ದ್ವಿತೀಯೋSಧ್ಯಾಯಃ
ಇತಿ ಸಂಪ್ರಶ್ನಸಂಪೃಷ್ಟೋ ವಿಪ್ರಾಣಾಂ ರೌಮಹರ್ಷಣಿಃ ।
ಪ್ರತಿಪೂಜ್ಯ ವಚಸ್ತೇಷಾಂ ಪ್ರವಕ್ತುಮುಪಚಕ್ರಮೇ ॥೧॥
ವಿಪ್ರರು ಹಾಕಿದ ಪ್ರಶ್ನೆಗಳನ್ನು
ಕೇಳಿ ರೋಮಹರ್ಷಣರ ಮಗನಾದ ಉಗ್ರಶ್ರವಸ್ಸರಿಗೆ ಬಹಳ
ಸಂತೋಷವಾಯಿತು. ಪ್ರಶ್ನೆ ಹಾಕಿದ ಎಲ್ಲಾ ಋಷಿಗಳನ್ನು ಅಭಿನಂದಿಸಿ ಸೂತರು ತಮ್ಮ ಪ್ರವಚನ ಆರಂಭಿಸುತ್ತಾರೆ.
ಶೌನಕಾದಿಗಳಿಗೆ ಭಾಗವತ
ಪ್ರವಚನ ಮಾಡುವ ಮೊದಲು ಸೂತರು ತನ್ನ ಗುರು ಶುಕಾಚಾರ್ಯರಿಗೆ ವಂದಿಸುತ್ತಾರೆ. ಹಿಂದೆ ಹೇಳಿದಂತೆ ಭಗವಾನ್
ವೇದವ್ಯಾಸರು ಭಾಗವತವನ್ನು ಮೊದಲು ಶುಕಮುನಿಗಳಿಗೆ ಉಪದೇಶಿಸಿದರು. ಶುಕಮುನಿಗಳು ಅದನ್ನು ಪರೀಕ್ಷಿತರಾಜನಿಗೆ
ಉಪದೇಶ ಮಾಡುವಾಗ ಸೂತರು ಪರೀಕ್ಷಿತ ರಾಜನೊಂದಿಗೆ ಕುಳಿತು ಭಾಗವತವನ್ನು ಕೇಳಿರುವುದರಿಂದ, ಸೂತರ ಸಾಕ್ಷಾತ್
ಗುರು ಶುಕಮುನಿಗಳು. ಹಾಗಾಗಿ ಇಲ್ಲಿ ಸೂತರು ಪ್ರವಚನ ಆರಂಭಿಸುವ ಮೊದಲು ತಮ್ಮ ಗುರುಗಳ ಸ್ತೋತ್ರ ಮಾಡುತ್ತಾರೆ.
ಗುರುಸ್ತುತಿ
ಸೂತ ಉವಾಚ:
ಯಂ ಪ್ರವ್ರಜಂತಮನುಪೇತಮಪೇತಕೃತ್ಯಂ ದ್ವೈಪಾಯನೋ ವಿರಹಕಾತರ ಆಜುಹಾವ ।
ಪುತ್ರೇತಿ ತನ್ಮಯತಯಾ ತರವೋSಭಿನೇದುಸ್ತಂ ಸರ್ವಭೂತಹೃದಯಂ ಮುನಿಮಾನತೋSಸ್ಮಿ ॥೨॥
ಶುಕಮುನಿಗಳನ್ನು ಸ್ತುತಿಸುವ
ಈ ಶ್ಲೋಕ ಅದ್ಭುತವಾದುದು. ಈ ಶ್ಲೋಕದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ. ಆದರೆ ಭಾಗವತ ಅದನ್ನು ಹೇಳುವುದಿಲ್ಲ.
ಏಕೆಂದರೆ ಅದನ್ನು ಮಹಾಭಾರತದಲ್ಲಿ ವಿವರಿಸಲಾಗಿದೆ. ಮೊದಲು ನಾವು ಆ ಕಥೆಯನ್ನು ಸಂಕ್ಷಿಪ್ತವಾಗಿ ನೋಡೋಣ:
ಒಮ್ಮೆ ಶುಕಾಚಾರ್ಯರು
ಪೂರ್ಣಪ್ರಮಾಣದ ವಿರಕ್ತಿ ತಳೆದು, ಆಶ್ರಮದಲ್ಲಿ ಯಾರಿಗೂ ಹೇಳದೆ, ಆಶ್ರಮ ಬಿಟ್ಟು ಹೊರಟು ಹೋಗುತ್ತಾರೆ.
ವೇದವ್ಯಾಸರು ಆಶ್ರಮದಲ್ಲಿ ಶುಕಮುನಿ ಇಲ್ಲದ್ದನ್ನು ಕಂಡು ಅವರನ್ನು ಹುಡುಕುತ್ತಾ ಶುಕಾಚಾರ್ಯರು ಹೋದ
ಮಾರ್ಗವಾಗಿ ಹೋಗುತ್ತಾರೆ. ಈ ರೀತಿ ವಿರಕ್ತಿ ತಳೆದು ಹೊರಟ ಶುಕಾಚಾರ್ಯರ ಮನಸ್ಥಿತಿ
ಹೇಗಿತ್ತೆಂದರೆ: ಅವರು ಹೋಗುತ್ತಿದ್ದ ಮಾರ್ಗದಲ್ಲಿ ಒಂದು ಕೊಳದಲ್ಲಿ ಸ್ತ್ರೀಯರು ವಿವಸ್ತ್ರರಾಗಿ ಸ್ನಾನ
ಮಾಡುತ್ತಿದ್ದರೂ, ಅವರಿಗೆ ಆ ಗೋಜೇ ಇಲ್ಲದೆ ಮುಂದೆ ನಡೆದರು ಎನ್ನುತ್ತದೆ ಭಾರತ. ಮೋಹದ
ಸೆಳೆತವನ್ನು ಮೀರಿನಿಂತ ವ್ಯಕ್ತಿ ಶುಕ ಎನ್ನುವುದನ್ನು ವ್ಯಾಸರು ಈ ಉದಾಹರಣೆಯಲ್ಲಿ ತೋರಿಸಿದ್ದಾರೆ.
ಇಲ್ಲಿ ಶುಕಾಚಾರ್ಯರು
ಎಲ್ಲವನ್ನೂ ತ್ಯಾಗ ಮಾಡಿ ಹೋದಾಗ, ವ್ಯಾಸರು ಪುತ್ರ ಮೋಹದಿಂದ ಅವರನ್ನು ಹಿಂಬಾಲಿಸಿ ಹೋದರು
ಎನ್ನುವಂತೆ ವಿವರಣೆ ಇದೆ. ಏಕೆ ಈ ರೀತಿ ಎಂದು ನೀವು ಪ್ರಶ್ನಿಸಬಹುದು. ಇದರ ಹಿಂದೆ ಒಂದು ಸ್ವಾರಸ್ಯಕರವಾದ ಭಗವಂತನ ಲೀಲೆ ಅಡಗಿದೆ.
ವೇದವ್ಯಾಸರು ತಪಸ್ಸನ್ನಾಚರಿಸಿ ಹುಟ್ಟಿದ ಮಗ ಶುಕ. ಈತ ಶಿವನ ಅವತಾರ. ಅದೇ ರೀತಿ ಮಹಾಭಾರತದಲ್ಲಿ ಬರುವ
ಅಶ್ವತ್ಥಾಮ ಕೂಡಾ ಸಾಕ್ಷಾತ್ ಶಿವನ ಅವತಾರ. ಮಹಾಭಾರತ ಯುದ್ಧದ ಕೊನೆಯಲ್ಲಿ ಪಾಂಡವರ ವಂಶ ನಿರ್ವಂಶವಾಗಬೇಕೆಂದು
ತೊಡೆ ಮುರಿದು ಬಿದ್ದ ದುರ್ಯೋಧನ ಬಯಸಿದಾಗ, ಅಶ್ವತ್ಥಾಮ ದ್ರೌಪದಿಯ ಐದು ಮಂದಿ ಮಕ್ಕಳನ್ನು [ಪ್ರತಿವಿಂಧ್ಯ (ಯುಧಿಷ್ಥಿರ ಪುತ್ರ); ಶೃತಸೋಮ (ಭೀಮ ಪುತ್ರ); ಶೃತಕೀರ್ತಿ (ಅರ್ಜುನ ಪುತ್ರ); ಶತಾನೀಕ (ನಕುಲ
ಪುತ್ರ); ಶೃತಕರ್ಮಾ (ಸಹದೇವ ಪುತ್ರ)] ತಲೆಕಡಿದು ಹತ್ಯೆಮಾಡಿ, “ಪಾಂಡವರ ಸಂತತಿಯನ್ನು ನಿರ್ವಂಶ
ಮಾಡಿದೆ” ಎಂದು ದುರ್ಯೋಧನನಿಗೆ ಹೇಳುತ್ತಾನೆ. ಆಗ ಪಾತಕಿ ದುರ್ಯೋಧನ ಅಷ್ಟಕ್ಕೆ ಸಮಾಧಾನ ತಾಳದೆ, ಮಸಣದ
ಮಣ್ಣಿನಿಂದ ಅಶ್ವತ್ಥಾಮನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಪಟ್ಟಾಭಿಷೇಕ ಮಾಡಿ ಹೇಳುತ್ತಾನೆ: “ನೀನು
ನನ್ನ ಪತ್ನಿಯಲ್ಲಿ ಸಂತಾನ ಪಡೆಯಬೇಕು ಮತ್ತು ಆತ ಮುಂದೆ ಈ ದೇಶವನ್ನು ಆಳಬೇಕು” ಎಂದು. ಇದನ್ನು ನಿಯೋಗ
ಪದ್ಧತಿ ಎನ್ನುತ್ತಾರೆ. ಇದಕ್ಕಾಗಿ ಅಶ್ವತ್ಥಾಮ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತನನ್ನು
ಹತ್ಯೆಗಯ್ಯಲು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಆ ಮಗುವನ್ನು ಕೃಷ್ಣ
ಕಾಪಾಡುತ್ತಾನೆ. ಉತ್ತರೆಗೆ ಪ್ರಸವವಾದಾಗ ಮಗು ಉಸಿರಾಡುತ್ತಿರಲಿಲ್ಲ. ಆದರೆ ಮಗುವನ್ನು ಕೃಷ್ಣ ಕೈಗೆತ್ತಿಕೊಂಡಾಗ
ಮಗು ಕಣ್ತೆರೆಯುತ್ತದೆ. ಈ ಮಗುವೇ ಪಾಂಡವರ ನಂತರ ಮುಂದೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪರೀಕ್ಷಿತ
ರಾಜ. ಈ ರೀತಿ ಶಿವಶಕ್ತಿಯ 'ಅಶ್ವತ್ಥಾಮ' ರೂಪದಲ್ಲಾದ ತಪ್ಪನ್ನು, ಶಿವಶಕ್ತಿಯಿಂದಲೇ ಪರಿಮಾರ್ಜನ ಮಾಡುವುದಕ್ಕಾಗಿ, ಶಿವನೇ ಶುಕಮುನಿಯಾಗಿ,
ವೇದವ್ಯಾಸರಲ್ಲಿ ಜನಿಸಿ, ವ್ಯಾಸರಿಂದ ಭಾಗವತ ಉಪದೇಶ ಪಡೆದು, ಅದನ್ನು ಪರೀಕ್ಷಿತ ರಾಜನಿಗೆ ಉಪದೇಶ
ಮಾಡಿದ. ಇದು ದೇವ-ದೇವತೆಯರ ಲೀಲಾ ಪ್ರಸಂಗ. ಈ ಹಿನ್ನೆಲೆಯಲ್ಲಿ ನಾವು ಮೇಲಿನ ಶ್ಲೋಕಾರ್ಥವನ್ನು ನೋಡಬೇಕು.
ಶುಕಾಚಾರ್ಯರು ಸರ್ವಸ್ವವನ್ನೂ
ತ್ಯಾಗಮಾಡಿ, ದೇಹದ ಅಭಿಮಾನವನ್ನೂ ಬಿಟ್ಟು, ದೇಹವಿದೆ ಎನ್ನುವ ಪರಿವೆಯೂ ಇಲ್ಲದೆ(ಅನುಪೇತಂ), ಆಶ್ರಮ ಬಿಟ್ಟು
ಹೊರಟುಹೋದ ವಿಷಯ ದ್ವೈಪಾಯನ(ವ್ಯಾಸ)ರಿಗೆ ತಲುಪಿದಾಗ, ಅವರು ವಿರಹ ಕಾತರರಾದವರಂತೆ ಪುತ್ರನನ್ನು ಕರೆಯುತ್ತಾ
ಹೊರಟರಂತೆ. ಅವರು ತನ್ನ ಪುತ್ರನನ್ನು ಕೂಗಿದಾಗ ಕಾಡಿನಲ್ಲಿನ ಮರಗಳೂ ಕೂಡಾ ಆ ಕೂಗಿಗೆ ಒಗೊಟ್ಟಂತೆ
ಪ್ರತಿಧ್ವನಿಸಿದವಂತೆ. ಇಲ್ಲಿ ಸೂತರು: ಯಾರಿಗಾಗಿ ವೇದವ್ಯಾಸರು ‘ಪುತ್ರಾ’ ಎಂದು ಹುಡುಕಾಡಿದರೋ ಅವರಿಗೆ
ನಮಸ್ಕಾರ” ಎಂದಿದ್ದಾರೆ. ಶಿವ ಮನದ ಅಭಿಮಾನಿ. ಆತ ಅಹಂಕಾರತತ್ತ್ವವಾಗಿ(Awareness of self)
ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾನೆ. ಅದಕ್ಕಾಗಿ ಶಿವನಿಗೆ ನಮಸ್ಕಾರ ಮಾಡುವಾಗ ಅಜ್ಞಾನದ
ಗಂಟನ್ನು ಬಿಚ್ಚಿ ನನಗೆ ಭಗವಂತನ ಅರಿವು ಬರುವಂತೆ ಮಾಡು ಎಂದು ಪ್ರಾರ್ಥಿಸುತ್ತೇವೆ. ಹಾಗಾಗಿ ಇಲ್ಲಿ
ಸೂತರು “ಶುಕಾಚಾರ್ಯರು ನನ್ನೊಳಗೆ ನಿಂತು ಭಾಗವತ ನುಡಿಸಲಿ” ಎಂದು ಪ್ರಾರ್ಥಿಸಿದ್ದಾರೆ.
ಆಶ್ರಮ ಬಿಟ್ಟು ತೆರಳಿದ
ಶುಕಮುನಿಗಳನ್ನು ಮರಳಿ ಆಶ್ರಮಕ್ಕೆ ಕರೆತಂದ ವೇದವ್ಯಾಸರು: “ನೀನು ವೈರಾಗ್ಯ ತಾಳುವ ಮೊದಲು, ವೈರಾಗ್ಯ
ಅಂದರೇನು ಎನ್ನುವುದನ್ನು ತಿಳಿಯಬೇಕು. ಅದನ್ನು ಮಿಥಿಲೆಯ ರಾಜನಾದ ಜನಕನಿಂದ ತಿಳಿದುಕೊಂಡು ಬಾ”
ಎಂದು ಅವರನ್ನು ಮಿಥಿಲೆಗೆ ಕಳುಹಿಸಿಕೊಡುತ್ತಾರೆ. ಮಿಥಿಲೆಗೆ ಬಂದ ಶುಕಮುನಿಗಳಿಗೆ ತಕ್ಷಣ ರಾಜ ದರ್ಶನ
ನೀಡುವುದಿಲ್ಲ. ಅವರಿಗೆ ಅರಮನೆಯ ಉದ್ಯಾನದಲ್ಲಿ ಇರುವಂತೆ ಸೂಚಿಸಲಾಗುತ್ತದೆ. ಅಲ್ಲಿ ಅವರ ಚಾಕರಿಗಾಗಿ
ಭೋಗ ವಸ್ತುಗಳ ಜೊತೆಗೆ ಅತ್ಯಂತ ಸುಂದರ ತರುಣಿಯರನ್ನು ರಾಜ ನೇಮಿಸುತ್ತಾನೆ. ಇದು ಒಂದು ರೀತಿಯ ಪರೀಕ್ಷೆ.
ಕಾಯಿಸಿರುವುದರಿಂದಾಗಲಿ ಅಥವಾ ಸುಂದರಿಯರ ಚಾಕರಿಯಿಂದಾಗಲಿ ಶುಕ ಮುನಿಗಳ ಮನಸ್ಸು ಕದಡುವುದಿಲ್ಲ.
ಅವರು ಶಾಂತಚಿತ್ತರಾಗಿ ರಾಜನಿಗಾಗಿ ಕಾಯುತ್ತಾರೆ. ಹಲವು ದಿನಗಳ ನಂತರ ರಾಜ ಶುಕರನ್ನು ಭೇಟಿ
ಮಾಡಿದ ಮತ್ತು ಹೇಳಿದ: “ವೈರಾಗ್ಯ ಎಂದರೆ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ, ಎಲ್ಲದರ ಜೊತೆಗಿದ್ದು,
ಯಾವುದನ್ನೂ ಅಂಟಿಸಿಕೊಳ್ಳದೇ ಬದುಕುವುದು” ಎಂದು. ಮಿಥಿಲೆಯಿಂದ ಮರಳಿಬಂದ ಶುಕಾಚಾರ್ಯರನ್ನು ಮತ್ತೆ ಪ್ರವೃತ್ತಿಗೆ ಎಳೆದು,
ಪ್ರವೃತ್ತಿಯಲ್ಲಿ ನಿವೃತ್ತಿಯ ಬೀಜವನ್ನು ನೋಡು ಎಂದು ಹೇಳಿ, ವೇದವ್ಯಾಸರು ಅವರಿಗೆ ಭಾಗವತ ಉಪದೇಶ
ಮಾಡುತ್ತಾರೆ. ಆನಂತರ ಶುಕಾಚಾರ್ಯರು ಭಾಗವತವನ್ನು ಪರೀಕ್ಷಿತರಾಜನಿಗೆ ಉಪದೇಶ ಮಾಡುತ್ತಾರೆ. ಇಲ್ಲಿ
“ಇಂತಹ ಶುಕಾಚಾರ್ಯರಿಗೆ ನಮಸ್ಕಾರ” ಎಂದು ಉಗ್ರಶ್ರವಸ್ಸರು ಸ್ತೋತ್ರ ಮಾಡಿದ್ದಾರೆ.
No comments:
Post a Comment