Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Saturday, December 15, 2012

Shrimad BhAgavata in Kannada -Skandha-01 CH-01 (1)


ಶ್ರೀಮದ್ ಭಾಗವತ ಪುರಾಣಮ್

ಪ್ರಥಮ ಸ್ಕಂಧಃ

ಪ್ರಥಮೋSಧ್ಯಾಯಃ

ಓಂ ನಮೋ ಭಗವತೇ ವಾಸುದೇವಾಯ ಓಂ
ಹರಿಃ ಓಂ ॥

ಶ್ರೀಮದ್ಭಾಗವತ ಮಹಾಪುರಾಣದ ಮಂಗಲಪದ್ಯ

ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ                            

ಭಾಗವತದ ಮೊದಲ ಮಂಗಲಾಚರಣೆಯ ಈ ಪದ್ಯ ಬಹಳ ವಿಶಿಷ್ಠವಾದ ಪದ್ಯ. ಇದು ಸಮಗ್ರ ವೇದಾಂತದ ತಿರುಳನ್ನು ನಮ್ಮ ಮುಂದಿಡುತ್ತದೆ! ಇಲ್ಲಿ ಒಟ್ಟು ನಾಲ್ಕು ಪಾದಗಳಿವೆ. ಪ್ರತಿಯೊಂದು ಪಾದದಲ್ಲೂ ಹತ್ತೊಂಬತ್ತು ಅಕ್ಷರಗಳಿವೆ. ಹಾಗಾಗಿ ಈ ಪದ್ಯದಲ್ಲಿ ಒಟ್ಟು ಎಪ್ಪತ್ತಾರು ಅಕ್ಷರಗಳಿವೆ. ಈ ಎಪ್ಪತ್ತಾರು ಅಕ್ಷರಗಳು ಭಗವಂತನ ಎಪ್ಪತ್ತಾರು ರೂಪಗಳನ್ನು ಹೇಳುತ್ತವೆ. ಭಗವಂತನ ಎಪ್ಪತ್ತಾರು ರೂಪಗಳು ಎಂದರೆ ಅದು ಸಮಗ್ರ ವಿಶ್ವದ ಅಖಂಡ ಚಿತ್ರಣ. ವಿಶ್ವವೆಂದರೆ ಅದು ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚ. ರೂಪಾತ್ಮಕ ಪ್ರಪಂಚದಲ್ಲಿ ಒಟ್ಟು ಇಪ್ಪತ್ತೈದು ತತ್ತ್ವಗಳಿವೆ. ಅವುಗಳೆಂದರೆ: ಪುರುಷ, ಪ್ರಕೃತಿ, ಮಹತ್ತತ್ವ, ಅಹಂಕಾರತತ್ವ, ಮನಸ್ತತ್ವ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ತನ್ಮಾತ್ರೆಗಳು ಮತ್ತು ಪಂಚಭೂತಗಳು.  ಈ ಇಪ್ಪತ್ತೈದು ತತ್ತ್ವಗಳಲ್ಲಿ ಭಗವಂತನ ಇಪ್ಪತ್ತೈದು ರೂಪಗಳಿವೆ. ಇನ್ನು ನಾಮಾತ್ಮಕ ಪ್ರಪಂಚ ಎಂದರೆ ಅದು ಅಕ್ಷರ ಪ್ರಪಂಚ. ಅ-ದಿಂದ ಕ್ಷ-ತನಕ ಇರುವುದು ಒಟ್ಟಿಗೆ ಐವತ್ತೊಂದು ಅಕ್ಷರಗಳು. ಎಲ್ಲಾ ನಾಮಗಳು, ಎಲ್ಲಾ ಶಬ್ದಗಳೂ ಈ ಐವತ್ತೊಂದು ಅಕ್ಷರದಲ್ಲಿವೆ. ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು, ಅವುಗಳೆಂದರೆ:
೧. ಅಜ, ೨. ಆನಂದ, ೩. ಇಂದ್ರ,  ೪. ಈಶ, ೫. ಉಗ್ರ, ೬. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].
ನಾಮಾತ್ಮಕ ಮತ್ತು ರೂಪಾತ್ಮಕ ಪ್ರಪಂಚದಲ್ಲಿರುವ ಎಪ್ಪತ್ತಾರು ರೂಪಗಳನ್ನು ನೆನೆಯುತ್ತಾ, ಭಾಗವತದ ಈ ಮೊದಲ ಶ್ಲೋಕ ಒಂದು ವಿಶಿಷ್ಠವಾದ ಎಚ್ಚರವನ್ನು ನಮ್ಮ ಮುಂದಿಡುತ್ತದೆ ಮತ್ತು ಅದು ಅನೇಕ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ. ಭಗವಂತನ ಬಗ್ಗೆ ಹೇಗೆ ತಿಳಿದುಕೊಳ್ಳಬೇಕು? ಭಗವಂತ ಇದ್ದಾನೆ ಎಂದು ನಮಗೆ ಭರವಸೆ ಬರುವುದು ಹೇಗೆ? ಭಗವಂತನ ಬಗೆಗೆ ಖಚಿತವಾದ ಮನವರಿಕೆ(Conviction)ಬರಬೇಕು ಅಂದರೆ ಏನು ಮಾಡಬೇಕು? ಇದು ನಮ್ಮೆಲ್ಲರಲ್ಲಿರುವ ಸರ್ವೇಸಾಮಾನ್ಯ ಪ್ರಶ್ನೆ. ಅದಕ್ಕಾಗಿ ಇಲ್ಲಿ ಹೇಳುತ್ತಾರೆ: “ಜನ್ಮಾದ್ಯಸ್ಯ ಯತಃ” ಎಂದು. ಬ್ರಹ್ಮಸೂತ್ರದಲ್ಲಿ ಹೇಳುವಂತೆ: “ಅಥಾತೋ ಬ್ರಹ್ಮ ಜಿಜ್ಞಾಸಾ” [ಬ್ರಹ್ಮ ಸೂತ್ರ ೧.೧.]. ನಾವು ಮೊದಲು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ: ಈ ಪ್ರಪಂಚದಲ್ಲಿ ಯಾವುದೇ ಕಾರ್ಯ ನೆಡೆಯಬೇಕಾದರೂ  ಅದರ ಹಿಂದೆ ಒಂದು ಕಾರಣವಿರುತ್ತದೆ ಎನ್ನುವುದು. ಅಕಾರಣವಾಗಿ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಹಾಗಾಗಿ ಒಂದು ವಸ್ತು ನಿರ್ಮಾಣವಾಗಲು ಕಾರಣ ಇರಲೇಬೇಕು. ಕಾರಣದಲ್ಲಿ ಮುಖ್ಯವಾಗಿ ಎರಡು ವಿಧ. ಒಂದು ನಿಮಿತ್ತ ಕಾರಣ ಹಾಗೂ ಇನ್ನೊಂದು ಉಪಾದಾನ ಕಾರಣ. ಉದಾಹರಣೆಗೆ: ಮಣ್ಣಿನಿಂದ ಮಾಡಿಕೆಯಾಯಿತು ಎಂದರೆ ಅಲ್ಲಿ ಜಡವಾದ ಮಣ್ಣು ಉಪಾದಾನ ಕಾರಣ ಮತ್ತು ಬುದ್ಧಿಪೂರ್ವಕವಾಗಿ ಮಡಿಕೆ ಮಾಡುವ ಚೇತನ ನಿಮಿತ್ತಕಾರಣ. ಇಲ್ಲಿ ಬಳಕೆಯಾದ ‘ಇತರತಃ’ ಎನ್ನುವ ಪದ “ಯಾವುದೇ ಒಂದು ಕಾರ್ಯವಾಗಬೇಕಾದರೆ, ಯಾವುದೇ ಒಂದು ವಸ್ತು ನಿರ್ಮಾಣವಾಗಬೇಕಾದರೆ, ಅದರ ಹಿಂದೆ ಒಂದು ಚೇತನ ಶಕ್ತಿ ಇರಲೇಬೇಕು” ಎನ್ನುವುದನ್ನು ಪ್ರತಿಪಾದಿಸುತ್ತದೆ. ಈ ವಿಶ್ವ ಸೃಷ್ಟಿಯ ಹಿಂದಿರುವ ಚೇತನ ಆ ಭಗವಂತ. ಆತ ನಮ್ಮ ಅರಿವಿಗೆ ಮೀರಿ ನಿಂತವ. ಚೇತನಾಚೇತನ ಪ್ರಪಂಚ ಸೃಷ್ಟಿಗೆ ಕಾರಣ ಆ ಜಗಜ್ಜನ್ಮಾದಿಕರ್ತ ಭಗವಂತ.

ಭಗವಂತನ ಅರಿವು ಬರಬೇಕಾದರೆ ಮೊದಲು ನಾವು ವೇದಗಳಿಗೆ ಶರಣಾಗಬೇಕು. ‘ವೇದ’ ಮೂಲಭೂತವಾಗಿ  ಶಬ್ದಗಳ ಮೂಲಕ ನಮಗೆ ಭಗವಂತನ ಅರಿವು ಬರುವಂತೆ ಮಾಡುವ ಗ್ರಂಥ. ಋಗ್ವೇದದಲ್ಲಿ ಹೇಳುವಂತೆ: 
ನ ತಂ ವಿದಾಥ ಯ ಇಮಾ ಜಜಾನಾನ್ಯದ್ಯುಷ್ಮಾಕಮಂತರಂ ಬಭೂವ |
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ ೧೦.೦೮೨.೦೭
ಇಲ್ಲಿ ಹೇಳುತ್ತಾರೆ: ನಾವು ಭಗವಂತನ ಬಗ್ಗೆ ತಿಳಿದಿಲ್ಲ. ಏಕೆಂದರೆ ಅದು “ಬೇರೆ ಸಂಗತಿ” ಎಂದು. ಭಗವಂತ  ನಾವು ಕಲ್ಪಿಸಬಹುದಾದ, ಯೋಚಿಸಬಹುದಾದ, ಅರ್ಥಮಾಡಿಕೊಳ್ಳಬಹುದಾದ, ಎಲ್ಲಾ ಸಂಗತಿಗಳಿಗಿಂತ ಭಿನ್ನ. ಆದರೆ ಇಂತಹ ಭಗವಂತ ನಮ್ಮೊಳಗೇ ಇದ್ದಾನೆ, ನಮ್ಮ ಬಿಂಬರೂಪನಾಗಿ ನಮ್ಮ ಹೃದಯಕಮಲದಲ್ಲಿ ಆನಂದಮಯನಾಗಿ ಆತ ರಮಿಸುತ್ತಿದ್ದಾನೆ. ಹಾಗಾಗಿ ಭಗವಂತನನ್ನು ನಾವು ಎಲ್ಲೆಲ್ಲೂ ಹುಡುಕುವುದು ಬೇಡ. ಆತನನ್ನು ನಮ್ಮ ಹೃದಯದಲ್ಲಿ ನೋಡಲು ನಾವು ಪ್ರಯತ್ನಿಸೇಕು. ಮಂಜು ಕವಿದ ನಮ್ಮ ಕಣ್ಣಿಗೆ ಆತ ಕಾಣಲಾರ. ಭಗವಂತನನ್ನು ತಿಳಿಯಬೇಕಾದರೆ ನಾವು ವೇದಾಂತಸಾಹಿತ್ಯವನ್ನು, ವೇದವನ್ನು ತಿಳಿಯಬೇಕಾಗುತ್ತದೆ. ಅದು ಅರ್ಥವಾಗದಿದ್ದಾಗ  ವೇದಕ್ಕೆ ಸಂಬಂಧಿಸಿದ ಇತಿಹಾಸ-ಪುರಾಣಗಳನ್ನು ಒಂದಕ್ಕೊಂದು ಅನ್ವಯ ಮಾಡಿ ಅದರಲ್ಲಿ ಭಗವಂತನನ್ನು ಕಾಣಬೇಕು.
ವೇದವನ್ನು ಓದುವಾಗ ಒಂದೊಂದು ಕಡೆ ಒಂದೊಂದು ರೀತಿ ವಿವರಣೆ ಕಂಡು ಬರುತ್ತದೆ. ಉದಾಹರಣೆಗೆ ಅಗ್ನಿಸೂಕ್ತ ಓದಿದಾಗ ಅಗ್ನಿಯೇ ದೇವರು ಎನಿಸುತ್ತದೆ; ವಾಯು ಸೂಕ್ತ ಓದಿದಾಗ ವಾಯುವೇ ದೇವರು ಎನಿಸುತ್ತದೆ. ಇನ್ನೊಂದು ಕಡೆ ಜಗತ್ತಿನಲ್ಲಿ ರುದ್ರನೇ ಶ್ರೇಷ್ಠ ಎನ್ನುವ ವಿವರಣೆ ವೇದದಲ್ಲಿ ಕಾಣಿಸುತ್ತದೆ. ಈ ರೀತಿ ವೇದದಲ್ಲಿನ ವಿವರಣೆಗಳಿಂದ ಗೊಂದಲವಾದಾಗ, ಅಲ್ಲಿ ಬರುವ ಒಂದೊಂದು ನಾಮವನ್ನೂ ಭಗವಂತನಲ್ಲಿ ಸಮನ್ವಯ ಮಾಡಬೇಕು. ಒಂದೊಂದು ನಾಮವನ್ನು ಭಗವಂತನಲ್ಲಿ ಸಮನ್ವಯ ಮಾಡಿ ನೋಡಿದಾಗ ಎಲ್ಲಾ ನಾಮಗಳು ಒಬ್ಬನೇ ಒಬ್ಬ ಭಗವಂತನನ್ನು ಹೇಳುತ್ತದೆ ಎನ್ನುವುದು ತಿಳಿಯುತ್ತದೆ. ವಾಯು, ರುದ್ರ, ಅಗ್ನಿ, ಇಂದ್ರ, ಇತ್ಯಾದಿ ಯಾವುದೇ  ನಾಮದಿಂದ ಕರೆದರೂ ಒಬ್ಬನೇ ಒಬ್ಬ ಭಗವಂತನನ್ನು ಕರೆಯುವುದೇ ಹೊರತು, ಅನಂತ ದೇವರನ್ನು ವೇದ ಹೇಳುವುದಿಲ್ಲ. ಶ್ವೇತಾಶ್ವತರ ಉಪನಿಷತ್ತಿನಲ್ಲಿ ಹೇಳುವಂತೆ:
 ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾಂತರಾತ್ಮಾ
ಸರ್ವಾಧ್ಯಕ್ಷಃ ಸರ್ವಭೂತಾಧಿವಾಸಃ ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ ೬-೧೧
ಹೀಗೆ ಸರ್ವಗತನಾದ ಒಬ್ಬ ಭಗವಂತನನ್ನು ಸಮನ್ವಯದಿಂದ ತಿಳಿಯಲು ಬರುತ್ತದೆ. ವೇದದ ಹಿನ್ನೆಲೆಯಲ್ಲಿ ಸಮಸ್ತ ವೇದ-ಪುರಾಣಗಳನ್ನು ಸಮನ್ವಯ ಮಾಡಿ, ಶ್ರುತಿ, ಉಪಸಂಹಾರಗಳಿಂದ, ಯಾವುದು ನಿಜವಾದ ಅರ್ಥ ಎಂದು ತೀರ್ಮಾನ ಮಾಡುವುದೇ ಸಮನ್ವಯ. ತರ್ಕಬದ್ಧವಾಗಿ ಸಮಸ್ತ ವೇದವೂ ಒಬ್ಬನೇ ಒಬ್ಬ ಭಗವಂತನನ್ನು ಹೇಳುತ್ತದೆ ಎಂದು ನಮಗೆ ತಿಳಿದಾಗ, ಎಲ್ಲಾ ತರ್ಕಗಳೂ ಭಗವಂತನನ್ನು ಉಪಪಾದಿಸುವ(To Prove) ತರ್ಕಗಳಾಗುತ್ತವೆ. ಆಗ ಭಗವಂತನಿಲ್ಲ ಎನ್ನುವ ಯಾವ ಯುಕ್ತಿಯೂ ನಮಗೆ ಕಾಣಸಿಗುವುದಿಲ್ಲ. ಕಠೋಪನಿಷತ್ತಿನಲ್ಲಿ ಯಮ ಹೇಳುವಂತೆ:
ಸರ್ವೇ ವೇದಾ ಯತ್ಪದಮಾಮನಂತಿ  ತಪಾಂಸಿ ಸರ್ವಾಣಿ ಚ ಯದ್ವದಂತಿ ।  ೧-೧೫ ।
ಎಲ್ಲಾ ಯುಕ್ತಿಗಳೂ ಭಗವಂತನ ಅಸ್ತಿತ್ವವನ್ನೇ ಸಾರುತ್ತವೆ ಹೊರತು ನಿರಾಕರಣೆ ಮಾಡುವುದಿಲ್ಲ. ಆದರೆ ಒಂದು  ತಮಾಷೆಯ ವಿಷಯವೆಂದರೆ: ಭಗವಂತನ ಅರಿವು ಬರುವ ತನಕ ನಮಗೆ ಯಾವುದೇ ಯುಕ್ತಿಯಿಂದ ಭಗವಂತನನ್ನು ಉಪಪಾದಿಸಲು ಬರುವುದಿಲ್ಲ; ಅರಿವು ಬಂದ ಮೇಲೆ ಭಗವಂತನನ್ನು ಹೇಳದ ಯುಕ್ತಿ ಕಾಣಸಿಗುವುದಿಲ್ಲ! ಸಮನ್ವಯದಿಂದ ಭಗವಂತನ ಅರಿವು ಬಂದ ಮೇಲೆ ಯಾವುದೇ ತರ್ಕ ಮಾಡಿದರೂ ಅದು ಭಗವಂತನ ಪರವಾಗಿಯೇ ಇರುತ್ತದೆ. ಇಡಿಯ ಜಗತ್ತಿಗೆ ಕಾರಣವಾಗಿರುವ ತತ್ತ್ವವನ್ನು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರ ಮಾತುಗಳಿಂದ ಸಮನ್ವಯಮಾಡಿ, ನಮಗೆ ತಿಳಿದ ತರ್ಕಗಳ ಮೂಲಕ ತಿಳಿದು, ಉಪಾಸನೆ ಮಾಡಿ, ಪ್ರತ್ಯಕ್ಷವಾಗಿ ಅರಿಯಬೇಕು.    

No comments:

Post a Comment