Saturday, January 5, 2013

Shrimad BhAgavata in Kannada -Skandha-01 -Ch-02(04)


ವದಂತಿ ತತ್ ತತ್ತ್ವವಿದಸ್ತತ್ತ್ವಂ ಯಜ್ಜ್ಞಾನಮದ್ವಯಮ್ ।
ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ                         ॥೧೧॥

ಸತ್ತಾಮಾತ್ರಂ ತು ಯತ್ಕಿಂಚಿತ್ ಸದಸಚ್ಚಾವಿಶೇಷಣಮ್
ಉಭಾಭ್ಯಾಂ ಭಾಷ್ಯತೇ ಸಾಕ್ಷಾದ್ ಭಗವಾನ್ ಕೇವಲಃ ಸ್ಮೃತಃ   ॥೧೨॥

ಎಲ್ಲಕ್ಕಿಂತಲೂ ಹಿರಿದಾದ, ಸರಿಸಾಟಿ ಇಲ್ಲದ(ಅದ್ವಯಮ್=ಸಮಾನನಿಲ್ಲದ ಮತ್ತು ಉತ್ತಮನಿಲ್ಲದ), ಸ್ವತಂತ್ರನಾದ ಭಗವಂತನನ್ನೇ ತತ್ತ್ವಜ್ಞಾನಿಗಳು ‘ತತ್ತ್ವ’ ಎಂದು ಕರೆಯುತ್ತಾರೆ. ಇಂತಹ ಭಗವಂತನನ್ನು ಬ್ರಹ್ಮ, ಪರಂಬ್ರಹ್ಮ, ಆತ್ಮ, ಪರಮಾತ್ಮ, ಭಗಃ, ಭಗವಾನ್ ಇತ್ಯಾದಿ ಗುಣವಾಚಕ ನಾಮಗಳಿಂದ ಕರೆಯುತ್ತಾರೆ.  ತತ್ತ್ವ ಎಂದರೆ: ಹಿಂದೆ ಹೇಗಿತ್ತೋ ಹಾಗೇ ಎಂದೆಂದೂ ಇರುವಂತಹದ್ದು. ನಿರ್ವೀಕಾರವಾಗಿ ಎಲ್ಲಾ ಕಾಲದಲ್ಲೂ ಸದಾ ಏಕರೂಪವಾಗಿರುವ ತತ್ತ್ವ ಭಗವಂತನೊಬ್ಬನೆ. ಇಂತಹ ಭಗವಂತನನ್ನು ಅರಿಯುವುದಕ್ಕಾಗಿಯೇ ಎಲ್ಲಾ ಅನುಷ್ಠಾನಗಳಿರುವುದು.
ಭಗವಂತ ‘ಸತ್ತಾಮಾತ್ರಮ್’. ಅಂದರೆ  ಅವನು ಆನಂದಸ್ವರೂಪ(ನಂದತಿ) ಮತ್ತು ನಮಗೆಲ್ಲಾ ಆನಂದ ಕೊಡುವವನು(ನಂದಯತಿ). ಇಂತಹ ಸಚ್ಚಿದಾನಂದಸ್ವರೂಪನಾದ, ಲೋಕವಿಲಕ್ಷಣನಾದ(ಯತ್ ಕಿಂಚಿತ್) ಭಗವಂತನನ್ನು ಲೋಕದ ಅನುಭವದಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಮ್ಮ  ಜ್ಞಾನ ‘ಪ್ರಪಂಚವಿಶಿಷ್ಟವಾದ’ ಜ್ಞಾನವಾದರೆ, ಭಗವಂತನ ಜ್ಞಾನ ತಾನೇ ತಾನಾದ ‘ಅಖಂಡ-ಅರಿವು’. ಹೊರಗಿನ ಪ್ರಪಂಚ ಭಗವಂತನ ಜ್ಞಾನದಲ್ಲಿ ಗೋಚರವಾದರೂ ಸಹ, ಅದು ಅವನ ಜ್ಞಾನಕ್ಕೆ ಅಂಟಿಕೊಂಡಿಲ್ಲ. ಆತ ಯಾವ ದೋಷದ ಸ್ಪರ್ಶವೂ ಇಲ್ಲದ, ಜ್ಞಾನಾನಂದಪೂರ್ಣ ಪರತತ್ತ್ವ.  ಹೀಗಾಗಿ ಎಲ್ಲಾ ಜ್ಞಾನಿಗಳೂ ಕೂಡಾ ಭಗವಂತನನ್ನು ಧ್ಯಾನದಲ್ಲಿ ಕಾಣುವ ಪ್ರಯತ್ನ ಮಾಡುತ್ತಾರೆ.

ತಚ್ಛ್ರದ್ದಧಾನಾ ಮುನಯೋ ಜ್ಞಾನವೈರಾಗ್ಯಯುಕ್ತಯಾ ।
ಪಶ್ಯಂತ್ಯಾತ್ಮನಿ ಚಾತ್ಮಾನಂ ಭಕ್ತ್ಯಾ ಶ್ರುತಿಗೃಹೀತಯಾ             ॥೧೩॥

“ಆಸ್ತಿಕ್ಯಪ್ರಜ್ಞೆಯುಳ್ಳ ಋಷಿ-ಮುನಿಗಳು ಜ್ಞಾನ-ಭಕ್ತಿ-ವೈರಾಗ್ಯವನ್ನು ಬೆಳೆಸಿಕೊಂಡು ಭಗವಂತನನ್ನು ಕಂಡರು” ಎನ್ನುತ್ತಾರೆ ಸೂತರು. ಈ ಹಿಂದೆ ಹೇಳಿದಂತೆ: ಭಗವಂತನ ಅರಿವೇ ಜ್ಞಾನ; ಆ ಅರಿವಿನಿಂದ ಈ ಪ್ರಪಂಚದ ಸೀಮಿತತೆಯನ್ನು ತಿಳಿದಾಗ ಬರುವ ಮಾನಸಿಕ ಸ್ಥಿತಿಯೇ-ವೈರಾಗ್ಯ; ನಿಷ್ಕಾರಣವಾದ ಭಗವಂತನ ಬಗೆಗಿನ ಪ್ರೀತಿಯೇ-ಭಕ್ತಿ. ಇಂತಹ  ಜ್ಞಾನ-ಭಕ್ತಿ-ವೈರಾಗ್ಯ ಶಾಸ್ತ್ರ ಗ್ರಹಣದಿಂದ ಬರುತ್ತದೆ. ಮೇಲಿನ ಶ್ಲೋಕದಲ್ಲಿ ‘ಶ್ರುತಿಗೃಹೀತಯಾ’ ಎಂದಿದ್ದಾರೆ. ಇಲ್ಲಿ ‘ಶ್ರುತಿ’ ಎಂದರೆ ಯಾರ ಕೃತಿಯೂ ಅಲ್ಲದ ವೇದಗಳು. ವೇದಗಳಿಗೆ ಅನುಗುಣವಾಗಿ ನಾವು ಅನುಸಂಧಾನ ಮಾಡಿದರೆ, ಅದರಿಂದ ಭಗವಂತನ ಅರಿವು ಗಟ್ಟಿಗೊಳ್ಳುತ್ತದೆ ಮತ್ತು ಮಹಾತ್ಮ್ಯಜ್ಞಾನ ಬೆಳೆಯುತ್ತದೆ. ಇಂತಹ ಜ್ಞಾನದಿಂದ ಬೆಳೆಯುವ ಭಕ್ತಿ ನಿಜವಾದ ಭಕ್ತಿ. ವೇದವನ್ನು ಗುರುಮುಖದಲ್ಲಿ ಶ್ರವಣಮಾಡಿ ಬೆಳೆದ ಜ್ಞಾನ-ಭಕ್ತಿ-ವೈರಾಗ್ಯದಿಂದ, ಋಷಿ-ಮುನಿಗಳು ಧ್ಯಾನದಲ್ಲಿ ಭಗವಂತನನ್ನು ಕಾಣುತ್ತಾರೆ.
ಇಲ್ಲಿ ಋಷಿ-ಮುನಿಗಳು “ಆ ಆತ್ಮನನ್ನು-ಈ ಆತ್ಮನಲ್ಲಿ ಕಂಡರು” ಎಂದಿದ್ದಾರೆ. ಭಗವಂತನನ್ನು ಆತ್ಮದಲ್ಲಿ ಕಾಣುವುದು ಎಂದರೆ: ಮೊದಲು ಬ್ರಹ್ಮಾಂಡದಲ್ಲಿರುವ ಭಗವಂತನನ್ನು ಪಿಂಡಾಂಡದಲ್ಲಿ(ದೇಹದಲ್ಲಿ) ಕಾಣುವುದು. ನಂತರ ಹೃದಯದಲ್ಲಿ ಭಗವಂತನನ್ನು ಕಾಣುವುದು. ಆನಂತರ ಮನಸ್ಸ-ಬುದ್ಧಿ-ಚಿತ್ತದಲ್ಲಿ ಭಗವಂತನ ದರ್ಶನ. ನಂತರ ಜೀವಕಲಾಭಿಮಾನಿ ಬ್ರಹ್ಮ-ವಾಯುವಿನಲ್ಲಿ ಮತ್ತು ಜೀವಸ್ವರೂಪದಲ್ಲಿ ಭಗವಂತನ ದರ್ಶನ.

ತಸ್ಮಾದೇಕೇನ ಮನಸಾ ಭಗವಾನ್ ಸಾತ್ವತಾಂ ಪತಿಃ ।
ಶ್ರೋತವ್ಯಃ ಕೀರ್ತಿತವ್ಯಶ್ಚ ಧ್ಯೇಯಃ ಪೂಜ್ಯಶ್ಚ ನಿತ್ಯದಾ                         ॥೧೫॥

ಭಗವಂತನ ಅಂತಃದರ್ಶನಕ್ಕಾಗಿ ನಮ್ಮ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತಾ ಹೇಳುತ್ತಾರೆ: “ಗಳಿಗೆಗೊಂದು ಬುದ್ಧಿ ಮಾಡಬೇಡ; ಸ್ಥಿರವಾದ, ಏಕಾಗ್ರ ಮನಸ್ಸಿನಿಂದ ಭಗವಂತನ ಕಡೆಗೆ ದೃಷ್ಟಿಹರಿಯಿಸು; ಒಂದೇ ಮನಸ್ಸಿನಿಂದ ನಿರ್ಧಾರ ಮಾಡು; ಮನಸ್ಸು ಚಂಚಲವಾಗದೇ ಒಂದೇ ಕಡೆ ಸ್ಥಿರವಾಗಿ ನಿಲ್ಲುವಂತೆ ನೋಡಿಕೋ” ಎಂದು.
ಇಲ್ಲಿ ಮನಸ್ಸು ಚಂಚಲವಾಗದಿರಲಿ  ಎಂದಿದ್ದಾರೆ. ಆದರೆ ಇದು ಬಹಳ ಕಷ್ಟ. ಏಕೆಂದರೆ ಮನಸ್ಸಿನ ಸ್ವಭಾವವೇ ಚಂಚಲ. ಅದು ಸುಲಭವಾಗಿ ಏಕಾಗ್ರವಾಗುವುದಿಲ್ಲ. ಅದನ್ನು ಸ್ಥಿರಗೊಳಿಸಬೇಕಾದರೆ ನಾವು ಮನಸ್ಸಿನ ಒಳಪದರವಾದ ಬುದ್ಧಿಯನ್ನು ಬಳಸಿ ಅಲ್ಲಿಂದ ಚಿತ್ತಕ್ಕೆ ಮತ್ತು ಚಿತ್ತದಿಂದ ಚೇತನಕ್ಕೆ ಹೋಗಬೇಕು. ಆಗ ಮನಸ್ಸು ಏಕಾಗ್ರವಾಗುತ್ತದೆ. ಈ ಏಕಾಗ್ರತೆಯಲ್ಲಿ ‘ಸಾತ್ವತಾಂಪತಿಃ’  ಶ್ರೀಕೃಷ್ಣನನ್ನು ಕಾಣಬೇಕು.
ನಿರಂತರ ಭಗವಂತನ ಬಗೆಗೆ ಕೇಳಬೇಕು. ಭಗವಂತನ ಬಗೆಗೆ ಚರ್ಚಿಸಬೇಕು. ತಿಳಿದವರು ಹೇಳುವುದನ್ನು ಕೇಳಬೇಕು. ಯಾರ ಮಾತನ್ನೂ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಜೀವನಕ್ಕೆ ಹೊಸ ತಿರುವನ್ನು ನೀಡುವ ಮಾತು ಒಂದು ಮಗುವಿನಿಂದಲೂ ಬರಬಹುದು. ಜ್ಞಾನದ ಮೊಟ್ಟೆ ಎಲ್ಲಿದೆ ಎನ್ನುವುದು ನಮಗೆ ತಿಳಿದಿಲ್ಲ. ಹಾಗಾಗಿ ನಿರಂತರ ಶ್ರವಣ-ಕೀರ್ತನ ನಡೆಯುತ್ತಿರಬೇಕು.
ಮಾತಿಗೆ ಮೊದಲು ಮೌನ ಬೇಕು. ಅದಕ್ಕಾಗಿ ಧ್ಯಾನ ಬಹಳ ಮುಖ್ಯ. ಆದರೆ ಕೇವಲ ಅಂತರಂಗ ಪ್ರಪಂಚದಲ್ಲೇ ನಿಲ್ಲದೆ, ಬಾಹ್ಯ ಕರ್ಮಾದಿಗಳನ್ನೂ ತಪ್ಪದೆ ಮಾಡಬೇಕು. ಏಕೆಂದರೆ ಇದು ಸಾಮಾಜಿಕ ಬದ್ಧತೆ. ನಮ್ಮನ್ನು ಅನುಸರಿಸುವ ಜನಾಂಗದ ಮಾರ್ಗದರ್ಶನಕ್ಕಾಗಿ ಈ ನಡೆಯೂ ಅಧ್ಯಾತ್ಮದಲ್ಲಿ ಅತ್ಯಗತ್ಯ. ಹೀಗೆ ಭಗವಂತನ ಪೂಜೆ ನಿತ್ಯ ನಡೆಯಬೇಕು.  

No comments:

Post a Comment