Monday, February 25, 2013

Shrimad BhAgavata in Kannada -Skandha-01-Ch-08(01)


ಅಷ್ಠಮೋಧ್ಯಾಯಃ

ಸೂತ ಉವಾಚ
ಪುತ್ರಶೋಕಾತುರಾಃ ಸರ್ವೇ ಪಾಂಡವಾಃ ಸಹ ಕೃಷ್ಣಯಾ
ಸ್ವಾನಾಂ ಮೃತಾನಾಂ ಯತ್ ಕೃತ್ಯಂ ಚಕ್ರುರ್ನಿರ್ಹರಣಾದಿಕಮ್ 

ಅಶ್ವತ್ಥಾಮ ನಿಗ್ರಹದ ನಂತರ ತಮ್ಮ ಮಕ್ಕಳು, ಬಂಧು-ಬಳಗವನ್ನು ಕಳೆದುಕೊಂಡ ಪಾಂಡವರು, ದ್ರೌಪದಿ ಸಮೇತರಾಗಿ ಬಂದು, ಎಲ್ಲರ ಉತ್ತರಕ್ರಿಯೆ, ಶ್ರಾದ್ಧ ಕರ್ಮಾದಿಗಳಲ್ಲಿ ತೊಡಗುತ್ತಾರೆ. ಈ ರೀತಿ ಜಲಾಂಜಲಿ ಕೊಡುವಾಗ ನಡೆದ ಒಂದು ಘಟನೆಯನ್ನು ಭಾಗವತದಲ್ಲಿ ವರ್ಣಿಸಿಲ್ಲವಾದರೂ, ನಾವಿಲ್ಲಿ, ಮಹಾಭಾರತದಲ್ಲಿ ಬಂದಿರುವ ಆ ವಿವರಣೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ಜಲಾಂಜಲಿ ಕೊಡುವ ಹತ್ತನೇ ದಿನವನ್ನು ದಶಾಂಜಲಿ ಎನ್ನುತ್ತಾರೆ.  ಆ ದಿನ ಜಲಾಂಜಲಿ ಕೊಡಲು ಹೋಗಿದ್ದಾಗ, ಅಲ್ಲಿಯ ತನಕ ಸುಮ್ಮನಿದ್ದ ಕುಂತಿ ಹೇಳುತ್ತಾಳೆ: “ಅಪ್ಪಾ, ಕರ್ಣನಿಗೂ ಕೂಡಾ ಜಲಾಂಜಲಿ ಕೊಟ್ಟುಬಿಡಿ” ಎಂದು! ಈ ಮಾತನ್ನು ಕೇಳಿ ಧರ್ಮರಾಯನಿಗೆ ಆಶ್ಚರ್ಯವಾಗುತ್ತದೆ. ಆತ ಕೇಳುತ್ತಾನೆ: “ನಮ್ಮ ಪರಮ ಶತ್ರು ಆತ. ದುರ್ಯೋಧನನಿಗಿಂತ ಹೆಚ್ಚಾಗಿ ಹಠತೊಟ್ಟು ಯುದ್ಧ ಮಾಡಿಸಿದವನಾತ. ದ್ರೌಪದಿಯನ್ನು ಸಭೆಗೆಳೆದು ತರಲು ಮೂಲ ಕಾರಣ ಕರ್ಣ. ಅಂತವನಿಗೆ ನಾವೇಕೆ ಜಲಾಂಜಲಿ ಕೊಡಬೇಕು” ಎಂದು. ಪಾಪ, ಕುಂತಿ ಅದೆಷ್ಟು ದಿನ ಗುಟ್ಟು ಮಾಡಿಯಾಳು ಹೇಳಿ? ಹೆತ್ತ ಕರುಳಲ್ಲವೇ ಅದು? ಆಕೆ ಹೇಳುತ್ತಾಳೆ: “ಕರ್ಣ ನಿಮ್ಮ ಶತ್ರು ಅಲ್ಲ! ಆತ ನನ್ನ ಮಗ. ನಿನ್ನ ಅಣ್ಣ” ಎಂದು. ಯಾವುದನ್ನು ಸಮಾಜದ ಅಪವಾದಕ್ಕೆ ಹೆದರಿ ಮುಚ್ಚಿಟ್ಟಿದ್ದಳೋ, ಅದನ್ನು ಇಲ್ಲಿ ‘ಕರ್ಣನಿಗೆ ಜಲಾಂಜಲಿ ಸಿಗಲಿ’ ಎನ್ನುವ ಉದ್ದೇಶದಿಂದ ಹೊರಗೆಡಹುತ್ತಾಳೆ ಕುಂತಿ. ಈ ಮಾತನ್ನು ಕೇಳಿದ ಧರ್ಮರಾಯನಿಗೆ ತಡೆಯಲಾಗುವುದಿಲ್ಲ. ಆತ ಹೇಳುತ್ತಾನೆ: “ಎಂತಹ ಕ್ರೂರ ಹೃದಯ ನಿನ್ನದು? ನಿನ್ನ ಮಕ್ಕಳ ಕೈಯಿಂದಲೇ ನಿನ್ನ ಮಗನನ್ನು ಕೊಲ್ಲಿಸಿದೆಯ? ಈ ಮಾತನ್ನು ನೀನು ಮೊದಲೇ ಏಕೆ ಹೇಳಲಿಲ್ಲ? ನಮ್ಮ ಹಿರಿಯಣ್ಣ ಆತ ಎಂದು ತಿಳಿದಿದ್ದರೆ ನಾವು ಯುದ್ಧ ಮಾಡುತ್ತಿದ್ದೆವೇ? ನೀನಿಷ್ಟು ಕ್ರೂರಳಾಗಬಾರದಿತ್ತು ತಾಯಿ” ಎಂದು. ಧರ್ಮರಾಯನ ಮಾತಿಗೆ ಉತ್ತರವಾಗಿ ಕುಂತಿ ಹೇಳುತ್ತಾಳೆ: “ನನ್ನ ನಿರ್ಧಾರಕ್ಕೆ ಅನೇಕ ಕಾರಣಗಳಿವೆ. ಈ ವಿಚಾರವನ್ನು ಹೇಳಬೇಕು ಎಂದು ಎಣಿಸಿದೆ. ಆದರೆ ಕರ್ಣ ಅದಾಗಲೇ ಅನ್ಯಾಯದ ಮಾರ್ಗ ಹಿಡಿದಿದ್ದ. ಅವನು ಮಾಡಿದ ಅನ್ಯಾಯಕ್ಕೆ ಶಿಕ್ಷೆ ಸಿಗಲೇಬೇಕು. ಅದಕ್ಕಾಗಿ ಈವರೆಗೆ ಈ ವಿಚಾರವನ್ನು ಗುಟ್ಟಾಗಿಸಿದೆ” ಎಂದು.
ಕುಂತಿಯ ಮಾತನ್ನು ಕೇಳಿ ಧರ್ಮರಾಯನಿಗೆ ದುಃಖ ತಡೆಯಲಾಗುವುದಿಲ್ಲ. ಕುಂತಿಯಷ್ಟು ಗಟ್ಟಿ ಹೃದಯ ಆತನದಲ್ಲ. ಈ ಸಂದರ್ಭದಲ್ಲೇ ಆತ ಸಮಸ್ತ ಸ್ತ್ರೀ ಸಮುದಾಯಕ್ಕೊಂದು ಶಾಪ ಕೊಡುತ್ತಾನೆ. ಆತ ಹೇಳುತ್ತಾನೆ: “ಇಷ್ಟು ಕಾಲ ಈ ವಿಷಯವನ್ನು ನೀನು ಯಾರಿಗೂ ಹೇಳಲಿಲ್ಲ. ಇದರಿಂದಾಗಿ ನಾವು ನಮ್ಮ ಅಣ್ಣನ ವಿರುದ್ಧ ಹೋರಾಡಿ ಅವನನ್ನು ಕೊಲ್ಲುವಂತಾಯಿತು. ಇದಕ್ಕೆಲ್ಲಾ ಕಾರಣ ‘ನಿನ್ನ ಗುಟ್ಟು’. ಹಾಗಾಗಿ ಇನ್ನು ಮುಂದೆ ಹೆಂಗಸರ ಬಾಯಿಯಲ್ಲಿ ಯಾವ ಗುಟ್ಟೂ ಉಳಿಯದಿರಲಿ” ಎಂದು ನೋವಿನಿಂದ ಶಾಪ ಕೊಡುತ್ತಾನೆ.
ಮೇಲೆ ವಿವರಿಸಿದ ಘಟನೆ ಅಲ್ಲದೇ, ಯುದ್ಧ ಕಳೆದ ಮೇಲೆ, ಕೃಷ್ಣ ಮತ್ತು ವ್ಯಾಸರು ಮಾಡಿದ ಒಂದು ದೊಡ್ಡ ಕಾರ್ಯವಿದೆ. ಅದೇನೆಂದರೆ: ಗಾಂಧಾರಿಯನ್ನು  ವೇದವ್ಯಾಸರು ಮತ್ತು ದ್ರೌಪದಿಯನ್ನು ಕೃಷ್ಣ  ರಣರಂಗಕ್ಕೆ ಕರೆದುಕೊಂಡು ಹೋಗಿರುವುದು. ಮಹಾಭಾರತ ಗಾಂಧಾರಿಯ ರಣರಂಗ ಭೇಟಿಯನ್ನು ವಿಸ್ತಾರವಾಗಿ ವಿವರಿಸಿದರೆ, ಭಾಗವತ ದ್ರೌಪದಿಯ ಯುದ್ಧರಂಗದ ನೋಟದ ಅಭಿವ್ಯಕ್ತಿಯನ್ನು ಚಿತ್ರಿಸುತ್ತದೆ. ಇಲ್ಲಿ ನಾವು ಮಹಾಭಾರತದಲ್ಲಿ ಬಂದಿರುವ  ಗಾಂಧಾರಿಯ ಕಥೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ವೇದವ್ಯಾಸರು ಗಾಂಧಾರಿಯನ್ನು ಯುದ್ಧರಂಗಕ್ಕೆ ಕರೆದುಕೊಂಡು ಹೋಗಿ, ಅವಳಿಗೆ ದೃಷ್ಟಿ ಕೊಟ್ಟು ಹೇಳುತ್ತಾರೆ: “ನೋಡು ನಿನ್ನ ಮಕ್ಕಳನ್ನು” ಎಂದು. ಎಂತಹ ವಿಚಿತ್ರ! ಮದುವೆಗೆ ಮೊದಲು ಕಣ್ಣಿಗೆ ಕಣ್ಪಟ್ಟಿ ಕಟ್ಟಿಕೊಂಡಿದ್ದ ಗಾಂಧಾರಿ, ತನ್ನನ್ನು ಕೈಹಿಡಿದ ಗಂಡನನ್ನಾಗಲೀ, ತಾನು ಹೆತ್ತ ಮಕ್ಕಳನ್ನಾಗಲೀ, ತಾನು ಮದುವೆಯಾಗಿ ಬಂದ ಊರನ್ನಾಗಲೀ ನೋಡಿಲ್ಲ. ಆದರೆ ಆಕೆ ಇಂದು ನೋಡುತ್ತಿರುವುದು ತನ್ನ ಮಕ್ಕಳ ಹೆಣವನ್ನು! ಗಾಂಧಾರಿ ಒಬ್ಬ ಮಹಾಮಹಿಳೆ. ಆಕೆಯ ಮನೋಧೈರ್ಯ, ಸಹನಾಶಕ್ತಿ, ಪ್ರತಿಯೊಂದನ್ನೂ ವಸ್ತುನಿಷ್ಠವಾಗಿ ನೋಡಿ ತಟಸ್ಥವಾಗಿ ಯೋಚಿಸುವ ನಿಲುವು ಅದ್ಭುತ. ಆಕೆ ಅಲ್ಲಿ ಬಿದ್ದಿರುವ ತನ್ನ ಮಕ್ಕಳ, ಬಂಧು-ಬಾಂಧವರ ಹೆಣವನ್ನು ನೋಡುತ್ತಾಳೆ. ಅಲ್ಲಿ ಒಂದು ದೇಹದ ಕೈ ದೇಹದಿಂದ ಬೇರೆಯಾಗಿರುತ್ತದೆ ಮತ್ತು ಅದನ್ನು ನರಿಯೊಂದು ತಿನ್ನುತ್ತಿರುತ್ತದೆ. ಈ ಭೀಕರ ದೃಶ್ಯವನ್ನು ನೋಡಿ ಆಕೆ ಹೇಳುತ್ತಾಳೆ: “ಬದುಕಿದ್ದಾಗ ಸಾವಿರಾರು ಗೋವುಗಳನ್ನು ದಾನಮಾಡಿದ ಕೈ, ಎದುರಾಳಿ ಶತ್ರುಗಳ ಸೊಕ್ಕು ಮುರಿದ ಕೈ ಇಂದು ನರಿ-ನಾಯಿ ಪಾಲಾಗಿದೆ” ಎಂದು.  ಆಕೆ ಇನ್ನೊಂದು ವಿಚಿತ್ರ ಮಾತನ್ನಾಡುತ್ತಾಳೆ. ಆಕೆ ಹೇಳುತ್ತಾಳೆ: ಬದುಕಿದ್ದಾಗ ಸ್ತ್ರೀಭೋಗವೇ ಸರ್ವಸ್ವ ಎಂದು ಅದರಲ್ಲೇ  ಮೈಮರೆತ ಕೈಯನ್ನು ಇಂದು ನರಿಗಳು ಕಿತ್ತುತಿನ್ನುತ್ತಿವೆ” ಎಂದು. ಹೀಗೆ ಮಹಾಭಾರತದ ಸ್ತ್ರೀವಿಲಾಪ ಪರ್ವದಲ್ಲಿ ಗಾಂಧಾರಿಯ ನೋಟದಲ್ಲಿ ರಣರಂಗದ ಅಭಿವ್ಯಕ್ತಿ ಚಿತ್ರಿತವಾಗಿದೆ. ಬನ್ನಿ, ಈ ಹಿನ್ನೆಲೆಯೊಂದಿಗೆ ಭಾಗವದದಲ್ಲಿ ‘ಕೃಷ್ಣ ದ್ರೌಪದಿಗೆ ರಣರಂಗವನ್ನು ತೋರಿಸಿದ ಚಿತ್ರಣವನ್ನು’ ನೋಡೋಣ.

ಅಥೋ ನಿಶಾಮಯಾಮಾಸ ಕೃಷ್ಣಾಯೈ ಭಗವಾನ್ ಪುರಾ
ಪತಿತಾಯಾಃ ಪಾದಮೂಲೇ ರುದಂತ್ಯಾ ಯತ್ ಪ್ರತಿಶ್ರುತಮ್

ಪಶ್ಯ ರಾಜ್ಞ್ಯರಿದಾರಾಂಸ್ತೇ ರುದತೋ ಮುಕ್ತಮೂರ್ಧಜಾನ್
ಆಲಿಂಗ್ಯ ಸ್ವಪತೀನ್ ಭೀಮಗದಾಭಗ್ನೋರುವಕ್ಷಸಃ 

ದ್ರೌಪದಿಯನ್ನು ಕೃಷ್ಣ ಯುದ್ಧರಂಗಕ್ಕೆ ಕರೆದುಕೊಂಡು ಹೋಗುತ್ತಾನೆ. ಮೇಲ್ನೋಟಕ್ಕೆ ಇದು ನಮಗೆ ಆಶ್ಚರ್ಯವನ್ನುಂಟುಮಾಡುವ ವಿಷಯ. ಹೆಣದ ರಾಶಿಗಳನ್ನು ನೋಡಲು ಹೆಣ್ಣೊಬ್ಬಳನ್ನು ಕೃಷ್ಣ ಏಕೆ ಯುದ್ಧರಂಗಕ್ಕೆ ಕರೆದುಕೊಂಡು ಹೋದ ಎನ್ನುವುದು ಇಲ್ಲಿ ನಮ್ಮ ಪ್ರಶ್ನೆಯಾದರೆ, ಅದಕ್ಕೊಂದು ಹಿನ್ನೆಲೆ ಇದೆ. ಈ ಹಿಂದೆ ಹೇಳಿದಂತೆ: ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿ, ತನ್ನ ಬಿಚ್ಚಿದ ತಲೆಮುಡಿಯನ್ನು ಹಿಡಿದುಕೊಂಡು ಬಂದು  ಹೇಳುತ್ತಾಳೆ: ರಾಜಸೂಯದ ಪವಿತ್ರ ತೀರ್ಥದಿಂದ ಅಭಿಷೇಕವಾಗಿದ್ದ ಈ ಕೂದಲನ್ನು ನೀಚ ದುಶ್ಯಾಸನ ಮುಟ್ಟಿ ಅಪವಿತ್ರಗೊಳಿಸಿದ. ಇದರಿಂದ ನನಗಾದ ನೋವು ಎಷ್ಟೆಂಬುದು ನಿನಗೆ ತಿಳಿದಿದೆ” ಎಂದು ಹೇಳಿ ಬಗ್ಗಿ ನಮಸ್ಕರಿಸುತ್ತಾಳೆ ದ್ರೌಪದಿ. ಹೀಗೆ ನಮಸ್ಕರಿಸುವಾಗ ಆಕೆಯ ಕಣ್ಣೀರು ಕೃಷ್ಣನ ಪಾದದ ಮೇಲೆ ಬೀಳುತ್ತದೆ. ಆಗ ಕೃಷ್ಣ ಹೇಳುತ್ತಾನೆ: ಕಣ್ಣೀರು ಒರೆಸಿಕೋ. ಯಾರ ಮೇಲೆ ಕೋಪದಿಂದ ಕಣ್ಣೀರು ಸುರಿಸುತ್ತಿರುವೆಯೋ, ಅವರು ದುರಂತದ ಫಲವನ್ನನುಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು. ಈ ಮಾತಿಗನುಗುಣವಾಗಿ  ಇಲ್ಲಿ ಕೃಷ್ಣ ದ್ರೌಪದಿಯನ್ನು ರಣರಂಗಕ್ಕೆ ಕರೆದು ತಂದು ಹೇಳುತ್ತಾನೆ: “ನೋಡು ನಿನ್ನ ಕಣ್ಣೀರಿನ ಫಲ. ಇದು ಭೀಮನ ಗದೆಯ ಅಥವಾ ಅರ್ಜುನನ ಗಾಂಢೀವದ ಆಘಾತದ ಫಲವಲ್ಲ. ಇದು ನಿನ್ನ ಕಣ್ಣೀರಿನ ಫಲ” ಎಂದು.  ಒಬ್ಬ ಪತಿವೃತೆ ಹೆಣ್ಣಿನ ಕಣ್ಣೀರಿಗಿರುವ ಶಕ್ತಿ ಪ್ರಪಂಚದ ಯಾವ ಆಯುಧಕ್ಕೂ ಇಲ್ಲ. ದ್ರೌಪದಿಯ ಕಣ್ಣೀರಿನ ಫಲವನ್ನು ಇಲ್ಲಿ ಕೃಷ್ಣ ಆಕೆಗೆ ತೋರಿಸುತ್ತಿದ್ದಾನೆ.
ಕೃಷ್ಣ ಹೇಳುತ್ತಾನೆ: “ನೀನು ಯಾರ ಮೇಲೆ ಕೋಪಿಸಿಕೊಂಡು ಕಣ್ಣೀರು ಸುರಿಸಿದೆಯೋ, ನೋಡು ಅವರ ಸ್ಥಿತಿಯನ್ನು. ಸತ್ತು ಬಿದ್ದಿರುವ ತಮ್ಮ ಗಂಡಂದಿರ ದೇಹದಮೇಲೆ ಬಿದ್ದು ಹೊರಳಾಡುತ್ತಿರುವ ಅವರ ಹೆಂಡಂದಿರರನ್ನು ನೋಡು. ಇದು ನಿನ್ನ ಕಣ್ಣೀರಿನ ಮತ್ತು ನಿನ್ನ ಕಣ್ಣೀರಿನಿಂದ ಜಾಗೃತವಾದ ಭೀಮನ ಗದೆಯ ಪ್ರಹಾರದ ಫಲ. ಭೀಮನ ಗದೆಯಿಂದ ಮುರಿದ ತೊಡೆ, ಒಡೆದ ಎದೆಯನ್ನು ನೋಡು” ಎಂದು ಕೃಷ್ಣ ದ್ರೌಪದಿಗೆ ರಣರಂಗದ ಆ ಭೀಕರ ದೃಶ್ಯವನ್ನು ತೋರಿಸಿದ.  

No comments:

Post a Comment