Tuesday, December 11, 2012

Shrimad BhAgavata in Kannada -ಪ್ರಸ್ತಾವನೆ-1


ಪ್ರಸ್ತಾವನೆ



ಭಗವಾನ್ ವೇದವ್ಯಾಸರು  ವೇದವನ್ನು ನಾಲ್ಕು ವಿಭಾಗ ಮಾಡಿ ನಮಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ವೇದಗಳು ಭಾರತೀಯ ತತ್ತ್ವಶಾಸ್ತ್ರದ ಅಡಿಗಲ್ಲು. ವೇದದ ಭಾಷೆ ತುಂಬಾ ಕ್ಲಿಷ್ಟ. ಅದನ್ನು ಜನಸಾಮಾನ್ಯರು ನೇರವಾಗಿ ಅರ್ಥಮಾಡಿಕೂಳುವುದು ಕಷ್ಟ. ಹಾಗಾಗಿ ವೇದಗಳಿಗೆ ಪೂರಕವಾಗಿ ವೇದಾರ್ಥ ಚಿಂತನೆ ನಡೆಯಬೇಕು ಎನ್ನುವ ಉದ್ದೇಶದಿಂದ ವೇದವ್ಯಾಸರು ವೇದಗಳಿಗೆ ಅನ್ವಯವಾಗಿ ಇತಿಹಾಸ ಪುರಾಣಗಳನ್ನು ರಚಿಸಿದರು. ರಾಮಾಯಣ ಮತ್ತು ಮಹಾಭಾರತ ವ್ಯಾಸರು ನಿರ್ಮಿಸಿದ ಇತಿಹಾಸಗಳಾದರೆ, ಪಂಚರಾತ್ರ ಭಗವಂತನ ನಾರಾಯಣ ರೂಪದಿಂದ ಆವಿರ್ಭಾವವಾಗಿರುವ ಇತಿಹಾಸ ಗ್ರಂಥ. ವೇದವ್ಯಾಸರು ರಚಿಸಿದ ಮಹಾಪುರಾಣಗಳು ಹದಿನೆಂಟು. ಅವುಗಳೆಂದರೆ:

  1. ಬ್ರಾಹ್ಮ ಅಥವಾ ಬ್ರಹ್ಮಪುರಾಣ [೧೦,೦೦೦ ಶ್ಲೋಕಗಳು]
  2. ಪಾದ್ಮ ಅಥವಾ ಪದ್ಮಪುರಾಣ [೫೫,೦೦೦ ಶ್ಲೋಕಗಳು]
  3. ವೈಷ್ಣವ ಅಥವಾ ವಿಷ್ಣು ಪುರಾಣ [೨೩,೦೦೦ ಶ್ಲೋಕಗಳು]
  4. ಶೈವ ಅಥವಾ ಶಿವ ಪುರಾಣ ಅಥವಾ ವಾಯು ಪುರಾಣ[೨೪,೦೦೦ ಶ್ಲೋಕಗಳು]
  5. ಭಾಗವತ ಪುರಾಣ [೧೮,೦೦೦ ಶ್ಲೋಕಗಳು]
  6. ನಾರದೀಯ ಅಥವಾ ನಾರದ ಪುರಾಣ [೨೫,೦೦೦ ಶ್ಲೋಕಗಳು]
  7. ಮಾರ್ಕಂಡೇಯ ಪುರಾಣ [೯,೦೦೦ ಶ್ಲೋಕಗಳು]
  8. ಆಗ್ನೇಯ ಅಥವಾ ಅಗ್ನಿ ಪುರಾಣ [೧೫,೪೦೦ ಶ್ಲೋಕಗಳು]
  9. ಭವಿಷ್ಯತ್ ಪುರಾಣ [೧೪,೫೦೦ ಶ್ಲೋಕಗಳು]
  10. ಬ್ರಹ್ಮವೈವರ್ತ ಪುರಾಣ [೧೮,೦೦೦ ಶ್ಲೋಕಗಳು]
  11. ಲೈಂಗ ಅಥವಾ ಲಿಂಗ ಪುರಾಣ [೧೧,೦೦೦ ಶ್ಲೋಕಗಳು]
  12. ವಾರಾಹ ಅಥವಾ ವರಾಹ ಪುರಾಣ [೨೪,೦೦೦ ಶ್ಲೋಕಗಳು]
  13. ಸ್ಕಾಂದ ಅಥವಾ ಸ್ಕಂದ ಪುರಾಣ [೮೧,೧೦೦ ಶ್ಲೋಕಗಳು]
  14. ವಾಮನ ಪುರಾಣ [೧೦,೦೦೦ ಶ್ಲೋಕಗಳು]
  15. ಕೌರ್ಮ ಅಥವಾ ಕೂರ್ಮ ಪುರಾಣ [೧೭,೦೦೦ ಶ್ಲೋಕಗಳು]
  16. ಮಾತ್ಸ್ಯ ಅಥವಾ ಮತ್ಸ್ಯ ಪುರಾಣ [೧೪,೦೦೦ ಶ್ಲೋಕಗಳು]
  17. ಗಾರುಡ ಅಥವಾ ಗರುಡ ಪುರಾಣ[೧೯,೦೦೦ ಶ್ಲೋಕಗಳು]
  18. ಬ್ರಹ್ಮಾಂಡ ಪುರಾಣ [೧೨,೦೦೦ ಶ್ಲೋಕಗಳು]
 ಈ ಹದಿನೆಂಟು ಪುರಾಣಗಳಲ್ಲಿ ಒಟ್ಟು ನಾಲ್ಕು ಲಕ್ಷ ಶ್ಲೋಕಗಳಿವೆ. ಇದಕ್ಕೆ ಮಹಾಭಾರತದ ಒಂದು ಲಕ್ಷ ಶ್ಲೋಕ ಸೇರಿದರೆ ಈ ವಾಙ್ಮಯದ ವ್ಯಾಪ್ತಿ ಐದು ಲಕ್ಷ ಶ್ಲೋಕಗಳು!
ಮುಖ್ಯವಾಗಿ ಇಂದು ಲಭ್ಯವಿರುವ ಇತಿಹಾಸಗಳು ಮೂರು. ಅವುಗಳೆಂದರೆ: ರಾಮಾಯಣ, ಭಾರತ ಮತ್ತು ಪಂಚರಾತ್ರ. ಇಂದು ನಮಗೆ ವ್ಯಾಸರು ರಚಿಸಿರುವ ಮೂಲರಾಮಾಯಣ ಲಭ್ಯವಿಲ್ಲ. ಈಗ ಲಭ್ಯವಿರುವ ರಾಮಾಯಣ ವಾಲ್ಮೀಕಿ ರಚಿತ. ಪಂಚರಾತ್ರ ವ್ಯಾಸರೂಪದಿಂದ ರಚಿತವಾದುದಲ್ಲ. ‘ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಂ’- ಅದು ಸ್ವಯಂ ನಾರಾಯಣ ರೂಪದಿಂದ ರಚಿತವಾದುದು. ಸೃಷ್ಟಿಯ ಆದಿಯಲ್ಲಿ ಬ್ರಹ್ಮ-ನಾರಾಯಣ ಸಂವಾದ ರೂಪದಲ್ಲಿ ಪಂಚರಾತ್ರ ಸೃಷ್ಟಿಯಾಯಿತು ಎನ್ನುತ್ತಾರೆ. ವ್ಯಾಸರೂಪದಲ್ಲಿ ರಚಿತವಾಗಿರುವ ಇತಿಹಾಸವೆಂದರೆ ಮಹಾಭಾರತ.
ವೇದವ್ಯಾಸರಿಂದ ರಚಿತವಾದ ಪುರಾಣಗಳು ಹದಿನೆಂಟು  ಮತ್ತು ಉಪಪುರಾಣಗಳು ಹದಿನೆಂಟು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇಂದು ಹದಿನೆಂಟು ಮಹಾಪುರಾಣಗಳು ಖಚಿತವಾಗಿ ಇವೆ ಎನ್ನುವುದು ತಿಳಿಯುತ್ತದೆ. ಆದರೆ ಉಪಪುರಾಣಗಳು ಹದಿನೆಂಟಕ್ಕಿಂತ ಹೆಚ್ಚು ಸಿಗುತ್ತಿದ್ದು, ಅದೆಲ್ಲವನ್ನೂ ವೇದವ್ಯಾಸರೇ ರಚಿಸಿದ್ದಾರೆ ಎಂದು ಹೇಳಲು ಖಚಿತವಾದ ಆಧಾರ ದೊರೆಯುತ್ತಿಲ್ಲ.
ಹದಿನೆಂಟು ಮಹಾಪುರಾಣಗಳಲ್ಲಿ ಬಹಳ ಪ್ರಸಿದ್ಧವಾದ, ಹೆಚ್ಚು ಮಹತ್ವವಾದ, ಪುರಾಣಗಳಲ್ಲೇ ಸಾರಭೂತವಾದ ಪುರಾಣ-ಭಾಗವತ. ಭಾಗವತಕ್ಕೆ  ಸಾವಿರಾರು ವರ್ಷಗಳ ವ್ಯಾಖ್ಯಾನ ಪರಂಪರೆ ಇರುವುದರಿಂದ, ಬೇರೆ ಪುರಾಣಗಳಂತೆ ಭಾಗವತ ಹೆಚ್ಚು ಪಾಠಾಂತರಗೊಂಡಿಲ್ಲ. ಭಾಗವತದ ವ್ಯಾಖ್ಯಾನಗಳಲ್ಲಿ ಬಹಳ ಪ್ರಾಚೀನ ವ್ಯಾಖ್ಯಾನ ಚಿತ್ಸುಖಿ ವ್ಯಾಖ್ಯಾನ. ಇದು ಶಂಕರಾಚಾರ್ಯರ ಶಿಷ್ಯಕೋಟಿಯಲ್ಲಿ ಒಬ್ಬರಾದ ಚಿತ್ಸುಖಾಚಾರ್ಯರು ಬರೆದ ವ್ಯಾಖಾನ. [ಇದರಿಂದ ನಮಗೆ ತಿಳಿಯುವುದೇನೆಂದರೆ: ಭಾಗವತ ಶಂಕರಾಚಾರ್ಯರ ಕಾಲದಲ್ಲೂ ಇದ್ದುದರಿಂದ, ಇದು ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾದ ಅರ್ವಾಚೀನ ಗ್ರಂಥ ಅಲ್ಲ ಎನ್ನುವುದು]. ಪ್ರಾಚೀನ ವ್ಯಾಖ್ಯಾನಗಳಲ್ಲಿ ಶ್ರೀಧರಸ್ವಾಮಿ ಬರೆದ ಟೀಕೆ ಅತ್ಯಂತ ಜನಪ್ರಿಯವಾಗಿದೆ. ಏಳು ಶತಮಾನಗಳ ಹಿಂದೆ ‘ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ’ ಎಂದು ಸಾರಿದ  ಶ್ರೀಮಧ್ವಾಚಾರ್ಯರು ಭಾಗವತದ ಅರ್ಥ ನಿರ್ಣಯಕ್ಕಾಗಿಯೇ  “ಭಾಗವತ ತಾತ್ಪರ್ಯ ನಿರ್ಣಯ” ಎನ್ನುವ ಗ್ರಂಥ ರಚನೆ ಮಾಡಿದರು. ಐದು ವರ್ಷ ಬಾಲಕನಿದ್ದಾಗಲೇ ಪುರಾಣಶ್ಲೋಕಗಳನ್ನು ಮತ್ತು ಅದರ ನಿಜ ಅರ್ಥವನ್ನು ನಿರರ್ಗಳವಾಗಿ ಹೇಳಿ ಅಚ್ಚರಿ ಮೂಡಿಸಿದ ಮಧ್ವಾಚಾರ್ಯರು ರಚಿಸಿದ ‘ಭಾಗವತ ತಾತ್ಪರ್ಯ ನಿರ್ಣಯ’ ಮೂಲಪ್ರತಿ ಸರ್ವಮೂಲ ಗ್ರಂಥ ಇಂದಿಗೂ ಲಭ್ಯವಿದೆ. ಹೀಗೆ ಭಾಗವತಕ್ಕೆ ಪುರಾತನವಾದ ಪಾಠ-ಪ್ರವಚನದ ವ್ಯಾಖ್ಯಾನ ಪರಂಪರೆ ಇರುವುದರಿಂದ  ಇಲ್ಲಿ ಸುಮಾರಾಗಿ ಶುದ್ಧಪಾಠವನ್ನು ಕಾಣಬಹುದು. ಇದೇ ಕಾರಣದಿಂದ ಪೌರಾಣಿಕವಾದ ಪ್ರಮೇಯಗಳಿಗೆ ಸಮರ್ಥನೆ ಮಾಡಬಹುದಾದ ಪುರಾಣವಾಗಿ ಭಾಗವತ ಉಳಿದಿದೆ.
ವೇದವ್ಯಾಸರು ವೇದದ ಅರ್ಥನಿರ್ಣಯಕ್ಕೋಸ್ಕರ ಹದಿನೆಂಟು ಪುರಾಣಗಳು ಮತ್ತು ಭಾರತವನ್ನು ನಮಗೆ ನೀಡಿದ್ದಾರೆ. ಈ ಹದಿನೆಂಟು ಪುರಾಣಗಳಲ್ಲಿ ಒಂದೊಂದು ಕಡೆ ವೇದದ ಒಂದೊಂದು ಭಾಗಕ್ಕೆ ಒತ್ತುಕೊಟ್ಟಿರುವುದನ್ನು ನಾವು ಕಾಣಬಹುದು. ಇತಿಹಾಸ ಪುರಾಣಗಳಿಂದಲೇ ವೇದ ಮಂತ್ರಗಳಿಗೆ ಅರ್ಥ ಹಚ್ಚಬೇಕು ಇಲ್ಲವಾದರೆ ಅಪಾರ್ಥವೋ ಅನರ್ಥವೋ ಆಗುವ ಅಪಾಯವುಂಟು ಎಂದು ಮಹಾಬಾರತ ನಮ್ಮನ್ನು ಎಚ್ಚರಿಸುತ್ತದೆ. [“ಇತಿಹಾಸಪುರಾನಭ್ಯಾ ವೇದಂ ಸಮುಪಬೃಂಹಯೇತ್”]
ಭಾಗವತ ಎನ್ನುವ ಹೆಸರಲ್ಲೇ ಎರಡು ಪುರಾಣಗಳಿವೆ. ಶ್ರೀಮದ್ ಭಾಗವತ ಮತ್ತು ದೇವಿ ಭಾಗವತ. ಉತ್ತರ ಭಾರತದಲ್ಲಿನ ಶಕ್ತಿ ಆರಾಧಕರು ದೇವಿ ಭಾಗವತವನ್ನು ಮಹಾಪುರಾಣ ಮತ್ತು ಶ್ರೀಮದ್ ಭಾಗವತವನ್ನು ಉಪಪುರಾಣ ಎನ್ನುತ್ತಾರೆ. ಆದರೆ ದಕ್ಷಿಣಭಾರತದವರು ಮತಭೇದವಿಲ್ಲದೆ, ಶ್ರೀಮದ್ ಭಾಗವತವೇ ಹದಿನೆಂಟು ಪುರಾಣಗಳಲ್ಲಿ ಸೇರಿದ ಮಹಾಪುರಾಣ, ದೇವಿ ಭಾಗವತ ಅಲ್ಲಾ ಎನ್ನುತ್ತಾರೆ.
ಭಾಗವತದ ವೈಶಿಷ್ಟ್ಯವೇನು? ಎಲ್ಲಾ ಪುರಾಣಗಳನ್ನು ವ್ಯಾಸರೇ ಸ್ವಯಂ ನಿರ್ಮಿಸಿರುವಾಗ, ಭಾಗವತಕ್ಕೆ ಶ್ರೇಷ್ಠತೆ ಹೇಗೆ ಬಂತು ಎನ್ನುವ ಪ್ರಶ್ನೆ ಕೆಲವರಲ್ಲಿದೆ. ಇದಕ್ಕೆ ಉತ್ತರ ಸುಲಭ. ಪುರಾಣಗಳೆಲ್ಲವೂ ಶ್ರೇಷ್ಠ. ಅದರಲ್ಲಿ ಮೇಲು-ಕೀಳು ಇಲ್ಲಾ. ಆದರೆ ಅದನ್ನು ಸ್ವೀಕರಿಸುವ ನಮ್ಮ ಗ್ರಹಣ ಪಾತ್ರೆಯಲ್ಲಿ ವ್ಯತ್ಯಾಸವಿದೆ! ಅನೇಕ ಪುರಾಣಗಳು ನಾವು ಸಾತ್ವಿಕರಲ್ಲದಿದ್ದರೆ ನಮ್ಮನ್ನು ರಾಜಸದತ್ತ ಅಥವಾ ತಾಮಸದತ್ತ  ವಯ್ಯಬಲ್ಲವು! ಅಲ್ಲಿ ಪುರಾಣ ರಾಜಸ ಅಥವಾ ತಾಮಸ ಅಲ್ಲಾ, ನಾವು ತಾಮಸರಾಗಿ ಅಥವಾ ರಾಜಸರಾಗಿ ಆ ಪುರಾಣ ಓದಿದರೆ, ಅಲ್ಲಿ ನಮಗೆ ತಾಮಸ ಅಥವಾ ರಾಜಸದ ಒತ್ತು ಕಾಣುತ್ತದೆ ಅಷ್ಟೇ.
ಏಕೆ ಸ್ವಯಂ ಭಗವಂತನ ಅವತಾರಿಯಾದ ವೇದವ್ಯಾಸರು ಇಂತಹ ಗ್ರಂಥ ರಚನೆ ಮಾಡಿದರು ಎನ್ನುವುದು ನಿಮ್ಮ ಮುಂದಿನ ಪ್ರಶ್ನೆಯಾಗಿದ್ದರೆ, ಅದಕ್ಕೆ ಉತ್ತರ ಅಷ್ಟಮೂರ್ತಿಯಾದ ಭಗವಂತ! ನಮಗೆ ತಿಳಿದಂತೆ ಭಗವಂತನ ವ್ಯಾಪಾರ ಅಷ್ಟ ವಿಧ. ಅವುಗಳೆಂದರೆ: ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷ.  ಇಲ್ಲಿ ಜ್ಞಾನ ಮತ್ತು ಅಜ್ಞಾನ ಎರಡನ್ನೂ ಕೊಡುವವನು ಭಗವಂತ! ಆದ್ದರಿಂದ ಎಲ್ಲವನ್ನೂ ನಿಚ್ಛಳವಾಗಿ ಪುರಾಣಗಳಲ್ಲಿ ಹೇಳಿಲ್ಲ. ಅಲ್ಲಿ ಯಾರಿಗೆ ಜ್ಞಾನ ಬರಬೇಕೋ ಅವರಿಗೆ ಜ್ಞಾನ, ಹಾಗೂ ಯಾರಿಗೆ ಅಜ್ಞಾನ ಬರಬೇಕೋ ಅವರಿಗೆ ಅಜ್ಞಾನ ಬರುವಂತೆ ಪುರಾಣಗಳಿವೆ. ಅಲ್ಲಿ ಮೇಲ್ನೋಟದ ಅರ್ಥ ಒಂದಾದರೆ, ಅದನ್ನು ಬಗೆದು ಒಳನೋಟದಲ್ಲಿ ನೋಡಿದರೆ ಇರುವ ಅರ್ಥವೇ ಇನ್ನೊಂದು! ಹಾಗಾಗಿ ಗೊಂದಲ ಮಾಡಿಕೊಂಡವರಿಗೆ  ವಿಪರೀತ ಅರ್ಥವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ನಾವು ವೇದವ್ಯಾಸರು ತಾಮಸ ಪುರಾಣ ಬರೆದರು ಎಂದು ಹೇಳುವುದು ತಪ್ಪು. ಪುರಾಣಗಳು ತಾಮಸ ಅಥವಾ ರಾಜಸ ಅರ್ಥ ಕೊಡುವುದು ಅದನ್ನು ಓದುವವರ ಯೋಗ್ಯತೆಗೆ ಸಂಬಂಧಿಸಿದ ವಿಚಾರ ಅಷ್ಟೇ.
ಎಲ್ಲಾ ಪುರಾಣಗಳಿಗೆ ಸಾರಭೂತವಾಗಿ ವೇದವ್ಯಾಸರು ಭಾಗವತ ಪುರಾಣ ರಚನೆ ಮಾಡಿದರು. ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ. ಇದು ೧೮,೦೦೦ ಗ್ರಂಥ.  ಸಂಸ್ಕೃತದಲ್ಲಿ ಒಂದು ಗ್ರಂಥ ಎಂದರೆ ೩೨ ಅಕ್ಷರ. ಆದ್ದರಿಂದ ಹದಿನೆಂಟು ಸಾವಿರ ಗ್ರಂಥ ಎಂದರೆ ೫,೭೬,೦೦೦ ಅಕ್ಷರಗಳು. "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಃ" ಒಮ್ಮೆ ವೇದವನ್ನು ಓದಿದರೆ ಅದರಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಹರಿನಾಮವನ್ನು ನಾವು ಪಠಿಸಿದಂತಾಗುತ್ತದೆ.  ಅದೇ ರೀತಿ ಭಾಗವತ ಕೂಡಾ. ಆದ್ದರಿಂದ ಭಾಗವತವನ್ನು ಒಮ್ಮೆ ಪಠಿಸಿದರೆ ಋಗ್ವೇದ ಓದಿದ್ದಕ್ಕಿಂತ ಹೆಚ್ಚು ಭಗವನ್ನಾಮ ಸ್ಮರಣೆ ಮಾಡಿದಂತಾಗುತ್ತದೆ. [ಋಗ್ವೇದದಲ್ಲಿ ೪,೩೨,೦೦೦ ಸಾವಿರ ಅಕ್ಷರಗಳಿವೆ].

4 comments:

  1. ಮತ್ತೊಂದು ಮಹತ್ಕಾರ್ಯ ಪ್ರಾರಂಭಿಸಿದ್ದೀರಿ ಪ್ರಕಾಶ್. ತುಂಬಾ ಚೆನ್ನಾಗಿ ಶುರುವಾಗಿದೆ. ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಧನ್ಯವಾದಗಳು ನಿಮಗೆ....


    ಶ್ಯಾಮಲ

    ReplyDelete
  2. ಧನ್ಯವಾದಗಳು💐💐👍

    ReplyDelete
  3. ಧನ್ಯವಾದಗಳು 👍

    ReplyDelete