Friday, December 21, 2012

Shrimad BhAgavata in Kannada -Skandha-01 CH-01 (3)


ಇಲ್ಲಿ ಭಗವಂತನನ್ನು “ಅರ್ಥೇಷು ಅಭಿಜ್ಞಃ” ಎಂದು ಕರೆದಿದ್ದಾರೆ. ಸಮಸ್ತ ವೇದವಾಙ್ಮಯ, ಪುರಾಣ, ಇತಿಹಾಸಗಳು, ನಮಗೆ ತಿಳಿದಿರುವ ತರ್ಕಗಳು, ಎಲ್ಲವೂ ಜಗತ್ಕಾರಣ ಭಗವಂತನನ್ನು ಹೇಳುತ್ತವೆ. ಒಂದು ವಸ್ತುವನ್ನು ಸೃಷ್ಟಿ ಮಾಡಬೇಕಾದರೆ ನಮಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಬೇಕು. ವಸ್ತುವಿನ ಅರಿವಿಲ್ಲದವನಿಗೆ ಒಂದು ವಸ್ತುವನ್ನು ಸೃಷ್ಟಿಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾರು ಸರ್ವಜ್ಞನಲ್ಲವೋ ಅವನು ಸರ್ವಕರ್ತನಾಗಲು ಸಾಧ್ಯವಿಲ್ಲ. ಇಡೀ ಜಗತ್ತನ್ನು ಸೃಷ್ಟಿಮಾಡಿದ ಭಗವಂತನಿಗೆ ಇಡೀ ಜಗತ್ತಿನಲ್ಲಿರುವ ಸಮಸ್ತ ಕಾರ್ಯ ಕಾರಣಗಳ ಅರಿವಿರಲೇಬೇಕು. ಆದ್ದರಿಂದ ಭಗವಂತ ಕೇವಲ ಅರ್ಥಜ್ಞನಲ್ಲ, ಅವನು ‘ಅರ್ಥೇಷು ಅಭಿಜ್ಞಃ’. ಆತನಲ್ಲಿ ಅನಂತಾನಂತ ವಸ್ತುಗಳ ಅನಂತಾನಂತ ಅರಿವು ತುಂಬಿದೆ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಚತುರ್ಮುಖ ಬ್ರಹ್ಮನನ್ನು ವಿಧಿ, ವಿಧಾತ, ಸೃಷ್ಟಿಕರ್ತಾ, ಇತ್ಯಾದಿಯಾಗಿ ಕರೆಯುತ್ತಾರೆ. ಸೃಷ್ಟಿ ಕಾರಣಳಾಗಿ ಪ್ರಕೃತಿ ಇದ್ದಾಳೆ. ಆದರೆ ಕೇವಲ ಭಗವಂತ ಮಾತ್ರ ಏಕೆ ‘ಅರ್ಥೇಷು ಅಭಿಜ್ಞಃ’ ಎಂದು. ಇದು ಉತ್ತಮವಾದ ಪ್ರಶ್ನೆ. ಈ ಪ್ರಶ್ನೆಗೆ ಪೂರಕ ಎನ್ನುವಂತೆಈ ಕೆಳಗಿನ ವೇದಮಂತ್ರವಿದೆ:

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ
ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ॥ ಋಗ್ವೇದ೧೦-೧೨೫-೦೫ 

ಇಲ್ಲಿ ಹೇಳುವಂತೆ: ಜಗತ್ತನ್ನು ಸೃಷ್ಟಿಮಾಡಬಲ್ಲ ಚತುರ್ಮುಖನನ್ನು ನಾನು ಸೃಷ್ಟಿಸಬಲ್ಲೆ ಎಂದಿದ್ದಾಳೆ ಶ್ರೀಲಕ್ಷ್ಮಿ. ಆದರೂ ಕೂಡಾ ಭಗವಂತನೇ ‘ಅರ್ಥೇಷು ಅಭಿಜ್ಞಃ’ ಏಕೆಂದರೆ  ತಾಯಿ ಲಕ್ಷ್ಮಿಯೇ ಹೇಳುವಂತೆ:

ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ
ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ    ಋಗ್ವೇದ ೧೦-೧೨೫-೦೭

ಇಲ್ಲಿ ಲಕ್ಷ್ಮಿ ಹೇಳುತ್ತಾಳೆ: ನನಗೊಬ್ಬ ಕಾರಣಪುರುಷನಿದ್ದಾನೆ, ಅವನು ಸಮುದ್ರದಲ್ಲಿ ಮಲಗಿದ್ದಾನೆ ಎಂದು. ಅಂದರೆ ಪ್ರಕೃತಿ ಕೂಡಾ ಭಗವಂತನ ಅಧೀನ. ಪ್ರಕೃತಿಗೆ ಸರ್ವ ಕರ್ತೃತ್ವ ಇದ್ದರೂ ಕೂಡಾ, ಅದು ಭಗವಂತನ ಅಧೀನ. ಹೇಗೆ ಪ್ರಕೃತಿಯೋ ಹಾಗೇ  ಚತುರ್ಮುಖ ಬ್ರಹ್ಮ ಕೂಡಾ. ಶ್ವೇತಾಶ್ವತರ  ಉಪನಿಷತ್ತಿನಲ್ಲಿ ಹೇಳುವಂತೆ:

ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಶ್ಚ ಪ್ರಹಿಣೋತಿ ತಸ್ಮೈ
ತಂ ಹ ದೇವಮಾತ್ಮಬುದ್ಧಿ ಪ್ರಕಾಶಂ ಮುಮುಕ್ಷು ರ್ವೈ ಶರಣಮಹಂ ಪ್ರಪದ್ಯೇ  ೬-೧೮

ಚತುರ್ಮುಖನಿಗೆ ಬುದ್ಧಿಯ ಬೆಳಕನ್ನು ಕೊಟ್ಟವ ಹಾಗೂ ಸೃಷ್ಟಿಯ ಅರಿವನ್ನು ಕೊಟ್ಟ ಭಗವಂತ ‘ಅರಿವಿನ ಮಡು’. ಇಂತಹ ಭಗವಂತನನ್ನು ಇಲ್ಲಿ ‘ಸ್ವರಾಟ್’ ಎಂದು ಕರೆದಿದ್ದಾರೆ. ಅಂದರೆ ಆತ ಇನ್ನೊಬ್ಬರಿಂದ ಅರಿವು ಪಡೆಯುವುದಿಲ್ಲ. ಚತುರ್ಮುಖ ಬ್ರಹ್ಮ ಸ್ವಯಂ ಸ್ವರಾಟ್ ಅಲ್ಲ. ಏಕೆಂದರೆ ಇಲ್ಲಿ : “ತೇನೇ ಬ್ರಹ್ಮ ಹೃದಾ ಯ ಆದಿಕವಯೇ” ಎಂದಿದ್ದಾರೆ. ‘ತೇನೇ’ ಅಂದರೆ  ಬಿತ್ತರಿಸುವುದು. ಶಬ್ದಗಳ ಬೃಹತ್ ಸಮುದಾಯವಾದ ವೇದವನ್ನು ಇಲ್ಲಿ ‘ಬ್ರಹ್ಮ’ ಎಂದಿದ್ದಾರೆ. ವೇದವನ್ನು ಆದಿಕವಿ ಚತುರ್ಮುಖ ಬ್ರಹ್ಮನಿಗೆ ಬಿತ್ತರಿಸಿದ ಭಗವಂತ ನಿಜವಾದ ‘ಅರ್ಥೇಷು ಅಭಿಜ್ಞಃ’. ಇಲ್ಲಿ ಆದಿಕವಿ ಎಂದು ಚತುರ್ಮುಖನನ್ನು ಸಂಬೋಧಿಸಿದ್ದಾರೆ. ಸಾಮಾನ್ಯವಾಗಿ ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯುತ್ತಾರೆ. ಆದರೆ ವಾಲ್ಮೀಕಿಗೂ  ಸ್ಫೂರ್ತಿಕೊಟ್ಟ ಚತುರ್ಮುಖ ನಿಜವಾದ ಆದಿಕವಿ. ಕವಿ ಎಂದರೆ ಎಲ್ಲ ಶಬ್ದಗಳಿಂದಲೂ ಭಗವಂತನ ಗುಣವಿಶೇಷ ಕಾಣುವವ. ಈ ಸೃಷ್ಟಿಯ ಮೊದಲ ಜೀವನಾಗಿರುವ, ಸರ್ವಶಬ್ದಗಳಲ್ಲೂ ಭಗವಂತನನ್ನು ಕಾಣಬಲ್ಲ ಚತುರ್ಮುಖ ‘ಆದಿಕವಿ’. ಈ ಆದಿಕವಿಗೆ ಸೃಷ್ಟಿಯ ಪೂರ್ವದಲ್ಲಿ ವೇದವನ್ನು ಬಿತ್ತರಿಸಿದ ಭಗವಂತ ‘ಅರ್ಥೇಷು ಅಭಿಜ್ಞಃ’

No comments:

Post a Comment