Saturday, March 16, 2013

Shrimad BhAgavata in Kannada -Skandha-01-Ch-08(05)


ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ೨೪

ಕುಂತಿ ಕೃಷ್ಣನನ್ನು ಸ್ತುತಿಸುವ ಈ ಶ್ಲೋಕ ಒಂದು ಅಪೂರ್ವವಾದ ಮಂತ್ರ. ಇದು ಮೇಲ್ನೋಟಕ್ಕೆ ಬಹಳ ಸರಳವಾಗಿದ್ದು, ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವ ಶ್ಲೋಕ. ಮೇಲ್ನೋಟದಲ್ಲಿ ನೋಡಿದರೆ ಇದು ಕೃಷ್ಣನ ವಿವಿಧ ನಾಮಗಳನ್ನು ಹೇಳುತ್ತದೆ ಮತ್ತು “ವಸುದೇವ-ದೇವಕಿಯರ ಮಗನಾಗಿ ಹುಟ್ಟಿ, ನಂದಗೋಪನ ಮನೆಯಲ್ಲಿ ಬೆಳೆದು, ಗೋವುಗಳ ರಕ್ಷಣೆ ಮಾಡುತ್ತಾ ಓಡಾಡಿದ ಕೃಷ್ಣನಿಗೆ ನಮೋ ನಮಃ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಮೇಲ್ನೋಟಕ್ಕೆ ಕಾಣುವ ಅರ್ಥವಲ್ಲದೇ ನಾವು ಆಳಕ್ಕಿಳಿದು ನೋಡಬೇಕಾದ ಅನೇಕ ಅರ್ಥಗಳು ಈ ಮಂತ್ರದಲ್ಲಡಗಿದೆ.
ಇದು ಕುಂತಿಯ ಅಂತರಂಗ ದರ್ಶನದಿಂದ ಮೂಡಿಬಂದ ಶ್ಲೋಕ. ಆದ್ದರಿಂದ ಆ ಅಂತರಂಗ ದರ್ಶನದಲ್ಲಿ ಅವಳು ಕಂಡ, ಈ ಮಂತ್ರದ ಒಳಗೆ  ಹುದುಗಿರುವ ಒಳನೋಟವನ್ನು ನಾವಿಲ್ಲ ನೋಡಬೇಕು. ಇಲ್ಲಿ ಪ್ರಸ್ತುತಪಡಿಸಲಾದ ಭಗವಂತನ ಪ್ರತಿಯೊಂದು ನಾಮಗಳ ಆಯ್ಕೆಗೆ ಒಂದು ವಿಶಿಷ್ಠ ಕಾರಣವಿದೆ. ಪ್ರತಿಯೊಂದು ನಾಮವನ್ನೂ ಕೂಡಾ ಒಂದು ವಿಶಿಷ್ಠ ಕ್ರಮದಲ್ಲಿ ಹೇಳಲಾಗಿದೆ. ಇವೆಲ್ಲವನ್ನೂ ಬಿಡಿಸಿ ನೋಡಿದಾಗ ಮಾತ್ರ  ಈ ಮಂತ್ರದ ಹಿಂದಿನ ಸಂದೇಶ ನಮಗೆ ತಿಳಿಯುತ್ತದೆ.
‘ಕೃಷ್ಣ’ ಎಂದರೆ: ಎಲ್ಲರನ್ನೂ ಆಕರ್ಷಣೆ ಮಾಡತಕ್ಕಂತಹ ಶಕ್ತಿ. ಭೂಮಿಯಿಂದ ನಮ್ಮನ್ನು ಆಕರ್ಷಣೆ ಮಾಡಿ, ಈ ಸಂಸಾರ ಬಂಧದಿಂದ ನಮ್ಮನ್ನು ಕರ್ಷಣೆ ಮಾಡಿ ನಮಗೆ  ಮೋಕ್ಷ ಕರುಣಿಸಲು ಭೂಮಿಗಿಳಿದು ಬಂದ ಆನಂದರೂಪಿ ಭಗವಂತ ಕೃಷ್ಣ. ‘ಕೃಷ್ಣ’ ಎನ್ನುವ ಭಗವಂತನ ನಾಮವನ್ನು ನಾವು ಬಿಡಿಸುತ್ತಾ ಹೋದರೆ ಅಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. ಆದರೆ ಇಲ್ಲಿ ನಾವು ಕುಂತಿ ಯಾವ ಅರ್ಥದಲ್ಲಿ ಈ ನಾಮವನ್ನು ಬಳಸಿದ್ದಾಳೆ ಎನ್ನುವುದನ್ನು ತಿಳಿಯಬೇಕು. ಸೂಕ್ಷ್ಮವಾಗಿ ಗಮನಿಸಿದರೆ: ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ ಕುಂತಿ:  “ಪರಮಹಂಸರು ಭಕ್ತಿಯಿಂದ ತಮ್ಮ ಹೃದಯದಲ್ಲಿ ಕಾಣುವ ವಸ್ತು ನೀನು” ಎಂದು ಹೇಳಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಈ ಮಂತ್ರದ ಹಿಂದೆ ಧ್ಯಾನದ ಪ್ರಸ್ತಾಪವಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಮಂತ್ರವನ್ನು ನೋಡಿದಾಗ ನಮಗೆ ಮಂತ್ರದ ಹಿಂದಿನ ಗೂಢಾರ್ಥ ತಿಳಿಯುತ್ತದೆ.
ಜ್ಞಾನಿಗಳು ತಮ್ಮ ಹೃದಯದತ್ತ  ಕರ್ಷಣೆ ಮಾಡಿಕೊಂಡು, ತಮ್ಮ ಹೃದಯದಲ್ಲಿ ನಿಲ್ಲಿಸಿಕೊಂಡ ಶಕ್ತಿ ‘ಕೃಷ್ಣ’. ಆದ್ದರಿಂದ ಹೃದಯದಲ್ಲಿ ನಿಲ್ಲಿಸಿ ಧ್ಯಾನದಲ್ಲಿ ಕಾಣಬೇಕಾದ ವಸ್ತು ‘ಕೃಷ್ಣ’. ಧ್ಯಾನ ಮಾಡುವಾಗ ನಾವು “ನಮ್ಮ ಹೃದಯದಲ್ಲಿ ಕಾಣಿಸಿಕೋ” ಎಂದು ಧ್ಯಾನ ಮಾಡಬಹುದು. ಆದರೆ  ಅವನು ಹೇಗೆ ಕಾಣಿಸಿಕೊಳ್ಳುತ್ತಾನೆ? ಧ್ಯಾನ ಎನ್ನುವುದು ಮಾನಸಿಕ ಅನುಸಂಧಾನ. ಅಲ್ಲಿ  ನಮ್ಮ ಮನಸ್ಸೇ ಶಿಲ್ಪಿಯಾಗಿ ಕಡೆದ ಭಗವಂತನ ಪ್ರತೀಕವನ್ನು ನಾವು ಕಾಣಬಹುದು. ಆದರೆ ಹಾಗೆ ಕಾಣುವ ಭಗವಂತನ ರೂಪ ಕೇವಲ ಆತನ  ಪ್ರತೀಕ ಹೊರತು ಭಗವಂತನ ಸ್ವರೂಪವಲ್ಲ. ಇದನ್ನು ಉಪನಿಷತ್ತಿನಲ್ಲಿ ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್  ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ಕೇನ-೧-೬ಯಾವುದನ್ನು ನಾವು ಉಪಾಸನೆಯ ಹಂತದಲ್ಲಿ ಕಾಣುತ್ತೇವೆ, ಅದು ಭಗವಂತನ ರೂಪವಲ್ಲ. ಅದು ನಮ್ಮದೇ  ಮನಸ್ಸು ಕೆತ್ತಿರುವ ಭಗವಂತನ ಪ್ರತೀಕ.” ಆದ್ದರಿಂದ ಧ್ಯಾನದಲ್ಲಿ ಭಗವಂತನ ದರ್ಶನ ಅಂದರೆ ಅದು ಆತನ ಪ್ರತೀಕ ದರ್ಶನ.
ನಾವು ಭಗವಂತನನ್ನು ಹೃದಯದತ್ತ ಕರ್ಷಣೆ ಮಾಡಿಕೊಂಡ ತಕ್ಷಣ ಆತ ನಮ್ಮ ಮನಸ್ಸಿಗೆ ಗೋಚರನಾಗಲಾರ. ಏಕೆಂದರೆ ಆತ ‘ವಾಸುದೇವ’. ಭಗವಂತನನ್ನು ಕಾಣುವ ಪರಿಶುದ್ಧ ಮನಸ್ಸಿಗೆ ‘ವಸುದೇವ’ ಎನ್ನುತ್ತಾರೆ. ಅಂತಹ ಪರಿಶುದ್ಧ ಮನಸ್ಸಿಗೆ ಮಾತ್ರ ಗೋಚರನಾಗುವ ಭಗವಂತ ವಾಸುದೇವ.  ನಮ್ಮ ಬದುಕಿನಲ್ಲಿ ಶುದ್ಧ ಮತ್ತು ಸಾತ್ತ್ವಿಕವಾದ ಮನಸ್ಸು ಎಲ್ಲವುದಕ್ಕಿಂತ ದೊಡ್ಡ ಸಂಪತ್ತು. ಅದು ನಮಗೆ ಸತ್ಯದ ಬೆಳಕನ್ನು ತೋರಬಲ್ಲದು. ಅಂತಹ ಪರಿಶುದ್ಧ ಮನಸ್ಸಿಗೆ ಯಾವ ಆಸೆ-ಆಕಾಂಕ್ಷೆಗಳ, ರಾಗ-ದ್ವೇಷಗಳ ಲೇಪವಿರುವುದಿಲ್ಲ. ಅಂತಹ ನಿರ್ಮಲವಾದ ಮನಸ್ಸಿಗೆ ಧ್ಯಾನಾವಸ್ಥೆಯಲ್ಲಿ ಭಗವಂತನ ಪ್ರತೀಕ ಗೋಚರವಾಗುತ್ತದೆ.
ನಾವು ನಮ್ಮ ಮನಸ್ಸಿನಲ್ಲಿ ಭಗವಂತನ ಯಾವ ರೂಪ ಕಂಡರೂ ಸಹ, ಅದು ಆತನ ಸ್ವರೂಪಭೂತ ರೂಪವಲ್ಲ. ಏಕೆಂದರೆ ನಮಗೆ ತಿಳಿದಂತೆ ಭಗವಂತ ಅಪ್ರಾಕೃತ. ಆತನ ಶರೀರ ಪಂಚಭೂತಗಳಿಂದಾಗಿರುವುದಲ್ಲ. ಆತನ ಶರೀರ ಜ್ಞಾನಾನಂದಸ್ವರೂಪ. ಅಂತಹ ಜ್ಞಾನಾನಂದಸ್ವರೂಪಭೂತವಾದ ದೇಹವನ್ನು ನಮ್ಮ ಆತ್ಮಸ್ವರೂಪ ಮಾತ್ರ ಗ್ರಹಿಸಬಲ್ಲದು. ಇದಕ್ಕಾಗಿ ನಾವು ಹೇಗೆ ಬಾಹ್ಯೇಂದ್ರಿಯವನ್ನು ನಿರ್ವ್ಯಾಪಾರಗೊಳಿಸಿದೆವೋ, ಹಾಗೇ ನಮ್ಮ ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಯೋಗಶಾಸ್ತ್ರದಲ್ಲಿ ಉನ್ಮನೀಭಾವ ಎನ್ನುತ್ತಾರೆ. ಇದು ಅಷ್ಟು ಸುಲಭದ ಕೆಲಸವಲ್ಲ. ಇದು ಧ್ಯಾನದ ಪರಾಕಾಷ್ಠೆ. ಈ ಸ್ಥಿತಿಯಲ್ಲಿ ನಮ್ಮ ಆತ್ಮಶಕ್ತಿ ಜಾಗೃತವಾಗುತ್ತದೆ. ಇದನ್ನೇ ಆತ್ಮಸಾಕ್ಷಾತ್ಕಾರ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ನಮ್ಮ ಆತ್ಮಸ್ವರೂಪ ನೇರವಾಗಿ ಭಗವಂತನ ಸ್ವರೂಪಭೂತವಾದ ರೂಪವನ್ನು ಕಾಣುತ್ತದೆ.  ಧ್ಯಾನದ ಈ ಸ್ಥಿತಿಯಲ್ಲಿ ಕಾಣುವ ಭಗವಂತ ‘ದೇವಕೀನಂದನ’.  ಇಲ್ಲಿ ‘ದೇವಕಿಗಳು’ ಎಂದರೆ: ಜ್ಞಾನಾನಂದಮಯವಾದ ಜೀವಸ್ವರೂಪದ ಅರಿವು ಪಡೆದವರು. ಅವರಿಗೆ ‘ಇನಂದನ’ ಆ ಭಗವಂತ. ಅಂದರೆ ಜ್ಞಾನಾನಂದಮಯನಾದ ತನ್ನನ್ನು ತೋರಿಸಿ, ಸದಾ  ಜ್ಞಾನಾನಂದಮಯ ಸ್ಥಿತಿಯಲ್ಲೇ ಇರಗೊಡುವವನು. ಒಟ್ಟಿನಲ್ಲಿ ಹೇಳಬೇಕೆಂದರೆ: ಯಾರು ಆತ್ಮಸಾಕ್ಷಾತ್ಕಾರದಿಂದ ಸ್ವರೂಪದ ಮೂಲಕ ಭಗವಂತನನ್ನು ಧ್ಯಾನಿಸಬಲ್ಲರೋ, ಅವರಿಗೆ ಜ್ಞಾನಾನಂದದ ದರ್ಶನವನ್ನು ಕೊಡುವ ಭಗವಂತ ದೇವಕೀನಂದನ.
ಧ್ಯಾನದಲ್ಲಿ ಭಗವಂತನನ್ನು ಕಾಣಬೇಕಾದರೆ  ವೇದದಲ್ಲಿ ಹೇಳಿದ ಭಗವಂತನ ರಹಸ್ಯದ ಅನುಸಂಧಾನ ಬಹಳ ಮುಖ್ಯ. ಮೊದಲು ನಾವು ಬತ್ತಲಾಗಬೇಕು. ಆಗ ವೇದ ನಮ್ಮ ಮುಂದೆ ಬತ್ತಲಾಗುತ್ತದೆ. ಇಲ್ಲಿ ನಾವು ಬತ್ತಲಾಗುವುದು ಎಂದರೆ ನಾವು ನಮ್ಮ ಅಹಂಕಾರವನ್ನು ಕಳಚಿಕೊಂಡು, ವೇದ ವಾಙ್ಮಯ ತಿಳಿದ ಜ್ಞಾನಿಗಳಲ್ಲಿ  ಮತ್ತು  ಭಗವಂತನಲ್ಲಿ ಪೂರ್ಣ ಶರಣಾಗುವುದು. ಈ ಸ್ಥಿತಿಯಲ್ಲಿ ಮಾತ್ರ ನಮಗೆ ವೇದದ ಅಂತರಂಗದ ಅರ್ಥ ತಿಳಿಯುತ್ತದೆ. ನಮಗೆ ಆನಂದವನ್ನಿತ್ತು ರಕ್ಷಿಸುವ ವೇದಗಳನ್ನು ನಂದ-ಗೋಪ ಎನ್ನುತ್ತಾರೆ. ಅಂತಹ ವೇದಗಳಿಂದ ಅಭಿವ್ಯಕ್ತನಾಗುವ ಭಗವಂತ ನಂದಗೋಪ ಕುಮಾರ. ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತನ ಮತ್ತು ಗುರುಗಳ ಅನುಗ್ರಹದಿಂದ ಹೃದಯ ಶುದ್ಧಿಯಾಗಿ, ವೇದದಲ್ಲಿ ಹೇಳಲಾದ ಭಗವಂತನ ರಹಸ್ಯವನ್ನು ಅರಿತಾಗ, ಧ್ಯಾನದಲ್ಲಿ ನಮ್ಮ ಸ್ವರೂಪಭೂತವಾದ ಆತ್ಮಕ್ಕೆ ಗೋಚರನಾಗುವ ಭಗವಂತ ನಂದಗೋಪಕುಮಾರ.
ಭಗವಂತ ಜ್ಞಾನಿಗಳಿಗೋಸ್ಕರ ಹಾಗೂ ಸಾತ್ತ್ವಿಕ ಜೀವರ ಉದ್ಧಾರಕ್ಕಾಗಿ ಭೂಮಿಯಲ್ಲಿ ಇಳಿದು ಬರುತ್ತಾನೆ. ವೇದಜ್ಞರಿಗಾಗಿ ಲೋಕದಲ್ಲಿ ಅಭಿವ್ಯಕ್ತನಾಗುವ ಭಗವಂತ ಗೋವಿಂದ. “ಸಮಸ್ತ ವೇದಗಳಿಂದ ತಿಳಿಯಲ್ಪಡುವವ, ಸೂರ್ಯಕಿರಣಗಳಲ್ಲಿ ಸನ್ನಿಹಿತನಾಗಿ ನಮ್ಮನ್ನು ರಕ್ಷಿಸುವವ, ಸ್ವರ್ಗದಲ್ಲಿದ್ದು ದೇವತೆಗಳಿಗೆ ಗೋಚರನಾಗುವ ನೀನು, ನಮ್ಮಂತಹ ಸಾಮಾನ್ಯರಿಗಾಗಿ ಭೂಮಿಗಿಳಿದು ಬಂದು ದರ್ಶನ ಕೊಟ್ಟೆಯಲ್ಲಾ, ನಿನಗೆ ನನ್ನ ನಮಸ್ಕಾರ, ನಿನಗೆ ನಮಸ್ಕಾರ” ಎಂದು ಕುಂತಿ ಕೃಷ್ಣನಿಗೆ ನಮಸ್ಕರಿಸುತ್ತಾಳೆ. ಇಲ್ಲಿ ಎರಡು ಬಾರಿ ಕುಂತಿ “ನಿನಗೆ ನಮಸ್ಕಾರ” ಎಂದಿದ್ದಾಳೆ. ನಾವು ನಮ್ಮ ಅಹಂಕಾರವನ್ನು ಕಳಚಿಕೊಂಡು, ಭಗವಂತನ ಎತ್ತರವನ್ನು ತಿಳಿದು, ಆತನ ಮುಂದೆ ನಾವು ಬಹಳ ಚಿಕ್ಕವರು ಎಂದು ತಿಳಿದು, ಭಗವಂತನನ್ನು ಸ್ತುತಿಸುತ್ತಾ, ದೈಹಿಕವಾಗಿ, ನಮ್ರತೆಯಿಂದ  ಆತನ ಮುಂದೆ ಮಣಿಯುವುದು ನಿಜವಾದ ನಮಸ್ಕಾರ. ಇಲ್ಲಿ ಕುಂತಿ ಪೂರ್ಣ ಶರಣಾಗತಿಯಿಂದ ಕೃಷ್ಣನಿಗೆ ನಮಿಸುವುದನ್ನು ನಾವು ಕಾಣುತ್ತೇವೆ. 

No comments:

Post a Comment