“ಜನ್ಮ ಆದ್ಯಸ್ಯ
ಯತಃ”-ಜಗತ್ತಿನ ಆದಿಪುರುಷನ ಜನ್ಮ ಎಲ್ಲಿ ಆಯಿತೋ ಅಲ್ಲಿಂದ-“ಇತರತ್ರ ಅನ್ವಯಾತ್” - ಬೇರೆ ಕಡೆಗ
ಹೋದವ. ಅಂದರೆ ಕೃಷ್ಣನ ಜನ್ಮ ಸೆರೆಮನೆಯಲ್ಲಿ ಆಯಿತು. ಆತ ಅಲ್ಲಿಂದ ನಂದಗೋಪ-ಯಶೋದೆಯನ್ನು ಸೇರಿದ.
ಅಷ್ಟೇ ಅಲ್ಲ “ಪುನಶ್ಚ ಇತರತಃ”- ಅಂದರೆ ಮರಳಿ ಎಲ್ಲಿ ಹುಟ್ಟಿದನೋ ಅಲ್ಲಿಗೆ ಕಂಸನನ್ನು ಕೊಲ್ಲಲು
ಬಂದವ. ಹೀಗೆ “ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚ” ಎನ್ನುವ ಈ ಶ್ಲೋಕದ ಸಾಲು
ಕೃಷ್ಣಾವತಾರದಲ್ಲಿನ ಕೃಷ್ಣನ ಸಮಸ್ತ ಓಡಾಟವನ್ನು ಹೇಳುತ್ತದೆ.
“ಅರ್ಥೇಷ್ವಭಿಜ್ಞಃ
ಸ್ವರಾಟ್”- ಪೂತನಿ, ಕಂಸ, ಶಕಟಾಸುರ, ಗೋಪಿಕಾ ಸ್ತ್ರೀಯರು, ಯಶೋಧೆ-ನಂದಗೋಪ, ವಸುದೇವ-ದೇವಕಿ,
ಇಂದ್ರ, ಹೀಗೆ ಯಾರೇ ಇರಲಿ, ಅವರ ಬಳಿ ಯಾವ ರೀತಿ ನೆಡೆದುಕೊಳ್ಳಬೇಕೋ ಹಾಗೆ
ನಡೆದುಕೊಂಡು[ಅರ್ಥೇಷು] ತನ್ನ ಸಾರ್ವಜ್ಞವನ್ನು ಕೃಷ್ಣ ಪ್ರಕಟಪಡಿಸಿದ. ಎಲ್ಲಾ ಕಡೆಯಿಂದಲೂ
ಎಲ್ಲರಿಗಿಂತ ಹೆಚ್ಚು ಪ್ರಕಾಶಮಾನನಾಗಿ ತನ್ನ ಪೂರ್ಣ ಅವತಾರದ ಮಹಿಮೆಯನ್ನು ತೋರಿದ ಕೃಷ್ಣ
‘ಸ್ವರಾಟ್’ ಎನಿಸಿದ.
“ತೇನೇ ಬ್ರಹ್ಮ
ಹೃದಾ ಯ ಆದಿ ಕವಯೇ”- ಯುದ್ಧ ಪ್ರಾರಂಭವಾದ ಆದಿಯಿಂದ, ಯುದ್ಧದ ನಂತರವೂ ಕೂಡಾ ಕೃಷ್ಣ ಆ ಕಾಲದ ಅಪರೋಕ್ಷಜ್ಞಾನಿ(ಕವಿ) ಇಂದ್ರ ಅವತಾರವಾದ
ಅರ್ಜುನನ ಮೂಲಕ, ನಮಗೆ ಉಪನಿಷತ್ತಿನ ಸಾರಭೂತವಾದ ಬ್ರಹ್ಮವಿದ್ಯೆ, ಅಧ್ಯಾತ್ಮ ವಿದೆಯನ್ನು
ಬಿತ್ತರಿಸಿದ. ತನ್ನ ವಿಶ್ವರೂಪವನ್ನು ಬಿತ್ತರಿಸಿ ತೋರಿದ. ಆದರೂ ಕೂಡಾ-“ಮುಹ್ಯಂತಿ ಯಂ ಸೂರಯಃ”. ಆ ಕಾಲದ ಮಹಾನ್ ಜ್ಞಾನಿಗಳೇ ಕೃಷ್ಣನನ್ನು
ಅರಿಯದೆ ಮೋಹಕ್ಕೊಳಗಾದರು! ಪಾಂಡವರು ಕೃಷ್ಣನನ್ನು ತಮ್ಮ ಸಂಬಂಧಿ ಎಂದು
ಮೋಹಪಟ್ಟರು. ಗರ್ಗಾಚಾರ್ಯರು, ಅಶ್ವತ್ಥಾಮ(ರುದ್ರಾವತಾರ), ಬಲರಾಮ(ಶೇಷಾವತಾರ) ಕೂಡಾ ಭಗವಂತನ ಲೀಲೆಯನ್ನು
ಕಂಡು ಮೋಹಕ್ಕೊಳಪಟ್ಟರು ಅಥವಾ ಭಗವಂತನನ್ನೇ ಮರೆತರು!
“ತೇಜೋವಾರಿಮೃದಾಂ
ಯಥಾ ವಿನಿಮಯೋ ಯತ್ರ ತ್ರಿಸಗಃ”. ಅಂದಿನ ಕಾಲದ ಎಲ್ಲಾ ಜ್ಞಾನಿಗಳೂ ಕೂಡಾ ಕೃಷ್ಣನನ್ನು ಪಾಂಚಭೌತಿಕ
ಶರೀರೀ ಎಂದೇ ತಿಳಿದರು. ಆದರೆ ಅವರ ತಿಳುವಳಿಕೆ ನಿಜವಲ್ಲ[ಮೃಷಾ]. ಭಗವಂತ ತ್ರಿಗುಣಾತೀತ. ಆತನ
ದೇಹ ಜ್ಞಾನಾನಂದ ಸ್ವರೂಪವಾದುದು. ಆದರೆ ಇದು ಜನರಿಗೆ ತಿಳಿಯಲಿಲ್ಲ ಅಷ್ಟೇ. “ಧಾಮ್ನಾ ಸ್ವೇನ ಸದಾ
ನಿರಸ್ತಕುಹಕಂ”: ಇನ್ನೊಂದು ತಪ್ಪು ತಿಳುವಳಿಕೆ ಎಂದರೆ ಕೃಷ್ಣ ಒಬ್ಬ ಸುಳ್ಳುಗಾರ, ಆತ ಕಪಟ ನಾಟಕ
ಸೂತ್ರಧಾರಿ ಎಂಬಿತ್ಯಾದಿ ತಪ್ಪು ತಿಳುವಳಿಕೆ. ಆದರೆ ನಿರಸ್ತಕುಹಕನಾಗಿ ಸಾತ್ವಿಕರಿಗೆ,
ಸಜ್ಜನರಿಗೆ ಯಾವುದು ಹಿತವೋ ಅದು ‘ಸತ್ಯ’ ಎಂದು
ತೋರಿಸಿಕೊಟ್ಟವ ಶ್ರೀಕೃಷ್ಣ. ಇಂತಹ ಸತ್ಯಃ ನಾಮಕ ಭಗವಂತನ ಸರ್ವವಿಲಕ್ಷಣವಾದ(ಪರಮ್) ಹಾಗೂ ನಮಗೆ ಅತ್ಯಂತ ಸಮೀಪದ ಅವತಾರ ಕೃಷ್ಣಾವತಾರ.
ನಮ್ಮಲ್ಲಿ ಇಂದೂ ಕೂಡಾ
ಹೆಚ್ಚಿನವರು ಕೃಷ್ಣ ಒಬ್ಬ ಸುಳ್ಳುಗಾರ, ಆತ ಮೋಸದಿಂದ ದ್ರೋಣ-ಕರ್ಣರನ್ನು ಕೊಲ್ಲಿಸಿದ, ಧರ್ಮರಾಯನಿಂದ
ಸುಳ್ಳು ಹೇಳಿಸಿದ, ಬೆಣ್ಣೆ ಕದ್ದ, ಗೋಪಿಯರ ಸೀರೆ ಕದ್ದ, ಇತ್ಯಾದಿಯಾಗಿ ತಿಳಿದು ಗೊಂದಲಕ್ಕೊಳಗಾಗುವವರಿದ್ದಾರೆ.
ಇದು ಯಾವುದು ಧರ್ಮ ಹಾಗೂ ಯಾವುದು ಅಧರ್ಮ; ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎನ್ನುವ ಪರಿಜ್ಞಾನವಿಲ್ಲದಾಗ
ಆಗುವ ಗೊಂದಲ. ಸಂಕ್ಷಿಪ್ತವಾಗಿ ಕೆಲವು ಘಟನೆಗಳನ್ನು ಹೇಳಬೇಕೆಂದರೆ: ಮೊದಲನೆಯದಾಗಿ ದ್ರೋಣಾಚಾರ್ಯರನ್ನು
ಧರ್ಮರಾಯನಿಂದ ಸುಳ್ಳು ಹೇಳಿಸಿ ಕೊಲ್ಲಿಸಿರುವುದು. ದ್ರೋಣಾಚಾರ್ಯ ಒಬ್ಬ
ಬ್ರಹ್ಮರ್ಷಿ. ಅದೊಂದು ಮಹಾನ್ ಚೇತನ. ಆದರೆ ಅದ್ಯಾವುದೋ ಪ್ರಾರಾಬ್ಧಕ್ಕೊಳಗಾಗಿ ಅವರು ಅಧರ್ಮದ ಪರ
ಯುದ್ಧಕ್ಕೆ ನಿಂತಿದ್ದರು. ದಿನಕ್ಕೆ ಕನಿಷ್ಠ ಹತ್ತುಸಾವಿರ ಸೈನಿಕರನ್ನು ಕೊಲ್ಲುವುದಾಗಿ ಶಪತತೊಟ್ಟು,
ಅದಕ್ಕಾಗಿ ಹಗಲೂ ರಾತ್ರಿ ಹೋರಾಟದಲ್ಲಿ ತೊಡಗಿದ್ದರು. ಇದು ಅವರಿಗೆ ಇನ್ನೆಂದೂ ಮೇಲಕ್ಕೇಳಲು ಅಸಾಧ್ಯವಾದ
ತಮಸ್ಸಿನ ಮಾರ್ಗವಾಗಿತ್ತು. ಹೀಗಿರುವಾಗ ದ್ರೋಣಾಚಾರ್ಯರ ಉದ್ಧಾರ ಇದ್ದದ್ದು ಅವರ ಬದುಕಿನಲ್ಲಲ್ಲ,
ಬದಲಿಗೆ ಅವರ ಸಾವಿನಲ್ಲಿ. ಅವರೊಬ್ಬರ ಸಾವಿನಿಂದ ದಿನಕ್ಕೆ ಹತ್ತುಸಾವಿರ ಸೈನಿಕರ ಪ್ರಾಣಹಾನಿ ತಪ್ಪುತ್ತದೆ
ಮತ್ತು ಅವರು ಕೊಲೆಪಾತಕದಿಂದ ಪಾರಾಗುತ್ತಾರೆ. ಇಂತಹ ಮಹಾನ್ ಚೇತನವನ್ನು ಉದ್ಧಾರಮಾಡಬೇಕು ಎಂದು ಬಯಸಿದ
ಕೃಷ್ಣ, ಧರ್ಮರಾಯನಿಂದ ಸುಳ್ಳು ಹೇಳಿಸಿದ. ಇದು ಸಜ್ಜನರ ಉದ್ಧಾರಕ್ಕೋಸ್ಕರ ಭಗವಂತ ನುಡಿಸಿದ ದೊಡ್ಡ
ಸತ್ಯ. ತಿರುಳನ್ನು ನೋಡದೇ ಮೇಲ್ನೋಟದಲ್ಲಿ ನಿಂತರೆ ಈ ಸತ್ಯ ನಮಗೆ ಅರ್ಥವಾಗುವುದಿಲ್ಲ ಅಷ್ಟೇ.
ಇನ್ನೊಂದು ಘಟನೆ ದುರ್ಯೋಧನನ ತೊಡೆಯನ್ನು ಭೀಮನಿಂದ ಕೃಷ್ಣ ಮುರಿಸಿರುವುದು. ಇದನ್ನು ಬಲರಾಮ ಕೂಡಾ
ಅಧರ್ಮ ಎಂದು ವಿರೋಧಿಸುತ್ತಾನೆ. ಆಗ ಕೃಷ್ಣ ಕೊಟ್ಟ ಉತ್ತರ ರೋಚಕ. ಕೃಷ್ಣ ಹೇಳುತ್ತಾನೆ: ಧರ್ಮ ಆಚರಣೆ
ಶ್ರೇಯಸ್ಸನ್ನು ತರುತ್ತದೆ ನಿಜ. ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವುದು
ಕಷ್ಟ” ಎಂದು. ಕೃಷ್ಣ ದುರ್ಯೋಧನನನ್ನು ಉದ್ಧೇಶಿಸಿ ಹೇಳುತ್ತಾನೆ: “ನಿನ್ನ ತೊಡೆ ಮುರಿದದ್ದು ಅಧರ್ಮ
ಎಂದಿಯಲ್ಲ, ಆ ತೊಡೆ ಎಂತಹ ತೊಡೆ? ತುಂಬಿದ ಸಭೆಗೆ ಒಬ್ಬ ಸ್ತ್ರೀಯನ್ನು ಅರೆನಗ್ನಾವಸ್ತೆಯಲ್ಲಿ ಎಳೆದು
ತಂದು, ತೊಡೆತಟ್ಟಿ, ‘ನನ್ನ ತೊಡೆಯಮೇಲೆ ಬಂದು ಕೂಡು’
ಎಂದು ಹೇಳಿದೆಯಲ್ಲ; ಪರಸ್ತ್ರೀಗೆ ತಟ್ಟಿದ ತೊಡೆಗೆ ಇದು ಕನಿಷ್ಠ ಶಿಕ್ಷೆ. ಇಷ್ಟು ಮಾಡದೇ ಹೋದರೆ ಈ
ದೇಶದಲ್ಲಿ ಧರ್ಮದ ಸ್ಥಿತಿ ಏನಾದೀತು” ಎಂದು ಕೇಳುತ್ತಾನೆ ಕೃಷ್ಣ. ಈ ರೀತಿ ಮೇಲ್ನೋಟಕ್ಕೆ ಎಲ್ಲವೂ ವ್ಯತಿರಿಕ್ತವಾಗಿ
ಕಂಡರೂ, ಅದಕ್ಕಿಂತ ಬೇರೆ ಆಯಾಮದಲ್ಲಿ ಸತ್ಯ-ಧರ್ಮವನ್ನು ನಮ್ಮ ಮುಂದೆ ತೆರೆದು ತೋರಿಸಿದ ಭಗವಂತನ
ಅಪೂರ್ವ ಅವತಾರ ಕೃಷ್ಣಾವತಾರ. ಈ ಸತ್ಯ ತಿಳಿದಾಗ ಮಾತ್ರ ನಮಗೆ ಕೃಷ್ಣಾವತಾರ ಅರ್ಥವಾಗುತ್ತದೆ. ಬನ್ನಿ,
ಇಂತಹ ಸತ್ಯ ಸ್ವರೂಪನಾದ ಕೃಷ್ಣನನ್ನು ಧ್ಯಾನ ಮಾಡುತ್ತಾ ಭಾಗವತವನ್ನು ಪ್ರವೇಶಿಸೋಣ.
No comments:
Post a Comment