ಅಶ್ವತ್ಥಾಮ ನಿಗ್ರಹ
ಅಥೋಪಸ್ಪೃಶ್ಯ ಸಲಿಲಂ
ಸಂದಧೇ ತತ್ ಸಮಾಹಿತಃ ।
ಅಜಾನನ್ನಪಿ ಸಂಹಾರಂ
ಪ್ರಾಣಕೃಚ್ಛ್ರ ಉಪಸ್ಥಿತೇ ॥೨೦॥
ತತಃ ಪ್ರಾದುಷ್ಕೃತಂ
ತೇಜಃ ಪ್ರಚಂಡಂ ಸರ್ವತೋದಿಶಮ್ ।
ಪ್ರಾಪತತ್
ತದಭಿಪ್ರೇಕ್ಷ್ಯ ವಿಷ್ಣುಂ ಜಿಷ್ಣುರುವಾಚ ಹ ॥೨೧॥
ಒಂದು ಅಸ್ತ್ರ
ಪ್ರಯೋಗಮಾಡಬೇಕಾದರೆ ಮೊದಲು ಆ ಅಸ್ತ್ರದ ಹಿಂದಿನ ಮಂತ್ರದ ಅಭಿಮಾನಿ ದೇವತೆ ಮನಸ್ಸಲ್ಲಿ
ನೆಲೆಗೊಳ್ಳಬೇಕು. ಇದಕ್ಕೆ ಮನಶುದ್ಧಿ ಮತ್ತು ಏಕಾಗ್ರತೆ ಬಹಳ ಮುಖ್ಯ. ಹಿಂದಿನವರು ಯುದ್ಧರಂಗದಲ್ಲೂ
ಕೂಡಾ ಅಂತಹ ಏಕಾಗ್ರತೆ ಸಾಧಿಸುತ್ತಿದ್ದರು. ಇಲ್ಲಿ ಅಶ್ವತ್ಥಾಮರು ಪ್ರಾಣಾಯಾಮದಿಂದ ತಮ್ಮ ಮನಸ್ಸನ್ನು ಮಂತ್ರದಲ್ಲಿ ನೆಲೆಗೊಳಿಸಿ, ಬ್ರಹ್ಮಾಸ್ತ್ರವನ್ನು
ಸಂಧಾನ ಮಾಡಿ ಪ್ರಯೋಗ ಮಾಡುತ್ತಾರೆ. ಕೃಷ್ಣಾರ್ಜುನರು ಬೆನ್ನೆಟ್ಟಿ ಬರುವುದನ್ನು ಕಂಡು ದಿಕ್ಕು
ತೋಚದೆ ದುಡುಕಿನಿಂದ ಮಾಡಿದ ಇನ್ನೊಂದು ಹೇಯ
ಕೃತ್ಯವಿದು.
ಅಶ್ವತ್ಥಾಮರು
ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಂತೆಯೇ ಆ ಬ್ರಹ್ಮಾಸ್ತ್ರ ಆಕಾಶದಲ್ಲಿ, ಇಡೀ ಪ್ರಪಂಚವನ್ನು
ಸುಡಬಲ್ಲ ಮಹಾಜ್ವಾಲೆಯಾಗಿ ಕಾಣಿಸಿತು. ಇಂತಹ ಭಯಂಕರ ಬೆಂಕಿಯ ಉಂಡೆ ಎಲ್ಲಾ ಕಡೆಯಿಂದಲೂ ತನ್ನತ್ತ
ಬರುವುದನ್ನು ಕಂಡ ‘ಗೆಲ್ಲಬಲ್ಲ’ ಅರ್ಜುನ, ಗೆಲ್ಲಲಾರದೆ, ಗಾಬರಿಯಿಂದ ವಿಷ್ಣುವಿನಲ್ಲಿ(ಕೃಷ್ಣನಲ್ಲಿ)
ಈ ಜ್ವಾಲೆಯ ಮೂಲದ ಬಗ್ಗೆ ಕೇಳುತ್ತಾನೆ.
ಅರ್ಜುನ ಉವಾಚ-
ಕೃಷ್ಣ ಕೃಷ್ಣ ಮಹಾಬಾಹೋ
ಭಕ್ತಾನಾಮಭಯಂಕರ ।
ತ್ವಮೇಕೋ ದಹ್ಯಮಾನಾನಾಮಪವರ್ಗೋSಸಿ ಸಂಸೃತೇಃ ॥೨೨॥
ಅರ್ಜುನ ಗಾಬರಿಯಿಂದ
ಹೇಳುತ್ತಾನೆ: ಕೃಷ್ಣ-ಕೃಷ್ಣ, ಮಹಾಬಾಹೋ, ನಾನು ಭಯಗ್ರಸ್ಥನಾಗಿದ್ದೇನೆ. ಏನಿದು? ಅಶ್ವತ್ಥಾಮನನ್ನು
ಸೆರೆಹಿಡೆಯಬೇಕು ಎಂದು ಬಂದಾಗ ನನ್ನ ಮೇಲೆರಗುತ್ತಿರುವ ಈ ಬೆಂಕಿಯ ಜ್ವಾಲೆ? ಎಲ್ಲಾ ಕಡೆಯಿಂದ ಬಂದು ನನ್ನನ್ನು ಆವರಿಸುತ್ತಿರುವ
ಬೆಂಕಿಯ ಮಧ್ಯೆ ನಾನು ಸಿಕ್ಕಿ ಹಾಕಿಕೊಂಡಿದ್ದೇನೆ. ಎಲ್ಲಿಂದ ಬಂತು ಈ ಬೆಂಕಿ ಎನ್ನುವುದು
ತಿಳಿಯದಾಗಿದೆ. ನಂಬಿದವರ ಭಯವನ್ನು ಪರಿಹರಿಸತಕ್ಕಂತಹ ಶಕ್ತಿ ಇರುವುದು ನಿನಗೊಬ್ಬನಿಗೆ. ಸಂಸಾರದ
ಬೆಂಕಿಯಲ್ಲಿ ಬೆಂದವರನ್ನೂ ಪಾರುಮಾಡುವ ನೀನು, ಎಲ್ಲಾ ಕಡೆ ವ್ಯಾಪಿಸುತ್ತಿರುವ ಈ ಬೆಂಕಿಯಿಂದ ನನ್ನನ್ನು
ರಕ್ಷಿಸು.
ಶ್ರೀಭಗವಾನುವಾಚ-
ವೇತ್ಥೇದಂ ದ್ರೋಣಪುತ್ರಸ್ಯ
ಬ್ರಾಹ್ಮಮಸ್ತ್ರಂ ಪ್ರದರ್ಶಿತಮ್ ।
ನೈವಾಸೌ ವೇದ ಸಂಹಾರಂ
ಪ್ರಾಣಬಾಧ ಉಪಸ್ಥಿತೇ ॥೨೭॥
ನ ಹ್ಯಸ್ಯಾನ್ಯತಮಂ
ಕಿಂಚಿದಸ್ತ್ರಂ ಪ್ರತ್ಯವಕರ್ಷಣಮ್ ।
ಜಹ್ಯಸ್ತ್ರತೇಜ
ಉನ್ನದ್ಧಮಸ್ತ್ರಜ್ಞೋ ಹ್ಯಸ್ತ್ರತೇಜಸಾ ॥೨೮॥
ಕೃಷ್ಣ ನಗುತ್ತಾ ಅರ್ಜುನನಲ್ಲಿ
ಹೇಳುತ್ತಾನೆ: ದ್ರೋಣಪುತ್ರ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾನೆ. ಅಸ್ತ್ರವನ್ನು ಹಿಂದೆ ಪಡೆಯಲು
ತಿಳಿಯದಿದ್ದರೂ ಕೂಡಾ, ಅದರ ಪ್ರದರ್ಶನ ಮಾಡುತ್ತಿದ್ದಾನೆ. ಬದುಕುವ ಆಸೆಯಿಂದ ದುಡುಕಿನಲ್ಲಿ ಮಾಡಿದ
ಪ್ರಯೋಗವಿದು. ಈ ಅಸ್ತ್ರವನ್ನು ಉಪಸಂಹಾರ ಮಾಡುವ
ವಿಧಾನ ಆತನಿಗೆ ತಿಳಿದಿಲ್ಲ. ಪ್ರಪಂಚದಲ್ಲಿ ಬ್ರಹ್ಮಾಸ್ತ್ರಕ್ಕೆ ಪ್ರತಿಯಾದ ಇನ್ನೊಂದು
ಅಸ್ತ್ರವಿಲ್ಲ. ಆದ್ದರಿಂದ ಇದನ್ನು ಬೇರೆ ಅಸ್ತ್ರದಿಂದ ಉಪಸಂಹಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ
ಬ್ರಹ್ಮಾಸ್ತ್ರದಿಂದಲೇ ಅದನ್ನು ಎದುರಿಸಬೇಕು. ನೀನೇ ಆ ಬ್ರಹ್ಮಾಸ್ತ್ರದ ತೇಜಸ್ಸನ್ನು ಉಪಶಮನ
ಮಾಡಬೇಕು. ಇಲ್ಲದಿದ್ದರೆ ಸರ್ವನಾಶವಾಗುತ್ತದೆ ಎನ್ನುತ್ತಾನೆ ಕೃಷ್ಣ.
No comments:
Post a Comment