Wednesday, December 12, 2012

Shrimad BhAgavata in Kannada -ಪ್ರಸ್ತಾವನೆ-2


ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯರು ಹೇಳುವಂತೆ: “ಬ್ರಹ್ಮಸೂತ್ರ ಮಹಾಭಾರತ ಗಾಯತ್ತ್ರೀ ವೇದಸಂಬಂಧಶ್ಚಾಯಂ ಗ್ರಂಥಃ”. ಭಾಗವತ ಬ್ರಹ್ಮಸೂತ್ರದ ವಿವರಣೆ; ಮಹಾಭಾರತದ ವಿವರಣೆ ; ಅದು ಗಾಯತ್ತ್ರಿಯ ವಿವರಣೆ. ಬ್ರಹ್ಮಸೂತ್ರಕ್ಕೆ ವೇದವ್ಯಾಸರೇ ಬರೆದಿರುವ ಭಾಷ್ಯ ಭಾಗವತ ಎನ್ನಲಾಗುತ್ತದೆ. ವೇದವ್ಯಾಸರು ಭಾಗವತದ ಕುರಿತು ಹೇಳುತ್ತಾ ಹೀಗೆ ಹೇಳಿದ್ದಾರೆ: “ಅರ್ಥೋSಯಂ ಬ್ರಹ್ಮಸೂತ್ರಾಣಾಂ ಭಾರತಾರ್ಥ ವಿನಿರ್ಣಯಃ | ಗಾಯತ್ತ್ರೀಭಾಷ್ಯರೂಪೋSಸೌ ವೇದಾರ್ಥಪರಿಬೃಂಹಿತಃ”. ಬ್ರಹ್ಮಸೂತ್ರದ ಅರ್ಥ ವಿವರಣೆ ಭಾಗವತ; ಮಹಾಭಾರತದಲ್ಲಿ ಯಾವ ವಿಷಯ ಸಂಧಿಗ್ಧವಾಗಿದೆಯೋ ಅದನ್ನು ನಿರ್ಣಯ ಮಾಡತಕ್ಕಂತಹ ಪುರಾಣ ಭಾಗವತ; ಗಾಯತ್ತ್ರಿ ಭಾಷ್ಯ ಭಾಗವತ; ವೇದಾರ್ಥ ವಿವರಣೆ ಭಾಗವತ. ವೈದಿಕ ಸಾಹಿತ್ಯದಲ್ಲಿ ಗಾಯತ್ತ್ರಿಗೂ ಸಮಸ್ತ ವೇದಗಳಿಗೂ ಸಂಬಂಧವಿರುವಂತೆ, ಸಮಸ್ತ ವೈದಿಕ ವಾಙ್ಮಯಕ್ಕೆ  ಒಂದಕ್ಕೊಂದು ಪೂರಕವಾಗಿರುವ ಗ್ರಂಥ ಭಾಗವತ.
ಭಾಗವತ ಬ್ರಹ್ಮಸೂತ್ರದ ವಿವರಣೆ ಹೇಗೆ ಎನ್ನುವುದನ್ನು ಇಲ್ಲಿ ಸ್ಥೂಲವಾಗಿ ನೋಡೋಣ. ಬ್ರಹ್ಮಸೂತ್ರಕ್ಕೂ ಭಾಗವತಕ್ಕೂ ಇರುವ ಸಂಬಂಧವನ್ನು ಭಾಗವತದ ಮೊದಲ ಶ್ಲೋಕವೇ ಸೂಚಿಸುತ್ತದೆ. ಬ್ರಹ್ಮಸೂತ್ರದ ಎರಡನೇ ಸೂತ್ರವೇ ಭಾಗವತದ  ಆರಂಭ. [ಓಂ ಜನ್ಮಾದ್ಯಸ್ಯ ಯತಃ ಓಂàಬ್ರಹ್ಮಸೂತ್ರ ೨ನೇ ಸೂತ್ರ] ಹಾಗೇ ಶ್ಲೋಕದ ಮುಂದುವರಿಕೆ ಕೂಡಾ ಸಮನ್ವಯಾತ್ ಎನ್ನುವ ಸೂತ್ರದಿಂದಲೇ ಬಂದಿದೆ. [ಓಂ ತತ್ತು ಸಮನ್ವಯಾತ್  ಓಂàಬ್ರಹ್ಮಸೂತ್ರ ೪ನೇ ಸೂತ್ರ]. ಹೀಗೆ ಭಾಗವತದ ಮಂಗಲ ಪದ್ಯದಲ್ಲೇ ವೇದವ್ಯಾಸರು ಬ್ರಹ್ಮಸೂತ್ರ ಮತ್ತು ಭಾಗವತದ ಸಂಬಂಧದ ಸೂಚನೆ ಕೊಟ್ಟಿದ್ದಾರೆ. ಭಗವಂತ ಈ ಜಗತ್ತಿನ ಸರ್ವಕಾರಣ ಎನ್ನುವುದು ವೇದಾಂತಸೂತ್ರದ ಒಟ್ಟು ಸಾರ. ಸರ್ವಕಾರಣತ್ವವನ್ನು ಭಗವಂತನಲ್ಲಿ ಸಮಕ್ಷಿಸುವುದು ಮತ್ತು ಸರ್ವಗುಣಪೂರ್ಣತ್ವವನ್ನು ಸರ್ವಶಬ್ದಗಳಿಂದ ಸಮನ್ವಯ ಮಾಡುವುದು ಭಾಗವತದ ಒಟ್ಟು ಪ್ರಮೇಯ. ಒಟ್ಟಿನಲ್ಲಿ ಹೇಳಬೇಕೆಂದರೆ: ಬ್ರಹ್ಮಸೂತ್ರದಲ್ಲಿ ಹೇಳಿರುವ ಸರ್ವಗುಣಪೂರ್ಣತ್ವವನ್ನು, ಸರ್ವಶಬ್ದವಾಚ್ಯತ್ವವನ್ನು ಭಗವಂತನ ಅನೇಕ ಅವತಾರಗಳ ಮೂಲಕ ಬಿತ್ತರಿಸುವ ಗ್ರಂಥವಾದ ಭಾಗವತ ಬ್ರಹ್ಮಸೂತ್ರದ ಅರ್ಥರೂಪದಲ್ಲಿದೆ.
ಮೇಲೆ ಹೇಳಿದಂತೆ ಭಾಗವತ “ಭಾರತಾರ್ಥ ವಿನಿರ್ಣಯಃ”. ಇದು ಹೇಗೆಂದರೆ: ಮಹಾಭಾರತದಲ್ಲಿ ಅಸ್ಪಷ್ಟವಾಗಿ ಹೇಳಿದ ಮಾತುಗಳನ್ನು ಭಾಗವತದಲ್ಲಿ ಸ್ಪಷ್ಟವಾಗಿ ವಿವರಿಸಿರುವುದನ್ನು ಕಾಣುತ್ತೇವೆ. ಒಂದು ರೀತಿಯಲ್ಲಿ ಭಾಗವತ ಮತ್ತು ಮಹಾಭಾರತ ಪೂರ್ವಾರ್ದ-ಉತ್ತರಾರ್ದವಿದ್ದಂತೆ. ಉದಾಹರಣೆಗೆ ಭಾಗವತ ಕೃಷ್ಣನ ಬಾಲಲೀಲೆಗಳನ್ನು ಹೇಳಿದರೆ, ಮಹಾಭಾರತ ಪ್ರೌಡ ಕೃಷ್ಣನ ಕಥೆಯನ್ನು ವಿವರಿಸುತ್ತದೆ. ಇನ್ನೊಂದು ಮುಖದಲ್ಲಿ ನೋಡಿದರೆ ಮಹಾಭಾರತ ಪೂರ್ವಾರ್ದ ಹಾಗೂ ಭಾಗವತ ಉತ್ತರಾರ್ದ. ಏಕೆಂದರೆ ಭಾಗವತ ಪ್ರಾರಂಭವಾಗುವುದು ಮಹಾಭಾರತ ಮುಗಿದ ಮೇಲೆ. ಪಾಂಡವರ ನಂತರ ಅಭಿಮನ್ಯುವಿನ ಮಗ ಪರೀಕ್ಷಿತ ರಾಜ ಪಟ್ಟಕ್ಕೆ ಬಂದಾಗ ಭಾಗವತ ಪ್ರಾರಂಭವಾಗುತ್ತದೆ.
ಭಾಗವತದಲ್ಲಿ ಸಂಕ್ಷಿಪ್ತವಾಗಿ ಹೇಳಿರುವುದನ್ನು ಮಹಾಭಾರತ ವಿಸ್ತಾರವಾಗಿ ಹೇಳುವುದನ್ನು ನಾವು ಕಾಣಬಹುದು. ಉದಾಹರಣೆಗೆ: ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿದ್ದಾಗ ಪಾಂಡವರಿಗೆ, ವಿಶೇಷವಾಗಿ ಧರ್ಮರಾಯನಿಗೆ ಮಾಡಿದ ಉಪದೇಶ ಭಾರತದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ.[ಶಾಂತಿಪರ್ವ ಮತ್ತು ಅನುಶಾಸನ ಪರ್ವ] ಆದರೆ ಈ ವಿವರಣೆಯನ್ನು ಭಾಗವತದಲ್ಲಿ ಕೇವಲ ಮೂರು ಶ್ಲೋಕಗಳಲ್ಲಿ ಚುಟುಕಾಗಿ ವಿವರಿಸಲಾಗಿದೆ.  ಆದರೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಎರಡು ಬಾರಿ ಕೃಷ್ಣನನ್ನು ನೆನೆದು ಧ್ಯಾನ ಮಾಡುವ ಎರಡು ಭೀಷ್ಮಸ್ತವಗಳಿವೆ. ಇದರ ವಿವರಣೆ ಭಾರತದಲ್ಲಿ ವಿವರವಾಗಿ ಕೊಟ್ಟಿಲ್ಲ. ಆದರೆ ಇದನ್ನು ವಿಸ್ತಾರವಾಗಿ ಭಾಗವತದಲ್ಲಿ ವಿವರಿಸಿದ್ದಾರೆ. ಹೀಗೆ ಭಾಗವತ ಭಾರತದ ಅರ್ಥ ನಿರ್ಣಯಾತ್ಮಕ ಗ್ರಂಥ.
ಇನ್ನು ವೈದಿಕ ವಾಙ್ಮಯದಲ್ಲಿ ನೋಡಿದರೆ ಇಡೀ ವೇದಕ್ಕೆ ಮೂಲಭೂತವಾಗಿರುವ ಮಂತ್ರ ಗಾಯತ್ತ್ರಿ. ಓಂಕಾರದ ಮೂರು ಅಕ್ಷರಗಳು ಒಡೆದು ಮೂರು ವ್ಯಾಹೃತಿಗಳಾದವು, ಮೂರು ವ್ಯಾಹೃತಿಗಳು  ಚಿಗುರಿ ಮೂರು ಪಾದದ ಗಾಯತ್ತ್ರಿಯಾಯಿತು, ಮೂರು ಪಾದದ ಗಾಯತ್ತ್ರಿ ಬೆಳೆದು ಮೂರು ವರ್ಗದ ಪುರುಷಸೂಕ್ತವಾಯಿತು, ಈ ಪುರುಷ ಸೂಕ್ತ ಬೆಳೆದು ಮೂರು ವೇದಗಳಾಯಿತು. ಹಾಗಾಗಿ ಗಾಯತ್ತ್ರಿಯಿಂದ ವೇದದ ತನಕ ಒಂದು ಸಂಬಂಧವಿದೆ. ಯಾವುದು ಗಾಯತ್ತ್ರಿ ಪ್ರತಿಪಾದ್ಯವೋ ಅದೇ ವೇದ ಪ್ರತಿಪಾದ್ಯ. ಆದ್ದರಿಂದ ಗಾಯತ್ತ್ರಿ ಪ್ರತಿಪಾದ್ಯನಾದ ಭಗವಂತನನ್ನೇ ಭಾಗವತ ಪ್ರತಿಪಾದಿಸುತ್ತದೆ. ಭಾಗವತದ ಮೊದಲ ಪದ್ಯದ ಉಪಸಂಹಾರ ಮಾಡುವಾಗ ಸತ್ಯಮ್ ಪರಮ್ ಧೀಮಹಿ ಎಂದು ಗಾಯತ್ತ್ರಿಯ ಪದದೊಂದಿಗೆ(ಧೀಮಹಿ) ಉಪಸಂಹಾರ ಮಾಡಿರುವುದನ್ನು ಕಾಣುತ್ತೇವೆ. ಇದು ಭಾಗವತ ಗಾಯತ್ತ್ರಿಯ ಭಾಷ್ಯರೂಪ ಎನ್ನುವುದನ್ನು ಸೂಚಿಸುತ್ತದೆ.
ಯಾವ ರೀತಿ ಭಾಗವತ ಗಾಯತ್ತ್ರಿಗೆ ಭಾಷ್ಯರೂಪದಲ್ಲಿದೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. “ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್” ಇಲ್ಲಿ ಹತ್ತು ಶಬ್ದಗಳಿವೆ. ಈ ಹತ್ತು ಶಬ್ದಗಳು ಭಗವಂತನ ಹತ್ತು ಅವತಾರವನ್ನು ಹೇಳುವ ಪದಗಳು. ಭಾಗವತ ಭಗವಂತನ ಈ ಹತ್ತು ಅವತಾರವನ್ನು ವಿಸ್ತಾರವಾಗಿ ವಿವರಿಸುತ್ತದೆ.
  1. ತತ್: ತತ ಅಂದರೆ ವಿಸ್ತಾರ.  ಸಣ್ಣದಾಗಿದ್ದದ್ದು ದೊಡ್ಡದಾಗಿ ಬೆಳೆದದ್ದು-ಮತ್ಸ್ಯಾವತಾರ. ಇದು ಪ್ರಳಯ ಕಾಲದಲ್ಲಿ ಋಷಿಗಳನ್ನು ದಡ ಹಾಯಿಸಿದ ರೂಪ.
  2. ಸವಿತ: ಅಂದರೆ ಸವನ ಅಥವಾ ಮಥನ. ಮಥನದಿಂದ ಅಮೃತ ತೆಗೆದ ಅವತಾರ-ಕೂರ್ಮಾವತಾರ
  3. ವರೇಣ್ಯಂ: ಇದು ವರಾಹ ಪದದ ಪರ್ಯಾಯ ಶಬ್ದ-ಎತ್ತರದಲ್ಲಿರುವವ-ಭೂಮಿಯನ್ನು ಎತ್ತರದಲ್ಲಿ ನಿಲ್ಲಿಸಿದ-ವರಾಹ ಅವತಾರ.
  4. ಭರ್ಗಃ:  ಶತ್ರುಗಳನ್ನು ಭರ್ಜನೆ ಮಾಡಿದ ಉಗ್ರ ರೂಪ-ನರಸಿಂಹಾವತಾರ
  5. ದೇವ: ದಿವು(ಧಾತು)- ಅಂದರೆ ವ್ಯವಹಾರ -ಮೂರು ಹೆಜ್ಜೆ ವ್ಯವಹಾರ ಮಾಡಿದವ –ವಾಮನರೂಪ
  6. ಧೀಮಹಿ: ಭೂಮಿಗೆ ಖುಷಿ ಕೊಟ್ಟವ-೨೧ಬಾರಿ ಅಸುರರ ಸಂಹಾರ ಮಾಡಿ ಭೂಮಿಗೆ ಖುಷಿ ಕೊಟ್ಟ-ಪರಶುರಾಮ
  7. ಧಿಯಃ: ಯಂ ಅಂದರೆ ವಾಯು ಬೀಜ. ಹನುಮಂತ ದೇವರಿಗೆ ಸಂತೋಷ ಕೊಟ್ಟ-ರಾಮಾವತಾರ.
  8. ಯಃ : ಅಂದರೆ ಜ್ಞಾನ. ಜ್ಞಾನರೂಪದಲ್ಲಿ ಭಗವದ್ಗೀತೆಯನ್ನು ಉಪದೇಶ ಮಾಡಿದ-ಕೃಷ್ಣಾವತಾರ
  9. ನಃ : ಎಲ್ಲವನ್ನೂ ನಯತಿ-ನಿಷೇಧ ಮಾಡಿದವ-ಶೂನ್ಯವಾದಿ -ಬುದ್ಧ
  10. ಪ್ರಚೋದಯಾತ್-ಧರ್ಮವನ್ನು ಪ್ರಚೋದನೆ ಮಾಡಿ ಕುದುರೆ ಮೇಲೆ ಬರುವವ-ಕಲ್ಕಿ    
ಹೀಗೆ ಭಗವಂತನ ಹತ್ತು ಅವತಾರಗಳ ಬಿತ್ತರವಾದ ಭಾಗವತ ಗಾಯತ್ತ್ರೀ ಭಾಷ್ಯ ಕೂಡಾ ಹೌದು.  

No comments:

Post a Comment