Saturday, February 2, 2013

Shrimad BhAgavata in Kannada -Skandha-01-Ch-03(08)


ಯತ್ರೇಮೇ ಸದಸದ್ರೂಪೇ ಪ್ರತಿಷಿದ್ಧೇ ಸ್ವಸಂವಿದಾ     
ಅವಿದ್ಯಯಾSSತ್ಮನಿ ಕೃತೇ ಇತಿ ತದ್  ಬ್ರಹ್ಮದರ್ಶನಮ್          ೩೩

ಭಗವಂತನ ರೂಪ ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಯಿಂದಾಗಲೀ, ಕಣ್ಣಿಗೆ ಕಾಣದ ಗಾಳಿ-ಆಕಾಶದಿಂದಾಗಲೀ ಆಗಿಲ್ಲ. ಜ್ಞಾನಸ್ವರೂಪನಾದ ಆತನಲ್ಲಿ ಈ ಪಾಂಚಭೌತಿಕತ್ವ ಇಲ್ಲ. ರಾಮ-ಕೃಷ್ಣಾದಿ ಅವತಾರ ರೂಪದಲ್ಲಿ ಭಗವಂತ ಪಾಂಚಭೌತಿಕ ಶರೀರ ತೊಟ್ಟು ಬಂದಿದ್ದ ಎನ್ನುವುದು ಕೇವಲ ಅಜ್ಞಾನಿಗಳ ಅರಿವು. “ಭಗವಂತ ಸತ್-ಅಸತ್ ರೂಪಗಳಿಂದ ಅತೀತನಾದ ಅಪ್ರಾಕೃತ ಜ್ಞಾನಸ್ವರೂಪ” ಎನ್ನುವ ಅರಿವೇ  ಭಗವಂತನ ಬಗೆಗಿನ ನಿಜವಾದ ಅರಿವು.    

ಯದ್ಯೇಷೋಪರತಾ ದೇವೀ ಮಾಯಾ ವೈಶಾರದೀ ಮತಿಃ       
ಸಂಪನ್ನ ಏವೇತಿ ವಿದುರ್ಮಹಿಮ್ನಿ ಸ್ವೇ ಮಹೀಯತೇ                 ೩೪

ಭಗವಂತನನ್ನು ಪಡೆಯಬೇಕಾದರೆ ಮೊದಲು ನಾವು ನಮ್ಮ ಅಜ್ಞಾನದ ಪೊರೆ ಕಳಚಿ ಭಗವಂತನನ್ನು ಅರಿಯಬೇಕು. ಭಗವಂತನ ಅರಿವಿನಿಂದಾಗಿ ಬರುವ ಜ್ಞಾನ ಮತ್ತು ಭಕ್ತಿಯಿಂದ ಭಗವಂತನಿಗೆ ನಮ್ಮ ಮೇಲೆ ಅನುಗ್ರಹ ಮೂಡಬೇಕು. ಭಕ್ತಿ-ಜ್ಞಾನ ಪಕ್ವಗೊಂಡ ನಮ್ಮನ್ನು ಬಿಡುಗಡೆಗೊಳಿಸಬೇಕು ಎನ್ನುವ ಇಚ್ಛೆ ಭಗವಂತನಲ್ಲಿ ಮೂಡಿದಾಗ, ಜೀವ ಭಗವಂತನಲ್ಲಿ ಸಂಪನ್ನನಾಗುತ್ತಾನೆ. ಭಗವಂತನನ್ನು ಪಡೆದ ಜೀವ ತನ್ನ ಸ್ವ-ಸಾಮರ್ಥ್ಯದಲ್ಲಿ, ತನ್ನ ಜ್ಞಾನಾನಂದ-ಸ್ವರೂಪದಲ್ಲೇ ಬೆಳಗುತ್ತಾ ಇರಬಲ್ಲ.  

ಏವಂ ಚ ಜನ್ಮಾನಿ ಕರ್ಮಾಣಿ ಹ್ಯಕರ್ತುರಜನಸ್ಯ ಚ     
ವರ್ಣಯಂತಿ ಸ್ಮ ಕವಯೋ ವೇದಗುಹ್ಯಾನಿ ಹೃತ್ಪತೇಃ              ೩೫

ಭಗವಂತನ ಅವತಾರದ ಕುರಿತಾದ ಶೌನಕಾದಿಗಳ ಪ್ರಶ್ನೆಗೆ ಸಂಕ್ಷಿಪ್ತ ಉತ್ತರ ಕೊಟ್ಟ ಸೂತರು, ಇಲ್ಲಿ  ಉಪಸಂಹಾರ ರೂಪವಾಗಿ ಹೇಳುತ್ತಾರೆ: “ಇದು ಭಗವಂತನ ಅವತಾರಗಳು ಮತ್ತು ಆ ಅವತಾರಗಳಲ್ಲಿ ಅವನು ಮಾಡಿದ ಲೀಲೆಗಳು. ಇವು ಹುಟ್ಟದವನ ಜನ್ಮಗಳು ಹಾಗೂ ಮಾಡದವನ ಕರ್ಮಗಳು. ಇದು ಜ್ಞಾನಿಗಳು ಹೇಳುವ ವೇದ ರಹಸ್ಯ” ಎಂದು.
ವೇದದಲ್ಲಿ ಹೇಳುವಂತೆ: “ಅಜಾಯಮಾನೋ ಬಹುಧಾ ವಿಜಾಯತೇ”. ಅಂದರೆ ಎಂದೂ ಹುಟ್ಟದವನು ಎಂದೆಂದೂ ಹುಟ್ಟುತ್ತಿರುತ್ತಾನೆ ಎಂದರ್ಥ. ನಮ್ಮ ಹುಟ್ಟು ಒಂದು ಬದ್ಧತೆ. ಆದರೆ ಭಗವಂತನ ಹುಟ್ಟು ಬದ್ಧತೆಯಲ್ಲ. ಮಾಡಿದ ಪ್ರಾರಾಬ್ಧಕರ್ಮಕ್ಕಾಗಿ ನಾವು ಹುಟ್ಟಿದರೆ, ಭಗವಂತ ಕೇವಲ ನಮಗಾಗಿ ನಮ್ಮ ಹೃತ್ಕಮಲದಲ್ಲಿ ನೆಲೆಸಿ ನಮ್ಮೊಂದಿಗೆ ಹುಟ್ಟುತ್ತಾನೆ. ಇಂತಹ ಭಗವಂತನಿಗೆ ಪ್ರಯತ್ನ-ಪ್ರಾಯಾಸವಿಲ್ಲ. ಸುಖ-ದುಃಖದ ಲೇಪವಿಲ್ಲ. ಹಾಗಾಗಿ ಇಲ್ಲಿ “ಹುಟ್ಟದವನ ಜನ್ಮಗಳು-ಮಾಡದವನ ಕರ್ಮಗಳು” ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ವೇದ ಗುಹ್ಯ.

ಧರ್ಮಕ್ಕೆ ಯಾವುದು ನೆಲೆ?

ಈ ಹಿಂದೆ ಹೇಳಿದಂತೆ ಶೌನಕಾಕಾದಿಗಳು “ಕೃಷ್ಣ ಭೂಮಿಯಲ್ಲಿ ಅವತಾರ ಸಮಾಪ್ತಿ ಮಾಡಿದ ಮೇಲೆ, ಧರ್ಮಕ್ಕೆ ನೆಲೆ ಯಾವುದು?” ಎನ್ನುವ ಪ್ರಶ್ನೆ ಹಾಕಿದ್ದರು. ಈ ಪ್ರಶ್ನೆಗೆ ಉಗ್ರಶ್ರವಸ್   ಇಲ್ಲಿ ಉತ್ತರ ನೀಡಿದ್ದಾರೆ.

ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್
ಉತ್ತಮಶ್ಲೋಕಚರಿತಂ ಚಕಾರ ಭಗವಾನೃಷಿಃ             ೪೦

ಭಗವಂತನ ಜನ್ಮ-ಕರ್ಮಗಳನ್ನು, ವೇದದ ಮರ್ಮವನ್ನು ಜನಾಂಗಕ್ಕೆ ತಿಳಿಸುವುದಕ್ಕೋಸ್ಕರ ವ್ಯಾಸರು ಭಾಗವತ ರಚನೆ ಮಾಡಿದರು. ಭಾಗವತ ವೇದಕ್ಕೆ ಸಮಾನವಾದುದು. ಅದಕ್ಕಾಗಿ ಇದನ್ನು ಪಂಚಮವೇದ ಎಂದೂ ಕರೆಯುತ್ತಾರೆ. ಭಾಗವತ- ಎಲ್ಲರಿಂದಲೂ ಸ್ತುತ್ಯನಾದ, ಎಲ್ಲಾ  ಶಬ್ದಗಳಿಂದ ವರ್ಣನೀಯನಾದ ‘ಉತ್ತಮಶ್ಲೋಕ’ ಭಗವಂತನ ಚರಿತೆ. ಸ್ವತಃ ಭಗವಂತನೇ ವ್ಯಾಸ ಋಷಿಯಾಗಿ ಬಂದು ಈ ಗ್ರಂಥವನ್ನು ರಚಿಸಿದ.

ಕೃಷ್ಣೇ ಸ್ವಧಾಮೋಪಗತೇ ಧರ್ಮಜ್ಞಾನಾದಿಭಿಃ ಸಹ     
ಕಲೌ ನಷ್ಟದೃಶಾಂ ಪುಂಸಾಂ ಪುರಾಣಾರ್ಕೋSಮುನೋದಿತಃ   ೪೫

ವ್ಯಾಸಾವತಾರ ಮತ್ತು ಕೃಷ್ಣಾವತಾರದ ನಡುವಿನ ಅಂತರ ಸುಮಾರು ೬೫೦ ವರ್ಷಗಳು. ಕೃಷ್ಣಾವತಾರಕ್ಕೆ ಮೊದಲು ಧರ್ಮದ ಹೊರೆಯನ್ನು ಭಗವಂತ ವ್ಯಾಸ ರೂಪದಲ್ಲಿ ಹೊತ್ತಿದ್ದ. ನಂತರ ಕೃಷ್ಣಾವತಾರವಾದಾಗ ಆ ಹೊರೆಯನ್ನು ಕೃಷ್ಣ ರೂಪದಲ್ಲಿ ಭಗವಂತ ಧರಿಸಿದ. ಕೃಷ್ಣ ಲೋಕದಲ್ಲಿ ತನ್ನ ಜ್ಞಾನದ ಹಿರಿಮೆ, ಆನಂದದ ವೈಭವ ಎಲ್ಲವನ್ನೂ ಸಂಕ್ಷೇಪಗೊಳಿಸಿ ಹೊರಟುಹೋದಾಗ, ಲೋಕದ ಜನರಿಗೆ ಕಣ್ಣು ಕಟ್ಟಿದಂತಾಯಿತು. ಇಂತಹ ಸಮಯದಲ್ಲಿ ಮರಳಿ ಭಗವಂತ ವ್ಯಾಸ ರೂಪದಲ್ಲಿ ‘ಭಾಗವತ’ ಎನ್ನುವ ಸೂರ್ಯನ ಮೂಲಕ ತನ್ನ ಬೆಳಕನ್ನು ಹಾಯಿಸಿ, ಜನರ ಕಣ್ಣು ತೆರೆಸಿದ.
ವ್ಯಾಸರು ಇಂತಹ ಅಪೂರ್ವ ಗ್ರಂಥವನ್ನು ತನ್ನ ಮಗನಾದ ಶುಕಾಚಾರ್ಯರಿಗೆ ಉಪದೇಶ ಮಾಡಿದರು. ಅಂತಹ ಭಾಗವತವನ್ನು ಶುಕಾಚಾರ್ಯರು ಪರೀಕ್ಷಿತ ರಾಜನಿಗೆ ಉಪದೇಶ ಮಾಡಿದರು. “ಆ ಉಪದೇಶವನ್ನು  ನಾನು ಪರೀಕ್ಷಿತ ರಾಜನೊಂದಿಗೆ ಕುಳಿತು ಕೇಳಿ ತಿಳಿದು, ಇಂದು ನಿಮಗೆ ಹೇಳುತ್ತಿದ್ದೇನೆ” ಎಂದು ಶೌನಕಾದಿಗಳಿಗೆ ಸೂತರು ಭಾಗವತದ ಹಿನ್ನೆಲೆಯನ್ನು ವಿವರಿಸಿದರು ಎನ್ನುವಲ್ಲಿಗೆ-ಈ ಅಧ್ಯಾಯ ಕೊನೆಗೊಳ್ಳುತ್ತದೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ತೃತೀಯೋSಧ್ಯಾಯಃ

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು.


*********

No comments:

Post a Comment