Monday, January 14, 2013

Shrimad BhAgavata in Kannada -Skandha-01 -Ch-02(07)


ಭೇಜಿರೇ ಮುನಯೋSಥಾಗ್ರೇ ಭಗವಂತಮಧೋಕ್ಷಜಮ್ ।
ಸತ್ತ್ವಂ ವಿಶುದ್ಧಂ ಕ್ಷೇಮಾಯ ಕಲ್ಪತೇ ನೇತರಾವಿಹ                  ॥೨೬॥

ಸಾತ್ತ್ವಿಕ ಸ್ವಭಾವದವರು ‘ಅದೋಕ್ಷಜಃ’ ಭಗವಂತನನ್ನು ಉಪಾಸನೆ ಮಾಡಿಯೇ ಉನ್ನತಿಗೇರಿದರು. ವಾಸುದೇವನಲ್ಲಿ ಭಕ್ತಿ ಕೇವಲ ಸಾತ್ತ್ವಿಕ ಸ್ವಭಾವದವರಿಗೆ ಮಾತ್ರ ಹುಟ್ಟುತ್ತದೆ. ಅಂತಹ ಸಾತ್ತ್ವಿಕರ ಮನಸ್ಸು ರಜಸ್ಸು-ತಮಸ್ಸುಗಳಿಂದ ಕಲುಷಿತವಾಗಿರುವುದಿಲ್ಲ ಮತ್ತು ಸತ್ತ್ವ ಗುಣವೇ ಅವರಿಗೆ ಮೊಕ್ಷ ಸಾಧನವಾಗುತ್ತದೆ. ಇವರು ಸತ್ವದ ಮಹತ್ವದಿಂದ , ಸತ್ವದ ನಿಯಾಮಕನಾಗಿರುವ, ಸತ್ವಗುಣವನ್ನು ನಮ್ಮಲ್ಲಿ ಬೆಳೆಸತಕ್ಕಂತಹ ನಾರಾಯಣ ರೂಪವನ್ನು ಉಪಾಸನೆ ಮಾಡುತ್ತಾರೆ. 

ಮುಮುಕ್ಷವೋ ಘೋರಮೂಢಾನ್ ಹಿತ್ವಾ ಭೂತಪತೀನಥ ।
ವಾಸುದೇವಕಲಾಃ ಶಾಂತಾ ಭಜಂತಿ ಹ್ಯನಸೂಯವಃ              ॥೨೭॥

ರಜಸ್ತಮಃಪ್ರಕೃತಯಃ ಸಮಶೀಲಾನ್  ಭಜಂತಿ ವೈ ।
ಪಿತೃಭೂತಪ್ರಜೇಶಾದೀನ್ ಶ್ರೀಯೈಶ್ವರ್ಯಪ್ರಜೇಪ್ಸವಃ             ॥೨೮॥

ಯಾರ ಮೇಲೂ ಅಸೂಯೆ-ದ್ವೇಷಲ್ಲದವರು, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎನ್ನುವ ಖಚಿತ ಅರಿವು ಉಳ್ಳವರು, ಮೊಕ್ಷಸಾಧನೆಯಲ್ಲಿ ತಮಸ್ಸು ಮತ್ತು ರಜಪ್ರವೃತ್ತಕ ರೂಪದಿಂದ ಭಗವಂತನನ್ನು ಉಪಾಸನೆ ಮಾಡುವುದಿಲ್ಲ.  ಘೋರ ರೂಪಗಳು ನಮ್ಮಲ್ಲಿ ಕ್ರೌರ್ಯವನ್ನೂ ಹಾಗೂ ಮೂಢ ರೂಪಗಳು ನಮ್ಮಲ್ಲಿ ಮೌಡ್ಯವನ್ನೂ ಪ್ರಚೋದಿಸುತ್ತವೆ. ಇಂತಹ ಘೋರ ಮತ್ತು ಮೂಢವಾದ ಭೂತ-ಪ್ರೇತ-ಪಿಶಾಚಿ ಪೂಜೆ ಎಂದೂ ನಮ್ಮನ್ನು ಭಗವಂತನತ್ತ ಕೊಂಡೊಯ್ಯುವುದಿಲ್ಲ. ಪರಮ ಪ್ರಸನ್ನವಾದ ಭಗವಂತನ ರೂಪವನ್ನು ನಾವು ಅಂತರಂಗದಲ್ಲಿ ಕಾಣಬೇಕು. “ಭಗವಂತ ಪ್ರಸನ್ನನಾಗಿ ಅನುಗ್ರಹ ದೃಷ್ಟಿಯಿಂದ ಕಣ್ಣರಳಿಸಿ, ಪ್ರೀತಿಯಿಂದ ನನ್ನನ್ನು ನೋಡುತ್ತಿದ್ದಾನೆ.” ಎಂದು ಅವನ ಕಣ್ಣನ್ನು ನಾವು ನಮ್ಮ ಹೃದಯದಲ್ಲಿ ಧ್ಯಾನ ಮಾಡಬೇಕು.
ಕೆಲವರು ಅರ್ಥ-ಕಾಮಕ್ಕಾಗಿ ಪಿತೃದೇವತೆಗಳ ಆರಾಧನೆ ಮಾಡುತ್ತಾರೆ. ಇದಲ್ಲದೆ ಕ್ಷುದ್ರ-ವಿಕೃತ ಉಪಾಸನೆ ಮಾಡುವವರೂ ಇದ್ದಾರೆ. ಇಂತಹ ರಾಜಸ/ತಾಮಸ ಉಪಾಸನೆಯಿಂದ ಬಯಕೆ ಈಡೇರಬಹುದು. ಆದರೆ ಆತ್ಮೋದ್ಧಾರವಿಲ್ಲ.  ಹಾಗಾಗಿ ಇಂತಹ ಕೆಟ್ಟ ಉಪಾಸನೆಯನ್ನು ಬಿಟ್ಟು, ದ್ವೇಷ-ಅಸೂಯೆ ಇಲ್ಲದ, ಸ್ವಚ್ಛ ಮನಸ್ಸಿನಿಂದ, ಸಾತ್ವಿಕ ಉಪಾಸನೆ ಮಾಡಬೇಕು. ಸಾತ್ವಿಕತೆ ಕಲಿಯದೇ ಅಧ್ಯಾತ್ಮವಿಲ್ಲ.    

ನಾರಾಯಣಪರಾ ವೇದಾ ನಾರಾಯಣಪರಾ ಮಖಾಃ ।
ನಾರಾಯಣಪರಾ ಯೋಗಾ ನಾರಾಯಣಪರಾಃ ಕ್ರಿಯಾಃ           ॥೨೯॥

ನಾರಾಯಣಪರಂ ಜ್ಞಾನಂ ನಾರಾಯಣಪರಂ ತಪಃ ।
ನಾರಾಯಣಪರೋ ಧರ್ಮೋ ನಾರಾಯಣಪರಾ ಗತಿಃ              ॥೩೦॥

ಇಲ್ಲಿ ನಾರಾಯಣಪರಾ ವೇದಾಃ ಎಂದಿದ್ದಾರೆ. ಈ ಕುರಿತ ವಿಶ್ಲೇಷಣೆಯನ್ನು ಮಂಗಲ ಪದ್ಯದಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದೇವೆ. ಸಾತ್ತ್ವಿಕರಾದ ಉಪಾಸಕರಿಗೆ ವೇದದ ಯಾವ ಮಂತ್ರವನ್ನು ಓದಿದರೂ ನಾರಾಯಣನ ರೂಪ, ಅವನ ಗುಣಮಹತ್ತ್ವ ಕಾಣಬೇಕು. ನಾವು ಸಮಸ್ತ ವೇದದಲ್ಲೂ ನಾರಾಯಣನನ್ನು ಕಾಣಬೇಕು. ಐತರೇಯ ಅರಣ್ಯಕದಲ್ಲಿ ಹೇಳುವಂತೆ: ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ... ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ  ನಾದಗಳು ಭಗವಂತನನ್ನು ಹೇಳುತ್ತವೆ. ವೇದದಲ್ಲಿನ ಎಲ್ಲಾ ಶಬ್ದಗಳು, ಎಲ್ಲಾ ಅಕ್ಷರಗಳು, ಎಲ್ಲಾ ನಾದಗಳೂ ನಾರಾಯಣ ಪರ. ಎಲ್ಲಾ ದೇವತೆಗಳ ನಾಮ ಧರಿಸಿದವನು ಭಗವಂತ ಮತ್ತು ಎಲ್ಲಾ ದೇವತೆಗಳಿಗೆ ನಾಮವನ್ನು ಕೊಟ್ಟವನು ಭಗವಂತ. ಹಾಗಾಗಿ ಎಲ್ಲಾ ದೇವತೆಗಳ ಹೆಸರೂ ಆ ಭಗವಂತನ ಹೆಸರು.  ನಾರಾಯಣ ಸೂಕ್ತದಲ್ಲಿ ಹೇಳುವಂತೆ:  
ನಾರಾಯಣ ಪರೋ ಜ್ಯೋತಿರಾತ್ಮಾ ನಾರಾಯಣಃ ಪರಃ ।
ನಾರಾಯಣ ಪರಂ ಬ್ರಹ್ಮ ತತ್ತ್ವಂ ನಾರಾಯಣಃ ಪರಃ ।
ನಾರಾಯಣ ಪರೋ ಧ್ಯಾತಾ ಧ್ಯಾನಂ ನಾರಾಯಣಃ ಪರಃ ॥ 
ಯಚ್ಚ ಕಿಂಚಿತ್ ಜಗತ್ ಸರ್ವಂ ದೃಶ್ಯತೇ ಶ್ರೂಯತೇಽಪಿ ವಾ । 
ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ ॥ 
ಸಮಸ್ತ ವೇದಗಳೂ ನಾರಾಯಣನನ್ನು ಹೇಳುತ್ತವೆ. ಈ ಕುರಿತು ಇನ್ನೂ ವಿವರವಾಗಿ ನಾವು ಭಾಗವತದಲ್ಲಿ ಮುಂದೆ ಉದ್ಧವಗೀತೆಯಲ್ಲಿ ಕಾಣಬಹುದು. ಅಲ್ಲಿ ಕೃಷ್ಣ ಹೇಳುತ್ತಾನೆ: “ಮಾಂ ವಿಧತ್ತೇಽಭಿಧತ್ತೇ ಮಾಂ ವಿಕಲ್ಪ್ಯಾಪೋಹ್ಯತೇ ತ್ವಹಂ ।  ಏತಾವಾನ್ಸರ್ವವೇದಾರ್ಥಃ ಶಬ್ದ ಆಸ್ಥಾಯ ಮಾಂ ಭಿದಾಂ”. ಎಂದು.
ನಾರಾಯಣ ಪರಾ ಮಖಾಃ : ಇಲ್ಲಿ ಮಖಾ ಎಂದರೆ ಯಜ್ಞಗಳು. ಎಲ್ಲ ಯಜ್ಞ-ಯಾಗಾದಿಗಳೂ ನಾರಾಯಣನ ಪ್ರೀತಿಗೋಸ್ಕರವೇ ಇರುವಂತಹದ್ದು. ಯಜುರ್ವೇದ ಯಜ್ಞದ ಕುರಿತು ವಿವರಿಸುತ್ತದೆ. ಅಲ್ಲಿ ಕರ್ಮವಾಚಕವಾದ ಏನೇನು ಪದಗಳಿವೆ, ಅವು ಅಂತತಃ ಭಗವಂತನನ್ನು ಹೇಳುತ್ತವೆ. ಉದಾಹರಣೆಗೆ:  “ವಸಂತೇ ವಸಂತೇ ಜ್ಯೋತಿಷಾ ಯಜೇತಾ”: ಇದರ ನೇರ ಅರ್ಥ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎಂದರ್ಥ. ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಅರ್ಥ ಮಾಡಿದಾಗ ಈ ಶ್ಲೋಕ ಭಗವಂತನನ್ನು ಹೇಳುತ್ತದೆ ಎನ್ನುವುದು ತಿಳಿಯುತ್ತದೆ. ಹಾಗೆ ಮಾಡಿದಾಗ: ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎನ್ನುವ ಅರ್ಥವನ್ನು ಕೊಡುತ್ತದೆ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯುಜೇತಾ’ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಈ ಎಲ್ಲಾ ಅರ್ಥಗಳಿಂದ ನೋಡಿದಾಗ, ಮೇಲಿನ ಮಂತ್ರ ಸಂಪೂರ್ಣ ಭಗವದ್ ಪರ ಅರ್ಥವನ್ನು ಕೊಡುತ್ತದೆ.
ನಾರಾಯಣಪರಾ ಯೋಗಾಃ: ವೇದದಲ್ಲಿ ಅನೇಕ ಯೋಗಗಳನ್ನು ಹೇಳಲಾಗಿದೆ. ಉದಾಹರಣೆಗೆ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಇತ್ಯಾದಿ. ಇಲ್ಲಿ ಹೇಳುತ್ತಾರೆ: ಯಾವ ಯೋಗವೇ ಇರಲಿ,  ಅದು ಭಗವಂತನೆಡೆಗೆ ಹೋಗಲು ಇರುವ ಯೋಗವೇ ಹೊರತು ಇನ್ನೇನೂ ಅಲ್ಲಾ ಎಂದು. “ತಸ್ಯ ಬ್ರಹ್ಮಣಿ ಸಂಯೋಗಃ  ಯೋಗ್ಯೇತ ಧೀಯತೇ” ಚಿತ್ತವೃತ್ತಿಗೂ ಭಗವಂತನಿಗೂ ಸಂಯೋಗವಾಗುವುದಕ್ಕೆ ಯೋಗ ಎನ್ನುತ್ತಾರೆ. ಈ ಸಂಯೋಗವಿಲ್ಲದೆ ಯಾವ ಯೋಗವೂ ಇಲ್ಲ. ಯಾವ ಸಾಧನೆಯ ಮಾರ್ಗವೇ ಇರಲಿ, ಅದು ಅಂತತಃ ನಾರಾಯಣನಲ್ಲಿಗೆ ಕೊಂಡೊಯ್ಯಬೇಕು. ಇಲ್ಲದಿದ್ದರೆ ಪೂರ್ಣತೆ ಇಲ್ಲ.
ನಾರಾಯಣಪರಾ ಕ್ರಿಯಾಃ : ಕೇವಲ ಯಜ್ಞ-ಯಾಗಗಳಷ್ಟೇ ಅಲ್ಲ, ನಾವು ಮಾಡುವ ಸಮಸ್ತ ಕರ್ಮಗಳೂ ಕೂಡಾ ಭಗವಂತನ ಪರವಾಗಬೇಕು. ಇದನ್ನೇ ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:
ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್            ॥೯-೨೭॥
ನಾವು ತಿನ್ನುವುದು ಆ ವೈಶ್ವಾನರನಿಗೆ ಆಹುತಿ; ನಡೆಯುವುದು ಆ ಭಗವಂತನಿಗೆ ಪ್ರದಕ್ಷಿಣೆ; ಮಲಗುವುದು ಭಗವಂತನಿಗೆ ಸಾಷ್ಟಾಂಗ ನಮಸ್ಕಾರ; ಮಾತನಾಡುವುದು ಭಗವಂತನ ಕೀರ್ತನೆ. ಹೀಗೆ ಎಲ್ಲವೂ ಭಗವಂತನ ಪೂಜೆಯಾಗಬೇಕು.
ನಾರಾಯಣಪರಂ ಜ್ಞಾನಂ: ಎಲ್ಲಾ ಅರಿವು ಯಾವ ಅರಿವಿಗೆ ಮೆಟ್ಟಿಲೋ ಅದು ಶ್ರೇಷ್ಠವಾದ ಅರಿವು. ಅಧಿಭೂತದ ಅರಿವು, ಅಧ್ಯಾತ್ಮದ ಅರಿವು, ಅಧಿದೈವದ ಅರಿವು, ಅಧಿಯಜ್ಞದ ಅರಿವು, ಕರ್ಮಬ್ರಹ್ಮದ ಅರಿವು, ಇತ್ಯಾದಿ ಅರಿವು ಸಾಧನೆಯ ಒಂದೊಂದು ಮೆಟ್ಟಿಲುಗಳು. ಈ ಕುರಿತು ವಿಸ್ತಾರವಾದ ವಿವರಣೆಯನ್ನು ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಕಾಣಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಾ ಜ್ಞಾನಗಳ ಕೊನೇ ಗುರಿ ಆ ಭಗವಂತ.
ನಾರಾಯಣಪರಂ ತಪಃ : ತಪಸ್ಸು ಅಂದರೆ ಚಿಂತನೆ. ಮನಸ್ಸಿನಿಂದ ಬರುವ ನಿರ್ಧಾರ-ಚಿಂತನೆಗಳೇ ತಪಸ್ಸು. ನಮ್ಮ ಮನಸ್ಸಿನ ಚಿಂತನೆಯ ಕೊನೆ ಆ ಭಗವಂತನಾಗಿರಬೇಕು. ಕಠೋಪನಿಷತ್ತಿನಲ್ಲಿ ಹೇಳುವಂತೆ:  “ತಪಾಂಸಿ ಸರ್ವಾಣಿ ಚ ಯದ್ವದಂತಿ”(೧-೨-೧೫). ಎಲ್ಲಾ ತರ್ಕಗಳು ಎಲ್ಲಿ ಕೊನೆಯಾಗುತ್ತವೋ ಅದು ಭಗವಂತ.
ನಾರಾಯಣಪರೋ ಧರ್ಮಃ : ಈ ಹಿಂದೆ ವಿಶ್ಲೇಷಿಸಿಸಿದಂತೆ ಯಾವುದು ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುತ್ತದೋ ಅದು ಧರ್ಮ. ಯಾವ ನಡೆಯಲ್ಲಿ ಭಗವಂತನ ಕಡೆಗೆ ನಮ್ಮ ಮನಸ್ಸು ಹರಿಯುತ್ತದೋ ಅದೇ ನಮ್ಮ ಧರ್ಮ. ಎಲ್ಲಾ ಧರ್ಮಗಳಿರುವುದು ಭಗವಂತನನ್ನು ತಿಳಿಯುವುದಕ್ಕೋಸ್ಕರ ಹೊರತು ಧರ್ಮಕ್ಕೋಸ್ಕರ ಧರ್ಮವಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ: ಧರ್ಮಕ್ಕೋಸ್ಕರ ಧರ್ಮವಲ್ಲ,  ಜ್ಞಾನಕ್ಕೋಸ್ಕರ ಜ್ಞಾನವಲ್ಲ, ಕರ್ಮಕ್ಕೋಸ್ಕರ ಕರ್ಮವಲ್ಲ, ತಪಸ್ಸಿಗೋಸ್ಕರ ತಪಸ್ಸಲ್ಲ. ಭಗವಂತನನ್ನು ತಿಳಿಯುವುದಕ್ಕೋಸ್ಕರ, ಆತನ ಅನುಗ್ರಹವನ್ನು ಪಡೆಯುವುದಕ್ಕೋಸ್ಕರ ಇವೆಲ್ಲವೂ ಇದೆ. ಹೀಗಾಗಿ  ಇಲ್ಲಿ ಹೇಳುತ್ತಾರೆ: “ನಾರಾಯಣಪರಾ ಗತಿಃ” ಎಂದು. ನಮ್ಮ ಸಾಧನೆಯ ಕೊನೇ ಗುರಿ ಆ ಭಗವಂತ. ನಮ್ಮೆಲ್ಲಾ ನಡೆಯೂ ಆ ಭಗವಂತನನ್ನು ಸೇರುವುದಕ್ಕೆ ಪೋಷಕವಾಗಿರಬೇಕು. ಹೀಗೆ ಉಗ್ರಶ್ರವಸ್ಸ್ ನಮ್ಮ ಅಂತರಂಗದ ಶ್ರೇಯಸ್ಸಿನ ದಾರಿಯನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ.
[ಓದುಗರಿಗೆ ಸೂಚನೆ: ಇಲ್ಲಿ ಭಗವಂತನನ್ನು ‘ನಾರಾಯಣ’ ಎನ್ನುವ ಶಬ್ದ ಬಳಸಿ ವಿವರಿಸಲಾಗಿದೆ. ನಾರಾಯಣ ಶಬ್ದವನ್ನು ‘ವಾಸುದೇವ’ ಶಬ್ದದಿಂದ ಬಳಸಿಕೊಳ್ಳುವುದು ಇನ್ನೊಂದು ಮುಖ. ಒಂದು ರೀತಿಯಿಂದ ನೋಡಿದರೆ ವಾಸುದೇವ ಪದದ ನಿರ್ವಚನವೇ ನಾರಾಯಣ. ‘ವಾಸು’ ಅಂದರೆ ಒಳಗೆ ವಾಸ ಮಾಡುವವನು. ‘ದೇವ’ ಅಂದರೆ ಹೊರಗಡೆ ಎಲ್ಲಾ ಕಡೆ ತುಂಬಿರುವವನು.  ಆದ್ದರಿಂದ ವಾಸುದೇವ ಎಂದರೆ ಒಳಗೂ ಹೊರಗೂ ತುಂಬಿರುವವನು ಎಂದರ್ಥ. ಅದೇ ರೀತಿ ಯಾರು ‘ನಾರನೋ’; ಯಾರು ‘ಅಯನನೋ’ ಅವನು ನಾರಾಯಣ. ನಾರ ಎಂದರೆ ಒಳಗಡೆ ತುಂಬಿರುವವ. ಅಯನ ಎಂದರೆ ಎಲ್ಲಾ  ಕಡೆ ವ್ಯಾಪಿಸಿರುವವ.]  

ಸ ಏವೇದಂ ಸಸರ್ಜಾಗ್ರೇ ಭಗವಾನಾತ್ಮಮಾಯಯಾ ।
ಸದಸದ್ರೂಪಯಾ ಚಾಸೌ ಗುಣಮಯ್ಯಾSಗುಣೋ ವಿಭುಃ          ॥೩೧॥

ಈ ಪ್ರಪಂಚ ನಿರ್ಮಾಣಕ್ಕೆ ನಿಮಿತ್ತ ಕಾರಣ ಭಗವಂತ ಎನ್ನುವುದು ನಮಗೆ ತಿಳಿಯಿತು. ಹಾಗಾದರೆ ಇದರ ಉಪಾದಾನ ಕಾರಣ ಯಾರು? ಭಗವಂತನೆಂಬ ಕುಂಬಾರ ಈ ಬ್ರಹ್ಮಾಂಡವೆಂಬ ಮಡಕೆಯನ್ನು ಯಾವ ಮಣ್ಣಿನಿಂದ ಮಾಡಿದ? ಈ ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: “ಆತ್ಮಮಾಯಾಯಾ” ಎಂದು. ಅಂದರೆ ಭಗವಂತನ ಅಧೀನವಾಗಿರುವ ಜಡಪ್ರಕೃತಿಯನ್ನು ಉಪಾದಾನ ಕಾರಣವಾಗಿಟ್ಟುಕೊಂಡು ಈ ಜಗತ್ತನ್ನು ಭಗವಂತ ಸೃಷ್ಟಿಮಾಡಿದ. ಈ ಜಡಪ್ರಕೃತಿ ಎನ್ನುವುದು ಕಾರ್ಯ-ಕಾರಣ ರೂಪ.  ಸೂಕ್ಷ್ಮರೂಪದಿಂದಲೇ ಸ್ಥೂಲ ರೂಪದ ಸೃಷ್ಟಿ.
ಈ ಪ್ರಪಂಚ ಮೊದಲು ಗುಣತ್ರಯಾತ್ಮಕವಾಗಿದ್ದು, ಏನೂ ಕಾಣಿಸುತ್ತಿರಲಿಲ್ಲ. ನಂತರ ಅದರ ವಿಕಾರದಿಂದ ಮಹತತ್ತ್ವ ಸೃಷ್ಟಿಯಾಯಿತು. ನಂತರ ಪಂಚಭೂತಗಳ ಸೃಷ್ಟಿಯಾಯಿತು; ಪಂಚಭೂತಗಳಿಂದ ಪ್ರಪಂಚ ಸೃಷ್ಟಿಯಾಯಿತು. ಈ ರೀತಿ ಕಣ್ಣಿಗೆ ಕಾಣುವ ಬೃಹತ್ ವಿಶ್ವ ನಿರ್ಮಾಣವಾಯಿತು. ಒಂದು ವಸ್ತು ಇನ್ನೊಂದು ವಸ್ತುವಿಗೆ ಕಾರ್ಯವಾದರೆ, ಅದೇ ವಸ್ತು ಮತ್ತೊಂದು ವಸ್ತುವಿಗೆ ಕಾರಣವಾಗಿರುತ್ತದೆ. ಆದರೆ ಗುಣತ್ರಯಗಳು ಎಲ್ಲಾ ವಸ್ತುಗಳಿಗೂ ಮೂಲ ಕಾರಣ. ಹೀಗೆ ಒಂದು ಕಾರ್ಯ, ಆ ಕಾರ್ಯದಿಂದ ಇನ್ನೊಂದು ಕಾರ್ಯ, ಹೀಗೆ ಎಲ್ಲವೂ ಕಾರ್ಯ-ಕಾರಣವಾಗಿ ಬೆಳೆಯುತ್ತಾ ಇಡೀ ಬ್ರಹ್ಮಾಂಡ ನಿರ್ಮಾಣವಾಯಿತು. ಜಡಪ್ರಕೃತಿ ಎನ್ನುವುದು ಪ್ರಪಂಚ ಸೃಷ್ಟಿಗೆ ಉಪಾದಾನ ಕಾರಣವಾಯಿತು.  ಜಡಪ್ರಕೃತಿಯನ್ನು ಉಪಾದಾನ ಕಾರಣವಾಗಿಟ್ಟುಕೊಂಡು, ತನ್ನ ಇಚ್ಛೆ, ಸಾಮರ್ಥ್ಯ ಮತ್ತು ಜ್ಞಾನದಿಂದ ಭಗವಂತ ಈ ಪ್ರಪಂಚ ನಿರ್ಮಾಣ ಮಾಡಿದ. ಇಂತಹ ಭಗವಂತನಿಗೆ ಈ ತ್ರಿಗುಣಗಳ ಸ್ಪರ್ಶವೇ ಇಲ್ಲ. ಆತ ತ್ರಿಗುಣಾತೀತ ಎನ್ನುವುದನ್ನು ಈ ಶ್ಲೋಕ ಸ್ಪಷ್ಟವಾಗಿ ಹೇಳುತ್ತದೆ.

ತಯಾ ವಿಲಸಿತೇಷ್ವೇಷು ಗುಣೇಷು ಗುಣವಾನಿವ ।
ಅಂತಃಪ್ರವಿಷ್ಟ ಆಭಾತಿ ವಿಜ್ಞಾನೇನ ವಿಜೃಂಭಿತಃ                      ॥೩೨॥

ಇಲ್ಲಿ “ಈ ಪ್ರಪಂಚ ಎನ್ನುವುದು ಪ್ರಕೃತಿಯ ವಿಲಾಸ” ಎಂದಿದ್ದಾರೆ. ‘ವಿಲಾಸ’ ಎನ್ನುವುದು ಸಾಖ್ಯಸಿದ್ಧಾಂತದ ನೆನಪನ್ನು ಕೊಡುವ ಶಬ್ದ. ವಿಲಾಸ ಎಂದರೆ ‘ವಿಚಾರ’ ಎಂದರ್ಥ. ಸಾಂಖ್ಯದಲ್ಲೊಂದು ಮಾತಿದೆ. ಅಲ್ಲಿ ಹೇಳುತ್ತಾರೆ: “ಈ ಪ್ರಕೃತಿ ಎನ್ನುವುದು ನೃತ್ಯಗಾರ್ತಿ ಇದ್ದ ಹಾಗೆ ಹಾಗೂ ಪುರುಷ ಒಬ್ಬ ಪ್ರೇಕ್ಷಕನಂತೆ; ಪುರುಷನ ಮುಂದೆ ನಾಟ್ಯವಾಡಿ ಅವನನ್ನು ಮರುಳುಗೊಳಿಸುವುದು ಪ್ರಕೃತಿ” ಎಂದು.  ಪ್ರಕೃತಿ ನಾನಾ ವಿಲಾಸಗಳಿಂದ ನಮ್ಮನ್ನು ಮೋಹಗೊಳಿಸುತ್ತದೆ. ಜಡಪ್ರಕೃತಿಗೆ ಸ್ವಯಂ ಕರ್ತೃತ್ವವಿಲ್ಲದ ಕಾರಣ ಭಗವಂತ ಈ ಪ್ರಪಂಚದಲ್ಲಿ ಹಾಗೂ ಪ್ರತಿಯೊಬ್ಬ ಜೀವನೊಳಗೆ ತುಂಬಿ ಈ ಕ್ರಿಯೆಯನ್ನು ಮಾಡಿಸುತ್ತಾನೆ. ಹೀಗೆ ತ್ರಿಗುಣಾತ್ಮಕವಾದ ಪ್ರಪಂಚದಲ್ಲಿ ಹಾಗೂ ತ್ರಿಗುಣಾತ್ಮಕವಾದ ದೇಹದಲ್ಲಿ ಭಗವಂತ ತುಂಬಿರುವುದರಿಂದ ನಮಗೆ ಅವನೂ ಕೂಡಾ ಗುಣಬದ್ಧ ಎಂದು ಕಾಣುತ್ತದೆ. ಆದರೆ ಭಗವಂತನ ಜ್ಞಾನದ ವಿಜೃಂಭಣೆಯಲ್ಲಿ ತ್ರಿಗುಣದ ಸ್ಪರ್ಶವೇ ಇರುವುದಿಲ್ಲ.

ಅಸೌ ಗುಣಮಯೈರ್ಭಾವೈರ್ಭೂತಸೂಕ್ಷ್ಮೇಂದ್ರಿಯಾತ್ಮಭಿಃ ।
ಸ್ವನಿರ್ಮಿತೇಷು ನಿರ್ವಿಷ್ಟೋ ಭುಂಕ್ತೇ ಭೂತೇಷು ತದ್ಗುಣಾನ್      ॥೩೪॥

ಭಗವಂತ ಈ ತ್ರಿಗುಣಾತ್ಮಕ ಪ್ರಪಂಚವನ್ನು ತಾನೇ ನಿರ್ಮಾಣ ಮಾಡಿ, ಅದರೊಳಗೆ ಪ್ರವೇಶಮಾಡಿ, ಆನಂದಪಾನ ಮಾಡುತ್ತಿದ್ದಾನೆ. ಆದರೂ ಕೂಡಾ ಅವನಿಗೆ ಈ ತ್ರಿಗುಣಗಳ ಸ್ಪರ್ಶವಿಲ್ಲ. ಆತ ತ್ರಿಗುಣಗಳಿಂದ ನಿರ್ಮಾಣವಾದ ಪಂಚಭೂತಗಳು, ಪಂಚತನ್ಮಾತ್ರೆಗಳು ಹಾಗೂ ಮನಸ್ಸು ಇವುಗಳಿರುವ ದೇಹವನ್ನು ನಿರ್ಮಾಣಮಾಡಿ, ಅದರೊಳಗೆ ನಿರ್ವಿಷ್ಟನಾಗಿದ್ದಾನೆ. ಇಲ್ಲಿ ‘ನಿರ್ವಿಷ್ಟ’ ಎಂದರೆ ಕೇವಲ ನೆಲೆಸುವುದಲ್ಲ, ಆನಂದವಾಗಿ ನೆಲೆಸುವುದು. ಈ ಆನಂದಕ್ಕೆ ಯಾವುದೇ ದೋಷದ ಸ್ಪರ್ಶವಿಲ್ಲ. ಹೀಗೆ ಪ್ರತಿಯೊಬ್ಬರ ಒಳಗೂ ತ್ರೈಗುಣ್ಯವರ್ಜಿತನಾಗಿ ನೆಲೆಸಿದ್ದಾನೆ ಆ ಭಗವಂತ.  

ಭಾವಯನ್ನೇಷ ಸತ್ತ್ವೇನ ಲೋಕಾನ್ ವೈ ಲೋಕಭಾವನಃ ।
ಲೀಲಾವತಾರಾನು ಗತಸ್ತಿರ್ಯಙ್ನರಸುರಾದಿಷು                       ॥೩೫॥

ಭಗವಂತ ಪ್ರಪಂಚ ಸೃಷ್ಟಿ ಮಾಡಿ ಅದರೊಳಗೆ ಸೇರಿಕೊಂಡ. ನಂತರ ಪ್ರತಿಯೊಂದು ಜೀವರೊಳಗೂ ಬಿಂಬರೂಪನಾಗಿ ತುಂಬಿದ. ಇಷ್ಟೇ ಅಲ್ಲದೆ ಮತ್ತೆ ನಮ್ಮ ಕಣ್ಣೆದುರಿಗೆ ಅವತಾರರೂಪಿಯಾಗಿ ಧರೆಗಿಳಿದು ಬಂದ. ಸರ್ವಸಮರ್ಥನಾದ ಭಗವಂತ ಏಕೆ ಅವತಾರ ತಾಳಿ ಭೂಮಿಗೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಉಗ್ರಶ್ರವಸ್ ಇಲ್ಲಿ ಉತ್ತರಿಸಿದ್ದಾರೆ.  ಈ ಭೂಮಿಯಲ್ಲಿ ಕೆಲವೊಮ್ಮೆ ಗುಣತ್ರಯಗಳ ಸಂಘರ್ಷವಾಗುತ್ತದೆ. ಈ ರೀತಿ ಸಂಘರ್ಷದಲ್ಲಿ ತಮೋಗುಣದ ಪ್ರಭಾವ ಹೆಚ್ಚಿ, ದುಷ್ಟಶಕ್ತಿಗಳ ಕೈವಾಡ ಮೇಲಾದಾಗ, ಸತ್ತ್ವಗುಣವನ್ನು ಮರಳಿ ಸ್ಥಾಪಿಸಿ ಜಗತ್ತನ್ನು ಉಳಿಸುವುದಕ್ಕಾಗಿ ಭಗವಂತ ಇಳಿದುಬರುತ್ತಾನೆ. ಸರ್ವಸಮರ್ಥನಾದ ಭಗವಂತ ಧರ್ಮರಕ್ಷಣೆಯನ್ನು ಅವತಾರ ತಾಳದೇ ಮಾಡಬಲ್ಲ. ಆದರೆ ಆತ ಅವತಾರ ತಾಳುವುದು ಭಕ್ತರಿಗೆ  ತನ್ನ ಲೀಲೆಯನ್ನು ತೋರುವುದಕ್ಕಾಗಿ. ಆತ ತಾಳುವ ಅವತಾರದಿಂದ ಕಣ್ಣಿಗೆ ಕಾಣದ ಭಗವಂತನನ್ನು ವಿಧವಿಧವಾಗಿ ಉಪಾಸನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ದೇವಲೋಕದಲ್ಲಿ ಆವಿರ್ಭಾವನಾಗಿ, ಪ್ರಾಣಿಗಳಲ್ಲಿ ಆವಿರ್ಭಾವನಾಗಿ, ನರರೂಪನಾಗಿ  ತನ್ನ ಲೀಲೆಯನ್ನು ಭಕ್ತರಿಗಾಗಿ ಬಿತ್ತರಿಸುತ್ತಾನೆ ಭಗವಂತ. ಆತನ ವಿವಿಧ ಅವತಾರದ ವಿವರವನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು.

ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ಪ್ರಥಮಸ್ಕಂಧೇ ದ್ವಿತಿಯೋಧ್ಯಾಯಃ॥

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು.


*******

No comments:

Post a Comment