Tuesday, January 22, 2013

Shrimad BhAgavata in Kannada -Skandha-01-Ch-03(04)


ರೂಪಂ ಸ ಜಗೃಹೇ ಮಾತ್ಸ್ಯಂ ಚಾಕ್ಷುಷಾಂತರಸಂಪ್ಲವೇ          
ನಾವ್ಯಾರೋಪ್ಯ ಮಹೀಮಯ್ಯಾಮಪಾದ್ ವೈವಸ್ವತಂ ಮನುಮ್ ೧೫

ವೈವಸ್ವತ ಮನ್ವಂತರದ ಮೊದಲನೇ ಅವತಾರ ದಶಾವತಾರಗಳಲ್ಲಿ ಒಂದಾದ ಮತ್ಸ್ಯಾವತಾರ. ಈ ಅವತಾರ ನಡೆದದ್ದು ಚಾಕ್ಷುಷ ಮತ್ತು ವೈವಸ್ವತ ಮನ್ವಂತರದ ಸಂಧಿಕಾಲದಲ್ಲಿ. ನಮಗೆ ತಿಳಿದಂತೆ ಒಂದೊಂದು ಮನ್ವಂತರ ಮುಗಿದಾಗಲೂ ಒಂದು ಚಿಕ್ಕ ಪ್ರಳಯವಾಗುತ್ತದೆ. ಆ ಪ್ರಳಯದ ಅವಧಿ ಸುಮಾರು ೧೪೦೦ ರಿಂದ ೨೦೦೦ ವರ್ಷಗಳು. ಈ ಪ್ರಳಯಕಾಲದಲ್ಲಿ ಭೂಮಿಯ ಮೇಲಿನ ಬಹುತೇಕ ನಾಗರೀಕತೆ ನಾಶವಾಗುತ್ತದೆ. ಈ ಕಾಲದಲ್ಲಿ ಬದುಕುಳಿದ ಜನಾಂಗದಿಂದ ಮತ್ತೆ ಮರಳಿ ನಾಗರೀಕತೆ ಬೆಳೆಯುತ್ತದೆ. ಚಾಕ್ಷುಷ ಮತ್ತು ವೈವಸ್ವತ ಮನ್ವತರದ ಸಂಧಿಕಾಲದಲ್ಲಿನ ಪ್ರಳಯದಲ್ಲಿ ವೈವಸ್ವತ ಮನುವನ್ನು ರಕ್ಷಿಸುವುದಕ್ಕೋಸ್ಕರ ಕೋಡಿರುವ ಮೀನಿನ ರೂಪದಲ್ಲಿ ಭಗವಂತ ಕಾಣಿಸಿಕೊಂಡು, ಭೂಮಿಯಿಂದ ನಿರ್ಮಾಣಗೊಂಡ ದೋಣಿಯಲ್ಲಿ ಮನುವನ್ನು ಕುಳ್ಳಿರಿಸಿ ರಕ್ಷಿಸಿದ ಅವತಾರವಿದು. ಹೀಗೆ ಮುಂದಿನ ಸಂವತ್ಸರದ ಅಧಿಪತಿಯಾಗುವಂತೆ ಅವನನ್ನು ಉಳಿಸಿ, ಅವನಿಗೆ ಪೂರ್ಣಪ್ರಮಾಣದಲ್ಲಿ ತತ್ತ್ವ ಬೋಧನೆ ಮಾಡಿ ರಕ್ಷೆ ಕೊಟ್ಟ ಭಗವಂತನ ಹತ್ತನೇ ಅವತಾರ-ಮತ್ಸ್ಯಾವತಾರ.

ಸುರಾಸುರಾಣಾಮುದಧಿಂ ಮಥ್ನತಾಂ ಮಂದರಾಚಲಮ್         
ದಧ್ರೇ ಕಮಠರೂಪೇಣ ಪೃಷ್ಠ ಏಕಾದಶಂ ವಿಭುಃ                       ೧೬

ಭಗವಂತನ ಅವತಾರ ಮಾಲಿಕೆಯಲ್ಲಿ ಹನ್ನೊಂದನೇ ಅವತಾರ ಕೂರ್ಮಾವತಾರ. ದೇವತೆಗಳು ದಾನವರು ಸೇರಿ ಸಮುದ್ರ ಮಥನ ಮಾಡಿದಾಗ ಮಥನಕ್ಕೆ ಕಡಗೋಲಾಗಿ ಬಳಸಿದ ಮಂದರ ಪರ್ವತವನ್ನು, ಅದು ಸಮುದ್ರದಲ್ಲಿ ಮುಳುಗಿ ಹೋಗದಂತೆ ಕೂರ್ಮರೂಪವನ್ನು ತಾಳಿ, ತನ್ನ ಬೆನ್ನಲ್ಲಿ ಹೊತ್ತ  ಅವತಾರವಿದು. 

ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ  
ಅಪಾಯಯತ್ ಸುಧಾಮನ್ಯಾನ್ ಮೋಹಿನ್ಯಾ ಮೋಹಯನ್ ಸ್ತ್ರೀಯಾ     ೧೭

ಸಮುದ್ರ ಮಥನ ಮಾಡುವಾಗ ಮೊದಲು ವಿಷ ಬರುತ್ತದೆ ಹಾಗೂ ಕೊನೆಯಲ್ಲಿ ಅಮೃತವನ್ನು ಹೊತ್ತು ಭಗವಂತ ಧನ್ವಂತರಿ ರೂಪಿಯಾಗಿ ಬರುತ್ತಾನೆ. ಇದು ಭಗವಂತನ ಹನ್ನೆರಡನೇ ಅವತಾರ. ಅಮೃತವನ್ನು ಪಡೆಯಲಿಕ್ಕಾಗಿ ಅಸುರರು ಗದ್ದಲ ಮಾಡಿದಾಗ, ಮೋಹಿನಿ ರೂಪ ತಾಳಿ, ಅಸುರರನ್ನು ಮೋಹಗೊಳಿಸಿ, ದೇವತೆಗಳಿಗೆ ಅಮೃತವನ್ನು ಹಂಚಿದ ಅವತಾರ ಭಗವಂತನ ಹದಿಮೂರನೇ ಅವತಾರ. 
 ಕಾಲಕ್ರಮಕ್ಕನುಗುಣವಾಗಿ ಇಲ್ಲಿ ಸಮುದ್ರಮಥನವನ್ನು ನರಸಿಂಹ ಅವತಾರಕ್ಕೂ ಮೊದಲು ಹೇಳಿರುವುದನ್ನು ಕಾಣುತ್ತೇವೆ. ಇದು ಸ್ವಲ್ಪ ಗೊಂದಲವನ್ನುಂಟುಮಾಡುತ್ತದೆ. ಏಕೆಂದರೆ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಸಮುದ್ರಮಥನ ಕಾಲದಲ್ಲಿ ದೇವತೆಗಳ ವಿರುದ್ಧ ಹೋರಾಡಿದ ಎನ್ನುವ ಕಥೆಯೊಂದಿದೆ. ಆದರೆ ಇಲ್ಲಿ ಪ್ರಹ್ಲಾದ ಹುಟ್ಟುವ ಮೊದಲು ಹಾಗೂ ಮತ್ಸ್ಯಾವತಾರದ ನಂತರ ಸಮುದ್ರಮಥನವನ್ನು ಹೇಳಿದ್ದಾರೆ. ಇದನ್ನು ವಿಶ್ಲೇಷಿಸಿದಾಗ ನಮಗೆ ತಿಳಿಯುವುದೇನೆಂದರೆ: ಇತಿಹಾಸದಲ್ಲಿ ಎರಡು ಸಮುದ್ರಮಥನವನ್ನು ಹೇಳಲಾಗುತ್ತದೆ. ಒಂದು ರೈವತ ಮನ್ವಂತರದಲ್ಲಿ ಹಾಗೂ ಇನ್ನೊಂದು ವೈವಸ್ವತ ಮನ್ವಂತರದಲ್ಲಿ. ಬಲಿ ದೇವತೆಗಳೊಂದಿಗೆ ಹೋರಾಡಿದ ಕಥೆ ರೈವತ ಮನ್ವಂತರಕ್ಕೆ ಸಂಬಂಧಿಸಿದ್ದು. ಆದರೆ ಭಗವಂತನ ಕೂರ್ಮಾವತಾರ ನಡೆದಿರುವುದು ವೈವಸ್ವತ ಮನ್ವಂತರದಲ್ಲಿ. ಆದ್ದರಿಂದ ವೈವಸ್ವತ ಮನ್ವಂತರದಲ್ಲಿ ನಡೆದ ಸಮುದ್ರಮಥನ ಪ್ರಹ್ಲಾದನ ಜನನಕ್ಕಿಂತ ಮೊದಲು ಹಾಗೂ ಮತ್ಯಾವತಾರದ ನಂತರ ನಡೆದ ಘಟನೆ. ಈ ಕಾಲದಲ್ಲಿ ಬಲಿ ದೇವತೆಗಳ ವಿರುದ್ಧ ಹೊರಾಡಿರಲಿಲ್ಲ. ಇನ್ನು ರೈವತ ಮನ್ವಂತರದಲ್ಲಿ ಹೇಗೆ ಬಲಿ ಜನಿಸಿದ್ದ ಎನ್ನುವುದಕ್ಕೆ ಆಚಾರ್ಯರು ಒಂದು ಕಡೆ ಹೇಳುತ್ತಾರೆ: “ಪ್ರತಿ ಮನ್ವಂತರಂ ಪ್ರಾಯಃ ಪ್ರಹ್ಲಾದಾದ್ಯಾಃ ಪ್ರಜಾತಿರೆ” ಎಂದು. ಅಂದರೆ ಪ್ರಹ್ಲಾದನ ಸಂತತಿ ಪ್ರತಿ ಮನ್ವಂತರದಲ್ಲಿ ಹುಟ್ಟುತ್ತಾರೆ ಎಂದರ್ಥ. ಎಲ್ಲವನ್ನೂ ಸಮಷ್ಟಿಯಾಗಿ ನೋಡಿದಾಗ ಇಲ್ಲಿ ಗೊಂದಲವಿಲ್ಲ.

ಚತುರ್ದಶಂ ನಾರಸಿಂಹಂ ಬಿಭ್ರದ್ ದೈತ್ಯೇಂದ್ರಮೂರ್ಜಿತಮ್  
ದದಾರ ಕರಜೈರೂರಾವೇರಕಾನ್  ಕಟಕೃದ್ ಯಥಾ                ೧೮

ಭಗವಂತನ ಹದಿನಾಲ್ಕನೇ ಅವತಾರ ನರಸಿಂಹಾವತಾರ. ನರಸಿಂಹ ಅವತಾರದ ಮೊದಲು ಹಿರಣ್ಯಾಕ್ಷನ ಸಂಹಾರಕ್ಕಾಗಿ ವರಾಹ ಅವತಾರವಾಗಿರುವುದು ನಮಗೆ ತಿಳಿದಿದೆ. ವರಾಹ ಅವತಾರ ವೈವಸ್ವತ ಮನ್ವಂತರದಲ್ಲಿ ನಡೆದ ದಶಾವತಾರದಲ್ಲಿ ಸೇರಿದ ಅವತಾರ. ಆದರೆ ಕಾಲಕ್ರಮಕ್ಕನುಗುಣವಾಗಿ ಸ್ವಾಯಂಭುವ ಮನ್ವಂತರದಲ್ಲಿ ಮೊದಲ ವರಾಹ ಅವತಾರವಾಗಿರುವುದರಿಂದ ಅದನ್ನು ಇಲ್ಲಿ ಪುನಃ ಉಲ್ಲೇಖಿಸಿಲ್ಲ.
ಪ್ರಹ್ಲಾದನಿಗೋಸ್ಕರ ನರಸಿಂಹರೂಪದಲ್ಲಿ ಅವತರಿಸಿ, ಮಹಾಬಲಿಷ್ಠನಾದ ಹಿರಣ್ಯಕಶಿಪುವನ್ನು ತನ್ನ ತೊಡೆಯಮೇಲಿಟ್ಟು, ತನ್ನ ಉಗುರಿನಿಂದ ಬಗೆದು,  ಹುಲ್ಲುಗರಿಯನ್ನು ಕಿತ್ತಂತೆ ಹಿರಣ್ಯಕಶಿಪುವಿನ ಅಸುವನ್ನು ಹೀರಿದ ಅವತಾರವಿದು.

ಪಂಚದಶಂ ವಾಮನಕಂ ಕೃತ್ವಾSಗಾದಧ್ವರಂ ಬಲೇಃ   
ಪದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸ್ತ್ರಿಪಿಷ್ಟಪಮ್              ೧೯

ಪ್ರಹ್ಲಾದನ ಮಗ ವಿರೋಚನ. ಆತನ ಮಗ ಬಲಿ. ಬಲಿಯ ಆಡಳಿತಾವಧಿಯಲ್ಲಿ ಭಗವಂತ ಪುಟ್ಟ ವಾಮನರೂಪಿಯಾಗಿ ಅವತರಿಸಿದ. ಇದು ಭಗವಂತನ ಹದಿನೈದನೇ ಅವತಾರ. ಬಲಿ ನಡೆಸುತ್ತಿದ್ದ ಯಜ್ಞಕ್ಕೆ ಹೋದ ವಾಮನ ಅಲ್ಲಿ ಕೇಳಿದ್ದು ಮೂರು ಹೆಜ್ಜೆ ಭೂಮಿಯನ್ನು. ಆದರೆ ಪಡೆದದ್ದು ಮೂರು ಲೋಕಗಳನ್ನು.

ಅವತಾರೇ ಷೋಡಶಮೇ ಯಚ್ಛನ್ ಬ್ರಹ್ಮದ್ರುಹೋ ನೃಪಾನ್     
ತ್ರಿಃಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್             ೨೦

ಭಗವಂತನ ಹದಿನಾರನೇ ಅವತಾರ ಪರಶುರಾಮ ಅವತಾರ. ಭೂಮಿಯಲ್ಲಿ ಕ್ಷತ್ರ ವಂಶ ಅಧಿಕಾರದ ಉನ್ಮತ್ತತೆಯಿಂದ  ದೂರ್ತರಾಗಿ ದೇಶವನ್ನು ನಾಶಮಾಡುವ ಪರಿಸ್ಥಿತಿಗೆ ತಂದಾಗ,  ವೇದಗಳಿಗೆ ಹಾಗೂ ಜ್ಞಾನಿಗಳಿಗೆ ದ್ರೋಹಮಾಡಿದ ಅಂತಹ ಕೆಟ್ಟ ರಾಜ ಸಂತತಿಯನ್ನು, ಇಪ್ಪತ್ತೊಂದು ಬಾರಿ ಸಂಹಾರಮಾಡಿದ  ವಿಶಿಷ್ಠ ಅವತಾರವಿದು.  

No comments:

Post a Comment