ಭಾಗವತವನ್ನು “ವೇದಾರ್ಥಪರಿಬೃಂಹಿತಃ” ಎಂದಿದ್ದಾರೆ. ಇದು ಅರ್ಥವಾಗಬೇಕಾದರೆ ನಾವು ಭಾಗವತ ಶ್ಲೋಕಗಳನ್ನು
ಗಮನಿಸಬೇಕು. ಅಲ್ಲಿ ವ್ಯಾಸರು ಪ್ರತಿಯೊಂದು ಪದ್ಯದಲ್ಲೂ ವೇದಾರ್ಥವನ್ನು ತುಂಬಿ, ಹೇಗೆ ವೇದದ ಚಿಂತನೆಗೆ
ನಮ್ಮನ್ನು ಅಣಿಗೊಳಿಸುತ್ತಾರೆ ಎನ್ನುವುದು ತಿಳಿಯುತ್ತದೆ. ಇದಕ್ಕೆ ಒಂದು ಪ್ರಸಿದ್ಧ ದೃಷ್ಟಾಂತ ಈ
ಕೆಳಗಿನ ವೇದ ಮಂತ್ರ:
“ನಮೋ ಮಹಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ ಆಶಿನೇಭ್ಯಃ”
ಇಲ್ಲಿ ‘ಆಶಿನೇಭ್ಯಃ’
ಎಂದರೆ ಏನು ಎನ್ನುವುದು ವೇದಾಧ್ಯಯನ ಮಾಡುವಾಗ ನಮಗೆ ಸ್ಪಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ
ವೇದವ್ಯಾಸರು ಭಾಗವತದಲ್ಲಿ ಹೀಗೆ ಹೇಳಿದ್ದಾರೆ:
ನಮೋ ಮಹದ್ಭ್ಯೋಽಸ್ತು ನಮಃ ಶಿಶುಭ್ಯೋ ನಮೋ ಯುವಭ್ಯೋ ನಮಃ ಆವಟುಭ್ಯಃ [೧೫-೧೩-೨೩].
ಇಲ್ಲಿ ಎಲ್ಲಾ ಪದಗಳನ್ನು
ವೇದಮಂತ್ರದಿಂದ ಆಯ್ಕೆ ಮಾಡಿದ ವೇದವ್ಯಾಸರು, ‘ಆಶಿನೇಭ್ಯಃ’
ಎನ್ನುವಲ್ಲಿ “ವಟುಭ್ಯಃ” ಎನ್ನುವ ಪದ ಬಳಸಿ ಆಶಿನೇಭ್ಯಃ ಎನ್ನುವ ಪದದ ಅರ್ಥ ವಿವರಣೆ ನೀಡಿದರು.
ಹೀಗೆ ವೇದದಲ್ಲಿ ಅಸ್ಪಷ್ಟವಾಗಿರುವ ಅನೇಕ ವಿಚಾರಗಳನ್ನು ಭಾಗವತ ಬಿಡಿಸಿ ಹೇಳುತ್ತದೆ. ಈ ರೀತಿಯ ವಿವರಣೆ
ಬೇರೆ ಪುರಾಣಗಳಿಗಿಂತ ಹೆಚ್ಚಾಗಿ ಭಾಗವತದಲ್ಲಿ ಬಳಕೆಯಾಗಿದೆ. ಹೀಗಾಗಿ ವೇದದ ಅರ್ಥ ನಮಗಾಗಬೇಕಾದರೆ
ನಾವು ಭಾಗವತವನ್ನು ಓದಬೇಕು. ವ್ಯಾಸರೇ ಹೇಳುವಂತೆ:
ಪುರಾಣಾನಾಂ ಸಾರರೂಪಃ ಸಾಕ್ಷಾದ್ ಭಗವತೋದಿತಃ |
ದ್ವಾದಶಸ್ಕಂದ ಸಂಯುಕ್ತಃ ಶತವಿಚ್ಛೇದ ಸಂಯುತಃ |
ಗ್ರಂಥೋSಷ್ಟಾದಶ ಸಾಹಸ್ರಃ ಶ್ರೀಮದ್ಭಾಗವತಾಭಿಧಃ |
ಹದಿನೆಂಟು ಪುರಾಣಗಳಲ್ಲಿ
ಭಾಗವತ ಸಾರಭೂತವಾದ ಪುರಾಣ ಎಂದು ತೀರ್ಮಾನ ಮಾಡಿ ವ್ಯಾಸರು ಈ ಗ್ರಂಥವನ್ನು ರಚನೆ ಮಾಡಿದರು. ಇದು ಭಗವಂತನ
ಕುರಿತಾದ ಗ್ರಂಥ ಮತ್ತು ಭಗವಂತನೇ ರಚಿಸಿದ ಗ್ರಂಥ. ಇದರಲ್ಲಿ ಹನ್ನೆರಡು ಸ್ಕಂದಗಳಿವೆ ಮತ್ತು ೧೮,೦೦೦
ಶ್ಲೋಕಗಳಿವೆ. ಇಲ್ಲಿ ಹೇಳುವಂತೆ ಭಾಗವತದಲ್ಲಿ ನೂರು ಪರಿಚ್ಛೇದಗಳಿವೆ. ಆ ನೂರು ಪರಿಚ್ಛೇದ ಯಾವುದು
ಎನ್ನುವುದು ನಮಗೆ ಅಸ್ಪಷ್ಟವಾದರೂ ಕೂಡಾ, “ಶತವಿಚ್ಛೇದ” ಎಂದರೆ ನೂರಾರು ಅಧ್ಯಾಯಗಳು ಎಂದು ನಾವು ತಿಳಿಯಬಹುದು.
ಪ್ರೀತಿಯ ಅಧ್ಯಾತ್ಮ
ಬಂಧುಗಳೇ, ಭಗವಂತ ನಮಗೆ ದಯಪಾಲಿಸಿರುವ ಈ ಅಪೂರ್ವ ಗ್ರಂಥವನ್ನು ಓದುವ ಹಾಗೂ ಓದಿ ತಿಳಿದು ಧನ್ಯರಾಗುವ
ಅಪೂರ್ವ ಅವಕಾಶವನ್ನು ಇಂದು ಆ ಭಗವಂತ ನಮಗೆ ಕರುಣಿಸಿದ್ದಾನೆ. ಇಂತಹ ಅದ್ಭುತ ಜ್ಞಾನಶಕ್ತಿಯನ್ನು ಅರಿಯುವ
ಸಾಮರ್ಥ್ಯ ನಮಗಿದೆಯೋ ಇಲ್ಲವೋ ನಮಗೇ ತಿಳಿಯದು. ಆದರೆ ನಮಗೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿ ತಿಳಿದಿದೆ.
ಅದೇನೆಂದರೆ: ಭಗವಂತ ಭಕ್ತ ಪರಾಧೀನ. ಆತ ತನ್ನ ಭಕ್ತ ಕೇಳಿದ್ದನ್ನು ಇಲ್ಲಾ ಎನ್ನಲಾರ. ಹಾಗಾಗಿ ಆ ಭಗವಂತನಲ್ಲಿ
“ಈ ಅತ್ಯದ್ಭುತವಾದ ಜ್ಞಾನವನ್ನು ಅರಿಯುವ ಶಕ್ತಿ ಕೊಡು” ಎಂದು ಬೇಡಿ, ಭಾಗವತವನ್ನು ಪ್ರವೇಶಿಸೋಣ.
*******
No comments:
Post a Comment