Wednesday, February 6, 2013

Shrimad BhAgavata in Kannada -Skandha-01-Ch-05(01)


ಪಂಚಮೋSಧ್ಯಾಯಃ


ಭಾಗವತ ರಚನೆಯ ಹಿನ್ನೆಲೆ-ದೇವರ್ಷಿ ನಾರದರ ಆಗಮನ
ಸೂತ ಉವಾಚ-
ಅಥ ತಂ ಸುಖಮಾಸೀನ ಉಪಾಸೀನಂ ಬೃಹಚ್ಛ್ರವಾಃ
ದೇವರ್ಷಿಃ ಪ್ರಾಹ ವಿಪ್ರರ್ಷಿಂ ವೀಣಾಪಾಣಿಃ ಸ್ಮಯನ್ನಿವ

ಇಲ್ಲಿ ಸೂತರು ಶೌನಕಾದಿಗಳಿಗೆ ಭಾಗವತ ರಚನೆಯ ಹಿನ್ನೆಲೆಯನ್ನು ವಿವರವಾಗಿ ವಿವರಿಸುವುದನ್ನು ಕಾಣುತ್ತೇವೆ. ಹಿಂದೆ ಹೇಳಿದಂತೆ: ವ್ಯಾಸರು ಸರಸ್ವತೀ ನದಿ ತೀರದಲ್ಲಿ ಅತೃಪ್ತರಾದವರಂತೆ ಕುಳಿತಿರುವಾಗ ಅಲ್ಲಿಗೆ ನಾರದರ ಆಗಮನವಾಗುತ್ತದೆ.  ವ್ಯಾಸರು ದೇವರ್ಷಿ ನಾರದರನ್ನು ಆದರಪೂರ್ವಕವಾಗಿ  ಆಸನದಲ್ಲಿ ಕುಳ್ಳಿರಸುತ್ತಾರೆ. ಉಭಯ ಕುಶಲೋಪರಿ ಸಂಭಾಷಣೆಯ ನಂತರ ನಾರದರು ವೇದವ್ಯಾಸರನ್ನು ಆತ್ಮೀಯವಾಗಿ ಪ್ರಶ್ನಿಸುತ್ತಾರೆ.

ಶ್ರೀನಾರದ ಉವಾಚ-
ಪಾರಾಶರ್ಯ ಮಹಾಭಾಗ ಭವತಃ ಕಚ್ಚಿದಾತ್ಮನಾ
ಪರಿತುಷ್ಯತಿ ಶಾರೀರ ಆತ್ಮಾ ಮಾನಸ ಏವ ವಾ

ನಾರದರು ಕೇಳುತ್ತಾರೆ: “ನಿಮ್ಮ  ಶರೀರರೂಪವಾದ ಆತ್ಮ ಮತ್ತು ಮಾನಸವಾದ ಆತ್ಮ ಸಂತೋಷವಾಗಿದೆಯೋ?” ಎಂದು. ಮೇಲ್ನೋಟಕ್ಕೆ ಈ ಪ್ರಶ್ನೆ ವಿಚಿತ್ರವಾಗಿದೆ. ಲೌಕಿಕವಾಗಿ ನೋಡಿದರೆ ಚನ್ನಾಗಿದ್ದೀರ? ಆರೋಗ್ಯವೇ? ಎಂದು ಕೇಳಿದ ಪ್ರಶ್ನೆ ಇದು. ಆದರೆ  ಭಗವಂತನ ವಿಚಾರವಾಗಿ ನೋಡಿದಾಗ ಆತನ ಶರೀರ ಮನಸ್ಸುಗಳೆರಡೂ ಆತ್ಮರೂಪವೇ ಆಗಿರುವುದರಿಂದ ನಾರದರು ಈ ರೀತಿ ವಿಶೇಷವಾಗಿ ಪ್ರಶ್ನೆ ಮಾಡಿದ್ದಾರೆ.

ಜಿಜ್ಞಾಸಿತಂ ಸುಸಂಪನ್ನಮಪಿ ತೇ ಮಹದದ್ಭುತಮ್
ಕೃತವಾನ್ ಭಾರತಂ ಯಸ್ತ್ವಂ ಸರ್ವಾರ್ಥಪರಿಬೃಂಹಿತಮ್

“ಜ್ಞಾನ ಶಿಖರವನ್ನು ಏರಿದ ನೀವು, ಸಮರ್ಥ ಅರ್ಥವನ್ನೊಳಗೊಂಡ ಮಹಾಭಾರತವನ್ನು ರಚಿಸಿದಿರಿ. ಅದು ಅತ್ಯದ್ಭುತವಾದ, ಮನುಷ್ಯನ ಪ್ರಜ್ಞೆಗೆ ಮೀರಿದ ಜ್ಞಾನಶಕ್ತಿ. ಅಂತಹ ಪ್ರಜ್ಞಾಶಕ್ತಿಯ ಶಿಖರವನ್ನೇರಿದ ತಮಗೇನು ಕೊರಗು?”

ಜಿಜ್ಞಾಸಿತಮಧೀತಂ ಚ ಬ್ರಹ್ಮ ಯತ್ತತ್ ಸನಾತನಮ್
ತಥಾಪಿ ಶೋಚಸ್ಯಾತ್ಮಾನಮಕೃತಾರ್ಥ ಇವ ಪ್ರಭೋ

“ನೀವು ಸನಾತನವಾದ ಬ್ರಹ್ಮತತ್ತ್ವ ಏನು ಎನ್ನುವುದನ್ನು ತಿಳಿದಿದ್ದೀರಿ. ಎಲ್ಲವನ್ನೂ ತಿಳಿದ ನಿಮ್ಮಲ್ಲಿ ತೃಪ್ತಿ ಕಾಣುತ್ತಿಲ್ಲ. ಯಾವುದೋ ಒಂದು ಮಾಡಬೇಕಾದ ಕೆಲಸವನ್ನು ಮಾಡದೇ ಅತೃಪ್ತರಾಗಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ” ಎಂದು ನಾರದರು ವ್ಯಾಸರಲ್ಲಿ ಪ್ರಶ್ನಿಸುತ್ತಾರೆ. ಹಿಂದೆ ಹೇಳಿದಂತೆ ಈ ಪ್ರಶ್ನೋತ್ತರ ದೇವ-ದೇವತೆಯರ ಒಂದು ಲೀಲೆ.

ಶ್ರೀವ್ಯಾಸ ಉವಾಚ-
ಅಸ್ತ್ಯೇವ ಮೇ ಸರ್ವಮಿದಂ ತ್ವಯೋಕ್ತಂ ತಥಾಪಿ ನಾತ್ಮಾ ಪರಿತುಷ್ಯತೇ ಮೇ
ತನ್ಮೂಲಮವ್ಯಕ್ತಮಗಾಧಬೋಧಂ ಪೃಚ್ಛಾಮಹೇ ತ್ವಾSSತ್ಮಭವಾತ್ಮಭೂತಮ್

ವ್ಯಾಸರು ನಾರದರಲ್ಲಿ ಹೇಳುತ್ತಾರೆ: “ ನೀವು ಹೇಳಿದಂತೆ ವೇದವಿಭಾಗ, ಮಹಾಭಾರತ ರಚನೆಯೊಂದಿಗೆ ಬ್ರಹ್ಮತತ್ತ್ವದ ಸಮಗ್ರ ಪರಿಜ್ಞಾನ ನನಗಿದೆ. ಆದರೂ ಕೂಡಾ ನನಗೆ ತೃಪ್ತಿ ಇಲ್ಲ. ಚತುರ್ಮುಖನ ಮಾನಸ ಪುತ್ರರಾದ ತಾವು ಬಹಳ ಬುದ್ಧಿವಂತರು. ನೀವೇ ನನ್ನ ಅತೃಪ್ತಿಗೆ ಕಾರಣವೇನೆಂದು ಹೇಳಿರಿ” ಎಂದು.

ಭಕ್ತವತ್ಸಲನಾದ ಭಗವಂತ ಯಾವಾಗಲೂ ತನ್ನ ಭಕ್ತರಿಂದ ಹೇಳಿಸಿಕೊಂಡು ಮಾಡಲು ಇಷ್ಟಪಡುತ್ತಾನೆ. ಅದಕ್ಕಾಗಿ ವ್ಯಾಸ ರೂಪದಲ್ಲಿ ಈ ಲೀಲೆ.

ಶ್ರೀನಾರದ ಉವಾಚ-
ಯಥಾ ಧರ್ಮಾದಯೋ ಹ್ಯರ್ಥಾ ಮುನಿವರ್ಯಾನುವರ್ಣಿತಾಃ
ನ ತಥಾ ವಾಸುದೇವಸ್ಯ ಮಹಿಮಾ ಹ್ಯನುವರ್ಣಿತಃ

ಇಲ್ಲಿ ನಾರದರು ಕೊಡುವ ಉತ್ತರವನ್ನು ಈ ಶ್ಲೋಕದ ಮೇಲ್ನೋಟದ ಅರ್ಥದಲ್ಲಿ ನೋಡಿದರೆ ನಮಗೆ ಗೊಂದಲವಾಗುತ್ತದೆ. ಶ್ಲೋಕದ ಮೇಲ್ನೋಟದ ಅರ್ಥದಂತೆ ನಾರದರ ಮಾತು: “ಧರ್ಮಾರ್ಥ-ಕಾಮಗಳ ಕುರಿತು ಬೇಕಾದಷ್ಟನ್ನು ಬರೆದಿರಬಹುದು, ಆದರೆ ಆ ಐತಿಹಾಸಿಕ ಘಟನೆಗಳ ನಡುವೆ ವಾಸುದೇವನನ್ನು ವರ್ಣಿಸಿರುವುದು ಸಾಕಾಗಲಿಲ್ಲ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಈ ರೀತಿ ಈ ಶ್ಲೋಕವನ್ನು ಅರ್ಥ ಮಾಡಬಾರದು. ಏಕೆಂದರೆ ಹಾಗೆ ಅರ್ಥ ಮಾಡಿದರೆ ಮಹಾಭಾರತದಲ್ಲಿ ಭಗವಂತನ ಮಹಿಮೆ ಹೇಳಿಲ್ಲ ಎಂದಂತಾಗುತ್ತದೆ. ಆದರೆ ಅದು ಸರಿಯಲ್ಲ. ನಾರದರು ಇಲ್ಲಿ ಹೇಳಿರುವ ಮಾತೇ ಬೇರೆ. ಅವರು ಹೇಳುತ್ತಾರೆ: “ಮಹಾಭಾರತದಲ್ಲಿ ಧರ್ಮಾರ್ಥ-ಕಾಮಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಆದರೆ ಧರ್ಮಾರ್ಥ-ಕಾಮಗಳನ್ನು ಹೇಳಿ ಮುಗಿಸಿದಂತೆ ಭಗವಂತನ ಮಹಿಮೆಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಭಗವಂತನ ಮಹಿಮೆ ಅನಂತವಾದುದರಿಂದ ಅದರ ಕುರಿತು ಇನ್ನೂ ಹೇಳಬೇಕು” ಎಂದು.
ಮಹಾಭಾರತದಲ್ಲಿ ಭಗವಂತನ ವರ್ಣನೆ ಇದೆ. ಆದರೆ ಇನ್ನೂ ಒಂದು ಗ್ರಂಥದಲ್ಲಿ ಆತನ ಮಹಿಮೆಯನ್ನು ನೀವು ಹೇಳಬೇಕು ಎಂದು ನಾರದರು ವ್ಯಾಸರಿಗೆ ತಿಳಿಸುತ್ತಾರೆ.

ನ ತದ್ವಚಶ್ಚಿತ್ರಪದಂ ಹರೇರ್ಯಶೋ ಜಗತ್ಪವಿತ್ರಂ ನ ಗೃಣೀತ ಕರ್ಹಿಚಿತ್
ತದ್ ವಾಯಸಂ ತೀರ್ಥಮುಶಂತಿ ಮಾನಸಾ ನ ಯತ್ರ ಹಂಸಾ ನ್ಯಪತನ್ ಮಿಮಂಕ್ಷಯಾ ೧೦

ಒಂದು ಸಾಹಿತ್ಯದಲ್ಲಿ ಭಗವಂತನ ಗುಣಗಾನದ ಮಹತ್ವ ಏನೆಂಬುದನ್ನು ನಾರದರು ಇಲ್ಲಿ ವಿವರಿಸಿದ್ದಾರೆ. ಭಗವಂತನ ಗುಣದ ಅನುಸಂಧಾನ ಇಲ್ಲದ, ಭಗವಂತನ ಅರಿವು ಇಲ್ಲದ ಸಾಹಿತ್ಯ ಒಂದು ಕೃತಿ ಎನಿಸಲಾರದು. ಅಲ್ಲಿ ಎಷ್ಟೇ ಶಬ್ದ ಚಮತ್ಕಾರವಿರಲಿ, ಶೃಂಗಾರವಿರಲಿ; ಜಗತ್ತನ್ನು ಪಾವನಗೊಳಿಸುವ ಭಗವಂತನ ಸ್ಪರ್ಶವಿಲ್ಲದ ಸಾಹಿತ್ಯ ‘ವಾಙ್ಮಯ’ ಎನಿಸಲಾರದು.  ಈ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ಭಗವಂತನನ್ನೇ ಹೇಳಿದರೂ ಕೂಡಾ, ನಮಗೆ ಅದು ಭಗವಂತನ ನಾಮ ಎನ್ನುವುದು ಹೊಳೆಯಬೇಕು.  ಸಾಹಿತ್ಯ ರಚನೆಯಲ್ಲಿ ಇದು ಮುಖ್ಯವಾದ ಅಂಶ.
ಶೃಂಗಾರಮಯವಾದ ಅನೇಕ ಸಾಹಿತ್ಯಗಳಿವೆ. ಅವೆಲ್ಲವೂ ನಮ್ಮನ್ನು ವಯಸ್ಸಿಗೆ ತಕ್ಕಂತೆ ಮರಳು ಮಾಡುವ ಶಾಸ್ತ್ರಗಳೇ ಹೊರತು, ನಮ್ಮನ್ನು ಸತ್ಯದತ್ತ ಕೊಂಡೊಯ್ಯುವ ಕೃತಿಗಳಲ್ಲ.   ಇಲ್ಲಿ ನಾರದರು ಭಗವಂತನ ಪ್ರಜ್ಞೆ ಇಲ್ಲದ ಕೃತಿಯನ್ನು ಕಾಗೆಗಳು ಮೀಯುವ ನೀರಿಗೆ ಹಾಗೂ ಭಗವದ್ ವಿಷಯಿಕವಾದ ಕೃತಿಯನ್ನು ಹಂಸಗಳು ಮೀಯುವ ಮಾನಸ ಸರೋವರಕ್ಕೆ ಹೋಲಿಸುವುದನ್ನು ಕಾಣುತ್ತೇವೆ.  ಕಾಗೆಗಳು ಕೊಳಚೆ ನೀರನ್ನು ಕಂಡು ಮೋಹಗೊಂಡು ಅದರಲ್ಲಿ ಸ್ನಾನಮಾಡುವಂತೆ ಪ್ರಾಯದ ಅಮಲಿನಲ್ಲಿ ಜನ ಮೋಹಕ ಕಾವ್ಯವನ್ನು ಇಷ್ಟಪಡುತ್ತಾರೆ. ಆದರೆ ಜ್ಞಾನಿಗಳು ಮಾನಸತೀರ್ಥವನ್ನು ಅರಸಿ ಹೋಗುವ ಹಂಸಗಳಂತೆ, ಕೇವಲ ಭಗವದ್ ಪರವಾದ ಗ್ರಂಥಗಳನ್ನು ಇಷ್ಟಪಡುತ್ತಾರೆ.
ಹಾಗಾಗಿ ಸಮಾಜಕ್ಕೆ ಭಗವದ್ ಪರವಾಗಿ ರಚಿಸಿದ ಸಾಹಿತ್ಯವನ್ನು ಕೊಡಬೇಕು. ಇಷ್ಟೇ ಅಲ್ಲ, ನಾವು ಮಾತನಾಡುವಾಗಲೂ ಕೂಡಾ ಭಗವದ್ ಪರವಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು.   

No comments:

Post a Comment