ಸಪ್ತಮೋSಧ್ಯಾಯಃ
ಭಾಗವತ ರಚನೆ ಮತ್ತು
ಶುಕಾಚಾರ್ಯರಿಗೆ ಉಪದೇಶ
ಶೌನಕ ಉವಾಚ-
ನಿರ್ಗತೇ ನಾರದೇ ಸೂತ ಭಗವಾನ್ ಬಾದರಾಯಣಃ ।
ಶ್ರುತವಾಂಸ್ತದಭಿಪ್ರೇತಂ ತತಃ ಕಿಮಕರೋದ್ ವಿಭುಃ ॥೧॥
ವ್ಯಾಸ-ನಾರದ ಸಂವಾದವನ್ನು ಸೂತರಿಂದ ಕೇಳಿ ತಿಳಿದ ಶೌನಕಾದಿಗಳು
ಕೇಳುತ್ತಾರೆ: “ನಾರದರು ಹೊರಟುಹೋದ ಮೇಲೆ
ವ್ಯಾಸರು ಏನು ಮಾಡಿದರು?” ಎಂದು. ಶೌನಕಾದಿಗಳ ಪ್ರಶ್ನೆಗೆ ಉತ್ತರಿಸುತ್ತಾ ಸೂತರು
ವ್ಯಾಸರು ಭಾಗವತ ರಚನೆ ಮಾಡಿ, ಅದನ್ನು ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶಿಸಿರುವ
ಪ್ರಸಂಗವನ್ನು ಮುಂದೆ ವಿವರಿಸುತ್ತಾರೆ.
ಸೂತ ಉವಾಚ-
ಬ್ರಹ್ಮನದ್ಯಾಂ ಸರಸ್ವತ್ಯಾ ಆಶ್ರಮಃ ಪಶ್ಚಿಮೇ ತಟೇ ।
ಶಮ್ಯಾಪ್ರಾಸ ಇತಿ ಪ್ರೋಕ್ತ ಋಷೀಣಾಂ ಸತ್ರವರ್ಧನಃ ॥೨॥
ಸರಸ್ವತಿ ನದಿ
ಉತ್ತರದಿಂದ ದಕ್ಷಿಣಕ್ಕೆ ಹರಿದು ಬರುತ್ತದೆ. ಆ ನದಿಯ ಪಶ್ಚಿಮ ತಡಿಯಲ್ಲಿ ವ್ಯಾಸಾಶ್ರಮವಿದೆ. ಅದು ಎಲ್ಲಾ ಋಷಿಗಳು ನಾನಾ ವಿಧದಲ್ಲಿ ಯಜ್ಞ
ಯಾಗಾದಿಗಳನ್ನು ಮಾಡುವ ತಾಣ. ಇಲ್ಲಿ ಆಶ್ರಮದ ಹೆಸರು ‘ಶಮ್ಯಾಪ್ರಾಸ’ ಎಂದಿದ್ದಾರೆ. ಇದು
ಸಾಮಾನ್ಯವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಕಾಣಿಸದ ವಿಚಿತ್ರವಾದ ಹೆಸರು. ‘ಶಮ್ಯ’ ಎಂದರೆ
ಗುದ್ದಲಿಯಂತಹ ಸಲಕರಣೆ. ಸಾಮಾನ್ಯವಾಗಿ ಯಾಗ ಶಾಲೆಯನ್ನು ನಿರ್ಮಾಣ ಮಾಡುವ ಮೊದಲು ಆ ಸ್ಥಳವನ್ನು
ಅಗೆದು ಶೋಧನೆ ಮಾಡಿ ನಂತರ ಶುದ್ಧೀಕೃತವಾದ ಜಾಗದಲ್ಲಿ ಯಾಗ ಶಾಲೆ ಕಟ್ಟುತ್ತಿದ್ದರು. ಈ ಕಾರಣದಿಂದ ಆಶ್ರಮವನ್ನು ‘ಶಮ್ಯಪ್ರಾಸ’ ಎಂದು
ಕರೆದಿದ್ದಾರೆ.
ತಸ್ಮಿನ್ ಋಷ್ಯಾಶ್ರಮೇ ವ್ಯಾಸೋ ಬದರೀಷಂಡಮಂಡಿತೇ ।
ಆಸೀನೋSಪ ಉಪಸ್ಪೃಶ್ಯ ಪ್ರಣಿದಧ್ಯೌ
ಮನಶ್ಚಿರಮ್ ॥೩॥
ಭಕ್ತಿಯೋಗೇನ ಮನಸಿ ಸಮ್ಯಕ್ ಪ್ರಣಿಹಿತೇSಮಲೇ ।
ಅಪಶ್ಯತ್ ಪುರುಷಂ ಪೂರ್ಣಂ ಮಾಯಾಂ ಚ ತದಪಾಶ್ರಯಾಮ್ ॥೪॥
ನಾರದರು ಹೊರಟುಹೋದ
ಮೇಲೆ ವ್ಯಾಸರು ಭಕ್ತಿಯೋಗದಿಂದ ತುಂಬಿದ ಜ್ಞಾನಿಗಳ ನಿರ್ಮಲವಾದ ಮನಸ್ಸಿನಲ್ಲಿ ಭಗವಂತನಿರುವುದನ್ನು ಕಾಣುತ್ತಾರೆ. “ಭಕ್ತಿಯೋಗೇನ
ಸಮ್ಯಕ್ ಪ್ರಣಿಹಿತೇ ಲೋಕಾನಾಂ ಮನಸಿ”. ಮಾಯೆಯ ಮುಸುಕಿನಲ್ಲಿ ‘ತನ್ನ’
ಅರಿವಾಗಲೀ ‘ಭಗವಂತನ’ ಅರಿವಾಗಲೀ ಇಲ್ಲದೇ ಇರುವ, ಲೌಕಿಕತೆಯ ಬೆನ್ನುಹತ್ತಿದ ಜನರನ್ನು ಅವರು ಕಾಣುತ್ತಾರೆ.
ಅನರ್ಥೋಪಶಮಂ ಸಾಕ್ಷಾದ್ ಭಕ್ತಿಯೋಗಮಧೋಕ್ಷಜೇ ।
ಲೋಕಸ್ಯಾಜಾನತೋ ವಿದ್ವಾಂಶ್ಚಕ್ರೇ ಸಾತ್ವತಸಂಹಿತಾಮ್ ॥೬॥
ಇಂತಹ ಅನರ್ಥದಿಂದ
ಲೋಕದ ಜನರು ಪಾರಾಗಲು ಭಕ್ತಿಯೋಗವೊಂದೇ ಮಾರ್ಗ
ಎಂದು ಅರಿತ ವ್ಯಾಸರು, ಭಗವಂತನಲ್ಲಿ ನೇರವಾಗಿ ಭಕ್ತಿಯನ್ನು ಗಾಢಗೊಳಿಸುವ ಒಂದು ಗ್ರಂಥ
ರಚನೆಯಾಗಬೇಕೆಂದು ಸಂಕಲ್ಪ ಮಾಡಿದರು. ತಿಳುವಳಿಕೆ ಇಲ್ಲದೇ ದಾರಿತಪ್ಪುತ್ತಿರುವ ಜನರಿಗಾಗಿ
ವ್ಯಾಸರು ಒಂದು ಅಪೂರ್ವವಾದ, ಸಾತ್ವಿಕವಾದ ಮತ್ತು ಗುಣಪೂರ್ಣನಾದ ಭಗವಂತನ ಬಗೆಗೆ ಹೇಳುವ ಸಂಹಿತೆಯನ್ನು
ರಚಿಸಿದರು. ಈ ಹಿಂದೆ ಹೇಳಿದಂತೆ ವ್ಯಾಸರು ಭಾಗವತವನ್ನು ಬರೆದದ್ದಲ್ಲ. ಅದು ಅವರ ಮಾನಸಿಕ ರಚನೆ ಮತ್ತು
ಅದನ್ನು ಅವರು ತನ್ನ ಶಿಷ್ಯರಿಗೆ ಉಪದೇಶಿಸಿದರು. ಕಣ್ಣಿಗೆ ಕಾಣದ ಭಗವಂತನನ್ನು ನಮ್ಮ ಮನಸ್ಸಿಗೆ ಶಬ್ದದ
ಮುಖೇನ ಮನವರಿಕೆ ಮಾಡುವುದಕ್ಕೋಸ್ಕರ ಭಾಗವತ ರಚನೆಯಾಯಿತು. ಇಲ್ಲಿ ‘ಅಧೋಕ್ಷಜ’ ಎನ್ನುವ ಪದ ಬಳಕೆಯಾಗಿದೆ. ಭಗವಂತ ನಮ್ಮ ಹೊರಗಣ್ಣಿಗೆ
ಕಾಣಲಾರ, ಆದರೆ ಆತನನ್ನು ಇಂದ್ರಿಯ ನಿಗ್ರಹ ಮಾಡಿ ಸಾಧನೆಯಿಂದ ಒಳಗಣ್ಣಿನಿಂದ ಕಾಣಬಹುದು. ಭಾಗವತ ಭಗವಂತನನ್ನು
ಅಂತರಂಗದಲ್ಲಿ ಕಾಣುವ ಬಗೆಯನ್ನು ತಿಳಿಸುವ ಗ್ರಂಥ. ಇದು ಭಗವಂತನ ಮಹಿಮೆಯ ಅರಿವಿನ ಮೂಲಕ, ಭಗವದ್ಭಕ್ತಿಯನ್ನು
ಭರಿಸಿ, ಸಂಸಾರದಲ್ಲಿನ ಅನರ್ಥ ಪರಿಹಾರಕ್ಕೆ ದಾರಿ ತೋರಿಸುವ ಗ್ರಂಥ.
ನಾವು ನಮ್ಮ ಬದುಕಿನಲ್ಲಿ
ಮುಖ್ಯವಾಗಿ ತಿಳಿಯಬೇಕಾದ ವಿಚಾರ ಅಂದರೆ: ‘ನಮ್ಮ ಬದುಕನ್ನು ಭಗವಂತನ ಜೊತೆಗೆ ಶ್ರುತಿಗೂಡಿಸಿಕೊಂಡು
ಬದುಕುವುದು’. ಇದು ಅರಿಯದಿದ್ದಾಗ ನಾವು ಅನರ್ಥವನ್ನು ಆಹ್ವಾನಿಸಬೇಕಾಗುತ್ತದೆ. ಇಂತಹ ಮೂಲಭೂತ ವಿಷಯವನ್ನೂ
ಮರೆತು ಬದುಕುತ್ತಿರುವ ಜನರಿಗೆ ಸತ್ಯವನ್ನು ತಿಳಿಸುವುದಕ್ಕೋಸ್ಕರ ವ್ಯಾಸರು ಇಂತಹ ಸಾತ್ವತಸಂಹಿತೆಯನ್ನು
ರಚಿಸಿದರು.
ಯಸ್ಯಾಂ ವೈ ಶ್ರೂಯಮಾಣಾಯಾಂ ಕೃಷ್ಣೇ ಪರಮಪೂರುಷೇ ।
ಭಕ್ತಿರುತ್ಪದ್ಯತೇ ಪುಂಸಾಂ ಶೋಕಮೋಹಭಯಾಪಹಾ ॥೭॥
ಸೂತರು
ಹೇಳುತ್ತಾರೆ: ವ್ಯಾಸರು ರಚಿಸಿರುವ ಈ ಭಾಗವತವನ್ನು ಕೇಳುತ್ತಿದ್ದರೆ ನಮ್ಮಲ್ಲಿರುವ ಎಲ್ಲ ಅಜ್ಞಾನಗಳು
ಮರೆಯಾಗಿ, ಭಗವಂತನಲ್ಲಿ ಭಕ್ತಿ ಗಾಢವಾಗುತ್ತದೆ. ಭಾಗವತ ಕೇಳಿದಾಗ ಭಕ್ತಿ ಸಾಗರದಲ್ಲಿ ತೇಲಿದ
ಅನುಭವವಾಗುತ್ತದೆ. ಅಂತಹ ಅಪೂರ್ವವಾದ ಭಾಗವತ ಮಹಾಪುರಾಣವನ್ನು ವ್ಯಾಸರು ರಚನೆ ಮಾಡಿದರು
ಸ ಸಂಹಿತಾಂ ಭಾಗವತೀಂ ಕೃತ್ವಾSನುಕ್ರಮ್ಯ ಚಾತ್ಮಜಮ್ ।
ಶುಕಮಧ್ಯಾಪಯಾಮಾಸ ನಿವೃತ್ತಿನಿರತಂ ಮುನಿಮ್ ॥೮॥
ತನ್ನ ಮಾನಸ ರಚನೆಯಾದ ಭಾಗವತವನ್ನು ಲೋಕಕ್ಕೆ ನೀಡುವುದಕ್ಕಾಗಿ ವ್ಯಾಸರು ಅದನ್ನು ನಿವೃತ್ತಿನಿರತ ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶ ಮಾಡುತ್ತಾರೆ.
No comments:
Post a Comment