Sunday, March 3, 2024

Shrimad BhAgavata in Kannada -Skandha-03-Ch-03_02

ಉದ್ಧವ ವಿದುರ ಸಂವಾದ-ಜ್ಞಾನೋಪದೇಶ ಮತ್ತು ವಿರಕ್ತಿ

 

ಭಗವಾನಪಿ ವಿಶ್ವಾತ್ಮಾ ಲೋಕವೇದಪಥಾನುಗಃ ।

ಕಾಮಂ[1] ಸಿಷೇವೇ ದ್ವಾರ್ವತ್ಯಾಮಸಕ್ತಃ ಸಾಙ್ಖ್ಯಮಾಸ್ಥಿತಃ ॥೧೯॥

 

ಇಲ್ಲಿಯ ತನಕ ಸಂಸಾರ, ಮಕ್ಕಳು, ಈ ರೀತಿ ಒಂದು ರೀತಿ ಕೃಷ್ಣಕಥೆಯ ಲೌಕಿಕ ಮುಖವನ್ನು ಹೇಳಿದ್ದ ಉದ್ಧವ, ಭಗವಂತನ ಈ ಎಲ್ಲಾ ಲೀಲೆಗಳ ಹಿಂದಿನ ಸತ್ಯವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾನೆ. [ಈ ಶ್ಲೋಕದಲ್ಲಿ ‘ಅಪಿ’ ಎನ್ನುವ ಪದ ‘ಭಗವಾನ್’ ಮತ್ತು ‘ವಿಶ್ವಾತ್ಮಾ’ ಎನ್ನುವ ಎರಡು ಶಬ್ದಗಳ ನಡುವೆ ಬಂದಿದ್ದು, ಸಂಸ್ಕೃತ ಭಾಷೆಯ  ‘ದೇಹಲಿ ದೀಪ ನ್ಯಾಯ’  ಎನ್ನುವ ನಿಯಮದಂತೆ : ಅಪಿ ಶಬ್ದ ಈ ಎರಡೂ ಶಬ್ದಗಳಿಗೂ ಅನ್ವಯವಾಗುತ್ತದೆ. ಅಂದರೆ  ‘ಭಗವಾನಪಿ, ವಿಶ್ವಾತ್ಮಾಪಿ’ ಎಂದು ನಾವು ಅನ್ವಯ ಮಾಡಿಕೊಳ್ಳಬೇಕು]. ಜಗತ್ತಿನ ಎಲ್ಲಾ ಭಾಗ್ಯಗಳಿಗೂ ಒಡೆಯ[ಭಗವಾನ್]; ಸಮಸ್ತಜೀವಜಾತದ ಅಂತರ್ಯಾಮಿಯಾಗಿರುವ[ವಿಶ್ವಾತ್ಮಾ] ಶ್ರೀಕೃಷ್ಣನಿಗೆ, ಈ ಲೌಕಿಕ ಭೋಗದ ಅವಶ್ಯಕತೆ ಏನಿದೆ? ಎಲ್ಲವನ್ನೂ ಸೃಷ್ಟಿಮಾಡಿ, ಎಲ್ಲವುದರ ಒಳಗೂ ಹೊರಗೂ ತುಂಬಿ, ಕೊನೆಗೊಂದು ದಿನ ಎಲ್ಲವನ್ನೂ ಸಂಹಾರ ಮಾಡುವ ಶಕ್ತಿಯಾದ(ಆತ್ಮಾ) ಶ್ರೀಕೃಷ್ಣನಿಗೆ ಮದುವೆಯಾಗಿ, ಮಕ್ಕಳನ್ನು ಪಡೆದು ಏನೂ ಆಗಬೇಕಿಲ್ಲ. ಆದರೂ ಕೂಡಾ ಭಗವಂತ ಈ ಎಲ್ಲಾ ಲೀಲೆಗಳನ್ನಾಡಿದ. ಶಾಸ್ತ್ರದಲ್ಲಿ ಹೇಳುವಂತೆ: ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ. ಮಹಾಪುರುಷರು  ಭೂಮಿಯಲ್ಲಿ ಅವತರಿಸಿದಾಗ, ಅತಿಮಾನುಷ ಲೀಲೆಗಳನ್ನು ಹೊರತುಪಡಿಸಿದರೆ,  ಅವರು ಮನುಷ್ಯರಂತೆಯೇ ವರ್ತಿಸಿ ಮನುಷ್ಯರು ಏನು ಮಾಡಬೇಕು ಎನ್ನುವುದನ್ನು ತೋರಿಸಿ ಕೊಡುತ್ತಾರೆ. ಇದೇ ರೀತಿ ಶ್ರೀಕೃಷ್ಣ ಲೌಕಿಕವಾದ ಮತ್ತು ವೈದಿಕವಾದ ನಿಯಮಗಳಿಗೆ ಬದ್ದನಾಗಿದ್ದು ತನ್ನ ಲೀಲೆಗಳನ್ನು ತೋರಿದ.

ಯುದ್ಧದಲ್ಲಿ ತನ್ನ ಪ್ರಜೆಗಳಿಗೆ ತೊಂದರೆ ಆಗಬಾರದು ಎಂದು ಶ್ರೀಕೃಷ್ಣ ಸಮುದ್ರದ ನಡುವಿನಲ್ಲಿ ದ್ವಾರಾವತಿ ನಗರವನ್ನು ನಿರ್ಮಿಸಿದ.[ಕೃಷ್ಣಾವತಾರ ಸಮಾಪ್ತಿಯಾದ ಏಳನೇ ದಿನ ಈ ನಗರ ನೀರಿನಲ್ಲಿ ಮುಳುಗಿತು]. ಅಲ್ಲಿ ಶ್ರೀಕೃಷ್ಣ ಯಾವ ಲೇಪವೂ ಇಲ್ಲದೇ, ತಾನು ನಿರ್ಲಿಪ್ತನಾಗಿದ್ದು[ಸ್ವರೂಪಾನಂದದಲ್ಲಿದ್ದು], ತನ್ನನ್ನು ವರಿಸಿದ ರಾಜಕುಮಾರಿಯರಿಗೆ ದಾಂಪತ್ಯ ಸುಖವನ್ನು ಕರುಣಿಸಿದ. 

ಈ ಶ್ಲೋಕದಲ್ಲಿ ಬಳಕೆಯಾಗಿರುವ ‘ಸಾಂಖ್ಯ’ ಎನ್ನುವ ಪದ ಭಗವಂತನ ಸ್ವರೂಪಾನಂದವನ್ನು ಸೂಚಿಸುತ್ತದೆ. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯನಿರ್ಣಯದಲ್ಲಿ ಹೇಳಿರುವಂತೆ:  “ಕೇವಲಂ ಭಗವಜ್ಜ್ಞಾನಂ ಸಾಙ್ಖ್ಯಮಿತ್ಯಭಿಧೀಯತೇ” ಇತ್ಯಧ್ಯಾತ್ಮೇ. ಸ್ವರೂಪಾನಂದವೆನ್ನುವ ಅಪರಿಮಿತವಾದ ಆನಂದದ ಕಡಲಾದ ಭಗವಂತನಿಗೆ ವಿಷಯ ಭೋಗದಲ್ಲಿ  ಎಲ್ಲಿಯ ಆಸಕ್ತಿ?  ಆತ ಸದಾ ವಿಷಯವಿರಕ್ತ.

ಶ್ರೀಕೃಷ್ಣ ದ್ವಾರಕೆಯಿಂದ ಆಗಾಗ ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಬಂದವನು ಸುಮಾರು ಐದು ಆರು ತಿಂಗಳು ಹಸ್ತಿನಪುರದಲ್ಲೇ ನಿಲ್ಲುತ್ತಿದ್ದ. ಆ ಸಮಯದಲ್ಲಿ ದ್ವಾರಕೆಯ ಸಮಸ್ತ ಜನರೂ ಶ್ರೀಕೃಷ್ಣ ಹಿಂತಿರುಗಿ ಬರುವ ದಿನಕ್ಕಾಗಿ ಕಾಯುತ್ತಿದ್ದರು. ಶ್ರೀಕೃಷ್ಣ ಹಸ್ತಿನಪುರದಿಂದ ಹಿಂತಿರುಗಿ ಬರುವಾಗ ದ್ವಾರಕೆಯ ಸಮೀಪ ಬಂದು ತನ್ನ ಶಂಖನಾದ ಮಾಡುತ್ತಿದ್ದ. ಈ ಶಂಖನಾದ ಕೇಳಿದ ತಕ್ಷಣ ಇಡೀ ದ್ವಾರಕೆಯ ಜನ  ಶ್ರೀಕೃಷ್ಣನನ್ನು ಸ್ವಾಗತ ಮಾಡಲು ಓಡಿ ಬರುತ್ತಿದ್ದರು. ಈ ರೀತಿ ವಿಹಾರ ಮಾಡಿಕೊಂಡು ಶ್ರೀಕೃಷ್ಣ ದ್ವಾರಕೆಯಲ್ಲಿದ್ದ.

ಈ ಹಿಂದೆ ವಿವರಿಸಿದಂತೆ ಮಹಾಭಾರತ ಯುದ್ಧ ನಡೆದಾಗ ಶ್ರೀಕೃಷ್ಣನಿಗೆ ಸುಮಾರು ೭೦ ವರ್ಷ ವಯಸ್ಸು. ಯುದ್ಧ ನಡೆದು ಸುಮಾರು ಹತ್ತುವರ್ಷಗಳ ನಂತರ ಯಾದವರು ಋಷಿಶಾಪಕ್ಕೊಳಗಾಗುತ್ತಾರೆ. ಆದರೆ ಈ ಘಟನೆಗೂ ಮೊದಲೇ ಶ್ರೀಕೃಷ್ಣ ಮುಂದೆ ನಡೆಯಲಿರುವ ಘಟನೆಗಳ ಜೊತೆಗೆ ತನ್ನ ಅವತಾರ ಸಮಾಪ್ತಿ ವಿಷಯವನ್ನು ಉದ್ಧವನಿಗೆ ತಿಳಿಸಿದ್ದ. ಶ್ರೀಕೃಷ್ಣ ಉದ್ಧವನಿಗೆ ಅಧ್ಯಾತ್ಮದ ಉಪದೇಶ ನೀಡಿ, “ನೀನು ಬದರಿಗೆ ಹೋಗಿ ಈ ಜ್ಞಾನವನ್ನು ಅಲ್ಲಿರುವ ಋಷಿಗಳಿಗೆ ಬಿತ್ತರಿಸು” ಎಂದು ಹೇಳಿದ್ದ. ಶ್ರೀಕೃಷ್ಣನ ಸೂಚನೆಯಂತೆ ಉದ್ಧವ ಬದರಿಗೆ ಹೋಗಿದ್ದರೂ ಅಲ್ಲೇ ನಿಲ್ಲದೆ, ಆಗಾಗ  ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿರುವ ಸಮಯ ಸಮೀಪಿಸುತ್ತಿರುವ ಕಾಲದಲ್ಲಿ ಉದ್ಧವ ಶ್ರೀಕೃಷ್ಣನ ಜೊತೆಗಿದ್ದ. ಹೀಗಾಗಿ ಅವತಾರ ಸಮಾಪ್ತಿಗೂ ಮೊದಲು ಶ್ರೀಕೃಷ್ಣ ಉದ್ಧವನಿಗೆ ಮತ್ತೆ ಉಪದೇಶ ನೀಡಿದ. ಇದೇ ಸಮಯದಲ್ಲಿ ಶ್ರೀಕೃಷ್ಣನನ್ನು ಕಾಣಲು ಅಲ್ಲಿಗೆ  ಮೈತ್ರೇಯ ಬರುತ್ತಾನೆ. ಶ್ರೀಕೃಷ್ಣ ಉದ್ಧವನ ಜೊತೆಗೆ ಮೈತ್ರೇಯನಿಗೂ ಕೂಡಾ ಮುಂದೆ ನಡೆಯಲಿರುವ ತನ್ನ ಅವತಾರ ಸಮಾಪ್ತಿ ವಿಷಯವನ್ನು ಹೇಳಿ,  ಸೃಷ್ಟಿಯ ಆದಿಯಲ್ಲಿ ತಾನು ಚತುರ್ಮುಖನಿಗೆ ನೀಡಿದ ಜ್ಞಾನವನ್ನು ಅವರಿಗೆ ಉಪದೇಶಿಸುತ್ತಾನೆ.  ಹೀಗೆ ಅವರಿಬ್ಬರಿಗೂ  ಅದ್ಭುತವಾದ ಆದಿವಿಜ್ಞಾನವನ್ನು ಉಪದೇಶ ಮಾಡಿದ ಶ್ರೀಕೃಷ್ಣ, ತನ್ನ ಅವತಾರ ಸಮಾಪ್ತಿ ವಿಷಯವನ್ನು ವಿದುರನಿಗೆ ತಿಳಿಸುವ ಜವಾಬ್ದಾರಿಯನ್ನು ಉದ್ಧವನಿಗೆ ನೀಡಿದರೆ,   ತಾನು ನೀಡಿದ ಅಧ್ಯಾತ್ಮ ವಿದ್ಯೆಯನ್ನು ವಿದುರನಿಗೆ ಉಪದೇಶಿಸುವಂತೆ ಮೈತ್ರೇಯನಿಗೆ ತಿಳಿಸುತ್ತಾನೆ.

 

ತಸ್ಯೇತ್ಥಂ[2] ರಮಮಾಣಸ್ಯ ಸಂವತ್ಸರಗಣಾನ್ ಬಹೂನ್ ।

ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ ॥೨೨॥

 

ತನ್ನ ಅವತಾರ ಸಮಾಪ್ತಿಯ ವಿಷಯವನ್ನು ವಿದುರನಿಗಲ್ಲದೆ ಇನ್ನಾರಿಗೂ ತಿಳಿಸಕೂಡದು ಎಂದು ಹೇಳಿದ ಶ್ರೀಕೃಷ್ಣ , ಉದ್ಧವ-ಮೈತ್ರೇಯರಿಗೆ ಆದಿವಿಜ್ಞಾನದ ಉಪದೇಶ ನೀಡಿ, ತಾನು ವಿರಕ್ತಿಯನ್ನು ತೋರಿದ. ಈ ಶ್ಲೋಕದಲ್ಲಿ “ಗೃಹಮೇಧೇಷು ಯೋಗಃ” ಎನ್ನುವ ಪದ ಬಳಕೆಯಾಗಿದೆ. ಶ್ರೀಕೃಷ್ಣ ದಾಂಪತ್ಯದ ಯೋಗದಲ್ಲಿದ್ದನೇ ಹೊರತು ಭೋಗದಲ್ಲಲ್ಲ.  ಭೋಗದಲ್ಲಿರುವ ಬಿಡಲಾರದ ಮಮತೆ ಯೋಗದಲ್ಲಿಲ್ಲ. ಹೀಗಾಗಿ ಅಂಟಿಸಿಕೊಳ್ಳದೇ ಮಾಡುವ ಗಾರ್ಹಪತ್ಯ(ದಾಂಪತ್ಯ ಜೀವನ) ಬ್ರಹ್ಮಚರ್ಯದಂತೆ  ಯೋಗವಾಗುತ್ತದೆ ಎನ್ನುವ ಸತ್ಯವನ್ನು ಈ ಶ್ಲೋಕ ನಮಗೆ ನೀಡುತ್ತದೆ.

“ಇಲ್ಲಿಯ ತನಕ ಬಾಹ್ಯವಾಗಿ ಸಂಸಾರ ರಸ ಭೋಗದಲ್ಲಿದ್ದವನಂತೆ ತೋರಿದ ಶ್ರೀಕೃಷ್ಣ,  ಬಳಿಕ ಎಲ್ಲದರಲ್ಲೂ ವಿರಕ್ತಿ ಹೊಂದಿದವನಂತೆ ತೋರಿಸಿಕೊಂಡ” ಎಂದಿದ್ದಾನೆ ಉದ್ಧವ.  ಈ ಶ್ಲೋಕದಲ್ಲಿ “ವಿರಾಗಃ ಸಮಜಾಯಾತ” ಎಂದು ಹೇಳಲಾಗಿದೆ. ಇದರ ಅರ್ಥ ವೈರಾಗ್ಯ ಉಂಟಾಯಿತು ಎಂದರ್ಥವಲ್ಲ. ಪಾದ್ಮಪುರಾಣದಲ್ಲಿ ಹೇಳುವಂತೆ: ‘ಸರ್ವದಾSಪಿ ವಿರಕ್ತಃ ಸನ್ ಭಾಸಯೀತ ವಿರಾಗವತ್[3] | ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ’. ಭಗವಂತ ಸದಾ ವಿಷಯ ವಿರಕ್ತ. ಆದರೆ ಲೋಕಕಲ್ಯಾಣಕ್ಕಾಗಿ ಈ ತನಕ ಆಸಕ್ತಿ ಉಳ್ಳವನಂತೆ ತೋರಿಸಿಕೊಂಡಿದ್ದ ಆತ ಬಳಿಕ ವಿರಕ್ತನಾಗಿ ತೋರಿಸಿಕೊಂಡ.

 

 ದೈವಾಧೀನೇಷು ಕಾಮೇಷು ದೈವಾಧೀನಃ ಸ್ವಯಂ ಪುಮಾನ್ ।

ಕೋ ವಿಸ್ರಮ್ಭೇತ ಯೋಗೇನ ಯೋಗೇಶ್ವರಮನುವ್ರತಃ ॥೨೩॥

 

ಭಗವಂತನ ವಿರಕ್ತಿಯ ಕುರಿತು ಹೇಳುತ್ತಾ ಇಲ್ಲಿ ಒಂದು ಸುಂದರವಾದ ವ್ಯಾಖ್ಯಾನವನ್ನು ಉದ್ಧವನ ಮುಖೇನ ವ್ಯಾಸರು ನೀಡಿದ್ದಾರೆ. ಮನುಷ್ಯನಿಗೆ ಬಯಕೆ/ಕಾಮ ಸರ್ವೇ ಸಾಮಾನ್ಯ. ಆದರೆ ಆಸೆಪಟ್ಟಿದ್ದೆಲ್ಲಾ ಆತನಿಗೆ ಸಿಗುವುದಿಲ್ಲ. ಮನುಷ್ಯ ಬಯಸಬಹುದು, ಆದರೆ ಸಿಗುವುದು-ಬಿಡುವುದು ದೈವಾದೀನ. ನಮ್ಮ ಹಣೆಬರಹ ಏನಿದೆಯೋ ಅದಕ್ಕನುಗುಣವಾಗಿ, ಭಗವಂತನ ಸಂಕಲ್ಪದಂತೆ, ನಮಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕುತ್ತದೆ. ಹೀಗೆ ಎಷ್ಟು ಸುಖ-ದುಃಖದ ಯೋಗ ನಮ್ಮ ಪಾಲಿಗೆ ಬರೆದಿದೆಯೋ, ಅಷ್ಟೇ ನಮಗೆ ಸಿಗುತ್ತದೆ. ಹೀಗಿರುವಾಗ ‘ಕಾಮವೊಂದೇ ಪುರುಷಾರ್ಥಾ, ಉಳಿದುದನ್ನು ನಾನು ನಂಬುವುದಿಲ್ಲ’ ಎಂದು ಹೇಳುವುದು ಕೇವಲ  ಹುಚ್ಚುತನ.

ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದಿರುವುದೇ ಮನುಷ್ಯ ಕಾಮದ ಬಗ್ಗೆ ಹುಚ್ಚುಕಟ್ಟಲು ಮುಖ್ಯ ಕಾರಣ. ಯಾರು ಯೋಗ ಬಲದಿಂದ(ಚಿತ್ತವೃತ್ತಿ ನಿರೋಧದಿಂದ) ಎಲ್ಲಾ ಯೋಗಗಳ ಒಡೆಯನಾದ ಭಗವಂತನನ್ನು ನಂಬಿ ಬದುಕುತ್ತಾನೋ, ಆತನಿಗೆ ‘ಕಾಮ’ ಕ್ಷುಲ್ಲಕ ಎನಿಸುತ್ತದೆ. ಆದ್ದರಿಂದ ಅಂತಹ ಕಾಮದ ಬೆನ್ನು ಹತ್ತುವುದು ಎಷ್ಟು ವ್ಯರ್ಥ ಎನ್ನುವ ವಿಷಯವನ್ನು ಆತ ತಿಳಿದಿರುತ್ತಾನೆ.

ಜೀವನದಲ್ಲಿ ‘ಕಾಮ’ ಬೇಕು. ಆದರೆ ಮನುಷ್ಯ ಕಾಮದ ದಾಸನಾಗಬಾರದು. ಒಂದು ಕ್ಷಣದ ಆನಂದ ಪಡೆಯಲು ಹಾತೊರೆದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರಿದ್ದಾರೆ. ಇಷ್ಟೇ ಅಲ್ಲ, ದುಃಖ ಪಡುವುದೇ ಆನಂದ ಎನ್ನುವ ಭ್ರಮೆಯಲ್ಲಿ ಬದುಕುವ ಜನರೂ ಇದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಬದುಕನ್ನು ನೋಡಿದರೆ: ಯಾವುದನ್ನು ನಾವು ಸುಖ ಎಂದುಕೊಂಡಿದ್ದೆವೋ ಅದು ಬಹಳ ದುರ್ಬಲವಾದ ವಿಷಯ ಎನ್ನುವುದು ತಿಳಿಯುತ್ತದೆ. ಈ ಎಚ್ಚರದಿಂದ ಬದುಕನ್ನು ನೋಡಿದಾಗ  ಎಲ್ಲಕ್ಕಿಂತ ಆಚೆಗಿನ ಸತ್ಯದ ಅರಿವಾಗುತ್ತದೆ. ಆಗ ಸಿಗುವ ಆನಂದ/ಸುಖ ಅಪರಂಪಾರವಾದುದು.

 

 ತತಃ ಕತಿಪಯೈರ್ಮಾಸೈ ರ್ವೃಷ್ಣಿಭೋಜಾನ್ಧಕಾದಯಃ ।

 ಯಯುಃ ಪ್ರಭಾಸಂ ಸಂಹೃಷ್ಟಾ ರಥೈರ್ದೇವವಿಮೋಹಿತಾಃ ॥೨೫॥

 

 ತತ್ರ ಸ್ನಾತ್ವಾ ಪಿತೄನ್ ದೇವಾನ್ ಋಷೀಂಶ್ಚೈವ ತದಮ್ಭಸಾ ।

 ತರ್ಪಯಿತ್ವಾSಥ  ವಿಪ್ರೇಭ್ಯೋ ಗಾವೋ ಬಹುಗುಣಾ ದದುಃ ॥೨೬॥

 

 ಹಿರಣ್ಯಂ ರಜತಂ ಶಯ್ಯಾಂ ವಾಸಾಂಸ್ಯಜಿನಕಮ್ಬಳಾನ್ ।

 ಹಯಾನ್ ರಥಾನಿಭಾನ್ ಕನ್ಯಾಂ ಧರಾಂ ವೃತ್ತಿಕರೀಮಪಿ ॥೨೭॥

 

 ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಮ್ ।

 ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ ॥೨೮॥

 

ಮುಂದುವರಿದು ಉದ್ಧವ ಹೇಳುತ್ತಾನೆ: “ಕೆಲವು ತಿಂಗಳುಗಳ ಬಳಿಕ ಶ್ರೀಕೃಷ್ಣ ಯಾದವರೆಲ್ಲರಲ್ಲಿ  ‘ನಾವು ಪ್ರಭಾಸಕ್ಕೆ ಹೋಗಿ, ಅಲ್ಲಿ ಸಮುದ್ರ ಸ್ನಾನ ಮಾಡಿ ದಾನ-ಧರ್ಮ ಮಾಡೋಣ’ ಎಂದು ಹೇಳುತ್ತಾನೆ. ಆಗ ಎಲ್ಲಾ ಯಾದವರು ಕೃಷ್ಣನ ಮಾತನ್ನು ಒಪ್ಪಿ ಸಂತೋಷವಾಗಿ ಪ್ರಭಾಸಕ್ಕೆ ಹೋಗುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ಸ್ನಾನ ಮುಗಿಸಿದ ಆ ಎಲ್ಲಾ ಶೂರರು ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣಕೊಟ್ಟು, ಅನೇಕ ವಿಧದ ದಾನ-ಧರ್ಮಾದಿಗಳನ್ನು ಮಾಡುತ್ತಾರೆ”.

ಉದ್ಧವ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯಾದವರ ಪ್ರಭಾಸ ಯಾತ್ರೆಯ ವಿವರವನ್ನು ಭೂತಕಾಲದಲ್ಲಿ, ಈಗಾಗಲೇ ಘಟನೆ ನೆಡೆದು ಹೋದಂತೆ ವಿವರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಇದು ಈಗಾಗಲೇ ನಾವು ಮೊದಲ ಸ್ಕಂಧದಲ್ಲಿ(೧-೧-೬) ವಿವರಿಸಿದ ಪುರಾಣ ನಿರೂಪಣೆಯ ಏಳು ವಿಧದಲ್ಲಿ  ಒಂದಾದ ‘ವ್ಯತ್ಯಾಸ’ ಶೈಲಿಯ ನಿರೂಪಣೆ.  ಏಕೆ ಈ ರೀತಿ ವಿವರಿಸಿದ್ದಾರೆ ಎನ್ನುವುದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸುಂದರವಾಗಿ ವಿವರಿಸಿದ್ದಾರೆ. ಏಷ್ಯಚ್ಚ[4] ನಿಶ್ಚಿತಂ ಯತ್ ತದತೀತತ್ವೇನ ಭಣ್ಯತೇ । ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೋಹನಾಯ ಚ’[5] ॥ಇತಿ ನಾರದೀಯೇ[6]॥ ನಾರದೀಯ ಸಮ್ಮಿತದಲ್ಲಿ ಹೇಳಿರುವಂತೆ: ಈ ರೀತಿಯ ಪುರಾಣ ಪ್ರಸ್ತುತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. (೧). ಮುಂದೆ ಯಾವುದು ಖಚಿತವಾಗಿ ನಡೆಯುತ್ತದೆಯೋ ಅದನ್ನು ನಡೆದು ಹೋದ ಘಟನೆಯಂತೆ ಹೇಳುತ್ತಾರೆ  (೨). ಈ ಎಲ್ಲಾ ವಿದ್ಯಮಾನಗಳೂ ಪ್ರತಿಕಲ್ಪದಲ್ಲಿ  ನಡೆಯುವುದರಿಂದ ಹಿಂದಿನ ಕಲ್ಪದ ಘಟನೆಯ ದೃಷ್ಟಾಂತವಾಗಿ ಹೇಳುತ್ತಾರೆ ಹಾಗು (೩). ದುರ್ಜನರಿಗೆ ಪುರಾಣವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗಲಿ ಎಂದು ಈ ರೀತಿ  ಪ್ರಸ್ತುತಿ ಮಾಡಲಾಗುತ್ತದೆ.   

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ತೃತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು

 

*********

 




[1] “ಕಾಮಾನ್ “ ಎಂದು ಪ್ರಚಲಿತ ಪಾಠ

[2] “ತಸ್ಯೈವಮ್” – ಪಾಠಾನ್ತರ

[3] “ವಿರಾಗಿವತ್” – ಪ್ರಚಲಿತ ಪಾಠ

[4] “ಏಷ್ಯಂ” – ಎಂದು ಕೆಲವರು

[5] “ಮೋಹನಾಯ ವಾ” ಎಂದು ಕೆಲವರು

[6] “ಇತಿ ಸ್ಕಾನ್ದೇ” – ಪ್ರಚಲಿತ ಪಾಠ 

Wednesday, February 28, 2024

Shrimad BhAgavata in Kannada -Skandha-03-Ch-03_01

ತೃತೀಯೋSಧ್ಯಾಯಃ

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಅವತಾರ ಲೀಲೆಗಳು

ಉದ್ಧವ ಉವಾಚ

ಸಮಾಹುತಾ[1] ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್[2] ।

ಗಾನ್ಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ ಸುಪರ್ಣಃ ॥೦೩॥

 

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ[3] ಸವರ್ಣಮಾತ್ರಯೋಗ್ಯತಯಾ[4] ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾSSಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.

ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  

ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.

ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ[5]. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.

[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  

ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀ,  ಲಕ್ಷಣಾ ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್ ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.  ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ ಹುಟ್ಟಿದರೆ,  ಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು ‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.

ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ. [ಹಿಂದೆ ರಾಜನಾದವನು ಅನೇಕ ಮದುವೆಯಾಗುವುದು ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು, ಶ್ರೀಕೃಷ್ಣ  ರಾಜಕುಮಾರಿಯರ ಉದ್ಧಾರಕ್ಕಾಗಿ ೧೬,೧೦೮ ಮಂದಿಯನ್ನು ಮದುವೆಯಾಗಿರುವುದು ಅಂದಿನ ಕಾಲದ  ಸಾಮಾಜಿಕ ಪದ್ದತಿಗೆ  ಪೂರಕವಾದ ವಿಷಯವೇ ಆಗಿದೆ]

 

ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ[6] ।

ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

 

ಶ್ರೀಕೃಷ್ಣ ೧೬,೧೦೮ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ  ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ. ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೮ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ, ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.

ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ  ಹೇಳುವಂತೆ:  ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರಿತಮ್[7] | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ  ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.  ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].

ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ, ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು  ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ.

 



[1] “ಸಮಾಹೃುತಾಃ” ಎಂದೂ ಕೆಲವರು ಕರೆಯುತ್ತಾರೆ.

[2] “ಬುಭೂಷಯೈಷಾಮ್” - ಪ್ರಚಲಿತ ಪಾಠ

[3] “ಭೀಷ್ಮಕಕನ್ಯಾಕಾಯಾ ಅರ್ಥೇ”  ಎಂದು ಕೆಲವು ಪ್ರಾಚೀನ ಪಾಠ

[4] “ಸವರ್ಣಮಾತ್ರತಯಾ” – ಪಾಠಾನ್ತರ

[5] “ಸಂಸ್ಥಿತಃ” ಎಂದು ಕೆಲವರು.

[6] “ಸರ್ವಶ” ಪಾಠಾನ್ತರ

[7] “ಸಾಮ್ಯಮುದೀರ್ಯತೇ” – ಪ್ರಚಲಿತ ಪಾಠ 

Sunday, February 25, 2024

Shrimad BhAgavata in Kannada -Skandha-03-Ch-02_02

 

ಅಹೋ ಬಕೀಯಂ ಸ್ತನಕಾಳಕೂಟಂ ಜಿಘಾಂಸಯಾSಪಾಯಯದಪ್ಯಸಾಧ್ವೀ ।

ಲೇಭೇ ಗತಿಂ ಧಾತ್ರ್ಯುಚಿತಾಂ ತತೋSನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ॥೨೩॥

 

ಶ್ರೀಕೃಷ್ಣ ಎಂತಹ  ಕರುಣಾಳು ಎನ್ನುವುದನ್ನು ಉದ್ಧವ ಹಿಂದೆ ನಡೆದ ಕೆಲವು ಘಟನೆಗಳ ಉಲ್ಲೇಖದೊಂದಿಗೆ  ವಿವರಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಶ್ರೀಕೃಷ್ಣ ಪುಟ್ಟ ಮಗುವಿದ್ದಾಗ ಪೂತನಿ(ಬಕೀ*) ಎನ್ನುವ ರಾಕ್ಷಸಿ  ಒಂದು ಸುಂದರ ಹೆಣ್ಣಿನ ರೂಪದಲ್ಲಿ, ದಾದಿಯಾಗಿ ಬಂದು, ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಲು ಪ್ರಯತ್ನಿಸಿರುತ್ತಾಳೆ. ಆದರೂ ಕೂಡಾ ಶ್ರೀಕೃಷ್ಣ ಆಕೆಯ ತಪ್ಪನ್ನು ಮನ್ನಿಸಿ, ಆಕೆಗೆ ಮಗುವಿನ ಸೇವೆ ಮಾಡಿದ ದಾದಿ ಯಾವ ಸದ್ಗತಿ ಪಡೆಯುತ್ತಾಳೋ, ಅಂತಹ ಸದ್ಗತಿಯನ್ನು ಕರುಣಿಸಿದ” ಎಂದಿದ್ದಾನೆ ಉದ್ಧವ.

ಇಲ್ಲಿ ಓದುಗರಿಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ರಾಕ್ಷಸಿಯಾಗಿದ್ದ ಪೂತನಿಗೆ ಶ್ರೀಕೃಷ್ಣ ಸದ್ಗತಿ ನೀಡಿದನೇ ಎನ್ನುವ ಪ್ರಶ್ನೆ.  ಆದರೆ ಈ ಹಿಂದೆ ಎರಡನೇ ಸ್ಕಂಧದಲ್ಲಿ ವಿವರಿಸಿದಂತೆ(೨-೭-೨೭): ಹಾಲನ್ನುಣಿಸಿದ ಸ್ತ್ರೀಯ ದೇಹದ ಒಳಗೆ ಪೂತನಿ ಎನ್ನುವ ರಾಕ್ಷಸೀ ಜೀವದ ಜೊತೆಗೆ, ಊರ್ವಶಿ ಎನ್ನುವ ಗಂಧರ್ವ ಸ್ತ್ರೀ ಶಾಪಗ್ರಸ್ತಳಾಗಿ ಸೇರಿಕೊಂಡಿದ್ದಳು. ಹೀಗಾಗಿ ಅದು ಏಕ ದೇಹದಲ್ಲಿ ಜೀವದ್ವಯರ ಸಮಾವೇಶವಾಗಿತ್ತು. ಆದರೆ ಶ್ರೀಕೃಷ್ಣ ಹೇಗೆ ಹಂಸ ಹಾಲನ್ನು ನೀರಿನಿಂದ ಬೇರ್ಪಡಿಸಬಲ್ಲುದೋ ಹಾಗೆ, ಪುಣ್ಯಜೀವಿಯಾದ ಊರ್ವಶಿಯನ್ನು ರಾಕ್ಷಸಿಯಾದ ಪೂತನಿಯಿಂದ ಬೇರ್ಪಡಿಸಿ, ಆಕೆಯಿಂದಾದ ಅಪರಾದಗಳನ್ನು ಮನ್ನಿಸಿ, ಆಕೆಗೆ ಸದ್ಗತಿಯನ್ನು ನೀಡುತ್ತಾನೆ.  “ಇಂತಹ ದಯಾಳುವಾದ ಶ್ರೀಕೃಷ್ಣನಲ್ಲಿ ನಾನು ಶರಣು ಹೋಗುತ್ತೇನೆ” ಎಂದಿದ್ದಾನೆ ಉದ್ಧವ. [*ಭಾಗವತದಲ್ಲಿ ಪೂತನಿಯನ್ನು ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ  ಹೆಸರುಗಳಿಂದ ಕರೆಯುವುದನ್ನು ನಾವು ಕಾಣುತ್ತೇವೆ. ಮಗುವಿನ ಜೀವವನ್ನು ಹೀರಲು ಬಂದಿದ್ದ ಆಕೆಯನ್ನು ಇಲ್ಲಿ ಬಕೀ(ಕೊಕ್ಕರೆ} ಎಂದು ಕರೆದಿದ್ದಾರೆ. ಈ ಹಿಂದೆ ಅವಳನ್ನು ಉಲೂಪಿಕಾ ಎಂದೂ ಸಂಬೋಧಿಸಿರುವುದನ್ನು ನಾವು ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ].

 

ಮನ್ಯೇSಸುರಾನ್ ಭಾಗವತಾಂಸ್ತ್ರ್ಯಧೀಶೇ ಸಂರಮ್ಭಮಾರ್ಗಾಭಿನಿವಿಷ್ಟಚಿತ್ತಾನ್ ।

ಯೇ ಸಂಯುಗೇSಚಕ್ಷತ ತಾರ್ಕ್ಷ್ಯಪುತ್ರಸ್ಯಾಂಸೇ[1] ಸುನಾಭಾಯುಧಮಾಪತನ್ತಮ್ ॥೨೪॥

 

ಕೇವಲ ಪೂತನಿಯಷ್ಟೇ ಅಲ್ಲ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅಸುರರನ್ನೂ ಭಗವಂತ ಉದ್ಧಾರ ಮಾಡಿರುವುದನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುತ್ತಾನೆ. ಭಗವಂತ ನೋಡುವುದು ಜಾತಿಯನ್ನಲ್ಲ, ಬದಲಿಗೆ  ನಮ್ಮ ಸ್ವಭಾವವನ್ನು. ಸ್ವಭಾವ ಸಾತ್ವಿಕವಾಗಿದ್ದು, ಪ್ರಾರಾಬ್ದಕರ್ಮದಿಂದ ಅಥವಾ ಇನ್ನಾವುದೋ ಕಾರಣದಿಂದ  ಜೀವ ಅಸುರನಾಗಿದ್ದರೂ ಕೂಡಾ, ಅಂತಹ ಜೀವವನ್ನು ಭಗವಂತ ಉದ್ಧಾರ ಮಾಡುತ್ತಾನೆ.

ಇಲ್ಲಿ ಉದ್ಧವ ಭಗವಂತನನ್ನು ‘ತ್ರ್ಯಧೀಶ’ ಎಂದು ಸಂಬೋಧಿಸಿದ್ದಾನೆ. ಮೇಲಿನ-ನಡುವಿನ ಮತ್ತು ಕೆಳಗಿನ ಅಥವಾ ಭೂಃ, ಭುವಃ, ಸ್ವಃ  ಈ ಎಲ್ಲಾ ಲೋಕಗಳ(ಎಲ್ಲಾ ಹದಿನಾಲ್ಕು ಲೋಕಗಳ) ಮತ್ತು  ನಿತ್ಯಲೋಕಗಳಾದ ಶ್ವೇತದ್ವೀಪ, ವೈಕುಂಠ,  ಅನಂತಾಸನದ ಒಡೆಯನಾದ ಭಗವಂತ  ‘ತ್ರ್ಯಧೀಶ’. ರಾಜಸ-ತಾಮಸ-ಸಾತ್ವಿಕ ಹೀಗೆ ಎಲ್ಲ ರೀತಿಯ ಜೀವರ ಒಡೆಯನಾದ ಭಗವಂತ ‘ತ್ರ್ಯಧೀಶ’.

“ಭಗವಂತ ನೋಡುವುದು ಜಾತಿ-ಧರ್ಮವನ್ನಲ್ಲ. ಭಗವಂತನ ಅನುಗ್ರಹವಿರುವುದು ಜೀವಸ್ವಭಾವಕ್ಕನುಗುಣವಾಗಿ”. ಈ ಮಾತನ್ನು ಬ್ರಹ್ಮವೈವರ್ತಪುರಾಣ(ಪ್ರಚಲಿತ ಪಾಠ ಬ್ರಹ್ಮಪುರಾಣ) ಸ್ಪಷ್ಟವಾಗಿ ವಿವರಿಸಿರುವುದನ್ನು ನಾವು ಕಾಣಬಹುದು: “ಅಸುರಾ ಅಪಿ ಯೇ ವಿಷ್ಣುಂ ಶಙ್ಕಚಕ್ರಧರಂ ರಣೇ[2] । ಭಕ್ತಿಪೂರ್ವಮವೇಕ್ಷನ್ತೇ ಜ್ಞೇಯಾ ಭಗವತಾ ಇತಿ । ವಿದ್ವಿಷನ್ತಿ ತು[3] ಯೇ ವಿಷ್ಣುಮೃಷಿಪುತ್ರಾ ಅಪಿ ಸ್ಫುಟಮ್ । ಅಸುರಾಸ್ತೇSಪಿ ವಿಜ್ಞೇಯಾ ಗಚ್ಛನ್ತಿ ಚ ಸದಾ ತಮಃ । ಜೀವದ್ವಯಸಮಾಯೋಗಾದ್ಧಿರಣ್ಯಕಮುಖಾಃ[4] ಪರೇ । ಭಕ್ತಿದ್ವೇಷಯುತಾಶ್ಚ ಸ್ಯುರ್ಗತಿಸ್ತೇಷಾಂ ಯಥಾನಿಜಮ್[5] । ಕಂಸಪೂತನಿಕಾದ್ಯಾಶ್ಚ ಬಾನ್ಧವಾದಿಯುತಾ ಯತಃ । ಜೀವದ್ವಯಸಮಾಯೋಗಾದ್[6] ಗತಿದ್ವಯಜಿಗೀಷವಃ । ಸರ್ವಥಾ ಭಕ್ತಿತೋ ಮುಕ್ತಿರ್ದ್ವೇಷಾತ್ ತಮ ಉದೀರಿತಮ್ । ನಿಯಮಸ್ತ್ವನಯೋರ್ನಿತ್ಯಂ ಮೋಹಾಯಾನ್ಯದ್ ವಚೋ[7] ಭವೇತ್” ಯಾರು ಗರುಡವಾಹನನೂ, ಶಂಖ-ಚಕ್ರಧಾರಿಯೂ ಆದ  ಭಗವಂತನ ರೂಪವನ್ನು ಕಾಣುತ್ತಾರೋ, ಅವರನ್ನು ಭಗವದ್ಭಕ್ತರೆಂದೇ ತಿಳಿಯಬೇಕು. ಭಗವಂತನನ್ನು ದ್ವೇಷಿಸುವವನು ಋಷಿಕುಮಾರನಾಗಿದ್ದರೂ ಕೂಡಾ, ಆತನನ್ನು ಅಸುರನೆಂದು ತಿಳಿಯಬೇಕು. ಜೀವದ್ವಯ ಸಮಾವೇಶದಿಂದ ಬಾಹ್ಯವಾಗಿ ದ್ವೇಷ ಮಾಡಿದರೂ ಕೂಡಾ, ಆ ದೇಹದೊಳಗಿನ ಸಾತ್ವಿಕ ಜೀವ ಸದಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುತ್ತದೆ. [ಜೀವದ್ವಯ ಸಮಾವೇಶಕ್ಕೆ  ಉದಾಹರಣೆ: ಕಂಸ. ಆತನ ಶರೀರದಲ್ಲಿ  ಕಾಲನೇಮಿ ಎನ್ನುವ ಅಸುರ ಮತ್ತು ಭೃಗು ಎನ್ನುವ ಪುಣ್ಯಜೀವಿಯ ಸಮಾವೇಶವಿತ್ತು. ಇದೇ ರೀತಿ, ಈ ಹಿಂದೆ ಹೇಳಿದಂತೆ: ಪೂತನಿ, ಹಿರಣ್ಯಕಶಿಪು-ಹಿರಣ್ಯಾಕ್ಷ, ಶಿಶುಪಾಲ-ದಂತವಕ್ರ, ರಾವಣ-ಕುಂಭಕರ್ಣ, ಇವರೆಲ್ಲರಲ್ಲೂ ಜೀವದ್ವಯ ಸಮಾವೇಶವಿತ್ತು]. ಹೀಗಾಗಿ ಅಂತರಂಗದಲ್ಲಿ ಭಕ್ತಿಯನ್ನಿಟ್ಟ ಜೀವರುಗಳು ಬಾಹ್ಯವಾಗಿ ಕೋಪದ ವಶವಾದರೂ ಕೂಡಾ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ವಿಷ್ಣುರೂಪದಲ್ಲಿ ಅಸುರ ಸಂಹಾರ ಮಾಡಿದ ಭಗವಂತನನ್ನು ನೆನಪಿಸಿಕೊಂಡ ಉದ್ಧವ ಇಲ್ಲಿ  ಲೋಕಕಲ್ಯಾಣಕ್ಕಾಗಿ ಮತ್ತು  ಭಕ್ತರ ಅಭೀಷ್ಟ ಸಿದ್ಧಿಗಾಗಿ ಶ್ರೀಕೃಷ್ಣನಾಡಿದ ಲೀಲಾ ನಾಟಕಗಳನ್ನು ನೆನಪಿಸಿಕೊಳ್ಳುತ್ತಾನೆ. ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಶ್ರೀಕೃಷ್ಣನಾಗಿ ದೇವಕಿಯ ಗರ್ಭದಿಂದ ಅವತರಿಸಿದ. ಹುಟ್ಟಿದ ಮಗುವನ್ನು   ವಸುದೇವ, ನಂದಗೋಪನ ಮನೆಯಲ್ಲಿ ಬಿಟ್ಟ. ನಂದಗೋಪನ ಮನೆಯಲ್ಲಿ ಶ್ರೀಕೃಷ್ಣ ಸುಮಾರು ಹನ್ನೊಂದು ವರ್ಷಗಳ ಕಾಲ ಒಬ್ಬ ಸಾಮಾನ್ಯ ಗೋವಳನಂತೆ ಬೆಳೆದ. ಈ ಸಮಯದಲ್ಲಿ  ಕಾಲಿಯನನ್ನು ಮರ್ದಿಸಿ ಗೋಪಾಲಕರನ್ನು ಶ್ರೀಕೃಷ್ಣ ಕಾಪಾಡಿದ. ಏಳು ವರ್ಷ ವಯಸ್ಸಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಆಟದ ಕೊಡೆಯಂತೆ ಏಳು ದಿನ ಎತ್ತಿ ಹಿಡಿದ. ತನ್ನ ವೇಣುನಾದದಿಂದ ಗೋಪ-ಗೋಪಿಕೆಯರನ್ನು ಶ್ರೀಕೃಷ್ಣ ಮರುಳು ಮಾಡಿದ. ಹೀಗೆ ಗೋವಳನಾಗಿ ಶ್ರೀಕೃಷ್ಣ ತೋರಿದ ಅನೇಕ ಲೀಲಾನಾಟಕಗಳನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. [ಈ ಎಲ್ಲಾ ಲೀಲಾ ನಾಟಕಗಳ ವಿವರಣೆಯನ್ನು ನಾವು ಸಂಕ್ಷಿಪ್ತವಾಗಿ ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ]

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು

*********



[1] “ತಾಕ್ಷರ್ಯಪುತ್ರಮಂಸೇ-“ -ಪ್ರಚಲಿತ ಪಾಠ

[2] ಶಙ್ಕಚಕ್ರಗದಾಧರಮ್” – ಪ್ರಚಲಿತ ಪಾಠ

[3] “ವಿದ್ವಿಷನ್ತಿ ಹಿ” – ಎಂದು ಕೆಲವರು ಹೇಳುತ್ತಾರೆ.

[4] “ಹಿರಣ್ಯಪ್ರಮುಖಾಃ” – ಎಂದು ಕೆಲವರು ಹೇಳುತ್ತಾರೆ

[5] “ಯಥಾ ನಿಜಾ” ಎಂದು ಕೆಲವು ಮುದ್ರಿತ ಪಾಠವಿದೆ

[6] “-ಸಮಾವೇಶಾತ್” ಎಂದು ಕೆಲವರು ಹೇಳುತ್ತಾರೆ

[7] “ಮೋಹಾಯಾನ್ಯವಚೋ-“ ಪ್ರಚಲಿತ ಪಾಠ

Saturday, February 24, 2024

Shrimad BhAgavata in Kannada -Skandha-03-Ch-02_01

 

ದ್ವಿತೀಯೋSಧ್ಯಾಯಃ

 

ವಿದುರ ಶ್ರೀಕೃಷ್ಣನ ಕುರಿತು ಕೇಳಿದಾಗ ಉದ್ಧವ ಗದ್ಗದಿಸುತ್ತಾನೆ. ಶ್ರೀಕೃಷ್ಣನ ಪರಮ ಭಕ್ತನಾದ ಆತ  ಬಾಲ್ಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದನ್ನೇ ತನ್ನ ಆಟವಾಗಿಸಿಕೊಂಡಿದ್ದವನಾಗಿದ್ದ. ಉದ್ಧವ ಅದೆಷ್ಟು ಉತ್ಕಟವಾಗಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದ ಎಂದರೆ, ತಾಯಿ ಬೆಳಗಿನ ಉಪಹಾರಕ್ಕೆ ಕರೆದರೆ, ಪೂಜೆಯಾಗದೇ ಆತ ಬರುತ್ತಿರಲಿಲ್ಲ. ಇಂತಹ ಉದ್ಧವನಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ವಿಷಯವೊಂದು ತಿಳಿದಿತ್ತು. ಅದೇನೆಂದರೆ: “ಯಾದವರೆಲ್ಲರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯುವುದಷ್ಟೇ ಅಲ್ಲ, ನಾನೂ ಕೂಡಾ ಸದ್ಯದಲ್ಲೇ ಅವತಾರ ಸಮಾಪ್ತಿ ಮಾಡುತ್ತಿದ್ದೇನೆ” ಎಂದು ಶ್ರೀಕೃಷ್ಣ ಉದ್ಧವ ಮತ್ತು ಮೈತ್ರೇಯನಿಗೆ ತಿಳಿಸಿದ್ದ.

 

ಸ ಮುಹೂರ್ತಮಭೂತ್ ತೂಷ್ಣೀಂ ಕೃಷ್ಣಾಘ್ರಿಸುಧಯಾ ಭೃಶಮ್ ।

 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧುನಿರ್ವೃತಃ ॥೦೪॥

 

ವಿದುರ “ಶ್ರೀಕೃಷ್ಣನ ಕುರಿತು ಹೇಳು” ಎಂದು ಕೇಳಿದಾಗ ಉದ್ಧವನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆತನಿಗೆ ಭಗವಂತನ ಪಾದವೆಂಬ ಅಮೃತದ ಕಡಲು ನೆನಪಾಗುತ್ತದೆ. ಆತ ಆ ಅದಮ್ಯವಾದ ಅಮೃತಸಾಗರದಲ್ಲಿ ಮುಳುಗಿಬಿಡುತ್ತಾನೆ.

 

ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।

 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥೦೬॥

 

ಧ್ಯಾನಾಮೃತದಲ್ಲಿ  ಮುಳುಗಿದ್ದು, ನಿಧಾನವಾಗಿ ಮರಳಿ ವ್ಯವಹಾರ ಲೋಕಕ್ಕೆ ಇಳಿದು ಬಂದ ಉದ್ಧವ, ಕಣ್ಣೊರೆಸಿಕೊಂಡು ಕಿರುನಗುವಿನೊಂದಿಗೆ ವಿದುರನೊಂದಿಗೆ ಮಾತನಾಡುತ್ತಾನೆ.  [ಇವೆಲ್ಲವೂ ಭಾಗವತ ನಮ್ಮ ಮುಂದೆ ತೆರೆದಿಡುವ  ಅನುಭಾವದ ಅಭೂತಪೂರ್ವ ಅನುಭವಗಳ ವಿವರಣೆ]

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಲೀಲಾ ನಾಟಕಗಳು

 

ಉದ್ಧವ ಉವಾಚ

 ಕೃಷ್ಣದ್ಯುಮಣಿನಿಮ್ಲೋಚೇ ಗೀರ್ಣೇಷ್ವಜಗರೇಣ ಹ[1] ।

 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್[2] ॥೦೭॥

 

“ಕೃಷ್ಣನೆಂಬ ಸೂರ್ಯ ನಮ್ಮ ಪಾಲಿಗೆ ಮುಳುಗಲಿದ್ದಾನೆ. ಇದರಿಂದಾಗಿ ಈ ದೇಶಕ್ಕೆ ಕತ್ತಲು ಕವಿಯಲಿದೆ. ಯಾದವರು ತಮ್ಮ ಸೊಬಗನ್ನು ಕಳೆದುಕೊಂಡು ಮೃತ್ಯುವಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸಾವು ಎನ್ನುವ ಹೆಬ್ಬಾವು ಅವರ ಹಿಂಬದಿಯಿಂದ ಬಾಯಿ ತೆರೆದು ಕುಳಿತಿದೆ. ಅದು ಯಾವ ಕ್ಷಣಕ್ಕೂ  ಅವರನ್ನು ಕಬಳಿಸಬಹುದು.  ಹೀಗಿರುವಾಗ  ಅವರ ಕ್ಷೇಮ-ಸಮಾಚಾರವನ್ನು ಏನೆಂದು ವಿವರಿಸಲಿ?” ಎಂದು ದುಃಖಿತನಾಗಿ ಮಾತನಾಡುತ್ತಾನೆ ಉದ್ಧವ.

 

 ದುರ್ಭಗೋ ಬತ ಲೋಕೋSಯಂ ಯದವೋ ನಿತರಾಮಪಿ ।

 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಮ್ಭಸಿ[3] ॥೦೮॥

 

 “ಶ್ರೀಕೃಷ್ಣನ ಸಮಕಾಲಿನವರಾಗಿ ಹುಟ್ಟಿದ ಇವರ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಏಕೆಂದರೆ ತಮ್ಮ ಜೊತೆಗೆ ಅವತಾರ ರೂಪಿಯಾಗಿ ಭಗವಂತ ನಿಂತಿದ್ದಾನೆ ಎನ್ನುವ ಎಚ್ಚರ ಅವರಿಗಿಲ್ಲ. ಉಳಿದವರ ಮಾತೇಕೆ? ಶ್ರೀಕೃಷ್ಣನ ಬಂಧುಗಳಾಗಿರುವ ಯಾದವರಿಗೇ ಈ ಎಚ್ಚರವಿಲ್ಲ ಎನ್ನುವುದು ದುರಾದೃಷ್ಟಕರ. ಇವರೆಲ್ಲರೂ ಸಂಸಾರವೆಂಬ ನೀರಿನಲ್ಲಿ ಈಜುತ್ತಿರುವ ಮೀನುಗಳಂತೆ ಬದುಕುತ್ತಿದ್ದಾರೆ. ಹೇಗೆ ನೀರಿನಿಂದ ಮೀನು ಆಚೆ ಬಿದ್ದರೆ ಸಾಯುತ್ತದೋ, ಅದೇ ರೀತಿ ಸಂಸಾರವೇ ಸರ್ವಸ್ವ, ಅದರಿಂದಾಚೆಗೆ ಬದುಕಿಲ್ಲ ಎಂದು ಇವರು ಜೀವಿಸುತ್ತಿದ್ದಾರೆ. ತಮ್ಮನ್ನು ಸಂಸಾರ ಸಾಗರದಿಂದ ದಡ ಸೇರಿಸಬಲ್ಲ ಭಗವಂತ ಜೊತೆಗಿದ್ದರೂ ಕೂಡಾ, ಅದರ ಪರಿಜ್ಞಾನ ಅವರಿಗಿಲ್ಲ. ಇವರಿಗೆ ಶ್ರೀಕೃಷ್ಣನ ಜ್ಞಾನಾನಂದಮಯವಾದ ದೇಹವಾಗಲೀ, ಆತನ ಅನಂತ ಮಹಿಮೆಯಾಗಲೀ ತಿಳಿದಿಲ್ಲ. ಈ ರೀತಿ ಬದುಕುತ್ತಿರುವ ಜನಾಂಗದ ದೌರ್ಭಾಗ್ಯವನ್ನು ನೋಡಿ ನನಗೆ ದುಃಖವಾಗುತ್ತಿದೆ. ”  ಎಂದು ಉದ್ಧವ ತನ್ನ ಅಂತರಂಗದ ನೋವನ್ನು ವಿದುರನಲ್ಲಿ ತೋಡಿಕೊಳ್ಳುತ್ತಾನೆ.

 

ಯದ್ ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।

 ಕಾರ್ತ್ಸ್ನ್ಯೇನ ಚಾತ್ರೋಪಗತಂ[4] ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥೧೩॥

 

ಶ್ರೀಕೃಷ್ಣನನ್ನು ಭಗವಂತನ ಅವತಾರ ಎಂದು ತಿಳಿಯದ ಜನರ ದೌರ್ಭಾಗ್ಯದ ಕುರಿತು ಹೇಳುವಾಗ ಉದ್ಧವನಿಗೆ ರಾಜಸೂಯ ಯಜ್ಞದ ನೆನಪಾಗುತ್ತದೆ. ರಾಜಸೂಯ ಯಜ್ಞಕ್ಕೆ  ದೇವತೆಗಳು, ನಾರದಾದಿ ಋಷಿ-ಮುನಿಗಳು ಎಲ್ಲರೂ ಬಂದಿದ್ದರು. ಭಗವಂತನ ಮೂರು ರೂಪಗಳ ಸಮ್ಮುಖದಲ್ಲಿ(ಶ್ರೀಕೃಷ್ಣ, ಪರಶುರಾಮ ಮತ್ತು ವೇದವ್ಯಾಸ) ನಡೆದ ಅಪೂರ್ವ ಯಜ್ಞ ಅದಾಗಿತ್ತು. ಅಲ್ಲಿ ಶ್ರೀಕೃಷ್ಣ ಸೌಂದರ್ಯದ ಪ್ರತೀಕವಾಗಿ ಕುಳಿತಿದ್ದ. ಆತನ ಸೌಂದರ್ಯವನ್ನು ಕಂಡವರು ತಮ್ಮ ಅಜ್ಞಾನದಿಂದ: “ ಇದು ಚತುರ್ಮುಖ ತನ್ನ ಎಲ್ಲಾ ಸೃಷ್ಟಿ ಕೌಶಲವನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಸೃಷ್ಟಿಸಿದ ರೂಪ” ಎಂದು ತಿಳಿದರೇ ಹೊರತು, ಅದು ಚತುರ್ಮುಖನನ್ನೇ ಸೃಷ್ಟಿಸಿದ ಜ್ಞಾನಾನಂದಮಯನಾದ ಭಗವಂತ ಎನ್ನುವುದನ್ನು ತಿಳಿಯಲಿಲ್ಲ. “ಅಲ್ಲಿ ನೆರೆದ ದೇವತೆಗಳೇ ಹೀಗೆ ತಪ್ಪಾಗಿ ತಿಳಿದಿರುವಾಗ*, ಇನ್ನು ಯಾದವರ ಪಾಡೇನು” ಎಂದು ಪ್ರಶ್ನಿಸುತ್ತಾನೆ ಉದ್ಧವ. ಹೀಗೆ ಎಲ್ಲರೂ ಭಗವತನ ಜೊತೆಗೇ ಬದುಕಿದ್ದು, ಆತನ ಮಹಿಮೆಯನ್ನು ನೋಡಿಯೂ, ಆತ ಜ್ಞಾನಾನಂದಮಯನಾದ ಭಗವಂತ ಎನ್ನುವ ಅರಿವಿಲ್ಲದೇ ಬದುಕಿರುವುದು ಅವರ ದೌರ್ಭಾಗ್ಯ.

[*ಅಪರೋಕ್ಷ ಜ್ಞಾನಿಗಳು ಎಂದರೆ ಭಗವಂತನನ್ನು ಜ್ಞಾನದಲ್ಲಿ ಕಂಡವರು ಅಷ್ಟೇ. ಇಂತಹ ಅಪರೋಕ್ಷ ಜ್ಞಾನಿಗಳೇ ಮುಂದೆ ದೇವಪದವಿಯನ್ನು ಅಲಂಕರಿಸಬಹುದು. ಹೀಗಾಗಿ, ಅಪರೋಕ್ಷ ಜ್ಞಾನಿಗಳಿಗೆ ಮತ್ತು ಎಲ್ಲಾ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರಬೇಕೆಂದೇನು ಇಲ್ಲ. ಬ್ರಹ್ಮ-ವಾಯುವನ್ನು ಬಿಟ್ಟರೆ, ಇತರ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ರಾಜಸೂಯ ಯಜ್ಞಕ್ಕೆ ಆಗಮಿಸಿದ ದೇವತೆಗಳೂ ಶ್ರೀಕೃಷ್ಣನನ್ನು ಚತುರ್ಮುಖ ಸೃಷ್ಟಿಸಿದ ಒಂದು ರೂಪವೆಂದು ತಪ್ಪಾಗಿ ತಿಳಿದರು]    

ಈ ಶ್ಲೋಕದಲ್ಲಿ ‘ಬತ’ ಎನ್ನುವ ಪದವನ್ನು ‘ಆಶ್ಚರ್ಯ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ತ್ರಿಲೋಕಸ್ಯಾಜ್ಞಾನಂ ಬತ । ರಾಜಸೂಯ ಯಜ್ಞದಲ್ಲಿ ಪಾಲ್ಗೊಂಡಿದ್ದ ಮೂರು ಲೋಕದ ಬಹುತೇಕರು  ಭಗವಂತನ  ಜ್ಞಾನಾನಂದಮಯವಾದ ಶರೀರವನ್ನು ‘ಚತುರ್ಮುಖ ಸೃಷ್ಟಿಸಿದ ಭೌತಿಕ ಶರೀರ’ ಎಂದು ತಪ್ಪಾಗಿ ತಿಳಿದಿದ್ದು ಪರಮಾಶ್ಚರ್ಯ. ಸ್ಕಾಂದ ಪುರಾಣದಲ್ಲಿ ಹೇಳುವಂತೆ: “ಆನನ್ದರೂಪಂ ದೃಷ್ಟ್ವಾ ತು[5] ಲೋಕೋ ಭೌತಿಕಮೇವ ತು । ಮನ್ಯತೇ ವಿಷ್ಣುರೂಪಂ ಚ ಅಹೋ ಭ್ರಾನ್ತಿರ್ಬಹುಸ್ಥಿತಾ[6]”  ಅಲ್ಲಿ ಸೇರಿದ್ದ ಹೆಚ್ಚಿನವರಿಗೆ  ಈ ರೀತಿಯ ಭ್ರಾಂತಿ ಬಂದಿರುವುದು ಅಚ್ಚರಿ.



[1] “ಹಿ” – ಪ್ರಾಚೀನ  ಪಾಠ

[2] “ಗತಶ್ರೀಷು ಗತೇಷ್ವಸತ್” – ಪ್ರಾಚೀನ ಪಾಠ

[3] “ಇವೋಡುಪಮ್” – ಪ್ರಚಲಿತ ಪಾಠ

[4] “ಚಾದ್ಯೇಹ ಗತಮ್” – ಎಂದು ಪ್ರಾಚೀನರು ಓದುತ್ತಾರೆ.

[5] “ದೃಷ್ಟ್ವಾsಪಿ” – ಪ್ರಚಲಿತ ಪಾಠ

[6] “ಬಹುಸ್ಥಿತಾ” ಪ್ರಚಲಿತ ಪಾಠ