Sunday, January 6, 2013

Shrimad BhAgavata in Kannada -Skandha-01 -Ch-02(06)


ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ಗುಣಾಸ್ತೈರ್ಯುಕ್ತಃ ಪರಃ ಪುರುಷ ಏಕ ಇಹಾಸ್ಯ ಧತ್ತೇ ।
ಸ್ಥಿತ್ಯಾದಯೇ ಹರಿವಿರಿಂಚಿಹರೇತಿ ಸಂಜ್ಞಾಃ ಶ್ರೇಯಾಂಸಿ ತತ್ರ ಖಲು ಸತ್ತ್ವತನೌ ನೃಣಾಂ ಸ್ಯುಃ॥೨೪॥

ಈ ಹಿಂದೆ ‘ಉಪಾಸನೆಯಲ್ಲಿ ನಮ್ಮ ಮನಸ್ಸು ರಜಸ್ಸು-ತಮಸ್ಸನ್ನು ಮೀರಿ ಸತ್ತ್ವಗುಣದಲ್ಲೇ ನೆಲೆ ನಿಲ್ಲಬೇಕು’ ಎನ್ನುವ ವಿವರಣೆಯನ್ನು ನೋಡಿದೆವು. ಅದನ್ನೇ ಇನ್ನೂ ವಿವರವಾಗಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ನಮಗೆ ತಿಳಿದಿರುವಂತೆ ಈ ಪ್ರಪಂಚ ತ್ರಿಗುಣಾತ್ಮಕವಾದುದು. ಪ್ರಾಕೃತ ಪ್ರಪಂಚದಲ್ಲಿ ಸತ್ತ್ವ-ರಜಸ್ಸು-ತಮಸ್ಸು ಇವು ಒಂದನ್ನು ಬಿಟ್ಟು ಒಂದಿಲ್ಲ. ಭಗವಂತ ಈ ಮೂರು ಗುಣಗಳನ್ನೇ ಬಳಸಿ ಸೃಷ್ಟಿ-ಸ್ಥಿತಿ-ಸಂಹಾರವನ್ನು ಮಾಡುತ್ತಾನೆ. ಭಗವಂತ ಪ್ರಪಂಚ ನಿಯಮನ(ಸ್ಥಿತಿ)ವನ್ನು ಸತ್ತ್ವಗುಣವನ್ನು ಆಧಾರವಾಗಿಟ್ಟುಕೊಂಡು ಸ್ವರೂಪತಃ ವಿಷ್ಣು(ಹರಿ) ರೂಪದಲ್ಲಿ ಮಾಡಿದರೆ, ಸೃಷ್ಟಿ ಮಾಡುವಾಗ ರಜೋಗುಣವನ್ನು  ಆಧಾರವಾಗಿಟ್ಟುಕೊಂಡು, ಚತುರ್ಮುಖಬ್ರಹ್ಮನ(ವಿರಂಚ) ಅಂತರ್ಯಾಮಿಯಾಗಿ ಸೃಷ್ಟಿ ಮಾಡುತ್ತಾನೆ. ಅದೇ ರೀತಿ ಸಂಹಾರ ಕಾರ್ಯವನ್ನು ತಮೋಗುಣವನ್ನು ಆಧಾರವಾಗಿಟ್ಟುಕೊಂಡು, ಶಿವನ(ಹರನ) ಅಂತರ್ಯಾಮಿಯಾಗಿ ನಿಂತು ನಿರ್ವಹಿಸುತ್ತಾನೆ.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಇಲ್ಲಿ ಹರಿ-ವಿರಿಂಚ-ಹರ ಎನ್ನುವ ಮೂರು ಸಂಜ್ಞೆಗಳನ್ನು ಒಬ್ಬನೇ ಭಗವಂತ ಧರಿಸುತ್ತಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಅದು ಈ ಶ್ಲೋಕದ ಒಳಾರ್ಥವಲ್ಲ. ಈ ಶ್ಲೋಕದ ಅರ್ಥ ವಿಶೇಷ ನೋಡುವಾಗ ನಾವು ಈ ಹಿಂದೆ ಹೇಳಿದ ಮಾತನ್ನು ನೆನಪಿಸಿಕೊಂಡು ಅದಕ್ಕನುಗುಣವಾಗಿಯೇ ಅರ್ಥಚಿಂತನೆ ಮಾಡಬೇಕು.  ಈ ಹಿಂದೆ ಹೇಳಿದಂತೆ:  “ವೇದ್ಯಂ ವಾಸ್ತವಮತ್ರ ವಸ್ತು ಶಿವದಂ”: ಎಂದರೆ ಆಯಾ ವಸ್ತುವಿನ ಒಳಗೆ ಆಯಾ ರೂಪದಲ್ಲಿ ಅಂತರ್ಯಾಮಿಯಾಗಿ ಭಗವಂತ ನೆಲೆಸಿ ನಿಯಮಿಸುತ್ತಾನೆ. ಹಾಗಾಗಿ ಬ್ರಹ್ಮನೊಳಗೆ ಬ್ರಹ್ಮನಾಮಕನಾಗಿ, ಶಿವನೊಳಗೆ ಶಿವ ನಾಮಕನಾಗಿ ಭಗವಂತನಿದ್ದಾನೆ. ಇದನ್ನು ವಾಮನಪುರಾಣದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ: “ಬ್ರಹ್ಮಣಿ ಬ್ರಹ್ಮರೂಪೋSಸೌ ಶಿವರೂಪೀ ಶಿವೇ ಸ್ಥಿತಃ”. ಭಾಗವತದಲ್ಲೇ ಮುಂದೆ ಈ ಬಗ್ಗೆ ವಿವರಣೆ ಬರುತ್ತದೆ. ಆದ್ದರಿಂದ ಭಗವಂತ ಬ್ರಹ್ಮನೊಳಗಿದ್ದು ಬ್ರಹ್ಮನಾಮಕನಾಗಿ ಸೃಷ್ಟಿ ಮಾಡಿದರೆ, ಶಿವನೊಳಗೆ ಶಿವನಾಮಕನಾಗಿ ಸಂಹಾರ ಮಾಡುತ್ತಾನೆ ಮತ್ತು ಸ್ವರೂಪಭೂತವಾದ ವಿಷ್ಣುನಾಮಕನಾಗಿ ಪಾಲನೆ ಮಾಡುತ್ತಾನೆ.
ಈ ಜಗತ್ತು ತ್ರಿಗುಣಗಳ ಆಲಂಬನೆಯಲ್ಲೇ ನಿಂತಿದ್ದರೂ ಸಹ, ಒಬ್ಬ ಸಾಧಕ, ಸಾಧನೆಯ ಹಾದಿಯಲ್ಲಿ ಸತ್ತ್ವಪ್ರದನಾಗಿ ಸಾಧನೆ ಮಾಡಿದರೆ ಮಾತ್ರ ಶ್ರೇಯಸ್ಸು. ಇದನ್ನು ಬಿಟ್ಟು ರಜಸ್ಸು-ತಮಸ್ಸಿನ ಮಾರ್ಗದಲ್ಲಿ ಸಾಗಿದರೆ ಎಂದೆಂದಿಗೂ ಉದ್ಧಾರವಿಲ್ಲ. ಹೀಗೆ ಸಾತ್ತ್ವಿಕತೆಯೇ ಸಾಧನೆಯ ಹಾದಿಯಲ್ಲಿ ಮುಖ್ಯವಾಗುತ್ತದೆ.

ಪಾರ್ಥಿವಾದ್ ದಾರುಣೋ ಧೂಮಸ್ತಸ್ಮಾದಗ್ನಿಸ್ತ್ರಯೀಮಯಃ ।
ತಮಸಸ್ತು ರಜಸ್ತಸ್ಮಾತ್ ಸತ್ತ್ವಂ ಯದ್ ಬ್ರಹ್ಮದರ್ಶನಮ್          ॥೨೫॥

ಇಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸನ್ನು ಕ್ರಮವಾಗಿ ಬೆಂಕಿ, ಹೊಗೆ ಮತ್ತು ಕಟ್ಟಿಗೆಗೆ ಹೋಲಿಸಿದ್ದಾರೆ. ಕಟ್ಟಿಗೆ ತಮಸ್ಸಿನ ಪ್ರತೀಕ. ಅದು ಯಾವಾಗಲೂ ಕೆಳಕ್ಕೆಳೆಯುತ್ತದೆ. ನಂತರ ಹೊಗೆ. ಇದು ರಜಸ್ಸಿನ ಪ್ರತೀಕ. ಇದು ಕಟ್ಟಿಗೆಯಂತೆ ಕೆಳಕ್ಕೆಳೆಯದಿದ್ದರೂ ಕೂಡಾ, ಎಲ್ಲೆಂದರಲ್ಲಿ ಹಬ್ಬುತ್ತದೆ. ಕಟ್ಟಿಗೆ ಕತ್ತಲೆಯ ಪ್ರತೀಕವಾದರೆ, ಹೊಗೆ ಬೆಳಕನ್ನು ಮುಚ್ಚುವ ರಜಸ್ಸಿನ ಪ್ರತೀಕ. ಆದರೆ ಕಟ್ಟಿಗೆ ಮತ್ತು ಹೊಗೆಯಿಂದ ಹುಟ್ಟುವ, ಸದಾ ಊರ್ಧ್ವಮುಖವಾಗಿರುವ  ಬೆಂಕಿ ಸತ್ತ್ವದ ಪ್ರತೀಕ. ಇದು ಕಟ್ಟಿಗೆ(ತಮಸ್ಸು)ಯನ್ನು ಸುಟ್ಟು, ಹೊಗೆಯನ್ನು(ರಜಸ್ಸನ್ನು) ಮೀರಿ ಮೂಡಿಬರುವ ಬೆಳಕು. ಪ್ರಪಂಚದಲ್ಲಿ ನಮ್ಮ ಸಾಧನೆ ಕೂಡಾ ಹೀಗೇ ಇರಬೇಕು. ನಾವು ಎಚ್ಚರಿಕೆಯಿಂದ ರಜಸ್ಸು-ತಮಸ್ಸನ್ನು ಮೀರಿ ಸತ್ತ್ವದಲ್ಲೇ ಮನಸ್ಸು ನಿಲ್ಲುವಂತೆ ಪ್ರಯತ್ನಮಾಡಿ ಸಾಧನೆ ಮಾಡಿದರೆ ಭಗವಂತನ ದರ್ಶನ ಸಾಧ್ಯವಾಗುತ್ತದೆ.

No comments:

Post a Comment