ಇದಂ ಹಿ ವಿಶ್ವಂ
ಭಗವಾನಿವೇತರೋ ಯತೋ ಜಗತ್ ಸ್ಥಾನನಿರೋಧಸಂಭವಃ ।
ತದ್ಧಿ ಸ್ವಯಂ ವೇದ
ಭವಾಂಸ್ತಥಾಪಿ ಪ್ರಾದೇಶಮಾತ್ರಂ ಭವತಃ ಪ್ರದರ್ಶಿತಮ್ ॥೨೦॥
ಈ ಜಗತ್ತು
ಅಂದರೇನು? ಜಗತ್ತೇ ಭಗವಂತ-ಭಗವಂತನೇ ಜಗತ್ತೇ?
“ಸರ್ವಂ ಖಲ್ವಿದಂ ಬ್ರಹ್ಮಾ” ಎಂದು
ವೇದದಲ್ಲಿ ಹೇಳಿದ ಮಾತಿನ ಅರ್ಥವೇನು? ದರ್ಶನ ಭಾಷೆಯಲ್ಲಿರುವ ಈ ಶ್ಲೋಕ ಈ ಎಲ್ಲಾ ಪ್ರಶ್ನೆಗಳಿಗೆ
ಉತ್ತರರೂಪದಲ್ಲಿದೆ. ಮೇಲ್ನೋಟಕ್ಕೆ ‘ಭಗವಂತನೇ ವಿಶ್ವ’ ಎಂದು ಶಾಸ್ತ್ರಗಳು ಹೇಳಿದಂತೆ
ಕಾಣುತ್ತದೆ. ಆದರೆ ಭಗವಂತನೇ ವಿಶ್ವವಲ್ಲ. ಅವನು ‘ಇತರಃ’ ಎನ್ನುತ್ತಾರೆ ನಾರದರು. ವೇದಗಳಲ್ಲಿ ‘ಭಗವಂತನೇ
ಜಗತ್ತು’ ಎಂದು ಹೇಳಿದ್ದಾರೆ. ಭಗವಂತನನ್ನು ಬಿಟ್ಟು ಈ ಜಗತ್ತಿಗೆ ಸ್ವತಂತ್ರ ಅಸ್ತಿತ್ವವಿಲ್ಲ
ಎನ್ನುವುದು ಆ ಮಾತಿನ ಅರ್ಥ. ಭಗವಂತನಿಂದ ಈ ವಿಶ್ವ ಸೃಷ್ಟಿಯಾಗಿರುವುದರಿಂದ, ಕಾರ್ಯ-ಕಾರಣ
ಭಾವದಿಂದ ‘ವಿಶ್ವವೇ ಭಗವಂತ’ ಎನ್ನುತ್ತಾರೆ. ಇದೇ ಮಾತು ಗೀತೆಯಲ್ಲಿ ಬರುತ್ತದೆ. ಅಲ್ಲಿ ಕೃಷ್ಣ
ಹೇಳುತ್ತಾನೆ: “ನ ತದಸ್ತಿ
ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್” ಎಂದು. ॥೧೦-೩೯॥
ಅಂದರೆ: ನನ್ನನ್ನು ಬಿಟ್ಟು ಈ ಚರಾಚಾರಾತ್ಮಕ ಪ್ರಪಂಚಕ್ಕೆ ಅಸ್ತಿತ್ವವಿಲ್ಲ ಎಂದರ್ಥ. ಭಾಷೆಯನ್ನು
ಈ ರೀತಿಯಾಗಿ ಬಳಸುವುದು ಸರ್ವೇಸಾಮಾನ್ಯ. ಉದಾಹರಣೆಗೆ ನಾವು ಕೆಲವೊಮ್ಮೆ “ನೀವೇ ಎಲ್ಲಾ” ಎಂದು
ಹೇಳುತ್ತೇವೆ. ಇದರರ್ಥ “ಎಲ್ಲಾ ಜಡ-ಚೇತನ
ವಸ್ತುಗಳು ನೀವೇ” ಎಂದಲ್ಲ. ಬದಲಿಗೆ,
“ನಿಮ್ಮನ್ನು ಬಿಟ್ಟರೆ ಅದಕ್ಕೆ ಅಸ್ತಿತ್ವವಿಲ್ಲ” ಎಂದರ್ಥ. ಹೀಗಾಗಿ ಎಲ್ಲವೂ
ಭಗವಂತನಲ್ಲ, ಭಗವಂತ ಬೇರೆಯೇ ಇದ್ದಾನೆ. ಎಲ್ಲವೂ ಭಗವಂತನ ಅಧೀನವಾಗಿದೆ ಮತ್ತು ಆತನಿಂದಲೇ ಈ
ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ನಿರಂತರ ನಡೆಯುತ್ತಿರುತ್ತದೆ.
ಇಲ್ಲಿ ನಾರದರು
ವ್ಯಾಸರಲ್ಲಿ ಹೇಳುತ್ತಾರೆ: “ಭಗವಂತನ ಅವತಾರರೂಪಿಯಾದ ನಿಮಗೆ ಎಲ್ಲವೂ ತಿಳಿದಿದೆ. ನಿಮಗೆ
ತಿಳಿದಿರುವುದು ಅನಂತ ಆಕಾಶವಾದರೆ, ನಾನು ಇಲ್ಲಿ ಹೇಳಿರುವುದು ಒಂದು ಅಂಗುಲದಷ್ಟು. ನಿಮ್ಮ
ಶಿಷ್ಯನಾದ ನನ್ನಲ್ಲಿ ಕೇಳಬೇಕೆಂದು ನೀವು ಅಪೇಕ್ಷೆಪಟ್ಟಿರುವುದರಿಂದ, ನಾನು ಈ ವಿವರಣೆ ಕೊಟ್ಟೆ”
ಎಂದು. ಇಷ್ಟು ಹೇಳಿ ನಾರದರು ಭಗವಂತನ ಗುಣಗಳ
ಮಹಿಮೆಯನ್ನು ನಿರೂಪಣೆ ಮಾಡತಕ್ಕಂತಹ ಅವಶ್ಯಕತೆ ಏನು ಎನ್ನುವುದಕ್ಕೆ, ತನ್ನದೇ ಕಥೆಯನ್ನು ದೃಷ್ಟಾಂತವಾಗಿ
ಹೇಳುತ್ತಾರೆ. “ಭಗವಂತನ ಮಹಿಮೆಯನ್ನು ಕೇಳಿರುವುದರಿಂದಲೇ ಈ ಕಲ್ಪದಲ್ಲಿ ನಾನು ನಾರದ ಪದವಿಗೆ ಬಂದೆ”
ಎಂದು ತಮ್ಮ ಕಥೆಯನ್ನು ಪ್ರಾರಂಭಿಸುತ್ತಾರೆ ನಾರದರು.
ನಾರದರ ಪೂರ್ವ ಕಥೆ
ನಾರದರು ಹೇಳುತ್ತಾರೆ:
ಹಿಂದಿನ ಬ್ರಹ್ಮಕಲ್ಪದಲ್ಲಿ ನಾನು ಒಬ್ಬಳು ದಾಸಿಯ
ಮಗನಾಗಿದ್ದೆ. ನನ್ನ ತಾಯಿ ಹಸು ಸಾಕಿಕೊಂಡು, ಇನ್ನೊಬ್ಬರ ಮನೆಯ ಕೆಲಸ ಮಾಡಿಕೊಂಡು ಜೀವನ
ನಿರ್ವಹಣೆ ಮಾಡುತ್ತಿದ್ದಳು. ಆಗ ನನಗೆ ಐದು ವರ್ಷ ವಯಸ್ಸು. ಹೊಟ್ಟೆಯ ಹಿಟ್ಟಿಗಾಗಿ ಪರದಾಡುವ ಬಡತನ
ನಮ್ಮದು. ಹೀಗಿರುವಾಗ ನಮ್ಮ ಊರಿಗೆ ಚಾತುರ್ಮಾಸ್ಯ ಆಚರಣೆಗಾಗಿ ಋಷಿಗಳ ಸಮುದಾಯವೊಂದು ಬಂದು ಬೀಡುಬಿಟ್ಟಿತು.
ಅವರು ನನ್ನ ತಾಯಿಯನ್ನು ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿಸಿಕೊಂಡರು. ಅಲ್ಲಿ ನಾನು ಋಷಿಗಳು
ಊಟಮಾಡಿದ ಎಲೆಯನ್ನು ಎತ್ತುವ ಕೆಲಸ ಮಾಡುತ್ತಿದ್ದೆ. ಅಡುಗೆ ಪಾತ್ರೆಯಲ್ಲಿ ಉಳಿದ ಆಹಾರ ಸೇವಿಸುತ್ತಾ,
ಬಹಳ ಸಂತೋಷದಿಂದ ಋಷಿಗಳ ಚಾಕರಿ ಮಾಡಿಕೊಂಡಿದ್ದೆ. ಇದರಿಂದ ನನಗೆ ಆ ಋಷಿಗಳಲ್ಲಿ ಆತ್ಮೀಯತೆ ಬೆಳೆಯಿತು.
ಅವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿದ್ದರು. ನನ್ನನ್ನು ಕರೆದು ಕುಳ್ಳಿರಿಸಿಕೊಂಡು ಭಗವಂತನ ಮಹಿಮೆಯನ್ನು
ಹೇಳುತ್ತಿದ್ದರು. ಇದರಿಂದಾಗಿ ನನಗೆ ಭಗವಂತನಲ್ಲಿ ಆಸಕ್ತಿ ಹುಟ್ಟಿತು.
[ನಾರದರ ಈ ಕಥಾಭಾಗವನ್ನು
ಕೇಳಿದಾಗ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ: ನಾವೆಂದೂ ನಮ್ಮ ಗುರುವನ್ನು ಹುಡುಕಿಕೊಂಡು
ಹೋಗಬೇಕಾಗಿಲ್ಲ. ನಾವು ನಮ್ಮ ಹೃದಯದ ಬಾಗಿಲನ್ನು ತೆರೆದು ನಿರೀಕ್ಷಿಸುತ್ತಿರಬೇಕು ಅಷ್ಟೇ. ಜ್ಞಾನಿಗಳು ಸಿಕ್ಕಿದ ತಕ್ಷಣ ನಮಗೆ ಮಾರ್ಗದರ್ಶನ ಸಿಗುತ್ತದೆ
ಎಂದು ಹೇಳಲು ಬರುವುದಿಲ್ಲ. ನಮ್ಮ ಜೀವಸ್ವರೂಪಕ್ಕನುಗುಣವಾಗಿ, ಸ್ವರೂಪೋದ್ಧಾರಕ ಗುರು ಮಾತ್ರ ನಮ್ಮ
ಮಾರ್ಗದರ್ಶನ ಮಾಡಬಲ್ಲ. ಕಾಲ ಪಕ್ವವಾದಾಗ ಅಂತಹ ಗುರುವನ್ನು ಭಗವಂತನೇ ನಮಗೆ ಪರಿಚಯಿಸುತ್ತಾನೆ].
ನಾರದರು ಮುಂದುವರಿದು
ಹೇಳುತ್ತಾರೆ: ಋಷಿಗಳು ಕೊಟ್ಟ ಈ ಎಲ್ಲಾ ಜ್ಞಾನದಿಂದ ನನಗೆ ಭಗವಂತನನ್ನು ಬಿಟ್ಟು ಇನ್ನೇನೂ ಬೇಡ ಅನಿಸಲಾರಂಭಿಸಿತು.
ಭಗವಂತನ ಸ್ಮರಣೆಯೊಂದೇ ಸರ್ವಸ್ವ ಎನ್ನುವ ಧೃಡ ನಂಬಿಕೆ ನನಗೆ ಬಂತು. ಕಣ್ಮುಚ್ಚಿ ಕುಳಿತರೆ ಇಡೀ ಜಗತ್ತು
ನನ್ನೊಳಗಿರುವ ಆ ಭಗವಂತನೊಳಗಿದೆ ಎನ್ನುವ ಅನುಭವ.
ನನ್ನೊಳಗೆ ಅಣುವಿಗಿಂತ ಅಣುವಾಗಿ ಆ ಭಗವಂತ, ಹಾಗೂ ಅವನೊಳಗೆ ಅನಂತ ಬ್ರಹ್ಮಾಂಡವಿರುವುದು ನನಗೆ ಕಲ್ಪಿತವಾಗುತ್ತಿತ್ತು.
[ಇಲ್ಲಿ ಬಳಕೆಯಾಗಿರುವ ‘ಕಲ್ಪಿತ’ ಎನ್ನುವ ಪದದ ಅರ್ಥ ‘ಭ್ರಾಂತಿ’ ಎಂದಲ್ಲ. ಸಂಸ್ಕೃತದ ‘ಕಲ್ಪಿತ’ ಎನ್ನುವ ಪದ ‘ಕ್ಲಪ’
ಎನ್ನುವ ಧಾತುವಿನಿಂದ ಬಂದಿದೆ. ಇದರರ್ಥ ಭಾವಿಸುವುದು; ಮನಸ್ಸಿನ ಅನುಸಂಧಾನ. “ನನ್ನ ಭಾವನೆಯಲ್ಲಿ
ಹಾಗೆ ಕಂಡಿತು” ಎನ್ನುವುದನ್ನು ಕಲ್ಪಿತಾಃ ಎನ್ನುವ ಪದದಿಂದ ವಿವರಿಸಲಾಗಿದೆ]
ಭಗವಂತನ ಉಪಾಸನೆಯಲ್ಲಿ
ಅತ್ಯಂತ ಶ್ರೇಷ್ಠ ಉಪಾಸನೆ ಚತುರ್ಮೂರ್ತಿ ಉಪಾಸನೆ. ಇದು ಬಹಳ ಪುರಾತನವಾದ ಉಪಾಸನೆ. ವಾಸುದೇವ, ಸಂಕರ್ಷಣ,
ಪ್ರದ್ಯುಮ್ನ ಮತ್ತು ಅನಿರುದ್ದ ರೂಪದಲ್ಲಿ ಭಗವಂತನ ಉಪಾಸನೆಯನ್ನು ಪಂಚರಾತ್ರದಲ್ಲಿ ಕೂಡಾ ಹೇಳಲಾಗಿದೆ.
ಭಗವಂತನ ಈ ನಾಲ್ಕು ರೂಪದಲ್ಲಿ ಎಲ್ಲವೂ ಅಡಗಿದೆ. ಸೃಷ್ಟಿ-ಸ್ಥಿತಿ-ಸಂಹಾರ ಕ್ರಿಯೆಯನ್ನು ಭಗವಂತ ಕ್ರಮವಾಗಿ
ಪ್ರದ್ಯುಮ್ನ-ಅನಿರುದ್ಧ-ಸಂಕರ್ಷಣ ರೂಪದಲ್ಲಿ ಮಾಡುತ್ತಾನೆ. ನಮಗೆ ತಿಳಿದಂತೆ ಸೃಷ್ಟಿ-ಸ್ಥಿತಿ-ಸಂಹಾರ
ಎನ್ನುವುದು ಸಂಸಾರ ಬಂಧನ. ಈ ಬಂಧನದಲ್ಲಿ
ಸಿಕ್ಕಿಹಾಕಿಕೊಂಡಿರುವ ‘ಜೀವ’ನನ್ನು ಬಿಡುಗಡೆ ಮಾಡಿ ಮೋಕ್ಷ ಕೊಡುವ ಭಗವಂತನ ವಿಶೇಷ ರೂಪ-ವಾಸುದೇವರೂಪ.
“ಇಂತಹ ಭಗವಂತನ ಚತುರ್ಮೂರ್ತಿ ಉಪಾಸನೆ ಮಾಡಿದರೆ, ಎಲ್ಲವೂ ಮರೆತುಹೋಗಿ ಕೇವಲ ಆನಂದ
ನಮ್ಮದಾಗುತ್ತದೆ” ಎಂದ ನಾರದರು, ಬಾಲ್ಯದಲ್ಲಿ ತಾನು ಪಡೆದ ಚತುರ್ಮೂರ್ತಿ ಉಪಾಸನೆಯ ಜ್ಞಾನೋಪದೇಶವನ್ನು
ವಿವರಿಸುತ್ತಾರೆ.
ಓಂ ನಮೋ ಭಗವತೇ
ತುಭ್ಯಂ ವಾಸುದೇವಾಯ ಧೀಮಹಿ ।
ಪ್ರದ್ಯುಮ್ನಾಯಾನಿರುದ್ಧಾಯ
ನಮಃ ಸಂಕರ್ಷಣಾಯ ಚ ॥೩೭॥
ಈ ಮಂತ್ರ ವಾಸುದೇವ ದ್ವಾದಶಾಕ್ಷರ
ಪ್ರತೀಕವಾಗಿದೆ. ಇಲ್ಲಿ ‘ತುಭ್ಯಂ’ ಮತ್ತು ‘ಧೀಮಹಿ’
ಎನ್ನುವ ಎರಡು ಪದಗಳನ್ನು ಸೇರಿಸಲಾಗಿದೆ. ಭಗವಂತನ ವಾಸುದೇವ ರೂಪ-ಮೋಕ್ಷಪ್ರದರೂಪ. ನಮ್ಮೊಳಗೆ ಸದಾ
ಇದ್ದರೂ ಕೂಡಾ, ಮೋಕ್ಷಪ್ರಾಪ್ತಿಯಾಗುವ ತನಕ ಗೋಚರವಾಗದ ರೂಪವಿದು. ತನ್ನನ್ನು ತಾನು ಮುಚ್ಚಿಕೊಂಡು(ವಾಸುವಾಗಿ),
ಕೊನೆಗೆ ಮೋಕ್ಷದಲ್ಲಿ ಬೆಳಕಾಗಿ(ದೇವಯತಿ) ಕಾಣಿಸಿಕೊಳ್ಳುವ ಭಗವಂತ ವಾಸುದೇವ. ‘ವಸುದೇವ’ ಎಂದರೆ ಶುದ್ಧವಾದ ಮನಸ್ಸು. [ಇದನ್ನು ಮುಂದೆ ಭಾಗವತದಲ್ಲೇ
ಹೇಳುತ್ತಾರೆ. ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ(೦೧-೦೩-೨೩)]. ಬಾಳಿಗೆ ಬೆಳಕು ನೀಡುವ ಅತಿದೊಡ್ಡ ಸಂಪತ್ತು ಈ ‘ಶುದ್ಧವಾದ
ಮನಸ್ಸು’. ಇಂತಹ ಶುದ್ಧವಾದ ಮನಸ್ಸಿಗೆ ಗೋಚರನಾಗುವ ಭಗವಂತ ‘ವಾಸುದೇವ’.
‘ದ್ಯುಮ್ನ’ ಎಂದರೆ ಸಂಪತ್ತು. ಈ ವಿಶ್ವ ಎನ್ನುವುದು ದೇವತೆಗಳಿಗೆ
ಸುವರ್ಣ ಕೊಪ್ಪರಿಗೆಯಂತೆ. ಇಂತಹ ಸಮೃದ್ಧವಾದ ಈ ವಿಶ್ವವನ್ನು ನಿರ್ಮಿಸಿದ ಭಗವಂತ ಪ್ರದ್ಯುಮ್ನ.
ಸೃಷ್ಟಿ ನಿರ್ಮಾಣದ ನಂತರ ಯಾವ ನಿರೋಧವೂ ಇಲ್ಲದೆ, ಪ್ರತಿಯೊಂದು ವಸ್ತುವಿನೊಳಗೂ ಪ್ರವೇಶಿಸಿ,
ರಕ್ಷಣೆ ಮಾಡುವ ಭಗವಂತ ಅನಿರುದ್ಧ. ಕೊನೆಗೆ ಎಲ್ಲವನ್ನೂ ಕರ್ಷಣೆಮಾಡಿ, ಸಂಹಾರ ಮಾಡುವವನು ಸಂಕರ್ಷಣ.
“ಹೀಗೆ ‘ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾಗಿರುವ, ಮೋಕ್ಷಪ್ರದ ಭಗವಂತ-ವಾಸುದೇವನನ್ನು ಧ್ಯಾನ
ಮಾಡು’ ಎಂದು ಋಷಿಗಳು ನನಗೆ ಉಪದೇಶಿಸಿದರು. ನಾನು ಋಷಿಗಳು ಹೇಳಿದ ಮಾತನ್ನು ಚಾಚೂತಪ್ಪದೆ ಪಾಲಿಸಿದೆ.
ಮೈಮರೆತು ಧ್ಯಾನ ಮಾಡಿದೆ. ಹಾಗಾಗಿ ಅಂದು ಋಷಿಗಳು ಮೂಡಿಸಿದ ಜಾಗೃತಿಯಿಂದ, ಇಂದು ಬ್ರಹ್ಮದೇವರ ಮಾನಸಪುತ್ರನಾಗಿ
ಹುಟ್ಟಿ ನಾರದ ಪದವಿಯನ್ನು ಪಡೆಯುವ ಭಾಗ್ಯ ನನಗೆ ದೊರೆಯಿತು” ಎನ್ನುತ್ತಾರೆ ನಾರದರು.
ತ್ವಮಪ್ಯದಭ್ರಶ್ರುತ
ವಿಶ್ರುತಂ ವಿಭೋಃ ಸಮಾಪ್ಯತೇ ಯೇನ ವಿದಾಂ ಬುಭುತ್ಸಿತಮ್ ।
ಪ್ರಾಖ್ಯಾಹಿ ದುಃಖೈರ್ಮುಹುರರ್ದಿತಾತ್ಮನಾಂ
ಸಂಕ್ಲೇಶನಿರ್ವಾಣಮುಶಂತಿ ನಾನ್ಯಥಾ ॥೪೦॥
“ನೀವು ನಿತ್ಯತೃಪ್ತರು.
ನಿಮಗಾಗಿ ನೀವು ಏನೂ ಮಾಡಬೇಕಾಗಿಲ್ಲ. ಆದರೆ ದುಃಖದಿಂದ ಪಾರಾಗುವ ಬಗೆಯನ್ನು ಅರಿಯದ ಜನರಿಗಾಗಿ,
ಅವರಿಗೆ ಮಾರ್ಗದರ್ಶನ ರೂಪವಾಗಿ, ಮಹಾತ್ಮರೂ ಹಾಡಿ
ಹೊಗಳುವಂತಹ, ಜ್ಞಾನಿಗಳ ಜ್ಞಾನದಾಹವನ್ನು ತಣಿಸುವಂತಹ ಒಂದು ಗ್ರಂಥ ರಚನೆ ತಮ್ಮಿಂದಾಗಬೇಕು” ಎಂದು,
ನಾರದರು ವೇದವ್ಯಾಸರಲ್ಲಿ ಹೇಳಿದರು-ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ಪಂಚಮೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಐದನೇ ಅಧ್ಯಾಯ ಮುಗಿಯಿತು.
*********
No comments:
Post a Comment