Sunday, February 17, 2013

Shrimad BhAgavata in Kannada -Skandha-01-Ch-07(03)


ಪರೀಕ್ಷಿತ ರಾಜನ ಕಥೆ
ಅಶ್ವತ್ಥಾಮನಿಂದ ದ್ರೌಪದಿಯ ಐದು ಮಂದಿ ಮಕ್ಕಳ ಹತ್ಯೆ

ಪರೀಕ್ಷಿತೋSಥ ರಾಜರ್ಷೇರ್ಜನ್ಮಕರ್ಮವಿಲಾಪನಮ್
ಸಂಸ್ಥಾಂ ಚ ಪಾಂಡುಪುತ್ರಾಣಾಂ ವಕ್ಷ್ಯೇ ಕೃಷ್ಣಕಥೋದಯಾಮ್೧೨

ಯದಾ ಮೃಧೇ ಕೌರವಸೃಂಜಯಾನಾಂ ವೀರೇಷ್ವಥೋ ವೀರಗತಿಂ ಗತೇಷು
ವೃಕೋದರಾವಿದ್ಧಗದಾಭಿಮರ್ಶ ಭಗ್ನೋರುದಂಡೇ ಧೃತರಾಷ್ಟ್ರಪುತ್ರೇ೧೩

ಭರ್ತುಃ ಪ್ರಿಯಂ ದ್ರೌಣಿರಿತಿ ಸ್ಮ ಚಿಂತಯನ್ ಕೃಷ್ಣಾಸುತಾನಾಂ ಸ್ವಪತಾಂ ಶಿರಾಂಸಿ
ಉಪಾಹರದ್ ವಿಪ್ರಿಯಮೇತದಸ್ಯ ಜುಗುಪ್ಸಿತಂ ಕರ್ಮ ವಿಗರ್ಹಯಂತೀ೧೪


ಮಹಾಭಾರತ ಯುದ್ಧದ ಕೊನೆಯ ದಿನ, ಭೀಮಸೇನ ದುರ್ಯೋಧನನ ತೊಡೆಯನ್ನು ಮುರಿಯುವುದರೊಂದಿಗೆ  ಹದಿನೆಂಟುದಿನಗಳ ಯುದ್ಧ ಕೊನೆಗೊಳ್ಳುತ್ತದೆ. ಈ ರೀತಿ ತೊಡೆಮುರಿದುಬಿದ್ದ ದುರ್ಯೋಧನನನ್ನು ಕಾಣಲು ಅಶ್ವತ್ಥಾಮಾಚಾರ್ಯರು ಹೋಗುತ್ತಾರೆ. ಆಗ ದುರ್ಯೋಧನ ಅಶ್ವತ್ಥಾಮಾಚಾರ್ಯರಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ: “ನಾನು ಸಾಮ್ರಾಟನಾಗಬೇಕೆಂದು ಕನಸು ಕಂಡೆ. ಆದರೆ ನನ್ನ ಆಸೆ ಈಡೇರಲಿಲ್ಲ. ಆದರೂ ಇನ್ನೂ ಒಂದು ಆಸೆ ನನ್ನದು. ಪಾಂಡವರ ವಂಶ ಈ ದೇಶವನ್ನಾಳಬಾರದು. ಅವರ ವಂಶ ನಿರ್ವಂಶವಾಯಿತು ಎನ್ನುವ ಸುದ್ಧಿ ಕೇಳಿ ನಾನು ಪ್ರಾಣಬಿಡಬೇಕು” ಎಂದು.
ಇತ್ತ  ಪಾಂಡವ ಶಿಬಿರದಲ್ಲಿ ಯುದ್ಧಮುಗಿದ ರಾತ್ರಿಯಾಗಿರುವುದರಿಂದ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾರೆ. ಕೃಷ್ಣ ಪಾಂಡವರನ್ನು ಶಿಬಿರದಿಂದ ದೂರ ಕರೆದುಕೊಂಡು ಹೋಗಿರುವ ಸಂದರ್ಭದಲ್ಲಿ ಅಶ್ವತ್ಥಾಮಾಚಾರ್ಯರು ಮೂರ್ಖ ದುರ್ಯೋಧನನ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿ ಪಾಂಡವ ಶಿಬಿರಕ್ಕೆ ನುಗ್ಗಿ, ಅಲ್ಲಿ ಮಲಗಿ ನಿದ್ರಿಸುತ್ತಿದ್ದ ಐದು ಮಂದಿ ದ್ರೌಪದಿಯ ಮಕ್ಕಳ ತಲೆ ಕಡಿಯುತ್ತಾನೆ. ಅವರೆಲ್ಲರೂ ಸುಮಾರು ಹದಿನಾಲ್ಕರಿಂದ ಹದಿನೆಂಟು ವರ್ಷ ವಯಸ್ಸಿನ ಹಸುಳೆಗಳು. ಇಂತಹ ಘೋರ ಪಾತಕ ಅಶ್ವತ್ಥಾಮನಿಗೆ   ಹಿತಕರವಾಗಿರಲಿಲ್ಲ. ಅತ್ತ ದುರ್ಯೋಧನ ಈ ಹತ್ಯೆ ತನಗೆ ಹಿತವೆಂದು ಭಾವಿಸಿದ್ದರೂ ಕೂಡಾ, ಆ ನೀಚ ಕೃತ್ಯ ಅವನಿಗೂ ಹಿತವನ್ನು ತರುವಂತಹದ್ದಾಗಿರಲಿಲ್ಲ.
ಹೀಗೆ ನಿದ್ರಿಸುತ್ತಿದ್ದ ಮಕ್ಕಳ ಕಗ್ಗೊಲೆ ಮಾಡಿದ್ದಷ್ಟೇ ಅಲ್ಲದೆ, ದೃಷ್ಟದ್ಯುಮ್ನನನ್ನು ಕತ್ತು ಹಿಸುಕಿ  ಸಾಯಿಸುತ್ತಾನೆ ಅಶ್ವತ್ಥಾಮ. ಸಾಲದೆನ್ನುವುದಕ್ಕೆ ಇಡೀ ಪಾಂಡವ ಶಿಬಿರಕ್ಕೆ ಬೆಂಕಿಯಿಟ್ಟು ಅಲ್ಲಿರುವ ಎಲ್ಲಾ ದಾಸ ದಾಸಿ ಮತ್ತು ಸೈನಿಕರನ್ನು ಜೀವಂತ ದ್ವಂಸ ಮಾಡುತ್ತಾನೆ. ಈ ಸಂದರ್ಭದಲ್ಲಿ ಯಾರೂ ತಪ್ಪಿಸಿಕೊಂಡು ಹೋಗದಂತೆ ಬಾಗಿಲಲ್ಲಿ ಕೃಪಾಚಾರ್ಯರನ್ನು ಕಾವಲಿಗೆ ನಿಲ್ಲಿಸಿದ್ದ ಅಶ್ವತ್ಥಾಮ!  ಎಂತಹ ಹೇಯ ಕೃತ್ಯ!

ಮಾತಾ ಶಿಶೂನಾಂ ನಿಧನಂ ಸುತಾನಾಂ ನಿಶಮ್ಯ ಘೋರಂ ಪರಿತಪ್ಯಮಾನಾ
ತದಾSರುದದ್ ಬಾಷ್ಪಕಲಾಕುಲಾಕ್ಷೀ ತಾಂ ಸಾಂತ್ವಯನ್ನಾಹ ಕಿರೀಟಮಾಲೀ೧೫

ಇಂತಹ ಸಂದರ್ಭದಲ್ಲಿ ದಾಸವರ್ಗದ ಒಬ್ಬ ಸೇವಕ ಬೆಂಕಿಯ ಜ್ವಾಲೆಯಿಂದ ಹಾಗೂ ಕೃಪಾಚಾರ್ಯರ ದೃಷ್ಟಿಯಿಂದ ತಪ್ಪಿಸಿಕೊಂಡು ಬಂದು ಪಾಂಡವರಿಗೆ ಸುದ್ದಿ ಮುಟ್ಟಿಸುವಲ್ಲಿ ಸಫಲನಾಗುತ್ತಾನೆ. ಈ ಭಯಾನಕ ಕೃತ್ಯದ ಸುದ್ಧಿ ಕೇಳಿ ದ್ರೌಪದಿಗೆ ತಡೆದು ಕೊಳ್ಳಲಾಗುವುದಿಲ್ಲ. ಆಕೆ ಕಣ್ಣೀರಿಡುತ್ತಾಳೆ. ದ್ರೌಪದಿಯ ಕಣ್ಣೀರನ್ನು ಕಂಡ ಅರ್ಜುನ ಆಕೆಯನ್ನು ಸಂತೈಸುತ್ತಾನೆ. “ನಡೆದ ಘಟನೆಯ ಬಗ್ಗೆ ದುಃಖಿಸಬೇಡ. ನಿನಗೆ ಅನ್ಯಾಯ ಮಾಡಿದ ಆ  ಅಶ್ವತ್ಥಾಮನಿಗೆ ತಕ್ಕ ಶಾಸ್ತಿ ಮಾಡುವುದು ನನ್ನ ಕರ್ತವ್ಯ” ಎನ್ನುತ್ತಾನೆ ಅರ್ಜುನ. ಕಂಬನಿ ಸುರಿಸುವುದರಿಂದ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎನ್ನುವುದು ನಿಜವಾದರೂ ಕೂಡಾ, ಕಂಬನಿ ಸುರಿಸುವುದು ಪೂರ್ತಿ ವ್ಯರ್ಥವಲ್ಲ. ಕಂಬನಿ ಹರಿದಂತೆ ನಮ್ಮ ಮನಸ್ಸು ಹಗುರವಾಗುತ್ತದೆ. ಕಣ್ಣೀರನ್ನು ತಡೆದರೆ ಒಳಗಿನ ವೇದನೆ ಸ್ಫೋಟವಾಗುವ ಸಾಧ್ಯತೆ ಹೆಚ್ಚು.  ಇಲ್ಲಿ ಅರ್ಜುನ ದ್ರೌಪದಿಯಲ್ಲಿ ‘ಕಣ್ಣೀರು ಸುರಿಸಬೇಡ’ ಎಂದು ಹೇಳುವುದಕ್ಕೆ ಇನ್ನೊಂದು ಕಾರಣವಿದೆ. ಆತನಿಗೆ ದ್ರೌಪದಿಯ ಕಣ್ಣೀರಿನ ಮಹತ್ವ ತಿಳಿದಿತ್ತು. ಹಿಂದೆ ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿ ಕಣ್ಣೀರು ಸುರಿಸಿದ್ದಳು. ಆಗ ಕೃಷ್ಣ ಹೇಳಿದ್ದ: “ನೀನು ಕಣ್ಣೀರು ಸುರಿಸಬೇಡ, ನಿನ್ನ ಕಣ್ಣೀರಿನ ಪ್ರತಿ ಹನಿಗೂ ಸಾವಿರ ಸಾವಿರ ತಲೆ ಉರುಳುತ್ತದೆ” ಎಂದು. ಅದರಂತೇ ಮಹಾಭಾರತ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿತ್ತು. ಅದಕ್ಕಾಗಿ “ಅಳಬೇಡ, ಕಣ್ಣೀರನ್ನು ಒರೆಸಿಕೋ, ದುಃಖವನ್ನು ತಡೆದುಕೋ, ನಿನಗಾಗಿರುವ ಅನ್ಯಾಯಕ್ಕೆ ತಕ್ಕ ಪ್ರತಿಕಾರ ನಾನು ಮಾಡುತ್ತೇನೆ” ಎನ್ನುತ್ತಾನೆ ಅರ್ಜುನ.

ತನ್ಮಾ ಶುಚಸ್ತೇ ನಿವೃಜಾಶ್ರು ಭದ್ರೇ ಯದ್ ಬ್ರಹ್ಮಬಂಧೋಃ ಶಿರ ಆತತಾಯಿನಃ
ಗಾಂಡೀವಮುಕ್ತೈರ್ವಿಶಿಖೈರುಪಾಹರೇ ತ್ವಾಕ್ರಮ್ಯ ತತ್ ಸ್ನಾಸ್ಯಸಿ ನೇತ್ರಜೈರ್ಜಲೈಃ೧೬

ಸಾಮಾನ್ಯವಾಗಿ “ಸಮಾದಾನ ಮಾಡಿಕೋ” ಎನ್ನುವುದು ಸಾತ್ವಿಕ  ವಿಧಾನ. ಆದರೆ ಕ್ಷತ್ರಿಯರಿಗೆ ಸೇಡು ಪ್ರಧಾನವಾಗುತ್ತದೆ. ಇಲ್ಲಿ ಅರ್ಜುನ ಹೇಳುತ್ತಾನೆ: “ನಿನ್ನ ಮಕ್ಕಳ ತಲೆಯನ್ನು ಯಾರು ಕೆಡವಿದನೋ ಅವನ ತಲೆಯನ್ನು ನಿನ್ನ ಕಾಲ ಬುಡಕ್ಕೆ ಉಡುಗೊರೆಯಾಗಿ ತಂದೊಪ್ಪಿಸುತ್ತೇನೆ” ಎಂದು.
ಈ ಶ್ಲೋಕದಲ್ಲಿ  ಅರ್ಜುನ ಅಶ್ವತ್ಥಾಮನನ್ನು ಬ್ರಹ್ಮಬಂಧುಃ ಮತ್ತು  ಆತತಾಯಿನಃ  ಎನ್ನುವ ಎರಡು ವಿಶೇಷಣ ಬಳಸಿ ಸಂಬೋಧಿಸಿರುವುದನ್ನು ಕಾಣುತ್ತೇವೆ. ಅಶ್ವತ್ಥಾಮಾಚಾರ್ಯರು ಶಾಸ್ತ್ರಪಾರಂಗತ ಬ್ರಾಹ್ಮಣರಾಗಿದ್ದರು. ಆದರೆ ಅವರು ಬ್ರಾಹ್ಮಣ ಧರ್ಮವನ್ನಾಚರಿಸದೇ, ಬ್ರಾಹ್ಮಣಧರ್ಮಕ್ಕೆ ಅಪಚಾರವೆಸಗಿದರು. ಚಿತ್ತ ಸಮತೋಲನ ಇಲ್ಲದ ಚಪಲಚಿತ್ತನಾಗಿದ್ದ ನಡೆ ಅವರದ್ದಾಗಿತ್ತು. ಅಶ್ವತ್ಥಾಮಾಚಾರ್ಯರ ಪಾತ್ರವೇ ಅಂತಹದ್ದು. ಭಗವಂತನನ್ನು ವಿರೋಧಿಸುವ ಪಾತ್ರವದು. ದುಡುಕಿನ ವರ್ತನೆಯಿಂದಾಗುವ ಅನಾಹುತವನ್ನು ತೋರಿಸುವ ಶಿವನ ಅವತಾರ.  ಅವರ ದುಡುಕಿನ ವರ್ತನೆ ಮತ್ತು ಅದರಿಂದಾಗುವ ಅನಾಹುತವನ್ನು ಭಾರತದಲ್ಲಿ ಅನೇಕ ಕಡೆ ಕಾಣುತ್ತೇವೆ. ತನ್ನ ತಂದೆ ಸತ್ತರೆಂಬ ಸುದ್ಧಿ ತಿಳಿದಾಗ, ಹಿಂದೂ ಮುಂದೂ ನೋಡದೆ, ಇಡೀ ಪಾಂಡವ ಸೇನೆಯನ್ನು ಸುಟ್ಟುಬಿಡಬೇಕೆಂದು ನಾರಾಯಣಾಸ್ತ್ರ ಪ್ರಯೋಗಿಸಿದ್ದರು ಅಶ್ವತ್ಥಾಮರು. ಆ ಸಮಯದಲ್ಲಿ ಶ್ರೀಕೃಷ್ಣ ಎಲ್ಲಾ ಸೈನಿಕರಲ್ಲಿ ಶಸ್ತ್ರವನ್ನು ಕೆಳಗಿಟ್ಟು ಕೈಮುಗಿದು ನಿಲ್ಲುವಂತೆ ಹೇಳಿದ ಮತ್ತು ಇದರಿಂದಾಗಿ ಅಲ್ಲಿ ಒಬ್ಬರೂ ಸಾಯಲಿಲ್ಲ.  ಈ ರೀತಿ ದುಡುಕಿನ ನಿರ್ಧಾರದಿಂದ ಅನಾಹುತವನ್ನು ತಂದಿಟ್ಟುಕೊಳ್ಳುವುದನ್ನು ತೋರಿಸುವ ವಿಚಿತ್ರ ಪಾತ್ರ ಅಶ್ವತ್ಥಾಮನದು .
ಆತತಾಯಿಗಳು ಎಂದರೆ ಸಮಾಜ ದ್ರೋಹಿಗಳು. ಬೆಂಕಿ ಹಾಕಿ ಜೀವಂತ ಸುಡುವುದು, ವಿಷ ಹಾಕಿ ಕೊಲ್ಲುವುದು, ದರೋಡೆ ಮಾಡುವುದು, ಪರಪತ್ನಿ ಅಪಹಾರ ಅಥವಾ ಮಾನಭಂಗ, ಇತ್ಯಾದಿ ಕಾರ್ಯವೆಸಗುವವರು ಆತತಾಯಿಗಳು. ದುರ್ಯೋಧನ ಈ ಎಲ್ಲಾ ಕಾರ್ಯವನ್ನೂ ಮಾಡಿದ್ದ. ಇಂತಹ ಆತತಾಯಿಗಳನ್ನು ಕಂಡಲ್ಲಿ ಸಾಯಿಸಿ ಎನ್ನುತ್ತದೆ ಶಾಸ್ತ್ರ. ಅದಕ್ಕಾಗಿ ಇಲ್ಲಿ ಅರ್ಜುನ: “ಅಶ್ವತ್ಥಾಮಾಚಾರ್ಯರ ತಲೆಯನ್ನು ನಿನ್ನ ಪಾದದಲ್ಲಿ ತಂದಿಡುತ್ತೇನೆ” ಎಂದಿದ್ದಾನೆ. “ನನ್ನಲ್ಲಿ ಗಾಂಢೀವ ಧನುಸ್ಸಿದೆ. ಅದರಿಂದ ಅಶ್ವತ್ಥಾಮನನ್ನು ಮಣಿಸಿ, ಆತನ ತಲೆಯನ್ನು ನಿನ್ನ ಪಾದಕ್ಕರ್ಪಿಸುತ್ತೇನೆ. ಅವನ ತಲೆಯನ್ನು ಕಂಡಮೇಲೆ  ಬೇಕಿದ್ದರೆ,  ನೀನು ನಿನ್ನ ಕಣ್ಣೀರಿನಿಂದ ನಿನ್ನನ್ನು ತೊಯಿಸಿಕೋ. ಮೊದಲು ಸೇಡು ಆಮೇಲೆ ದುಃಖಾಪಶಮನ” ಎಂದ ಅರ್ಜುನ, ಕೃಷ್ಣನೊಂದಿಗೆ ಅಶ್ವತ್ಥಾಮಾಚಾರ್ಯರನ್ನು ಹುಡುಕಿಕೊಂಡು ಹೋಗುತ್ತಾನೆ.
ಅರ್ಜುನ ಅಶ್ವತ್ಥಾಮ ಅಡಗಿರುವ ಸ್ಥಳವನ್ನು ಗುರುತಿಸಿದಾಗ “ತನಗೆ ಇನ್ನು ಉಳಿಗಾಲವಿಲ್ಲ” ಎನ್ನುವುದನ್ನು ಮನಗೊಂಡ ಅಶ್ವತ್ಥಾಮ, ಮತ್ತೆ ಇನ್ನೊಂದು ದುಡುಕಿನ ಕೆಲಸವನ್ನು ಮಾಡುತ್ತಾನೆ. ಅದೇ ಬ್ರಹ್ಮಾಸ್ತ್ರ ಪ್ರಯೋಗ!  ಬ್ರಹ್ಮಾಸ್ತ್ರ ಅತ್ಯಂತ ಭಯಾನಕವಾದ ಅಸ್ತ್ರ. ಇದನ್ನು ಯಾರು ಪ್ರಯೋಗ ಮಾಡಿದನೋ ಅವನೇ ಪ್ರಾರ್ಥನೆ ಮಾಡಿ ಉಪಸಂಹಾರ ಮಾಡಬೇಕು ಹೊರತು,  ಇನ್ನೊಂದು ಅಸ್ತ್ರದಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಪಂಚರಾತ್ರದಲ್ಲಿ ಬರುವ ಅಹಿರ್ಬುಧ್ನ್ಯ ಸಂಹಿತೆಯಲ್ಲಿ ಬ್ರಹ್ಮಾಸ್ತ್ರದ ವಿವರಗಳಿವೆ. ಅಲ್ಲಿ ಹೇಳುವಂತೆ ಬ್ರಹ್ಮಾಸ್ತ್ರದ ಮಂತ್ರ ಬ್ರಹ್ಮಗಾಯತ್ತ್ರಿ. “ಗಾಯತ್ತ್ರಿ ಮಂತ್ರಸ್ಯ ಬ್ರಹ್ಮಾ ಋಷಿಃ, ನಾರಾಯಣೋ ದೇವತಾ”. ಇದನ್ನು ಗಾಯತ್ತ್ರಿ ಸಿದ್ಧಿ ಇಲ್ಲದೇ ಪ್ರಯೋಗಿಸಲು ಸಾಧ್ಯವಿಲ್ಲ.
ಎಲ್ಲಾ ಮಂತ್ರಗಳಿಗೆ ಮಾತೃ ಸ್ಥಾನದಲ್ಲಿದೆ ಗಾಯತ್ತ್ರಿ. ಈ ಮಂತ್ರ ಮಹಾ ಶಕ್ತಿಶಾಲಿ. ಅದನ್ನು ನಮ್ಮ ರಕ್ಷೆಗಾಗಿ ಬಳಸಬಹುದು ಅಥವಾ ನಾಶಕ್ಕಾಗಿ ಕೂಡಾ! ಹಿಂದಿನ ಕಾಲದಲ್ಲಿ ಅಸ್ತ್ರವಿದ್ಯೆ ಬಳಕೆಯಲ್ಲಿತ್ತು. ಶಸ್ತ್ರ ಎಂದರೆ ಒಂದು ಆಯುಧವನ್ನು ನೇರವಾಗಿ ಬಳಸುವುದು. ಆದರೆ ಅಸ್ತ್ರ ಎಂದರೆ ಯಾವುದೇ ಒಂದು ವಸ್ತುವಿಗೆ ವಿಶಿಷ್ಠ ಮಂತ್ರವನ್ನು ಅಭಿಮಂತ್ರಣ ಮಾಡಿ ಪ್ರಯೋಗ ಮಾಡುವುದು. ಹೀಗಾಗಿ ಮುಖ್ಯವಾಗಿ ಅಸ್ತ್ರ ವಿದ್ಯೆ ಬ್ರಾಹ್ಮಣರ ಕೈಯಲ್ಲಿತ್ತು ಮತ್ತು ಅವರಿಂದ ಅದನ್ನು ಕ್ಷತ್ರಿಯರು ಕಲಿಯುತ್ತಿದ್ದರು. ಬ್ರಹ್ಮಾಸ್ತ್ರ ಮಹಾ ಭಯಂಕರವಾದ ಅಸ್ತ್ರವಾಗಿರುವುದರಿಂದ ಅದರ ಪ್ರಯೋಗ ನಿಷೇಧಿಸಿದ್ದರು. ತೀರಾ ಅನಿವಾರ್ಯವಲ್ಲದ ಹೊರತು ಅದನ್ನು ಪ್ರಯೋಗಿಸುವಂತಿರಲಿಲ್ಲ. ದ್ರೋಣಾಚಾರ್ಯರು ಮೊದಲು ಈ ವಿದ್ಯೆಯನ್ನು ಅರ್ಜುನನಿಗೆ ಹೇಳಿ ಕೊಟ್ಟರು. ಅವರಿಗೆ ತನ್ನ ಮಗನ ಚಪಲ ಬುದ್ಧಿಯ ಅರಿವಿತ್ತು. ಅದಕ್ಕಾಗಿ  ಅಶ್ವತ್ಥಾಮನಿಗೆ ಈ ವಿದ್ಯೆಯನ್ನು ಮೊದಲು ಹೇಳಿರಲಿಲ್ಲ. ಆದರೆ ಅರ್ಜುನನಿಗೆ ಹೇಳಿದುದರಿಂದ ತನಗೂ ಹೇಳಿಕೊಡಬೇಕು ಎಂದು ಆತ ಹಠತೊಟ್ಟದ್ದರಿಂದ, ಆತನಿಗೆ ಬ್ರಹ್ಮಾಸ್ತ್ರ ಪ್ರಯೋಗವನ್ನು ಉಪದೇಶಿಸಿದರು. ಆದರೆ ಉಪಸಂಹಾರ ಹೇಳಿಕೊಡಲಿಲ್ಲ. ಅಸ್ತ್ರವನ್ನು ಹಿಂದೆ ಪಡೆಯಲು ತಿಳಿಯದೇ ಅದನ್ನು ಪ್ರಯೋಗಿಸುವಂತಿಲ್ಲ. ಆದರೆ ಇಲ್ಲಿ ಅಶ್ವತ್ಥಾಮರು ಬ್ರಹ್ಮಾಸ್ತ್ರವನ್ನು ಹಿಂದೆ ಪಡೆಯಲು ತಿಳಿಯದಿದ್ದರೂ ಕೂಡಾ, ಅದನ್ನು ಪ್ರಯೋಗಿಸಿದರು! ಇದು ಅವರು ತಮ್ಮ ಜೀವನದಲ್ಲಿ  ಮಾಡಿದ ಅತ್ಯಂತ ದೊಡ್ಡ ದುಡುಕು. 

No comments:

Post a Comment