Saturday, December 29, 2012

Shrimad BhAgavata in Kannada -Skandha-01 -Ch-01(13)


ಆರು ಪ್ರಶ್ನೆಗಳು

ಭೂರೀಣಿ ಭೂರಿಕರ್ಮಾಣಿ ಶ್ರೋತವ್ಯಾನಿ ವಿಭಾಗಶಃ ।
ಅತಃ ಸಾಧೋSತ್ರ ಯತ್ ಸಾರಂ ಸಮುದ್ಗೃಹ್ಯ ಮನೀಷಯಾ ।
ಬ್ರೂಹಿ ಭದ್ರಾಯ ಭೂತಾನಾಂ ಯೇನಾತ್ಮಾSSಶು ಪ್ರಸೀದತಿ    ॥೧೧॥

ಮುಂದುವರಿದು ಋಷಿಗಳು ಹೇಳುತ್ತಾರೆ: ತಿಳಿಯಬೇಕಾಗಿರುವುದು ತುಂಬಾ ಇದೆ. ಒಂದೊಂದು ವಿಷಯವನ್ನು ವಿಭಾಗಮಾಡಿ ಅಧ್ಯಯನ ಮಾಡಲು ಒಂದು ಜನ್ಮ ಸಾಲದು ಮತ್ತು ಅದಕ್ಕಾಗಿ ಮಾಡಬೇಕಾದ ಕರ್ಮಗಳೂ ಅನಂತ. ಹಾಗಾಗಿ ಸಜ್ಜನರಾದ ತಾವು ಕಲಿಯುಗದ ಜನರಮೇಲೆ ಅನುಕಂಪ ತೋರಿ, ಜೀವಜಾತದ ಕ್ಷೇಮಕ್ಕೋಸ್ಕರ ಜ್ಞಾನವನ್ನು ನೀಡಬೇಕು. ತಾವು ಅಧ್ಯಯನ ಮಾಡಿರುವುದರಲ್ಲಿ, ಇಡೀ ಪ್ರಪಂಚಕ್ಕೆ ಅತ್ಯಂತ ಶ್ರೇಯಸ್ಕರವಾದ, ಸಾರಗಳಲ್ಲೇ ಸಾರವಾದ ವಿಷಯ ಯಾವುದು ಎಂದು ನೀವೇ ಗ್ರಹಣ ಮಾಡಿ ಹೇಳಬೇಕು. ಯಾವ ಮಾತನ್ನು ಕೇಳಿದಾಗ ಮನಸ್ಸು ಆನಂದದಿಂದ ಹುಚ್ಚೆದ್ದು ಕುಣಿಯಬಲ್ಲದೋ-ಅಂತಹ ಜೀವದ ಉದ್ದಾರದ ಮಾತನ್ನು; ಯಾವ ವಿಷಯವನ್ನು ನಾವು ತಿಳಿಯುವುದರಿಂದ ಭಗವಂತ ನಮ್ಮ ಮೇಲೆ ಪ್ರಸನ್ನನಾಗುತ್ತಾನೋ-ಅಂತಹ ಮಾತನ್ನು ಹೇಳಬೇಕಾಗಿ ಋಷಿಗಳು ಸೂತರಲ್ಲಿ ವಿನಂತಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ: ‘ಮನುಷ್ಯ ತನ್ನ ಜೀವನದಲ್ಲಿ ತಿಳಿಯಲೇಬೇಕಾದ ಅತ್ಯಂತ ಮುಖ್ಯವಾದ ಸಾರಭೂತ ಸಂಗತಿ ಯಾವುದು?’  ಇದು ಋಷಿಗಳು ಉಗ್ರಶ್ರವಸ್ಸಿನ ಮುಂದಿಟ್ಟ ಮೊದಲ ಪ್ರಶ್ನೆ.

ಸೂತ ಜಾನಾಸಿ ಭದ್ರಂ ತೇ ಭಗವಾನ್ ಸಾತ್ವತಾಂ ಪತಿಃ ।
ದೇವಕ್ಯಾಂ ವಸುದೇವಸ್ಯ ಜಾತೋ ಯಸ್ಯ ಚಿಕೀರ್ಷಯಾ          ॥೧೨॥

ತನ್ನಃ ಶುಶ್ರೂಷಮಾಣಾನಾಮರ್ಹಸ್ಯಂಗಾನುವರ್ಣಿತುಮ್ ।
ಯಸ್ಯಾವತಾರೋ ಭೂತಾನಾಂ ಕ್ಷೇಮಾಯ ವಿಭವಾಯ ಚ       ॥೧೩॥

ಈ ಹಿಂದೆ ಹೇಳಿದಂತೆ ಋಷಿಗಳ ಈ ಸಂಭಾಷಣೆ ಭಗವಂತ ಕೃಷ್ಣಾವತಾರ ಸಮಾಪ್ತಿ ಮಾಡಿದ ಕೆಲವು ವರ್ಷಗಳ ನಂತರ ನಡೆದ ಸಂಭಾಷಣೆ. ಇಲ್ಲಿ ಋಷಿಗಳು ಹೇಳುತ್ತಾರೆ: ಜಗತ್ತಿನ ಮೂಲಶಕ್ತಿಯಾದ ನಾರಾಯಣ-ಸಾತ್ವಿಕರ ಪತಿಯಾಗಿ ಯಾದವ ಕುಲದಲ್ಲಿ ಅವತರಿಸಿ ಬಂದ.  ಆತ ವಸುದೇವ-ದೇವಕಿಯರ ಮಗನಾಗಿ ಏಕೆ ಹುಟ್ಟಿಬಂದ? ಇದು ಎಂತಹ ಲೀಲೆ? ಕೃಷ್ಣಾವತಾರವನ್ನು ನೋಡಿದರೆ ಅದು ಇತರ ಅವತಾರಗಳಂತೆ ಒಬ್ಬ ದುಷ್ಟನನ್ನು ಸಂಹಾರ ಮಾಡುವುದಕ್ಕೋಸ್ಕರ ಆದ ಅವತಾರವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಕೃಷ್ಣಾವತಾರದಲ್ಲಿ  ದುಷ್ಟ ಸಮಷ್ಟಿಯ ಸಂಹಾರವಿದೆ, ಸಮಷ್ಟಿಯಾದ ಜ್ಞಾನಕಾರ್ಯವಿದೆ. ಇಂತಹ ವಿಶೇಷತೆಯನ್ನು ಭಗವಂತ ತನ್ನ ಬೇರೆ ಅವತಾರಗಳಲ್ಲಿ ತೋರಿಸಿಲ್ಲ. ಹಾಗಾಗಿ ಇದು ಎಲ್ಲರ ಕ್ಷೇಮಕ್ಕೋಸ್ಕರ ಮತ್ತು ಸಾಧಕನ ಅಧ್ಯಾತ್ಮದ ಅಭಿವೃದ್ಧಿಗಾಗಿ ತೋರಿದ ಅವತಾರ ಎನ್ನುವುದು ಸ್ಪಷ್ಟ. ಸರ್ವಸಮರ್ಥನಾದ ಭಗವಂತ ಸಂಕಲ್ಪಮಾತ್ರದಿಂದ ಎಲ್ಲವನ್ನೂ ಮಾಡಬಲ್ಲ. ಹೀಗಿರುವಾಗ ಯಾವುದೋ ಒಂದು ಕ್ರಿಯಾವಿಶೇಷ ಮಾಡುವುದಕ್ಕೋಸ್ಕರ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ?
ಕೃಷ್ಣನ ಅವತಾರದ ಹಿನ್ನೆಲೆ ಏನು? ಅವತಾರದ ಮಹಿಮೆ ಏನು? ಅವನು ಏತಕ್ಕಾಗಿ ಭೂಮಿಗಿಳಿದು ಬಂದು ಅದ್ಭುತ ಲೀಲೆಗಳನ್ನು ತೋರಿದ? ಭಗವಂತನ ಈ ಮಹಿಮೆಯನ್ನು ನಾವು ಕಿವಿಯಾರೆ ಕೇಳಲು ಬಯಸುತ್ತೇವೆ.  ಏಕೆಂದರೆ ಅಂತಹ ಭಗವಂತನ ಅವತಾರದ ಕಥೆಯನ್ನು ಕೇಳುವುದರಿಂದ ಸಿಗುವ ಆನಂದ ಅಪರಂಪಾರ. ಭಗವಂತನ ಅವತಾರದ ರಹಸ್ಯ ನಮಗೆ ಗೊತ್ತಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಮಗಾಗಿ ನೀವು ಅದನ್ನು ವರ್ಣಿಸಬೇಕು ಎಂದು ಶೌನಕಾದಿಗಳು ಕೇಳಿಕೊಳ್ಳುತ್ತಾರೆ. ಇದು ಋಷಿಗಳು ಕೇಳಿದ ಎರಡನೇ ಪ್ರಶ್ನೆ.  

ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್ ।
ತತಃ ಸದ್ಯೋ ವಿಮುಚ್ಯೇತ ಯಂ ಬಿಭೇತಿ ಸ್ವಯಂ ಭವಃ           ॥೧೪॥

ಸಂಸಾರ ಸಾಗರದಲ್ಲಿ ಈಜಾಡಲಾಗದೇ,  ಕಂಗಾಲಾಗಿ ಒದ್ದಾಡುತ್ತಿರುವ ಸಂಸಾರಿಯನ್ನು, ಕೈ ಹಿಡಿದು ದಡ ಹಾಯಿಸುವ ಸಾಧನ “ಭಗವಂತನ ನಾಮಸ್ಮರಣೆ” ಎನ್ನುತ್ತಾರೆ ಋಷಿಗಳು. ಈ ಶ್ಲೋಕ ಕೃಷ್ಣಾವತಾರದ ಹಿನ್ನೆಲೆಯಲ್ಲಿ ಬಂದಿರುವುದರಿಂದ, ವಿಶೇಷವಾಗಿ ಇಲ್ಲಿ ‘ಭಗವಂತನ ನಾಮಸ್ಮರಣೆ’ ಎಂದರೆ ‘ಕೃಷ್ಣಸ್ಮರಣೆ’.  ಈ ಶ್ಲೋಕದಲ್ಲಿ ಸಂಸಾರ ಸಾಗರದಲ್ಲಿರುವವರು ವಿವಶರಾಗಿ ಕೃಷ್ಣ ನಾಮವನ್ನು ಸ್ಮರಿಸಿದರೆ, ಅವರು ಸಂಸಾರ ಬಂಧದಿಂದ ಕಳಚಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಹೇಳಿದ್ದಾರೆ.  ಇಲ್ಲಿ ‘ವಿವಶರಾಗಿ ಭಗವಂತನ ನಾಮವನ್ನು ಹೇಳುವುದು’ ಎಂದರೆ-ಭಗವಂತನ ಎಚ್ಚರವಿಲ್ಲದೆ ಭಗವಂತನ ನಾಮ ಹೇಳುವುದು ಎಂದರ್ಥವಲ್ಲ. ನಿರಂತರ ಭಗವಂತನ ಸ್ಮರಣೆ, ಭಕ್ತಿ ಮತ್ತು ಉಪಾಸನೆಯಿಂದಾಗಿ, ನಮ್ಮ ದೇಹ-ಮಾತು-ಮನಸ್ಸು  ಭಗವಂತನ ಸಾಧನೆಗೆ ಶ್ರುತಿಗೂಡಿ, ತನ್ನಿಂದತಾನೇ(Automatic) ನಾವು ಭಗವಂತನ ನಾಮಸ್ಮರಣೆ ಮಾಡುವಂತಾದರೆ(ವಿವಶರಾದರೆ) ಅದು ಮೊಕ್ಷ ಸಾಧಕ.  ಕೃಷ್ಣನಾಮ ಸ್ಮರಣೆಗೆ ಸಂಸಾರವೂ(ಭವ) ಹೆದರುತ್ತದೆ. ಅಷ್ಟೇಅಲ್ಲ, ಅಂತಹ ಜೀವ ಮೃತ್ಯುವಿನ ನಿಯಂತ್ರಣಕ್ಕೆ ಸಿಗುವುದಿಲ್ಲ.(ಭವಃ ಅಂದರೆ ಶಿವ ಕೂಡಾ ಹೌದು. ಭಗವನ್ನಾಮ ಸ್ಮರಣೆ ಮಾಡುವವರನ್ನು ಶಿವ ಸಂಹಾರ ಮಾಡುವುದಿಲ್ಲ). “ನಿರಂತರ ನಾರಾಯಣ ಸ್ಮರಣೆ ಮಾಡುವವರನ್ನು ಒಮ್ಮೆಗೆ ವಿಚಾರ ಮಾಡದೇ ನನ್ನ ಬಳಿ ಕರೆತರಬೇಡಿ. ಏಕೆಂದರೆ ಅವರು ನಾರಾಯಣನ ಸೊತ್ತು ಮತ್ತು ಅವರ ಮೇಲೆ ನನಗೆ ಹಿಡಿತವಿಲ್ಲ” ಎಂದು ಯಮದೂತರಿಗೆ ಯಮ ಹೇಳುವುದನ್ನು ವಿಷ್ಣುಪುರಾಣದಲ್ಲಿ ಹಾಗೂ ಭಾಗವತದ ಅಜಾಮಿಳನ ಕಥೆಯಲ್ಲಿ ಕಾಣುತ್ತೇವೆ. ಹೀಗಾಗಿ ಯಾರ ಬಾಯಿಯಲ್ಲಿ ನಿರಂತರ ಭಗವಂತನ ನಾಮಸ್ಮರಣೆ ಇದೆಯೋ, ಅವರು ಸಂಸಾರದಿಂದ ಬಿಡುಗಡೆಗೊಂಡು ಮುಕ್ತಿ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎನ್ನಬಹುದು.

ಯತ್ಪಾದಸಂಶ್ರಯಾಃ ಸೂತ ಮುನಯಃ ಪ್ರಶಮಾಯನಾಃ ।
ಸದ್ಯಃ ಪುನಂತ್ಯುಪಸ್ಪೃಷ್ಟಾಃ ಸ್ವರ್ಧುನೀವಾನುಸೇವಯಾ          ॥೧೫॥

ಕೋ ವಾ ಭಗವತಸ್ತಸ್ಯ ಪುಣ್ಯಶ್ಲೋಕೇಡ್ಯಕರ್ಮಣಃ ।
ಶುದ್ಧಿಕಾಮೋ ನ ಶೃಣುಯಾದ್ ಯಶಃ ಕಲಿಮಲಾಪಹಮ್          ॥೧೬॥

ಕೇವಲ ಭಗವಂತನ ನಾಮವಷ್ಟೇ ಅಲ್ಲ, ಭಗವಂತನ ಭಕ್ತರ ಸೇವೆ ಕೂಡಾ ನಮ್ಮನ್ನು ಪಾವನಗೊಳಿಸುತ್ತದೆ. ಹೇಗೆ ಗಂಗೆಯಲ್ಲಿ ಸ್ನಾನ ಮಾಡುವುದರಿಂದ, ಗಂಗೆಯ ನೀರನ್ನು ಕುಡಿಯುವುದರಿಂದ ದೇಹ ಪವಿತ್ರವಾಗುತ್ತದೋ, ಹಾಗೇ ಕಾಮ-ಕ್ರೋದವನ್ನು ಗೆದ್ದು ಭಗವಂತನಲ್ಲಿ ಮನಸ್ಸನ್ನಿಟ್ಟ ಭಗವದ್ ಭಕ್ತರ ಸೇವೆ ಮಾಡುವುದರಿಂದ ಜೀವನದಲ್ಲಿ ಪರಿಶುದ್ಧರಾಗಿ ಬದುಕಬಹುದು.
ಪುಣ್ಯಶ್ಲೋಕನೂ, ಈಡ್ಯಕರ್ಮನೂ ಆದ ಭಗವಂತ, ಬ್ರಹ್ಮಾದಿ ಸಕಲ ದೇವತೆಗಳಿಂದ ಹಿಡಿದು ಎಲ್ಲರಿಂದ ಸ್ತುತ್ಯನಾದವನು. ಕಲಿಯುಗದಲ್ಲಿ ಅಂತಹ ಭಗವಂತನ ಲೀಲೆಗಳನ್ನು ಕೇಳುವುದರಿಂದ ನಮ್ಮೆಲ್ಲಾ ದೋಷಗಳು ಪರಿಹಾರವಾಗಿ, ನಾವು ಪರಿಶುದ್ಧರಾಗಬಹುದು. ಹೀಗಾಗಿ ನಮಗೆ ತಾವು ಕೃಷ್ಣನ ಅವತಾರದ ಹಿನ್ನೆಲೆ ಮತ್ತು ಮಹಿಮೆಯನ್ನು ಹೇಳಬೇಕು ಎಂದು ಶೌನಕಾದಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಳ್ಳುತ್ತಾರೆ.

ತಸ್ಯ ಕರ್ಮಾಣ್ಯುದಾರಾಣಿ ಪರಿಗೀತಾನಿ ಸೂರಿಭಿಃ ।
ಬ್ರೂಹಿ ನಃ ಶ್ರದ್ದಧಾನಾನಾಂ ಲೀಲಯಾ ದಧತಃ ಕಲಾಃ             ॥೧೭ ॥

ಮುಂದುವರಿದು ಋಷಿಗಳು ಹೇಳುತ್ತಾರೆ: ಕೇವಲ ಅವತಾರದ ಹಿನ್ನೆಲೆಯಷ್ಟೇ ಅಲ್ಲ, ಕೃಷ್ಣಾವತಾರದಲ್ಲಿ ಭಗವಂತ ತೋರಿದ ಎಲ್ಲಾ ಅಪೂರ್ವ ಲೀಲೆಗಳನ್ನೂ ವಿವರವಾಗಿ ಹೇಳಬೇಕು. ಇತರರು ಮಾಡಲು ಅಸಾಧ್ಯವಾದ, ಜ್ಞಾನಿಗಳು ಸದಾ ಸ್ತೋತ್ರ ಮಾಡುವ, ಮಹತ್ತರವಾದ ಕರ್ಮಗಳನ್ನು ಕೃಷ್ಣ ಮಾಡಿ ತೋರಿದ. ಇಂತಹ ಕೃಷ್ಣನ ಅವತಾರದ ಬಿತ್ತರವನ್ನು, ಕೃಷ್ಣನ ಅವತಾರದಲ್ಲಿ ಮಾಡಿದ ಒಂದೊಂದು ಕರ್ಮಗಳನ್ನು ನೀವು ನಮಗೆ ವಿವರಿಸಿ ಹೇಳಬೇಕು ಎನ್ನುವುದು ಶೌನಕಾದಿಗಳ ಮೂರನೇ ಪ್ರಶ್ನೆ.
ಅಥಾಖ್ಯಾಹಿ ಹರೇರ್ಧೀಮನ್ನವತಾರಕಥಾಃ ಶುಭಾಃ ।
ಲೀಲಾ ವಿದಧತಃ ಸ್ವೈರಮೀಶ್ವರಸ್ಯಾತ್ಮಮಾಯಯಾ               ॥೧೮ ॥

ಭಗವಂತ ಸ್ವಂತ ಇಚ್ಛೆಯಿಂದ, ತನ್ನ ಸ್ವರೂಪಭೂತ ಜ್ಞಾನದಿಂದ, ಸ್ವರೂಪ ಸಾಮರ್ಥ್ಯದಿಂದ  ತಾಳಿದ ಅನೇಕ ಅವತಾರಗಳನ್ನು ಮತ್ತು ವಿವಿಧ ಅವತಾರವನ್ನು ಧಾರಣೆಮಾಡಿ, ಈ ಜಗತ್ತಿನಲ್ಲಿ ತೋರಿದ ನಾನಾ ಲೀಲೆಗಳನ್ನು ನೀವು ನಮಗೆ ವಿವರಿಸಬೇಕು ಎಂದು ಋಷಿಗಳು ಕೇಳಿಕೊಳ್ಳುತ್ತಾರೆ. ಇದು ಶೌನಕಾದಿಗಳು ಕೇಳಿದ ನಾಲ್ಕನೇ ಪ್ರಶ್ನೆ.

ವಯಂ ತು ನ ವಿತೃಪ್ಯಾಮ ಉತ್ತಮಶ್ಲೋಕವಿಕ್ರಮೈಃ ।
ಯತ್ ಶೃಣ್ವತಾಂ ರಸಜ್ಞಾನಾಂ ಸ್ವಾದುಸ್ವಾದು ಪದೇಪದೇ        ॥೧೯ ॥

ನಮಗೆ ಭಗವಂತನ ಮಹಿಮೆಯನ್ನು ಕೇಳಿ ಸಾಕು ಎನಿಸುವುದಿಲ್ಲ.  ಅದು ಎಂದೂ ಸಾಕೆನಿಸದ ಅತ್ಯಂತ ಸವಿಯಾದ ರಸಧಾರೆ. ಹೆಜ್ಜೆಹೆಜ್ಜೆಗೂ ರಸಪಾಕವನ್ನು ಹರಿಸುವ ಈ ಜ್ಞಾನದ ರುಚಿ ನಮಗೆ ತಿಳಿದಿದೆ. ಅಂತಹ ಸ್ವಾರಸ್ಯಭರಿತ ಭಗವಂತನ ಮಹಿಮೆಯನ್ನು ನಮಗೆ ಹೇಳಬೇಕಾಗಿ ಋಷಿಗಳು ಪ್ರಾರ್ಥಿಸುತ್ತಾರೆ.

ಕೃತವಾನ್ ಕಿಲ ವೀರ್ಯಾಣಿ ಸಹ ರಾಮೇಣ ಕೇಶವಃ ।
ಅತಿಮರ್ತ್ಯಾನಿ ಭಗವಾನ್ ಗೂಢಃ ಕಪಟಮಾನುಷಃ                 ॥೨೦ ॥

ರಾಮ-ಲಕ್ಷ್ಮಣರೇ ಕೃಷ್ಣ-ಬಲರಾಮರಾಗಿ ಭೂಮಿಯಲ್ಲಿ ಅವತರಿಸಿದರು. ನಮಗೆ ಬಲರಾಮ-ಕೃಷ್ಣರು ಮಾಡಿದ ಕರ್ಮಗಳನ್ನು ಕೇಳಬೇಕು. ಅವರ ಸಾಹಸ ಪರಾಕ್ರಮ; ಶತ್ರು ಸಂಹಾರದಲ್ಲಿ ಅವರು ತೋರಿದ ಶೌರ್ಯದ ವೀರಗಾಥೆಯನ್ನು ಹೇಳಿರಿ ಎಂದು ಋಷಿಗಳು ಕೇಳಿಕೊಳ್ಳುತ್ತಾರೆ. ಇದು ಅವರ ಐದನೇ ಪ್ರಶ್ನೆ. ಕೃಷ್ಣಾವತಾರದಲ್ಲಿ ಭಗವಂತ ಮನುಷ್ಯರೂಪದಲ್ಲಿದ್ದು,  ಅತಿಮಾನುಷ ಲೀಲೆಗಳನ್ನು ತೋರಿದ. ಅಂತಹ ಕೃಷ್ಣನ ಪರಾಕ್ರಮದ ಕಥೆಯನ್ನು ತಿಳಿಸಬೇಕೆಂದು ಋಷಿಗಳು ಕೇಳಿಕೊಳ್ಳುತ್ತಾರೆ.  

ಕಲಿಮಾಗತಮಾಜ್ಞಾಯ ಕ್ಷೇತ್ರೇSಸ್ಮಿನ್ ವೈಷ್ಣವೇ ವಯಮ್ ।
ಆಸೀನಾ ದೀರ್ಘಸತ್ರೇಣ ಕಥಾಯಾಂ ಸಕ್ಷಣಾ ಹರೇಃ               ॥೨೧ ॥

ತ್ವಂ ನಃ ಸಂದರ್ಶಿತೋ ಧಾತ್ರಾ ದುಸ್ತರಂ ನಿಸ್ತಿತೀರ್ಷತಾಮ್ ।
ಕಲಿಂ ಸತ್ತ್ವಹರಂ ಪುಂಸಾಂ ಕರ್ಣಧಾರ ಇವಾರ್ಣವಮ್                        ॥೨೨ ॥

ಈ ಕಲಿಯುಗದಲ್ಲಿ ಭಗವಂತನ ಮಹಿಮೆ ಕೇಳುವವರಿಲ್ಲ. ಆದರೆ ಅಂತಹ ಸ್ಥಿತಿ ಬರಬಾರದು. ಕಲಿಯುಗದಲ್ಲೂ ಜನ ಜಾಗೃತರಾಗಬೇಕು ಎನ್ನುವ ಉದ್ದೇಶದಿಂದ, ನಾವು ಈ ಕ್ಷೇತ್ರದಲ್ಲಿ  ಹರಿಯ ಕಥೆಯ ಶ್ರವಣ ನಡೆಯವ ವ್ಯವಸ್ಥೆ ಮಾಡಿದ್ದೇವೆ. ಈ ಕಥಾ ಶ್ರವಣದಿಂದ ಭಗವಂತನ ಮಹಿಮೆ ಎಲ್ಲೆಡೆ ಹಬ್ಬಬೇಕು ಎನ್ನುವ ಸಂಕಲ್ಪ ನಮ್ಮದು. ನಾವು ಕೇಳಲು ಸಿದ್ದರಾಗಿ ಕುಳಿತಿದ್ದೇವೆ. ಹೇಳುವುದಕ್ಕಾಗಿ ಆ ಭಗವಂತ ನಿಮ್ಮನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾನೆ. ಇದು ಪುಣ್ಯಫಲದಿಂದ  ನಮಗೊದಗಿ ಬಂದ ಭಾಗ್ಯ ಮತ್ತು ಆ ಭಗವಂತನ ಸಂಕಲ್ಪ.
ಮನುಷ್ಯರ ಸಮಸ್ತ ಸಾಮರ್ಥ್ಯವನ್ನು ನಾಶಮಾಡಿ, ನಿಸ್ತೇಜ-ನಿರ್ಲಿಪ್ತರನ್ನಾಗಿ ಮಾಡುವ ಈ ಕಲಿಯ ಪ್ರಭಾವದಿಂದ ಪಾರುಮಾಡಲು ಭಗವಂತ ನಿಮ್ಮನ್ನು ಕಳುಹಿಸಿ ಕೊಟ್ಟಿದ್ದಾನೆ. ಕಲಿಯ ಪ್ರಭಾವದ ಸಮುದ್ರದಲ್ಲಿ ಈಜಲಾಗದೆ ಕೈಸೋತು ಮುಳುಗುವ ಪರಿಸ್ಥಿತಿಯಲ್ಲಿ  ನಮ್ಮನ್ನು ಪಾರುಮಾಡಲು ಆ ಭಗವಂತ ಕಳುಹಿಸಿದ ಅಂಬಿಗ ನೀವು. ನಿಮ್ಮಿಂದ ಜ್ಞಾನಧಾರೆಯನ್ನು ನಾವು ಕೇಳಲು ಸಿದ್ದರಾಗಿ ನಿಂತಿದ್ದೇವೆ. ನೀವು ಹೇಳಬೇಕು.

ಬ್ರೂಹಿ ಯೋಗೇಶ್ವರೇ ಕೃಷ್ಣೇ ಬ್ರಹ್ಮಣ್ಯೇ ಧರ್ಮಕರ್ಮಣಿ ।
ಸ್ವಾಂ ಕಾಷ್ಠಾಮಧುನೋಪೇತೇ ಧರ್ಮಃ ಕಂ ಶರಣಂ ಗತಃ        ॥೨೩ ॥

ಧರ್ಮಸಂಸ್ಥಾಪಕನಾಗಿ ಬಂದ ಕೃಷ್ಣ ಧರ್ಮವನ್ನು ಹೆಗಲಲ್ಲಿ ಹೊತ್ತ. ಈ ದೇಶವನ್ನು ಧರ್ಮದ ದಾರಿಯಲ್ಲಿ ನಡೆಸುವ ಪಾಂಡವರ ಕೈಯಲ್ಲಿ ಕೊಟ್ಟ. ಧರ್ಮಕ್ಕೆ ಆಶ್ರಯನಾಗಿದ್ದ ಕೃಷ್ಣ ಅವತಾರ ಸಮಾಪ್ತಿಮಾಡಿದ ಮೇಲೆ ಭೂಮಿಯಲ್ಲಿ ಧರ್ಮಕ್ಕೆ ಯಾರು ಗತಿ? ಇದು ಋಷಿಗಳ ಆರನೇ ಮತ್ತು ಕೊನೇಯ ಪ್ರಶ್ನೆ.
ಯೋಗಶಾಸ್ತ್ರವಾದ ಭಗವದ್ಗೀತೆಯನ್ನು ಎಲ್ಲಾಯೋಗಿಗಳಿಗೆ ಮಹಾಯೋಗಿಯಾಗಿ ಹೇಳಿದ ಯೋಗಾಚಾರ್ಯ ಕೃಷ್ಣ. ಈ ದೇಶದ ಧರ್ಮಸಂಸ್ಥಾಪಕನಾಗಿ ಆತ ೧೦೬.೫ ವರ್ಷ ನಮಗೆ ಕಾಣಿಸಿಕೊಂಡ. ಧರ್ಮವನ್ನು ಎತ್ತಿಹಿಡಿದು ಸದಾ ಭಗವಂತನ ಭಕ್ತರಿಗೆ ಆಶ್ರಯನಾಗಿ ನಿಂತ ಕೃಷ್ಣ. ಈಗ ಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡಿರುವುದರಿಂದ, ಈ ಭೂಮಿಯಲ್ಲಿ ಧರ್ಮ ಯಾರ ಆಲಂಭನದಲ್ಲಿ ನಿಂತಿದೆ? ಈ ಕಲಿಯುಗದಲ್ಲಿ ಕೃಷ್ಣನ ಪ್ರತೀಕ ಯಾವುದು? ಯಾವುದರ ಮೂಲಕ ನಾವು ಧರ್ಮವನ್ನು ತಿಳಿಯಬೇಕು? ಇದನ್ನು ನಮಗೆ ಹೇಳು ಎಂದು ಶೌನಕಾದಿಗಳು ಉಗ್ರಶ್ರವಸ್ಸರನ್ನು ಕೇಳಿಕೊಳ್ಳುತ್ತಾರೆ.  ಈ ಎಲ್ಲಾ ಪ್ರಶ್ನೆಗಳಿಗೆ ಉಗ್ರಶ್ರವಸ್ ಕೊಡುವ ಉತ್ತರವೇ ಭಾಗವತ. ಭಾಗವತ ಹೇಗೆ ರೂಪುಗೊಂಡಿತು ಎನ್ನುವುದಕ್ಕೆ ಈ ಅಧ್ಯಾಯ ಪ್ರಸ್ತಾವನೆ.

ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ಪ್ರಥಮಸ್ಕಂಧೇ ಪ್ರಥಮೋsಧ್ಯಾಯಃ॥
ಭಾಗವತ ಮಹಾ ಪುರಾಣದ ಮೊದಲ ಸ್ಕಂಧದ ಮೊದಲನೇ ಅಧ್ಯಾಯ ಮುಗಿಯಿತು.
        

*******

No comments:

Post a Comment