Saturday, December 15, 2012

Shrimad BhAgavata in Kannada -Skandha-01 CH-01 (2)

“ಅನ್ವಯಾತ್” ಎನ್ನುವಲ್ಲಿ ‘ಎಲ್ಲಾ ಶಬ್ದಗಳನ್ನು ಭಗವಂತನಲ್ಲಿ ಸಮನ್ವಯ ಮಾಡಿದಾಗ ಇಡಿಯ ವೇದ ಒಂದೇ ಅರ್ಥವನ್ನು ಹೇಳುತ್ತದೆ’ ಎನ್ನುವ ವಿಷಯವನ್ನು ನೋಡಿದೆವು. ಇದು ವೇದಾಧ್ಯಯನದಲ್ಲಿ ಗಮನವಿಟ್ಟು ಪಾಲಿಸಬೇಕಾದ ಅತಿ ಮುಖ್ಯ ಅಂಶ. ಎಲ್ಲಾ ಶಬ್ದಗಳನ್ನೂ ಒಂದು ಪರತತ್ತ್ವದಲ್ಲಿ ಸಮನ್ವಯ ಮಾಡಿ ಅರ್ಥಮಾಡತಕ್ಕಂತಹ ಪರಂಪರೆ  ಬಹಳ ಹಿಂದೆ ಪ್ರಚಲಿತದಲ್ಲಿದ್ದು, ಇಂದು ಈ ಪರಂಪರೆ ಮರೆತು ಹೋಗುತ್ತಿದೆ. ಯಾವ ಶಬ್ದವೂ ಕೇವಲ ಲೋಕ ರೂಢಿಯ ಅರ್ಥವನ್ನು ಹೇಳುವುದಿಲ್ಲ, ಅದಕ್ಕಿಂತ ಅತೀತವಾದ ಅದರ ನಿರ್ವಚನ ಅರ್ಥವೊಂದಿದೆ ಎಂದು ತಿಳಿದು, ಆ ನಿರ್ವಚನದಿಂದ ಆ ಶಬ್ದಕ್ಕೆ ಹೊಸ ಆಯಾಮ ಏನು ಬರುತ್ತದೆ ಎಂದು ಬಿಡಿಸಿ ನೋಡುವುದು ‘ಸಮನ್ವಯ ಮಾಡಿ ಅರ್ಥ ತಿಳಿದುಕೊಳ್ಳುವ’ ಪದ್ಧತಿಯ ಮೂಲಭೂತ ನಿಯಮ. ನಿರ್ವಚನ ಏನೇ ಇರಲಿ, ಅದನ್ನು ವಿಶ್ಲೇಷಿಸದೇ, ಲೋಕ ರೂಢಿಯ ಅರ್ಥವನ್ನು ಒಪ್ಪಿಕೊಳ್ಳುವುದು ಲೋಕದ ಕ್ರಮವಾದರೆ, ನಿರ್ವಚನದಿಂದ ಏನು ಅರ್ಥ ವಿಶೇಷಗಳು ಹೊರಡುತ್ತವೆ ಎಂದು ತಿಳಿದು, ಅದರ ಅನುಸಂಧಾನ ಮಾಡುವುದು ವೇದದ ಕ್ರಮ.  ಶಬ್ದವನ್ನು ಸಮಷ್ಟಿಯಾಗಿ ನೋಡುವುದು ಲೋಕದ ಕ್ರಮವಾದರೆ, ಶಬ್ದವನ್ನು ಒಡೆದು ನೋಡುವುದು ವೇದದ ಕ್ರಮ. ಶಬ್ದ ಅನ್ನುವುದು ಚಿಪ್ಪಿನಂತೆ. ಅದರ ನಿರ್ವಚನ ಮುತ್ತಿನಂತೆ. ಚಿಪ್ಪನ್ನು ಬಳಸುವುದು ಲೋಕದ ಕ್ರಮವಾದರೆ, ಆ ಚಿಪ್ಪನ್ನು ಒಡೆದು ಅದರೊಳಗಿನ ಬಗೆಬಗೆಯ ಅಮೂಲ್ಯ ಮುತ್ತು ರತ್ನಗಳನ್ನು ಹೆಕ್ಕಿ ತೆಗೆಯುವುದು ವೇದದ ಕ್ರಮ.
ವೇದಾಧ್ಯಯನ ಮಾಡುವಾಗ ಪ್ರತಿಯೊಂದು ಶಬ್ದವನ್ನು ಯೋಗ ಬಲದಿಂದ ಒಡೆದು, ಅದರಲ್ಲಿ ಏನು ಅರ್ಥ ವಿಶೇಷ ಹೊರಡುತ್ತದೆ ಅನ್ನುವುದನ್ನು ನೋಡಬೇಕು. ಪ್ರತಿಯೊಂದು ಶಬ್ದವನ್ನೂ ಭಗವಂತನಲ್ಲಿ ಅನ್ವಯ ಮಾಡಿ, ವೇದಾರ್ಥ ಚಿಂತನೆ ಮಾಡಬೇಕು. ಉದಾಹರಣೆಗೆ ಋಗ್ವೇದದ ಮೊದಲ ಸೂಕ್ತ. " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ. ಇಲ್ಲಿ ಅಗ್ನಿಸೂಕ್ತವಿದೆ. ಅದು ಭಗವಂತನಲ್ಲಿ ಅನ್ವಯವಾಗಿ ಭಗವಂತನ ಸ್ತುತಿಯಾಗಬೇಕು.  ಇದು ‘ಸಮನ್ವಯ’ ಪದ್ಧತಿ.  ಬೆಂಕಿಗೆ ದಾಹಕ ಮತ್ತು ಪಾಚಕ ಶಕ್ತಿ ಕೊಡುವ ದೇವತೆ ಅಗ್ನಿ. ಈ ಅಗ್ನಿದೇವತೆಯ ಒಳಗಿದ್ದು ಅವನಿಗೆ ಶಕ್ತಿ ಕೊಡುವವನು ಮುಖ್ಯಪ್ರಾಣ. ಈ ಮುಖ್ಯಪ್ರಾಣನಿಗೂ ಪ್ರಾಣನಾಗಿ ಶಕ್ತಿಪಾತ ಮಾಡುವವನು ಭಗವಂತ.  ಆದ್ದರಿಂದ ಇಲ್ಲಿ ನಿಜವಾದ ಅಗ್ನಿ ಭಗವಂತ. ಇನ್ನು  ಅಗ್ನಿ ಪದವನ್ನು ಒಡೆದು ನೋಡಿದರೆ:  ಅಗ+ನಿ=ಅಗ್ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು(ನಿ)-ಅಗ್ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವನು. ಆದ್ದರಿಂದ ಆತ ಅಗ್ನಿ. ಹೀಗೆ ವೇದದಲ್ಲಿನ ಶಬ್ದಗಳನ್ನು ಒಡೆದಾಗ, ಆ ಶಬ್ದದೊಳಗೆ ಸರ್ವಾಂತರ್ಯಾಮಿ ಭಗವಂತ ಹುದುಗಿರುವುದು ಕಾಣಸಿಗುತ್ತದೆ. ಈ ಅನುಸಂಧಾನವಿಲ್ಲದೆ ವೇದಾರ್ಥಚಿಂತನೆ ಮಾಡಿದರೆ ಎಲ್ಲವೂ ಗೊಂದಲಮಯವಾಗಿ ಕಾಣುವ ಅಪಾಯವಿದೆ.
ಆಯಾ ಪ್ರಾರ್ಥನೆಗನುಗುಣವಾಗಿ ಭಗವಂತನನ್ನು ಆಯಾ ವಿಶೇಷ ನಾಮದಿಂದ ಸ್ತುತಿಸುತ್ತಾರೆ. ಚಲನೆ ಇಲ್ಲದ ಪ್ರಪಂಚಕ್ಕೆ ಚಾಲಕ ಶಕ್ತಿ ಭಗವಂತ ಎನ್ನುವ ಅನುಸಂಧಾನದಿಂದ ಭಗವಂತನನ್ನು ‘ಅಗ್ನಿ’ ಎಂದು ಸಂಬೋಧಿಸುತ್ತಾರೆ. “ನೀನಿಲ್ಲದೆ ಈ ಪ್ರಪಂಚ ನಡೆಯುವುದಿಲ್ಲ, ಈ ಪ್ರಪಂಚಕ್ಕೆ ಸ್ವತಃ ಚಲನೆ ಇಲ್ಲಾ. ಅದು ಏನು ಮಾಡಬೇಕೋ ಅದನ್ನು ಸ್ವಯಂ ಮಾಡಲಾರದು. ಇಂತಹ ವಿಶ್ವಕ್ಕೆ ಹಾಗೂ ಆ ವಿಶ್ವದಲ್ಲಿ ಒಬ್ಬನಾದ ನನಗೆ ಚಾಲನಾಶಕ್ತಿ ಕೊಟ್ಟು ನಡೆಸು” ಎನ್ನುವ ಪ್ರಾರ್ಥನೆ ಭಗವಂತನ ‘ಅಗ್ನಿ’ ನಾಮದ ಹಿಂದಿನ ಅನುಸಂಧಾನ.  ಇದೇ ರೀತಿ ಮಿತ್ರ.  ಒಂದು ವಸ್ತುವಿನ ಅರಿವನ್ನು ಕೊಡುವವನು; ಮುಂದೆ ಏನಾಗುತ್ತದೆ ಎನ್ನುವುದನ್ನು ಪೂರ್ಣವಾಗಿ ತಿಳಿದು, ಖಚಿತವಾಗಿ ರಕ್ಷಿಸುವ ನಿಜವಾದ ‘ಮಿತ್ರ’ ಆ ಭಗವಂತ. ಹೀಗೆ ಇಂದ್ರ, ರುದ್ರ, ವಾಯು, ಇತ್ಯಾದಿ ನಾಮಗಳಿಗೆ ಅದರದ್ದೇ ಆದ ವಿಶೇಷ ಅನುಸಂಧಾನವಿದೆ.

No comments:

Post a Comment