Sunday, December 23, 2012

Shrimad BhAgavata in Kannada -Skandha-01 CH-01 (5)


ಭಗವಂತ ಈ ಸೃಷ್ಟಿಯನ್ನು ಏಕೆ ನಿರ್ಮಾಣ ಮಾಡಿದ? ಅನಾದಿನಿತ್ಯನಾದ ಜೀವನಿಗೆ ಭಗವಂತ ಏಕೆ ದೇಹವನ್ನು ಕೊಟ್ಟ? ಭಗವಂತನ ಪ್ರಪಂಚ ಸೃಷ್ಟಿಯ ಮೂಲ ಉದ್ದೇಶ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಶ್ಲೋಕದ ಮುಂದಿನ ಪಾದವಿದೆ. ಇಲ್ಲಿ ಹೇಳುತ್ತಾರೆ: “ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ” ಎಂದು. ನಮಗೆ ಭಗವಂತನ ಸೃಷ್ಟಿ ಅರ್ಥವಾಗಬೇಕಾದರೆ ಆತ ಮೊದಲು ಏನು ಮಾಡಿದ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಭಗವಂತ ತನ್ನ ಸೃಷ್ಟಿಯಲ್ಲಿ ಮೊದಲು ತನ್ನನ್ನು ತಾನು ಅನೇಕ ರೂಪಗಳಿಂದ ಸೃಷ್ಟಿಸಿಕೊಂಡ. ನಂತರ ಜೀವರನ್ನು ಹಾಗೂ ಜಡವನ್ನೂ ಸೃಷ್ಟಿ ಮಾಡಿದ. ಇದೇ ತ್ರಿಸರ್ಗ. ಇಲ್ಲಿ ಬೆಳಕಿನಂತೆ ಭಗವಂತನ ಅನೇಕ ರೂಪಗಳ ಸೃಷ್ಟಿಯಾಯಿತು ಎಂದಿದ್ದಾರೆ. ಇದು ಹೇಗೆಂದರೆ: ನಾವು ಒಂದು ಹಣತೆಯಿಂದ ಇನ್ನೊಂದು ಹಣತೆಯನ್ನು ಹಚ್ಚಿದಂತೆ. ಎಷ್ಟೇ ಹಣತೆಯನ್ನು ಹಚ್ಚಿದರೂ, ಹೇಗೆ ಮೂಲ ಹಣತೆಯ ಪ್ರಕಾಶ ಕುಂದುವುದಿಲ್ಲವೋ, ಹಾಗೇ ಭಗವಂತ. ಆತ ಸಾವಿರಾರು ರೂಪ ಧರಿಸಿದರೂ ಕೂಡಾ, ಆತನ ಮೂಲರೂಪದ ಶಕ್ತಿ ಎಂದೂ ಕುಂದುವುದಿಲ್ಲ. ಆತನ ಮೂಲರೂಪ, ಅನಂತ ಅವತಾರ ರೂಪ, ಎಲ್ಲಾ ರೂಪಗಳಲ್ಲೂ ಸಮಾನ ಶಕ್ತಿ ಅಡಗಿದೆ. ಇದು ಬೆಳಕಿನಿಂದ ಬೆಳಕಿನ ಸೃಷ್ಟಿ. ಭಗವಂತನ ಮೂಲರೂಪವೂ ಪೂರ್ಣ ಹಾಗೂ ಆತನ ಅವತಾರ ರೂಪವೂ ಪೂರ್ಣ. ಭಗವಂತ ಅನೇಕ ರೂಪ ತಾಳುವುದು ಎಂದರೆ ಅದು ಆತನ ತೇಜಸ್ಸಿನ ವಿನಿಮಯ.
ಎರಡನೇ ಸರ್ಗ ‘ಜೀವರು’. ಇವರು ಭಗವಂತನಂತಲ್ಲ. ಜೀವರು ಅನೇಕ. ಅವರ ರೂಪಗಳು ಅನೇಕ. ಜೀವರ ಸ್ವಭಾವ ಭಿನ್ನ. ಅವರವರ ಸಿದ್ಧಿ ಬೇರೆ, ಜ್ಞಾನ ಬೇರೆ, ಕರ್ಮ ಬೇರೆ, ಆನಂದ ಬೇರೆ. ನನ್ನ ಜ್ಞಾನ ನಿಮ್ಮ ಜ್ಞಾನವಲ್ಲ; ನನ್ನ ಆನಂದ ನಿಮ್ಮ ಆನಂದವಲ್ಲ; ನನ್ನ ಸಾಧನೆ ನಿಮ್ಮ ಸಾಧನೆ ಅಲ್ಲ; ನನ್ನ ಸಿದ್ಧಿ ನಿಮ್ಮ ಸಿದ್ಧಿಯಲ್ಲ. ಹೀಗೆ ಎಷ್ಟು ಮಂದಿ ಜೀವರೋ ಅಷ್ಟು ವೈವಿದ್ಯ. ಅನಾದಿನಿತ್ಯನಾದ ಅನಂತ ಜೀವ ಅನಂತ ರೂಪವಾಗಿರುವುದರಿಂದ, ಮೊದಲು ಭಗವಂತ ಅನಂತ ರೂಪನಾಗಿ, ಜೀವರ ಬಿಂಬರೂಪನಾಗಿ ನಿಂತ. ಇದು ಹೇಗೆಂದರೆ: ನಾವು ಸಾವಿರಾರು ತಟ್ಟೆಯಲ್ಲಿ ನೀರನ್ನು ತುಂಬಿಸಿಟ್ಟು, ಅದರಲ್ಲಿ ಏಕನಾಗಿರುವ ಸೂರ್ಯನ ಸಾವಿರಾರು ಪ್ರತಿಬಿಂಬ ಕಂಡಂತೆ. ಈ ರೀತಿ ಭಗವಂತ ಬಿಂಬರೂಪನಾಗಿ, ‘ಜೀವ’ದ ಅಸ್ತಿತ್ವಕ್ಕೆ ಬೇಕಾದ ರೂಪವನ್ನು, ‘ಜೀವ’ರಿಗೆ ಮೂರನೇ ಸರ್ಗ ‘ಜಡ’ವನ್ನು ಸೃಷ್ಟಿಸಿ ಕೊಟ್ಟ. ಹೀಗೆ ಇಡೀ ವಿಶ್ವದಲ್ಲಿನ ಈ ಜಡ ಪ್ರಪಂಚ ಮುಖ್ಯವಾಗಿ ಮಣ್ಣಿನ ವಿಕಾರ. ವಿಶ್ವದಲ್ಲಿನ ಜೀವರು ನೀರಿನಲ್ಲಿನ ಪ್ರತಿಬಿಂಬದಂತೆ ಭಗವಂತನ ಪ್ರತಿಬಿಂಬ. ಈ ಎಲ್ಲಾ ಪ್ರತಿಬಿಂಬಗಳಿಗೆ ಬಿಂಬನಾಗಿ ನಿಂತು ನಡೆಸುವವನು ಬೆಳಕಿನಂತೆ ಅನಂತ ರೂಪನಾಗಿರುವ ಭಗವಂತ.

ನಮ್ಮ ಮುಂದಿನ ಪ್ರಶ್ನೆ: ಭಗವಂತ ಈ ಸೃಷ್ಟಿಯನ್ನು ಏಕೆ ನಿರ್ಮಾಣ ಮಾಡಿದ ಎನ್ನುವುದು. ಇದನ್ನು ಸ್ಪಷ್ಟಪಡಿಸಲು ಇಲ್ಲಿ ಹೇಳುತ್ತಾರೆ: ‘ಮೃಷಾ’ ಎಂದು. ಅಂದರೆ ಭಗವಂತ ಯಾವುದೇ ಲಾಭಕ್ಕಾಗಿ ಈ ಸೃಷ್ಟಿಯನ್ನು ನಿರ್ಮಿಸಿಲ್ಲ. ಆತನಿಗೆ ಈ ಸೃಷ್ಟಿ ವ್ಯರ್ಥ. ಆದರೆ ಇದನ್ನು ಆತ ನಮಗಾಗಿ ಸೃಷ್ಟಿಸಿದ. ಒಂದು ವೇಳೆ ಆತ ಈ ಪ್ರಪಂಚವನ್ನು ಸೃಷ್ಟಿಸದೇ ಇರುತ್ತಿದ್ದರೆ, ಇರವಿನ ಅರಿವೂ ಇಲ್ಲದೇ ಇದ್ದ ಸಮಸ್ತ ಜೀವಗಳು, ಉದ್ದಾರದ ಮಾರ್ಗದಿಂದ ವಂಚಿತರಾಗಿ ವ್ಯರ್ಥವಾಗಿ ಹೋಗಬೇಕಾಗುತ್ತಿತ್ತು. ಭಗವಂತನ ಈ ಸೃಷ್ಟಿ ನಾವು ಸಾಧನೆ ಮಾಡುವ ಪಾಠಶಾಲೆ. “ಈ ಶಾಲೆಯಲ್ಲಿ ಕಲಿತು ಪಾಸಾಗಿ ಮೇಲಕ್ಕೆ ಹೋಗು” ಎಂದು ಭಗವಂತ ಈ ಸೃಷ್ಟಿಯನ್ನು ನಮಗಾಗಿ ಸೃಷ್ಟಿಸಿದ.
ಜೀವ ಅನ್ನುವುದು ಒಂದು ಬೀಜದಂತೆ. ಆ ಬೀಜವನ್ನು ಬಿತ್ತಿದರೆ ಅದು ಗಿಡವಾಗಿ, ಹೆಮ್ಮರವಾಗಿ ಬೆಳೆದೀತು. ಆದರೆ ಆ ಬೀಜವನ್ನು ಬಿತ್ತದೆ, ಹಾಗೇ ಬಿಟ್ಟರೆ ಅದು ವ್ಯರ್ಥ. ಅಸೃಜ್ಜಾವಸ್ಥೆಯಲ್ಲಿ ಜೀವರ ಪಾಡು ಬಿತ್ತದ ಬೀಜದಂತೆ. ಅದನ್ನು ಸೃಜ್ಜಾವಸ್ಥೆಗೆ ತಾರದಿದ್ದರೆ ಆ ಜೀವದ ಅಸ್ತಿತ್ವವೇ ವ್ಯರ್ಥವಾಗಿ ಹೋಗುತ್ತದೆ. ಹೀಗೆ ಇರವಿನ ಅರಿವಿಲ್ಲದ ಜೀವನಿಗೆ ದೇಹವನ್ನು ಕೊಟ್ಟು, ಇರವಿನ ಅರಿವನ್ನು ಕೊಟ್ಟು, ಸೃಷ್ಟಿ ಎನ್ನುವ ತೋಟದಲ್ಲಿ ಜೀವ ಎನ್ನುವ ಬೀಜವನ್ನು ಬಿತ್ತಿ, ಜೀವನಿಗೆ ಉದ್ದಾರದ ದಾರಿ ತೋರಿದ ಕಾರುಣ್ಯಮೂರ್ತಿ ಆ ಭಗವಂತ.
ಸಂಸಾರದಲ್ಲಿ ನಾವು ಪಡುವ ಎಲ್ಲಾ ಕಷ್ಟಗಳೂ ಕೂಡಾ ನಮ್ಮ ಉದ್ದಾರದ ದಿಸೆಯಲ್ಲಿ ನಾವು ಅನುಭವಿಸತಕ್ಕಂತಹ ಅನುಭೂತಿಗಳು. ಇವು ನಮ್ಮನ್ನು ಎತ್ತರಕ್ಕೇರಿಸುವ ಮೆಟ್ಟಿಲುಗಳು. ಸಂಸ್ಕೃತದಲ್ಲಿ ಶಿಕ್ಷಾ ಎಂದರೆ ಶಿಕ್ಷಣ ಎಂದರ್ಥ. ಹಾಗಾಗಿ ನಮ್ಮ ಜೀವನದಲ್ಲಿ ಶಿಕ್ಷೆಯಂತೆ ಕಾಣುವ ಪ್ರತಿಯೊಂದು ಘಟನೆ ಕೂಡಾ ಒಂದೊಂದು ಕಲಿಕೆ. ಇದು ದಂಡನೆಯಲ್ಲ. ನಾವು ಅದನ್ನು ಕಲಿತು ಮೇಲಕ್ಕೆ ಬರುತ್ತೇವೆ. ಹೀಗೆ ಭಗವಂತ ತನಗೆ ವ್ಯರ್ಥವಾದರೂ ಕೂಡಾ, ಜೀವಗಳ ಉದ್ದಾರಕ್ಕಾಗಿ, ಕಾರುಣ್ಯದಿಂದ ಈ ಸೃಷ್ಟಿಯನ್ನು ನಮಗಾಗಿ ನಿರ್ಮಾಣಮಾಡಿದ. ನಾವು ಭಗವಂತ ಒದಗಿಸಿಕೊಟ್ಟ ಈ ಸಾಧನಾ ಶರೀರ ಬಳಸಿಕೊಂಡು, ಭಗವಂತನತ್ತ ಹೆಜ್ಜೆ ಹಾಕಬೇಕು. ಸಾಧನಾ ಶರೀರದಿಂದಲೇ ಜೀವನಿಗೆ ಸಾಧನೆ. ಈ ರೀತಿ ಸಾಧನೆ ಪೂರ್ತಿಯಾಗಿ ಭಗವಂತ ಕರೆಸಿಕೊಳ್ಳುವ ತನಕ ಜೀವ ಕಾಯಬೇಕು.
ಭಗವಂತ ನಮಗಾಗಿ ನಿರ್ಮಿಸಿದ ಈ ಪ್ರಪಂಚ ನಮಗೆ ಎಂದೂ ವ್ಯರ್ಥವಲ್ಲ. ಈ ಪ್ರಪಂಚ ಮಿಥ್ಯವಲ್ಲ. ಭಗವಂತ ಎಂದೂ ಮಿಥ್ಯವಾದುದ್ದನ್ನು ಮಾಡುವುದಿಲ್ಲ. ಅದನ್ನೇ ಇಲ್ಲಿ ಹೀಗೆ ಹೇಳಿದ್ದಾರೆ: “ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ” ಎಂದು. ಕುಹಕ ಎಂದರೆ ವಂಚನೆ, ಮೋಸ, ಕಪಟ, ಸುಳ್ಳು, ಇತ್ಯಾದಿ. ಆದರೆ ಭಗವಂತ ನಿರಸ್ತಕುಹಕ. ಅದು ನಿಷ್ಕಪಟವಾದ ಪರಿಶುದ್ಧ ತತ್ತ್ವ.  ಭಗವಂತನ ಮತ್ತು ಜೀವನ ನಡುವೆ ನೇರ ಸಂಬಂಧವಾಗಿ ನಡೆಯುವ ಯಾವ ಕ್ರಿಯೆಯಲ್ಲೂ ಕೂಡಾ ಕಪಟವಿಲ್ಲ. ಇದು ಶಾಸ್ತ್ರದ ಮೂಲ ಪ್ರಮೇಯ. ಸೃಷ್ಟಿಯಲ್ಲಿ ಕಪಟ, ಮೋಸ, ವಂಚನೆ ಬೆಳೆದಿರುವುದು ಮಾಧ್ಯಮಗಳಿಂದ. ಉದಾಹರಣೆಗೆ ಸೂರ್ಯನನ್ನು ನೀರು ಪ್ರತಿಫಲಿಸುತ್ತದೆ. ಆಗ ಅಲ್ಲಿ ಸೂರ್ಯ ವಿಕೃತನಾಗಿ ಕಾಣಬಹುದು. ಇದಕ್ಕೆ ಕಾರಣ ಮಾಧ್ಯಮವಾದ ನೀರೇ ಹೊರತು, ಸೂರ್ಯನಲ್ಲ. ಪ್ರತಿಯೊಂದು ಜೀವದ ಯೋಗ್ಯತೆಗನುಗುಣವಾಗಿ ಅದು ಪ್ರತಿಫಲಿಸುತ್ತದೆ. ಆದ್ದರಿಂದ ಪ್ರಪಂಚದಲ್ಲಿ ಮೂಲಸತ್ಯ ವಿಕೃತವಾಗಿ ಅಜ್ಞಾನ, ದುಃಖ ಸೇರಿಕೊಂಡಿವೆ.
ಸತ್ಯಂ ಪರಂ ಧೀಮಹಿ’. ಇಲ್ಲಿ ಭಗವತನನ್ನು ‘ಸತ್ಯಃ’ ಎಂದು ಕರೆದಿದ್ದಾರೆ. ಈ ಶಬ್ದವನ್ನು ಒಡೆದು ನೋಡಿದರೆ: ಸತ್+ತಿ+ಯ. ಇಲ್ಲಿ ಸತ್ ಎಂದರೆ ನಿರ್ದುಷ್ಟವಾದದ್ದು; ‘ತಿ’ ಅಂದರೆ ಆನಂದ; ‘ಯ’ ಅಂದರೆ ಜ್ಞಾನ. ಆದ್ದರಿಂದ ಸತ್ಯಃ ಎಂದರೆ ‘ಸಚ್ಚಿದಾನಂದ ಸ್ವರೂಪ’ ಎಂದರ್ಥ. ಭಗವಂತ ಅಜ್ಞಾನ, ದುಃಖದ ಸ್ಪರ್ಶವೇ ಇಲ್ಲದ ಪರಿಪೂರ್ಣ ಜ್ಞಾನಾನಂದಸ್ವರೂಪ. ಸತ್ ಅನ್ನುವ ಪದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ ಸ್ಥಿತಿ ಕಾರಣ, ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ ಜ್ಞಾನ-ಅಜ್ಞಾನ-ಬಂಧ-ಮೋಕ್ಷ. ಆದ್ದರಿಂದ ಸತ್ಯಃ ಎಂದರೆ ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂಧಪ್ರದ ಮತ್ತು ಮೋಕ್ಷಪ್ರದನಾದ ಭಗವಂತ. ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂಧ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣಸ್ವರೂಪಜ್ಞಾನಾನಂದಮಯನಾದ ಭಗವಂತ 'ಸತ್ಯಃ'.   ಇಂತಹ ಭಗವತನನ್ನು ಇಲ್ಲಿ ‘ಪರಮ್’ ಎಂದು ಸಂಬೋಧಿಸಿದ್ದಾರೆ. ಪರಮ್ ಎಂದರೆ: ಸರ್ವೋತ್ತಮ, ಸರ್ವವಿಲಕ್ಷಣ, ಸರ್ವಗುಣಪೂರ್ಣ, ಸರ್ವಪಾಲಕ ಎಂದರ್ಥ. ಇಂತಹ ಭಗವಂತನನ್ನು ನಾವೆಲ್ಲರೂ ಧ್ಯಾನ ಮಾಡೋಣ(ಧೀಮಹಿ) ಎನ್ನುವಲ್ಲಿಗೆ ಭಾಗವತದ ಮೊದಲ ಶ್ಲೋಕ ಮುಕ್ತಾಯವಾಗುತ್ತದೆ.
ಹಿಂದೆ ಹೇಳಿದಂತೆ ಎಪ್ಪತ್ತಾರು ಅಕ್ಷರಗಳ ಈ ಶ್ಲೋಕ ಇಡೀ ತತ್ತ್ವ ಮತ್ತು ಮಾತೃಕೆಗಳ ಸಾರಸರ್ವಸ್ವವನ್ನು ತನ್ನ ಗರ್ಭದಲ್ಲಿ ಧರಿಸಿದೆ. ಮೇಲೆ ವಿವರಿಸಿದ ವಿವರಣೆ ಕೇವಲ ಒಂದು ಆಯಾಮದಲ್ಲಿ ನಾವು ಕಾಣಬಹುದಾದ ಅರ್ಥಸಾರ. ಆದರೆ ಈ ಶ್ಲೋಕಕ್ಕೆ ಅನೇಕ ನೆಲೆಗಳಿವೆ. ಇನ್ನೊಂದು ನೆಲೆಯಲ್ಲಿ ನೋಡಿದರೆ ಭಾಗವತ ಎನ್ನುವುದು ಕೃಷ್ಣನ ಕಥೆ. ಕೃಷ್ಣ ಭೂಮಿಯಲ್ಲಿ ಅವತಾರ ಸಮಾಪ್ತಿ ಮಾಡಿ ಹೊರಟುಹೋದ ಮೇಲೆ  ‘ಧರ್ಮ’ ಭಾಗವತವನ್ನು ಬಂದು ಸೇರಿತು ಎನ್ನುತ್ತಾರೆ. ಕೃಷ್ಣನ ಇನ್ನೊಂದು ರೂಪ ಭಾಗವತ ಎಂದು ಭಾಗವತವೇ ಹೇಳುತ್ತದೆ. ಕೃಷ್ಣ ದೇವಕಿಯ ಗರ್ಭದಲ್ಲಿದ್ದಾಗ ದೇವತೆಗಳು ಮಾಡಿದ ಸ್ತೋತ್ರವನ್ನು ಭಾಗವತದಲ್ಲೇ ಹೀಗೆ ಹೇಳಿದ್ದಾರೆ:

ಸತ್ಯವ್ರತಂ ಸತ್ಯಪರಂ ತ್ರಿಸತ್ಯಂ ಸತ್ಯಸ್ಯ ಯೋನಿಂ ನಿಹಿತಂ ಚ ಸತ್ಯೇ
ಸತ್ಯಸ್ಯ ಸತ್ಯಮುತ ಸತ್ಯನೇತ್ರಂ ಸತ್ಯಾತ್ಮಕಂ ತ್ವಾಂ ಶರಣಂ ಪ್ರಪನ್ನಾಃ ೧೦-೩-೨೭

ಇಲ್ಲಿ ಭಗವಂತನನ್ನು ದೇವತೆಗಳು ‘ಸತ್ಯಃ’ ಎಂದು ಸ್ತೋತ್ರ ಮಾಡಿರುವುದನ್ನು ಕಾಣುತ್ತೇವೆ. ‘ಸತ್ಯಃ’ ಎನ್ನುವುದು ಕೃಷ್ಣಾವತಾರದ ವಿಶಿಷ್ಠ ನಾಮಧೇಯ. ಅದನ್ನೇ ಇಲ್ಲಿ ‘ಸತ್ಯಂ ಪರಂ ಧೀಮಹಿ’ ಎನ್ನುವಲ್ಲಿ ಕಾಣುತ್ತೇವೆ. ಭಾಗವತದ ಮೊದಲ ಶ್ಲೋಕಕ್ಕೆ ಕೃಷ್ಣಾವತಾರ ಪರವಾದ ಇನ್ನೊಂದು ಅರ್ಥವಿದೆ. ಬನ್ನಿ, ಭಗವಂತನ ಕೃಪೆ ಬೇಡಿ ಆ ಅರ್ಥ ವಿಶೇಷವನ್ನು ಸಂಕ್ಷಿಪ್ತವಾಗಿ ತೆರೆದು ನೋಡೋಣ. 

No comments:

Post a Comment