Saturday, January 19, 2013

Shrimad BhAgavata in Kannada -Skandha-01 -Ch-03(02)


ತೃತೀಯಮೃಷಿಸರ್ಗಂ ವೈ ದೇವರ್ಷಿತ್ವಮುಪೇತ್ಯ ಸಃ 
ತಂತ್ರಂ ಸಾತ್ವತಮಾಚಷ್ಟ ನೈಷ್ಕರ್ಮ್ಯಂ ಕರ್ಮಣಾಂ ಯತಃ     

ಸ್ವಾಯಂಭುವ ಮನ್ವಂತರದಲ್ಲಿ ಆದ ಭಗವಂತನ ಮೂರನೇ ಅವತಾರವನ್ನು ಈ ಶ್ಲೋಕ ವಿವರಿಸುತ್ತದೆ. ಹೆಚ್ಚಿನ ವ್ಯಾಖ್ಯಾನಕಾರರು ಈ ಅವತಾರವನ್ನು ಭಗವಂತನ ‘ನಾರದ ರೂಪದ ಅವತಾರ’ ಎಂದು ಹೇಳಿರುವುದನ್ನು ಕಾಣುತ್ತೇವೆ. ಆದರೆ ದೇವರ್ಷಿ ನಾರದ ಭಗವಂತನ ಅವತಾರವಲ್ಲ. ಇದು ನಾರದಾದಿ ಸಮಸ್ತ ದೇವತೆಗಳಿಗೂ ಋಷಿಯಾಗಿ ಉಪದೇಶ ಮಾಡಿದ ಭಗವಂತನ ‘ಐತರೇಯ” ನಾಮಕ ರೂಪ. ಯಾರಿಂದ ಐತರೇಯ ಉಪನಿಷತ್ತು, ಐತರೇಯ ಬ್ರಾಹ್ಮಣ ಮತ್ತು ಐತರೇಯ ಅರಣ್ಯಕ ಎನ್ನುವ ವೇದಭಾಗ ಆವಿಷ್ಕಾರವಾಯಿತೋ, ಅಂತಹ ಭಗವಂತನ ವಿಶಿಷ್ಠವಾದ ಮೂರನೇ ಅವತಾರವೇ ‘ಐತರೇಯ’ ರೂಪ. ಬ್ರಹ್ಮಪುರಾಣದಲ್ಲಿ ಹೇಳುವಂತೆ: ಭಗವಂತನ ಈ ಅವತಾರದ ಇನ್ನೊಂದು ಹೆಸರು ಮಹಿದಾಸ. ಈ ಹಿನ್ನೆಲೆಯಲ್ಲಿ ಪುರಾಣದಲ್ಲಿ ಒಂದು ರೋಚಕವಾದ ಕಥೆ ಇದೆ. ಅದನ್ನು ಭಾಗವತ ವಿವರಿಸುವುದಿಲ್ಲ. ಭಾಗವತದ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ನಾವು ಭಗವಂತನ ‘ಐತರೇಯ ಮಹಿದಾಸ’ ರೂಪದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿದು ಮುಂದುವರಿಯೋಣ.
ಐತರೇಯನ ತಂದೆಯ ಹೆಸರು ‘ವಿಶಾಲ’ ಎನ್ನುವ ಋಷಿ. ಈತನ ಇಬ್ಬರು ಹೆಂಡತಿಯರಲ್ಲಿ ಒಬ್ಬಳ ಹೆಸರು ‘ಇತರ’ ಹಾಗೂ ಆಕೆಯಲ್ಲಿ ಹುಟ್ಟಿದವನೇ ಐತರೇಯ. ಐತರೇಯ ಮಗುವಾಗಿದ್ದಾಗಿ ಬಹಳ ಅಳುತ್ತಿದ್ದನಂತೆ. ಅದೆಷ್ಟು ಅಳುತ್ತಿದ್ದನೆಂದರೆ ಒಂದು ದಿನ ಆತನ ಅಳುವನ್ನು ಕೇಳಿ ತಾಯಿಗೂ ಕೋಪ ಬಂದು, “ಬಾಯಿ ಮುಚ್ಚು” ಎಂದು ಗದರಿದಳಂತೆ. ಆಕೆ ಆ ರೀತಿ ಹೇಳಿದಾಗ ಮಗು ಬಾಯಿ ಮುಚ್ಚಿತು. ಆದರೆ ಅಂದಿನಿಂದ ಮಗು ಮತ್ತೆ ಬಾಯಿ ತೆರೆದು ಮಾತನಾಡಲಿಲ್ಲ. ಇದರಿಂದಾಗಿ ಎಲ್ಲರೂ ಮಗುವನ್ನು ‘ಮೂಗ’ ಎಂದೇ ತಿಳಿದರು. ಆತನ ಸಹೋದರರು ತಂದೆಯಿಂದ ವಿದ್ಯಾಭ್ಯಾಸ ಕಲಿತು ಖ್ಯಾತ ಋಷಿಗಳಾದರು. ಆದರೆ ಐತರೇಯ ಮೂಗನಂತೆ ಇದ್ದುಬಿಟ್ಟ. ಒಂದು ದಿನ ಐತರೇಯನ ತಂದೆ ತನ್ನ ಇತರ ಮಕ್ಕಳೊಂದಿಗೆ ಯಾವುದೋ ಒಂದು ಯಜ್ಞ ಕಾರ್ಯಕ್ಕಾಗಿ ತೆರಳಿದ್ದ. ಆದರೆ ಆತ ಐತರೇಯ ಮೂಗನೆಂದು ತಿಳಿದಿದ್ದರಿಂದ, ಅವನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಆಗ ಹೆತ್ತ ಕರುಳಿಗೆ ಬೇಸರವಾಗುತ್ತದೆ. ಆಕೆ ಕಣ್ಣೀರು ತೆಗೆದು ಹೇಳುತ್ತಾಳೆ: “ನಿನಗೆ ಮಾತು ಬರುತ್ತಿದ್ದರೆ ತಂದೆ ಜೊತೆಯಲ್ಲಿ ಹೋಗಿ ಯಜ್ಞದಲ್ಲಿ ಪಾಲ್ಗೊಂಡು ವೇದಮಂತ್ರ ಹೇಳಬಹುದಿತ್ತು. ಆದರೆ ನನ್ನ ದೌರ್ಭಾಗ್ಯದಿಂದ ನಿನಗೆ ಮಾತೇ ಬರುತ್ತಿಲ್ಲ” ಎಂದು.  ಆಗ ಬಾಲಕ ಐತರೇಯ ಮಾತನಾಡುತ್ತಾನೆ ಮತ್ತು ಹೇಳುತ್ತಾನೆ: “ಅಮ್ಮಾ, ನೀನು ಬಾಯಿ ಮುಚ್ಚು ಎಂದಿದ್ದಕ್ಕೆ ನಾನು ಮಾತನಾಡುತ್ತಿಲ್ಲ. ನೀನು ಅನುಮತಿ ಕೊಟ್ಟರೆ ನಾನು ವೇದಮಂತ್ರ ಹೇಳಬಲ್ಲೆ” ಎಂದು. ಆಗ ತಾಯಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಆಕೆ ಅನುಮತಿ ಕೊಟ್ಟು ಆತನನ್ನು ತಂದೆ ಇದ್ದಲ್ಲಿಗೆ ಕಳುಹಿಸಿಕೊಡುತ್ತಾಳೆ.
 ಇದ್ದಕ್ಕಿದ್ದಂತೆ ಯಾಗಶಾಲೆಗೆ ಬಂದ ಐತರೇಯನನ್ನು ಕಂಡು ತಂದೆಗೆ ಕೋಪ ಬರುತ್ತದೆ. ಮೂಗನಾದ ತನ್ನ ಮಗನಿಂದಾಗಿ ಎಲ್ಲರ ಮುಂದೆ ತನ್ನ ಮುಖಭಂಗವಾಗುತ್ತದೆ ಎನ್ನುವ ಭಯ ಆತನಿಗೆ. ನೇರವಾಗಿ ಬಂದ ಐತರೇಯ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬಯಸುತ್ತಾನೆ. ಆಗ ತಂದೆ ಕೋಪದಿಂದ ಆತನನ್ನು ದೂರ ತಳ್ಳುತ್ತಾನೆ. ಇದನ್ನು ಕಂಡ ಭೂಮಾತೆಗೆ ತಡೆಯಲಾಗುವುದಿಲ್ಲ. ಆಕೆ ತಕ್ಷಣ ಐತರೇಯನಿಗೆ ಆಸನವನ್ನು ಕೊಡುತ್ತಾಳೆ. ಐತರೇಯ ಹೀಗೆ ಭೂಮಿಯಿಂದ ಎದ್ದು ಬಂದ ಆಸನದ ಮೇಲೆ ಕುಳಿತು, ನಿರರ್ಗಳವಾಗಿ, ಯಾರೂ ಎಂದೂ ಕೇಳರಿಯದ ವೇದಮಂತ್ರವನ್ನು ಉಚ್ಛರಿಸುತ್ತಾನೆ. ಐತರೇಯನ ಈ ಪ್ರವಚನವನ್ನು  ಬ್ರಹ್ಮಾದಿ-ದೇವತೆಗಳು, ಸ್ವಯಂ ಶ್ರೀಲಕ್ಷ್ಮಿ ಕುಳಿತು ಕೇಳಿಸಿಕೊಳ್ಳುತ್ತಾರೆ. ಇದೇ ಐತರೇಯ ಋಷಿ ರೂಪದಲ್ಲಿ ಭಗವಂತನಿಂದ ಭೂಮಿಗಿಳಿದು ಬಂದ ೪೦ ಅಧ್ಯಾಯಗಳ ಐತರೇಯ ಬ್ರಾಹ್ಮಣ, ೧೪ ಅಧ್ಯಾಯಗಳ ಐತರೇಯ ಅರಣ್ಯಕ ಮತ್ತು ೯ ಅಧ್ಯಾಯಗಳ ಐತರೇಯ ಉಪನಿಷತ್ತು. ಮಹಿದತ್ತವಾದ ಆಸನದಲ್ಲಿ ಕುಳಿತವನಾದ್ದರಿಂದ ಐತರೇಯನಿಗೆ ಮಹಿದಾಸ ಎನ್ನುವ ಹೆಸರು ಬಂತು. ಅಷ್ಟೇ ಅಲ್ಲದೇ, ಮಹಾತ್ಮರಾದ ಬ್ರಹ್ಮಾದಿ ದೇವತೆಗಳು ಆತನ ಪ್ರವಚನ ಕೇಳಿರುವುದರಿಂದ ಆತ ಮಹಿದಾಸನಾದ; ಐತರೇಯನ ಪಾಂಡಿತ್ಯವನ್ನು ಕಂಡು ಆತನ ಮಲತಾಯಿಗೂ ಕಣ್ತೆರೆಯಿತು. ಮಹಿಳೆಯ ಮದ ನಿರಸನ ಮಾಡಿರುವುದರಿಂದಲೂ ಐತರೇಯ ಮಹಿದಾಸನಾದ.
ಹೀಗೆ ಒಂದು ವೇದದ ಆವಿಷ್ಕಾರಕ್ಕೋಸ್ಕರ ಋಷಿಯಾಗಿ, ಮಹಿದಾಸನಾಗಿ ಭಗವಂತ ಅವತರಿಸಿದ ಎನ್ನುವ ಕಥೆಯನ್ನು ಪುರಾಣ ಹೇಳುತ್ತದೆ. ಇಂದು ಲಭ್ಯವಿರುವ  ಋಕ್ ಸಂಹಿತೆಯ ಹತ್ತು ಮಂಡಲಗಳಿಗೆ ಐತರೇಯ ಸಂಹಿತ ಎಂದೇ ಹೆಸರು. ಇಂತಹ ಅಖಂಡವಾದ ಬ್ರಾಹ್ಮಣಾರಣ್ಯಕ-ಉಪನಿಷತ್ತುಗಳ ಆವಿಷ್ಕಾರವಾಗಿರುವ ಭಗವಂತನ ಸ್ವಾಯಂಭುವ ಮನ್ವಂತರದ ಅಪೂರ್ವ ರೂಪವೇ ಭಗವಂತನ ಮೂರನೇ ಅವತಾರ.
[ಓದುಗರಿಗೆ ಸೂಚನೆ: ಐತರೇಯ ಮಹಿದಾಸ ಎನ್ನುವ ಒಬ್ಬ ಋಷಿ ಕೂಡಾ ಇದ್ದಾನೆ. ಈತನ ತಾಯಿಯ ಹೆಸರು ಕೂಡಾ ‘ಇತರ’. ಈ ಋಷಿಗೂ ಭಗವಂತನ ಐತರೇಯ ಅವತಾರಕ್ಕೂ ಯಾವುದೇ ಸಂಬಂಧವಿಲ್ಲ]

ತುರ್ಯೇ ಧರ್ಮಕಲಾಸರ್ಗೇ ನರನಾರಾಯಣಾವೃಷೀ
ಭೂತ್ವಾSSತ್ಮೋಪಶಮೋಪೇತಮಕರೋದ್ದುಶ್ಚರಂ ತಪಃ         

ಭಗವಂತನ ನಾಲ್ಕನೇ ಅವತಾರ ನರ-ನಾರಾಯಣಾವತಾರ. ನರ ಮತ್ತು ನಾರಾಯಣ ಅನ್ನುವುದು ಎರಡು ಅವತಾರವಲ್ಲ. ನರನಲ್ಲಿ ಭಗವಂತನ ವಿಶೇಷ ಆವೇಶ ಹಾಗೂ ನಾರಾಯಣ ಭಗವಂತನ ಅವತಾರ. ಸ್ವಾಯಂಭುವ ಮನುವಿಗೆ ದೇವಹೂತಿ, ಆಕೂತಿ ಮತ್ತು ಪ್ರಸೂತಿ ಎನ್ನುವ ಮೂರು ಮಂದಿ ಹೆಣ್ಣುಮಕ್ಕಳಿದ್ದರು. ಈ ಮೂವರಲ್ಲಿ ಪ್ರಸೂತಿಯನ್ನು ದಕ್ಷಪ್ರಜಾಪತಿ ಮದುವೆಯಾದ. ಇವರಿಬ್ಬರ ದಾಂಪತ್ಯದಲ್ಲಿ ಹುಟ್ಟದ ಮಕ್ಕಳಲ್ಲಿ ಕೊನೇಯ ಮಗಳ ಹೆಸರು ಮೂರ್ತಿ. ಈಕೆಯನ್ನು ಧರ್ಮದೇವತೆ ಮದುವೆಯಾದ. ಧರ್ಮ ಮತ್ತು ಮೂರ್ತಿಯ ದಾಂಪತ್ಯದಲ್ಲಿ ಹುಟ್ಟಿದ ಮಕ್ಕಳೇ –ಹರಿ, ಕೃಷ್ಣ, ನರ ಮತ್ತು ನಾರಾಯಣ. ಭಾಗವತ ಈ ನಾಲ್ಕು ಮಕ್ಕಳಲ್ಲಿ ಹರಿ ಮತ್ತು ಕೃಷ್ಣನ ಕುರಿತು ವಿವರಣೆ ನೀಡುವುದಿಲ್ಲ.
ನರ-ನಾರಾಯಣರು ತಮ್ಮ ಮನೋನಿಗ್ರಹದಿಂದ ಕೂಡಿದ ದುಶ್ಚರವಾದ ತಪಸ್ಸು ಮಾಡಿದರು ಎನ್ನುತ್ತದೆ ಈ ಶ್ಲೋಕ. ಇಲ್ಲಿ ನಮಗೊಂದು ಪ್ರಶ್ನೆ ಮೂಡುತ್ತದೆ: ದೇವರು ಕೂಡಾ ಮನೋನಿಗ್ರಹ ಮಾಡಿ ತಪಸ್ಸು ಮಾಡುವುದು ಎಂದರೇನು? ಇದಕ್ಕೆ ಉತ್ತರಿಸುತ್ತಾ ಆಚಾರ್ಯರು ಹೇಳುತ್ತಾರೆ: “ಲೋಕದೃಷ್ಟ್ಯಾ ಆತ್ಮಶಮೋಪೇತಂ” ಎಂದು.  ಅಂದರೆ ಆತ್ಮಶಮವನ್ನಿಟ್ಟುಕೊಂಡು, ಮನಸ್ಸನ್ನು ನಿಗ್ರಹ ಮಾಡಿ ತಪಸ್ಸು ಮಾಡುವುದು ಹೇಗೆ ಎಂದು ಪ್ರಪಂಚಕ್ಕೆ ತೋರಿದ ಭಗವಂತನ ವಿಶಿಷ್ಠ ಅವತಾರವಿದು. ಹಿಮಾಲಯದಲ್ಲಿರುವ ಬದರಿಕಾಶ್ರಮದಲ್ಲಿ ಇಂದಿಗೂ ನರ ಪರ್ವತ ಮತ್ತು ನಾರಾಯಣ ಪರ್ವತ ಎನ್ನುವ ಎರಡು ಪರ್ವತಗಳಿವೆ. ಸ್ವಾಯಂಭುವ ಮನ್ವಂತರದಲ್ಲಿ ಆದ ಈ ಅವತಾರವನ್ನು ಭಗವಂತ ಇನ್ನೂ ಉಪಸಂಹಾರ ಮಾಡಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇಂದಿಗೂ ಭಗವಂತ ಆ ರೂಪದಲ್ಲಿದ್ದಾನೆ ಎನ್ನುತ್ತಾರೆ ಜ್ಞಾನಿಗಳು.     

ಪಂಚಮಃ ಕಪಿಲೋ ನಾಮ ಸಿದ್ಧೇಶಃ ಕಾಲವಿಪ್ಲುತಮ್  
ಪ್ರೋವಾಚಾಸುರಯೇ ಸಾಂಖ್ಯಂ ತತ್ತ್ವಗ್ರಾಮವಿನಿರ್ಣಯಮ್     ೧೦

ಸ್ವಾಯಂಭುವ ಮನ್ವಂತರದಲ್ಲಿ ಆದ ಭಗವಂತನ ಪಂಚಮ ಅವತಾರ ಕಪಿಲ ವಾಸುದೇವ ಅವತಾರ. ಸ್ವಾಯಂಭುವ ಮನುವಿನ ಮಗಳು ದೇವಹೂತಿ ಮತ್ತು ಕರ್ದಮಪ್ರಜಾಪತಿಯ ದಾಂಪತ್ಯದಲ್ಲಿ ಕಪಿಲಮುನಿಯ ರೂಪದಲ್ಲಿ ಭಗವಂತನ ಅವತಾರವಾಯಿತು. ಕಪಿಲ ವಾಸುದೇವ ರೂಪದಲ್ಲಿ ಭಗವಂತ ‘ಆಸುರಿ’ ಎನ್ನುವ ತನ್ನ ಶಿಷ್ಯನ ಮುಖೇನ ವೈದಿಕ ಸಾಂಖ್ಯವನ್ನು ಪ್ರಪಂಚಕ್ಕೆ ನೀಡಿದ. ಭಗವಂತನ ಈ ಅವತಾರವನ್ನು ಕಪಿಲ ವಾಸುದೇವ ಎಂದು ಕರೆಯಲು ಒಂದು ವಿಶೇಷ ಕಾರಣವಿದೆ. ಸಾಂಖ್ಯವನ್ನು ಉಪದೇಶಿಸಿದ ಕಪಿಲ ಎನ್ನುವ ಒಬ್ಬ ಋಷಿ ಕೂಡಾ ಇದ್ದಾನೆ. ಆತನ ಶಿಷ್ಯನ ಹೆಸರು ಕೂಡಾ ಆಸುರಿ. ಆದರೆ ಆತ ಉಪದೇಶಿಸಿದ ಸಾಂಖ್ಯ ಪೂರ್ಣ ಅವೈದಿಕವಾದ ನಿರೀಶ್ವರ ಸಾಂಖ್ಯ.
ಕಾಲಕ್ರಮದಲ್ಲಿ ನಷ್ಟವಾಗಿ ಹೋಗಿರುವ ವೈದಿಕ ಸಾಂಖ್ಯವನ್ನು ಭಗವಂತ ಕಪಿಲ ವಾಸುದೇವನಾಗಿ ಆಸುರಿ ಎನ್ನುವ ಋಷಿಗೆ ಉಪದೇಶಿಸಿದ. [ಮೂಲತಃ ಭಗವಂತ ಸಾಂಖ್ಯಶಾಸ್ತ್ರವನ್ನು ಮೊದಲು ಉಪದೇಶಿಸಿರುವುದು ತನ್ನ ತಾಯಿ ದೇವಹೂತಿಗೆ. ಆನಂತರ ಅದನ್ನು ಆಸುರಿ ಎನ್ನುವ ಶಿಷ್ಯನಿಗೆ ಉಪದೇಶಿಸಿದ]. ಇದು ಕೇವಲ ವಿಶ್ವವನ್ನು ಅಂಕೆಯಲ್ಲಿ ನಿರೂಪಿಸುವ ಶಾಸ್ತ್ರವಷ್ಟೇ ಅಲ್ಲ, ಇಡೀ ಅಧ್ಯಾತ್ಮವನ್ನು ಸಂಖ್ಯೆಯ ಮೂಲಕ ಹೇಳುವ, ಯಥಾರ್ಥ ತಿಳುವಳಿಕೆ ಕೊಡುವ  ಅಪೂರ್ವಶಾಸ್ತ್ರ ಕೂಡಾ ಹೌದು.  

ಷಷ್ಠಮತ್ರೇರಪತ್ಯತ್ವಂ ವೃತಃ ಪ್ರಾಪ್ತೋSನಸೂಯಯಾ                       
ಆನ್ವೀಕ್ಷಿಕೀಮಳರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್                ೧೧

ಕಪಿಲ ವಾಸುದೇವನ ಸಹೋದರಿ ಅನುಸೂಯೆ. ಈಕೆಯ ಪತಿ ಅತ್ರಿ. ಅತ್ರಿ-ಅನುಸೂಯೆಯರು ತಮಗೆ  ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಭಗವಂತ ಮಗನಾಗಿ ಹುಟ್ಟಬೇಕೆಂದು ತಪಸ್ಸು ಮಾಡುತ್ತಾರೆ. ಈ ತಪಸ್ಸಿನ ಫಲವಾಗಿ ಅವರಿಗೆ ಮೂರು ಮಂದಿ ಮಕ್ಕಳಾಗುತ್ತಾರೆ. ಸ್ವಯಂ ಸ್ಥಿತಿಗೆ ಕಾರಣನಾದ ಭಗವಂತ ‘ದತ್ತ’ ನಾಮಕನಾಗಿ ಅವರಲ್ಲಿ ಅವತರಿಸಿದ. ಅತ್ರಿಯ ಮಗನಾದ(ಅತ್ರೇಯ) ದತ್ತ, (ದತ್ತ+ಅತ್ರೇಯ) ದತ್ತಾತ್ರಯನಾದ. ಸಂಹಾರ ದೇವತೆ ಶಿವ ‘ದುರ್ವಾಸನಾಗಿ’ ಜನಿಸಿದ. ಬ್ರಹ್ಮನಿಗೆ ಭೂಮಿಯಲ್ಲಿ ಜನ್ಮವಿಲ್ಲದ್ದರಿಂದ, ಚತುರ್ಮುಖನಿಂದ ಆವಿಷ್ಠನಾದ ‘ಚಂದ್ರ’ ಅನುಸೂಯೆ-ಅತ್ರಿಯರ ಮಗನಾಗಿ ಹುಟ್ಟಿದ. [ಓದುಗರಿಗೆ ಸೂಚನೆ: ಸಾಮಾನ್ಯವಾಗಿ ದತ್ತಾತ್ರಯ ಎಂದಾಗ ಮೂರು ತಲೆ ಏಕ ಶರೀರ ಮತ್ತು ತಲೆಯಲ್ಲಿ ಚಂದ್ರನಿರುವ ಚಿತ್ರವನ್ನು ಚಿತ್ರಕಾರರು ಚಿತ್ರಿಸುತ್ತಾರೆ. ಆದರೆ ಶಾಸ್ತ್ರದಲ್ಲಿ ಎಲ್ಲೂ ಈ ರೀತಿ ರೂಪದ ವಿವರಣೆ ಇಲ್ಲ. ದತ್ತ, ದುರ್ವಾಸ ಮತ್ತು ಚಂದ್ರ ಈ ಮೂವರು, ಮೂರು ಶರೀರದಲ್ಲಿ ಅವತರಿಸಿ ಬಂದ ರೂಪಗಳು. ಇಲ್ಲಿ ಚಂದ್ರ ಎಂದರೆ ಚಂದ್ರ ಗ್ರಹವಲ್ಲ.] ದತ್ತಾತ್ರಯ ರೂಪದಲ್ಲಿ ಭಗವಂತ ತತ್ತ್ವವಿದ್ಯೆ ಎನ್ನುವ ಆನ್ವೀಕ್ಷಿಕಿಯನ್ನು ಅಲರ್ಕರಾಜ, ಪ್ರಹ್ಲಾದ ಮುಂತಾದವರಿಗೆ ಉಪದೇಶಿಸಿದ. ಇದು ಭಗವಂತನ ಆರನೇ ಅವತಾರ. 

No comments:

Post a Comment