ಯಃ
ಸ್ವಾನುಭಾವಮಖಿಲಶ್ರುತಿಸಾರಮೇಕಮಧ್ಯಾತ್ಮದೀಪಮತಿತೀರ್ಷತಾಂ ತಮೋSನ್ಧಮ್ ।
ಸಂಸಾರಿಣಾಂ ಕರುಣಯಾSSಹ ಪುರಾಣಗುಹ್ಯಂ ತಂ
ವ್ಯಾಸಸೂನುಮುಪಯಾಮಿ ಗುರುಂ ಮುನೀನಾಂ॥೩॥
ಸೂತರು
ಶುಕಾಚಾರ್ಯರನ್ನು ಸ್ತುತಿಸುತ್ತಾ ಹೇಳುತ್ತಾರೆ: “ಭಾಗವತ ರಹಸ್ಯವನ್ನು ಬಿತ್ತರಿಸುವುದಕ್ಕಾಗಿ,
ಗುರುಗಳಾಗಿ ನನ್ನೊಳಗೆ ಸನ್ನಿಹಿತರಾಗಿ” ಎಂದು. ಶಿವನ ಅವತಾರಿಯಾದ ಶುಕಾಚಾರ್ಯರು
ಮುನಿಗಳಿಗೆಲ್ಲರಿಗೆ ಮುನಿ. ನಮಗೆ ತಿಳಿದಂತೆ ಋಷಿಗಳಲ್ಲಿ ಭೃಗು ಶ್ರೇಷ್ಠ. ಅವರಿಗಿಂತ
ಎತ್ತರದಲ್ಲಿ ದೇವರ್ಷಿ ನಾರದರಿದ್ದಾರೆ. ನಾರದರಿಗಿಂತಲೂ ಮೇಲೆ ಸನತ್ಕುಮಾರ. ಆದರೆ ಶಿವ
ಸನತ್ಕುಮಾರರ ತಂದೆ. ಹಾಗಾಗಿ “ಭಗವಂತನ ತತ್ತ್ವರಹಸ್ಯವನ್ನು ಬೆಳಗಿಸಿದ ಸಾಕ್ಷಾತ್ ಶಿವನ
ಅವತಾರಿಯಾದ ಶುಕಾಚಾರ್ಯರಿಗೆ ನಾನು ಶರಣಾಗುತ್ತೇನೆ” ಎಂದಿದ್ದಾರೆ ಸೂತರು.
ಈ ಶ್ಲೋಕವನ್ನು
ಭಾಗವತ ಪುರಾಣ ಪರ ಅರ್ಥ ಮಾಡುತ್ತಾರೆ. ಆದರೆ ಇಲ್ಲಿ ಪ್ರಾರಂಭದಲ್ಲಿ ಬಳಸಿದ ‘ಸ್ವಾನುಭಾವ’ ಎನ್ನುವ ವಿಶೇಷಣ ಸ್ಪಷ್ಟವಾಗಿ
ಭಗವಂತನನ್ನು ಹೇಳುವುದರಿಂದ, ಈ ಶ್ಲೋಕವನ್ನು ನಾವು ಭಗವಂತನ ಪರ ಅರ್ಥ ಮಾಡಬೇಕು. ಸ್ವರೂಪಭೂತವಾದ
ಅನುಭಾವ ಉಳ್ಳವನು ಸ್ವಾನುಭಾವಃ. ಇಲ್ಲಿ ‘ಅನುಭಾವ’ ಅಂದರೆ ತಳಸ್ಪರ್ಶಿಯಾದ, ಕರಾರುವಕ್ಕಾದ
ಅರಿವು. ಅಂತಹ ‘ಅರ್ಥೇಷು ಅಭಿಜ್ಞಃ’ ಭಗವಂತ
‘ಸ್ವಾನುಭಾವಃ’. ಎಲ್ಲಕ್ಕೂ ಕಾರಣಭೂತನಾಗಿ ಸಂಸಾರದ ಕತ್ತಲನ್ನು ಕಳೆದು ಮೋಕ್ಷಮಾರ್ಗ ತೋರುವವ ಆ
ಭಗವಂತ. ಭಗವಂತನ ಸನ್ನಿಧಿಯಲ್ಲಿ ಅನಂತಕಾಲ ನೆಲೆಸಬೇಕು ಎನ್ನುವ ಸಾಧಕರಿಗೆ ಭಗವಂತ ಬೆಳಕುಗಳ
ಬೆಳಕು. ನಮ್ಮ ಶರೀರದೊಳಗೆ, ನಮ್ಮ ಮನಸ್ಸಿನಲ್ಲಿ, ನಮ್ಮ ಜೀವಸ್ವರೂಪದಲ್ಲಿರುವ ಜ್ಯೋತಿ ಆ ಭಗವಂತ.
ಇಂತಹ ಭಗವಂತ ಅತ್ಯಂತ ಪುರಾತನ ಮತ್ತು ನಿಗೂಢ. “ಭಾಗವತ ಪುರಾಣದಲ್ಲಿ ಮೇಲ್ನೋಟಕ್ಕೆ ಎದ್ದುಕಾಣದೆ,
ಗೂಢವಾಗಿದ್ದು, ಸರಸ್ವತಿ ನದಿಯಂತೆ ಅಂತರ್ಗತನಾಗಿ,
ಗುಪ್ತವಾಹಿನಿಯಾಗಿ ಹರಿದ ಇಂತಹ ಭಗವಂತನ ಮಹಿಮೆಯನ್ನು ಎಲ್ಲರಿಗೂ ತಿಳಿಯುವಂತೆ ಬಿತ್ತರಿಸಿದ,
ವ್ಯಾಸಪುತ್ರರಾದ ಶುಕಾಚಾರ್ಯರಿಗೆ ನಾನು ಶರಣಾಗುತ್ತೇನೆ” ಎಂದಿದ್ದಾರೆ ಸೂತರು. ಇದು ಗ್ರಂಥ ಪ್ರಾರಂಭದಲ್ಲಿನ
ಗುರುಸ್ತುತಿ.
ಷಣ್ನಮಸ್ಕಾರ
ನಾರಾಯಣಂ
ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।
ದೇವೀಂ ಸರಸ್ವತೀಂ
ವ್ಯಾಸಂ ತತೋ ಗ್ರಂಥಮುದೀರಯೇ ॥೪॥
ಯಾವುದೇ ಒಂದು ಗ್ರಂಥ
ಪ್ರಾರಂಭ ಮಾಡುವುದಕ್ಕೆ ಮೊದಲು ನಾವು ಮಾಡಬೇಕಾದ ನಮಸ್ಕಾರವೇ ಈ ಷಟ್ನಮಸ್ಕಾರ. ಇಲ್ಲಿ ನಾರಾಯಣನಿಗೆ, ನರರಿಗೆ, ನರೋತ್ತಮನಿಗೆ, ದೇವಿಗೆ,
ಸರಸ್ವತಿಗೆ ಮತ್ತು ವ್ಯಾಸರಿಗೆ ನಮಸ್ಕಾರ ಎಂದಿದ್ದಾರೆ ಸೂತರು. ಮೊಟ್ಟಮೊದಲು ನಾರಾಯಣನಿಗೆ ನಮಸ್ಕಾರ
ಎಂದಿದ್ದಾರೆ. ಏಕೆಂದರೆ ಸರ್ವೋತ್ತಮ ತತ್ತ್ವ ನಾರಾಯಣ ಭಾಗವತದ ಪ್ರತಿಪಾಧ್ಯ .
ಶಾಸ್ತ್ರಕಾರರು ಹೇಳುವಂತೆ:
ವೇದೇ ರಾಮಾಯಣೇ
ಚೈವ ಪುರಾಣೇ ಭಾರತೇ ತಥಾ ।
ಆದೌ ಅಂತ್ಯಾಚ
ಮಧ್ಯೇ ಚ ವಿಷ್ಣುಃ ಸರ್ವತ್ರ ಗೀಯತೇ ॥
ಭಗವಂತ ಸರ್ವವೇದ, ಸರ್ವಪುರಾಣ
ಮತ್ತು ಸರ್ವಇತಿಹಾಸಗಳಿಂದ ವಾಚ್ಯನಾಗಿರುವ ಸರ್ವಶ್ರೇಷ್ಠತತ್ತ್ವ.
ಅದಕ್ಕಾಗಿ ಆತನಿಗೆ ಮೊದಲು ನಮಸ್ಕಾರ. ಇನ್ನು ಭಗವಂತನತ್ತ ಸಾಗಲು ಎರಡು ಪ್ರಮುಖ ಶಕ್ತಿಗಳ ಮಾರ್ಗದರ್ಶನ
ಬೇಕು. ಆ ಶಕ್ತಿಗಳೇ ನರ ಮತ್ತು ನರೋತ್ತಮ. ನರ ಎಂದರೆ ಗರುಡ-ಶೇಷ-ರುದ್ರರು. ನರೋತ್ತಮ ಎಂದರೆ ಬ್ರಹ್ಮ-ವಾಯು.
ಇಲ್ಲಿ ಈ ರೀತಿ ಪ್ರಾರ್ಥನೆ ಮಾಡಲು ಒಂದು ವಿಶೇಷ ಕಾರಣವಿದೆ. ಉಪನಿಷತ್ತಿನಲ್ಲಿ ಹೇಳುವಂತೆ: ನಮ್ಮ
ದೇಹದಲ್ಲಿ ಪ್ರಮುಖವಾಗಿ ನಾಲ್ಕು ದೇವತಾ ಶಕ್ತಿಗಳು ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವುಗಳೆಂದರೆ ೧.
ಶರೀರಪುರುಷ, ೨. ಛಂದಃಪುರುಷ, ೩. ವೇದಪುರುಷ ಮತ್ತು ೪. ಸಂವತ್ಸರಪುರುಷ. ಈ ದೇಹ ನಿಂತು
ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ
ಕಾರಣ. ಮನೋಮಯ ಕೋಶದಲ್ಲಿದ್ದು, ವೇದಾಂತದ ಚಿಂತನೆ, ಮನಸ್ಸಿನಲ್ಲಿ ಮನನ ಶಕ್ತಿ ಕೊಡತಕ್ಕವ ವೇದಪುರುಷ ಗರುಡ. ವೇದಪುರುಷ ನಮಗೆ ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ
ಮಾಡುತ್ತಾನೆ. ಜೀವದ ಯೋಗ್ಯತೆಯನ್ನು, ಇಡೀ ಜೀವದ ಸ್ವರೂಪವನ್ನು ನಿಯಂತ್ರಣ ಮಾಡುವವ ಜೀವಕಲಾಭಿಮಾನಿ ಚತುರ್ಮುಖಬ್ರಹ್ಮ, ಈತ ಸಂವತ್ಸರಪುರುಷ. [ ‘ಸಂ-ವತ್ಸ-ರ’- ಅಂದರೆ ಚೆನ್ನಾಗಿ ಮಕ್ಕಳನ್ನು ಸಾಕುವ ಪಿತಾಮಹ]. ಬ್ರಹ್ಮ-ವಾಯು
ಜೀವನನ್ನು ಮೇಲಕ್ಕೆತ್ತಿ ಸಾಧನೆಯ ಹಾದಿಯಲ್ಲಿ ತೊಡಗಿಸುತ್ತಾರೆ. ಹೀಗೆ ಈ ಪಂಚದೇವತೆಗಳು
ಭಗವಂತನ ನಂತರ ದೇಹದಲ್ಲಿರುವ ಪ್ರಮುಖ
ಅಧಿದೇವತೆಗಳು. ಹೀಗೆ ಈ ಪಂಚ ದೇವತೆಗಳಿಗೆ, ಸಮಸ್ತ ವೇದಮಾನಿನಿಯಾದ ಲಕ್ಷ್ಮಿಗೆ, ವಾಗ್ದೇವತೆ ಸರಸ್ವತಿ-ಭಾರತೀಯರಿಗೆ ನಮಸ್ಕರಿಸಿ, ನಂತರ ಪುನಃ
ಶಾಸ್ತ್ರವನ್ನು ಕೊಟ್ಟ ಭಗವಂತನ ಅವತಾರವಾದ ವೇದವ್ಯಾಸರಿಗೆ ನಮಸ್ಕರಿಸಿ, ಋಷಿಗಳ ಪ್ರಶ್ನೆಗೆ ಸೂತರು
ಉತ್ತರಿಸುತ್ತಾರೆ.
No comments:
Post a Comment