Friday, December 28, 2012

Shrimad BhAgavata in Kannada -Skandha-01 -Ch-01(11)


ಆಖ್ಯಾಯಿಕಾ
ಗ್ರಂಥ ರಚನೆಯ ಹಿನ್ನೆಲೆ, ರಚನೆಯಾಗಿ ಅದು ಭೂಮಿಗೆ ಇಳಿದು ಬಂದ ಬಗೆಯನ್ನು ಹೇಳುವ ಕಥೆ ಆಖ್ಯಾಯಿಕಾ. ‘ಹಿಂದೆ ಹೀಗೆ ನಡೆದಿತ್ತು’ ಎಂದು ದಾಖಲೆಯನ್ನು ಹೇಳುವುದನ್ನು ಆಖ್ಯಾಯಿಕಾ ಎನ್ನುತ್ತಾರೆ. ಇಂತಹ ಆಖ್ಯಾಯಿಕಗಳನ್ನು ವೇದದಲ್ಲೂ ಕಾಣಬಹುದು. ಉದಾಹರಣೆಗೆ: “ತಸ್ಯ ಹ ನಚಿಕೇತಾ ನಾಮ ಪುತ್ರ ಆಸ” ॥ಕಠ ಉಪನಿಷತ್- ೧.೧.೧॥. ವೇದ, ಪುರಾಣ, ಇತಿಹಾಸದಲ್ಲಿ ಆಖ್ಯಾಯಿಕೆಗಳನ್ನು ಏಕೆ ಹೇಳುತ್ತಾರೆ ಎಂದರೆ: “ಹಿಂದೆ ಹೀಗೆ ನಡೆದಿತ್ತು ಹಾಗೂ ಅಂತಹ ಫಲ ಪ್ರಾಪ್ತಿಗೆ  ಇರುವ ಮಾರ್ಗ ಇದೊಂದೇ” ಎಂದು ಹೇಳುವುದಕ್ಕಾಗಿ ಮತ್ತು ದಾಖಲೆ ಸಹಿತ ಹೇಳಿ ನಮ್ಮ  ಶ್ರದ್ದೆಯನ್ನು  ವೃದ್ಧಿಗೊಳಿಸುವುದಕ್ಕಾಗಿ.  ಭಾಗವತದಲ್ಲಿ ಭಗವಂತನ ಕಥೆ ಪ್ರಾರಂಭವಾಗುವುದು ಎರಡನೇ ಸ್ಕಂಧದಿಂದ. ಮೊದಲ ಸ್ಕಂಧ ಭಾಗವತದ ಪೀಠಿಕೆ ರೂಪದಲ್ಲಿದ್ದು, ಇಲ್ಲಿ ಒಟ್ಟು ಇಪ್ಪತ್ತು ಅಧ್ಯಾಯಗಳಿವೆ. ಈ ಪೀಠಿಕೆಯಲ್ಲಿನ ಮೊದಲ ಕಥೆ ಇಲ್ಲಿಂದ ಆರಂಭವಾಗುತ್ತದೆ.

ನೈಮಿಶೇSನಿಮಿಷಕ್ಷೇತ್ರೇ ಋಷಯಃ ಶೌನಕಾದಯಃ  ।
ಸತ್ತ್ರಂ ಸ್ವರ್ಗಾಯ ಲೋಕಾಯ ಸಹಸ್ರಸಮಮಾಸತ    ॥೪॥

ಸುಮಾರು ಐದುಸಾವಿರ ವರ್ಷಗಳ ಹಿಂದೆ, ಪರೀಕ್ಷಿತರಾಜನ ಹಿರಿಮಗ ಜನಮೇಜಯ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ, ನೈಮಿಶಾರಣ್ಯದಲ್ಲಿ  ಶೌನಕರು ಕಟ್ಟಿದ ಗುರುಕುಲ ಒಂದಿತ್ತು. ‘ನಿಮಿಶ’ ಎನ್ನುವ ಮರಗಳು ಹೇರಳವಾಗಿದ್ದ ಈ ಪ್ರದೇಶವನ್ನು ನೈಮಿಶಾರಣ್ಯ ಎಂದು ಕರೆಯುತ್ತಿದ್ದರು. ಹಿಂದೆ ಈ ಮರದ ಹಣ್ಣನ್ನು ಆಹಾರವಾಗಿ ಮತ್ತು ತೊಗಟೆಯನ್ನು ಉಡುಪಾಗಿ ಬಳಸುತ್ತಿದ್ದರು. ಇಂತಹ ನಿಮಿಶವೃಕ್ಷ ಸಮೃದ್ಧವಾಗಿರುವ ಕಾರಣದಿಂದ ಮತ್ತು ಅದು ‘ಅನಿಮಿಷ’ ಕ್ಷೇತ್ರವಾದ್ದರಿಂದ ಶೌನಕರು ಅಲ್ಲಿ ತಮ್ಮ ಗುರುಕುಲವನ್ನು ನಿರ್ಮಿಸಿದ್ದರು. ಅನಿಮಿಷಃ ಎನ್ನುವುದು ಭಗವಂತನ ಅಸಾಧಾರಣ ಹೆಸರುಗಳಲ್ಲಿ ಒಂದು. ಈ ನಾಮ ವಿಷ್ಣುಸಹಸ್ರನಾಮದಲ್ಲಿ ಕೂಡಾ ಬಂದಿದೆ. ಅನಿಮಿಷಃ ಎಂದರೆ: ಎಂದೂ ನಿದ್ರಿಸದ ಭಗವಂತ! ಆತನಿಗೆ ನಿದ್ರೆಯೇ ಇಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.  ಸಮಸ್ತ ದೇವತಾ ಸನ್ನಿಧಾನವಿರುವ, ಸ್ವತಃ ಅನಿಮಿಷನಾದ ಭಗವಂತನ ಸನ್ನಿಧಾನವಿರತಕ್ಕ, ಆದ್ದರಿಂದ ಋಷಿಗಳಿಗೆ ಪ್ರಿಯವಾದ ಕ್ಷೇತ್ರ ನಿಮಿಷಕ್ಷೇತ್ರ. “ಕ್ಷಪಯಿತ್ತ್ವಾ ತ್ರಾಯತೇ ಇತಿ ಕ್ಷೇತ್ರಃ”. ಕ್ಷೇತ್ರ ಎಂದರೆ ನಮ್ಮೆಲ್ಲಾ ಪಾಪಗಳನ್ನು ಪರಿಹಾರ ಮಾಡಿ ನಮ್ಮನ್ನು ರಕ್ಷಿಸುವಂತಹ, ಭಗವಂತನ ಸಾನಿಧ್ಯ ವಿಶೇಷವಾಗಿರುವ ಸ್ಥಳ. ಕ್ಷೇತ್ರದಲ್ಲಿ ನಮ್ಮೆಲ್ಲಾ ಪಾಪಗಳು ತಾನೇ ತಾನಾಗಿ ಕರಗಿ ಹೋಗುತ್ತವೆ. ಇಂತಹ ಪವಿತ್ರ ಕ್ಷೇತ್ರವಾದ ನಿಮಿಷಕ್ಷೇತ್ರದಲ್ಲಿ ಶೌನಕರ ನೇತ್ರತ್ವದಲ್ಲಿ ಋಷಿಗಳ ಒಂದು ದೊಡ್ಡ ಪಡೆ ಸೇರಿತ್ತು. ಶೌನಕರು ಎಂದರೆ ‘ಶುನಕ’ ವಂಶದಿಂದ ಬಂದವರು. ಶುನಕ ಅಥವಾ ಶೋನತಿ ಅಂದರೆ- “ಮುಕ್ತಿಯೋಗ್ಯೋ ಭವತಿ ಇತಿ ಶುನಕಃ” ಅಂದರೆ ಮೋಕ್ಷ ಯೋಗ್ಯ ಎಂದರ್ಥ. ಇನ್ನೊಂದು ರೀತಿಯಲ್ಲಿ ಶುನ-ಗತೌ ಧಾತು. ಅಂದರೆ ಜ್ಞಾನಿ ಎಂದರ್ಥ. ಆದ್ದರಿಂದ ಶುನಕ ಎಂದರೆ: “ಜ್ಞಾನದ ಮೂಲಕ ಮುಕ್ತಿ ಸಾಧನೆ ಮಾಡುವವರು”.
ಶೌನಕರ ನೇತ್ರತ್ವದಲ್ಲಿ ನಿಮಿಷಕ್ಷೇತ್ರದಲ್ಲಿ ಅನೇಕ ಮಂದಿ ಋಷಿಗಳು ಒಂದಾಗಿ, ಮೋಕ್ಷ ಸಾಧನೆಗಾಗಿ ಒಂದು ಸತ್ರಯಾಗವನ್ನು ಪ್ರಾರಂಭಿಸಿದ್ದರು. [ಅನೇಕ ಮಂದಿ ಕಲೆತು, ಸಾರ್ವಜನಿಕವಾಗಿ ಮಾಡುವ ಯಜ್ಞವನ್ನು ಸತ್ರಯಾಗ ಎನ್ನುತ್ತಾರೆ]. ಇಲ್ಲಿ  ಸಾವಿರ ವರ್ಷಗಳ ಕಾಲ ನಡೆಯುವ ಯಜ್ಞ ಮಾಡಿದರು ಎಂದಿದೆ. ಆದರೆ ವೇದಗಳಲ್ಲಿ ಎಲ್ಲಿಯೂ ಈ ರೀತಿಯ ಯಜ್ಞದ ಕುರಿತ ವಿವರಣೆ ಕಾಣಸಿಗುವುದಿಲ್ಲ. ಆದ್ದರಿಂದ ಪ್ರಾಯಃ ಇದು ಒಂದು ಸಾವಿರ ದಿನಗಳ ಸತ್ರಯಾಗ ಇದ್ದರೂ ಇರಬಹುದು. ಅದೇ ರೀತಿ ಇಲ್ಲಿ “ಸ್ವರ್ಗಲೋಕ ಪ್ರಾಪ್ತಿಗಾಗಿ ಸತ್ರಯಾಗ ಮಾಡಿದರು” ಎಂದಿದೆ. ಇಲ್ಲಿ ಹೇಳುವ ಸ್ವರ್ಗಲೋಕ ದೇವತೆಗಳ ಲೋಕವಲ್ಲ. ಸ್ವರ್ಗಾಯ ಲೋಕಾಯ  ಎಂದರೆ ದುಃಖ-ಭಯ, ಮುಪ್ಪು-ಸಾವಿಲ್ಲದ ಮೋಕ್ಷಲೋಕ. ಸ್ವರ್ಗಾಯಲೋಕಾಯ ಎಂದು ಏಕಪದವಾಗಿ ನೋಡಿದಾಗ: ಯಾರನ್ನು ನಾವು ಸ್ವಃ ಎಂದು ಗಾಯನ ಮಾಡುತ್ತೇವೆ, ಆ ಭಗವಂತನ ಲೋಕ.  ಅಂತಹ ಭಗವಂತನ ಲೋಕವಾದ ಮೋಕ್ಷ ಪ್ರಾಪ್ತಿಗಾಗಿ ಋಷಿಗಳು ಸತ್ರಯಾಗ ಮಾಡಿದರು.

ತ ಏಕದಾ ತು ಮುನಯಃ ಪ್ರಾತರ್ಹುತಹುತಾಶನಾಃ ।
ಸತ್ಕೃತಂ ಸೂತಮಾಸೀನಂ ಪಪ್ರಚ್ಛುರಿದಮಾದೃತಾಃ               ॥೫ ॥

ಯಜ್ಞ ನಡೆಯುವ ಸ್ಥಾನದಲ್ಲಿ ಪ್ರತಿದಿನ ಸಂಜೆ  ಪುರಾಣ ಇತ್ಯಾದಿ ಪ್ರವಚನ ಕಾರ್ಯಕ್ರಮ ಸಾಮಾನ್ಯ. ಅದಕ್ಕಾಗಿ ವಿದ್ವಾಂಸರಿಗೆ ಆಹ್ವಾನ ಹೋಗುತ್ತಿತ್ತು ಮತ್ತು ಪುರಾಣವನ್ನು ಹೇಳುವ ಪೌರಾಣಿಕರು ಅಲ್ಲಿಗೆ ಬರುತ್ತಿದ್ದರು. ಆಗಿನ ಕಾಲದಲ್ಲಿ ಪುರಾಣ ಪ್ರವಚನ ಮಾಡುತ್ತಿದ್ದವರು ರೋಮಹರ್ಷಣರು. ಅವರ ಕಾಲದ ನಂತರ, ಭಾಗವತ ಮತ್ತು ಮಹಾಭಾರತ ಪ್ರವಚನ ಮಾಡಿದವರು ರೋಮಹರ್ಷಣರ ಮಗನಾದ ಉಗ್ರಶ್ರವಸ್ಸು ಎನ್ನುವ ಸೂತರು. ಒಂದು ದಿನ ಸತ್ರಯಾಗ ನಡೆಯುತ್ತಿದ್ದ  ನಿಮಿಷಕ್ಷೇತ್ರಕ್ಕೆ, ಯಜ್ಞದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲು ಸೂತರು ಆಗಮಿಸುತ್ತಾರೆ. ಆಗ ಎಲ್ಲಾ ಋಷಿಗಳು ಅಗ್ನಿ ಆಹುತಿ ಮುಗಿಸಿ, ಅತಿಥಿಯಾಗಿ ಬಂದ ಉಗ್ರಶ್ರವಸ್ಸರನ್ನು ಸತ್ಕರಿಸುತ್ತಾರೆ.  ವೇದವ್ಯಾಸರಿಂದ ಪಾಠ ಕೇಳಿದ, ಸಮಸ್ತ ಪುರಾಣ ಬಲ್ಲ ಸೂತರಲ್ಲಿ ಋಷಿಗಳು “ನಮ್ಮ ಗುರುಕುಲದಲ್ಲಿ ತಾವು ಪುರಾಣ ಪ್ರವಚನ ಮಾಡಬೇಕು” ಎಂದು ಕೇಳಿಕೊಳ್ಳುತ್ತಾರೆ.  

ಋಷಯ ಊಚುಃ
ತ್ವಯಾ ಖಲು ಪುರಾಣಾನಿ ಸೇತಿಹಾಸಾನಿ ಚಾನಘ
ಆಖ್ಯಾತಾನ್ಯಪ್ಯಧೀತಾನಿ ಧರ್ಮಶಾಸ್ತ್ರಾಣಿ ತಾನ್ಯುತ                ॥೬॥

ಅಲ್ಲಿ ಸೇರಿರುವ ಋಷಿಗಳು ಗೌರವಪೂರ್ವಕವಾಗಿ  ಸೂತರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅವರು ಹೇಳುತ್ತಾರೆ: “ನೀವು ಪುರಾಣ, ಇತಿಹಾಸ ಮತ್ತು ಧರ್ಮಶಾಸ್ತ್ರಗಳನ್ನು ಚನ್ನಾಗಿ ಅಧ್ಯಯನ ಮಾಡಿ, ಪ್ರವಚನ ಮಾಡಿ ಬಲ್ಲವರು” ಎಂದು. ಋಷಿಗಳ ಈ ಮಾತು ನಮಗೆ ಪೂರ್ಣ ಅರ್ಥವಾಗಬೇಕಾದರೆ ಮೊದಲು ನಮಗೆ ಪುರಾಣ ಮತ್ತು ಇತಿಹಾಸಗಳ ನಡುವಿನ ವ್ಯತ್ಯಾಸ ಏನು ಎನ್ನುವುದು ತಿಳಿದಿರಬೇಕು. ಪುರಾಣ ಎಂದರೆ ಪ್ರಾಚೀನ ದಾಖಲೆ; ಇತಿಹಾಸ ಎಂದರೆ “ಹೀಗೆ ಇತ್ತು” ಎನ್ನುವ ದಾಖಲೆ! ಹಾಗಾದರೆ ಇವೆರಡರ ನಡುವಿನ ಅರ್ಥಭೇದವೇನು? ಇತಿಹಾಸ ನಡೆದ ಘಟನೆಗಳನ್ನು ನಿರೂಪಿಸುವ ಗ್ರಂಥವಾದರೆ, ಪುರಾಣ ಹಾಗಲ್ಲ. ಅಲ್ಲಿ ಇತಿಹಾಸವಿದೆ, ಆದರೆ ಪುರಾಣವೇ ಇತಿಹಾಸವಲ್ಲ. ಪುರಾಣದಲ್ಲಿ ಅರ್ಥವಾದವಿದೆ. ಅಲ್ಲಿ ಅನೇಕ ಕಥೆಗಳ ಮೂಲಕ ಸಂದೇಶವನ್ನು ಕೊಡುತ್ತಾರೆ. ಮಹಾಭಾರತದಲ್ಲಿ ಪುರಾಣದ ಲಕ್ಷಣಗಳಿವೆ, ಆದರೆ ಅಲ್ಲಿ ಇತಿಹಾಸ ಪ್ರಧಾನವಾಗಿರುವುದರಿಂದ ಅದು ಇತಿಹಾಸ. ಭಾಗವತದಲ್ಲಿ ಇತಿಹಾಸಕ್ಕಿಂತ ಪುರಾಣದ ಅಂಶಕ್ಕೆ ಹೆಚ್ಚು ಒತ್ತು. ಮನ್ವಂತರಗಳ ಚರಿತ, ರಾಜರ್ಷಿಗಳ ವಂಶಾನುಚರಿತ, ಸೃಷ್ಟಿ-ಸ್ಥಿತಿ-ಸಂಹಾರಗಳ ಬಿತ್ತರವನ್ನು ಹೇಳುವ ಗ್ರಂಥ-ಪುರಾಣ. ಹೀಗೆ ಪುರಾಣದಲ್ಲಿ ಇತಿಹಾಸವೂ ಸೇರಿಕೊಂಡಿದ್ದರೂ ಕೂಡಾ, ಅಲ್ಲಿ ಬರುವ ಎಲ್ಲಾ ಕಥೆಗಳೂ ಇತಿಹಾಸವಾಗಿರಬೇಕೆಂದೇನೂ ಇಲ್ಲಾ.
ಪುರಾಣಗಳಲ್ಲಿ ಒಂದು ಕಥೆಯನ್ನು ಹೇಳಿ ಒಂದು ನೀತಿಯನ್ನು ಹೇಳುತ್ತಾರೆ. ಹಾಗೆ ಕಥೆಯನ್ನು ರೂಪಕವಾಗಿ ಹೇಳಿದಾಗ ನಾವು ತಪ್ಪಾಗಿ ತಿಳಿದುಕೊಳ್ಳಬಾರದು. ಅಲ್ಲಿ ಆ ಕಥೆಯ ಹಿಂದಿರುವ ಸಂದೇಶ ಮಾತ್ರ ಗ್ರಾಹ್ಯ. ಈ ವಿಷಯ ತಿಳಿಯದೇ ಪುರಾಣ ಅನುವಾದ ಮಾಡಿದರೆ ನರಕಾದಿ ಅನಾಹುತವಾದೀತು! ಇದಕ್ಕೆ ಒಂದು ಉತ್ತಮ ಉದಾಹರಣೆ ಪದ್ಮಪುರಾಣದಲ್ಲಿ ಬರುವ ‘ಕಾರ್ತ್ತಿಕಮಾಸ ಮಹಾತ್ಮೆ’ ಕಥೆ. ಅಲ್ಲಿ ಕಾರ್ತ್ತಿಕ ಮಾಸದಲ್ಲಿ ಆಕಾಶ ದೀಪವಿಡುವುದರ ಮಹಾತ್ಮೆಯನ್ನು ಹೇಳುವುದಕ್ಕಾಗಿ ಒಂದು ಕಥೆಯನ್ನು ಹೇಳುತ್ತಾರೆ. ಆ ಕಥೆ ಹೀಗಿದೆ: ಒಂದು ಸಂಜೆ ಕಾಗೆಯೊಂದು ಆಕಾಶ ಮಾರ್ಗವಾಗಿ ತನ್ನ ಗೂಡಿನತ್ತ ಸಾಗುತ್ತಿತ್ತು. ಆಗ ಅದಕ್ಕೆ ಒಂದು ಮನೆಯ ಅಂಗಳದಲ್ಲಿನ ತುಳಸೀಕಟ್ಟೆಯಲ್ಲಿ ಹಚ್ಚಿದ ದೀಪ ಕಾಣಿಸುತ್ತದೆ. ಕಾಗೆ ಆ ದೀಪವನ್ನು ಹಣ್ಣು ಎಂದು ಭಾವಿಸಿ, ಕೆಳಕ್ಕೆ ಬಂದು ತನ್ನ ಕೊಕ್ಕಿನಿಂದ ದೀಪದ ಬತ್ತಿಯನ್ನು ಹಿಡಿದುಕೊಂಡು ಮೇಲಕ್ಕೆ ಹಾರುತ್ತದೆ. ಹಾಗೆ ಹಾರುವಾಗ ಅದಕ್ಕೆ ಅದು ಹಣ್ಣಲ್ಲ, ಬೆಂಕಿ ಎನ್ನುವುದು ತಿಳಿದು, ತನ್ನ ಬಾಯಿಯಿಂದ ದೀಪವನ್ನು ಕೆಳಕ್ಕೆ ಬೀಳಿಸುತ್ತದೆ. ಹೀಗೆ ಕಾಗೆಯ ಕೊಕ್ಕಿನಿಂದ ಬಿದ್ದ ದೀಪ ಒಂದು ಹುಲ್ಲುಮನೆಯಮೇಲೆ ಬಿದ್ದು, ಆ ಮನೆ ಹೊತ್ತಿಕೊಂಡು ಉರಿದು ದೊಡ್ಡ ಆಕಾಶ ದೀಪವಾಗುತ್ತದೆ. ಈ ರೀತಿ ದೊಡ್ಡ ಆಕಾಶದೀಪ ಹಚ್ಚಿದ ಪುಣ್ಯದಿಂದ ಕಾಗೆ ಸ್ವರ್ಗವನ್ನು ಪಡೆಯುತ್ತದೆ! ಇದು ಕಥೆ. ಈ ಕಥೆಯನ್ನು ಓದಿ, ಅದು ವಾಸ್ತವ ಎಂದು ತಿಳಿದು, ಕಾರ್ತ್ತಿಕ ಮಾಸದಲ್ಲಿ ಯಾರದ್ದಾದರೂ ಮನೆಗೆ ಬೆಂಕಿ ಕೊಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಾವು ತಿಳಿದರೆ ಅದು ಅನಾಹುತ. ಇಲ್ಲಿ ಹೇಳಿರುವುದು ‘ಕಾರ್ತ್ತಿಕ ಮಾಸದಲ್ಲಿ ಆಕಾಶದೀಪ ಹಚ್ಚಿದರೆ ಮಹಾ ಪುಣ್ಯಫಲ ಪ್ರಾಪ್ತಿಯಾಗುತ್ತದೆ’ ಎನ್ನುವ ಸಂದೇಶ ಅಷ್ಟೇ. ಇಲ್ಲಿರುವ ಇತರ ಕಥಾಂಶವನ್ನು ನಾವು ಅಲ್ಲೇ ಬಿಟ್ಟು ಬಿಡಬೇಕು. ಇಂತಹ ಅನೇಕ ಕಥೆಗಳು ಪುರಾಣದಲ್ಲಿ ಬರುತ್ತವೆ. ಪುರಾಣವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ತಿಳಿಯಲಿಕ್ಕಾಗಿ ಇಂತಹ ಕಥೆಗಳಿವೆ.
ಪುರಾಣದಲ್ಲಿ ಕೆಲವೊಮ್ಮೆ ದರ್ಶನ ಭಾಷೆಯಲ್ಲಿ ಕಥೆಗಳನ್ನು ಹೇಳಲಾಗುತ್ತದೆ. ಉದಾಹರಣೆಗೆ ‘ಮಹಾಭಾರತ ಯುದ್ಧದಲ್ಲಿ ಬಾಣಗಳಿಂದ ಕೃಷ್ಣನ ಕವಚ ಒಡೆದುಹೋಗಿ, ಮೈಯಲ್ಲೆಲ್ಲಾ ರಕ್ತ ಸುರಿಯುತ್ತಿತ್ತು’ ಎನ್ನುತ್ತಾರೆ. ಇದು ದರ್ಶನ ಭಾಷೆ. ತ್ರಿಗುಣಾತೀತನಾದ, ಸ್ವರೂಪಭೂತನಾದ ಭಗವಂತನ ಮೈಯಲ್ಲಿ ಅದೆಲ್ಲಿಯ ರಕ್ತ?  ಇದು ಅಲ್ಲಿರುವ ಕೌರವ ಸೈನಿಕರಿಗೆ ಕಾಣಿಸಿದ ದೃಶ್ಯ ಅಷ್ಟೇ. ಇಲ್ಲಿ ಕಾಣಿಸಿದ್ದೇ ಬೇರೆ-ಇರುವುದೇ ಬೇರೆ. ಈ ರೀತಿ ಪುರಾಣಗಳಲ್ಲಿ ನಾನಾ ವಿಧದ ನಿರೂಪಣೆ ವಿಶೇಷಗಳಿವೆ. ಮಧ್ವಾಚಾರ್ಯರು ಪುರಾಣಗಳಿಗೆ ಹೇಗೆ ಅರ್ಥ ಹಚ್ಚಬೇಕು ಎನ್ನುವುದನ್ನು ವಿವರಿಸುತ್ತಾ, ಅಲ್ಲಿರುವ ಮೂರು ಭಾಷೆಗಳು ಮತ್ತು ಸಪ್ತಭೇದಗಳನ್ನು ವಿವರಿಸಿದ್ದಾರೆ. ಮೂರು ಭಾಷೆಗಳು: ೧. ದರ್ಶನಭಾಷೆ: ಇದು ಕಂಡದ್ದನ್ನು ಹೇಳುವ ಭಾಷೆ. ೨, ಗುಹ್ಯಭಾಷೆ: ಏನು ಹೇಳಿದ್ದಾರೆ ಎಂದು ನೇರವಾಗಿ ತಿಳಿಯದಂತೆ ಒಗಟಿನರೂಪದಲ್ಲಿ ಹೇಳುವ ಭಾಷೆ. ೩. ಸಮಾಧಿಭಾಷೆ: ಇದ್ದದ್ದನ್ನು ಇದ್ದಂತೆ ಹೇಳುವ ಭಾಷೆ. ಈ ಮೂರು ಬಗೆಯ ಭಾಷಾ ಪ್ರಯೋಗ ವೇದಗಳಲ್ಲಿಯೂ ಬಳಕೆಯಲ್ಲಿದೆ. ಇದನ್ನು ತಿಳಿಯದೆ ವೇದ ಓದಿದರೆ ಎಲ್ಲವೂ ನಿಗೂಢ.  ಇನ್ನು ಏಳು ರೀತಿಯಲ್ಲಿ ಪುರಾಣ ನಿರೂಪಣೆ ಇದೆ. ಅವುಗಳೆಂದರೆ: ೧. ವ್ಯತ್ಯಾಸ: ಕಾಲ-ದೇಶ-ವ್ಯಕ್ತಿಗಳನ್ನು ವ್ಯತ್ಯಾಸ ಮಾಡಿ ಹೇಳುವುದು. ೨.ಪ್ರಾತಿಲೋಮ್ಯ: ಮುಂದೆ ಹಿಂದೆ ಮಾಡಿ ಹೇಳುವುದು. ೩.ಗೋಮೂತ್ರಿ : ಗಾಡಿಗೆ ಕಟ್ಟಿದ ಎತ್ತು ಮೂತ್ರ ಮಾಡಿದಂತೆ ಸುತ್ತುಬಳಸಿ ಹೇಳುವುದು. ೪.ಪ್ರಘಸ: ಹುಲ್ಲುಗಾವಲಿನಲ್ಲಿ ಹಸುಗಳು ಹುಲ್ಲು ತಿಂದಂತೆ ಅಲ್ಲಲ್ಲಿ ವಿಷಯಗಳನ್ನು ತುರುಕಿ ಹೇಳುವುದು. ೫. ಉಕ್ಷಣಾ: ವಿಷಯಗಳನ್ನು ಪ್ರೋಕ್ಷಣೆ ಮಾಡಿದಂತೆ ಸ್ವಲ್ಪಸ್ವಲ್ಪ ಹೇಳುವುದು. ೬.ಸುಧುರ: ಇದ್ದದ್ದನ್ನು ಸಮರ್ಪಕವಾಗಿ ಹೇಳುವುದು ೭. ಸಾಧು: ಸಮಾಧಿಭಾಷೆಯಲ್ಲಿ ಸ್ಪಷ್ಟವಾಗಿ ಹೇಳುವುದು. ಹೀಗೆ ಪುರಾಣಗಳನ್ನು ಈ ಮೂರು ಭಾಷೆಗಳು ಮತ್ತು ಏಳು ವಿಧಾನವನ್ನು ತಿಳಿದು ಅರ್ಥಚಿಂತನೆ ಮಾಡಬೇಕು.
ಆ ಕಾಲದಲ್ಲಿ ಪುರಾಣಗಳ ಹಿನ್ನೆಲೆಯನ್ನು ತಿಳಿದು ಅರ್ಥಮಾಡಿ ಪ್ರವಚನ ಮಾಡಬಲ್ಲ ಶಕ್ತಿ ಪಡೆದವರು ಉಗ್ರಶ್ರವಸ್. ಅದಕ್ಕಾಗಿ ಋಷಿಗಳು ಇಲ್ಲಿ ಅವರನ್ನು ‘ಅನಘ’ ಎಂದು ಸಂಬೋಧಿಸಿದ್ದಾರೆ. ಈ ವಿಶೇಷಣದ ಹಿಂದೆ ಒಂದು ಅಪೂರ್ವ ವಿಷಯ ಅಡಗಿದೆ. ಅನಘ ಎಂದರೆ ಪಾಪವಿಲ್ಲದವನು ಎಂದರ್ಥ.  ಪುರಾಣದ ರಹಸ್ಯಾರ್ಥವನ್ನು ತಿಳಿದುಕೊಳ್ಳದೆ, ಮೇಲ್ನೋಟದ ಅರ್ಥವನ್ನು ಹೇಳುವುದು ಘೋರ ನರಕ ಸಾಧನ  ಎನ್ನುತ್ತಾರೆ. ಆದರೆ ಉಗ್ರಶ್ರವಸ್ ಯಥಾರ್ಥವಾದ ಪುರಾಣದ ರಹಸ್ಯ ತಿಳಿದ ಮತ್ತು ಅದನ್ನು ಜನರಿಗೆ ಹೇಳಿ, ಅವರನ್ನು ಸ್ವರ್ಗಕ್ಕೆ ವಯ್ಯಬಲ್ಲ ಸಾಮರ್ಥ್ಯವುಳ್ಳ ಪುಣ್ಯಾತ್ಮರಾಗಿದ್ದುದರಿಂದ ಅವರನ್ನು ಇಲ್ಲಿ ‘ಅನಘ’ ಎಂದು ಸಂಬೋಧಿಸಿದ್ದಾರೆ.
ಇಲ್ಲಿ ಹೇಳಿರುವಂತೆ ಉಗ್ರಶ್ರವಸ್ ಮಹಾಭಾರತ, ಅಷ್ಟಾದಶಪುರಾಣಗಳ ಜೊತೆಗೆ, ಧರ್ಮಶಾಸ್ತ್ರವನ್ನು ಬಲ್ಲ ಜ್ಞಾನಿಗಳಾಗಿದ್ದರು. ನಮಗೆ ತಿಳಿದಂತೆ ಪುರಾಣ ಮತ್ತು ಮಹಾಭಾರತ ವೇದಾರ್ಥ ನಿರ್ಣಯಕ್ಕೋಸ್ಕರ ರಚಿತವಾದ ಗ್ರಂಥಗಳು. ಆದರೆ ಧರ್ಮಶಾಸ್ತ್ರ ವೇದಕ್ಕೆ ಅನುಗುಣವಾಗಿರುವ ಗ್ರಂಥಗಳು. ವೇದಗಳು ಸನಾತನ ಮತ್ತು ಅವು ಸಾರ್ವಕಾಲಿಕ ಅರ್ಥವನ್ನು ಹೇಳುವಂತಹ ಗ್ರಂಥವಾದರೆ, ಧರ್ಮಗ್ರಂಥಗಳು ಸಾರ್ವಕಾಲಿಕ ಸತ್ಯದ ಜೊತೆಗೆ ಆಯಾ ಕಾಲದ ಸಮಾಜ ಧರ್ಮವನ್ನೂ ಹೇಳುವ ಸಂವಿಧಾನವಿದ್ದಂತೆ. ಈ ಕಾರಣದಿಂದ ಧರ್ಮಗ್ರಂಥಗಳು ಕಾಲಬಾಧಿತ ಮತ್ತು ಅವುಗಳನ್ನು ಎಲ್ಲಾ ಸಂದರ್ಭದಲ್ಲಿ  ನೇರವಾಗಿ ಪ್ರಮಾಣ ಮಾಡಲು ಬರುವುದಿಲ್ಲ. ಉದಾಹರಣೆಗೆ ನಿಯೋಗ ಪದ್ಧತಿಯನ್ನು  ಕೆಲವು ಧರ್ಮಶಾಸ್ತ್ರಗಳು ಹೇಳುತ್ತವೆ. ಅದು ಪಾಂಡವರ ಕಾಲದಲ್ಲಿ ಆಚರಣೆಯಲ್ಲಿತ್ತು. ಆದರೆ ಅದು ಇಂದು ಸಿಂಧುವಲ್ಲ. ಈ ಎಲ್ಲಾ ಕಾರಣದಿಂದ ಸಮಾಜಧರ್ಮ, ವ್ಯಕ್ತಿಧರ್ಮ ಮತ್ತು ಸನಾತನಧರ್ಮ ತಿಳಿದ ಜ್ಞಾನಿಗಳಷ್ಟೇ ಧರ್ಮಶಾಸ್ತ್ರ ಚಿಂತನೆ ಮಾಡಬಲ್ಲರು. ಹೀಗಾಗಿ ಇವೆಲ್ಲವನ್ನೂ ಬಲ್ಲ ಸೂತರನ್ನು ಇಲ್ಲಿ ಋಷಿಗಳು ಗೌರವಪೂರ್ವಕವಾಗಿ ಕೊಂಡಾಡಿದ್ದಾರೆ. 

No comments:

Post a Comment