Saturday, February 16, 2013

Shrimad BhAgavata in Kannada -Skandha-01-Ch-07(02)


ಶೌನಕ ಉವಾಚ-
 ಸ ವೈ ನಿವೃತ್ತಿನಿರತಃ ಸರ್ವತ್ರೋಪೇಕ್ಷಕೋ ಮುನಿಃ
 ಕಸ್ಯ ವಾ ಬೃಹತೀಮೇತಾಮಾತ್ಮಾರಾಮಃ ಸಮಭ್ಯಸತ್

ವೇದವ್ಯಾಸರು ಶುಕಾಚಾರ್ಯರಿಗೆ ಭಾಗವತ ಉಪದೇಶ ಮಾಡಿದರು ಎನ್ನುವ ಮಾತನ್ನು ಕೇಳಿ ಶೌನಕಾದಿಗಳು ಕೇಳುತ್ತಾರೆ: “ಶುಕಾಚಾರ್ಯರು ಎಲ್ಲವನ್ನೂ ತೊರೆದುಹೋದವರು. ಅವರು ಎಲ್ಲವನ್ನೂ ಉಪೇಕ್ಷೆ ಮಾಡುವವರು. ಅಂತಹ ಸರ್ವಪರಿತ್ಯಾಗಿ  ಹೇಗೆ ಭಾಗವತವೆಂಬ ಮಹಾಸಂಹಿತೆಯನ್ನು  ಕೇಳಬೇಕೆಂದು ಇಚ್ಛೆಪಟ್ಟು ಬಂದು ಕೇಳಿದರು?” ಎಂದು.  ಒಬ್ಬ ಆತ್ಮಾನಂದವನ್ನು ಒಳಗಿನಿಂದ ಅನುಭವಿಸಬಲ್ಲ ಯೋಗಿಗೆ ಮತ್ತೆ ಗ್ರಂಥ ಓದುವ ಅವಶ್ಯಕತೆ ಏನಿದೆ? ಅಂತರಂಗದಲ್ಲಿ ಸರ್ವಾನಂದವಿರುವಾಗ, ಹೊರಗಿನಿಂದ ಆನಂದ ಪಡೆಯುವ ಪ್ರಯತ್ನ ಏಕೆ? ಇದು ಶೌನಕರ ಪ್ರಶ್ನೆ.

ಸೂತ ಉವಾಚ-
ಆತ್ಮಾರಾಮಾಶ್ಚ ಮುನಯೋ ನಿರ್ಗ್ರಂಹ್ಯಾ ಅಪ್ಯುರುಕ್ರಮೇ
 ಕುರ್ವಂತ್ಯಹೈತುಕೀಂ ಭಕ್ತಿಮಿತ್ಥಂಭೂತಗುಣೋ ಹರಿಃ೧೦

ಹರೇರ್ಗುಣಾಕ್ಷಿಪ್ತಮತಿರ್ಭಗವಾನ್ ಬಾದರಾಯಣಿಃ
 ಅಧ್ಯಗಾನ್ಮಹದಾಖ್ಯಾನಂ ನಿತ್ಯಂ ವಿಷ್ಣುಜನಪ್ರಿಯಮ್೧೧

ಶೌನಕರ ಪ್ರಶ್ನೆಗೆ ಉತ್ತರಿಸುತ್ತಾ ಉಗ್ರಶ್ರವಸ್ಸರು ಹೇಳುತ್ತಾರೆ: “ಹೌದು, ಶುಕಾಚಾರ್ಯರು ಎಲ್ಲವನ್ನೂ ತೊರೆದವರು. ಅವರಲ್ಲಿ ‘ಬೇಕು’ ಎನ್ನುವ ಯಾವುದೇ ಅಪೇಕ್ಷೆ ಇರಲಿಲ್ಲ. ಅಂತಹ  ನಿರ್ಗ್ರಂಹ್ಯರವರು. ಅವರಿಗೆ ಭಗವಂತನ ಅನುಭವಕ್ಕಾಗಿ ಹೊರಗಿನಿಂದ ಏನನ್ನೂ ಗ್ರಹಣ ಮಾಡಬೇಕಾಗಿರಲಿಲ್ಲ. ಆದರೆ ಎಂತಹ ನಿವೃತ್ತಿನಿರತ ವ್ಯಕ್ತಿಯಾಗಿದ್ದರೂ ಸಹ, ಅವರಿಗೆ ಭಗವಂತ ಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಹರಿಯ ಮಹಿಮೆಯೇ ಅಂತಹದ್ದು. ಗೀತೆಯಲ್ಲಿ ಕೃಷ್ಣ ಹೇಳುವಂತೆ: ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ । ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೨-೫೨॥ ಯಾವಾಗ ಭಗವಂತನ ಅನುಭೂತಿ ನಮಗಾಗುತ್ತದೋ, ಆಗ ‘ಹಿಂದೆ ಅಧ್ಯಯನ ಮಾಡಿರುವುದು, ಹಾಗೂ ಮುಂದೆ ಅಧ್ಯಯನ ಮಾಡುವುದು’ ಎಲ್ಲವೂ ಸಾಫಲ್ಯ(ನಿರ್ವೇದ)ವಾಗುತ್ತದೆ.  ಅಪರೋಕ್ಷ ಜ್ಞಾನಿಗಳು ಎಂದರೆ ಅವರು ಎಲ್ಲವನ್ನೂ ತಿಳಿದವರಲ್ಲ. ಅವರಿಗೆ ಅಂತರಂಗದ ಅನುಭವವಾದರೂ ಕೂಡಾ, ಅವರಿಗಿಂತ ಹೆಚ್ಚು ತಿಳಿದವರ ಮಾತಿನಿಂದ ಅವರ ಅಂತರಂಗದ ಬೆಳಕು ಮತ್ತಷ್ಟು ಹೆಚ್ಚುತ್ತದೆ. ಇಲ್ಲಿ ಭಗವಂತನ ಮಹಿಮೆಯನ್ನು ಕೇಳಿ ತಿಳಿದು, ತಮ್ಮ ಅಂತರಂಗದ ಆನಂದದ ಅನುಭವವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಶುಕಾಚಾರ್ಯರು ತಂದೆಯಿಂದ ಭಾಗವತ ಉಪದೇಶ ಪಡೆಯುತ್ತಾರೆ.
ಒಬ್ಬ ಜ್ಞಾನಿಯಲ್ಲಿ ಎಷ್ಟೇ ಜ್ಞಾನವಿದ್ದರೂ ಸಹ, ಅದು ಭಗವಂತನೆಂಬ  ಮಹಾ ಹರವಿನ ಮುಂದೆ  ಒಂದು ಬಿಂದು ಮಾತ್ರ. ಜ್ಞಾನ ಎನ್ನುವುದು ಒಂದು ಸಾಗರವಿದ್ದಂತೆ. ಆ ಸಾಗರದ ಒಂದು ಹನಿಯನ್ನು ಸೇವಿಸಿದರೂ ಕೂಡಾ  ಸಾಗರದ ಸವಿ ತಿಳಿಯುತ್ತದೆ. ಆದರೆ ಎಂದೂ ಪೂರ್ಣ ಸಾಗರವನ್ನು ಪಾನಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶುಕಾಚಾರ್ಯರು ಆತ್ಮಾರಾಮರು. ಅವರು ಅಂತರಂಗದಲ್ಲಿ ಸದಾ ಭಗವಂತನನ್ನು ಕಾಣಬಲ್ಲವರು. ಭಗವಂತನ ಭಕ್ತಿಗಾಗಿಯೇ ಎಲ್ಲವನ್ನೂ ತೊರೆದವರು. ಹೀಗಿರುವಾಗ ಭಗವಂತನ ಹಿರಿಮೆಯನ್ನು ಹೇಳುವ ಭಾಗವತವನ್ನು ಅವರು ಕೇಳದೇ ಇರುವರೇ? ಶುಕಾಚಾರ್ಯರ ಭಕ್ತಿ ನಮ್ಮ ಭಕ್ತಿಯಂತೆ ಹೈತುಕವಾದುದ್ದಲ್ಲ. ಅದು ಸಕಾರಣವಾದ ನಿರ್ವ್ಯಾಜ-ನಿಷ್ಕಾರಣ-ನಿಷ್ಕಪಟ ಭಕ್ತಿ. ಹಾಗಾಗಿ ಅವರು ಭಕ್ತಿಯಿಂದ ಪರವಶರಾಗಿ ಭಾಗವತ ಕೇಳುತ್ತಾರೆ. ಭಗವದ್ಭಕ್ತರಿಗೆ ಹರಿಮಹಿಮೆಯನ್ನು ತಿಳಿಸುವ ಭಗವದ್ಸಂಕಲ್ಪಕ್ಕೆ ಮಾದ್ಯಮವಾಗುವುದೂ ಅವರ ಇನ್ನೊಂದು ಉದ್ದೇಶವಾಗಿತ್ತು”.
ಹೀಗೆ ನಾರದರ ಪ್ರಚೋದನೆಯಿಂದ ವೇದವ್ಯಾಸರು ಭಾಗವತ ರಚನೆ ಮಾಡಿ ಅದನ್ನು ಶುಕಾಚಾರ್ಯರಿಗೆ ಉಪದೇಶ ಮಾಡಿದರು. ಮುಂದೆ ಈ ಜ್ಞಾನ ಧಾರೆ ಶುಕಾಚಾರ್ಯರಿಂದ ಪರೀಕ್ಷಿತನಿಗೆ ಉಪದೇಶಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ ಸೂತರು ಇಲ್ಲಿ ಪರೀಕ್ಷಿತ ರಾಜನ ಜನನಕ್ಕೆ ಸಂಬಂಧಿಸಿದ ಪೂರ್ವ ಕಥೆಯನ್ನು  ಶೌನಕಾದಿಗಳಿಗೆ ವಿವರಿಸುವುದನ್ನು ಮುಂದೆ ಕಾಣುತ್ತೇವೆ. 

No comments:

Post a Comment