ಷಷ್ಠೋSಧ್ಯಾಯಃ
ನಾರದರಿಗೆ ಅಂತರಂಗ ದರ್ಶನ
ಮತ್ತು ಅಶರೀರವಾಣಿ
ಈ ಅಧ್ಯಾಯದಲ್ಲಿ ನಾರದರ
ಪೂರ್ವ ಕಥೆ ಮುಂದುವರಿಯುತ್ತದೆ. ನಮಗೆ ನಾರದರ ಪೂರ್ವ
ಕಲ್ಪದ ಕಥೆಯನ್ನು ತಿಳಿಸಿಕೊಡುವುದಕ್ಕಾಗಿಯೇ ವ್ಯಾಸರು ನಾರದರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಾರೆ:
ಶ್ರೀವ್ಯಾಸ ಉವಾಚ-
ಭಿಕ್ಷುಭಿರ್ವಿಪ್ರವಸಿತೇ
ವಿಜ್ಞಾನಾದೇಷ್ಟೃಭಿಸ್ತವ ।
ವರ್ತಮಾನೋ ವಯಸ್ಯಾದ್ಯೇ
ತತಃ ಕಿಮಕರೋದ್ ಭವಾನ್ ॥೨॥
ಸ್ವಾಯಂಭುವ ಕಯಾ
ವೃತ್ತ್ಯಾ ವರ್ತಿತಂ ತೇ ಪರಂ ವಯಃ ।
ಕಥಂ ವೇದಮುದಸ್ರಾಕ್ಷೀಃ
ಕಾಲೇ ಪ್ರಾಪ್ತೇ ಕಳೇಬರಮ್ ॥೩॥
ಪ್ರಾಕ್ಕಲ್ಪವಿಷಯಾಮೇತಾಂ
ಸ್ಮೃತಿಂ ತೇ ಸುರಸತ್ತಮ ।
ನ ಹ್ಯೇವ ವ್ಯವಧಾತ್
ಕಾಲ ಏಷ ಸರ್ವನಿರಾಕೃತಿಃ ॥೪॥
ವ್ಯಾಸರು ಹೇಳುತ್ತಾರೆ: “ನೀವು ವಿವರಿಸಿದ ಹಿಂದಿನ ಕಲ್ಪದಲ್ಲಿನ ನಿಮ್ಮ ಕಥೆ
ತಿಳಿಯಿತು. ಆದರೆ ಮುಂದೆ ನೀವು ಎಷ್ಟು ಕಾಲ ಇದ್ದಿರಿ? ಏನು ಸಾಧನೆ ಮಾಡಿದಿರಿ? ಕೋಟಿ-ಕೋಟಿ ವರ್ಷಗಳ ಹಿಂದೆ ನಡೆದ ಈ ಘಟನೆ ನಿಮಗೆ ಹೇಗೆ
ಇಂದೂ ನೆನಪಿದೆ? ಸತ್ತು ಹೊಸದೇಹದಲ್ಲಿ
ಹುಟ್ಟಿದರೂ ಕೂಡಾ, ಹೇಗೆ ಎಲ್ಲವನ್ನೂ ನೀವು ನೆನಪಿಸಿಕೊಂಡು ಹೇಳುತ್ತಿದ್ದೀರಿ? ಇವೆಲ್ಲವನ್ನೂ
ವಿವರವಾಗಿ ವಿವರಿಸಿ” ಎಂದು. ಈ ಎಲ್ಲಾ ಪ್ರಶ್ನೆಗಳು ನಮ್ಮ-ನಿಮ್ಮೆಲ್ಲರ ಪ್ರಶ್ನೆ. ನಮಗೆ ತಿಳಿಸಿ
ಹೇಳುವುದಕ್ಕಾಗಿ ಇದು ವ್ಯಾಸರೂಪದಲ್ಲಿ ಭಗವಂತನ ಲೀಲೆ.
ಶ್ರೀನಾರದ ಉವಾಚ-
ಭಿಕ್ಷುಭಿರ್ವಿಪ್ರವಸಿತೇ
ವಿಜ್ಞಾನಾದೇಷ್ಟೃಭಿರ್ಮಮ ।
ವರ್ತಮಾನೋ ವಯಸ್ಯಾದ್ಯೇ
ತತ ಏತದಕಾರ್ಷಮ್ ॥೫॥
ಏಕಾತ್ಮಜಾ ಮೇ ಜನನೀ
ಯೋಷಿನ್ಮೂಢಾ ಚ ಕಿಂಕರೀ ।
ಮಯ್ಯಾತ್ಮಜೇSನನ್ಯಗತೌ
ಚಕ್ರೇ ಸ್ನೇಹಾನುಬಂಧನಮ್ ॥೬॥
ವ್ಯಾಸರ ಪ್ರಶ್ನೆಗೆ
ಉತ್ತರಿಸುತ್ತಾ ನಾರದರು ಹೇಳುತ್ತಾರೆ: ಋಷಿಗಳೆಲ್ಲರೂ ಚಾತುರ್ಮಾಸ್ಯ ಮುಗಿಯುತ್ತಿದ್ದಂತೆಯೇ
ಅಲ್ಲಿಂದ ಹೊರಟುಹೋದರು. ಆದರೆ ನನಗೆ ಋಷಿಗಳು ಹೇಳಿದ
ಚತುರ್ಮೂರ್ತಿಗಳೇ ತಲೆಯಲ್ಲಿ ಸುತ್ತುತ್ತಿದ್ದರು. ನನ್ನ ತಾಯಿ ನಿರ್ಗತಿಕಳಾಗಿರುವುದರಿಂದ ನಾನು ಆಕೆಯನ್ನು
ಬಿಟ್ಟು ಹೋಗುವಂತಿರಲಿಲ್ಲ. ಹಾಗಾಗಿ ಅಲ್ಲೇ ನನ್ನ ತಾಯಿಯ ಜೊತೆಗೆ ಇದ್ದೆ.
ಹೀಗಿರುವಾಗ ಒಂದು ದಿನ
ನನ್ನ ತಾಯಿ ರಾತ್ರಿ ಹೊತ್ತು ಹೊರಗೆ ಹಸುವಿನ ಹಾಲು ಕರೆಯಲೆಂದು ಹೋಗಿದ್ದಾಗ, ಹಾವು ಕಚ್ಚಿ
ಸಾವನ್ನಪ್ಪಿದಳು. ಇದರಿಂದಾಗಿ ನಾನು ಒಂಟಿಯಾದೆ. ತಾಯಿಯನ್ನು ಕಳೆದುಕೊಂಡು ದುಃಖವಾದರೂ ಕೂಡಾ,
ಇನ್ನೊಂದು ರೀತಿಯಲ್ಲಿ ಯಾವುದೇ ಸಂಸಾರ ಪಾಶವೂ ಇಲ್ಲದೇ, ಸಾಧನೆ ಮಾಡಲು ಈ ಘಟನೆ ನನಗೆ ಸಹಾಯ ಮಾಡಿತು.
ಇದು ಭಗವಂತನ ಅನುಗ್ರಹ ಎಂದುಕೊಂಡ ನಾನು, ಎಲ್ಲಾ ಮೋಹವನ್ನು
ಕಳಚಿಕೊಂಡು ಉತ್ತರಾಭಿಮುಖವಾಗಿ ಹೊರಟೆ.
ಸ್ಫೀತಾನ್
ಜನಪದಾಂಸ್ತತ್ರ ಪುರಗ್ರಾಮವ್ರಜಾಕರಾನ್ ।
ಖೇಟಾನ್
ಪಟ್ಟನವಾಟೀಶ್ಚ ವನಾನ್ಯುಪವನಾನಿ ಚ ॥೧೧॥
ಹೀಗೆ ಹೋಗುತ್ತಿರುವಾಗ
ಅನೇಕ ಊರು ಕೇರಿಗಳು ಸಿಕ್ಕಿದವು. ಆದರೆ ನಾನು ಯಾವುದರ ಗೋಜೂ ಇಲ್ಲದೇ, ಕಾಡು-ಮೇಡನ್ನು ದಾಟಿಕೊಂಡು ಮುನ್ನೆಡೆದೆ ಎನ್ನುತ್ತಾರೆ ನಾರದರು.
ಇಲ್ಲಿ ನಾರದರು ಕೆಲವು ವಿಶಿಷ್ಠ ಪದಗಳನ್ನು ಉಪಯೋಗಿಸಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ೧. ಖೇಟ:
“ಮೃಗಯಾಜೀವಿನಾಂ ಖೇಟಃ”. ಅಂದರೆ ಬೇಟೆಗಾರರು
ವಾಸಮಾಡುವ ಹಳ್ಳಿ. ೨. ವಾಟೀ: “ವಾಟೀ ಪುಷ್ಪೋಪಜೀವಿನಾಂ”
ಹೂ ಬೆಳೆಸಿಕೊಂಡು ಬದುಕುವ ಜನರಿರುವ ಹಳ್ಳಿ. ೩. ವ್ರಜ: ಗೋವಳರ ಕೇರಿ. ೪. ಆಕರ: ಗಣಿಗಳಿರುವ ಊರು.
೫.ಗ್ರಾಮ: ಎಲ್ಲಾ ರೀತಿಯ ಜನರು ವಾಸಮಾಡುವ ಸ್ಥಳ. ೬. ಪುರ: ರಾಜರು ನೆಲೆಸಿರುವ ಸ್ಥಳ. ೭. ಉಪವನ:
ನಮ್ಮ ಅನುಕೂಲಕ್ಕಾಗಿ ನಾವು ಬೆಳೆಸಿಕೊಂಡ ಕಾಡು. ೮. ವನ: ಸಹಜವಾಗಿ ಬೆಳೆದ ಕಾಡು.
ಮುಂದುವರಿದು ನಾರದರು
ಹೇಳುತ್ತಾರೆ: ಹೀಗೆ ಎಲ್ಲವನ್ನೂ ದಾಟಿಕೊಂಡು ಮುನ್ನೆಡೆದ ನನಗೆ ಒಂದು ಭೀಕರವಾದ ಗೊಂಡಾರಣ್ಯ
ಸಿಗುತ್ತದೆ. ಅಲ್ಲಿ ಯಾವ ಮನುಷ್ಯರ ಸುಳಿಯೂ ಇರುವುದಿಲ್ಲ. ಆ ಸ್ಥಳವನ್ನು ನೋಡಿದಾಗ ನನಗೆ ಸಾಧನೆಗೆ
ಇದೇ ಪ್ರಶಸ್ತ ಸ್ಥಳ ಎನಿಸುತ್ತದೆ. ಹಾಗಾಗಿ ಅಲ್ಲೇ ನಿಂತು ಅಲ್ಲಿರುವ ಒಂದು ಅಶ್ವತ್ಥ ಮರದ ಬುಡದಲ್ಲಿ
ತಪಸ್ಸಿಗೆ ಕುಳಿತೆ. ಹೀಗೆ ಕಣ್ಮುಚ್ಚಿ ಕುಳಿತಾಗ ನನಗೆ ಭಗವಂತನ ಅದ್ಭುತ ರೂಪ ಕಾಣಿಸುತ್ತದೆ! ಈ ರೀತಿ ಭಗವಂತನ ದರ್ಶನ ಅಂತರಂಗದಲ್ಲಾದಾಗ, ನನಗಾದ ಅನುಭವ
ವರ್ಣಿಸಲು ಅಸಾಧ್ಯವಾದುದು.
ಪ್ರೇಮಾತಿಭರನಿರ್ಭಿನ್ನ
ಪುಲಕಾಂಗೋSSತಿನಿರ್ವೃತಃ ।
ಆನಂದಸಂಪ್ಲವೇ ಲೀನೋ
ನಾಪಶ್ಯಮುಭಯಂ ಮುನೇ ॥೨೧॥
ಭಗವಂತನ ಪ್ರೀತಿ ಉಕ್ಕಿ
ಹರಿದಾಗ ಅಳೆಯಲಾಗದ ಆನಂದ ನನ್ನದಾಯಿತು. ಮೈಯೆಲ್ಲಾ ರೋಮಾಂಚನ. ಆನಂದದ ಸಮುದ್ರದಲ್ಲಿ ಈಜಾಡಿದ ಅನುಭವ
ನನ್ನದು. ಆಗ ಭಗವಂತನನ್ನು ಬಿಟ್ಟು ಇನ್ನೇನನ್ನೂ ಕಾಣದಾದೆ ಎನ್ನುತ್ತಾರೆ ನಾರದರು. ಇಲ್ಲಿ “ನಾಪಶ್ಯಮುಭಯಂ” ಎಂದರೆ ಭಗವಂತನನ್ನು ಹೊರತುಪಡಿಸಿ
ಬೇರೇನನ್ನೂ ಕಾಣದಾದೆ ಎಂದರ್ಥ. ಪ್ರಾಚೀನ ವ್ಯಾಕರಣ ನೋಡಿದರೆ ಮಾತ್ರ ಈ ಮಾತು ಅರ್ಥವಾಗುತ್ತದೆ. “ಉಭಯಂ ದ್ವಿತೀಯಂ
ನಾಪಶ್ಯಂ ತಮೇವಾಪಶ್ಯಂ”. ಇಲ್ಲಿ ‘ಉಭಯಂ’ ಎಂದರೆ ಬೇರೆ ಪ್ರಪಂಚವನ್ನು
ನೋಡಲಿಲ್ಲ-ಭಗವಂತನನ್ನೇ ನೋಡಿದೆ ಎಂದರ್ಥ.
ಮುಂದುವರಿದು ನಾರದರು
ಹೇಳುತ್ತಾರೆ: ನನಗೆ ಬಹಳ ಸಂತೋಷವಾಯಿತು. ಆನಂದದ ಸಮುದ್ರದಲ್ಲಿ ಓಡಾಡುತ್ತಿದ್ದೇನೆ ಅನಿಸಿತು.
ಆದರೆ ಇದ್ದಕ್ಕಿದ್ದಂತೆ ಆ ರೂಪ ಅದೃಶ್ಯವಾಯಿತು! ಆಗ ನನಗೆ ಗಾಬರಿಯಾಯಿತು. ಮರಳಿ ಎಷ್ಟೇ ಪ್ರಯತ್ನಿಸಿದರೂ
ಭಗವಂತನ ದರ್ಶನವಾಗಲಿಲ್ಲ. ಪ್ರತ್ಯಕ್ಷವಾಗಿ ಭಗವಂತನನ್ನು ಕಾಣಲೇಬೇಕೆಂದು ಗೋಗರೆದಾಗ ನನಗೊಂದು ಅಶರೀರವಾಣಿ
ಕೇಳಿಸಿತು. “ನನ್ನನ್ನು ನೋಡಲು ಬೇಕಾದ ಪಕ್ವತೆ ಇನ್ನೂ ನಿನಗೆ ಬಂದಿಲ್ಲ. ನೀನು ನನ್ನನು ಕಾಣುತ್ತಿ.
ಯಾವಾಗ ಬೇಕೋ ಆವಾಗ ಕಾಣುವಷ್ಟು ದೊಡ್ಡವನಾಗಿ ಬೆಳೆಯುತ್ತಿ. ಆದರೆ ಸದ್ಯಕ್ಕೆ ಇಷ್ಟೇ. ಇದರಿಂದ ಹೆಚ್ಚು
ನೋಡುವ ಆಸೆ ಬೇಡ. ನಿನ್ನ ಸಾಧನೆಯಿಂದಾಗಿ, ಈ ಜನ್ಮದಲ್ಲಿ ನೀನು ಏನನ್ನು ಕಂಡೆ, ಅದನ್ನು ನೀನೆಂದೂ
ಮರೆಯುವುದಿಲ್ಲ. ನಿನ್ನ ಪೂರ್ವ ಸ್ಮೃತಿ ಸದಾ ನಿನ್ನೊಂದಿಗಿರುತ್ತದೆ” ಎನ್ನುವ ಸಂದೇಶ ಆ ಅಶರೀರವಾಣಿಯಿಂದ
ಬಂದಿತು. ಈ ಘಟನೆಯ ನಂತರ ನಾನು ಇಡೀ ಜೀವನವನ್ನು ಭಗವಂತನ ಚಿಂತನೆಯಲ್ಲಿ ಕಳೆದೆ. ವಯಸ್ಸಾದ ನಂತರ ನನ್ನ
ಪಾಂಚಭೌತಿಕ ಶರೀರ ಬಿದ್ದು ಹೋಯಿತು. ಆ ಕಲ್ಪದ ಕಥೆ ಅಲ್ಲಿಗೆ ಮುಗಿಯಿತು. ಆ ನಂತರ ಈ ಕಲ್ಪದಲ್ಲಿ ನಾನು
ಬ್ರಹ್ಮನ ಮಾನಸಪುತ್ರನಾಗಿ ಜನಿಸಿದೆ. ವೀಣೆ ನನ್ನ ಕೈಯಲ್ಲಿದೆ. ನಾನು ಕಾಣಬೇಕೆಂದುಕೊಂಡಾಗಲೆಲ್ಲಾ
ಆ ಭಗವಂತ ದರ್ಶನ ಕೊಡುತ್ತಾನೆ. ಎಂತಹ ಭಾಗ್ಯ ನನ್ನದು. ಇದಕ್ಕೆಲ್ಲಾ ಕಾರಣ ನಾನು ಭಗವಂತನ ಮಹಿಮೆಯನ್ನು
ಋಷಿಗಳಿಂದ ಕೇಳಿ ತಿಳಿದಿರುವುದು. ಆದ್ದರಿಂದ ಅಂತಹ ಭಗವಂತನ ಮಹಿಮೆಯನ್ನು ಜನರಿಗೆ ತಾವು ಪರಿಚಯಿಸಬೇಕು
ಎನ್ನುವುದು ನನ್ನ ಅಪೇಕ್ಷೆ ಎನ್ನುತ್ತಾರೆ ನಾರದರು.
ಇಷ್ಟು ಹೇಳಿ ನಾರದರು
ತಮ್ಮ ವೀಣೆಯನ್ನು ಮೀಟುತ್ತಾ ಅಲ್ಲಿಂದ ಹೊರಟುಹೋಗುತ್ತಾರೆ ಎನ್ನುವಲ್ಲಿಗೆ ಈ ಅಧ್ಯಾಯ ಮುಕ್ತಾಯವಾಯಿತು.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ಷಷ್ಠೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಆರನೇ ಅಧ್ಯಾಯ ಮುಗಿಯಿತು.
*********
No comments:
Post a Comment