Tuesday, December 25, 2012

Shrimad BhAgavata in Kannada -Skandha-01 -Ch-01(8)


ಭಾಗವತ ಓದುಲು ಅಧಿಕಾರಿಗಳು ಯಾರು ಎನ್ನುವುದನ್ನು ವಿವರಿಸುತ್ತಾ ವ್ಯಾಸರು ಹೇಳುತ್ತಾರೆ: “ನಿರ್ಮತ್ಸರಾಣಾಂ ಸತಾಮ್” ಎಂದು. “ಮತ್ಸರವಿಲ್ಲದ ಸಜ್ಜನರಿಗಾಗಿ ಈ ಭಾಗವತ ನಿರ್ಮಾಣ ಮಾಡಿದೆ” ಎಂದಿದ್ದಾರೆ ವೇದವ್ಯಾಸರು. ಈ ಮಾತು ಅರ್ಥವಾಗಬೇಕಾದರೆ ನಮಗೆ ‘ಸಜ್ಜನ’ ಅನ್ನುವ ಪದದ ಅರ್ಥ ತಿಳಿದಿರಬೇಕು. ಇದನ್ನು ವ್ಯಾಸರೇ ಹಿಂದೆ ತಮ್ಮ ಕಪಿಲಾವತಾರದಲ್ಲಿ ತನ್ನ ತಾಯಿ ದೇವಹೂತಿಗೆ ವಿವರಿಸಿರುವುದನ್ನು ಕಾಣುತ್ತೇವೆ. ಇದನ್ನು ಭಾಗವತದಲ್ಲೇ ಮುಂದೆ ಮೂರನೇ ಸ್ಕಂಧದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳುವ ‘ಸಜ್ಜನ’ ಪದದ ಸಂಕ್ಷಿಪ್ತ ಅರ್ಥವಿವರಣೆ ಹೀಗಿದೆ:

ತಿತಿಕ್ಷವಃ ಕಾರುಣಿಕಾಃ ಸುಹೃದಾಃ ಸರ್ವದೇಹಿನಾಮ್  ।
ಅಜಾತಶತ್ರವಃ  ಶಾಂತಾಃ ಸಾಧವಃ ಸಾಧುಭೂಷಣಾಃ ॥೦೩-೨೬-೨೧॥

ಮಯ್ಯನನ್ಯೇನ ಭಾವೇನ ಭಕ್ತಿಂ ಕುರ್ವಂತಿ ಯೇ ದೃಢಾಮ್।
ಮತ್ಕೃತೇ ತ್ಯಕ್ತಕರ್ಮಾಣಸ್ತ್ಯಕ್ತಸ್ವಜನಬಾಂಧವಾಃ        ॥೦೩-೨೬-೨೨॥

ಮದಾಶ್ರಯಾಃ ಕಥಾ ಹೃಷ್ಟಾಃ ಶೃಣ್ವಂತಿ ಕಥಯಂತಿ ಚ ।
ತಪಂತಿ ವಿವಿಧಾಂಸ್ತಾಪಾ ನೈಕಾತ್ಮ್ಯಗತಚೇತಸಃ       ॥೦೩-೨೬-೨೩॥

ತ ಏತೇ ಸಾಧವಃ ಸಾಧ್ವಿ ಸರ್ವಸಂಗವಿವರ್ಜಿತಾಃ        ।
ಸಂಗಸ್ತೇಷ್ವಥ ತೇ ಪ್ರಾರ್ಥ್ಯಃ ಸಂಗದೋಷಹರಾ ಹಿ ತೇ ॥೦೩-೨೬-೨೧॥

ಜೀವನದಲ್ಲಿ ಎಂತಹ ಕಷ್ಟ ಕಾರ್ಪಣ್ಯ ಬಂದರೂ ಕೂಡಾ, ಮರುಗದೆ, ಸಹನೆಯಿಂದಿದ್ದು, ಆತ್ಮವಿಶ್ವಾಸದಿಂದ ಬದುಕಿನ ದುರ್ಬರತೆಯನ್ನು ಎದುರಿಸುವ ತಾಕತ್ತಿರುವುದು ಸಜ್ಜನಿಕೆಯ ಒಂದು ಮುಖ. ಯಾರಾದರೂ ಏನಾದರೂ ಅಪಮಾನ- ತಿರಸ್ಕಾರ ಮಾಡಿದರೆ, ರೇಗಾಡದೆ, ತಾಳ್ಮೆಗೆಡದೆ, ಸಹನೆಯಿಂದ ಇರಬಲ್ಲವ ಸಜ್ಜನ.  ಕಷ್ಟ-ಕಾರ್ಪಣ್ಯ-ದುಃಖವನ್ನು ಕಂಡು ಕರಗುವ ಕಾರುಣ್ಯಮೂರ್ತಿ, ಕೇವಲ ತನ್ನವರನ್ನಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಂದ ಹಿಡಿದು ಎಲ್ಲಾ ಜೀವಮಾತ್ರರನ್ನು ಪ್ರೀತಿಸಬಲ್ಲ ಅಜಾತಶತ್ರು-ಸಜ್ಜನ. [ಅಜಾತಶತ್ರು= ಯಾರೇ ತನ್ನನ್ನು ದ್ವೇಷಿಸಲಿ, ಆದರೆ ತಾನು ಮಾತ್ರ ಯಾರನ್ನೂ ದ್ವೇಷಿಸದೇ ಇರುವುದು. ಉದಾಹರಣೆಗೆ ಧರ್ಮರಾಯ]. ತಟ್ಟನೆ ಉದ್ವೇಗಕ್ಕೊಳಗಾಗದೆ, ಕಾಮ-ಕ್ರೋಧಕ್ಕೊಳಗಾಗದೆ, ಬದುಕಿನಲ್ಲಿ ಸ್ಥಿರವಾಗಿ ನಿಲ್ಲಬಲ್ಲವ ಸಜ್ಜನ. ಇದು ಸಾಮಾಜಿಕವಾಗಿ ಇರಬೇಕಾದ ಸಜ್ಜನಿಕೆಯ ವಿವರಣೆ. ಆದರೆ ಈ ಎಲ್ಲಾ ಗುಣಧರ್ಮಗಳು ಸಾರ್ಥಕವಾಗುವುದು ಭಗವಂತನ ಮೇಲೆ ನಂಬಿಕೆ ಇದ್ದಾಗ ಮಾತ್ರ. ಭಗವಂತನನ್ನು ನಿರಾಕರಣೆ ಮಾಡುವವರು ಸಜ್ಜನರಲ್ಲ.  ಅನನ್ಯಭಾವದಿಂದ, ಗೌರವದೃಷ್ಟಿಯಿಂದ ಭಗವಂತನನ್ನು ಪ್ರೀತಿಸುವುದು; ತನ್ನ ಬದುಕನ್ನು ಭಗವಂತನ ಅರಿವಿಗೋಸ್ಕರ, ಭಗವಂತನ ಸಾಕ್ಷಾತ್ಕಾರಕ್ಕೋಸ್ಕರ ಮೀಸಲಿಡುವುದು; ಸಮಸ್ತ ಕ್ರಿಯೆಯನ್ನು ಭಗವದರ್ಪಣಾ ಭಾವದಿಂದ ಮಾಡುವುದು ಸಜ್ಜನಿಕೆಯ ಮೂಲಮಂತ್ರ.  ಸದಾ ಭಗವದ್ ವಿಷಯಿಕವಾದ ಕಥೆಗಳನ್ನು ಕೇಳುವುದು ಮತ್ತು ಹೇಳುವುದು, ಯಾವುದೇ ಲೇಪವಿಲ್ಲದೆ ನಿರ್ಲಿಪ್ತ ಬದುಕು ಬಾಳುವುದು ಸಜ್ಜನಿಕೆ. ಇಂತಹ ಸಜ್ಜನರಿಗೆ ಭಗವಂತನನ್ನು ತಿಳಿಸುವ, ಹಾಗೂ ಭಗವಂತನನ್ನು ಸೇರುವ ಮಾರ್ಗವನ್ನು ತಿಳಿಸತಕ್ಕ  ಗ್ರಂಥ ಈ ಭಾಗವತ.
ಇಲ್ಲಿ ಮತ್ಸರವಿಲ್ಲದ ಸಜ್ಜನ ಎಂದಿದ್ದಾರೆ. ಸಂಸ್ಕೃತದಲ್ಲಿ ಮತ್ಸರ ಎಂದರೆ  ಹೊಟ್ಟೆಕಿಚ್ಚಲ್ಲ. ಅಸೂಯೆ ಎಂದರೆ ಹೊಟ್ಟೆಕಿಚ್ಚು. ಇಲ್ಲಿ ಮತ್ಸರ ಎಂದರೆ ಜಿದ್ದು, ಸ್ಪರ್ಧೆ. ಸಮಾನಸ್ಕಂದರೊಂದಿಗೆ ಅಥವಾ ತಮ್ಮಿಂದ ಕೆಳಗಿನವರೊಂದಿಗೆ ಸ್ಪರ್ಧೆ ಇರುತ್ತದೆ. ಆದರೆ ತಮ್ಮಿಂದ ಜ್ಞಾನದಲ್ಲಿ ದೊಡ್ದವರಾಗಿರುವವರ ಜೊತೆಗೆ ಮತ್ಸರ ಸಲ್ಲದು.
“ವೇದ್ಯಂ ವಾಸ್ತವಮತ್ರ ವಸ್ತು ಶಿವದಂ ತಾಪತ್ರಯೋನ್ಮೂಲನಮ್”. ಅಂದರೆ: ಎಲ್ಲವುದರ ಒಳಗೂ-ಹೊರಗೂ ತುಂಬಿರುವ, ಎಲ್ಲವುದರ ಒಳಗಿದ್ದು, ಅದನ್ನು ಇತರ ವಸ್ತುವಿಗಿಂತ ಭಿನ್ನರೂಪದಲ್ಲಿ, ಅದರದರ ಯೋಗ್ಯತೆಗನುಗುಣವಾಗಿ  ಪ್ರೇರೇಪಿಸುತ್ತಿರುವ, ಮೋಕ್ಷಪ್ರದ ಭಗವಂತ ಭಾಗವತದಲ್ಲಿ ಪ್ರತಿಪಾಧ್ಯನಾಗಿದ್ದಾನೆ ಎಂದರ್ಥ. ಇಲ್ಲಿ ‘ವಾಸ್ತವ ವಸ್ತು’ ಎನ್ನುವ ಪದ ಬಳಕೆಯಾಗಿದೆ. ವಸ್ತು ಅನ್ನುವ ಪದಕ್ಕೆ ಸಂಬಂಧಿಸಿದಂತೆ  ಸಂಸ್ಕೃತದಲ್ಲಿ ಅನೇಕ ಧಾತುಗಳಿವೆ. ೧. ವಸ-ನಿವಾಸೇ; ೨. ವಸ-ಆಚ್ಛಾದನೆ; ೩. ವಸ-ಛೇದನೆ; ೪. ವಸು-ಸ್ಥಿತೌ; ೫. ವಸ್ತ-ಪ್ರೇರಣೆ; ಇತ್ಯಾದಿ. ಎಲ್ಲರ ಒಳಗೆ ನಿವಾಸ ಮಾಡುವ ಭಗವಂತ ವಸ್ತು; ಎಲ್ಲರ ಹೊರಗೂ ತುಂಬಿರುವ ಸರ್ವಗತ ಭಗವಂತ ವಸ್ತು; ಪ್ರತಿಯೊಂದರ ಒಳಗೂ ಭಿನ್ನ ರೂಪನಾಗಿ ನೆಲೆಸಿರುವ ಭಗವಂತ ವಸ್ತು; ಪ್ರತಿಯೊಂದರ ಸ್ಥಿತಿಗೆ ಕಾರಣನಾಗಿರುವ ಭಗವಂತ ವಸ್ತು; ಪ್ರತಿಯೊಬ್ಬರ ಒಳಗೂ ಹೊರಗೂ ತುಂಬಿ ಪ್ರೇರೇಪಿಸುವ ಭಗವಂತ ವಸ್ತು. ಆಚಾರ್ಯರು ತಮ್ಮ ನಿರ್ವಚನದಲ್ಲಿ ಹೀಗೆ ಹೇಳುತ್ತಾರೆ: “ವಸ್ತು ಅಪ್ರತಿಹತಂ ನಿತ್ಯಂ ಚ । ಸ್ಕಾಂದೇ ಚ ವಸನಾದ್ ವಾಸನಾದ್ ವಸ್ತು ನಿತ್ಯಾಪ್ರತಿಹತಂ ಯತಃ ।” ಎಂದು. ಇಲ್ಲಿ 'ವಸ(ನಿವಾಸೇ) ಮತ್ತು ತುದ' ಧಾತುವನ್ನು ಹೇಳುತ್ತಾರೆ.  ಸಾಮಾನ್ಯವಾಗಿ ‘ತುದ’ ಎಂದರೆ ದುಃಖೀ ಎನ್ನುವ ಅರ್ಥವಿದೆ. ಆದರೆ ಇಲ್ಲಿ ‘ತುದ’ ಧಾತು ಛೇದನೆ/ಪ್ರೇರಣೆ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ. ತಾನು ಅಂತರ್ಯಾಮಿಯಾಗಿ ಒಳಗಿದ್ದು, ಅದರಿಂದಾಗಿ ಒಂದು ವಸ್ತುವನ್ನು ಬೇರೆ ವಸ್ತುವಿಗಿಂತ ಭಿನ್ನವಾಗಿರಿಸಿ, ಪ್ರೇರೇಪಿಸುವ ಭಗವಂತ ‘ವಸ್ತು’ ಎನ್ನುವುದು ಇಲ್ಲಿನ ನಿರ್ವಚನ ಅರ್ಥ. ಇದಲ್ಲದೆ ರೂಡಾರ್ಥದಲ್ಲಿ ಹೇಳುತ್ತಾರೆ: “ಅಪ್ರತಿಹತಂ ನಿತ್ಯಂ ವಸ್ತು” ಎಂದು. ಅಂದರೆ ಎಲ್ಲೆಡೆ, ಎಲ್ಲಾ ಕಾಲದಲ್ಲಿ ತುಂಬಿರುವ ನಿತ್ಯ ತತ್ತ್ವ ಭಗವಂತ ‘ವಸ್ತು’. ಅಂತಹ ಭಗವಂತನ ಗತಿಗೆ ತಡೆ ಇಲ್ಲ.     
ವೇದವ್ಯಾಸರು ಇಲ್ಲಿ ಭಗವಂತನನ್ನು ಕೇವಲ ‘ವಸ್ತು’ ಎಂದು ಹೇಳದೇ, ‘ವಾಸ್ತವ ವಸ್ತು’ ಎಂದಿದ್ದಾರೆ. ಇಲ್ಲಿ ವಾಸ್ತವ ಎಂದರೆ : ನಿತ್ಯ ನಿರಸ್ತದೋಷ ಪೂರ್ಣಗುಣಂ ವಾಸ್ತವಮ್- ಯಾವುದು ಸರ್ವಗತವಾಗಿ ಸರ್ವಕಾಲದಲ್ಲಿ ಸರ್ವವನ್ನೂ ನಿಯಂತ್ರಣ ಮಾಡುತ್ತದೋ, ಅದು ದೋಷರಹಿತಗುಣಪೂರ್ಣವಾದ-ವಾಸ್ತವ. ಹೇಗೆ ಬ್ರಹ್ಮಸೂತ್ರದ ಮೊದಲ ನಾಲ್ಕು ಅಧ್ಯಾಯಗಳಲ್ಲಿ  “ಭಗವಂತ ಗುಣಪೂರ್ಣ, ದೋಷದೂರ, ಸರ್ವಶಾಸ್ತ್ರಗಳಿಂದ ಜ್ಞೇಯನಾದವ” ಎಂದು ಹೇಳಿದ್ದಾರೋ, ಅದನ್ನೇ ಇಲ್ಲಿ  “ವೇದ್ಯಂ ವಾಸ್ತವಮತ್ರ ವಸ್ತು” ಎಂದು ಹೇಳಲಾಗಿದೆ.
ಶಿವದಂ ತಾಪತ್ರಯೋನ್ಮೂಲನಮ್ ಎನ್ನುವಲ್ಲಿ  ‘ಶಿವ’ ಎಂದರೆ ಪರಮಮಾಂಗಲಿಕ ಸ್ಥಿತಿ. ಅವರವರ ಯೋಗ್ಯತೆಗನುಗುಣವಾದ ಪೂರ್ಣವಾದ ಜ್ಞಾನದ ಅಭಿವ್ಯಕ್ತಿಯೇ ‘ಶಿವ’. ಅಂದರೆ ಮೋಕ್ಷಸ್ಥಿತಿ.  ಅದೇ ರೀತಿ ‘ತಾಪತ್ರಯ’. ತಾಪಗಳು ಮೂರು. ೧. ಆಧ್ಯಾತ್ಮಿಕ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ವೇದನೆ ಇತ್ಯಾದಿ. ೨. ಆದಿದೈವಿಕ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವ್ರಷ್ಟಿ,  ಸಿಡಿಲು ಇತ್ಯಾದಿ. ೩. ಆದಿಭೌತಿಕ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ಮೋಕ್ಷಸ್ಥಿತಿ. ಭಾಗವತ ಮೋಕ್ಷಪ್ರದ ಭಗವಂತನನ್ನು ಪ್ರತಿಪಾದಿಸುವ ಅತ್ಯಮೂಲ್ಯ ಗ್ರಂಥ. ಒಟ್ಟಿನಲ್ಲಿ ಹೇಳಬೇಕೆಂದರೆ: ಎಲ್ಲಾ ದುಃಖಗಳನ್ನು ಪರಿಹರಿಸುವ, ಆನಂದ-ಜ್ಞಾನಗಳ ಪೂರ್ಣ ಸ್ಥಿತಿಯನ್ನು ಕೊಡುವ, ಎಲ್ಲಿಯೂ ತಡೆ ಇಲ್ಲದೆ, ಎಲ್ಲೆಡೆ ಸದಾಕಾಲ ತುಂಬಿರುವ, ಎಲ್ಲಾ ದೋಷಗಳಿಂದ ದೂರನಾದ ಭಗವಂತ-ಭಾಗವತ ಪ್ರತಿಪಾಧ್ಯ.

No comments:

Post a Comment