನೋ ಯೇನಾತ್ಮಾSSಶು ಪ್ರಸೀದತಿ ॥೫॥
ಸ ವೈ ಪುಂಸಾಂ
ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ ।
ಅಹೈತುಕ್ಯಪ್ರತಿಹತಾ
ಯಯಾSSತ್ಮಾSSಶು ಪ್ರಸೀದತಿ ॥೬॥
ಜ್ಞಾನಿಗಳಿಗೆ ‘ಹೇಳಬೇಕು’ ಎನ್ನುವ ತುಡಿತವಿರುವಾಗ, ಅಷ್ಟೇ ತುಡಿತವಿರುವ
ಯೋಗ್ಯ ವ್ಯಕ್ತಿ ಅದೇ ವಿಷಯವನ್ನು ಪ್ರಶ್ನೆಯಾಗಿ ಕೇಳಿದರೆ ಆಗುವ ಆನಂದ ಅಪರಂಪಾರ. ದೇವರು ಮೆಚ್ಚುವ
ಮಾತನ್ನು ಆಡಬೇಕು, ಆ ಮಾತಿನಿಂದ ಮನಸ್ಸು ಪ್ರಸನ್ನವಾಗಬೇಕು. ಆ ಪ್ರಸನ್ನತೆ ದೇಹದ ಮೂಲಕ ವ್ಯಕ್ತವಾಗಬೇಕು.
ಇಲ್ಲಿ ಋಷಿಗಳು ಕೇಳಿದ ಪ್ರಶ್ನೆಯಿಂದ ಸಂತೋಷಪಟ್ಟು “ಎಲ್ಲಾ ಪ್ರಶ್ನೆಗೆ ಉತ್ತರ-ಶ್ರೀಕೃಷ್ಣ” ಎನ್ನುತ್ತಾರೆ
ಸೂತರು.
ಜೀವನದಲ್ಲಿ ಅತ್ಯಂತ ಸಾರಭೂತವಾದುದು ಎಂದರೆ ಅದು “ಅಧೋಕ್ಷಜನಲ್ಲಿ ಭಕ್ತಿ”. ಇದು ಸರ್ವಶ್ರೇಷ್ಠವಾದುದು.
ಯಾವ ಸಂದೇಶದಿಂದ ಭಗವಂತನಲ್ಲಿ ಅದಮ್ಯವಾದ ಭಕ್ತಿ ಅರಳುತ್ತದೋ ಅದೇ ಜೀವನದ ಸರ್ವಶ್ರೇಷ್ಠವಾದ ಸಂದೇಶ ಎಂದಿದ್ದಾರೆ ಸೂತರು. ಇಲ್ಲಿ
ಭಗವಂತನನ್ನು ‘ಅಧೋಕ್ಷಜಃ’ ಎನ್ನುವ ನಾಮದಿಂದ ಸಂಬೋಧಿಸಿದ್ದಾರೆ.
ಯಾರಿಗೂ ಪ್ರತ್ಯಕ್ಷ ಕಾಣದ, ಆದರೆ ಇಂದ್ರಿಯನಿಗ್ರಹ ಮಾಡಿದ ಜ್ಞಾನಿಗಳಿಗೆ ಧ್ಯಾನದಲ್ಲಿ ಅಭಿವ್ಯಕ್ತನಾಗುವ
ಅವ್ಯಕ್ತತತ್ತ್ವ ಭಗವಂತ ‘ಅಧೋಕ್ಷಜಃ’.
ಮೇಲಿನ ಶ್ಲೋಕಗಳಲ್ಲಿ ಭಕ್ತಿಯ ಕುರಿತು ಹೇಳುವಾಗ ‘ಅಹೈತುಕ’ ಮತ್ತು ‘ಅಪ್ರತಿಹತಾ’ ಎನ್ನುವ ಎರಡು ವಿಶೇಷಣವನ್ನು ಬಳಸಿರುವುದನ್ನು ನಾವು ಗಮನಿಸಬೇಕು. ಇದು ಭಕ್ತಿಯಲ್ಲಿ ಇರಲೇಬೇಕಾದ ಎರಡು ಪ್ರಮುಖ ಅಂಶಗಳು. ನಾವು ದೇವರಲ್ಲಿ ಭಕ್ತಿ ಮಾಡುವಾಗ ನಮ್ಮ ಭಕ್ತಿ ಅಹೈತುಕವಾಗಿರಬೇಕು. ಅಂದರೆ ಭಕ್ತಿಗೆ ಒಂದು ಹೆಳೆ(ಕಾರಣ)
ಇರಬಾರದು. ಅನಿಮಿತ್ತವಾಗಿ ದೇವರಲ್ಲಿ ಸ್ನೇಹ ಬೆಳೆಸುವುದು ಅಹೈತುಕ ಭಕ್ತಿ. ಪ್ರೀತಿ ಮತ್ತು ಕಾರಣ
ಒಟ್ಟಿಗಿದ್ದರೆ ಅದು ವ್ಯಾಪಾರವಾಗುತ್ತದೆ. ರಾಮಾಯಣದಲ್ಲಿ ಹೇಳುವಂತೆ:
ನ ಕಿಂಚಿತ್ ಅಪಿ ಕುರ್ವಾಣಃ ಸೌಖ್ಯೇಃ ದುಃಖಾನಿ ಅಪೋಹತಿ ।
ತತ್ ತಸ್ಯ ಕಿಮ್ ಅಪಿ ದ್ರವ್ಯಂ ಯಃ ಹಿ ಯಸ್ಯ ಪ್ರಿಯಃ ಜನಃ ॥
ನಿಜವಾದ ಪ್ರೀತಿ ಎಂದರೆ ಅದು ಹೇಗೆ ನಿಷ್ಕಾರಣವೋ, ಹಾಗೇ, ಭಗವಂತನಲ್ಲಿ ಭಕ್ತಿ ಮಾಡುವಾಗ ‘ಇಂತಹದ್ದು ಬೇಕು, ಇದು ಕೊಡು’ ಎಂದು ಕೇಳದೇ,
ನಿಷ್ಕಾಮ ಸ್ನೇಹ ಬೆಳೆಸುವುದು ಅಹೈತುಕ ಭಕ್ತಿ.
ಕೆಲವೊಮ್ಮೆ ದೇವರಲ್ಲಿ ಭಕ್ತಿ ಬೆಳೆಸಿಕೊಂಡವರ ಜೀವನದಲ್ಲಿ ಯಾವುದೋ ಒಂದು ದುರ್ಘಟನೆ, ನಷ್ಟ ಸಂಭವಿಸುತ್ತದೆ. ಆಗ ಕೆಲವರು ಕುಸಿದು
ಬೀಳುತ್ತಾರೆ. “ದೇವರಿದ್ದಿದ್ದರೆ ಈ ರೀತಿ ಆಗುತ್ತಿತ್ತೇ? ನಾನು ದೇವರನ್ನು ಪೂಜಿಸಿದ್ದಕ್ಕೆ ಇದು
ಆತ ಕೊಟ್ಟ ಪ್ರತಿಫಲವೇ?” ಎಂದೆಲ್ಲಾ ಪ್ರಶ್ನಿಸಿಕೊಂಡು ದೇವರಲ್ಲಿ ನಂಬಿಕೆ ಕಳೆದುಕೊಳ್ಳುವವರಿದ್ದಾರೆ.
ಇದು ನಿಜವಾದ ಭಕ್ತಿಯಲ್ಲ. ಜೀವನದಲ್ಲಿ ನಡೆಯುವ ಯಾವ ತಾಪತ್ರಯಗಳೂ ನಮ್ಮ ಭಕ್ತಿಗೆ ಬಾಧಕವಾಗಿ ನಿಲ್ಲಬಾರದು.
ಎಷ್ಟು ಕಷ್ಟ ಬಂತೋ ಅಷ್ಟೇ ಮನಸ್ಸು ಧೃಢವಾಗಿ ಭಕ್ತಿ ಬೆಳೆಯಬೇಕು. ಎಂದೂ ನಮ್ಮ ಭಕ್ತಿಗೆ ಚ್ಯುತಿಯಾಗಬಾರದು.
ಇದನ್ನು ಅಪ್ರತಿಹತಾ ಭಕ್ತಿ ಎನ್ನುತ್ತಾರೆ. ಹೀಗೆ
ಯಾವುದೇ ಕಾರಣಕ್ಕೂ ತಡೆಯಾಗದ, ನಿಷ್ಕಾರಣ ಭಕ್ತಿ ಭಗವಂತನನ್ನು ಒಲಿಸುವುದಕ್ಕೆ ಮುಖ್ಯ ಸಾಧನವಾಗುತ್ತದೆ.
ಅಂತಹ ಭಗವದ್ಭಕ್ತಿಯ ಬಗ್ಗೆ ಸೂತರು ಮುಂದೆ ವಿವರಿಸುತ್ತಾರೆ.
ವಾಸುದೇವೇ
ಭಗವತಿ ಭಕ್ತಿಯೋಗಃ ಪ್ರಯೋಜಿತಃ ।
ಜನಯತ್ಯಾಶು ವೈರಾಗ್ಯಂ
ಜ್ಞಾನಂ ಚ ಯದಹೈತುಕಮ್ ॥೭॥
ಧರ್ಮಃ
ಸ್ವನುಷ್ಠಿತಃ ಪುಂಸಾಂ ವಿಷ್ವಕ್ಸೇನಕಥಾಶ್ರಯಾಮ್ ।
ನೋತ್ಪಾದಯೇದ್ ಯದಿ
ರತಿಂ ಶ್ರಮ ಏವ ಹಿ ಕೇವಲಮ್ ॥೮॥
ಜ್ಞಾನವಿಲ್ಲದೇ ಕೇವಲ
ಭಕ್ತಿ ಮಾಡಿ ಏನೂ ಉಪಯೋಗವಿಲ್ಲ. ಏಕೆಂದರೆ ತಿಳುವಳಿಕೆ ಇಲ್ಲದ ಭಕ್ತಿ ಮೂಢಭಕ್ತಿಯಾಗುವ ಅಪಾಯವಿದೆ.
‘ಭಕ್ತಿ’ ಎಂದರೆ ಒಬ್ಬರ ಮಹಿಮೆಯನ್ನು ತಿಳಿದು ಗೌರವಿಸುವುದು. ಇಲ್ಲಿ ಮಹಿಮೆಯನ್ನು ತಿಳಿಯುವುದು
ಎಂದರೆ ಅದು ‘ಜ್ಞಾನ’. ಆದ್ದರಿಂದ ಜ್ಞಾನವಿಲ್ಲದೇ
ಭಕ್ತಿಯೇ ಇಲ್ಲ. ಜ್ಞಾನವೆನ್ನುವುದು ಭಕ್ತಿಯ ಒಂದು ಘಟಕ. ಅದೇ ರೀತಿ ವೈರಾಗ್ಯ. ನಮಗೆ ಭಗವಂತನ ಬಗೆಗೆ
ಜ್ಞಾನ ಬಂದಾಗ, ಅದು ಮಹತ್ತರವಾದ ತತ್ತ್ವ ಎನ್ನುವುದು ತಿಳಿಯುತ್ತದೆ. ಆ ಸತ್ಯ ತಿಳಿದಾಗ ನಮಗೆ ಇತರ
ಲೌಕಿಕ ಸುಖದ ಮೇಲೆ ವೈರಾಗ್ಯ ಬರುತ್ತದೆ. ಹೀಗಾಗಿ ಜ್ಞಾನ-ಭಕ್ತಿ-ವೈರಾಗ್ಯ ಇವು ಒಂದನ್ನು ಬಿಟ್ಟು
ಒಂದಿರಲಾರವು. ಪ್ರಾಮಾಣಿಕ ಭಕ್ತಿ ಇರುವಲ್ಲಿ ಜ್ಞಾನ ಮತ್ತು ವೈರಾಗ್ಯ ಇದ್ದೇ ಇರುತ್ತವೆ.
ನಮ್ಮ ಜ್ಞಾನ ಅದು ಹೇತುವಾಗದ ಜ್ಞಾನವಾಗಿರಬೇಕು. ತರ್ಕದ ಬಲದಿಂದ ಬರುವ ಜ್ಞಾನ ವ್ಯರ್ಥ.
ಭಗವಂತ ಇದ್ದಾನೆ ಅಥವಾ ಇಲ್ಲಾ ಎಂದು ತರ್ಕ ಮಾಡುವುದನ್ನು ಬಿಟ್ಟು, ಆತನನ್ನು ಮನಸ್ಸಿನಲ್ಲಿ ಮನನಮಾಡಿ
ಒಲಿಸಿಕೊಳ್ಳಲು ಪ್ರಯತ್ನಮಾಡಬೇಕು. ಹೇತುವಾದದಿಂದ ಬರುವ ಜ್ಞಾನ ಎಂದೂ ಭಕ್ತಿಗೆ ಪೂರಕವಾಗಿರುವುದಿಲ್ಲ.
ಸಾಮಾನ್ಯವಾಗಿ ತರ್ಕವಿದ್ದಲ್ಲಿ ಅಹಂಕಾರವಿರುತ್ತದೆ. ಆದರೆ ಅಹಂಕಾರವಿದ್ದೆಡೆ ಎಂದೂ ಭಕ್ತಿ
ಇರಲಾರದು. ಹೀಗಾಗಿ ತರ್ಕ ಯಾವಾಗಲೂ ಭಕ್ತಿಗೆ ವಿರುದ್ಧವಾಗಿ ನಿಲ್ಲುತ್ತದೆ ಮತ್ತು ಅದು ಎಂದೂ ಭಕ್ತಿಗೆ
ಪೋಷಕವಲ್ಲ.
ನೀನು ಏನು ಮಾಡುವುದರಿಂದ
ನಿನ್ನ ಮನಸ್ಸು ಭಗವಂತನೆಡೆಗೆ ಹರಿಯುತ್ತದೋ ಅದು ಧರ್ಮ. ಯಾವುದರಿಂದ ನಾವು ಭಗವಂತನಿಗೆ ಬೆನ್ನು ಹಾಕುವಂತಾಗುತ್ತದೋ
ಅದೆಲ್ಲವೂ ಅಧರ್ಮ. ಯಾವುದೇ ಧರ್ಮಾಚರಣೆ ಕೂಡಾ ವಿಧಿವತ್ತಾಗಿ, ಶಾಸ್ತ್ರೀಯವಾಗಿ, ಸಮರ್ಪಕವಾಗಿ ಅನುಸಾರ ಮಾಡಿದರೂ ಕೂಡಾ, ಆ ಧರ್ಮಾನುಷ್ಠಾನದ ಹಿನ್ನೆಲೆಯಲ್ಲಿ ಭಗವಂತನ ಎಚ್ಚರ ಇಲ್ಲದಿದ್ದರೆ; ಅದು ಭಗವಂತನ ಕಥೆಯಲ್ಲಿ ಆಸಕ್ತಿ ಮೂಡಿಸದೇ ಇದ್ದರೆ; ಆಗ ಆ ಧರ್ಮಾನುಷ್ಟಾನ ಬದುಕಿಗೊಂದ ಭಾರ ಅಷ್ಟೇ. ಹೀಗಾಗಿ ನಮ್ಮೆಲ್ಲಾ ಅನುಷ್ಠಾನದ ಹಿಂದೆ ಭಗವದ್ಪ್ರಜ್ಞೆ ಇರಲೇಬೇಕು ಎನ್ನುವ ಎಚ್ಚರ ಅತ್ಯಗತ್ಯ. ನಮ್ಮ ಅನುಷ್ಠಾನದ ಹಿಂದಿರುವ ಇನ್ನೊಂದು ಅಪಾಯವೆಂದರೆ: ನಾವು ಅನುಷ್ಠಾನ ಮಾಡಿ,
ಅದರಿಂದ “ನಾನು ಅನುಷ್ಠಾನವಂತ” ಎನ್ನುವ ಅಹಂಕಾರ ಬೆಳೆದರೆ ನಮ್ಮೆಲ್ಲಾ ಅನುಷ್ಠಾನವೂ ವ್ಯರ್ಥ.
ಪ್ರತಿಯೊಬ್ಬ ಸಾಧಕನ
ನಡೆಯೂ ಭಿನ್ನ ಮತ್ತು ಅದು ಅವನಿಗೆ ಮೀಸಲು. ನಮ್ಮ ಮನಸ್ಸು ಭಗವಂತನೆಡೆಗೆ ಹರಿಯಲು ಸಾಧನವಾಗುವ ಪ್ರತಿಯೊಂದು
ಕ್ರಿಯೆ ನಮಗೆ ಧರ್ಮ. ಯಾವುದರಿಂದ ನಾವು ಭಗವಂತನಿಂದ
ದೂರ ಸರಿಯುತ್ತೇವೋ ಅದು ಕೇವಲ ಶ್ರಮ(ಒದ್ದಾಟ). ಹೇಗೆ ಭಗವಂತನ ಮಹತ್ವವನ್ನು ಅರಿತು ಭಕ್ತಿ ಮಾಡಬೇಕು
ಎನ್ನುವ ಜ್ಞಾನ ಬಂದಾಗ, ಭಗವಂತನ ಪ್ರೀತಿಯ ಮುಂದೆ ಪ್ರಾಪಂಚಿಕ ಸುಖ ಕ್ಷುಲ್ಲಕ ಎನ್ನುವುದು ತಿಳಿಯುತ್ತದೆ.
No comments:
Post a Comment