Sunday, January 6, 2013

Shrimad BhAgavata in Kannada -Skandha-01 -Ch-02(05)


ಶುಶ್ರೂಷೋಃ ಶ್ರದ್ದಧಾನಸ್ಯ ವಾಸುದೇವಕಥಾರತಿಃ  ।
ಸ್ಯಾನ್ಮಹತ್ಸೇವಯಾ ವಿಪ್ರಾಃ ಪುಣ್ಯತೀರ್ಥನಿಷೇವಣಾತ್            ॥೧೭॥

ಇಂದು ಸಾಮಾನ್ಯವಾಗಿ ಭಗವಂತನಲ್ಲಿ ಶ್ರದ್ಧೆಯುಳ್ಳ ಹೆಚ್ಚಿನವರನ್ನು ಕಾಡುವ ಒಂದು ಸರ್ವೇಸಾಮಾನ್ಯ ಸಮಸ್ಯೆ ಏನೆಂದರೆ: ಶಾಸ್ತ್ರಶ್ರವಣ ಮಾಡಬೇಕು, ಭಗವಂತನ ಕುರಿತು ಕೇಳಬೇಕು ಎನ್ನುವ ಬಯಕೆ ಇರುತ್ತದೆ, ಆದರೆ  ಕೇಳುವಾಗ ಆಸಕ್ತಿ ಬರುವುದಿಲ್ಲ! ಈ ರೀತಿ ಸಮಸ್ಯೆ ಇದ್ದಾಗ ಹೇಗೆ ಆಸಕ್ತಿ ಬೆಳೆಸಿಕೊಳ್ಳುವುದು ಎನ್ನುವುದು ಇಲ್ಲಿರುವ ಪ್ರಶ್ನೆ. ಇದು ಬಹಳ ಮಹತ್ವವಾದ ಪ್ರಶ್ನೆ. ಈ ಪ್ರಶ್ನೆಗೆ ಮೇಲಿನ ಶ್ಲೋಕದಲ್ಲಿ ಉತ್ತರವಿದೆ.  ನಮಗೆ ತಿಳಿದಂತೆ ನಮ್ಮ ಮನಸ್ಸಿಗೆ ಸ್ವಂತ ನಿರ್ಧಾರವಿಲ್ಲ. ಅದು ನಾವು ಯಾವುದನ್ನು ತರಬೇತಿ ಮಾಡಿದೆವೋ ಅದನ್ನು ಮೆಚ್ಚಿಕೊಳ್ಳುತ್ತದೆ. ಹೀಗಾಗಿ ಮನಸ್ಸಿನಲ್ಲಿ ಆಸಕ್ತಿ ಹುಟ್ಟಿಸಬೇಕಾದರೆ ನಿರಂತರ ಶ್ರವಣ ಅಗತ್ಯ. ಕೇಳಿ-ಕೇಳಿಯೇ ಆಸಕ್ತಿ ಹುಟ್ಟಬೇಕು. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಕೆಲವೊಮ್ಮೆ  ಕೇಳುವುದರಿಂದಲೇ  ವೇದಾಂತ ಬೇಡ ಅನಿಸಬಹುದು! ಇದು ಬಹಳ ಅಪಾಯಕಾರಿ. ಅದಕ್ಕಾಗಿ ಇಲ್ಲಿ ಹೇಳುತ್ತಾರೆ: “ಸ್ಯಾನ್ಮಹತ್ಸೇವಯಾ ವಿಪ್ರಾಃ ಪುಣ್ಯತೀರ್ಥನಿಷೇವಣಾತ್” ಎಂದು. ಅಂದರೆ ನಮ್ಮಲ್ಲಿ ನಿರಂತರ ಆಸಕ್ತಿ ಬೆಳೆಯಲಿಕ್ಕಾಗಿ ನಾವು ಪುಣ್ಯತೀರ್ಥಗಳ ಸ್ನಾನ-ಪಾನ ಮಾಡಬೇಕು ಮತ್ತು ಮಹಾತ್ಮರಾದ ಜ್ಞಾನಿಗಳ ಸೇವೆ ಮಾಡಬೇಕು. ಈ ರೀತಿ ಮಾಡುವುದರಿಂದ ಭಗವಂತನ ಬಗೆಗೆ ಮತ್ತು ಭಗವಂತನ ಕಥೆಯ ಬಗ್ಗೆ ಆಸಕ್ತಿ, ಅಭಿರುಚಿ ಹುಟ್ಟುತ್ತದೆ.
ಇಲ್ಲಿ ತೀರ್ಥ ಎಂದರೆ ನದಿಗಳೂ ಹೌದು, ಶಾಸ್ತ್ರಗಳೂ ಹೌದು. ಅಷ್ಟೇ ಅಲ್ಲ, ದೇವಸ್ಥಾನಗಳಲ್ಲಿ ಕೊಡುವ ಪುಣ್ಯದ್ರವ ಕೂಡಾ ತೀರ್ಥ. ಪುಣ್ಯನದಿಗಳಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಕೇವಲ ನಮ್ಮ ಬಾಹ್ಯ ಕೊಳೆ ಮಾತ್ರ ಹೋಗುವುದಲ್ಲ, ನಮ್ಮ ಮನಸ್ಸಿನ ಮಲೀನತೆಯನ್ನು ತೊಳೆದು ಅಲ್ಲಿ ಭಗವಂತನ ಬಗೆಗೆ ಆಸಕ್ತಿ ಹುಟ್ಟಿಸುವ ಅಪೂರ್ವ ಶಕ್ತಿ ತೀರ್ಥದಲ್ಲಿರುವ ಸಾತ್ತ್ವಿಕ ಕಂಪನದಲ್ಲಿದೆ.

ಶೃಣ್ವತಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ ।
ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್     ॥೧೮॥

ಭಗವಂತನ ಕೀರ್ತನ, ಕಥಾಶ್ರವಣ ಎಲ್ಲಿ ನಡೆಯುತ್ತದೋ ಅಲ್ಲಿ ಭಗವಂತನ ಸನ್ನಿಧಾನವಿರುತ್ತದೆ. ಯಾರ ಶ್ರವಣ ಕೀರ್ತನದಿಂದ ನಾವು ಪಾವನರಾಗುತ್ತೇವೋ ಅಂತಹ ‘ಕೃಷ್ಣ’ ಬಂದು ನಮ್ಮ ಹೃದಯದಲ್ಲಿ ನೆಲೆಸಿಬಿಡುತ್ತಾನೆ. ಸಜ್ಜನರ ಪ್ರಿಯ ಸಖನಾದ ಭಗವಂತ ನಮ್ಮೊಳಗಿದ್ದು, ನಮ್ಮೊಳಗಿನ ಕೊಳೆಯನ್ನು ಸ್ವಚ್ಛಗೊಳಿಸುತ್ತಾನೆ!  

ನಷ್ಟಪ್ರಾಯೇಷ್ವಭದ್ರೇಷು ನಿತ್ಯಂ ಭಾಗವತಸೇವಯಾ ।
ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ                          ॥೧೯॥
                                                            
ಭಗವಂತನ ಕಥಾಶ್ರವಣ, ಕೀರ್ತನ ಮತ್ತು ಭಗವದ್ಭಕ್ತರ ಸೇವೆಯಿಂದ, ಎಲ್ಲಾ  ಅಭದ್ರ-ಅಮಂಗಲಗಳೂ ತೊಳೆದುಹೋಗುತ್ತವೆ. ಭಾಗವತ ಗ್ರಂಥದ ನಿರಂತರ ಸೇವನೆಯಿಂದ, ಭಗವಂತ ಹೃದಯದಲ್ಲಿ ಸನ್ನಿಹಿತನಾಗುವುದರಿಂದ, ನಾವು ನಮ್ಮೆಲ್ಲಾ ಕೊಳೆಗಳನ್ನು ತೊಳೆದುಕೊಳ್ಳುತ್ತೇವೆ ಮತ್ತು ಅದರಿಂದ ನೈಷ್ಠಿಕ(ಅಚಲ) ಭಕ್ತಿ ಬೆಳೆಯುತ್ತದೆ. ಮನಸ್ಸು ಅಛೇದ್ಯ-ಅಭೇದ್ಯವಾಗಿ ಭಗವಂತನಲ್ಲಿ ಸ್ಥಿರಗೊಳ್ಳುತ್ತದೆ.

ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚ ಯೇ ।
ಚೇತ ಏತೈರನಾವಿದ್ಧಂ ಸ್ಥಿತಂ ಸತ್ತ್ವೇ ಪ್ರಸೀದತಿ                     ॥೨೦॥

ಮನಸ್ಸು ಸ್ವಚ್ಛವಾದಾಗ ಮನಸ್ಸಿನಲ್ಲಿರುವ ರಜಸ್ಸು-ತಮಸ್ಸು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ರಜಸ್ಸು ತಮಸ್ಸಿನಿಂದಾಗಿ ಬರುವ ಮಾನಸಿಕ ವಿಕಾರಗಳಾದ ಕಾಮ-ಕ್ರೋಧ-ಲೋಭಗಳು ಮನಸ್ಸಿಗೆ ಅಂಟುವುದಿಲ್ಲ. ಮನಸ್ಸು ಸ್ಥಿರವಾಗಿ ಸತ್ತ್ವಗುಣದಲ್ಲಿ/ಭಗವಂತನಲ್ಲಿ ನೆಲೆಸಿಬಿಡುತ್ತದೆ. ನಮಗೆ ಒಮ್ಮೆ ಈ ಸತ್ತ್ವವಾದ ಬೆಳಕಿನ ಅನುಭವವಾದಾಗ, ಮುಂದೆಂದೂ ರಜಸ್ಸು-ತಮಸ್ಸಿನ ಕತ್ತಲೆ ಬೇಡವೇ ಬೇಡ ಎನಿಸುತ್ತದೆ.

ಏವಂ ಪ್ರಸನ್ನಮನಸೋ ಭಗವದ್ಭಕ್ತಿಯೋಗತಃ ।
ಭಗವತ್ತತ್ತ್ವವಿಜ್ಞಾನಂ ಮುಕ್ತಸಂಗಸ್ಯ ಜಾಯತೇ                      ॥೨೧॥

ಮನಸ್ಸು ಪ್ರಸನ್ನವಾದಾಗ ನಮ್ಮ ಮುಖ ಅರಳುತ್ತದೆ.  ಈ ರೀತಿ ಪ್ರಸನ್ನಚಿತ್ತರಾದವರನ್ನು ನೋಡುವುದೂ ಒಂದು ಆನಂದದ ಅನುಭವ. ಪ್ರಸನ್ನವಾದ ಮನಸ್ಸಿಗೆ ಭಗವದ್ ತತ್ತ್ವದ ಅರಿವು ಉಂಟಾಗುತ್ತದೆ. ಜ್ಞಾನದಿಂದ ಭಕ್ತಿ ಮತ್ತು ಭಕ್ತಿಯಿಂದ ವಿಶಿಷ್ಠಜ್ಞಾನ. ಈ ವಿಶಿಷ್ಠಜ್ಞಾನವೇ ಭಗವಂತನ ಸಂಗ-ಸಾಧನವಾದ ಮೊಕ್ಷಮಾರ್ಗ.

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ ।
ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ              ॥೨೨॥

ಭಗವಂತನನ್ನು ನಮ್ಮ ಅಂತರಂಗದಲ್ಲಿ ಹೇಗೆ ಕಾಣಬೇಕು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಭಾಗವತದಲ್ಲಿನ ಈ ಶ್ಲೋಕ ವೇದದಲ್ಲಿಯೂ ಬಂದಿದೆ. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ ||೨-೨-೯||

ವೇದದಲ್ಲಿ  “ತಸ್ಮಿನ್ ದೃಷ್ಟೇ ಪರಾವರೇ” ಎಂದರೆ ಇಲ್ಲಿ “ದೃಷ್ಟ ಏವಾತ್ಮನೀಶ್ವರೇ” ಎಂದಿದ್ದಾರೆ. ನಾವು ನಮ್ಮ ಜೀವಸ್ವರೂಪದಲ್ಲಿ ಭಗವಂತನನ್ನು ಕಾಣಬೇಕು. ನಮ್ಮೊಳಗೆ ಬಿಂಬರೂಪನಾಗಿರುವ ನಮ್ಮ ಸ್ವಾಮಿಯನ್ನು ನಾವು ‘ಆತ್ಮಾ’ ಎಂದು ಉಪಾಸನೆ ಮಾಡಬೇಕು. ಇದನ್ನೇ ಬ್ರಹ್ಮಸೂತ್ರದಲ್ಲಿ ಈ ರೀತಿ ಹೇಳಲಾಗಿದೆ: “ಓಂ ಆತ್ಮೇತಿ ತೋಪಗಚ್ಚಂತಿ ಗ್ರಾಹಯಂತಿ ಚ ಓಂ  ||೩-೪೮೭ ||” ಎಂದು.  ಶ್ರುತಿಗಳಲ್ಲಿ ಹೇಳುವಂತೆ: “ಆತ್ಮಾ ವಾSರೇ ದೃಷ್ಟವ್ಯಃ ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯಃ”. ಇಲ್ಲಿ ‘ಆತ್ಮಾ’ ಎಂದರೆ ನಮ್ಮೊಳಗಿದ್ದು ನಮ್ಮನ್ನು ನಿಯಮಿಸುವ ಸರ್ವಶ್ರೇಷ್ಠವಸ್ತು; ನಮ್ಮೆಲ್ಲರ ಸ್ವಾಮಿ ಭಗವಂತ. ಜಗತ್ತಿನ ಎಲ್ಲಾ ಈಶ ಶಕ್ತಿಗಳಿಗೂ(ಬ್ರಹ್ಮಾದಿ ಸಕಲ ದೇವತೆಗಳಿಗೂ) ವರನಾದ, ಎಲ್ಲರನ್ನೂ ನಿಯಂತ್ರಿಸುವ ಪರಮೇಶ್ವರ ಭಗವಂತ ನಮ್ಮೆಲ್ಲರ ಅಂತರ್ಯಾಮಿ ಎಂದು ತಿಳಿದು ನಾವು ಉಪಾಸನೆ ಮಾಡಬೇಕು.
ಇಂತಹ ಬಿಂಬರೂಪಿ ಭಗವಂತನನ್ನು ನಾವು ನಮ್ಮ ಅಂತರಂಗದಲ್ಲಿ ಕಂಡಾಗ ನಮ್ಮ ಹೃದಯದಲ್ಲಿನ ಅಜ್ಞಾನದ ಗಂಟು ಒಡೆದು ಹೋಗಿ, ನಮ್ಮೆಲ್ಲಾ ಸಂಶಯಗಳೂ ಪೂರ್ಣವಾಗಿ ಪರಿಹಾರವಾಗುತ್ತದೆ. ಭಗವಂತನ ಅಂತರಂಗ ದರ್ಶನದಿಂದಾಗಿ, ಪ್ರರಾಬ್ಧಕರ್ಮವನ್ನು ಹೊರತುಪಡಿಸಿ ಇತರ ಎಲ್ಲಾ ಕರ್ಮಗಳು ನಾಶವಾಗಿ, ಕರ್ಮದ ಲೇಪದಿಂದ ತೊಡೆದುಕೊಂಡು ಜೀವ ಭಗವಂತನಲ್ಲಿ ನೆಲೆಗೊಳ್ಳುತ್ತದೆ.  

No comments:

Post a Comment