Monday, December 24, 2012

Shrimad BhAgavata in Kannada -Skandha-01 CH-01 (7)


ಶ್ರೀಮದ್ಭಾಗವತ ಮಹಾಪುರಾಣದ ಕರ್ತೃ, ಅಧಿಕಾರಿ, ವಿಷಯ ಮತ್ತು ಫಲ

ಮಂಗಲಾಚರಣೆ ಮುಗಿದಮೇಲೆ ಗ್ರಂಥ ಮಾಹಿತಿ ಕೊಡುವ ಶ್ಲೋಕ ಎರಡನೇ ಶ್ಲೋಕ. ಇಲ್ಲಿ ಇಪ್ಪತ್ನಾಲ್ಕು ಪದಗಳಿದ್ದು ಒಟ್ಟು ಎಪ್ಪತ್ತಾರು ಅಕ್ಷರಗಳಿವೆ. ಇದು ಗಾಯತ್ತ್ರಿ ಸಮಾನವಾಗಿರುವ ಪದ್ಯ. ಇಲ್ಲಿರುವ ಇಪ್ಪತ್ನಾಲ್ಕು ಪದಗಳು ಗಾಯತ್ತ್ರಿ ಪ್ರತಿಪಾಧ್ಯನಾದ ಭಗವಂತನ ಚತುರ್ವಿಂಶತಿ [ಇಪ್ಪತ್ನಾಲ್ಕು] ರೂಪಗಳನ್ನು ಹೇಳತಕ್ಕಂತಹ ಶಬ್ದಗಳು. [ಭಗವಂತನ ಚತುರ್ವಿಂಶತಿ ಮೂರ್ತಿಗಳು: ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂಧನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ ಮತ್ತು ಕೃಷ್ಣ]. ಯಾವುದೇ ಒಂದು ಗ್ರಂಥವನ್ನು ಓದುವ ಮೊದಲು ನಮಗೆ ನಾಲ್ಕು ವಿಷಯಗಳು ತಿಳಿದಿರಬೇಕು. ೧. ಗ್ರಂಥದ ವಿಷಯ. ೨. ಗ್ರಂಥ ಓದುವುದರ ಪ್ರಯೋಜನ/ಫಲ. ೩. ಯಾರು ಓದಲು ಅರ್ಹರು(ಅಧಿಕಾರಿ) ೪. ಬರೆದ ವ್ಯಕ್ತಿ. 
ಶಾಸ್ತ್ರಕಾರರು ಹೇಳುವಂತೆ:

ಅಧಿಕಾರಂ ಫಲಂ ಚೈವ ಪ್ರತಿಪಾದ್ಯಂ ಚ ವಸ್ತು ಯತ್  ।
ಸ್ಮೃತ್ವಾ ಪ್ರಾರಭತೋ ಗ್ರಂಥಂ ಕರೋತೀಶೋ ಮಹತ್ಫಲಮ್  ॥

ಅಂದರೆ: ಅಧಿಕಾರಿ, ವಿಷಯ ಮತ್ತು ಪ್ರಯೋಜನ ತಿಳಿದು ಒಂದು ಗ್ರಂಥ ಅಧ್ಯಯನ ಮಾಡಿದರೆ, ಅದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಹಿನ್ನೆಲೆ ತಿಳಿದುಕೊಂಡು ಅಧ್ಯಯನ ಮಾಡುವುದರಿಂದ  ಭಗವಂತನ ವಿಶೇಷ ಅನುಗ್ರಹವಾಗುತ್ತದೆ. 

ಈ ಶ್ಲೋಕದಲ್ಲಿ ವೇದವ್ಯಾಸರು ಗ್ರಂಥದ ಅಧಿಕಾರಿ, ಗ್ರಂಥದಲ್ಲಿ ಬರುವ ವಿಷಯ ಮತ್ತು ಶ್ರೀಮದ್ ಭಾಗವತ ಓದುವುದರ ಮಹತ್ವವೇನು ಎನ್ನುವುದನ್ನು ವಿವರಿಸಿದ್ದಾರೆ.

ಧರ್ಮಃ ಪ್ರೋಜ್ಝಿತಕೈತವೋSತ್ರ ಪರಮೋ ನಿರ್ಮತ್ಸರಾಣಾಂ ಸತಾಮ್
ವೇದ್ಯಂ ವಾಸ್ತವಮತ್ರ ವಸ್ತು ಶಿವದಂ ತಾಪತ್ರಯೋನ್ಮೂಲನಮ್           
ಶ್ರೀಮದ್ಭಾಗವತೇ ಮಹಾಮುನಿಕೃತೇ ಕಿಂ ವಾSಪರೈರೀಶ್ವರಃ
ಸದ್ಯೋ ಹೃದ್ಯವರುಧ್ಯತೇSತ್ರ ಕೃತಿಭಿಃ ಶುಶ್ರೂಷುಭಿಸ್ತತ್ ಕ್ಷಣಾತ್           ॥೨॥

ಗ್ರಂಥದಲ್ಲಿನ ವಿಷಯದ ಕುರಿತು ವಿವರಿಸುತ್ತಾ ವ್ಯಾಸರು ಹೇಳುತ್ತಾರೆ: “ಅತ್ರ ಧರ್ಮಃ ಪ್ರೋಜ್ಝಿತಕೈತವಃ ಪರಮಃ” ಎಂದು. ಇಲ್ಲಿ  ‘ನಿಜವಾದ ಧರ್ಮ ಯಾವುದು  ಎನ್ನುವ ತಿಳುವಳಿಕೆ ಕೊಡುವ ಗ್ರಂಥ ಭಾಗವತ’ ಎಂದಿದ್ದಾರೆ ವ್ಯಾಸರು. ಇಲ್ಲಿ ಧರ್ಮದ ಕುರಿತು ಹೇಳುವಾಗ ‘ಪ್ರೋಜ್ಝಿತಕೈತವಃ  ಮತ್ತು ಪರಮಃ’ ಎನ್ನುವ ಎರಡು ವಿಶೇಷಣಗಳನ್ನು ಬಳಸಿ ಹೇಳಿರುವುದನ್ನು ನಾವು ಗಮನಿಸಬೇಕು. ಇದು ಧರ್ಮದ ಎರಡು ಆಯಾಮವನ್ನು ಹೇಳುತ್ತದೆ. ಕಪಟವೇ ಇಲ್ಲದ ಪರಿಶುದ್ಧತತ್ತ್ವ ಭಗವಂತನೇ ಧರ್ಮ  ಮತ್ತು  ಆತನೆಡೆಗೆ ಹೋಗಲು ನಾವು ಪಾಲಿಸಬೇಕಾದ ನಡೆಯೂ ಧರ್ಮ.  ಸಾಮಾನ್ಯವಾಗಿ ಪ್ರಪಂಚದಲ್ಲಿ ಜನರು ಎರಡು ಕಾರಣಗಳಿಗಾಗಿ  ಧರ್ಮ ಪಾಲಿಸುತ್ತಾರೆ. ಒಂದು ಭಯ ಹಾಗೂ ಇನ್ನೊಂದು ಫಲಾಪೇಕ್ಷೆ. ಆದರೆ ಈ ಎರಡು ಕಾರಣಕ್ಕಾಗಿ ಪಾಲಿಸುವ ಧರ್ಮ ಎಂದೂ ಸ್ವಚ್ಛವಾದ ಧರ್ಮವಾಗುವುದಿಲ್ಲ. ಆದ್ದರಿಂದ ಭಾಗವತ ಹೇಳುವುದು ಯಾವುದೇ ಫಲಾಪೇಕ್ಷೆ-ಭಯ ಇಲ್ಲದ ಧರ್ಮದ ನಡೆಯನ್ನು(ಪ್ರೋಜ್ಝಿತಕೈತವಃ). ಇನ್ನು  ಏಕೆ ಇಂತಹ ಧರ್ಮಾಚರಣೆ ಮಾಡಬೇಕು ಎನ್ನುವ ಪ್ರಶ್ನೆ. ಏಕೆಂದರೆ: ಈಶ್ವರಾರ್ಪಣೇನ ಪರಮಃ – ಫಲಾಪೇಕ್ಷೆ ಇಲ್ಲದೇ ಮಾಡುವ ಧರ್ಮ ಪರಮಮಾಂಗಲಿಕ. ಅದು ಭಗವಂತ ಪ್ರೀತನಾಗಲಿ ಎಂದು ಅರ್ಪಣಾಭಾವದಿಂದ ಮಾಡುವ ಕರ್ಮ. ಅಂತಹ ಶ್ರೇಷ್ಠವಾದ ನಿಷ್ಕಪಟ ಧರ್ಮವನ್ನೇ ಭಾಗವತ ಹೇಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಭಾಗವತ ಕಪಟವಿಲ್ಲದ, ಫಲದ ಆಸೆ ಇಲ್ಲದ, ಕೇವಲ ಭಗವಂತನ ಪ್ರೀತಿಗಾಗಿ ಬದುಕನ್ನು ಮೀಸಲಿಡಲು ಮಾಡಬೇಕಾದ ಧರ್ಮವನ್ನು ಹೇಳುವ ಗ್ರಂಥ. ಇದು ಧರ್ಮದಿಂದ ವೇದ್ಯನಾದ, ಧರ್ಮದ ಮೂಲಕ ಪಡೆಯಬೇಕಾದ ಭಗವಂತನನ್ನು ಹೇಳುವ ಗ್ರಂಥ. ಈ ಗ್ರಂಥದಲ್ಲಿ ಮನಸ್ಸನ್ನಿಟ್ಟರೆ ಪಡೆಯಲಾಗದ್ದು ಯಾವುದೂ ಇಲ್ಲಾ.

No comments:

Post a Comment